ADVERTISEMENT

ಸದಾಶಯದ ಛಲ

ಡಾ. ಗುರುರಾಜ ಕರಜಗಿ
Published 12 ಫೆಬ್ರುವರಿ 2015, 19:30 IST
Last Updated 12 ಫೆಬ್ರುವರಿ 2015, 19:30 IST

‘ಛಲ ಬೇಕು ಶರಣಂಗೆ’ ಎಂದರು ವಚನಕಾರರು. ಒಂದು ಒಳ್ಳೆಯ ಕಾರ್ಯ­­ಕ್ಕಾಗಿ ಛಲ ತೊಟ್ಟ ವ್ಯಕ್ತಿ ಏನೆಲ್ಲ ಮಾಡಬಹುದು, ಎಷ್ಟು ಜನರ ಜೀವನ­ಗಳಿಗೆ ನೆಮ್ಮದಿ ತರಬಹುದು ಎಂಬು­ದನ್ನು ನಾನು ಮೊನ್ನೆ ಕಂಡೆ.  ತುಮಕೂರು, ಗ್ರಾಮಾಂತರ ಪ್ರದೇಶ­ದಲ್ಲಿರುವ ನಾಗವಲ್ಲಿ ಎಂಬ ಗ್ರಾಮದ ಸರ್ಕಾರಿ ಶಾಲೆಗೆ ಹೋಗಿದ್ದೆ.  ಸಾಮಾನ್ಯವಾಗಿ ಸರ್ಕಾರಿ ಶಾಲೆ ಎಂದ ತಕ್ಷಣ ಕಣ್ಣ ಮುಂದೆ “ಇಲ್ಲ”ಗಳ ಪಟ್ಟಿ ರಾಚುತ್ತದೆ ಎಂಬ ಭಾವನೆ ಇದೆ.

ಕೊಠಡಿಗಳಿಲ್ಲ, ಪ್ರಾಧ್ಯಾ­ಪಕರ ಕೋಣೆ ಇಲ್ಲ, ಪ್ರಯೋಗಶಾಲೆ, ಗ್ರಂಥಾಲಯ, ಶೌಚಾಲಯ, ಆಟದ ಮೈದಾನ ಇವು ಯಾವವೂ ಇಲ್ಲ, ಎಲ್ಲಿ ನೋಡಿದಲ್ಲಿ ಮುರುಕಲು ಕಟ್ಟಡಗಳು, ಬಣ್ಣಕಾಣದ ಗೋಡೆಗಳು, ಅನಾಸಕ್ತ ಶಿಕ್ಷಕರು ಇರುತ್ತಾರೆಂದು ಸಾಕಷ್ಟು ಜನ ತಿಳಿಯು­ತ್ತಾರೆ. ಆದರೆ, ನಾಗವಲ್ಲಿ ಶಾಲೆಗೆ ಹೋದಾಗ ನನಗೆ ಭಾರಿ ಆಶ್ಚರ್ಯ ಕಾದಿತ್ತು. ನವವಧುವಿನಂತೆ ಅಲಂಕೃತ­ವಾದ ಕಟ್ಟಡ ಬಣ್ಣ ಬಳಿದು­ಕೊಂಡು ನಿಂತಿದೆ!

ಅತ್ಯಂತ ಸುಸಜ್ಜಿತವಾದ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹೊಂದಿದ ಕಂಪ್ಯೂಟರ್ ಪ್ರಯೋಗಾಲಯ, ಅನೇಕ ಉಪಕರಣಗಳನ್ನು ತುಂಬಿ­ಕೊಂಡ ವಿಶಾಲವಾದ, ನವೀನ ವಿಜ್ಞಾನ ಪ್ರಯೋಗಾಲಯ, ಬಹಳ ಸುಂದರ­ವಾದ ಗ್ರಂಥಾಲಯವಿದೆ. ಆ ಗ್ರಂಥಾಲಯದ  ಒಂದು ಭಾಗ ಡಿಜಿಟಲ್ ಲೈಬ್ರರಿ, ಮತ್ತೊಂದು ಭಾಗ ಶಿಕ್ಷಕರ ಅಧ್ಯಯನಕ್ಕೆ ಕೊಠಡಿ, ಇನ್ನೊಂದು ವಿಶಾಲವಾದ ಮಕ್ಕಳ ಅಧ್ಯಯನಕ್ಕೆ ಸ್ಥಳ. ಲಕ್ಷಾಂತರ ಬೆಲೆ­ಬಾಳುವ ಪುಸ್ತಕಗಳು ತೆರೆದ ಕಪಾಟು­ಗಳಲ್ಲಿ ಮಕ್ಕಳ ಮನಸ್ಸನ್ನು ಸೆಳೆಯುತ್ತವೆ. ಉತ್ಸಾಹಿ ಶಿಕ್ಷಕರು ಶಾಲೆಯನ್ನು ಅಭಿ­ಮಾನದಿಂದ ಎಲ್ಲರಿಗೂ ತೋರಿಸು­ತ್ತಿದ್ದರು. ಈ ಪವಾಡ ನಡೆದದ್ದು ಹೇಗೆ ಎಂದು ಕೇಳಿದರೆ ಎಲ್ಲರೂ ಒಬ್ಬ ವ್ಯಕ್ತಿಯ ಕಡೆಗೆ ಬೆರಳು ಮಾಡಿದರು.  ಅವರು ಆ ಕ್ಷೇತ್ರದ ಶಾಸಕ    ಸುರೇಶ್ ಗೌಡರು.

