ADVERTISEMENT

ಸಂಪೂರ್ಣ ಶ್ರದ್ಧೆಯ ಫಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ಗಾಂಧೀಜಿಯವರಿಗೆ ಭಗವಂತನಲ್ಲಿ ಎಷ್ಟು ನಂಬಿಕೆಯಿತ್ತೋ ಅಷ್ಟೇ ನಂಬಿಕೆ ತಾವು ಮಾಡುತ್ತಿರುವ ಕೆಲಸದಲ್ಲಿತ್ತು. ಹರಿಜನೋದ್ಧಾರ ಅವರಿಗೆ ಬರೀ ಕೆಲಸವಾಗಿರಲಿಲ್ಲ, ದೇವರಲ್ಲಿಟ್ಟ ಶ್ರದ್ಧೆಯ ಸಂಕೇತವಾಗಿತ್ತು. ಅದು ಅವರಿಗೆ ನಡುವೆ ಯಾವುದೇ ಒಂದು ಆದರ್ಶದಂತೆ ಹೊಳೆದದ್ದಲ್ಲ, ಬಾಲ್ಯದಿಂದಲೇ ಬಂದದ್ದು. ಒಂದು ಬಾರಿ ತಾಯಿ ಮಗ ಮೋಹನದಾಸನಿಗೆ ಮನೆಗೆಲಸ ಮಾಡಲು ಬರುತ್ತಿದ್ದ ಹುಡುಗನನ್ನು ಮುಟ್ಟಿಸಿಕೊಳ್ಳಬೇಡ ಎಂದು ಹೇಳಿದಾಗ ಈ ಬಾಲಕ ಕೇಳಿದ್ದ, ‘ಅಮ್ಮಾ, ನೀನು ರಾಮಾಯಣದ ಕಥೆಯನ್ನು ಹೇಳುವಾಗ ನದಿಯನ್ನು ನಾವೆಯಿಂದ ದಾಟಿಸಿದ ಅಂಬಿಗರ ಗುಹನನ್ನು ಶ್ರೀರಾಮ ಬಿಗಿದಪ್ಪಿಕೊಂಡ ಎಂದು ಹೇಳಿದ್ದೆಯಲ್ಲ. ಈ ಹುಡುಗನೂ ಅದೇ ಕುಲದವನು. ಶ್ರೀರಾಮ ಗುಹನನ್ನು ಅಪ್ಪಬಹುದಾದರೆ ನಾನೇಕೆ ಇವನನ್ನು ಮುಟ್ಟಬಾರದು?’ ಇದಕ್ಕೆ ಉತ್ತರ ಆ ತಾಯಿಯ ಬಳಿ ಇರಲಿಲ್ಲ.

  ಮುಂದೆ ಹರಿಜನೋದ್ಧಾರವನ್ನು ತಮ್ಮ ಜೀವನದ ಗುರಿ ಎಂಬಂತೆ ಪಾಲಿಸಿದರು ಗಾಂಧೀಜಿ. 1915ರಲ್ಲಿ ಅವರು ಕೋಚ್ರಬ್ ಆಶ್ರಮದಲ್ಲಿದ್ದಾಗ ಇದರ ಬಗ್ಗೆ ಚಿಂತನೆ ಬಹಳವಾಗಿ ನಡೆಯುತ್ತಿತ್ತು. ಆಗ ಗಾಂಧೀಜಿ ಆಪ್ತರಲ್ಲಿ ಒಬ್ಬರಾಗಿದ್ದ ಥಾಕರ್ ಬಾಪಾ ಬಾಪೂ, ‘ನನಗೆ ಪರಿಚಯವಿರುವ ಒಂದು ಹರಿಜನ ಸಂಸಾರ ಇಲ್ಲಿಗೆ ಬಂದು ಆಶ್ರಮದಲ್ಲಿರಬೇಕೆಂದು ಅಪೇಕ್ಷಿಸುತ್ತಿದೆ. ಅದು ಆಗಬಹುದೇ?’ ಎಂದು ಕೇಳಿದರು. ಆಗ ಗಾಂಧೀಜಿ, ‘ಆಗಬಹುದು.ನಾವು ಕೇವಲ ಬಾಯಿಯಲ್ಲಿ ಆಸ್ಪಶ್ಯತೆ ನಿವಾರಣೆ ಎಂದು ಮಾತನಾಡಿದರೆ ಸಾಲದು, ನಡೆದು ತೋರಬೇಕು. ಆ ದಂಪತಿ ಆಶ್ರಮದ ನಿಯಮಗಳಿಗೆ ಬದ್ಧರಾಗಿ ಇರುವುದಾದರೆ ಬರಲಿ’ ಎಂದರು.

