ADVERTISEMENT

ವಾತಾವರಣ ಬದಲಾಯಿಸುವ ಶಕ್ತಿ

ಡಾ. ಗುರುರಾಜ ಕರಜಗಿ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಶಾಲೆಯಲ್ಲಿ  ತರಗತಿ ನಡೆಯುತ್ತಿತ್ತು, ಶಿಕ್ಷಕಿ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿದ್ದರು. ಮನುಷ್ಯನ ಮುಖದ ಚಿತ್ರ ಬರೆದು ಚಿತ್ರಕಲೆ ಎಂಥ ಅದ್ಭುತ ಮಾಧ್ಯಮ, ಚಿತ್ರದಲ್ಲಿಯ ಒಂದೆರಡು ಗೆರೆಗಳಲ್ಲಿಯ ಬದಲಾವಣೆ ಚಿತ್ರದ ಭಾವನೆಯನ್ನೇ ಬದಲಿಸಬಹುದು ಎಂದು ವಿವರಿಸಿ. ತಾವು ಬಿಡಿಸಿದ್ದ ಮುಖದ ಚಿತ್ರ ಯಾವ ಭಾವವನ್ನು ಸಾರುತ್ತದೆ ಎಂದು ಕೇಳಿದರು.

ಮಕ್ಕಳು ಚಿತ್ರ ನೋಡಿ ಅದು ದುಃಖದ ಭಾವನೆ  ತೋರುತ್ತಿದೆ ಎಂದರು. ಆಗ ಶಿಕ್ಷಕಿ ನಕ್ಕು, `ಹಾಗೆಯೇ ನೋಡುತ್ತಿರಿ, ಈಗ ಏನಾಗುತ್ತದೆ'  ಎಂದರು. ನಂತರ ಕುಂಚವನ್ನು ಬಣ್ಣದಲ್ಲದ್ದಿ ಮುಖದ ತುಟಿಯ ಹತ್ತಿರ ಒಂದೆರಡು ಗೆರೆಗಳಿಂದ ಸ್ವಲ್ಪ ಮಾರ್ಪಾಟು ಮಾಡಿದರು. ತಕ್ಷಣ ಮಕ್ಕಳೆಲ್ಲ ನಗಲಾರಂಭಿಸಿದರು. ಶಿಕ್ಷಕಿಯೂ ನಗುತ್ತ, `ಈಗ ಚಿತ್ರ ಏನು ಹೇಳುತ್ತದೆ'  ಎಂದು ಕೇಳಿದರು.

ಮಕ್ಕಳು, `ಮೇಡಂ ಈಗ ಚಿತ್ರವೇ ಬದಲಾಗಿ ಹೋಯ್ತು. ಮುಖ ಸಂತೋಷದಿಂದ ನಗುವಂತೆ ಕಾಣುತ್ತದೆ' ಎಂದರು. ಆಗ ಶಿಕ್ಷಕಿ, `ಇದೇ ನೋಡಿ ಚಿತ್ರಕಲೆಯ ಶಕ್ತಿ. ಒಂದೆರಡು ಗೆರೆಗಳನ್ನು, ಬಣ್ಣದ ಸಾಂದ್ರತೆ ಬದಲು ಮಾಡಿದರೆ ಇಡೀ ಚಿತ್ರದ ರೂಪವೇ ಬೇರೆಯಾಗುತ್ತದೆ. ಈ ಕಲೆಯನ್ನು ನೀವು ಸಿದ್ಧಿಸಿಕೊಳ್ಳಬೇಕು' ಎಂದರು. ಮಕ್ಕಳು ಒಪ್ಪಿದರು. ತರಗತಿಯಲ್ಲೊಬ್ಬ ಹುಡುಗ ಇದನ್ನು ಗಮನಿಸುತ್ತಲೇ ಇದ್ದ. ಆತ ನಗಲೂ ಇಲ್ಲ. ಗಂಟು ಮುಖ ಹಾಕಿಕೊಂಡು ನಿಂತಿದ್ದ.

