ADVERTISEMENT

ಬಾವಿಯಲ್ಲಿ ಬಿದ್ದ ಎತ್ತು

ಡಾ. ಗುರುರಾಜ ಕರಜಗಿ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST
ಒಂ ದೂರಿನಲ್ಲಿ ಒಬ್ಬ ರೈತ. ಅವನ ಹೊಲ ಊರಿಗೆ ಸಮೀಪವಾಗಿಯೇ  ಇತ್ತು. ಅವನ ಹೊಲವೇನೂ ದೊಡ್ಡದಲ್ಲ. ಆದರೆ ಅದರಿಂದಲೇ ಅವನ ಸಂಸಾರ ನಡೆಯುತ್ತಿತ್ತು. ಅವನ ಹತ್ತಿರವಿದ್ದದ್ದು ಒಂದೇ ಎತ್ತು. ಅದಕ್ಕೂ ಸಾಕಷ್ಟು ವಯಸ್ಸಾಗಿದೆ. ಹೊಸದನ್ನು ತರುವಷ್ಟು ಚೈತನ್ಯ ಆತನ ಬಳಿ ಇಲ್ಲ. ಹೇಗೋ ಜೀವನ ನಡೆಯುತ್ತಿತ್ತು.
 
ಆ ಊರಿನಲ್ಲಿ ದೇವಿ ಜಾತ್ರೆ ಬಹಳ ಪ್ರಸಿದ್ಧವಾದದ್ದು. ಆ ಪ್ರತಿ ವರ್ಷ ಜಾತ್ರೆಯ ದಿನದಂದು ದೂರದೂರದಿಂದ ಜನರು ನಡೆದು ಬರುತ್ತಾರೆ, ಸಂಭ್ರಮಪಡುತ್ತಾರೆ. ಜಾತ್ರೆಯ ದಿನ ಬಂದಿತು. ರೈತ ಕೂಡ ಸಂಜೆಯಾದ ಮೇಲೆ ದೇವಸ್ಥಾನದ ಕಡೆಗೆ ಹೋಗುವುದೆಂದು ತೀರ್ಮಾನ ಮಾಡಿದ್ದ. ಪಾಪ! ಈ ವಯಸ್ಸಾದ ದನ ಕಣ್ಣು ಮುಚ್ಚಿಕೊಂಡು, ಮುಖವನ್ನು ಕೆಳಗೆ ಜೋಲಿಸಿಕೊಂಡು ಕುಳಿತಿತ್ತು. ಆಗ ಆದದ್ದು ಅನಾಹುತ. ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಒಂದಷ್ಟು ತರುಣರು ತಾವು ತಂದಿದ್ದ ಪಟಾಕಿಗಳನ್ನು ಹೊಡೆಯತೊಡಗಿದರು. ಒಂದೇ ಸಲ ನೂರಾರು ಗುಂಡುಗಳು ಹಾರಿದಂತಾಯಿತು. ಆ ಭಾರೀ ಸದ್ದಿಗೆ ಎತ್ತಿನ ಗುಂಡಿಗೆ ಒಡೆದೇಹೋಯಿತು. ಅದಕ್ಕೆ ಪ್ರಪಂಚವೇ ಸಿಡಿದು ಹೋದಂತೆನಿಸಿತು. ಗಾಬರಿಯಿಂದ ಹಾರಿ ಹಗ್ಗ ಕಿತ್ತುಕೊಂಡು ದಿಕ್ಕು ತೋಚದೆ ಓಡತೊಡಗಿತು. ಸಂಜೆಯ ಮಬ್ಬು ಕತ್ತಲೆಯಲ್ಲಿ ಹೌಹಾರಿದ ಎತ್ತು ಸಿಕ್ಕಸಿಕ್ಕಲ್ಲಿ ಹಾರಾಡಿ ಓಡುತ್ತ ಹೊಲದ ಬದಿಗಿದ್ದ ಒಂದು ಹಾಳುಬಾವಿಯಲ್ಲಿ ಬಿದ್ದುಬಿಟ್ಟಿತು. ಕ್ಷಣಕಾಲ ಅದಕ್ಕೆ ತಾನು ಸತ್ತೇ ಹೋದೆ ಎನಿಸಿತು. ಆದರೆ ಅದೃಷ್ಟ ಚೆನ್ನಾಗಿತ್ತು, ಅಲ್ಲಲ್ಲಿ ಕೆಲವು ತರಚಿದ ಗಾಯಗಳನ್ನು ಬಿಟ್ಟರೆ ವಿಶೇಷ ಪೆಟ್ಟೇನೂ ಆಗಿರಲಿಲ್ಲ.
 
