ADVERTISEMENT

ನಿರಂತರವಾಗಬೇಕಾದ ಗುರುಪರಂಪರೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ನನಗೆ ಆಗ ಸುಮಾರು ಎಂಟು ವರ್ಷವಿರಬೇಕು. ಒಂದು ದಿನ ನನ್ನಜ್ಜ ನನ್ನನ್ನು ಕರೆದು, ‘ಈ ಭಾನುವಾರದಿಂದ ನೀನು ಬೆಳಿಗ್ಗೆ ಗುರುಕುಲಕ್ಕೆ ಹೋಗಬೇಕು. ದಿನಾಲು ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಸ್ನಾನಮಾಡಿ ಅಲ್ಲಿಗೆ ಹೋಗಿ ಗುರುಗಳಿಂದ ಸ್ತೋತ್ರ, ಮಂತ್ರ ಮತ್ತು ಮುಂದೆ ಉಪನಿಷತ್ತುಗಳನ್ನು ಹೇಳಿಸಿಕೊಂಡು ಕಲಿಯಬೇಕು’ ಎಂದರು. ನಾನು ಹೌಹಾರಿಹೋದೆ. ‘ಅದು ಯಾವ ಗುರುಕುಲವೋ, ಅದೇಕೆ ನಾನು ಅಲ್ಲಿಗೆ ಹೋಗಬೇಕೋ, ಅಲ್ಲಿ ಏನು ಕಲಿಯಬೇಕೋ?’ ಎಂಬ ಪ್ರಶ್ನೆಗಳು ನನ್ನನ್ನು ಕಾಡುವುದಕ್ಕಿಂತ ಮೊದಲು ನನ್ನನ್ನು ತಲ್ಲಣಗೊಳಿಸಿದ್ದು ಬೆಳಿಗ್ಗೆ ನಾಲ್ಕೂವರೆಗೆ ಏಳಬೇಕೆಂಬ ವಿಷಯ. ನಾನು ಅಲ್ಲಿಯವರೆಗೂ ಸೂರ್ಯವಂಶದವನೇ ಆಗಿದ್ದೆ. ಅಂದರೆ ಸೂರ್ಯ ಮೇಲೆ ಬಂದ ಮೇಲೆಯೇ ಏಳುವವನು. ಬೆಳಗಿನ ಜಾವದಲ್ಲಿ ದೊರೆಯುವಂತಹ ಸಕ್ಕರೆ ನಿದ್ರೆಯನ್ನು ತಪ್ಪಿಸಿಕೊಳ್ಳುವುದಕ್ಕಿಂತ ಘನವಾದ ಅಪಚಾರ ಇನ್ನೊಂದು ಇರಲಾರದು ಎಂದು ನಂಬಿದವನು.

ಆದರೆ ನನ್ನಜ್ಜನ ಮಾತು ವೇದವಾಕ್ಯ. ಅದನ್ನು ಬದಲಾಯಿಸುವುದು ಸಾಧ್ಯವಿರಲಿಲ್ಲ. ನನ್ನ ಕಣ್ಣೀರು, ಗೋಗರೆತ, ಧರಣಿ, ಉಪವಾಸಗಳಿಗೆ ಮಣಿಯದೇ ಪ್ರತಿಯಾಗಿ ಸಾಮ, ದಾನ, ಭೇದ, ದಂಡಗಳನ್ನು ಸರಿಯಾದ ಪ್ರಮಾಣಗಳಲ್ಲಿ ಪ್ರಯೋಗಿಸಿ ನಾನು ಒಪ್ಪಿಕೊಳ್ಳುವಂತೆ ಮಾಡಿದರು.
ಮರು ಶನಿವಾರ ಸಂಜೆಗೆ ನನ್ನನ್ನು ಗುರುಗಳ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ಪರಿಚಯಿಸಿ, ನನ್ನಿಂದ ಅದೇನೋ ಕಾಣಿಕೆ ಕೊಡಿಸಿ, ನಮಸ್ಕಾರ ಮಾಡಿಸಿ, ಇವನು ನಾಳೆಯಿಂದ ಬರುತ್ತಾನೆ. ಇವನ ಜೊತೆಗೆ ಇನ್ನೊಬ್ಬ ಹುಡುಗನೂ ಬರುತ್ತಾನೆ ಎಂದು ತಿಳಿಸಿದರು.

