ADVERTISEMENT

‘ಅಣ’ ಎನ್ನುವ ಸರ್ವಾಂತರ್ಯಾಮಿ ದೇವಕಣ

ಪ್ರೀತಿ ನಾಗರಾಜ
Published 20 ಏಪ್ರಿಲ್ 2016, 19:52 IST
Last Updated 20 ಏಪ್ರಿಲ್ 2016, 19:52 IST

ಪೀಕೋಸ್ ಪಬ್ಬಿನಲ್ಲಿ ಬೆನ್ನ ಹಿಂದಿಂದ ಬಂದ ‘ಅಣ’ ಮಾತಾಡಿಸಿದಾಗ ವಿಜಿಗೆ ಒಂದು ನಿಮಿಷ ದಿಗ್ಭ್ರಮೆಯಾಯಿತು. ತಾನು ಯಾಕಾದರೂ ಅವನ ಕಣ್ಣಿಗೆ ಕಂಡೆನೋ ಎಂದು ಹಳಹಳಿಕೆಯಾಯಿತು.

‘ಏನಮ್ಮ ಪಾಪಿ ಇಲ್ಲಿ?’ ಅಂತ ‘ಅಣ’ ಕೇಳಿದ ಪ್ರಶ್ನೆ ಅವಳ ಭದ್ರ ನೆಲೆಗಟ್ಟನ್ನು ಯಾಕೋ ಅಲ್ಲಾಡಿಸಿ ಪ್ರಶ್ನೆ ಮಾಡಿದಂತಿತ್ತು.
ತನ್ನ ಮುಗ್ಧತೆ ಸಾಬೀತುಪಡಿಸಲೆಂದೇನೋ ಎನ್ನುವಂತೆ ‘ಬಾರಣಾ...ಕುಂತ್ಕಾ’ ಎಂದು ಲಗುಬಗೆಯಿಂದ ತನ್ನ ಟೇಬಲ್ಲಿಗೆ ಕರೆದಳು. ಇದಕ್ಕೆ ಪ್ರತಿಕ್ರಿಯೆಯಾಗಿ ಇಬ್ಬರೂ ಸ್ನೇಹಿತೆಯರು ಕಣ್ಣಲ್ಲೇ ಕೆಂಡ ಸುರಿಸಿದರು. ಆದರೇನಂತೆ ‘ಅಣ’ ಆ ಹುಡುಗಿಯರನ್ನೇ ‘ಚೆಕ್ ಔಟ್’ ಮಾಡುತ್ತಿದ್ದ.

ಅಣ ಎಂದು ಆಡುಭಾಷೆಯಲ್ಲಿ ಕರೆಸಿಕೊಳ್ಳುವ ಈ ಒಂದು ಸಂಬಂಧ ಗ್ರಾಂಥಿಕ ಭಾಷೆಯಲ್ಲಿ ‘ಅಣ್ಣ’ ಎಂದಾಗುತ್ತದೆ. ಸಂಬಂಧದ ಅರ್ಥದಲ್ಲಿ ಇದು ಅಣ್ಣ ತಂಗಿಯ ನೆಲೆಯಲ್ಲಿ ಪರಿಭಾವಿಸಬೇಕಾದ ಸೂತ್ರವಾದರೂ ಅಣ್ಣನೆನಿಸಿಕೊಂಡವನು ‘ಅಣ್ಣನೇ’ ಆಗಿರಬೇಕು ಎನ್ನುವ ಯಾವ ಬಂಧವೂ ಇಲ್ಲ. ಅಣ್ಣ ಎನ್ನುವ ಪದ ಅತೀ ಸುಲಭಕ್ಕೂ ಸುರಕ್ಷತೆಗೂ ಒದಗಿ ಬರುವ ಪದ.

ಅದರಂಥಾ ಸೇಫ್ ಪದ ಇನ್ನೊಂದಿಲ್ಲ ಅನ್ನಿಸುತ್ತೆ. ಉದಾಹರಣೆಗೆ ‘ಮಾಮ’ ಅಂದರೆ ಸಂಬಂಧವನ್ನು ಎತ್ತ ಬೇಕಾದರೂ ಅನುಕೂಲಕ್ಕೆ ತಕ್ಕಂತೆ ತಿರುಗಿಸಬಹುದು ಎಂದು ಓಪನ್ ಇನ್ವಿಟೇಷನ್ ಕೊಟ್ಟಂತೆ.

ಚಿಕ್ಕಪ್ಪ ಅಲಿಯಾಸ್ ಅಂಕಲ್ ಎಂದರೆ ಒದೆ ಬೀಳ್ತವೆ. ಊರ ಮಾನಸಿಕ ಪರಿಧಿಯಲ್ಲಿ ಇನ್ನೂ ಇಂಗ್ಲೀಷು ಇರಲಿಲ್ಲವಾದ್ದರಿಂದ ಅಂಕಲ್ಲು ಪಿಂಕಲ್ಲು ಯಾವೂ ಚಲಾವಣೆಯಲ್ಲಿ ಇರಲಿಲ್ಲ. ಇದ್ದರೂ ಅಪರೂಪಕ್ಕೆ ಬರುವ ತಂದೆಯ ಸ್ನೇಹಿತರಿಗೆ ಬಳಸಬಹುದಾದ ಪದವಾಗಿತ್ತದು.

