ADVERTISEMENT

ಬದಲಾದ ರೂಪ

ಡಾ. ಗುರುರಾಜ ಕರಜಗಿ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಒಂದೂರಿನಲ್ಲಿ ಒಂದು ಕುದುರೆ. ಅದು ಬಹಳ ಸುಂದರವಾದ ಕುದುರೆ. ಅದರ ಕಪ್ಪು ಮೈ ಮಿರಮಿರನೆ ಹೊಳೆಯುತ್ತಿತ್ತು. ಅದು ನಾಟಕೀಯವಾಗಿ ಅತ್ತಿತ್ತ ಕತ್ತು ಕೊಂಕಿಸಿದಾಗ ಅದರ ಕುತ್ತಿಗೆಯ ಮೇಲಿನ ಉದ್ದವಾದ ಕೂದಲುಗಳು ತೊನೆದು ನೃತ್ಯ ಮಾಡುತ್ತಿದ್ದಂತೆ ಕಾಣುತ್ತಿತ್ತು.

ಅದರ ಕಣ್ಣುಗಳಲ್ಲಿ ಅದೇನು ಹೊಳಪು? ಹಣೆಯ ಮೇಲಿನ ಬಿಳಿಯ ಪಟ್ಟಿ ಅದರ ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಆ ಸುಂದರ ಕುದುರೆ ಕೆನೆಯುತ್ತ ನಡೆದರೆ ಎಂಥವರಿಗಾದರೂ ನಾಟ್ಯಪಟುವನ್ನು ನೋಡಿದ ನೆನಪಾಗುವಂತಿತ್ತು. ಅದು ಜೋರಾಗಿ ಓಡಿದರೆ ಯಾವ ವಾಹನವನ್ನಾದರೂ ಹಿಂದಕ್ಕೆ ಹಾಕಿ ಸರಾಗವಾಗಿ ಮುಂದೆ ಹೋಗುತ್ತಿತ್ತು. ಅದನ್ನು ಕಾಣುವ ತವಕ ಎಲ್ಲರಿಗಿದ್ದರೂ ಅದನ್ನು ಮುಟ್ಟಲು ಹೆದರಿಕೆ. ಅದು ಅತ್ಯಂತ ಬಲಿಷ್ಠವಾದದ್ದಲ್ಲವೇ? ಅಂಥ ಕುದುರೆಗೂ ತಾನೇಕೋ ಅಷ್ಟು ಚೆನ್ನಾಗಿಲ್ಲ ಎನ್ನಿಸಿತು. ಕೆರೆಯ ಬದುವಿನ ಮೇಲೆ ಓಡಾಡಿ ತನ್ನ ಇಡೀ ದೇಹದ ಪ್ರತಿಬಿಂಬವನ್ನು ನೋಡಿತು. ಊಹೂಂ. ತಾನು ಎಷ್ಟು ಚೆಂದವಾಗಿರಬೇಕಿತ್ತೋ ಅಷ್ಟು ಇಲ್ಲ ಎಂಬುದು ಖಚಿತವಾಯಿತು.

ಮರುದಿನ ಊರ ದೇವಸ್ಥಾನದ ಮುಂದೆ ಕಣ್ಣೀರು ಸುರಿಸುತ್ತ ನಿಂತು ದೇವರನ್ನು ಆರ್ತವಾಗಿ ಪ್ರಾರ್ಥಿಸಿತು. ಉಪವಾಸ ಮಾಡಿತು, ನೀರು ಕುಡಿಯುವುದನ್ನು ನಿಲ್ಲಿಸಿತು. ಮೆಚ್ಚಿದ ಭಗವಂತ ಪ್ರತ್ಯಕ್ಷನಾದ. ಅವನನ್ನು ಕಂಡು ಹರ್ಷದಿಂದ ಕಣ್ಣೀರು ಸುರಿಸಿದ ಕುದುರೆ ಹೇಳಿತು,  ಭಗವಂತಾ, ನನ್ನನ್ನು ತುಂಬ ಸುಂದರವಾಗಿ ಸೃಷ್ಟಿಸಿದ್ದಕ್ಕೆ ನಾನು ನಿನಗೆ ಋಣಿಯಾಗಿದ್ದೇನೆ. ನನಗೆ ಒಳ್ಳೆಯ ಗುಣಗಳನ್ನೂ ಕೊಟ್ಟಿದ್ದೀಯಾ. ಆದರೆ ನನ್ನನ್ನು ಇನ್ನಷ್ಟು ಸುಂದರವಾಗಿಸಿದ್ದರೆ ಹೆಚ್ಚು ತೃಪ್ತಿಯಾಗುತ್ತಿತ್ತು. ದಯವಿಟ್ಟು ನನ್ನ ಮೇಲೆ ಕೃಪೆಯಿಟ್ಟು ಇನ್ನಷ್ಟು ಸುಂದರವಾದ ರೂಪವನ್ನು ನೀಡು .

ಭಗವಂತ ನಕ್ಕು ಹೇಳಿದ,  ಆಯ್ತು, ನಿನ್ನಿಷ್ಟದಂತೆಯೇ ಹೆಚ್ಚಿನ ಸೌಂದರ್ಯ ಕೊಡುತ್ತೇನೆ. ನಿನಗೆ ಏನೇನು ಬದಲಾವಣೆ ಬೇಕೋ ಹೇಳು.