ಮರುದಿನ ಬೆಳಿಗ್ಗೆ ನಾಲ್ಕೂವರೆಗೆ ಅಜ್ಜ ಎಬ್ಬಿಸಿದಾಗ ನನಗೆ ದಿಕ್ಕೇ ತೋಚಲಿಲ್ಲ. ಅದು ಮಧ್ಯರಾತ್ರಿಯೋ, ಬೆಳಗೋ ಗೊತ್ತಾಗಲಿಲ್ಲ. ಅಷ್ಟು ಹೊತ್ತಿಗೆ ನನ್ನ ಸ್ನೇಹಿತ ಬಂದ. ನಮ್ಮ ಮನೆಯಲ್ಲಿದ್ದ ಸಂಬಂಧಿ ವೆಂಕಣ್ಣನ ಸೈಕಲ್ ಮೇಲೆ ನಮ್ಮ ಡಬಲ್ ರೈಡ್ ಪ್ರಯಾಣ ಸಾಗಿತು.

ADVERTISEMENT

ಧಾರವಾಡ ಪುಟ್ಟ ಊರಾದರೂ ನಮ್ಮ ಮನೆಯಿಂದ ಗುರುಕುಲ ಸಾಕಷ್ಟು ದೂರ. ಗುರುಗಳು ನೋಡಲು ತುಂಬ ಸಂಭಾವಿತರ ಹಾಗೆ ಕಾಣುತ್ತಿದ್ದರು. ಹೋದ ತಕ್ಷಣ ಮಡಿ ಉಟ್ಟುಕೊಂಡು ಅವರ ಮುಂದೆ ಕುಳಿತು ಸಂಧ್ಯಾವಂದನೆ ಮಾಡಬೇಕು. ನಂತರ ಪಾಠ ಪ್ರಾರಂಭ. ಧಾರವಾಡದ ವಿಪರೀತ ಚಳಿ, ಅದರೊಂದಿಗೆ ನಾವು ಬರೀ ಮೈಯಲ್ಲಿ ಕುಳಿತದ್ದು ಅದರ ಮೇಲೆ ಈ ಇಡೀ ಕಾರ್ಯಕ್ರಮದಲ್ಲಿ ನಮಗಿದ್ದ ಅನಾಸಕ್ತಿ, ಇವೆಲ್ಲ ಸೇರಿ ಮಂತ್ರ ಹೇಳುವಾಗ ಅಲ್ಲಲ್ಲಿ ಮನಸ್ಸು ಎಲ್ಲಿಯೋ ಹೋಗಿ ಬಾಯಿಂದ ತಪ್ಪಾಗುತ್ತಿದ್ದವು. ಒಂದು ತಪ್ಪು ಬಂತೋ, ಅಷ್ಟು ಚೆನ್ನಾಗಿದ್ದ ಗುರುಗಳು ನರಸಿಂಹಾವತಾರ ತಾಳುತ್ತಿದ್ದರು. ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿದ್ದ ತಾಮ್ರದ ಚೆಂಬಿನಲ್ಲಿದ್ದ ತಣ್ಣೀರನ್ನು ನಮ್ಮ ಮುಖಕ್ಕೆ ಗುರಿತಪ್ಪದಂತೆ ಎರಚಿ, ‘ಅಪಭ್ರಂಶ ಅಪಭ್ರಂಶ. ಏಳು ಮೇಲೆ. ಹೊರಗೆ ಹೋಗಿ ಬಾವಿಯಿಂದ ಎಳೆದುಕೊಂಡು ಎರಡುಕೊಡ ನೀರು ಹಾಕಿಕೊಂಡು ಬಾ ತಲೆಯ ಮೇಲೆ. ಹಾಗೆಯೇ ಕಟ್ಟೆಯ ಮೇಲೆ ಹುಣಿಸೇ ಹಣ್ಣು ಇಟ್ಟಿದ್ದೇನೆ. ಚೆನ್ನಾಗಿ ನಾಲಿಗೆ ಉಜ್ಜಿ ತೊಳೆದುಕೊಂಡು ಬಾ. ಸರಿಯಾಗಿ ಉಚ್ಚಾರಣೆ ಬರುವುದಿಲ್ಲ’ ಎಂದು ಕೂಗುತ್ತಿದ್ದರು.