ಹೊರಕ್ಕೆ ಬರುವ ದಾರಿ ಕಾಣದೇ ಒಂದೇ ಸಮನೆ ಅರಚತೊಡಗಿತು. ಆ ಪಟಾಕಿಯ ಭಾರೀ ಸದ್ದಿನಲ್ಲಿ ಎತ್ತು ಓಡಿಹೋದದ್ದು ರೈತನಿಗೆ ಗೊತ್ತಾಗಲೇ ಇಲ್ಲ. ಅವನು ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋಗಿ ರಾತ್ರಿ ತಡವಾಗಿ ಮನೆಗೆ ಬಂದ. ಮರುದಿನ ಬೆಳಿಗ್ಗೆ ಕೊಟ್ಟಿಗೆಯಲ್ಲಿ ಎತ್ತು ಇಲ್ಲದ್ದನ್ನು ನೋಡಿ ಹುಡುಕಾಡತೊಡಗಿದ. ಎಲ್ಲಿಯೂ ಎತ್ತಿನ ಸುಳಿವೇ ಇಲ್ಲ. ಹಾಗೆಯೇ ಹೊಲದ ಬದುವಿನ ಗುಂಟ ಬರುವಾಗ ಎತ್ತು ಒದರುವ ಸದ್ದು ಕೇಳಿಸಿತು. ಹೋಗಿ ನೋಡಿದರೆ ಆ ಇಕ್ಕಟ್ಟಾದ ಬಾವಿಯ ಅಡಿಯಲ್ಲಿ ಎತ್ತು ನಿಂತಿದೆ! ಅದನ್ನು ಹೊರಗೆ ತೆಗೆಯುವುದು ಹೇಗೆ? ಇಕ್ಕಟ್ಟಾದ ಬಾವಿ ಮತ್ತು ಭಾರವಾದ ಎತ್ತು. ತನ್ನ ಗೆಳೆಯರನ್ನು ಕರೆತಂದ ರೈತ. ಅವರೂ ಹತ್ತಾರು ಯೋಜನೆಗಳನ್ನು ಚಿಂತಿಸಿ ನೋಡಿದರು. ಆ ಪರಿಸ್ಥಿತಿಯಲ್ಲಿ ಎತ್ತನ್ನು ಹೊರತೆಗೆಯುವ ಯಾವ ಸಾಧ್ಯತೆಯೂ ಅವರಿಗೆ ಕಾಣಲಿಲ್ಲ.
 
ಕೊನೆಗೆ ಹಿರಿಯರೆಲ್ಲ ಒಂದು ತೀರ್ಮಾನಕ್ಕೆ ಬಂದರು. ಎತ್ತನ್ನು ಹೊರಗೆ ಎತ್ತುವುದು ಅಸಾಧ್ಯ. ಪಾಪದ ಪ್ರಾಣಿ ಅಲ್ಲಿಯೇ ಬಾವಿಯಲ್ಲಿದ್ದು ನರಳಿ, ನರಳಿ ಸಾಯಬೇಕಾಗುತ್ತದೆ. ಹಾಗೆ ನಿಧಾನವಾಗಿ ದಿನದಿನವೂ ಸಾಯುವ ಬದಲು ಬಾವಿಗೆ ಮಣ್ಣು ತುಂಬಿಸಿ ಕೊಂದುಬಿಡುವುದು ಮೇಲು. ಈ ಎಲ್ಲ ಹಿರಿಯರ ತೀರ್ಮಾನಕ್ಕೆ ರೈತ ಏನು ಹೇಳಿಯಾನು? ಹೂಂಗುಟ್ಟಿದ. ನಾಲ್ಕಾರು ಜನ ಬಂದು ಮಣ್ಣನ್ನು ಬಾವಿಗೆ ತಳ್ಳತೊಡಗಿದರು.

ಮೊದಲು ನಾಲ್ಕಾರು ಬುಟ್ಟಿ ಮಣ್ಣು ಎತ್ತಿನ ಮೈಮೇಲೆ ಬಿದ್ದಕೂಡಲೇ ಅದು ಮತ್ತಷ್ಟು ಗಾಬರಿಯಾಯಿತು. ಮೈ ಕೊಡವಿಕೊಂಡು ಮೇಲೆ ಹಾರಿತು. ಮತ್ತಷ್ಟು ಮಣ್ಣು ಬಿದ್ದಿತು, ಮತ್ತೆ ಕೊಡವಿಕೊಂಡು ನಿಂತಾಗ ಅದಕ್ಕೆ ತನ್ನನ್ನು ಪಾರುಮಾಡಲೆಂದೇ ಹೀಗೆ ಮಣ್ಣು ಹಾಕುತ್ತಿದ್ದಾರೆ ಎನ್ನಿಸಿತು. ಮಣ್ಣು ಹಾಕಿದಂತೆಲ್ಲ ಕೊಡವಿಕೊಂಡು ಮೇಲೇರುತ್ತಿತ್ತು. ಸ್ವಲ್ಪಸ್ವಲ್ಪವಾಗಿ ಮೇಲೇರುತ್ತ ಕೊನೆಗೆ ಬಾವಿಯಿಂದ ಹೊರಗೆ ಬಂದೇಬಿಟ್ಟಿತು! ರೈತನಿಗೆ ಮತ್ತು ಎಲ್ಲರಿಗೂ ಸಂತೋಷವಾಯಿತು. ಅದನ್ನು ಕೊಲ್ಲಲೆಂದು ಹಾಕಿದ ಮಣ್ಣೇ ಅದನ್ನು ಪಾರುಮಾಡಿತ್ತು. ಎಷ್ಟೋ ಬಾರಿ ನಮಗೆ ಯಾರೋ ತೊಂದರೆ ಕೊಡಬೇಕೆಂದೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎನ್ನಿಸಿದರೆ ಚಿಂತೆ ಬೇಡ. ಯಾಕೆಂದರೆ ಅವರು ಮಾಡುವ ತೊಂದರೆಯೇ ನಮಗೆ ಅನುಕೂಲಕರವಾಗಿ ಒದಗಿ ಬರಬಹುದು. ಆದರೆ ಆಗ ಮನದಲ್ಲಿ ಧೈರ್ಯವಿರಲಿ, ಚಿತ್ತ ಧನಾತ್ಮಕವಾಗಿರಲಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.