ADVERTISEMENT

ಅವರ ಬಗೆಗಿನ ಗಾಸಿಪ್ಪೇ ಸುಖಕ್ಕೆ ಮೂಲವಯ್ಯಾ!

ಪ್ರೀತಿ ನಾಗರಾಜ
Published 11 ಮೇ 2016, 19:44 IST
Last Updated 11 ಮೇ 2016, 19:44 IST

ಅವಕಾಶಕ್ಕೂ ವಯಸ್ಸಿಗೂ ಹಲವಾರು ಸಂಬಂಧಗಳಿವೆ, ಚಿಕ್ಕ ವಯಸ್ಸಿದ್ದಾಗ ಅವಕಾಶಗಳು ಜಾಸ್ತಿ ಆದರೆ ಬೆಳವಣಿಗೆ ಕಡಿಮೆ. ಏನು ಮಾಡುತ್ತಿದ್ದೇವೆ, ಎಲ್ಲಿಗೆ ಹೊರಟಿದ್ದೇವೆ, ಈ ದಿಕ್ಕೇ ಯಾಕೆ? ಈ ಪ್ರಯಾಣದ ಉದ್ದೇಶ ಏನು ಎನ್ನುವ ಆಲೋಚನೆಗಳು ಬರುವುದು ಕಡಿಮೆಯೇ. ಏಕೆಂದರೆ ದಿಕ್ಕು ಹೊತ್ತ ಪ್ರಯಾಣ ಎಂದೂ ಸಾಹಸದ ಮಜಾ ಕೊಡುವುದಿಲ್ಲ.

ಆ ಒಂದು ಉನ್ಮಾದದ ಸಾಹಸೀ ಭಾವನೆ ಹುಟ್ಟುವುದೇ ದಿಕ್ಕಿಲ್ಲದ ದಾರಿಯಲ್ಲಿ ನಡೆಯುವಾಗ!
ಸೂಸನ್, ಚಿತ್ರಾ, ವಿಜಿ ಇವರಿಗೆಲ್ಲ ವಯಸ್ಸು ತರುವ ಒಂದು ರೀತಿಯ ಸಂತೋಷದ ಅರಿವಿದ್ದರೂ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಪ್ರಶ್ನೆಗಳಿದ್ದವು. ಮುಂದೇನು? ಜೀವನ ಹೇಗೆ? ಎನ್ನುವ ಭೂತ ದಿಂಬಿಗೆ ತಲೆ ಇಟ್ಟ ಕೂಡಲೇ ಧಿಗ್ ಎಂದು ಎದ್ದು ಕುಣಿಯುತ್ತಿತ್ತು.

ಆದರೆ ಸರಳಾ ಮಾತ್ರ ಅಂತಹ ಆತಂಕಗಳಿಂದ ಮುಕ್ತರಾಗಿದ್ದರು. ‘ಮದುವೆ ಆಗಿದೆಯಾ ನಿಮಗೆ’ ಅಂದರೆ ನಕ್ಕು ಸುಮ್ಮನಾಗಿಬಿಡುತ್ತಿದ್ದರು. ಉತ್ತರವೇ ಬರುತ್ತಿರಲಿಲ್ಲ. ಆದರೆ ಅವರ ಜೀವನಾನುಭವ ಮಾತ್ರ ಅನನ್ಯ!

‘ಅದೆಲ್ಲಾ ಯಾಕೆ ಬೇಕು? ನಾನು ಇಲ್ಲಿ ನಿಮ್ಮ ಜೊತೆ ಮಾತಾಡ್ತಾ ಇದ್ದೀನಿ. ಅಷ್ಟೇ ಸತ್ಯ. ಉಳಿದದ್ದೆಲ್ಲಾ ಬರೀ ಕಥೆ. ನಾನು ಹೇಳಿದಷ್ಟು, ನೀವು ಕೇಳಿದಷ್ಟು’ ಎನ್ನುತ್ತಿದ್ದರು. ಹೌದಲ್ಲಾ ಎಂದುಕೊಂಡು ಹುಡುಗಿಯರೂ ವಿಸ್ತೃತ ವಿಚಾರಣೆ ಮಾಡಲು ಹೋಗಿರಲಿಲ್ಲ. ಯಾಕೆಂದರೆ ಗಾಸಿಪ್ಪಿಗೆ ಯಾರ ಹತ್ತಿರವೂ ಸಮಯ ಇರಲಿಲ್ಲ.

ಸರಳಾ ಮಂಗಳೂರಿನ ಕಡೆಯವರು ಅಂತ ಗೊತ್ತಿತ್ತಷ್ಟೇ. ಅಷ್ಟನ್ನ ಬಿಟ್ಟರೆ ಬೇರೆ ಅರ್ಥವಾಗುವಂತಹ ಯಾವ ಲಕ್ಷಣಗಳೂ ಅವರ ವ್ಯಕ್ತಿತ್ವದಿಂದ ಕಾಣುತ್ತಿರಲಿಲ್ಲ. ಕಂಡರೂ ಹುಡುಗಿಯರಿಗೆ ಅರ್ಥವಾಗುವಂತಿರಲಿಲ್ಲ.