ದೊಡ್ಡ ಹುಡುಗರು ತಾವೇ ಸ್ನಾನ ಮಾಡಬೇಕು. ನಮ್ಮಂತಹ ಪುಟ್ಟ ಹುಡುಗರಿಗೆ ಹಿರಿಯ ಹುಡುಗರು ಸಂಭ್ರಮದಿಂದ ಬಾವಿಯಿಂದ ನೀರೆಳೆದು ತಲೆಯ ಮೇಲೆ ಸುರುವುತ್ತಿದ್ದರು. ಅವರಿಗೆ ಅದೊಂದು ಕ್ಷುದ್ರ ಸಂತೋಷ. ಆ ಚಳಿಯಲ್ಲಿ ನಮ್ಮ ದೇಹದ ಎಲುಬುಗಳು ಲಟಲಟಿಸುತ್ತಿದ್ದವು. ಆಗ ಒಂದೇ ಉಸುರಿನಲ್ಲಿ ನನ್ನಜ್ಜನಿಗೂ ಗುರುಗಳಿಗೂ ಶಾಪ ಹಾಕುತ್ತಿದ್ದೆ. ಅವರಿಬ್ಬರೂ ರಾಕ್ಷಸರಂತೆ ತೋರುತ್ತಿದ್ದರು. ಮರುದಿನ ಯಾಕಾದರೂ ಬೆಳಗಾಗುತ್ತದೋ ಎಂದು ದುಃಖಿಸುತ್ತಿದ್ದೆ.

ಚಳಿಗಾಲದಲ್ಲಿ ಸೈಕಲ್ ಮೇಲೆ ಹೋಗುವುದೂ ಒಂದು ಶಿಕ್ಷೆಯೇ. ಆಗೆಲ್ಲ ನಮಗೆ ಅರ್ಧ ಚಡ್ಡಿಯೇ ಗತಿ. ಬೆಚ್ಚಗಿನ ಬೂಟುಗಳಿರಲಿಲ್ಲ. ಹಬಾಯಿ ಚಪ್ಪಲಿಗಳೇ ಶ್ರೇಷ್ಠ ಪಾದರಕ್ಷೆಗಳು. ಧಾರವಾಡ ಚಳಿಗೆ ಮೈ ಒಣಗಿ ಬಿರುಕುಬಿಟ್ಟು ತುಂಬ ಕಿರಿಕಿರಿಯಾಗುತ್ತಿತ್ತು.

ನನ್ನಕ್ಕ ದಿನಬಿಟ್ಟು ದಿನ ಮೈಗೆ ಎಣ್ಣೆ ಹಚ್ಚಿದರೂ ಪ್ರಯೋಜನವಾಗುತ್ತಿರಲಿಲ್ಲ. ಕಾಲಿನ ಹಿಮ್ಮಡಿಗಳಂತೂ ಒಡೆದುಕೊಂಡು ಆ ಕೊರಕಲುಗಳಲ್ಲಿ ಸಣ್ಣಪುಟ್ಟ ಪ್ರಾಣಿಗಳು ಆರಾಮವಾಗಿರಬಲ್ಲಷ್ಟು ದೊಡ್ಡವಾಗಿರುತ್ತಿದ್ದವು. ಹಿಮ್ಮಡಿ ಊರಿ ನಡೆಯುವುದಾಗುತ್ತಿರಲಿಲ್ಲ. ಆದಷ್ಟು ತುದಿಗಾಲ ಮೇಲೆ ನಡೆಯಬೇಕು.