ಆದರೆ ಅಣ್ಣ ಅಂದಾಕ್ಷಣಕ್ಕೆ ಆತನಿಗೂ ಇವಳು ‘ತಂಗಿ’ ಎಂಬ ಭಾವನೆ ಬರಬೇಕಲ್ಲ? ಹರೆಯದ ಅವಶ್ಯಕತೆಗಳ ಹಾರ್ಮೋನುಗಳು ಆಲೋಚನಾಕ್ರಮವನ್ನು ಏರುಪೇರು ಮಾಡುತ್ತಿರುವಾಗ ಚಿಕ್ಕ ವಯಸ್ಸಿನ ಹುಡುಗಿಯರು ‘ಅಣ’ ಅಂದರೆ ಆತನಾದರೂ ಯಾಕೆ ಆ ಪದವನ್ನೂ, ಅದರ ಜವಾಬ್ದಾರಿಯನ್ನೂ, ಅದು ತರುವ ನೈತಿಕ ಹೊಣೆಗಾರಿಕೆಯನ್ನೂ ಸೀರಿಯಸ್ಸಾಗಿ ಹೊತ್ತುಕೊಂಡು ತಿರುಗಬೇಕು?

ಅಣ ತನ್ನ ಸ್ನೇಹಿತೆಯರನ್ನು ಕೂಲಂಕಷವಾಗಿ ಪರಿಶೀಲಿಸುವುದನ್ನು ಗಮನಿಸಿದ ವಿಜಿಗೆ ಅಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡುವುದೇ ಸೂಕ್ತ ಎನ್ನಿಸಿ ಸ್ನೇಹಿತೆಯರನ್ನು ‘ಫಿನಿಶ್ ಫಾಸ್ಟ್’ ಎಂದು ತಾಕೀತು ಮಾಡತೊಡಗಿದಳು. ಚಿತ್ರಾ ತನಗೆ ಮತ್ತೆ ಬಿಯರ್ ಬೇಡವೆಂದಳು. ಸೂಸನ್ ಮಾತ್ರ ಯಾವ ಚಿಂತೆಯೂ ಇಲ್ಲದೆ ತನಗೆ ಬೇಕಾದಷ್ಟು ಬಿಯರ್ ತರಿಸಿಕೊಂಡು ಆರಾಮಾಗಿ ಕುಡಿಯುತ್ತಿದ್ದಳು.

ಒಳಗೆ ಮ್ಯೂಸಿಕ್ಕು ಹೆಚ್ಚಿದಂತೆಲ್ಲ ವಿಜಿಗೆ ಕಷ್ಟವಾಗುತ್ತಿತ್ತು. ಅಣ ಆಡುತ್ತಿದ್ದ ಏನೇನೋ ಮಾತುಗಳು ತನಗೆ ಕೇಳದಾಗಿ ಕಡೆಗೆ ಅವನು ಹೊರಗೆ ಬಾ ಎನ್ನುವಂತೆ ಸನ್ನೆ ಮಾಡಿದ. ಹತ್ತು ನಿಮಿಷದಲ್ಲಿ ವಾಪಸ್‌ ಬರುತ್ತೇನೆಂದು ಸ್ನೇಹಿತೆಯರಿಗೆ ಹೇಳಿ ಹೊರಗೆ ಹೋದಳು. ಬೇಸಿಗೆಯ ಹಿತವಾದ ಸಂಜೆ ಗಾಳಿ ಚರ್ಮವನ್ನು ತಾಕಿದ ಕೂಡಲೆ ಹೊರ ಜಗತ್ತು ತನ್ನ ಇರವನ್ನು ಸಾರಿ ಹೇಳಿತು.

‘ಏನಮ? ಹಗಲಲ್ಲ ಬರ್ತೀಯೇನ್ ಇಲ್ಲಿಗೆ?’ ಅಣ ಕೇಳಿದ. ಅವನ ಧ್ವನಿ ಪರಿಚಯದ ನೆಲೆಯಿಂದ ಹಕ್ಕಿನ ಕಡೆಗೆ ಹೊರಟದ್ದನ್ನು ವಿಜಿ ಗಮನಿಸಿದಳು. ಒಂದೇ ಗ್ಲಾಸು ಬಿಯರು ಕುಡಿದದ್ದು. ಅಷ್ಟಕ್ಕೇ ಚರಂಡಿಯಲ್ಲಿ ಬೀಳುವಷ್ಟು ಕುಡಿದಂತೇನು? ಬಿಯರು ಕುಡಿದದ್ದನ್ನು ನೋಡಿದ ಮಾತ್ರಕ್ಕೆ ಸಂಬಂಧವಿಲ್ಲದ ಇವನಿಗೆ ಊರ ಹುಡುಗಿಯ ಮೇಲೆ ಚಲಾಯಿಸಲು ಯಾವ ಹಕ್ಕು ಸಿಕ್ಕಿಬಿಟ್ಟಿತು?