‘ಅದೆಲ್ಲೋ ಹೋಗ್ತಾರೆ ಕಣೇ. ನೋಡಿದೀನಿ. ಅಟ್‌ಲೀಸ್ಟ್ ವಾರಕ್ಕೆ ಒಂದು ಸಾರಿ ಆ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿರೋ ಪಾರ್ಲರಿಗೆ ಹೋಗಿ ಬರೋದನ್ನ ನಾನೇ ಕಂಡಿದೀನಿ’ ಅಂದಳು ವಿಜಿ. ಸರಳಾ ಇನ್ನೂ ಪೀಜಿಗೆ ವಾಪಸ್‌ ಬಂದಿರಲಿಲ್ಲ. ಸೂಸನ್ ಯಥಾ ಪ್ರಕಾರ ಚರ್ಚಿನಲ್ಲಿ ಹೊಸ ಆಯಾಮಗಳ ಹುಡುಕಾಟದಲ್ಲಿ ಇದ್ದಳು.

ಚಿತ್ರಾ ಮತ್ತು ವಿಜಿ ಪೀಜಿಯಲ್ಲಿ ಟೀ ಕುಡಿಯುತ್ತಾ ಹೊರಗೆ ಕುಳಿತಿದ್ದರು. ಆವತ್ತೇನೋ ಹೊಸ ಹುಡುಗಿ ಬಂದು ಸೇರುವವಳಿದ್ದಳು ಅಂತ ಪೀಜಿ ಓನರ್ರು ಮನೆಯೊಳಗೆ ಹೊರಗೆ ಧಮಧಮ ಓಡಾಡುತ್ತಾ ಎಲ್ಲರನ್ನೂ ಬಯ್ಯುತ್ತಾ ಸುಮ್ಮನೆ ಒಬ್ಬಳೇ ಗೊಣಗಿಕೊಳ್ಳುತ್ತಾ ನಡೆದಾಡುವ ಭೂತದಂತೆ ಕಾಣಿಸುತ್ತಿದ್ದಳು.

‘ಹೋಗ್ತಿದ್ರೆ ಹೋಗ್ಲಿ ಬಿಡು. ನಮಗ್ಯಾಕೆ ಅದೆಲ್ಲಾ?’ ಅಂದಳು ವಿಜಿ. ಆದರೆ ಚಿತ್ರಾಗೆ ಸರಳಾ ಬಗ್ಗೆ ಅತೀ ಕುತೂಹಲ. ‘ಲೈ... ಅವರು ಬೇರೆ ಯಾರ ಹತ್ತಿರವೂ ಮಾತಾಡಲ್ಲ. ಅದ್ಯಾವ್ದೋ ಆಫೀಸಿಗೆ ಕೆಲಸಕ್ಕೆ ಹೋಗ್ತಾರೆ. ಮನೆಯವರು ಅಂತ ಯಾರೂ ಬಂದು ಅವರನ್ನು ಭೇಟಿ ಆಗಲ್ಲ. ಒಂಥರಾ ಒಂಟಿ ಜೀವನ ಅವರದ್ದು ಅನ್ಸುತ್ತೆ. ಕಷ್ಟ ಇಂಥವರನ್ನ ಅರ್ಥ ಮಾಡಿಕೊಳ್ಳೋದು’ ಎಂದಳು ಚಿತ್ರಾ.

ಚಿಕ್ಕ ವಯಸ್ಸಿನ ಹುಡುಗಿಯರಿಗೆ ಒಂದು ಇಬ್ಬಂದಿ ಇರುತ್ತೆ. ಡಬಲ್ ಸ್ಟಾಂಡರ್ಡ್ಸ್ ಅಂತ ಬೇಕಾದ್ರೂ ಹೇಳಬಹುದು. ಅದೇನೆಂದರೆ ತಮ್ಮ ಬಗ್ಗೆ ಯಾರೂ ಕುತೂಹಲ ತೋರಿಸುವಂತಿಲ್ಲ. ‘ಐ ಡೋಂಟ್ ಕೇರ್’ ವ್ಯಕ್ತಿತ್ವಗಳದೆಲ್ಲಾ ಇದೇ ಹಣೇಬರಹವೇ. ಆದರೆ, ತಾವು ಮಾತ್ರ ಇನ್ನೆಲ್ಲೋ ಬದುಕುತ್ತಿರುವ ಸಂಬಂಧವೇ ಇಲ್ಲದ ಸಿನಿಮಾ ತಾರೆಯಿಂದ ಹಿಡಿದು ಪಕ್ಕದ ಮನೆ ಅಂಕಲ್, ಆಂಟಿ, ಪಿಂಟಿ, ತುಂಟಿ – ಎಲ್ಲರ ಬಗ್ಗೆಯೂ ಅಸಹನೆ ತೋರಿಸುತ್ತಲೇ ವಿಷಯ ಕಲೆ ಹಾಕುವುದು.

