ADVERTISEMENT

ನೀರ ಮೇಲೆ ತೇಲುವ ಎಣ್ಣೆ

ಡಾ. ಗುರುರಾಜ ಕರಜಗಿ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST
ಆತ ಸನ್ಯಾಸಿಯೇನೂ ಅಲ್ಲ. ಕಾವಿಬಟ್ಟೆ ಧರಿಸದಿದ್ದರೂ ಜನ ಅವನಿಗೆ ಸನ್ಯಾಸಿಗಳಿಗೆ ನೀಡುವ ಮರ್ಯಾದೆಯನ್ನೇ ಕೊಡುತ್ತಿದ್ದರು. ಅವನು ಎಲ್ಲಿಗೆ ಹೋದರೂ ಜನ ಮುತ್ತಿಕೊಂಡು ಆತನ ಮಾತುಗಳನ್ನು ಕೇಳಲು ಹಾತೊರೆಯುತ್ತಿದ್ದರು. ಆತನ ಆಶ್ರಮವೇನೂ ಇಲ್ಲ. ಯಾವುದೇ ಮರದ ಕೆಳಗೆ ಕುಳಿತುಕೊಂಡರಾಯಿತು, ಅದೇ ಸಭಾ ಮಂದಿರ ಇದ್ದ ಹಾಗೆ. ಸಾವಿರ ಸಂಖ್ಯೆಯ ಜನ ಬಂದು ಸೇರುತ್ತಿದ್ದರು.

ಈ ಸಜ್ಜನ ಮನುಷ್ಯ ಒಮ್ಮೆ ಒಂದೂರಿಗೆ ಬಂದ. ದೇವಸ್ಥಾನದ ಮುಂದಿರುವ ಕಟ್ಟೆಯ ಮೇಲೆ ಕುಳಿತ. ಆತ ಬಂದ ವಿಷಯ ಊರಿನಲ್ಲಿ ತಕ್ಷಣ ಹಬ್ಬಿತು. ಜನ ಓಡಿಬಂದು ಸೇರತೊಡಗಿದರು. ಅರ್ಧತಾಸಿನಲ್ಲಿ ಸಾವಿರ ಜನ ಸೇರಿದರು. ಆ ಊರಿನಲ್ಲಿ ಒಬ್ಬ ಪಂಡಿತ. ಸಾಕಷ್ಟು ಮಟ್ಟಿಗೆ ಶಾಸ್ತ್ರಗಳನ್ನು ಓದಿಕೊಂಡವನು. ತನಗೆ ವಿಷಯ ತಿಳಿದಿದೆ ಎಂಬ ಗರ್ವ ಅವನಲ್ಲಿ ಮನೆ ಮಾಡಿತ್ತು. ಅವನಿಗೆ ಈ ಸಜ್ಜನನ ವಿಷಯ ಕೇಳಿ ಕುತೂಹಲ ಮತ್ತು ಹೊಟ್ಟೆಕಿಚ್ಚು ಎರಡೂ ಆಗಿದ್ದವು. ಅವನು ಸಜ್ಜನನ ಹಿನ್ನೆಲೆ ಕೆದಕಿ ಕೆದಕಿ ಅವರಿವರನ್ನು ಕೇಳಿ ತಿಳಿದಿದ್ದಾನೆ. ಈ ಸಜ್ಜನ ಮಹಾ ವಿದ್ಯಾವಂತನೇನಲ್ಲ.

ಮೊದಲು ವ್ಯಾಪಾರ ಮಾಡುತ್ತಿದ್ದವನು. ಯಾರದೋ ತಪ್ಪಿಗೆ, ಮೋಸಕ್ಕೆ ಬಲಿಯಾಗಿ ಜೈಲಿಗೆ ಹೋಗಿದ್ದಾನೆ. ನಂತರ ಎಲ್ಲೆಲ್ಲಿಯೋ ಮನೆಬಿಟ್ಟು ಅಲೆದಾಡಿ ಮರಳಿ ಬಂದಿದ್ದಾನೆ. ಬಹುಶಃ ಅವನಿಗೆ ಶಾಸ್ತ್ರಗಳ ಪರಿಚಯವೇ ಇಲ್ಲ.
 
ಆದರೂ ಆತ ಏನು ಮಾತನಾಡುತ್ತಾನೆ ಎಂಬುದನ್ನು ಕೇಳಲು ತಾನು ಬಂದು ಆ ಸಜ್ಜನನ ಪಕ್ಕದಲ್ಲೇ ಕುಳಿತುಕೊಂಡ. ಅವನ ಮಾತುಗಳನ್ನು ಕೇಳಿಸಿಕೊಂಡ. ನಂತರ ಮಾತು ಮುಗಿದು ಜನಸಂದಣಿ ಕರಗಿದ ಮೇಲೆ ಆ ಸಜ್ಜನನನ್ನು ಕುರಿತು ಮಾತನಾಡಿದ. `ನಾನೂ ಈ ಊರಿನವನೇ' ಎಂದು ಹೇಳಿಕೊಂಡು ತನ್ನ ಜ್ಞಾನದ ಬಗ್ಗೆ, ಪಾಂಡಿತ್ಯದ ಬಗ್ಗೆ ಬೇಕಾದಷ್ಟು ಕೊಚ್ಚಿಕೊಂಡ. 