ಹಾಗೆ ನೋಡಿದರೆ ಈ ಅಣ ಜೀವನೋಪಾಯಕ್ಕೆ ಯಾವ ಘನಂದಾರಿ ಕೆಲಸ ಮಾಡುತ್ತಿದ್ದ ಎನ್ನುವುದೂ ಅವಳಿಗೆ ತಿಳಿದಿರಲಿಲ್ಲ. ಅವನ ಹೆಸರು ಪ್ರದೀಪ ಎನ್ನುವುದೋ ಅಥವಾ ಪ್ರತಾಪ ಅಂತಲೋ ಅವಳಿಗೆ ಸ್ಪಷ್ಟವಾಗಿರಲಿಲ್ಲ. ಅವನದಷ್ಟೇ ಏನು, ಊರಲ್ಲಿದ್ದ ಒಂದು ಪೀಳಿಗೆಗೆ ಸೇರಿದ ಎಲ್ಲರ ಹೆಸರುಗಳೂ ರೂಪಾಂತರಗೊಂಡು ಎರಡಕ್ಷರಕ್ಕೆ ಇಳಿದು ಎಷ್ಟರಮಟ್ಟಿಗೆ ವಿರೂಪಗೊಂಡಿದ್ದವೆಂದರೆ ಆ ಹೆಸರುಗಳನ್ನು ಹಿಡಿದು ಮೂಲ ಹೆಸರನ್ನು ಊಹಿಸುವುದೂ ಸಾಧ್ಯವಿರಲಿಲ್ಲ.

ಉದಾಹರಣೆಗೆ ಸದರಿ ‘ಅಣ’ ಪತ್ತಿ ಎಂಬ ಹೆಸರಿನಿಂದ ಊರಿನಲ್ಲಿ ಗುರುತಿಸಲ್ಪಡುತ್ತಿದ್ದ. ಆ ಎರಡು ಅಕ್ಷರಗಳಿಂದ ಅವನ ಮೂಲ ಹೆಸರನ್ನು ಕಂಡುಹಿಡಿಯುವುದಾದರೂ ಹೇಗೆ?
‘ಇಲ್ಲಣ ಇಲ್ಲಿಗೆ ಈವತ್ತೇ ಪಸ್ಟ್ ಟೈಮ್ ಬಂದಿದ್ದು’
‘ಆಬಾಬಾಬಾಬಾಬ! ಸುಳ್ಳ್ ಹೆಂಗ್ ಹೇಳ್ತೀಯಲ್ಲವಾ? ಹುಡುಗ್ರೂ ಕುಡಿಯಂಗಿಲ್ಲ ಆನಾಡಿ ಕುಡಿಯಾಕತ್ತಿದ್ದೀ?’
ಇವನಿಗೆ ಬಾಯಿಗೆ ಬಂದ ಹಾಗೆ ಬೈದು ಬಿಡಬೇಕು ಎನ್ನುವ ಸಿಟ್ಟು ಹೊಟ್ಟೆಯಿಂದ ರುಮ್ಮನೆ ಮೇಲಕ್ಕೆ ಎದ್ದಾಗಲೆಲ್ಲಾ ಗಂಟಲಿನಲ್ಲೇ ಅದನ್ನು ತಡೆಯುವ ಶತಪ್ರಯತ್ನ ಮಾಡುತ್ತಿದ್ದಳು.

‘ಅಪಾ! ಸುಳ್ಳೇಳಗಿಂಲ್ಲ್ ನಾನು. ನೀ ಯಾವೂರ ದೊರೆ ಅಂತ ನಿನ್ ಮುಂದ ಸುಳ್ಳ್ ಏಳಬಕು?’
‘ಅಲ್ಲೇ ತಂಗೀ, ಪಿಚರಿಂದ ಸುರಿಯಾಕ ಬಿಯರ್ ಗ್ಲಾಸ್ ವಾಲಿಸಿ ಹೆಂಗ್ ಹಿಡಕಾಬಕು ಅನ್ನಾದೂ ಗೊತ್ತೈತಿ ನಿಂಗ. ನಮ್ ಹುಡುಗ್ರೇ ಅದನ್ನ ಕಲಿಯಾಕ ವರ್ಷ ತಗಂಡಾರ ಅಂತೀನಿ!’
‘ಹೌದಪ. ನಿಮ್ ಹುಡುಗ್ರು ತಲಿಯಾಗ ಶಗಣಿ ಇಟ್ಗಂಡಿದ್ರ ನಾವೇನ ಮಾಡಾಕಾಕತೆ? ಮೂರ್ ಸಾರಿ ನೋಡಿಕ್ಯ್ಂಡ್ರ ನಾಕನೇ ಸಾರಿ ಬಂದೇ ಬರ್ತತಪ, ಅದ್ರಾಗ್ ಏನ್ ದೊಡ್ ಮಾತು?’ ಎಂದು ಹೇಳಿದಳು.

ಊರ ಹುಡುಗಿ ಅಂದ್ರೆ ನಮ್ಮವರ ಪ್ರಾಪರ್ಟಿ ಅಥವಾ ನಮ್ಮದೇ ಆಸ್ತಿ ಎನ್ನುವ ಮನೋಭಾವ ಈವತ್ತು ನಿನ್ನೆಯದಲ್ಲ ಬಿಡಿ. ಅದು ಮಾಯವಾಗಿ ಮನುಷ್ಯತ್ವ ಬರಬೇಕೂಂದರೆ ಮಾನವಕುಲಕ್ಕೆ ಇನ್ನೂ ಎರಡು ಬಾರಿ ಪ್ರಳಯ ಕಳೆದು ಮಾನವ ಸಂಕುಲ ಮತ್ತೆ ಭೂಮಿ ಮೇಲೆ ಅವತರಿಸಿದರೆ ಏನಾದರೂ ಬದಲಾವಣೆ ಆಗುತ್ತೇನೋ.
‘ಮಾತೂ ಭರ್ಜರಿ ಕಲ್ತೀ ಅಲ್ಲೇನ್ ಮತ್ತ?’ ಅವನೂ ಬಿಡಲಿಲ್ಲ.