ಮಧ್ಯ ವಯಸ್ಸಿಗೆ ಅಂಥಾ ಯಾವ ಮುಲಾಜೂ ಇರುವುದಿಲ್ಲ. ಆ ವಯಸ್ಸಿಗೆ ಬರುವ ಹೊತ್ತಿಗೆ ಗಾಸಿಪ್ಪಿಲ್ಲದೆ ಜೀವನ ಸಪ್ಪೆ ಎನ್ನುವ ಸತ್ಯ ಮನದಟ್ಟಾಗಿ ಹೋಗಿರುತ್ತದೆ. ಹಾಗಾಗಿ ನೀರಿನಲ್ಲಿ ಮೀನು ಬದುಕುವಷ್ಟೇ ಸಹಜವಾಗಿ ಗಾಳಿಸುದ್ದಿಗೂ ಆಯಾಮಗಳನ್ನು ಹೆಕ್ಕಿ ತೆಗೆದು ಹೊಸ ಹಕ್ಕಿಯನ್ನಾಗಿ ಮಾಡಿ ರೆಕ್ಕೆ ಕಟ್ಟಿ ಹಾರಿ ಬಿಡಬಲ್ಲರು.

ಸರಳಾ ಎಲ್ಲದಕ್ಕೂ ವಿರುದ್ಧವಾಗಿದ್ದರು ಎನ್ನುವಂತಿಲ್ಲ. ಆದರೆ ಈ ಹುಡುಗಿಯರ ಹತ್ತಿರ ಮಾತುಗಳನ್ನು ಆಡುವಾಗ ಜೀವನದ ಕೆಲವು ಸತ್ಯಗಳ ಬಗ್ಗೆ ಮಾತ್ರ ಮಾತಾಡುತ್ತಿದ್ದರು. ಯಾವುದನ್ನು ಹೇಳಿದರೆ ಇವರಿಗೆ ಉಪಯೋಗವಾಗುತ್ತದೋ ಅಂಥದನ್ನು ಮಾತ್ರ ಮಾತಾಡುತ್ತಿದ್ದರು. ಹಾಗಾಗಿ ಹುಡುಗಿಯರಿಗೆ ಇವರ ವ್ಯಕ್ತಿತ್ವದ ಬಗ್ಗೆ ಒಂಥರಾ ಗಾಢವಾದ ಗೂಢವಾದ ತಣಿಯಲಾರದ ಕುತೂಹಲ.

ಆದರೆ ‘ಸರಳಕ್ಕಾ, ನಿಮ್ ಲೈಫ್ ಸ್ಟೋರಿ ಏನು? ಯಾಕೆ ಇಲ್ಲಿ ಒಬ್ರೇ ಇದೀರಿ?’ ಅಂತ ಕೇಳುವಂತಿಲ್ಲ. ಯಾಕೆಂದರೆ ವಯಸ್ಸಿನಲ್ಲಿ ಹಿರಿಯರಷ್ಟೇ ಅಲ್ಲ, ನಡವಳಿಕೆಯಲ್ಲೂ ಸರಳ ಹೆಸರಿಗೆ ತಕ್ಕಂತೆಯೇ ಇದ್ದರು.

ಸರಳಾ ಬಗ್ಗೆ ಸ್ವಲ್ಪ ಭಿನ್ನವೆನಿಸುವಂಥಾ ಸುದ್ದಿಯನ್ನು ತಂದದ್ದು ಸೂಸನ್ ಒಂದು ದಿನ ಸಂಜೆ ಚರ್ಚಿನಿಂದ ವಾಪಸ್‌ ಬಂದ ನಂತರ,
‘ಯಾರ ಜೊತೆಗೋ ಬಂದಿದ್ರಪ್ಪಾ ಚರ್ಚಿಗೆ. ಗಂಡಸು ಸ್ವಲ್ಪ ಎತ್ತರವಾಗಿ ಗಟ್ಟಿಮುಟ್ಟಾಗಿದ್ದ. ಯಾವುದೋ ದೊಡ್ಡ ಕಾರ್ ಇಟ್ಟಿದ್ದ. ಅವರಿಬ್ಬರೂ ಒಳಗೆ ಬಂದರು. ಪ್ರಾರ್ಥನೆ ಮಾಡಿದರು ನಂತರ ನಗುತ್ತಾ ವಾಪಸ್‌ ಹೋದರು. ಯಾವ ಹುತ್ತದಲ್ಲಿ ಯಾವ ಹಾವು ಅಂತ ಹೇಗೆ ಹೇಳೋದು’ ಅಂತ ಸೂಸನ್ ಹೇಳಿದಳು.