ಆ ಸಜ್ಜನ ವಿನೀತನಾಗಿ ಕೇಳಿಸಿಕೊಳ್ಳುತ್ತಲೇ ಇದ್ದ. ಅವನೊಂದಿಗೆ ಊರ ಗೌಡರೂ ಇದ್ದರು. ಕೊನೆಗೆ ಪಂಡಿತ ಕೇಳಿದ.  `ನನಗೆ ಇಷ್ಟು ಜ್ಞಾನವಿದ್ದರೂ ಜನ ನನ್ನ ಮಾತು ಕೇಳುವುದಿಲ್ಲ. ನಿಮಗೆ ಅಂಥ ವಿಶೇಷ ಪಾಂಡಿತ್ಯ ಇಲ್ಲದಿದ್ದರೂ, ನಿಮ್ಮ ಹಿನ್ನೆಲೆ ಅಷ್ಟು ಒಳ್ಳೆಯದಾಗಿರದಿದ್ದರೂ ಅದೇಕೆ ಜನ ಹೀಗೆ ನಿಮ್ಮ ಕಡೆಗೆ ಬಂದು ಗೌರವ ತೋರಿಸುತ್ತಾರೆ'. ಸಜ್ಜನ ಏನೋ ಹೇಳಬೇಕು ಎನ್ನುವಷ್ಟರಲ್ಲಿ ಗೌಡರು,  `ಸ್ವಾಮಿ, ಇದಕ್ಕೆ ನಾನೇ ಉತ್ತರ ನೀಡುತ್ತೇನೆ'ಎಂದರು. ನಂತರ ಪಂಡಿತರ ಕಡೆಗೆ ತಿರುಗಿ ಹೇಳಿದರು,  `ಸ್ವಾಮಿ, ಪಂಡಿತರೇ ಇದು ನೀರು ಮತ್ತು ಎಣ್ಣೆಯ ವ್ಯವಹಾರ.

ಎಣ್ಣೆಯನ್ನು ನೀರಿನಲ್ಲಿ ಹಾಕಿದರೆ ಅದು ನೀರಿಗಿಂತ ಮೇಲೆಯೇ ಇರುತ್ತದೆ. ಒಂದು ಬಾರಿ ನೀರು ಎಣ್ಣೆಯನ್ನು ಕೇಳಿತಂತೆ,  ನೀನು ಇಷ್ಟು ಕೊಳಕಾಗಿದ್ದೀಯಾ, ಭಾರವಾಗಿದ್ದೀಯಾ. ನಿನಗೊಂದು ಕೆಟ್ಟ ವಾಸನೆ ಇದೆ, ಕೈಗೆ ತಗುಲಿದರೆ ಜಿಡ್ಡು ಅಂಟಿಕೊಳ್ಳುತ್ತದೆ. ಆದರೂ ನೀನು ನನಗಿಂತ ಮೇಲೆಯೇ ಇರುವುದು ಏಕೆ. ಅದಕ್ಕೆ ಎಣ್ಣೆ ಹೇಳಿತು,  ಅಯ್ಯೊ ನಾನೆಷ್ಟು ಕಷ್ಟಪಟ್ಟಿದ್ದೇನೆ ಗೊತ್ತೇ? 

ನನ್ನನ್ನು ಮಣ್ಣಿನಲ್ಲಿ ಹೂಳಿದರು. ನಾನು ನೆಲವನ್ನು ಸೀಳಿಕೊಂಡು ಮೇಲೆ ಬಂದೆ, ದೊಡ್ಡ ಮರವಾದೆ. ನನ್ನ ಬೀಜಗಳನ್ನು ಕತ್ತರಿಸಿ ಚೂರುಚೂರು ಮಾಡಿದರು. ನಂತರ ಯಂತ್ರದಲ್ಲಿ ಹಾಕಿ ಅರೆದರು. ನಾನಾಗ ಎಣ್ಣೆಯಾದೆ. ಅದು ಅಷ್ಟೇ ಅಲ್ಲ, ನಾನು ಸ್ವತ: ಉರಿದು ಜಗತ್ತಿಗೆ ಬೆಳಕು ಕೊಡುತ್ತೇನೆ. ನಾನು ಪಟ್ಟ ಈ ಪರಿಶ್ರಮದಿಂದಾಗಿ ನನಗೆ ನಿನಗಿಂತ ಮೇಲಿನ ಸ್ಥಾನ ಸಿಕ್ಕಿದೆ. ಹಾಗೆಯೇ ಪಂಡಿತರೇ ಸಜ್ಜನರು ಕಷ್ಟದ ಮೂಸೆಯಲ್ಲಿ ಹಾದು, ಬೆಂದು ಅರಿವಿನಿಂದ ಬೆಳಕಾದವರು. ಅದಕ್ಕೇ ಅವರಿಗೆ ಅಷ್ಟು ಮನ್ನಣೆ'. ಎಂದರು. ನಾವು ಜೀವನದಲ್ಲಿ ಅನುಭವಿಸುವ ಕಷ್ಟಗಳು, ನೋವುಗಳು. ನಮ್ಮ ಮನಸ್ಸಿಗೆ, ದೇಹಕ್ಕೆ ಭಗವಂತ ನೀಡುವ ಶಿಕ್ಷಣ. ಈ ಶಿಕ್ಷಣವೇ ಮುಂದೆ ಜೀವನದ ಮಟ್ಟ ತೀರ್ಮಾನಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.