ADVERTISEMENT

ಕಳ್ಳ ಹೋಗಿ ಸ್ನೇಹಿತ ಬಂದ ಡುಂ ಡುಂ!!

ಪ್ರೀತಿ ನಾಗರಾಜ
Published 29 ಸೆಪ್ಟೆಂಬರ್ 2016, 9:26 IST
Last Updated 29 ಸೆಪ್ಟೆಂಬರ್ 2016, 9:26 IST
ಕಳ್ಳ ಹೋಗಿ ಸ್ನೇಹಿತ ಬಂದ ಡುಂ ಡುಂ!!
ಕಳ್ಳ ಹೋಗಿ ಸ್ನೇಹಿತ ಬಂದ ಡುಂ ಡುಂ!!   

ಈ ಫಾರಿನ್ ಹುಡುಗಿಯನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋಗುವ ಪ್ರಮೇಯ ಬಂತಲ್ಲ ಅಂತ ರವೀಂದ್ರನಿಗೆ ಹೆದರಿಕೆ ಆಯಿತು. ಮೊದಲಿಗೆ ತನಗೇ ಸ್ಟೇಷನ್ನಿನ ಅನುಭವ ಇಲ್ಲ. ಅದರ ಮೇಲೆ ತನ್ನಿಂದಾಗಿ ಅವಳೂ ಅಲ್ಲಿಗೆ ಹೋಗುವ ಸಂದರ್ಭ ಬಂತಲ್ಲ ಅಂತ ಕಸಿವಿಸಿ ಆಯಿತು.

ಅವಿನಾಶ, ಅರ್ಜುನ ಸ್ನೇಹಿತನಿಗೆ ಸಮಾಧಾನ ಹೇಳಿದರು. ‘ಇರಲಿ ಬಿಡೊ...ಈಗ ಅನಿವಾರ್ಯ ಆಗಿದೆ. ಮೊದಲು ಸ್ಟೇಷನ್ನಿಗೆ ಹೋಗಿ ಬನ್ನಿ. ಆಮೇಲೆ ಮುಂದೇನು ಮಾಡಬೇಕು ಅಂತ ನೋಡೋಣಂತೆ. ವರಿ ಮಾಡ್ಕೋಬೇಡ’ ಅಂತ ಆಗಾಗ ಹೇಳಿದರೂ ಈ ಕೇಸಿನ ಕೊನೆ ಹೇಗೆ ಎನ್ನುವ ಆತಂಕ ಎಲ್ಲರಿಗೂ ಇತ್ತು.

ಮಧ್ಯದಲ್ಲಿ ರವೀಂದ್ರನ ಜಿಗ್ರಿ ಫ್ರೆಂಡು ಮದನ್ ಮನೆಗೆ ಬಂದ. ಅವನ ಕೈಯಲ್ಲಿ ಕಳುವಾದ ಎಲ್ಲ ಸಾಮಾನುಗಳೂ ಇದ್ದವು. ಅದನ್ನು ನೋಡಿದ ತಕ್ಷಣ ರವೀಂದ್ರನಿಗೆ ಗಾಬರಿ ಮತ್ತು ಗೊಂದಲ ಎರಡೂ ಏಕಕಾಲಕ್ಕೆ ಉಂಟಾದವು. ‘ಇವೆಲ್ಲಾ ಹೆಂಗೆ ನಿನ್ನ ಹತ್ತಿರ ಬಂದ್ವು?’ ರವಿ ಕೇಳಿದ.

ರವಿ ಮತ್ತು ಸ್ನೇಹಿತರು ಊರಿಗೆ ಹೋಗುವ ಹಿಂದಿನ ದಿನ ರಾತ್ರಿ ಮದನ್ ಮನೆಗೆ ಬಂದಿದ್ದನಂತೆ. ಎಲ್ಲರೂ ಗುಂಡು ಹಾಕುವಾಗ ಮದನ್ ತನಗೆ ಒಂದಿಷ್ಟು ಸಾಮಾನುಗಳ ಅವಶ್ಯಕತೆ ಇರುವುದಾಗಿಯೂ, ಅವುಗಳನ್ನು ತೆಗೆದುಕೊಂಡು ಹೋಗಬಹುದೇನು ಎಂದು ಕೇಳಿದ್ದಕ್ಕೆ ರವೀಂದ್ರ ಅದಕ್ಕೇನು ತಗೊಂಡು ಹೋಗು ಅಂತ ಹೇಳಿದ್ದನಂತೆ. ಒಳಗೆ ಹೋದ ರಮ್ಮು, ಬ್ರಾಂಡಿ ಹುಟ್ಟಿಸುವ ಅತಿರೇಕದ ಧಾರಾಳಿತನದಲ್ಲಿ, ಅದರ ವಿಸ್ಮೃತಿಯಲ್ಲಿ ಯಾರಿಗೂ ಈ ವಿಷಯಗಳು ನೆನಪಿನಲ್ಲಿ ಉಳಿಯಲೇ ಇಲ್ಲ. 