‘ನೋಡೇ ಹುತ್ತವೂ ನಿಂದಲ್ಲ... ಹಾವೂ ನಿಂದಲ್ಲ. ಮತ್ಯಾಕೆ ಕುತೂಹಲ? ನೀನು ಇಂಥಾ ವಿಚಾರಗಳನ್ನೆಲ್ಲಾ ತಲೇಲಿ ತುಂಬ್ಕೊಂಡ್ ಚರ್ಚಿಗೆ ಹೋಗೋದರ ಬದಲು ಇಲ್ಲೆಲ್ಲೋ ಸರ್ಕಲ್ಲಲ್ಲಿ ಕೂತು ಟೈಮ್ ಪಾಸ್ ಮಾಡಿ ಬರೋದ್ ಒಳ್ಳೆದು. ಅಟ್‌ಲೀಸ್ಟ್ ಜೀಸಸ್ ಆದ್ರೂ ನಿನ್ನ ನೋಡ್ಕೊಂಡು ನರಳೋದು ತಪ್ಪುತ್ತೆ’ ವಿಜಿ ಸ್ವಲ್ಪ ಜೋರಾಗೇ ಹೇಳುತ್ತಿದ್ದಳು.

ಈ ಮಾತುಗಳು ಚಿತ್ರಾ ರೂಮಿನೊಳಕ್ಕೆ ಬರುವಾಗ ನಡೆಯುತ್ತಿದುದರಿಂದ ಈ ಮಾತುಗಳ ಅಪ್ಪ-ಅಮ್ಮ ಯಾರು ಅಂತ ಅವಳಿಗೂ ಗೊತ್ತಾಗಲಿಲ್ಲ. ‘ಏನ್ ವಿಷ್ಯ?’ ಅಂದಳು. ಸೂಸನ್ ತಾನು ಕಂಡದ್ದು, ಕಾಣದ್ದು, ಭಾವಾರ್ಥ, ಗೂಢಾರ್ಥ, ಸಿದ್ಧಾರ್ಥ (ಹ್ಹೆ! ಹ್ಹೆ!) ಎಲ್ಲವನ್ನೂ ಹೇಳಿದಳು. ‘ಈಗೇನೀಗ ಸರಳನಿಗೆ ಅಫೇರ್ ಇದೆ ಅಂತಲಾ ನೀನು ಹೇಳ್ತಿರೋದು?’

‘ಅಯ್ಯೋ ಇಲ್ಲಪ್ಪಾ ನಂಗ್ಯಾಕೆ ಬೇರೆಯೋರ ಸುದ್ದಿ? ಆ ಮನುಷ್ಯನ್ನ ನೋಡಿದರೆ ಯಾಕೋ ಸರಿ ಅನ್ನಿಸಲಿಲ್ಲ. ಚಿಕ್ಕ ವಯಸ್ಸು ಇದ್ದ ಹಾಗಿತ್ತು. ಇವರಿಗ್ಯಾಕೆ ಈ ಉಸಾಬರಿ ಎಲ್ಲಾ? ಅಲ್ದೆ ನಾವೂ ಬೇರೆ ಜೊತೆಗೇ ಇರ್ತೀವಿ. ಯಾಕೋ ಆ ಮನುಷ್ಯ ಅಪಾಯ ಅನ್ನಿಸಿದ’ ಅಂದಳು ಸೂಸನ್.

‘ಸೂಸಿ, ಒಂದ್ ಮಾತ್ ಹೇಳ್ತೀನಿ. ಒಂದೋ ಚರ್ಚಿಗೆ ಹೋಗೋದು ಬಿಡು. ಇಲ್ಲಾ ಈ ಥರದ ವಿಚಾರಗಳ ಸ್ವಲ್ಪ ಕಂಟ್ರೋಲ್ ತಂದುಕೋ. ಎರಡೂ ಮಾಡ್ತೀನಂದ್ರೆ ಬೆಳಿಗ್ಗೆ ಡಯಟ್ ಮಾಡಿ ಸಾಯಂಕಾಲ ಸಮೋಸ ತಿಂದ ಹಾಗೆ. ಯಾವ್ದೂ ಉಪಯೋಗ ಇಲ್ಲ’ ಎಂದಳು ಚಿತ್ರಾ.

ಮಾತಿಗೆ ಮಾತು ಹತ್ತಿ ಚಿತ್ರಾ, ಸೂಸನ್, ವಿಜಿ ಎಲ್ಲರಿಗೂ ಜಗಳ ಬಂತು. ಆದರೆ ಆ ಜಗಳದ ಕಟ್ಟಡವೇ ಜಾಳುಜಾಳಾಗಿದ್ದರಿಂದ ಹೆಚ್ಚಿಗೆ ಜಗಳ ಬೆಳೆಸುವ ಹಾಗಿರಲಿಲ್ಲ.

