ADVERTISEMENT

ಭಾವನೆಗಳ ಅನಾವಶ್ಯಕ ಪ್ರದರ್ಶನ

ಡಾ. ಗುರುರಾಜ ಕರಜಗಿ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ಅಣ್ಣಪ್ಪ ಮನೆಗೆ ನಡೆದಿದ್ದ. ಆಗ ತಾನೇ ಅವನ ಹೆಂಡತಿ ಗಂಡುಮಗುವಿಗೆ ಜನ್ಮ ನೀಡಿದ ಸುದ್ದಿ ಬಂದಿತ್ತು. ಸಂತೋಷದಿಂದ ಅವನ ನಡಿಗೆಯಲ್ಲಿ ಕುಣಿತವಿತ್ತು. ಬರುವಾಗ ದಾರಿಯ ಬದಿಯಲ್ಲಿ ಒಂದು ಮುಂಗುಸಿ ಬಿದ್ದದ್ದನ್ನು ನೋಡಿದ.

ಪಾಪ! ಅದರ ಕಾಳಜಿ ಮಾಡದಿದ್ದರೆ ಅದು ಸತ್ತು ಹೋಗುವುದೆಂಬ ಭಯದಿಂದ ಅದನ್ನು ಎತ್ತಿಕೊಂಡು ಮನೆಗೆ ಬಂದ. ಅವನ ಹೆಂಡತಿ ಈ ಮುಂಗುಸಿಯನ್ನು ಕಂಡು ಗಾಬರಿಯಾದಳು. ಇದನ್ನು ಸಾಕುವುದೇ ಎಂದು ಮುಖ ಸಿಂಡರಿಸಿಕೊಂಡಳು. ಸ್ವಲ್ಪ ದಿನಗಳಾದ ಮೇಲೆ ಆಕೆಗೂ ಅದರ ಮೇಲೆ ಪ್ರೀತಿ ಬಂದಿತು.

ಆಕೆಯ ಆರೈಕೆಯಲ್ಲಿ ಮುಂಗುಸಿ ಮೈ ತುಂಬಿಕೊಂಡು ಚೆನ್ನಾಗಿ ಬೆಳೆಯಿತು. ಅದೂ ಕೃತಜ್ಞತೆ ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ಸದಾ ಮಗುವಿನ ಪಕ್ಕದಲ್ಲೆೀ ಇದ್ದು ತನ್ನ ತಮ್ಮನಂತೆಯೇ ಅದನ್ನು ನೋಡಿಕೊಳ್ಳುತ್ತಿತ್ತು. ಮಗು ಕೂಡ ಮುಂಗುಸಿಯನ್ನು ಕಂಡರೆ ಸಂತೋಷಪಡುತ್ತಿತ್ತು.

ಒಂದು ಸಲ ಸಣ್ಣಪ್ಪ ಮನೆಯಲ್ಲಿ ಇರಲಿಲ್ಲ. ಕುಡಿಯುವ ನೀರು ಮುಗಿದು ಹೋಗಿದೆ. ಅಡುಗೆ ಮಾಡಲೂ ನೀರಿಲ್ಲ. ಯಾರೂ ಮನೆಯಲ್ಲಿ ಇರದಿದ್ದಾಗ ಬಾವಿಗೆ ಹೋಗಿ ನೀರು ತರುವುದು ಹೇಗೆ ಎಂದು ಕ್ಷಣಕಾಲ ಸಣ್ಣಪ್ಪನ ಹೆಂಡತಿ ಚಿಂತೆ ಮಾಡಿದಳು. ಆಯಿತು ಮುಂಗುಸಿ ಇದೆಯಲ್ಲ, ಎಂದುಕೊಂಡು ಬಾಗಿಲು ಹಾಕಿಕೊಂಡು ಹೋಗುವ ಮೊದಲು `ಮಗುವನ್ನು ನೋಡಿಕೋ~ ಎಂದು ಮುಂಗುಸಿಗೆ ಹೇಳಿ ಹೋದಳು.

ಆಕೆ ಹೊರಹೋದ ಐದೇ ನಿಮಿಷಗಳಲ್ಲಿ ಬಾಗಿಲ ಸಂದಿಯಿಂದ ಒಂದು ನಾಗರಹಾವು ನುಗ್ಗಿ ಬಂದಿತು. ಸರಸರನೇ ಮನೆಯನ್ನೆಲ್ಲ ಸುತ್ತಾಡಿ ಮಗು ಮಲಗಿದ್ದ ಸ್ಥಳದ ಬಳಿ ಬಂದಿತು. ಅದನ್ನು ಮುಂಗುಸಿ ಮೈಎಲ್ಲ ಕಣ್ಣಾಗಿ ನೋಡುತ್ತಲೇ ಇತ್ತು. ಇನ್ನೇನು ಹಾವು ಮಗುವನ್ನು ಕಚ್ಚಿಯೇ ಬಿಡುತ್ತದೆ ಎನ್ನುವ ಹೊತ್ತಿಗೆ ಮುಂಗುಸಿ ಠಣ್ಣನೇ ಹಾರಿ ಹಾವಿನ ಕತ್ತನ್ನು ಹಿಡಿದು ಈಚೆಗೆ ಎಳೆಯಿತು.