‘ಹೂನೋ ಮಾರಾಯಾ. ಮಾತ್ ಕಲ್ತೀನಿ, ಕತಿ ಕಲ್ತೀನಿ, ಬಿಯರು ಕುಡಿಯಾದ್ ಕಲ್ತು ಯಾವ್ದೋ ಕಾಲ ಆತಪ. ಅಷ್ಟೇ ಅಲ್ಲೋ ಅಣಾ, ಕೆಲಸ ಕಲ್ತೀನಿ. ನನ್ ಅನ್ನ ನಾನೇ ದುಡ್ಕಣಾದ್ ಕಲ್ತೀನಿ. ಆಮ್ಯಾಲೆ ಇದೂ ತಿಳ್ಕ. ಸ್ಟವ್ ಹಚ್ಚಿ ಅಡಿಗಿ ಮಾಡದೂ ನನಿಗೆ ಗೊತ್ತು. ಎಲ್ಲಾ ಕಲ್ತೀನಪ್ಪಾ’
‘ಮತ್ತೇನ್ನ ಕಲ್ತೀಯವಾ?’ ಎಂದು ಕೇಳಿದ. ಪಬ್ಬಿನ ಹೊರಗಿದ್ದ ಮಂದ ಬೆಳಕಿನಲ್ಲಿ ಅವನು ಕಣ್ಣು ಮಿಟುಕಿಸಿದನೋ ಅಥವಾ ಅವಳಿಗೇ ಹಾಗನ್ನಿಸಿತೋ ಗೊತ್ತಾಗಲಿಲ್ಲ. ಆಮೇಲಿನ ಮಾತೆಲ್ಲ ಬರೀ ಉಪಯೋಗವಿಲ್ಲದ್ದು. ಮಾತು ಸಂಬಂಧದ ಅನ್ವರ್ಥ ಮೀರಿ ಅನರ್ಥದತ್ತ ಹೊರಳುತ್ತಿರುವುದು ಸ್ಪಷ್ಟವಾಗಿ ಅನುಭವಕ್ಕೆ ಬಂತು.

ಪತ್ತಿ ಎಂಬುವ ಈ ಮನುಷ್ಯ ದಾವಣಗೆರೆಯ ಪ್ರಭಾವೀ ರಾಜಕಾರಣಿಯೊಬ್ಬರಿಗೆ ಬಹಳ ಹತ್ತಿರವಾಗಿದ್ದ. ಆ ರಾಜಕಾರಣಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಕ್ಕೆ ಹೆಸರುವಾಸಿ ಆಗಿದ್ದವರು, ಅವರ ಇರವು ಊರಿಗೆ ಸೂರ್ಯನಂತೆ ಅಂತ ಹೇಳಿದರೂ ಉತ್ಪ್ರೇಕ್ಷೆಯಾಗಲಾರದು. ಇಡೀ ತಾರಾಮಂಡಲವೇ ‘ದೊಡ್ಡವರ’ ಸುತ್ತ ಸುತ್ತುತ್ತಿತ್ತು. ಬಹಳ ಜನಬಳಕೆ ಮನುಷ್ಯ. ಹಾಗಾಗಿ ದಿನಬೆಳಗಾದರೆ ಸುತ್ತಲೂ ಜನ ಇರುತ್ತಿದ್ದರು. ಅವರ ಮಾತು ಬಹಳ ನಡೆಯುತ್ತಿದ್ದುದರಿಂದ ಜನರೂ ಅವರನ್ನು ಅದಕು ಇದಕು ಎದಕೂ ಅವಲಂಬಿಸಿಕೊಂಡಿದ್ದರು.

ಸಮಸ್ಯೆ ಮೂಲ ಇರುತ್ತಿದ್ದುದೇ ಅಲ್ಲಿ. ಅವರು ಜನರನ್ನು ಹತ್ತಿರ ಸೇರಿಸಿಕೊಳ್ಳುವಲ್ಲಿ ಯಾವ ಭೇದವನ್ನೂ ಮಾಡುತ್ತಿರಲಿಲ್ಲವೆನ್ನಿ. ಆದರೆ ಹತ್ತಿರ ಆದವರು ಆ ‘ಕನೆಕ್ಷನ್’ ಅನ್ನು ಕ್ಷುಲ್ಲಕ ರೀತಿ ಬಳಸಿಕೊಳ್ಳುತ್ತಿದ್ದರು. ಪತ್ತಿಯೂ ಹಂಗೇ. ಊರ ದೊಡ್ಡವರ ಮಗನಿಗೆ ಹತ್ತಿರವಾಗಿದ್ದ. ಮಗ ತಂದೆಗಿಂತ ಬಹಳ ‘ಪಾಲಿಷ್ಡ್’ ಇದ್ದರೂ ಜನಬಳಕೆಯಲ್ಲೇ ಥೇಟ್ ತಂದೆಯೇ.