ಆವತ್ತು ರಾತ್ರಿ ಕುಡಿದವರು ಹಾಗೇ ಮಲಗಿದ್ದಾರೆ. ಬೆಳಿಗ್ಗೆ ಮೊದಲಿಗೆ ಎದ್ದು ಊರಿಗೆ ಹೋದವ ಅವಿನಾಶ್. ಮದನ್ ಅವಿನಾಶನ ರೂಮಿನಲ್ಲಿ ನೆಲದ ಮೇಲೆ ಮಲಗಿದ್ದ.ಹೊರಗಿನಿಂದ ಹಾಗೇ ನೋಡಿದರೆ ಮದನ ಮಲಗಿದ್ದು ಕಾಣಿಸುವಂತಿರಲಿಲ್ಲ. ಅವಿನಾಶ್ ತಾನು ಹೋಗುವಾಗ ರೂಮಿನ ಬಾಗಿಲನ್ನು ಮುಚ್ಚಿಕೊಂಡು ಹೋಗಿದ್ದ.

ಉಳಿದ ಎಲ್ಲರೂ ತಂತಮ್ಮ ಸಮಯಕ್ಕೆ ಸರಿಯಾಗಿ ಹೊರಟರು. ಹುಡುಗರಲ್ಲವೇ? ಯಾರಿಗೂ ಅವಿನಾಶನ ರೂಮನ್ನೊಮ್ಮೆ ಚೆಕ್ ಮಾಡಬೇಕೆಂಬ ‘ಜಾಗರೂಕತೆ’ ಬರಲಿಲ್ಲ.ಹಾಗೆ ನೋಡಿದರೆ ಹೆಂಗಸರಿಗೆ ಸಹಜ ಎನ್ನಿಸುವಂಥಾ ಎಷ್ಟೋ ನಡವಳಿಕೆಗಳು ಗಂಡಸರಿಗೆ ಅರ್ಥವಾಗುವುದೇ ಇಲ್ಲ, ಅರ್ಥವಾಗಲೇಬೇಕೆಂಬ ಯಾವ ನಿಯಮವಾಗಲೀ, ಅವಶ್ಯಕತೆಯಾಗಲೀ ಇಲ್ಲ ಬಿಡಿ.

ಈ ಥರದ ನಡವಳಿಕೆಗಳಿಗೆ ‘ಹೆಣ್ತನ’ ಎಂಬ ಹೆಸರು ಯಾಕೆ ಬರುತ್ತೆ ಗೊತ್ತಾ? ಬಹುತೇಕ ಗಂಡಸರು ಹುಟ್ಟುತ್ತಾ ತಾಯಿಯ ಸೆರಗಲ್ಲಿ, ನಂತರ ಅವಳ ಕಣ್ಣಳತೆಯಲ್ಲಿ, ಅಕ್ಕ ಇದ್ದರೆ ಅವಳ ಸುಪರ್ದಿನಲ್ಲಿ, ಆಮೇಲೆ ಗಮ್ಮತ್ತಾದ ಸ್ನೇಹಿತ/ಸ್ನೇಹಿತೆಯರ ಸಂಗದಲ್ಲಿ, ಇನ್ನೂ ಮುಂದಕ್ಕೆ ಹೋದರೆ ಸಾಂಸಾರಿಕ ಜವಾಬ್ದಾರಿಗಳಿಗೆ ತನ್ನಷ್ಟೇ ಹೊಸಬಳಾಗಿ, ಅನನುಭವಿಯಾದರೂ ತನಗಿಂತ ಹೆಚ್ಚಿನ ದಕ್ಷತೆಯಿಂದ; ಚುರುಕಾಗಿ ಜೀವನದ ನೊಗವನ್ನು ಹಿಡಿದು ಏಕಸೂತ್ರದಲ್ಲಿ ನಡೆಸಬಲ್ಲ ಹೆಂಡತಿ ಸಿಕ್ಕುಬಿಟ್ಟರೆ ದಿನಾ ಬೆಳಿಗ್ಗೆ ಎದ್ದು ಪೇಪರೋದಿ ದೇಶ ವಿದೇಶಗಳ ರಾಜಕೀಯ ಮುತ್ಸದ್ದಿತನದ ಬಗ್ಗೆ ಚಿಂತಿಸದೆ ಇನ್ನೇನು ಮಾಡಬೇಕು ಹೇಳಿ ಮತ್ತೆ?

ಒಟ್ಟಿನಲ್ಲಿ ಎಲ್ಲರೂ ಮನೆಯಿಂದ ಖಾಲಿಯದ ಮೇಲೆ ಮದನನಿಗೆ ಎಚ್ಚರವಾಯಿತು. ಅಷ್ಟು ಹೊತ್ತಿಗೆ ಎಲ್ಲರೂ ಮನೆಯ ಕೀಲಿ ಹಾಕಿಕೊಂಡು ಹೊರಟಾಗಿತ್ತು. ಯಾರನ್ನಾದರೂ ಹೇಗೆ ಸಹಾಯಕ್ಕೆ ಕರೆಯಲು ಸಾಧ್ಯ? ಎಲ್ಲರೂ ರೈಲಿನಲ್ಲೋ, ಬಸ್ಸಿನಲ್ಲೋ ವಿಮಾನದಲ್ಲೊ ಇರುವಾಗ?