ಅವರ ಕ್ಷೇತ್ರದ ಹೆತ್ತನಹಳ್ಳಿಯಲ್ಲಿರುವ ಇನ್ನೊಂದು ಶಾಲೆಯೂ ಈ ಮಟ್ಟದ್ದೇ. ಈ ಶಾಸಕರು ಕ್ಷೇತ್ರದಲ್ಲಿ ಮಾಡಿರುವ ಕೆಲ­ಸದ ಬಗ್ಗೆ ಅಲ್ಲಿರುವವರು ವರ್ಣಿ­ಸಿದಾಗ ನನಗೆ ಅಭಿಮಾನ ಉಕ್ಕಿತು. ಛಲ­ದಿಂದ ಸಾಧಿಸಲೇಬೇಕು ಎಂದು ಹೊರಟ ಸುರೇಶ ಗೌಡರು ಅಲ್ಲಿಯ ಮೂಲ­ಸೌಕರ್ಯ­ಗಳ ಸಮಸ್ಯೆಗಳನ್ನು ಅರಿತರು. ಪ್ರದೇಶದಲ್ಲಿ ಐದು ಕೆರೆಗಳಿದ್ದರೂ ಅವು­ಗಳಲ್ಲಿ ನೀರಿಲ್ಲ. ಒಂದು ವರ್ಷ ಮಳೆ ಬರದಿದ್ದರೆ ಜನ ಗುಳೇ ಹೋಗುವ ಪರಿಸ್ಥಿತಿ, ಕುಡಿ­ಯಲು ನೀರಿನ ತತ್ವಾರ, ಹಳ್ಳಿಗಳಿಗೆ ತಲುಪಲು ಒಳ್ಳೆಯ ರಸ್ತೆ ಇಲ್ಲ, ಒಳ್ಳೆಯ ಶಿಕ್ಷಣ ಕನಸಿನ ಮಾತು, ಆಸ್ಪತ್ರೆಗಳು ಕಸದ ಗೂಡುಗಳು. ಸುರೇಶಗೌಡರು ಮಂತ್ರಿ­ಗಳ ಹಿಂದೆ ಬಿದ್ದರು. ಕಾಡಿ ಬೇಡಿ ಹಣ ಮಂಜೂರು ಮಾಡಿಸಿದರು. ಗೌಡರು ಅಧಿ­ಕಾರಿ­ಗಳನ್ನು ಬೇಡಿ, ಕಾಡಿ, ಹೆದರಿಸಿ ಹಣ ತಂದರು. ಅದನ್ನು  ಹಿಂಬಾಲಕರಿಗೆ ಹಂಚಿ ಹಾಳು ಮಾಡಲಿಲ್ಲ. ಸ್ವತಃ ತಾವೇ ನಿಂತು ರಸ್ತೆ ಮಾಡಿಸಿದರು. ಜಲ್ಲಿ ಹಾಕುವಾಗ, ಡಾಂಬರು ಸುರಿಯುವಾಗ ಬಿಸಿಲಲ್ಲಿ ನಿಂತು ಗುಣಮಟ್ಟ ಕಡಿಮೆಯಾಗದಂತೆ ಕಾಯ್ದರು. ಇನ್ನೂ ಹತ್ತು ವರ್ಷ ಕೆಡದ ಹಾಗೆ ರಸ್ತೆ ಮಾಡಿಸಿದ್ದಾರೆ. ಹಳ್ಳಿಯ ಪುಟ್ಟ ಬೀದಿಗಳಿಗೆ ಕಾಂಕ್ರೀಟ್ ಬಂದಿದೆ, ಮೋರಿಗಳು ಬಂದಿವೆ.