ಕುದುರೆ ಹೇಳಿತು,  ನನ್ನ ದೇಹದ ಅಂಗಾಂಗಗಳು ಸರಿಯಾದ ಪ್ರಮಾಣದಲ್ಲಿ ಇಲ್ಲ ಎನ್ನಿಸುತ್ತಿದೆ. ನನ್ನ ಕತ್ತು ಇನ್ನಷ್ಟು ಉದ್ದವಾಗಿ, ಕಾಲುಗಳೂ ಮತ್ತಷ್ಟು ಉದ್ದವಾಗಿ, ತೆಳ್ಳಗಾಗಿದ್ದರೆ ಚೆನ್ನಾಗಿತ್ತು'  ದೇವರು ತಥಾಸ್ತು ಎಂದ. ಮರುಕ್ಷಣದಲ್ಲೆೀ, ಕುದುರೆ ಒಂದು ಒಂಟೆಯಾಗಿ ನಿಂತಿತ್ತು. ತನ್ನ ಬದಲಾದ ರೂಪವನ್ನು ಕಂಡು ಕುದುರೆ ಹೋ ಎಂದು ಅತ್ತಿತು.  ದೇವರೇ ನೀನೇನು ಮಾಡಿಬಿಟ್ಟೆ? ನಾನು ಮೊದಲೇ ಚೆನ್ನಾಗಿದ್ದೆ. ಈ ಒಂಟೆಯ ರೂಪ ಬೇಡ ನನಗೆ  ಎಂದು ಗೋಳಿಟ್ಟಿತು.

ಈ ದೇಹ ನೀನು ಅಪೇಕ್ಷಿಸಿದಂತೆಯೇ ಇದೆಯಲ್ಲ, ಉದ್ದ ಕತ್ತು, ಉದ್ದ ತೆಳುವಾದ ಕಾಲುಗಳು?  ಭಗವಂತಾ, ಇನ್ನೊಂದು ಬಾರಿ ಕೃಪೆ ಮಾಡು. ಈ ಬಾರಿ ಕಾಲು ಇಷ್ಟು ಉದ್ದ ಬೇಡ, ಕತ್ತು ಇಷ್ಟುದ್ದ ಬೇಡ. ಬದಲಾಗಿ ನನ್ನ ಮೈಮೇಲೆ ದಟ್ಟವಾದ ಕೂದಲುಗಳನ್ನು ಕೊಡು. ಚಳಿಯಲ್ಲಿ ನನ್ನನ್ನು ಬೆಚ್ಚಗಿಡುತ್ತವೆ. ನನಗೆ ಕೋಪ ಜಾಸ್ತಿ. ದಯವಿಟ್ಟು ಅದನ್ನು ತೆಗೆದುಬಿಡು  ಕೇಳಿತು ಕುದುರೆ. ಭಗವಂತ ಮತ್ತೆ ತಥಾಸ್ತು ಎಂದ.

ಈ ಬಾರಿ ಒಂಟೆ ಮಾಯವಾಗಿ ಆ ಸ್ಥಳದಲ್ಲಿ ಕತ್ತೆ ನಿಂತಿತ್ತು. ಅದನ್ನು ನೋಡಿದ ಮೇಲಂತೂ ಕುದುರೆ ನೆಲಕ್ಕೆ ಬಿದ್ದು ಹೊರಳಾಡಿ ಅತ್ತಿತು.  ಭಗವಂತಾ, ನನಗೆ ಮತ್ತಾವುದೂ ರೂಪ ಬೇಡ. ಮೊದಲಿನ ಕುದುರೆಯ ಆಕೃತಿಯೇ ಸಾಕು  ಎಂದಿತು.

ಭಗವಂತ ಹೇಳಿದ,  ನೋಡು, ನಾನು ಪ್ರತಿಯೊಂದು ಜೀವವನ್ನು ವಿಶಿಷ್ಟವಾಗಿ ರೂಪಿಸಿದ್ದೇನೆ. ಅದಕ್ಕೆ ಅದರದೇ ವಿಶಿಷ್ಟತೆ ಇದೆ. ನಾನು ನಾನಾಗಿಯೇ ಇರುವುದರಲ್ಲಿ ಇರುವ ಸೊಬಗು ಬೇರೆಯವರಾಗುವುದರಲ್ಲಿ ಇಲ್ಲ ಮತ್ತೊಬ್ಬರಂತಾದಾಗ ನಿನ್ನ ವಿಶೇಷತೆ ಕಳೆದುಹೋಗುತ್ತದೆ . ಕುದುರೆಗೆ ಈ ಮಾತು ಒಪ್ಪಿತು.

ನಾವೂ ಇನ್ನೊಬ್ಬರಂತಾಗಲು ಹೊರಟಾಗ ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ, ಶಕ್ತಿಯನ್ನು ಕಳೆದುಕೊಳ್ಳುತ್ತೇವೆ.

ಪ್ರಪಂಚದಲ್ಲಿರುವ ಏಳು ನೂರು ಕೋಟಿ ಜನರಲ್ಲಿ ನಮ್ಮ ಹಾಗೆ ಯಾರೂ ಇಲ್ಲ. ನಾವೊಂದು ಪ್ರಪಂಚದ ಅದ್ಭುತ. ಹಾಗಿದ್ದಾಗ ಇನ್ನೊಬ್ಬರಂತೆ ಆಗಲು ಹೋಗುವುದು ಏಕೆ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.