ಮದನ ಇಡೀ ದಿನ ಹೇಗೆ ಹೊರಗೆ ಹೊರಡುವುದು ಅಂತ ಲೆಕ್ಕ ಹಾಕಿದ. ಒಳಗಿನ ಡೋರ್ ಲಾಕ್ ಇದ್ದರೂ ಹೊರಗೆ ಚಿಲಕ ಇತ್ತು. ಸ್ನೇಹಿತರು ಹೊರಗಿನಿಂದ ಚಿಲಕಕ್ಕೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾರೆ. ಅವರನ್ನು ಸಂಪರ್ಕಿಸುವ ಬಗೆ ಗೊತ್ತಿಲ್ಲ. ಯಾರನ್ನಾದರೂ ಸಹಾಯಕ್ಕೆ ಕರೆದರೆ ಬೀಗ ಒಡೆಯಿಸಬೇಕು. ಈವತ್ತು ಬೀಗ ಒಡೆಸಿದರೆ ನಾಳೆ ತನ್ನ ಸ್ನೇಹಿತರಿಗೆ ತೊಂದರೆ ಆಗುತ್ತದೆ.

ತಾನೊಬ್ಬ ಮನೆಯಲ್ಲಿ ಒಳಗಿದ್ದೆ ಎನ್ನುವುದು ಗೊತ್ತಾಗಿ ಬೀಗ ಒಡೆದರೆ ಅಪಾರ್ಟ್ಮೆಂಟಿನ ಜನ ಆಕ್ಷೇಪ ಎತ್ತಬಹುದು. ಎಚ್ಚರ ತಪ್ಪುವಷ್ಟು ಕುಡಿದಿಲ್ಲದಿದ್ದರೂ ಸುಮ್ಮನೆ ಎಲ್ಲರ ಕಣ್ಣಿಗೆ ಬೀಳಬೇಕಾಗುತ್ತೆ. ಮನೆ ಖಾಲಿ ಮಾಡಿ ಅಂದರೆ ಸ್ನೇಹಿತರಿಗೆ ಕೆಟ್ಟ ಹೆಸರು, ಅನವಶ್ಯಕ ಕಿರಿಕಿರಿ. ಒಟ್ಟಿನಲ್ಲಿ ಹೊರಗೆ ಹೋಗಲು ಪರ್ಯಾಯ ಮಾರ್ಗ ಹುಡುಕಿಕೊಂಡರೆ ಇದೆಲ್ಲ ರಗಳೆ ಇಲ್ಲವೇ ಇಲ್ಲ. ತಾನು ಮಲಗಿದ್ದ ರೂಮಿಗೆ ಬಾಲ್ಕನಿ ಇತ್ತು. ಅದನ್ನು ತೆರೆದು ನೋಡಿದ. ಒಂದೇ ಫ್ಲೋರು. ಹೇಗೋ ಮಾಡಿ ಕೆಳಗೆ ಇಳಿದುಬಿಟ್ಟರೆ ಆರಾಮ್! ಯಾರಿಗೂ ತೊಂದರೆ ಇಲ್ಲ.

ಸರಿ. ಪ್ಲಾನ್ ಸೆಟ್ ಆದ ಮೇಲೆ ಮನೆಯಲ್ಲಿ ಆಮ್ಲೆಟ್ಟೋ ಮ್ಯಾಗಿಯೋ ಇನ್ನೆಂಥದ್ದೋ ಗೊಬ್ಬರ ಥರದ ಅಡುಗೆ ಮಾಡಿಕೊಂಡು ತಿನ್ನುತ್ತಾ ಟೀವಿ ನೋಡುತ್ತಾ ಕಾಲ ಕಳೆದ.ಹಿಂದಿನ ರಾತ್ರಿ ‘ಎಣ್ಣೆ’ ಬೇರೆ ಉಳಿದಿತ್ತು. ಯಾರಿಗುಂಟು ಯಾರಿಗಿಲ್ಲ! ರಾತ್ರಿಯಾಗುವ ತನಕ ಕಾದಿದ್ದು ಹನ್ನೆರಡು ಗಂಟೆಯ ಮೇಲೆ ಎಲ್ಲರೂ ಮಲಗಿದ್ದಾರೆ ಎನ್ನಿಸಿದ ಮೇಲೆ ಬಾಲ್ಕನಿಯಿಂದ ಒಂದು ಗಟ್ಟಿ ಡಬಲ್ ಬೆಡ್ ಶೀಟು ಕಟ್ಟಿದ. ಇಳಿಯಲು ಉದ್ದ ಸಾಲದಾಯಿತು. ವಾಪಸ್ ಎಳೆದುಕೊಂಡು ಅದಕ್ಕೆ ಇನ್ನೊಂದು ಬೆಡ್ ಶೀಟು ಕಟ್ಟಿದ.