ಅದರಂತೆ ಮುಂದಿನ ವಾರ ಮುಂಬೈನಲ್ಲಿ ಶಿಕ್ಷಕರಾಗಿದ್ದ ದಾದಾಭಾಯಿ, ತಮ್ಮ ಹೆಂಡತಿ ರಾಣಿ ಬೆಹೆನ್ ಹಾಗೂ ಆರು ತಿಂಗಳು ಮಗು ಲಕ್ಷ್ಮಿಯೊಂದಿಗೆ ಆಶ್ರಮಕ್ಕೆ ಬಂದಿಳಿದರು. ಅಲ್ಲಿಂದ ಮುಂದೆ ಆಶ್ರಮದಲ್ಲಿ ವಿರೋಧದ ಅಲೆಗಳು ಏಳತೊಡಗಿದವು. ಗಾಂಧೀಜಿಯವರ ಈ ನಿರ್ಧಾರದಿಂದ ಅನೇಕ ಕಟ್ಟಾ ಜಾತಿವಾದಿಗಳಾಗಿದ್ದ ಆಶ್ರಮವಾಸಿಗಳಿಗೆ ದುಃಖವಾಯಿತು. ದಾದಾಭಾಯಿ ಬಾವಿಯಿಂದ ನೀರು ಸೇದಿಕೊಂಡದ್ದು ಅಪರಾಧವಾಯಿತೆಂದು ಬಾವಿಯ ಮಾಲೀಕ ಗದ್ದಲ ಎಬ್ಬಿಸಿದ, ಉಳಿದ ಆಶ್ರಮವಾಸಿಗಳನ್ನು ಈ ಕುಟುಂಬದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ. ಆದರೆ ಗಾಂಧೀಜಿ ಈ ತೀರ್ಮಾನವನ್ನು ಸರ್ವರೂ ಒಪ್ಪಲಿ ಎಂದು ಪ್ರತಿಯೊಬ್ಬರ ಮನ ಒಲಿಸಲು ಪ್ರಯತ್ನಿಸಿದರು. ದಾದಾಭಾಯಿಗೆ ಕೂಡ ಬೇಜಾರುಮಾಡಿಕೊಳ್ಳದಿರಲು ವಿನಂತಿಸಿದರು.

ಈಗ ಇನ್ನೊಂದು ತೊಂದರೆ ಪ್ರಾರಂಭವಾಯಿತು. ಇದುವರೆಗೂ ಆಶ್ರಮದ ಖರ್ಚುಗಳಿಗೆ ಹಣ ಒದಗಿಸುತ್ತಿದ್ದ ದಾನಿಗಳು ನಿಧಾನವಾಗಿ ದಾನವನ್ನು ನಿಲ್ಲಿಸತೊಡಗಿದರು. ಕೆಲದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಮುಂದಿನ ತಿಂಗಳು ಯಾವ ಸಣ್ಣ ಕೆಲಸಕ್ಕೂ ಹಣ ಇರಲಿಲ್ಲ. ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮಗನಲಾಲ್ ಬಂದು ಗಾಂಧೀಜಿಗೆ ಈ ವಿಷಯ ತಿಳಿಸಿದ. ಆಗ ಗಾಂಧೀಜಿ ತಮ್ಮ ತೀರ್ಮಾನವನ್ನು ಸಡಲಿಸಲಿಲ್ಲ, ಬದಲಾಗಿ, ‘ಮಗನಲಾಲ್, ಹಣವೇ ಇಲ್ಲದೇ ಹೋದರೆ ಯಾವ ತೊಂದರೆ ಇಲ್ಲ. ನಾನು, ಕಸ್ತೂರಬಾ ಹಾಗೂ ದಾದಾಭಾಯಿ ಸಂಸಾರ ಎಲ್ಲರೂ ಹೋಗಿ ಹರಿಜನರ ಕಾಲನಿಯಲ್ಲೇ ಇದ್ದುಬಿಡುತ್ತೇವೆ. ಆದರೆ ಆದರ್ಶ ಬಿಡಲಾರೆ. ಆದರ್ಶವನ್ನು ಪಾಲಿಸುವವರನ್ನು ಕಾಪಾಡುವುದು ಭಗವಂತನ ಜವಾಬ್ದಾರಿ’ ಎಂದರು.

ಒಂದೆರಡು ದಿನಗಳ ನಂತರ ಬೆಳಿಗ್ಗೆ ಆಶ್ರಮದ ಮುಂದೆ ಒಂದು ಸಾರೋಟು ಬಂದು ನಿಂತಿತು. ಅದರಿಂದ ಒಬ್ಬ ಸೇಠಜೀ ಕೆಳಗಿಳಿದು ಬಂದು ಗಾಂಧೀಜಿಯವರ ಕೈಯಲ್ಲಿ ಒಂದು ಲಕೋಟೆಯನ್ನಿಟ್ಟು, ನಮಸ್ಕರಿಸಿ ತೆರಳಿದರು. ಅವರು ಯಾರು ಎಂಬುದು ಗಾಂಧೀಜಿಗೆ ಗೊತ್ತಿರಲಿಲ್ಲ. ಲಕೋಟೆ ಒಡೆದು ನೋಡಿದರೆ ಅದರಲ್ಲಿ ಹದಿಮೂರು ಸಾವಿರ ರೂಪಾಯಿಗಳಿಗೆ ಒಂದು ಚೆಕ್ಕು ಇದೆ! ಆಗ ಅದೊಂದು ಬಹುದೊಡ್ಡ ಮೊತ್ತ. ಗಾಂಧೀಜಿ ಆಶ್ಚರ್ಯಚಕಿತರಾದರು. ತಕ್ಷಣ ಮಗನಲಾಲನಿಗೆ ಹೇಳಿದರು, ‘ನೋಡಿದೆಯಾ, ನೀನು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಇದ್ದರೆ ಭಗವಂತ ಹೇಗೆ ಕೃಪೆ ಮಾಡುತ್ತಾನೆ?’

ಭಗವಂತ ಸಹಾಯ ಮಾಡುವುದಿಲ್ಲ, ಕೃಪೆಗೈಯುವುದಿಲ್ಲ ಎಂದು ಗೊಣಗುತ್ತೇವೆ. ಆದರೆ ಆತ ಹಾಗೆ ಮಾಡುವಂತೆ ಒತ್ತಾಯಿಸುವ ಶ್ರದ್ಧೆ ನಮ್ಮಲ್ಲಿಲ್ಲ. ಆ ಶ್ರದ್ಧೆ ಬಲವಾಗಿದ್ದರೆ ಒತ್ತಾಯಬೇಕಿಲ್ಲ, ಕೃಪೆ ತಾನಾಗಿ ಹರಿದು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.