ಧಣಿ-ಶಿಷ್ಯರ ಸಂಬಂಧಗಳಿಗೆ ಹೆಚ್ಚು ಆಯಾಮ ಇರುತ್ತಿರಲಿಲ್ಲ. ಏಕೆಂದರೆ ಜಗತ್ತಿನ ಬಹುತೇಕ ಅಸ್ಮಿತೆ ಇರುವುದೇ ಜಮೀನ್ದಾರಿ ಪದ್ಧತಿಯನ್ನು ಅನುಕರಿಸುವ ಮಾದರಿ ಸೃಷ್ಟಿಸುವಲ್ಲಿ. ಕ್ಯಾಪಿಟಲಿಸಮ್ಮಿನ ಬೇರೂ ಅಲ್ಲೇ ತಾನೇ ಇರುವುದು?

ಜನ ಮಾನಸಿಕ ಗೇಣಿದಾರಿಕೆಯನ್ನು ಬಹಳ ಸಹಜವೆಂಬಂತೆ ಒಪ್ಪಿಕೊಳ್ಳಲು ಇದೇ ಕಾರಣ. ಹಾಗೆ ನೋಡಿದರೆ ದಾವಣಗೆರೆ ಎಂಬ ಊರು ತನ್ನ ಇತಿಹಾಸದಲ್ಲಿ ಅಡಗಿಸಿಟ್ಟುಕೊಂಡ ವಿಪರ್ಯಾಸಗಳೆಷ್ಟೋ.

ಪಂಪಾಪತಿ ಎನ್ನುವ ಕಾರ್ಮಿಕ ಸಂಘಟಕರ ನೇತೃತ್ವದಲ್ಲಿ ಊರು ಕಂಡ ಹೋರಾಟಗಳು, ಬಡವರು ಉಳ್ಳವರಿಗೆ ಕಲಿಸಿದ ಪಾಠಗಳು, ಕಾರ್ಮಿಕರು ಉದ್ಧಾರ ಮಾಡಿದ ಮಾಲೀಕರು, ಅಂತೆಯೇ ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿ ಅಸ್ತಿತ್ವ ಕಳೆದುಕೊಂಡ ದಾವಣಗೆರೆ ಕಾಟನ್ ಮಿಲ್ಲಿನಂಥಾ ದೈತ್ಯ ಕಥೆಗಳು – ಒಂದೇ ಎರಡೇ!

ಆಮೇಲೆ ಆದ ಬೆಳವಣಿಗೆ ಸಂಪೂರ್ಣ ವಿರುದ್ಧ ದಿಕ್ಕಿಗೆ ಹೋಯಿತು. ಮಿಲ್ಲುಗಳು ಮುಚ್ಚುತ್ತಿರುವ ಸಮಯಕ್ಕೆ ಕಾಕತಾಳೀಯವೆಂಬಂತೆ ಕೆಲವರ ದೂರದೃಷ್ಟಿ ಪರಿಣಾಮದಿಂದಾಗಿ ಬರೀ ದೇಣಿಗೆಯಿಂದಲೇ ಶಿಕ್ಷಣ ಸಂಸ್ಥೆಗಳು ಬೆಳೆದವು. ಮೆಡಿಕಲ್ ಎಂಜಿನಿಯರಿಂಗ್ ಕಾಲೇಜು ಎದ್ದ ಹಾಗೇ ದುಡ್ಡೂ ಹರಿಯಲಾರಂಭಿಸಿತು.

ಧಣಿಗಳು ದೀಪವಾದರು, ಊರ ಕೇಂದ್ರವಾದರು. ಕೆಳಗೆ ಕತ್ತಲೆಯಿದ್ದರೂ ದೂರಕ್ಕೆ ಬೆಳಕು ಚೆಲ್ಲುವುದಕ್ಕಂತೂ ಮೋಸವಿರಲಿಲ್ಲ. ಪತ್ತಿ ದೊಡ್ಡವರ ಕೆಳಗಿದ್ದ ಕತ್ತಲೆಯ ಉಂಗುರದಲ್ಲಿ ಇದ್ದವನು. ಹಾಗಾಗಿ ಅವನಿಗೆ ಧಣಿಗೆ ‘ಬಹಳ ಹತ್ತಿರದಲ್ಲಿದ್ದೇನೆ’ ಎನ್ನುವ ಕಾರಣಕ್ಕೇ ತನ್ನ ಜೀವನ ಪಾವನವಾಯಿತೆಂಬ ಭ್ರಮೆ ಹುಟ್ಟಿತ್ತು.

ಅದೊಂದು ಕನೆಕ್ಷನ್ನಿನಿಂದ ತಾನು ತನ್ನ ಜೀವನವನ್ನೂ, ತನ್ನ ಸಂಬಂಧಗಳನ್ನೂ, ತನ್ನ ಆಚಾರ-ವಿಚಾರಗಳನ್ನೂ, ಮಾಡಬೇಕೆಂದಿರುವ ಅನಾಚಾರಗಳನ್ನೂ ಸಕಲಿಷ್ಟು ತೊಂದರೆಗಳನ್ನೂ ನಿವಾರಿಸಿಕೊಳ್ಳಬಹುದು ಎನ್ನುವುದು ಆವನ ನಂಬಿಕೆ. ಹಾಗೆ ನಂಬಿದವರು ಆ ಊರಲ್ಲಿ ಕೇರಿಗೆ ನೂರು ಜನ ಸಿಗುತ್ತಿದ್ದರು.