ದಪ್ಪನ್ನ ಗಂಟಾದರೂ ಪರವಾಗಿಲ್ಲ. ಗಟ್ಟಿ ಗಂಟಾಗಿ ಅದರ ಗುಂಟ ಇಳಿದು ನೆಲ ಮುಟ್ಟುವಷ್ಟು ಉದ್ದ ಆಯಿತು. ಆ ದಪ್ಪನ್ನ ಗಂಟು ಮನುಷ್ಯರ ತಲೆಯ ಥರ ಕಾಣುತ್ತಿತ್ತು.ಮದನ ತನಗೆ ಬೇಕಿದ್ದ ಸಾಮಾನುಗಳನ್ನು ಬೆನ್ನಿಗೆ ಹಾಕಿಕೊಳ್ಳುವ ಪುಟ್ಟ ಬ್ಯಾಗಿಗೆ ಸೇರಿಸಿದ. ಬಾಲ್ಕನಿಯ ಗ್ರಿಲ್ಲಿಗೆ ಕಟ್ಟಿದ ಬೆಡ್‌ಶೀಟು ಮಾರ್ಗವಾಗಿ ಕೆಳಕ್ಕೆ ಇಳಿದ. ಬೆಡ್‌ಶೀಟನ್ನು ವಾಪಸು ಮೇಲಕ್ಕೆ ಹಾಕಲು ಎಷ್ಟು ಪ್ರಯತ್ನ ಪಟ್ಟು ಎಸೆದರೂ ಅದು ವಾಪಸು ಹಾಗೇ ನೆಲಕ್ಕೆ ಬಂದು ಬೀಳುತ್ತಿತ್ತು.

ಮನುಷ್ಯ ಪ್ರಯತ್ನವನ್ನು ಮಾಡುವಷ್ಟು ಮಾಡಿ, ಉಳಿದದ್ದು ದೇವರಿಟ್ಟಂತೆ ಆಗಲಿ ಅಂತ ಸರಿರಾತ್ರಿಯಲ್ಲಿ ಅಪಾರ್ಟ್‌ಮೆಂಟಿನ ಗೇಟು ಹಾರಿ ಹೊರಟೇ ಹೋದ. ಹಾಗೆ ಹೋಗುವಾಗ ಅವನಿಗೆ ಅನ್ನಿಸಿದ್ದು ಒಂದೇ. ಯಾರಿಗೂ ತೊಂದರೆ ಕೊಡದೆ ತಾನು ತಲೆ ಉಪಯೋಗಿಸಿ ತನ್ನ ವ್ಯವಸ್ಥೆಯನ್ನು ಮಾಡಿಕೊಂಡೆ. ತನ್ನ ಸಾಹಸವನ್ನು ಕೇಳಿದರೆ ತನ್ನ ಸ್ನೇಹಿತರು ತನಗೆ ಶಹಭಾಷ್ ಗಿರಿ ಕೊಡುವುದಷ್ಟೇ ಅಲ್ಲದೆ ತನ್ನ ಈ ಐಡಿಯಾವನ್ನು ಖಂಡಿತಾ ಕಣ್ಣಿಗೊತ್ತಿಕೊಂಡು ತಾವೂ ಹೋದಲ್ಲೆಲ್ಲಾ ಪಾಲಿಸುತ್ತಾರೆ ಎಂದು ಗಾಳಿಯಲ್ಲಿ ನಡೆಯುತ್ತಾ ಹೋದ.

ಮದನನ ಕಡಲೆಕಾಳಿನ ಗಾತ್ರದ ಬುದ್ಧಿಗೆ ಹೊಳೆಯದಿದ್ದ ವಿಷಯವೇನೆಂದರೆ ಇದೆಲ್ಲದರ ಒಟ್ಟೂ ಪರಿಣಾಮ ಮತ್ತು ತಾನು ಬಾಲ್ಕನಿಯ ಬಾಗಿಲನ್ನು ಓಪನ್ ಬಿಟ್ಟಿದ್ದೆ ಎನ್ನುವುದು... ಅವನ ಅದೃಷ್ಟಕ್ಕೆ ಆ ಬೆಡ್‌ಶೀಟು ಮನುಷ್ಯನೊಬ್ಬ ನೇಣು ಹಾಕಿಕೊಂಡ ಥರ ಕಂಡು ಮುಂದೆ ಸಾಕಷ್ಟು ಅವಾಂತರಕ್ಕೆ ಕಾರಣವಾಯಿತು.

ಮದನ ಇಷ್ಟನ್ನು ಹೇಳುವ ಹೊತ್ತಿಗೆ ರವಿಯ ಸಹನೆ ಮೀರಿ ಹೋಗಿತ್ತು. ‘ಲೈ...ನುವ್ವು ಮುಂದುಗಾ ವಚ್ಚಿ ಚೆಪ್ಪಾಲಸಿಂದಿ ಕದಾ ರಾ? ಏಮೇಮಿ ಜರುಗಿಂದಿ ತೆಲುಸಾ ನೀಕು? ರ್ರಾಆಅಸ್ಕೆಲ್...’ (ನನಗೆ ಮೊದಲೇ ಹೇಳಬಾರದಿತ್ತೇನೋ? ಏನೇನು ನಡೀತು ಗೊತ್ತಾ ನಿನಗೆ? ರಾಸ್ಕಲ್!)