‘ಥೂ! ಏನ್ರೇ ಇದು! ಕರ್ಮ ನೋಡು? ಸಂಬಂಧವಿಲ್ಲದ ವಿಷಯಕ್ಕೆ ಇಷ್ಟು ಉತ್ಸಾಹದಿಂದ ಜಗಳ ಆಡ್ತಿದೀವಿ...ಇಷ್ಟೆಲ್ಲಾ ಯಾಕೆ? ಸರಳಕ್ಕ ಬಂದ್ರೆ ಅವರನ್ನೇ ಕೇಳಿದರಾಯ್ತು...’ ಚಿತ್ರಾ ಹೇಳಿದಳು.

‘ಏನಂತ ಕೇಳ್ತೀ? ಯಾರದೋ ಜೊತೆ ಓಡಾಡ್ತಿದೀರಲ್ಲ ಯಾರವನು ಅಂತ ಕೇಳ್ತೀಯೇನು? ನಿಮ್ಮ ಜೀವನದ ಕಥೆ ಏನು ಅಂತ ಕೇಳ್ತೀಯೇನು? ಅಥವಾ ನೀವ್ಯಾಕೆ ಮದುವೆ ಆಗಿಲ್ಲ? ಮತ್ತೆ ಫಿಸಿಕಲ್ ನೀಡ್ಸ್ ಹೆಂಗೆ ಮ್ಯಾನೇಜ್ ಮಾಡ್ತೀರಿ ಅಂತ ಕೇಳ್ತೀಯೇನು?’ ವಿಜಿ ಕೇಳಿದ ಪ್ರಶ್ನೆಗೆ ಸೂಸನ್ ದಿಗ್ಭ್ರಾಂತಳಾಗಿ ನಿಂತಳು.

ಹಾಗೆ ನೋಡಿದರೆ, ಒಂಟಿ ಮಹಿಳೆಯರ ಬಗ್ಗೆ ಉಳಿದೆಲ್ಲಾ ವಿಷಯಗಳು ಗೌಣ. ಸಮಾಜಕ್ಕೆ ಇರುವುದು ಒಂದೇ ಪ್ರಶ್ನೆ. ‘ಏನ್ ಮಾಡ್ತಾಳಿವಳು?’ ಅದನ್ನು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಬಹುದು. ಯಾಕೆಂದರೆ ಇಂತಹ ಮಾತಿಗೆ ಹತ್ತು ಹಲವಾರು ‘ನೈತಿಕ’ ‘ಸಾಮಾಜಿಕ ಸ್ವಾಸ್ಥ್ಯ’ ಎನ್ನುವಂಥಾ ಆಯಾಮ ಇದ್ದರೂ ಬೇಕಾಗಿರುವ ಉತ್ತರ ಬಹುತೇಕ ನೇರವಾದದ್ದು. ‘ಆಆಆಆಅ.... ಸೆಕ್ಸೂ... ಹೆಂಗೆ? ನಿಮಗೂ ಹರೆಯ ಇದೆಯಲ್ಲಾ? ಮತ್ತೆ ಹೆಂಗೆ ‘ಮ್ಯಾನೇಜ್’ ಮಾಡ್ತೀರಿ?’

ಬಹಳ ಹೆಣ್ಣು ಮಕ್ಕಳು ಒಂಟಿ ಹೆಣ್ಣು ಮಕ್ಕಳಿಗಿರುವ ಸ್ವಾತಂತ್ರ್ಯದ ಬಗ್ಗೆ ಕರುಬುತ್ತಲೇ ಅಬ್ಬಾ! ತನ್ ಜೀವ್ನ ತಾನೇ ನೋಡ್ಕೋತಾ ಇದಾಳೆ, ಯಾರಿಗೂ  ಮಾಡಿ ಹಾಕೋ ಅವಶ್ಯಕತೆ ಇಲ್ಲ ಎಂದುಕೊಂಡರೆ, ಇನ್ನು ಕೆಲವರು ‘ಒಂಟಿ ಜೀವ್ನಾನೂ ಒಂದು ಜೀವ್ನ ಏನ್ರೀ?’ ಅಂತ ಮಿಶ್ರ ಪ್ರತಿಕ್ರಿಯೆ ಕೊಟ್ಟುಬಿಡುತ್ತಾರೆ.

ಸೂಸನ್ ವಯಸ್ಸಿನ ಹುಡುಗಿಯರಿಗೆ ಇರುವುದು ಈ ಯಾವ ಕುತೂಹಲವೂ ಅಲ್ಲ. ಮಧ್ಯ ವಯಸ್ಸಿನ ಹೆಂಗಸರು ಹೇಗಪ್ಪಾ ಸಂಬಂಧಗಳನ್ನು ಬೆಳೆಸುತ್ತಾರೆ! ಅಂತ ಒಂದು ಆಶ್ಚರ್ಯ ಅಷ್ಟೇ.