  `ಯಾಕಪ್ಪಾ, ನಿನಗೆ ಇದು ಇಷ್ಟವಾಗಲಿಲ್ಲವೇ' ಕೇಳಿದರು ಶಿಕ್ಷಕಿ. ಆತ ಅಷ್ಟೇ ನಿರುತ್ಸಾಹದಿಂದ `ಇದರಲ್ಲಿ  ಏನು ವಿಶೇಷ ಮೇಡಂ. ನಮ್ಮ ತಾಯಿ ಒಂದು ಚಿತ್ರವನ್ನಲ್ಲ, ಇಡೀ ಮನೆಯ ವಾತಾವರಣವನ್ನೇ ಕ್ಷಣದಲ್ಲಿ  ಬದಲಾಯಿಸಿ ಬಿಡುತ್ತಾರೆ'  ಎಂದ. ಅದಕ್ಕವರು, `ಹೌದೇ, ಅವರೂ ಚಿತ್ರ ಕಲಾವಿದೆಯೋ' ಎಂದು ಕೇಳಿದರು. `ಇಲ್ಲ, ಆಕೆ ಯಕ್ಷಿಣಿ ವಿದ್ಯೆ ಕಲಿತಿದ್ದಾರೆ. ಅದರ ಪ್ರಯೋಗಮಾಡುತ್ತಾರೆ' ಎಂದ ಹುಡುಗ. ಇಡೀ ಕ್ಲಾಸಿಗೆ ಕ್ಲಾಸೇ ನಗುತ್ತಿತ್ತು. `ಅವರೇನು ಮಾಡುತ್ತಾರೆ ತೋರಿಸಲೇ' ಕೇಳಿದ ಹುಡುಗ. ಅದೇನೋ ವಿಶೇಷ ಪ್ರಯೋಗವಿರಬೇಕೆಂದುಕೊಂಡು ಆಗಲಿ ಎಂದರು ಶಿಕ್ಷಕಿ.

ಆ ಹುಡುಗ ತಾನು ಕುಳಿತಲ್ಲಿಂದ ಎದ್ದ. ಎಲ್ಲರೂ ನೋಡುತ್ತಿರುವಂತೆ ಸರಸರನೇ ನಡೆದು ಮುಂದಿನ ಸಾಲಿನಲ್ಲಿ  ನಗುತ್ತ ಕುಳಿತಿದ್ದ ಹುಡುಗಿಯ ಕೆನ್ನೆಗೆ ಫಟೀರೆಂದು ಹೊಡೆದುಬಿಟ್ಟ. ಅನಿರೀಕ್ಷಿತವಾದ ಈ ಆಘಾತದಿಂದ ಕ್ಷಣಕಾಲ ಏನೂ ತೋಚದೆ ಕುಳಿತಿದ್ದ ಹುಡುಗಿ ಈಗ ಮುಖ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಶಿಕ್ಷಕಿ ಆತಂಕದಲ್ಲಿ  ಆ ಕಡೆಗೆ ನುಗ್ಗಿದರು.
ಮಕ್ಕಳೆಲ್ಲ ಗಾಬರಿಯಾದರು. ಕೆಲವು ಹುಡುಗಿಯರು ಪೆಟ್ಟು ತಿಂದ ಹುಡುಗಿಯ ಸುತ್ತ ನೆರೆದು ಸಾಂತ್ವನ ಹೇಳುತ್ತಿದ್ದರು.