ರವೀಂದ್ರ ಗೆಳೆಯನನ್ನು ಮಾತಿನಲ್ಲೇ ಎರ್ರಾ ಬಿರ್ರಿ ಚಚ್ಚಿದ. ಪಾಪ! ತಗೊಂಡು ಹೋದ ವಸ್ತುಗಳನ್ನು ವಾಪಸು ಕೊಡಲು ಬಂದ ಮದನನಿಗೆ ಒಳ್ಳೆ ನಡವಳಿಕೆಗೆ ಈ ಜಗತ್ತಿನಲ್ಲಿ ಬೆಲೆಯೇ ಇಲ್ಲವಾ ಎನ್ನುವ ಅನುಮಾನ ಶುರುವಾಗಿತ್ತು.

ಹಾಗೆ ನೋಡಿದರೆ ತಾನೇನು ಅನಾಹುತ ಮಾಡಿದ್ದೆ ಎನ್ನುವುದರ ಸ್ಪಷ್ಟ ಅರಿವೂ ಅವನಿಗೆ ಇರಲಿಲ್ಲ. ಬೀಗ ಮುರಿಯದೆ ಮನೆಯಿಂದ ಎಸ್ಕೇಪ್ ಆಗಲು ಹೊಳೆದ ಈ ಜಂಗಮ ಮಾರ್ಗಕ್ಕೆ ಎಂಥಾ ಅದ್ಭುತ ಆಯಾಮಗಳಿದ್ದವಲ್ಲ? ಈ ಆಲೋಚನೆಯನ್ನು, ಪ್ಲಾನ್ ಅನ್ನು ಕಾಪಿರೈಟ್ ಮಾಡಿಸಬೇಕು ಎನ್ನುವ ತನಕವೂ ತಮಾಷೆಯಾಗಿ ಯೋಚಿಸಿ ಮದನ ರೋಮಾಂಚನಗೊಳ್ಳುತ್ತಲೇ ಸ್ನೇಹಿತನನ್ನು ಭೇಟಿಯಾಗಲು ಬಂದು ಯಾವುದೋ ಒಂದು ದೊಡ್ಡ ಹಳವಂಡಕ್ಕೆ ತಾನು ಕಾರಣಕರ್ತನಾಗಿರುವುದು ಪರಿಸ್ಥಿತಿಯ ಸಂಕೀರ್ಣತೆಯಿಂದ ಗ್ರಹಿಕೆಗೆ ಬಂದಿತು.

ಮೊದಮೊದಲಿಗೆ ಸ್ನೇಹಿತರ ಸಿಟ್ಟನ್ನು ನೋಡಿ ಮದನ ಏನೋ ತಮಾಷೆ ಮಾಡ್ತಿದಾರೆ ಎಂದುಕೊಂಡ. ಯಾಕೆಂದರೆ ಅವನು ಮನೆ ಹೊಕ್ಕು ಸ್ಪೀಕರ್ರು, ಕ್ಯಾಮೆರಾ ಇತ್ಯಾದಿಗಳನ್ನು ಹಿಂತಿರುಗಿಸುತ್ತಿದ್ದೇನೆ ಅಂತ ಸ್ನೇಹಿತರಿಗೆ ಹೇಳಿದ ಕೂಡಲೇ ರವೀಂದ್ರ ಇದನ್ನೆಲ್ಲಾ ಯಾವಾಗ ಒಯ್ದೆ ಅಂತ ಕೇಳಿದ. ಅದಕ್ಕೆ ಮದನ ನಗುತ್ತಲೇ ತಾನು ವಸ್ತುಗಳನ್ನು ಒಯ್ಯಲು ರವಿಯ ಪರ್ಮಿಷನ್ ತೆಗೆದುಕೊಂಡದ್ದನ್ನೂ, ಅವರೆಲ್ಲರೂ ತನ್ನನ್ನು ಮನೆಯಲ್ಲೇ ಬಿಟ್ಟು ಬೀಗ ಹಾಕಿಕೊಂಡು ಹೋದದ್ದನ್ನೂ ವಿವರಿಸಿ ಹೇಳುತ್ತಿರಲಾಗಿ ಆ ರಾತ್ರಿಯ ಸಂಪೂರ್ಣ ಚಿತ್ರಣ ರವಿಯ ಕಣ್ಣ ಮುಂದೆ ನಿಂತುಬಿಟ್ಟಿತು.

ತನ್ನ ಅಸಹಾಯಕತೆಯಿಂದಾಗಿ ‘ಯೂ ರಾಸ್ಕಲ್...’ ಎಂದು ಶುರು ಮಾಡಿ ಸುಮಾರು ಅರ್ಧ ಗಂಟೆಯ ಕಾಲ ತೆಲುಗು ಮತ್ತು ಇಂಗ್ಲೀಷಿನಲ್ಲಿ ಬೈಗುಳಗಳನ್ನು ಉದ್ಘೋಷಕನ ಶೈಲಿಯಲ್ಲಿ ಉದುರಿಸಿದ ರವೀಂದ್ರನನ್ನು ಅರ್ಜುನ್ ಮತ್ತು ಅವಿನಾಶ್ ಸಮಾಧಾನ ಪಡಿಸಿದರು. ಮದನನ ತಪ್ಪು ಸಂಪೂರ್ಣವಾಗಿ ಇಲ್ಲದಿದ್ದರೂ ಅವನ ಅತಿರೇಕದ ಪ್ಲಾನಿಂಗಿನಿಂದಾಗಿ ಈಗ ಎಲ್ಲರೂ ಸ್ಟೇಷನ್ನಿಗೆ ಹೋಗುವ ಪ್ರಮೇಯ ಬಂದಿತ್ತು.