ಚಿಕ್ಕ ಹುಡುಗನೇನಲ್ಲ ಪತ್ತಿ. ಮದುವೆಯಾಗಿ ಮೂರು ವರ್ಷವಾಗಿತ್ತು. ಹೆಂಡತಿ ಹೆರುವುದಕ್ಕೆ ಅಂತ ಬೆಂಗಳೂರಿನ ತನ್ನ ತವರು ಮನೆಗೆ ಬಂದಿದ್ದಳು. ಅವಳನ್ನು ಬಿಡಲು ಬಂದ ಗಂಡಸು ತಾನೇ ಹೊಟ್ಟೆ ಹೊತ್ತು ತಿರುಗುತ್ತಿರುವವನ ಹಾಗೆ ಸುಸ್ತಾಗಿ ಸಂಜೆ ಬಿಯರು ಕುಡಿಯಲಿಕ್ಕಂತ ತನ್ನ ಬಾಮೈದನ ಜೊತೆ ನಾಕು ಜನರ ದಂಡಿನೊಂದಿಗೆ ಪಬ್ಬಿಗೆ ಬಂದಿದ್ದ.

ಅಲ್ಲಿ ಅಚಾನಕ್ಕಾಗಿ ವಿಜಿ ಇವನಿಗೆ ಕಂಡು ಅವನಲ್ಲಿ ಪಾಳೇಗಾರಿಕೆ ವಾಸನೆ ಇದ್ದಕ್ಕಿದ್ದಂತೆ ಜಾಗೃತವಾಗಿಬಿಟ್ಟಿತ್ತು. ಅಲ್ಲದೆ ಬಾಮೈದನ ಮುಂದೆ ತಾನೂ ಬಹಳ ‘ಸೋಷಿಯಲ್’ ಅಂತ ತೋರಿಸಿಕೊಳ್ಳುವ ಹುಂಬತನವೇನೋ. ಅದಕ್ಕಾಗಿಯೇ ಭುಜ ಮುಟ್ಟಿ ಮಾತನಾಡಿಸಿದ್ದು.

ಮೊದಮೊದಲಿಗೆ ಅಧೀರಳಾದರೂ ವಿಜಿಗೆ ಎದುರಿಗೆ ನಿಂತು ‘ಮತ್ತೇನ ಕಲ್ತೀಯವಾ’ ಅಂತ ಕೇಳುವವನನ್ನ ಭಕ್ತಕುಂಬಾರ ಸಿನಿಮಾದಲ್ಲಿ ರಾಜ್ ಕುಮಾರ್ ಮಣ್ಣನ್ನು ತುಳಿತುಳಿದಂತೆ ಕಾಲಡಿಯಲ್ಲಿ ಹಾಕಿಕೊಂಡು ಹದ ಮಾಡಬೇಕೆಂಬ ಸಿಟ್ಟು ಒಳಗೆ ಮರಿ ಹಾಕತೊಡಗಿತು.

‘ನನ್ ವಿಷ್ಯ ಹಂಗಿರ್ಲಿ. ನಿನ್ ಕತಿ ಹೇಳಪ. ನಿಮ್ಮಪ್ಪುಂದು ಅಂಗ್ಡಿ ಇತ್ತಲಾ? ಅಲ್ಲಿಗೆ ಇನ್ನೂ ಹೋಗಾಕತ್ತೀಯೇನ್?’ ಅಂದಳು ವಿಜಿ. ವ್ಯವಹಾರದ ಕಡೆ ಮಾತನ್ನು ತಿರುಗಿಸಿದರೆ, ಅವನ ಧಾಟಿ ಬದಲಾಗಬಹುದು ಎನ್ನುವ ಆಲೋಚನೆ ಅವಳದ್ದು.

‘ಇಲ್ಲವಾ. ನಮ್ಮಪ್ಪ ನನ್ ನಂಬಾಂಗಿಲ್ಲ. ಸುಳ್ಳೆ ರೊಕ್ಕ ಹೋದುವು, ಪತ್ತಿ ರೊಕ್ಕ ಕದೀತಾನ ಅಂತೆಲ್ಲ ಮಾತಾಡ್ತು. ಅದಕ್ಕ ಹೋಗಲೆ ನಿಮ್ಮೌನ ನಿನ್ ಅಂಗ್ಡೀಗ್ ಯಾರ್ ಬರ್ತಾರ್ ಅಂತ ಹೋಗದ ಬಿಟ್ಟೆ’ ಅಂದ. ವಿಜಿ ಮೌನವಾಗಿದ್ದಳು.