ಶಿಕ್ಷಕಿ,  `ಯಾಕೋ ಆಕೆಯನ್ನು ಹೊಡೆದೆ'  ಎಂದು ಬಿರುಸಾಗಿ ಕೇಳಿದರು. ಹುಡುಗ ಮುಂದೆ ಬಂದು ಕೆನ್ನೆಗೆ ಹೊಡೆಸಿಕೊಂಡ ಹುಡುಗಿಯ ಮುಂದೆ ನಿಂತು ಕ್ಷಮೆ ಕೇಳಿದ. ನಂತರ ಶಿಕ್ಷಕಿಗೆ ಹೇಳಿದ, `ನೋಡಿದಿರಾ ಮೇಡಂ ಒಂದೇ ಕ್ಷಣದಲ್ಲಿ  ತರಗತಿಯ ವಾತಾವರಣ ಹೇಗೆ ಬದಲಾಗಿ ಹೋಯಿತು.

ಒಂದೇ ಪೆಟ್ಟು. ಅದೂ ತರಗತಿಯಲ್ಲಿ  ಒಬ್ಬರಿಗೆ ಮಾತ್ರ, ಆದರೂ ಇಡೀ ವಾತಾವರಣ ಗಂಭೀರವಾಯಿತು. ಇದುವರೆಗೆ ನಗುನಗುತ್ತಿದ್ದವರೆಲ್ಲ ಗಾಬರಿಯಿಂದ, ಆತಂಕದಿಂದ ಬದಲಾಗಿ ಹೋದರು. ನನ್ನ ತಾಯಿ ನಮ್ಮ ಮನೆಯಲ್ಲಿ  ಮಾಡುವುದು ಇದೇ. ಯಾರಾದರೂ ನಗುತ್ತಿದ್ದರೆ ಸಾಕು ಅಥವಾ ಸಂತೋಷದ ಯಾವುದೇ ಕ್ಷಣ ಬಂದರೂ ಸಾಕು ನನ್ನ ತಾಯಿ ಕೈಎತ್ತಿ ಎರಡು ಪೆಟ್ಟು ಕೊಟ್ಟೇ ಬಿಡುತ್ತಾಳೆ. ಹೀಗಾಗಿ ನಮ್ಮ ಮನೆಯಲ್ಲಿ  ಸಂತೋಷದ ವಾತಾವರಣ ಇರುವುದೇ ಇಲ್ಲ. ಅಕಸ್ಮಾತ್ ಅದು ಸುಳಿದರೆ ಕ್ಷಣದಲ್ಲೇ ಸತ್ತು ಹೋಗುತ್ತದೆ'  ಎಂದ.

ಜೀವನವೊಂದು ಘಟನೆಗಳ ಸರಮಾಲೆ. ಅವುಗಳಲ್ಲಿ  ಸಿಹಿ, ಕಹಿ ಘಟನೆಗಳು ಸಾಲುಸಾಲಾಗಿ ಬರುತ್ತವೆ. ಒಂದು ಘಟನೆ ಹರ್ಷದ ತರಂಗಗಳನ್ನೇಳಿಸಿದರೆ ಮತ್ತೊಂದು ಹರ್ಷವನ್ನು ಕ್ಷಣದಲ್ಲಿ  ತೊಡೆದುಹಾಕುತ್ತದೆ. ಕೆಲವರು ತಮ್ಮ ಸ್ವಭಾವದಿಂದ ಹೋದಲ್ಲೆಲ್ಲ ಸಂತೋಷ ತುಂಬುತ್ತಾರೆ.

ಕೆಲವರನ್ನು ಕಂಡೊಡನೆ ಉಕ್ಕುತ್ತಿದ್ದ ಸಂತೋಷ ಅಡಗಿ ಹೋಗುತ್ತದೆ. ಒಂದಷ್ಟು ಜನ ಬಂದೊಡನೆ ಇಡೀ ವಾತಾವರಣವೇ ಕಳೆಗಟ್ಟುತ್ತದೆ. ನಮ್ಮ ನಡತೆಯಿಂದ, ಮಾತಿನಿಂದ ವಾತಾವರಣ ಚೇತೋಹಾರಿಯನ್ನಾಗಿ ಮಾಡುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.