ಅಷ್ಟು ಹೊತ್ತಿಗೆಲ್ಲ ಕವಿತಾ ಬಂದಳು. ಅವಳು ಬರುವ ಸಮಯಕ್ಕೆ ರವೀಂದ್ರನ ಸಿಟ್ಟು ಇಳಿಯುತ್ತಾ ವಾಸ್ತವ ಪ್ರಜ್ಞೆ ಮೂಡುತ್ತಾ ಬಂದಿತ್ತು. ‘ಈಗ ಮದನನಿಗೆ ಬೈದರೆ ಏನೂ ಉಪ್ಯೋಗ ಇಲ್ಲ ಕಣೋ... ಸುಮ್ಮನೆ ಸ್ಟೇಷನ್ನಿಗೆ ಹೋಗೋಣ ನಡಿ...’ ಅಂದಳು ಕವಿತ. ‘ಹೆದರಿಕೆ ಇಲ್ಲವಾ ನಿಂಗೆ?’ ರವೀಂದ್ರ ಕೇಳಿದ. ‘ನಂಗ್ಯಾಕೆ ಹೆದರಿಕೆ? ನಾನೇನು ತಪ್ಪು ಮಾಡಿದ್ದೀನಿ?’

ಅವಳ ಧೈರ್ಯದ ಮುಂದೆ ತನ್ನ ಗಂಡಸ್ತನ ಖಾಲಿ ಬೊಗಳೆಯಂತೆ ಅನ್ನಿಸಿತು ರವೀಂದ್ರನಿಗೆ. ಸರಿ ನಡಿ ಮತ್ತೆ ಅಂತ ತಯಾರಾದವನನ್ನು ನಿಲ್ಲಿಸಿ ಕವಿತಾ ಕೇಳಿದಳು.‘ಕಳ್ತನದ ಕಂಪ್ಲೇಂಟ್ ಯಾರು ಕೊಟ್ಟಿರೋದು? ನೀನ?’ ‘ಇಲ್ಲ ಅಪಾರ್ಟ್ಮೆಂಟ್ ಮ್ಯಾನೇಜರ್ರು...’ ‘ವಾಪಸ್ ತಗೊಳೋಕೇ ಅವ್ರೇ ಬರಬೇಕು, ಅಲ್ವಾ?’‘ಹೌದಾ? ಕಳ್ತನ ನಡೆದಿರೋದು ನಮ್ಮನೇಲಲ್ವಾ?’ ‘ಸಾರಿ... ಬಟ್ ನಾನು ನಿಮ್ಮನ್ನ ಕೇಳ್ಕೊಂಡೇ ಅಲ್ವೇನ್ರೀ ಈ ಸಾಮಾನೆಲ್ಲಾ ಎತ್ಕೊಂಡಿದ್ದು?’ ಮದನನಿಗೆ ರವೀಂದ್ರ ಕೊಟ್ಟ ಡೋಸು ಕಡಿಮೆಯಾಗಿತ್ತೇನೋ.

ಸುಮ್ಮನಿರಲಾರದೆ ಮಧ್ಯೆ ಬಾಯಿ ಹಾಕಿದ. ರವೀಂದ್ರನ ಸಿಟ್ಟು ಈ ಸಾರಿ ತಾಳ್ಮೆಯ ಕೊನೆ ಹಂತವನ್ನೂ ಮೀರಿಹೋಯಿತು. ಬಿರುಬಿಸಿಲಲ್ಲಿ ಇಟ್ಟಿಗೆ ಹೊರುವವನ ಅಸಹಾಯಕತೆಯ, ಬಡಬಾಗ್ನಿಯ ದಳ್ಳುರಿಯ ಮೂರ್ತರೂಪವಾದಂಥ ಸಿಟ್ಟದು. ಅನ್ನಲಾಗದು, ಅನುಭವಿಸಲಾಗದು... ಚಚ್ಚಿ ಬಿಡಬೇಕು ಅಂತ ಮುಷ್ಟಿ ಕಟ್ಟಿದರೂ ಚಚ್ಚಲಾಗದ ಪರಿಸ್ಥಿತಿ.