ಹುಡುಗಿಯರ ಬಗ್ಗೆ ಅವನ ಖಯಾಲಿ ಅವಳಿಗೆ ಗೊತ್ತಿದ್ದ ಮಾತೇ. ಅದೇ ಕಾರಣಕ್ಕಾಗಿ ದುಡ್ಡು ಕದಿಯುತ್ತಿದ್ದ ಅಂತ ಅವನ ಅಮ್ಮನೇ ಮಾತಾಡುತ್ತಿದ್ದರು. ಈ ವಿಚಾರಗಳು ಮನಸ್ಸಿನಲ್ಲಿ ಸುಳಿದು ಹೋಗುವಾಗ ಮುಂದುವರೆದು ಮತ್ತೆ ಅವನೇ ಮಾತಾಡಿದ.
‘ಈಗ ಅಣ್ಣಾರ ಹತ್ರ ಅದೀನಿ. ನಾನು ಇಲ್ಲ ಅಂದ್ರ್ ಆಗಂಗಿಲ್ಲ ಅವ್ರಿಗೆ’
‘ಹೌದಾ? ಚಲೋ ಆತು ಬಿಡು’
‘ದಿನಾ ಬೆಳಿಗ್ಗೆ ಎದ್ ಗಳಿಗ್ಗೆ ನಾನ್ ಕಾಣಬಕು ಇಲ್ಲಾಂದ್ರ ಫೋನ್ ಹಚ್ಚೇ ಬಿಡ್ತಾರ’
‘ಬೆಳ್ ಬೆಳಿಗ್ಗೆನೇ ಎದ್ದ್ ಹೋಕ್ಕೀಯಾ? ಮನಿಯಾನ ಕೆಲ್ಸ?’
‘ಅಯ್ಯ ಅವ್ರ್ ಬೆಳಿಗ್ಗೆ ಏಳ ಟೈಮು ಗೊತ್ತಿಲ್ಲೇನ್ ನಿನಗ? ಅವ್ರ್ ಏಳಾ ಹೊತ್ತಿಗೆ ಹತ್ತ್ ಗಂಟೆ ಮ್ಯಾಲ ಆಗಿರ್ತತಿ’
‘ಹೌದಲಾ? ಮರ್ತು ಹೋಗಿತ್ತ್ ನೋಡು’
‘ವೂ... ಮತ್ತ! ನಾನೇ ಬ್ರಸ್ಶಿಗೆ ಪೇಷ್ಟ್ ಹಾಕಿಡದು. ಇಲ್ಲಾಂದ್ರ ಹಂಗೇ ಹಲ್ಲ ಉಜ್ಜಿಕ್ಯಂಬಿಡ್ತರ. ಆಮ್ಯಾಲ ಅಕ್ಕಾರು ನನಿಗ್ ಬಯ್ತರ’
ತಾನು ಬ್ರಶಿಗೆ ಪೇಸ್ಟು ಹಾಕಿಡುವಷ್ಟು ಮೂರ್ಖನೆಂದೂ, ತಾನು ಹಾಕದಿದ್ದರೆ ಹಂಗೇ ಹಲ್ಲು ಉಜ್ಜಿಕೊಂಡುಬಿಡುವಷ್ಟು ತನ್ನ ಧಣಿ ಮುಗ್ಧನೆಂದೂ ಡಂಗುರ ಬಾರಿಸುತ್ತಿರುವ ಈ ಭಾವೀ ರಾಜಕಾರಣಿ ತಲೆಯಲ್ಲಿ ಗೊಬ್ಬರವೂ ಖಾಲಿಯಾಗಿ ಬರೀ ಗಾಳಿ ತುಂಬಿತ್ತು.

ಬುದ್ಧಿ ಇಲ್ಲದಿದ್ದರೇನು? ಗಂಡೆಂಬ ಅಹಂಗೆ ಎಂದಾದರೂ ಶಾರ್ಟೇಜ್ ಇರುತ್ತಾ?. ಅವನು ಸುಮ್ಮನೆ ಹೊರಟಿದ್ದರೆ ಸರಿ ಇತ್ತು. ಹೊರಡುವ ಮುನ್ನ ಬಿದ್ದೋಗೋ ಮಾತು ಎದ್ದೋಗಲಿ ಎನ್ನುವಂತೆ ‘ಸರಿ. ಹೊಂಡು ಮತ್ತ. ನಾವೂ ಯಾವಾಗರೆ ಪಾರ್ಟಿ ಮಾಡ್ತವಿ. ಬಾರವಾ ಪಾಪಿ’
ಗರ ಹೊಡೆದಂತೆ ನಿಂತಳು ವಿಜಿ.