ಒಂದು ದಿನ ಬೆಳಿಗ್ಗೆ ಪಾಠ ಮುಗಿಸಿ ಬೇರೆ ಕೋಣೆಯಲ್ಲಿ ಬಟ್ಟೆ ಬದಲಿಸುತ್ತಿದ್ದೆ. ಗುರುಗಳು ಮತ್ತಾರಿಗೋ ಪಾಠ ಹೇಳುತ್ತಿದ್ದರು. ನಾನು ತುದಿಗಾಲಿನ ಮೇಲೆ ನಡೆದದ್ದನ್ನು ಅವರು ಕಂಡಿರಬೇಕು. ‘ಏ ಗುರುರಾಜಾ ಬಾ ಇಲ್ಲಿ’ ಎಂದು ಕರೆದರು. ಮತ್ತೇನು ತಪ್ಪಾಯಿತೋ, ಮತ್ತೆ ಬಾವಿಯ ಕಡೆಗೆ ಹೋಗಬೇಕೇ ಎಂದು ಹೆದರುತ್ತಾ ಹೋದೆ. ‘ಬಾ ಇಲ್ಲಿ ಕೂತುಕೋ’ ಎಂದವರೇ ತಮ್ಮ ಮೃದುವಾದ ಕೈಗಳಲ್ಲಿ ನನ್ನ ಪಾದವನ್ನು ಹಿಡಿದುಕೊಂಡರು. ನನಗೆ ಗಾಬರಿ, ಮುಜುಗರ. ‘ಎಷ್ಟು ಒಡೆದಿದ್ದಾವಲ್ಲೋ ಕಾಲು?’ ಎಂದು ಮೃದುವಾಗಿ ಹಿಮ್ಮಡಿಯನ್ನು ನೇವರಿಸಿ, ಮೇಲೆದ್ದು ಒಂದು ಬಟ್ಟಲಲ್ಲಿ ಇಟ್ಟಿದ್ದ ಹರಳೆಣ್ಣೆ ಮತ್ತು ಮೇಣದ ಮಿಶ್ರಣವನ್ನು ತಂದು ನಿಧಾನವಾಗಿ ಅದನ್ನು ಒಡೆದ ಭಾಗದಲ್ಲೆಲ್ಲ ಹಚ್ಚಿ, ಹದವಾಗಿ ತಿಕ್ಕುತ್ತ, ‘ಕಷ್ಟ ಆಗುತ್ತದಲ್ಲೇನೋ ಮಗು? ಬೇಜಾರು ಮಾಡಿಕೊಬೇಡ. ಈ ಧರ್ಮದ ಮಾತು, ಮಂತ್ರ ಯಾಕೆ ಬೇಕು ಎನ್ನಿಸುತ್ತದಲ್ಲ ? ಮುಂದೆ ನಿನ್ನನ್ನು ಹೊಸ ಜ್ಞಾನ ಬಿಡುವುದಿಲ್ಲ. ಆದರೆ ಇದು ಮಾತ್ರ ಸಿಗುವುದೇ ಇಲ್ಲ. ಈಗ ಚಿಕ್ಕಂದಿನಲ್ಲಿ ಕಲಿತದ್ದು ನಿನ್ನ ಜೀವನಕ್ಕೆ ಮುಂದೆ ಸಂಜೀವಿನಿಯಾಗುತ್ತದೆ’ ಎಂದರು.

ನನಗೆ ಮೊಸರವಲಕ್ಕಿ, ಬಾಳೆಹಣ್ಣು ತಿನ್ನಿಸಿಯೇ ಮನೆಗೆ ಕಳುಹಿಸಿದರು. ಮನೆಗೆ ಸೈಕಲ್ ಮೇಲೆ ಬರುವಾಗ ರಸ್ತೆ ಸರಿಯಾಗಿ ಕಾಣಲಿಲ್ಲ, ಕಣ್ಣು ಕೃತಜ್ಞತೆಯ ನೀರಿನಿಂದ ಮಂಜಾಗಿದ್ದವು.

ಇಂದಿಗೂ ನನಗೆ ಗುರುಗಳು ನೀಡಿದ ಆ ಜ್ಞಾನ, ಆ ಪ್ರೀತಿ ಸಂಜೀವಿನಿಯಾಗಿವೆ. ಆಗ ರಾಕ್ಷಸರಂತೆ ಕಂಡಿದ್ದ ನನ್ನಜ್ಜ, ಗುರುಗಳು ನನ್ನನ್ನಿಂದು ಆಶ್ವಿನೀ ದೇವತೆಗಳಂತೆ ಕಾಪಾಡುತ್ತಿದ್ದಾರೆ. ಆ ಗುರುಪರಂಪರೆ ನಿರಂತರವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.