ರವಿ ಸುಮ್ಮನೆ ಉಸಿರೆಳೆದುಕೊಂಡು ಬಾಲ್ಕನಿಗೆ ಹೋಗಿ ನಿಂತುಬಿಟ್ಟ. ಹತ್ತು ನಿಮಿಷ ಕಳೆದು ವಾಪಸು ಮಾತಿಗೆ ಬರುವ ಮುನ್ನ ಅವಿನಾಶನನ್ನು ಕರೆದು ‘ವಾಡಿಕಿ ನೋರ್ ಮುಸ್ಕೊನಿ ಕುಚೊ ಅನಿ ಚೆಪ್ಪು... ಭಡವ ರಾಸ್ಕೆಲ್...ಉಉರುಕೆ ಮಾಟ್ಲಾಡತಾಡು... (ಅವನಿಗೆ ಬಾಯಿ ಮುಚ್ಚಿಕೊಂಡು ಇರು ಅಂತ ಹೇಳು ಸುಮ್ಮನೆ ಮಾತಾಡುತ್ತಾನೆ ಬಡವ ರಾಸ್ಕಲ್) ಎನ್ನಲಾಗಿ ಅವಿನಾಶು ಮದನನಿಗೆ ಕೋಪದ ಸಾರ ಸಮೇತವಾಗಿ ಸಂದೇಶವನ್ನು ತಲುಪಿಸಿದ.

ಅಪಾರ್ಟ್ಮೆಂಟಿನ ಮ್ಯಾನೇಜರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಮನದಟ್ಟು ಮಾಡಿಸಿದ್ದಾಯಿತು. ಅವರೇನೂ ಅಂಥ ಕಿರಿಕಿರಿ ಮಾಡಲಿಲ್ಲ. ಎಲ್ಲರೂ ಒಟ್ಟಿಗೆ ಸ್ಟೇಶನ್ನಿಗೆ ಹೋಗುವುದು ಅಂತಾಯಿತು. ಜೊತೆಗೆ ಮದನನನ್ನೂ ಕರೆದೊಯ್ಯುವುದು ಉಚಿತ ಅಂತ ಮ್ಯಾನೇಜರು ಹೇಳಿದರು. ‘ಅಯ್ಯೋ ಸಾರ್, ಇವನನ್ನ ಕರೆದುಕೊಂಡು ಹೋಗಿ ಹೊಸ ಕೇಸು ಶುರುವಾದ್ರೆ? ಅಲ್ಲದೆ ಈ ನನ್ನ ಮಗ ಸುಮ್ಮನೆ ಇರೋ ಪೈಕಿಯೇ ಅಲ್ಲ...’ ಎಂದ ರವೀಂದ್ರ.

ಮ್ಯಾನೇಜರು ಹೇಳಿ ಕೇಳಿ ಚಾಣಾಕ್ಷ ಬುದ್ಧಿಯವರು. ‘ಅವರೂ ಬರಲಿ ಕಣ್ರೀ ಮೊದಲಿಗೆ ಸುಮ್ಮನೆ ಕೇಸು ವಾಪಸು ತಗೊಳ್ಳೋಣ ಪೊಲೀಸರು ಕಿರಿ ಕಿರಿ ಮಾಡಿದ್ರೆ ಮಾತ್ರ ಮದನ್ ಬಗ್ಗೆ ಹೇಳಿದರಾಯಿತು. ಅನಿವಾರ್ಯ ಆದರೆ ಮಾತ್ರ ಅವರ ಹೆಸರನ್ನು ಬಳಸುವ ಚಾಯ್ಸ್ ಇರಲಿ. ಇಲ್ಲದಿದ್ದರೆ ಸುಮ್ಮನೆ ಇನ್ನೊಂದು ದಿನ ಇವರನ್ನ ಕರ್ಕೊಂಬನ್ನಿ ಅಂತ ವಿಷಯ ಮುಂದುವರೆಯುತ್ತೆ.’

‘ಸರಿ ಸರ್...’ ರವೀಂದ್ರ ಹೇಳುತ್ತಿರಲಾಗಿ ಅವನ ಮುಖದಲ್ಲಿ ಚಿಂತೆಯ ಗೆರೆಗಳು ಆಳವಾಗಿ ಮೂಡಿದ್ದನ್ನು ಮ್ಯಾನೇಜರು ಕಂಡರು. ‘ಎಲ್ಲಾ ಮುಗಿಯೋಕೆ ಬಂದಿದೆಯಲ್ಲ? ಮತ್ತೇನು ಕಷ್ಟ ನಿಮ್ಮದು?’

ಆಗ ರವೀಂದ್ರ ಅವರನ್ನು ಸೈಡಿಗೆ ಕರೆದುಕೊಂಡು ಹೋಗಿ ಕವಿತಾಳನ್ನು ಸ್ಟೇಷನ್ನಿಗೆ ಕರೆದಿರುವ ವಿಷಯ ಹೇಳಿದ. ‘ಹೌದಾ? ನೋಡೋಣ ಬನ್ನಿ... ಅಲ್ಲೇನಾಗುತ್ತೋ...’ ಅಂತ ಹೊರಟರು.