ದೂರದ ಹೇಮಾವತಿ ನದಿಗೆ ಸಾವಿರಕ್ಕೂ ಹೆಚ್ಚು ಅಶ್ವ ಶಕ್ತಿಯ ಪಂಪುಗಳನ್ನು ಹಗಲು­ರಾತ್ರಿ ಹಚ್ಚಿಸಿ, ಕೆರೆಗಳನ್ನು ತುಂಬಿಸಿ ಏತ ನೀರಾವರಿಯನ್ನು ಸಫಲ ಮಾಡಿ­ದ್ದಾರೆ. ದೊಡ್ಡ ದೊಡ್ಡ ನೀರು ಶುದ್ಧೀ­ಕರಣದ ಘಟಕಗಳನ್ನು ಸ್ಥಾಪಿಸಿ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. 

ಟ್ರಾನ್ಸ್‌ಫಾರ್ಮರ್‌ಗಳನ್ನು ಕೂಡ್ರಿಸಿ ಮೂರು ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ನಿರಂತರ ವಿದ್ಯುತ್ ದೊರಕುವಂತೆ ನೋಡಿಕೊಂಡಿದ್ದಾರೆ. ಸಾವಿರ ವರ್ಷ­ಗಳಷ್ಟು ಹಳೆಯದಾದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸಿ­ದ್ದಾರೆ. ಐತಿಹಾಸಿಕ ಕಟ್ಟಡದಲ್ಲಿ ಕೊಳಕಿನ ಆಗರ­ವಾಗಿದ್ದ, ಹಾವು, ನಾಯಿ­ಗಳಿಗೆ ವಾಸಸ್ಥಾನವಾಗಿದ್ದ ಆಸ್ಪತ್ರೆಗೆ ತಾವೇ ನುಗ್ಗಿ, ಕಸ ತೆಗೆದು ಶುದ್ಧ­ಗೊಳಿಸಿ, ಬಣ್ಣ ಬಳಿಸಿ ಜನ ಹೆಮ್ಮೆಪಡಬಹುದಾದ ಆಸ್ಪತ್ರೆಯ­ನ್ನಾಗಿಸಿದ್ದಾರೆ. ನಿರಾಶ್ರಿತರಿಗೆ ಸಾವಿರಾರು ಮನೆಗಳು ಸಿದ್ಧವಾಗಿವೆ. ಹಳ್ಳಿಯ ಮನೆಗಳಿಗೆ ಆಧುನಿಕ ಶೌಚಾಲಯಗಳು ದೊರಕಿವೆ.

ಒಟ್ಟು ಐದು ವರ್ಷದಲ್ಲಿ ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಕ್ಷೇತ್ರ ಅಭಿವೃದ್ಧಿಗೆ ತಂದು ಹಾಕಿದ್ದಾರೆ.  ಇದೆಲ್ಲ ಸುರೇಶಗೌಡರಿಗೆ ಸಾಧಿಸಿದ್ದು ಹೇಗೆ? ಅವರೇ ಹೇಳುವಂತೆ ಅದೊಂದು ಹಟ, ಛಲ. ತನ್ನನ್ನು ನಂಬಿದ ಜನಕ್ಕೆ ಏನಾದರೂ ಮಾಡಲೇಬೇಕೆಂಬ ಛಲ.  ನಾಳಿನ ಚಿಂತೆ ಇಲ್ಲ, ಜನ ಮೆಚ್ಚಬೇಕು, ಮೆಚ್ಚಿಯಾರು ಎಂಬ ಆಸೆಯೂ ಇಲ್ಲ.  ಇಂದು ಬದುಕಿ­ದ್ದೇನೆ, ನಾಳೆಯ ಗ್ಯಾರಂಟಿ ಇಲ್ಲ. ಇದ್ದಾ­ಗಲೇ ಏನಾದರೂ ಹೆಜ್ಜೆಗುರುತು­ಗಳನ್ನು ಮೂಡಿ­ಸುವ ಛಲ ಇದು.  ಇಂಥ ಛಲ ಏನೆಲ್ಲ ಸಾಧನೆ ಮಾಡಿಸುವುದಲ್ಲವೇ? ಒಂದು ಪ್ರಶ್ನೆ ನನ್ನನ್ನು ಕಾಡುತ್ತದೆ. ಎಲ್ಲ ನಾಯ­ಕ­ರಿಗೂ ಏಕೆ ಇಂಥ ಛಲ ಇರುವು­ದಿಲ್ಲ? ಅಥವಾ ಇಂಥ ಛಲ ಉಳ್ಳವರೇ ಯಾಕೆ ಯಾವಾಗಲೂ ನಾಯಕರಾಗುವುದಿಲ್ಲ? ಹಾಗಾದಾಗ ನಮ್ಮ ದೇಶ ಸಮೃದ್ಧಿಯ ಬೀಡಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.