‘ನಾವ್ ನೋಡಿದ್ರೆ ಒಂದು ಬಾಯ್ ಫ್ರೆಂಡ್ ಹುಡುಕೋಕೆ ಪ್ರಾಣ ತೆಕ್ಕೊಳ್ತಾ ಇದೀವಿ. ಇವ್ರು ಇನ್ನೂ ರೇಸ್ ಓಡ್ತಾನೇ ಇದಾರೆ! ಇನ್ನೂ ನಂ ಚಾನ್ಸ್ ಯಾವಾಗ?’ ಅಂತ ಪೆದ್ದುಪೆದ್ದಾಗಿ ಸೂಸನ್ ಹೇಳಿಬಿಟ್ಟಳು.

ಇಷ್ಟೆಲ್ಲಾ ಮಾತು ನಡೆಯುವಾಗ ಸರಳಾ ಬಂದು ಹಿಂದೆ ನಿಂತಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಸಹಜವಾಗಿಯೇ ಬಹಳ ಕೋಪ ಬಂದಿತ್ತು ಅವರಿಗೆ.
ತಿರುಗಿ ನೋಡಿದ ತಕ್ಷಣ ಮೊದಲು ಎದೆ ಧಸ್ಸ್ಸ್ ಎಂದದ್ದು ಸೂಸನ್‌ಗೇ. ಚಿತ್ರಾ ಮತ್ತು ವಿಜಿ ಕೂಡ ತಿರುಗಿ ನೋಡಿ ಸ್ವಲ್ಪ ಅಧೀರರಾದರು.
ಚಿತ್ರಾ ಅಂತೂ ‘ಸಾರಿ ಸರಳಕ್ಕಾ...ಆಂಟೀ... ವೆರಿ ಸಾರಿ... ನಿಮ್ಮ ಬಗ್ಗೆ ತಪ್ಪು ಮಾತಾಡ್ತಾ ಇರಲಿಲ್ಲ. ಆದರೆ ನಿಮ್ಮ ವಿಷಯ ತಗೊಂಡು ನಮ್ಮ ಬಗ್ಗೆ ನಾವೇ ಮಾತಾಡಿಕೊಳ್ತಾ ಇದ್ವಿ...’ ಎಂದಳು.

‘ಏನ್ ವ್ಯತ್ಯಾಸ ಅದರಲ್ಲಿ? ನಿಮ್ ನಿಮ್ಮ ಮನೆಯವರ ಬಗ್ಗೆನೂ ಮಾತಾಡಿಕೊಳ್ಳಬಹುದಿತ್ತು’ ಅಂದರು ಸರಳಾ. ಈವತ್ತು ಟೆನ್ನಿಸ್ ಆಟ ನಡೀತಿದ್ದರೆ ಸರಳಾಗೆ ವಿಂಬಲ್ಡನ್ ಕಪ್ ಗ್ಯಾರಂಟಿ ಇದೆ ಎನ್ನುವಷ್ಟು ಪಾಯಿಂಟ್ಸು ಅವರ ಕಡೆ ಇತ್ತು. ಮಾತಿನ ಸ್ಟ್ರೋಕ್‌ಗಳಂತೂ ಅತ್ಯದ್ಭುತ. ಎದುರಾಳಿ ಪಾರ್ಟಿಗೆ ಯಾವ ಡಿಫೆನ್ಸೂ ಇಲ್ಲದ ಹಾಗೆ ಮಾಡಿದ್ದರು. ಟೆನ್ನಿಸಿನ ‘ಲವ್’ ಪದದ ಹಾಗೆ, ನೋ ಪಾಯಿಂಟ್ಸ್. ತಪ್ಪು ಮಾಡಿದಾಗಲೂ ವಾದಿಸುತ್ತಾ ನಿಂತರೆ ಇನ್ನೂ ಬೆತ್ತಲಾಗುವುದು ಖಂಡಿತ.

‘ಸರಳಕ್ಕಾ... ಸಾರಿ... ತಪ್ಪಾಯ್ತು... ಆದರೆ ಗಾಸಿಪ್‌ ಅಂತಲ್ಲ. ನಿಮ್ಮ ಜೀವನದ ಬಗ್ಗೆ ಕುತೂಹಲ ಇದೇಪ್ಪಾ... ಹೇಗೆ ಇದ್ದೀರಿ ಇಲ್ಲಿ ನೀವು? ಈ ವಯಸ್ಸಿನಲ್ಲಿ ಯಾಕೆ ರಿಲೇಟಿವ್ಸ್ ಇಂದ ದೂರ ಇದೀರಿ? ಫ್ಯಾಮಿಲಿ ಇಲ್ವಾ? ಏನ್ ವಿಷಯ?’ ಅಂತ ಸೂಸನ್ ನೇರವಾಗೇ ಕೇಳಿದಳು.