ADVERTISEMENT

ಅನಿರೀಕ್ಷಿತವಾದ ಆಘಾತದಿಂದ ಕ್ಷಣಕಾಲ ಹಿಮ್ಮೆಟ್ಟಿದ ಹಾವು ಮುಂಗುಸಿಯ ಮೇಲೆ ಎರಗಿತು. ಎರಡರ ನಡುವೆ ಘನಘೋರ ಯುದ್ಧವಾಯಿತು. ಎರಡು ಕಡೆಗೂ ಸಾಕಷ್ಟು ರಕ್ತಪಾತವಾಯಿತು. ಕೊನೆಗೆ ಮುಂಗುಸಿ ಹಾವನ್ನು ಕತ್ತರಿಸಿ ಹಾಕಿತು. ಅದಕ್ಕೀಗ ಸಂಭ್ರಮ. ತಾನು ಮಾಡಿದ ಹಿರಿಮೆಯನ್ನು ಯಜಮಾನಿಗೆ ತೋರಬೇಕೆಂದು ಬಾಗಿಲ ಬಳಿಗೆ ಓಡಿತು.

ತಕ್ಷಣವೇ ಅದಕ್ಕೆ ತನ್ನ ತಾಯಿ ಹೇಳಿದ್ದ ಪಂಚತಂತ್ರದ ಕಥೆ ನೆನಪಾಯಿತು. ಆ ಕಥೆಯಲ್ಲಿ, ತನ್ನಂತಹ ಮುಂಗುಸಿ ಹಾವನ್ನು ಕೊಂದು ಮಗುವನ್ನು ಉಳಿಸಿದ ಮೇಲೆ ತನ್ನ ಶೌರ್ಯವನ್ನು ತೋರಲು ಓಡಿತ್ತು. ನೀರಿನ ಕೊಡ ಹೊತ್ತು ಬಂದ ಯಜಮಾನಿ ಬಾಯಿಗೆಲ್ಲ ರಕ್ತಮೆತ್ತಿಕೊಂಡ ಮುಂಗುಸಿಯನ್ನು ನೋಡಿ, ಅದುವೇ ಮಗುವನ್ನು ಕೊಂದಿರಬೇಕೆಂದು

ಭ್ರಮಿಸಿ ಕೋಪದಿಂದ ತುಂಬಿದ ಕೊಡವನ್ನು ಮುಂಗುಸಿಯ ಮೇಲೆ ಹಾಕಿ ಕೊಂದುಬಿಡುತ್ತಾಳೆ, ನಂತರ ವಿಷಯ ತಿಳಿದು ದುಃಖಪಡುತ್ತಾಳೆ. ತಾನೂ ಹಾಗೆಯೇ ಸಿಕ್ಕಿ ಹಾಕಿಕೊಳ್ಳಬಾರದೆಂದು ಸತ್ತ ಹಾವನ್ನು ದರದರನೇ ಎಳೆದು ಬಾಗಿಲ ಬಳಿಗೆ ತಂದು ಹಾಕಿತು. ತಾನು ಹೋಗಿ ಮರೆಯಲ್ಲಿ ಕುಳಿತಿತು.

ಯಜಮಾನಿ ಒಳಗೆ ಬಂದವಳೇ ಸತ್ತ ಹಾವನ್ನು ನೋಡಿ ಗಾಬರಿಯಾದಳು. ಓಡಿ ಮಗುವಿನ ಬಳಿಗೆ ಬಂದು ಮಗು ಕ್ಷೇಮವಾಗಿ ಆಡುತ್ತಿರುವುದನ್ನು ನೋಡಿ ನಿರಾಳಳಾದಳು. ಆಗ ನಿಧಾನವಾಗಿ ಮುಂಗುಸಿ ಹೊರಗೆ ಬಂದಿತು. ಯಜಮಾನಿಗೆ ಮುಂಗುಸಿಯ ಕಾರ್ಯ ತಿಳಿದು ಮೆಚ್ಚಿ ಅದನ್ನು ಅಪ್ಪಿಕೊಂಡು ಸಂತೋಷ ತೋರಿದಳು. ಮುಂದೆ ಮುಂಗುಸಿ ಆ ಪರಿವಾರದಲ್ಲಿ ಸುಖವಾಗಿ ಬದುಕಿತು.

ಯಶಸ್ಸು ಗಳಿಸುವುದು ಮುಖ್ಯ. ಆದರೆ ಅದನ್ನು ಎತ್ತಿ ಸಮಾಜಕ್ಕೆ ತೋರುವಲ್ಲಿ ಅವಸರ ತಕ್ಕುದಲ್ಲ. ಅವಸರದ ವಿಜೃಂಭಣೆ ಅನಾವಶ್ಯಕವಾದ ಭಾವನೆಗಳಿಗೆ ದಾರಿಯಾಗುತ್ತದೆ. ಆಗ ತಾಳ್ಮೆ ಮುಖ್ಯ, ಸಂಯಮ ಅತ್ಯವಶ್ಯ. ದುಃಖದ, ಕೋಪದ, ತಾಪದ ಭಾವನೆಗಳ ಪ್ರದರ್ಶನಕ್ಕೆ ಯಾವ ಸಂಯಮ ಅಗತ್ಯವೋ ಅಷ್ಟೇ ಸಂಯಮ ಸಾಧನೆಯ, ಯಶಸ್ಸಿನ ಘೋಷಣೆಯಲ್ಲೂ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.