‘ಏನಂದ್ಯಣ?’
‘ನಾವೂ ಯಾವಾಗರೆ ಬೀರ್ ಪಾರ್ಟಿ ಮಾಡ್ತವಿ. ಕರೀತನಿ, ಬಾ!’ ಎಂದು ಮೆಲುದನಿಯಲ್ಲಿ ಹೇಳಿದ.
‘ನಾ ಯಾಕ ಬರ್ಬೇಕಪ?’
‘ನಮ್ಮೂರ ಹುಡಿಗಿ ಅಂತ ಕರುದ್ನವ್ವ’
‘ನಿನ್ ಹೇಣ್ತಿ ಬರ್ತಾಳೇನಪ?’
‘ಇಲ್ಲ ಬರೇ ಹುಡುಗ್ರು’
‘ನಿಮ್ ಹೆಂಡ್ರಾದ್ರ ಮರ್ಯಾದಸ್ತರು, ನಾವು ಬಿಟ್ಟಿ ಬಿದ್ದೀವೇನಪಾ? ನಾಚಿಗಿ ಆಗಂಗಿಲ್ಲ ನಿನಗ?’
‘ಹೋಗೇ ತಾಯಿ. ಕುಡಿಯಾದೇ ಹೌದಂತೆ. ಮತ್ತ ಅದರಾಗ್ ಸೋಗ್ ಬ್ಯಾರೆ ಮಾಡ್ತೀಯೇನ?’
ಬಿಯರಿನ ಮಹಾತ್ಮೆಯೋ ಅಥವಾ ಬೇರೆ ಊರಲ್ಲಿ ನಿಂತು ತನ್ನ ಅನ್ನ ತಾನೇ ದುಡಿದುಕೊಳ್ಳುತ್ತಿದುದರಿಂದ ಬಂದಿದ್ದ ಆತ್ಮವಿಶ್ವಾಸವೋ, ಈ ಜಾಗದಲ್ಲಿ ಅವನ ಮಾತು ನಡೆಯುವುದಿಲ್ಲ ಎನ್ನುವ ನಂಬಿಕೆಯೋ ಗೊತ್ತಿಲ್ಲ– ತೋರು ಬೆರಳನ್ನೆತ್ತಿ ಅವನ ಮುಖಕ್ಕೆ ಹಿಡಿಯುತ್ತಾ ವಿಜಿ ಹೇಳಿದಳು.

‘ಲೈ. ಇನ್ನೊಮ್ಮೆ ಹಿಂಗ್ ಮಾತಾಡಿದಿ ಅಂದ್ರ ಝಾಡಿಸಿ ವದ್ದ್ ಬಿಡ್ತನಿ ಮಗನ. ಹೋಗಲೇ!’ ಎಂದಳು. ಅಧೀರನಾದರೂ ತೋರಿಸಿಕೊಳ್ಳದೆ ಪತ್ತಿ ಅವಳ ವ್ಯಕ್ತಿತ್ವ ಹರಣ ಮಾಡಲು ಒಂದು ಕೈ ಹಚ್ಚಿದ.

‘ನಿಂತಿರದು ಪಬ್ ಹೊರಗ. ಯಾ ಸೀಮೆ ಗರತಿ ಮಾತಾಡಿದಂಗ್ ಮಾತಾಡ್ತೀ?’ ಅಂದ.
‘ಹಲ್ಕಟ್! ನೀನೂ ಪಬ್ಬಿಗೇ ಕಣಲೈ ಬಂದಿರದು. ನೀನೇನು ಕರಡಿಗಿ ಕಟ್ಟಿಗ್ಯಂಡ್ ಲಿಂಗ ಪೂಜಿ ಮಾಡಾಕ್ ಬಂದಿಲ್ಲ. ನಾನ್ ಮಾಡದು ಅನಾಚಾರ ಆಗಿದ್ರ ನೀನ್ ಮಾಡ್ತಿರದೂ ಅನಾಚಾರನೇ. ಇನ್ನೊಮ್ಮೆ ಪಾರ್ಟಿ ಮಾಡನ ಬಾ ಅಂದ್ರ ನಿಮ್ ಧಣಿಗೆ ಮಾತು ಮುಟ್ಟುಸ್ತನಿ’
‘ಹಂಗೇ ಮಾಡು. ಅವ್ರವೇ ಸಾವ್ರ ಅದವ!’
‘ಇರ್ಲಿ ಹೋಗಲೇ.

ನಿನ್ ಬಾಲ ಕಟ್ ಮಾಡಾಕ ಎಷ್ಟ್ ಹೇಳಬಕು ಅನ್ನಾದ್ ನನಗ ಗೊತ್ತೈತಿ. ಅಷ್ಟಿಲ್ಲದ ಈ ಊರಾಗ್ ಒಬ್ಬಾಕಿನ ಬಾಳಾಕತ್ತಿಲ್ಲ ನಾನು’
ಅಷ್ಟು ಹೊತ್ತಿಗೆ ಪತ್ತಿಯ ಬಾಮೈದ ಬಂದು ನಿಂತ. ವಿಜಿ ಇನ್ನೂ ಧುಮುಧುಮು ಅಂತಿದ್ದಳು.

ಇನ್ನೂ ಮಾತು ಮುಂದುವರೆದರೆ ಬಾಮೈದನ ಮುಂದೆ ತನ್ನ ಮಾನ ಹೋದೀತೆಂದು ಹೆದರಿ ಪತ್ತಿ ಕೈ ಮುಗಿದು ‘ಹೋಗಿ ಬಾರವ್ವಾ... ಊರಿಗ್ ಬಂದಾಗ ನಾನೂ ಅಣ್ಣ ಅದೀನಿ ಅಂತ ನೆನಪಿಲೆ ಫೋನ್ ಮಾಡು’ ಅಂದ.

‘ಹೂನಣ. ಅಣ್ಣ ಅನ್ನಾವ ನಿನ್ನಂಗಿದ್ರ ಬ್ಯಾರೆ ಯಾರೂ ಬ್ಯಾಡ ನೋಡು’ ಎನ್ನುತ್ತಾ ವಿಜಿ ಹಲ್ಕಿರಿದಳು. ಅಲ್ಲಿಗೆ ಒಂದು ಪಾಠ ಮುಗಿದಂತಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.