ಸರಳಾ ಬೇಕಿದ್ರೆ ಈ ತಲೆಹರಟೆ ಹುಡುಗಿಗೆ ಕಪಾಳಕ್ಕೆ ಬಾರಿಸಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಹೋಗಲಿ, ಕನಿಷ್ಠ ಸಿಟ್ಟನ್ನೂ ಮಾಡಿಕೊಳ್ಳಲಿಲ್ಲ.

‘ನಾನು ಹೇಳಲ್ಲ ಸೂಸನ್. ನನ್ನ ಜೀವನದ ಬಗ್ಗೆ ಕೇಳಿಕೊಂಡು ನೀವೆಲ್ಲಾ ಫಾಲೋ ಮಾಡೋ ಅಂಥದ್ದು ಏನೂ ಇಲ್ಲ. ನಾನ್ಯಾವ ದೊಡ್ಡ ಉದಾಹರಣೆ ನಿಮಗೆ? ನಿನಗೆ ಇರುವ ಒಂದೇ ಪ್ರಶ್ನೆ ಅಂದರೆ ನನ್ ಜೊತೆ ಚರ್ಚಿಗೆ ಬಂದೋನ್ಯಾರು ಅಂತ ತಾನೆ? ಹೇಳ್ತೀನಿ ಕೇಳು. ಅವನು ನನ್ನ ಅಕ್ಕನ ಮಗ. ನನ್ನ ಅಕ್ಕನಿಗೂ ನನಗೂ ವಯಸ್ಸಿನ ವ್ಯತ್ಯಾಸ ಬಹಳ ಇದೆ.

ಅವಳು ನನಗಿಂತ ಹದಿನೈದು ವರ್ಷ ದೊಡ್ಡೋಳು. ಅವಳ ಮಗ ನನಗಿಂತ ಕೆಲವೇ ವರ್ಷ ಚಿಕ್ಕೋನು ಅಷ್ಟೇ. ಇಲ್ಲೇ ಬಿಸಿನೆಸ್ ಮಾಡ್ತಾನೆ. ಆಗಾಗ ನನ್ನ ಮಾತಾಡಿಸೋಕೆ ಬರತಾನೆ. ನನ್ನ ದೊಡ್ಡ ಸಪೊರ್ಟ್ ಸಿಸ್ಟಮ್ ಅವನು. ಇಷ್ಟು ಸಾಕು ಅಂದುಕೊಂಡಿದೀನಿ’ ಎಂದವರೇ ಅಲ್ಲಿಂದ ಹೊರಟು ಹೋದರು.

ಚಿತ್ರಾಗೆ ಪಿಚ್ಚೆನಿಸಿತು. ಸೂಸನ್ ಸುಮ್ಮನೇ ಕುಳಿತಳು. ವಿಜಿಗೆ ಇದೆಲ್ಲಾ ಯಾಕೋ ವಿಚಿತ್ರ ಎನ್ನಿಸಿತು. ಈ ಸರಳಾ ಯಾರು? ನಮಗೂ ಇವರಿಗೂ ಏನು ಸಂಬಂಧ? ಅವರ ಬಗ್ಗೆ ಯಾಕೆ ಹೀಗೆ ಯೋಚಿಸ್ತಾ ಇದೀವಿ? ಅವರ ಜೀವನ ಹೇಗಿದ್ದರೇನಂತೆ, ನಮಗ್ಯಾಕೆ ಆ ಮಾಹಿತಿ ಬೇಕು? ಇವೆಲ್ಲಾ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು.

ಆದರೆ ಸೂಸನ್ ಮಾತ್ರ ಇನ್ಯಾವುದೋ ಟ್ರಾಕಿನಲ್ಲೇ ಯೋಚಿಸುತ್ತಿದ್ದಳು. ಹಾಗೆ ನೋಡಿದರೆ ಚಿತ್ರಾಗೂ ಅದೇ ಪ್ರಶ್ನೆ ಉದ್ಭವ ಆಯಿತು. ಕ್ರಮೇಣ ಎರಡು ತಾಸಿನ ನಂತರ ವಿಜಿ ಕೂಡ ಅದನ್ನೇ ಯೋಚಿಸಲು ಶುರು ಮಾಡಿದ್ದಳು.

ಆದರೆ ಮೊದಲು ಇದನ್ನ ಪ್ರಸ್ತಾಪ ಮಾಡಲಿಕ್ಕೆ ಎಲ್ಲರಿಗೂ ಹಿಂಜರಿಕೆ. ‘ಅಯ್ಯೋ ಚೀಪ್ ಅಂದ್ಕೊಂಡುಬಿಟ್ರೆ?’ ಎನ್ನುವುದೇ ಏಕಮಾತ್ರ ಭಾವನೆ. ಅದನ್ನ ತೆಗೆದುಹಾಕಿದರೆ ಎಲ್ಲರೂ ‘ಬೆತ್ತಲೆ ಪ್ರಪಂಚ’ದಲ್ಲೇ ಇದ್ದರು. ಅದೇನೋ ಅಂತಾರಲ್ಲ, ಹಮಾಮ್ ಮೆ ಸಬ್ ನಂಗೇ ಹೈ (ಸ್ನಾನದ ಮನೇಲಿ ಎಲ್ರೊ ಬೆತ್ತಲೇನೇ) ಅನ್ನೋ ಥರ!