ರವೀಂದ್ರನಿಗೆ ಇದ್ದಷ್ಟು ದಿಗಿಲು ಕವಿತಾಗೆ ಇರಲಿಲ್ಲ. ಅವಳು ತನ್ನ ಎನ್ ಜಿ ಓ ಕೆಲಸದ ಕಾರಣವಾಗಿ ಬೇಕಾದಷ್ಟು ಜನ ಪೊಲೀಸರನ್ನು ಭೇಟಿಯಾಗಿದ್ದಳು. ಅವರಲ್ಲಿ ಕೆಟ್ಟವರೂ, ಒಳ್ಳೆಯವರೂ ಎಲ್ಲಾ ರೀತಿಯವರೂ ಇರುತ್ತಿದ್ದುದರಿಂದ ಈಗ ಹೋಗುತ್ತಿರುವ ಸ್ಟೇಷನ್ನಿನ ಇನ್ಸ್ ಪೆಕ್ಟರನ ಬಗ್ಗೆ ಯಾವುದೇ ಪೂರ್ವಗ್ರಹಗಳಿಲ್ಲದೆ ಹಗುರ ಮನಸ್ಸಿನಲ್ಲಿ ಹೊರಟಿದ್ದಳು.

ರವೀಂದ್ರ ಒಬ್ಬನೇ ಜಗತ್ತಿನ ಸಕಲ ದುಃಖಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಟಿದ್ದ. ಅಕಸ್ಮಾತ್ ಸ್ಟೇಷನ್ನಿನಲ್ಲಿ ಕೆಲಸ ಕೆಟ್ಟು ತನ್ನ ತಂದೆಯ ತನಕ ವಿಷಯ ಹೋದರೆ ಅಂತ ಅವನಿಗೆ ಚಿಂತೆಯಾಗಿತ್ತು. ಹಾಗೇನಾದರೂ ಆದರೆ ಮತ್ತೆ ತನ್ನನ್ನು ಮಾರ್ಕೆಟ್ಟಿಗೆ ಬಿಟ್ಟು ಮದುವೆ ಮಾಡಿಸುತ್ತಾರೆ. ಎಂಜಿನಿಯರ್ ಗಂಡು ಅಂದರೆ ವರದಕ್ಷಿಣೆ ಬೆಟ್ಟದೆತ್ತರಕ್ಕೆ ಸಿಗುತ್ತದೆ. ಅಪ್ಪ ಬಿಟ್ಟಾರೆಯೇ?

ಸ್ಟೇಷನ್ನಿಗೆ ಹೋದಾಗ ಅದೃಷ್ಟವಶಾತ್ ಇನ್ವೆಸ್ಟಿಗೇಷನ್ ಮಾಡಿದ ಇನ್‌ಸ್ಪೆಕ್ಟರು ವರ್ಗವಾಗಿ ಆವತ್ತೇ ಹೋಗಿದ್ದರು. ಹೂಸಬರು ಬಂದಿದ್ದರು. ಬರೀ ಕಂಪ್ಲೇಂಟು ವಾಪಸ್ ತೆಗೆದುಕೊಳ್ಳಕ್ಕೆ ಇಷ್ಟು ಜನ ಯಾಕೆ ಎನ್ನುವ ಅಚ್ಚರಿಯಲ್ಲಿ ನೋಡಿದರು. ಯಾವ ಅಡೆತಡೆಯೂ ಇಲ್ಲದೆ ಕೆಲಸ ಮುಗಿಯಿತು. ಕವಿತಾ ರವೀಂದ್ರನಿಗೆ ಹೇಳಿದಳು: ‘ಸುಮ್ಸುಮ್ನೆ ಹೆದರಿಕೊಂಡೆಯಲ್ಲಾ ಈಗ ನೋಡು ನಿನ್ನ ಎಲ್ಲಾ ಹೆದರಿಕೆಗಳೂ ಕರಗಿ ಹೋದವು...’

‘ನನ್ ಕಷ್ಟ ನನಗೆ ಕಣೆ... ಹೆಣ್ ಮಕ್ಕಳಿಗೇನು ಗೊತ್ತಾಗುತ್ತೆ ನಮ್ಮ ಸಮಸ್ಯೆ...’ ಮದನ ಇದನ್ನು ಕೇಳಿಸಿಕೊಂಡು ಧಾರಾಳವಾಗಿ ಅಪಾರ್ಥ ಮಾಡಿಕೊಂಡು ನಗಲು ಶುರು ಮಾಡಿದ.

‘ಈ ನನ್ ಮಗನೇ ಕಳ್ಳ ನಮ್ಮನೇಲಿ ಸಾಮಾನು ಕದ್ದಿದ್ದು ಅಂತ ಹೇಳ್ಬೇಕಿತ್ತು... ಜೈಲಿಗೆ ಹಾಕ್ಕೊಂಡು ಸಾಯಿಸ್ಲಿ ಇವನನ್ನ...’ ಅಂತ ಹಲ್ಲು ಕಚ್ಚಿ ಹೇಳಿದ ರವೀಂದ್ರ. ಎಲ್ಲರೂ ನಗುತ್ತಾ ಹೊರಗೆ ಹೋಗುತ್ತಿದ್ದಾಗ ಹಳೇ ಇನ್‌ಸ್ಪೆಕ್ಟರು ಒಳಗೆ ಬರುತ್ತಿರುವುದು ಕಾಣಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.