ಊಟ ಮುಗಿಸಿ ವಾಕ್ ಹೋದಾಗ ಸೂಸನ್ ಅತ್ತ ಇತ್ತ ಪೀಠಿಕೆ ಹಾಕುತ್ತಾ ಈ ಪ್ರಶ್ನೆಯ ಮೂಟ್ ಪಾಯಿಂಟ್‌ಗೇ ಬಂದು ನಿಂತಳು. ಅವೇ ಪದಗಳನ್ನು ಬಳಸಿ ಕೇಳಲಿಲ್ಲ ಅಷ್ಟೆ ಅನ್ನೋ ವ್ಯತ್ಯಾಸ ಒಂದು ಬಿಟ್ಟರೆ ಇನ್ನೆಲ್ಲವೂ ಅನ್ವರ್ಥವಾಗೇ ಇತ್ತು. ಅಂದ್ರೆ, ಗಾಸಿಪ್ ಚಪ್ಪರಿಸುವ ಸಂಬಂಧಿಗಳು ‘ನಿಮ್ಮ ಮನೆಗೆ ಅಂತ ಬಂದ್ವಿ’ ಅಂತ ಹೇಳದೆ ‘ಇಲ್ಲೇ ಬಂದಿದ್ವಿ, ನಿಮ್ಮನೇಗೂ ಬಂದು ಹೋಗೋಣ ಅಂತ ಬಂದ್ವಿ’ ಅನ್ನೋ ಮಾತುಗಳನ್ನು ಬಳಸ್ತಾರಲ್ಲಾ, ಥೇಟ್ ಹಾಗೇ!
‘ಇಲ್ಲುಂಟು ಅಗೆವ ಬುದ್ಧಿಗೆ ಅನಂತ ಅವಕಾಶ

ಹೊಳೆದದ್ದು ತಾರೆ; ಉಳಿದದ್ದು ಆಕಾಶ’ ಎಂದು ನರಸಿಂಹಸ್ವಾಮಿಯವರು ಮೂಡಿಸಿದ ಸಾಲುಗಳ ಅರ್ಥ ಪಾರಮಾರ್ಥಿಕವೇ ಇರಬಹುದು. ಇದು ಗಾಸಿಪ್ ಹುಡುಕುವವರಿಗೆ ಅದ್ಭುತವಾಗಿ ಅನ್ವಯವಾಗಿವಂತಿಲ್ಲವೇನು? ಪ್ರಶ್ನೆಗಳೇ ಜೀವನದ ಉದ್ದೇಶವಾದರೆ, ಮಥಿಸಿ ಮಥಿಸಿ ಹುಟ್ಟುವುದೂ ಮತ್ತೆ ಪ್ರಶ್ನೆಗಳೇ ಅಲ್ಲವೇ? ಇದಕ್ಕೆ ಕೊನೆಯೆಲ್ಲಿದೆ? ಎಷ್ಟು ಜ್ಞಾನವ ಹೊಂದಿದರೇನು? ಮತ್ತೂ ಪ್ರಶ್ನೆಗಳು ಹುಟ್ಟುವನ್ನಕ್ಕ? ಅಂತ ಬಸವಣ್ಣ ಹೇಳಬಹುದಿತ್ತು. ಆದರೆ ಹೇಳಲೇ ಇಲ್ಲ ಆ ಭಕ್ತಿ ಭಂಡಾರಿ!

ಕಡೆಗೂ ಎಲ್ಲರಲ್ಲಿ ಮರಳು ಸೋಸಿ ಉಳಿದ ಪ್ರಶ್ನೆ ಒಂದೇ. ‘ಎಲ್ಲಾ ಮಾತಾಡಿದ್ರು. ತಮಗೆ ಮದುವೆ ಆಗಿದೆಯೋ ಇಲ್ವೋ ಅನ್ನೋದನ್ನ ಮಾತ್ರ ಹೇಳಲಿಲ್ವಲ್ಲಾ ಸರಳ? ಅದೊಂದನ್ನ ಹೇಳಿದ್ದಿದ್ದ್ರೆ ಎಲ್ಲಾ ಬಗೆ ಹರೀತಿತ್ತಪ್ಪಾ’ ಅಂತ ಸೂಸನ್ ಹೇಳಿದರೂ, ಚಿತ್ರಾ ಮತ್ತು ವಿಜಿ ಅವಳ ಮಾತುಗಳಿಗೆ ಅವಶ್ಯಕತೆಗಿಂತ ಜಾಸ್ತಿ ಉತ್ಸಾಹ ತುಂಬಿಕೊಂಡೇ ‘ಅಲ್ವಾ?’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT