ಪುಸ್ತಕಗಳೇ ಹಾಗೆ. ಕೆಲವು ವಿವಾದ ಹುಟ್ಟು ಹಾಕುವುದಕ್ಕೇ ಬರೆದಂತೆ ಇರುತ್ತವೆ. ಅವು ತಮ್ಮ ಸೀಮಿತ ಉದ್ದೇಶದಲ್ಲಿ ಸಫಲವೂ ಆಗುತ್ತವೆ. ಪುಸ್ತಕ ಇನ್ನೂ ಮಾರುಕಟ್ಟೆಗೆ ಬರುವುದಕ್ಕಿಂತ ಮುಂಚೆಯೇ ಅವು ಸುದ್ದಿ ಮಾಡುತ್ತವೆ, ಕಿಡಿ ಹೊತ್ತಿಸುತ್ತವೆ, ಇರಿಸು ಮುರಿಸು ಮಾಡುತ್ತವೆ. ಸಹಜವಾಗಿ ಜನರ ಕುತೂಹಲವನ್ನೂ ಕೆರಳಿಸುತ್ತವೆ. ಇದು ‘ಮಾರಾಟ’ದ ಕಾಲ. ಸರಕನ್ನು ಮಾರಬೇಕು ಎನ್ನುವವರು ಇಂಥ ಆವರಣವನ್ನೆಲ್ಲ ಸೃಷ್ಟಿ ಮಾಡುತ್ತಾರೆ. ಇನ್ನು ಕೆಲವು ಪುಸ್ತಕಗಳು ಹಾಗೆ ಇರುವುದಿಲ್ಲ. ತಣ್ಣಗೆ ಇರುತ್ತವೆ. ಆದರೆ, ಓದುತ್ತ ಹೋದಂತೆ ನಮ್ಮ ತಿಳಿವನ್ನು ವಿಸ್ತರಿಸುತ್ತವೆ, ಅರಿವನ್ನು ಹಿಗ್ಗಿಸುತ್ತವೆ. ಸುದ್ದಿ ಮಾಡುವ ಪುಸ್ತಕಗಳಿಗೆ ದೂರದೃಷ್ಟಿ ಇರುತ್ತದೆಯೋ ಇಲ್ಲವೋ ತಿಳಿಯದು. ಆದರೆ, ಎರಡನೇ ಮಾದರಿ ಪುಸ್ತಕಗಳಿಗೆ ನಾಡಿನ ಹಿತ ಮುಖ್ಯವಾಗಿರುತ್ತದೆ; ಜನರ ಒಳಿತು ಪ್ರಧಾನವಾಗಿರುತ್ತದೆ.
ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಧಾನಿ ಮನಮೋಹನಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಅವರ ಪುಸ್ತಕ ಮೊದಲ ಮಾದರಿಯದು. ಬಾರು ಕದನ ಕುತೂಹಲಿ, ಸ್ವಕೇಂದ್ರಿತ ಮನುಷ್ಯ. ಅವರ ಪುಸ್ತಕವನ್ನು ಮನಮೋಹನಸಿಂಗ್ ಅವರ ಎರಡನೇ ಅವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ಹರೀಶ್ ಖರೆ ಚಿಂದಿ ಚಿಂದಿ ಮಾಡುವ ರೀತಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಬಾರುಗೆ ತನ್ನ ಮಿತಿಯೇ ಗೊತ್ತಿರಲಿಲ್ಲ ಎಂದು ಟೀಕಿಸಿದ್ದಾರೆ. ಇವೆಲ್ಲ ಕೇವಲ ವೃತ್ತಿ ಮಾತ್ಸರ್ಯದ ಮಾತು ಇರಲಾರವು. ಸಂಜಯ ಬಾರು ಪುಸ್ತಕದ ಬಗ್ಗೆ ಈಗಾಗಲೇ ಬೇಕಾದಷ್ಟು ಚರ್ಚೆ ಆಗಿದೆ. ಆದರೆ, ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ದೇಶದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅವರ ಪುಸ್ತಕವೂ ಬಿಡುಗಡೆ ಆಗಿದೆ.
ಮನಸ್ಸು ಮಾಡಿದ್ದರೆ ಬೇಕಾದಷ್ಟು ಇದ್ದ ಸುದ್ದಿ ಮಾಡುವ ಸರಕನ್ನು ಖುರೇಷಿ ಅವರೂ ತಮ್ಮ ಪುಸ್ತಕದಲ್ಲಿ ಬಳಸಿಕೊಳ್ಳಬಹುದಿತ್ತು. ಪುಸ್ತಕ ಬಿಡುಗಡೆ ಆಗುವುದಕ್ಕಿಂತ ಮುಂಚೆ ಕೊಂಚ ಕೊಂಚ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಇಡೀ ದೇಶದ ಗಮನವನ್ನು ತಮ್ಮ ಕಡೆಗೆ ಮತ್ತು ತಮ್ಮ ಪುಸ್ತಕದ ಕಡೆಗೆ ಅವರು ಸೆಳೆಯಬಹುದಿತ್ತು. ಅವರಿಗೆ ಆ ಉದ್ದೇಶ ಇರಲಿಲ್ಲ. ತಮ್ಮ ಬಳಿ ಇರುವ ‘ಸ್ಫೋಟಕ ಮಾಹಿತಿ’ಯನ್ನು ತಾವು ಬಳಸಿಕೊಂಡಿಲ್ಲ ಎಂದು ಖುರೇಷಿ ತಮ್ಮ ಮೊದಲ ಮಾತಿನಲ್ಲಿಯೇ ಹೇಳಿಬಿಟ್ಟಿದ್ದಾರೆ!
ಖುರೇಷಿ ಅವರು ಈ ದೇಶ ಕಂಡ ಅತ್ಯುತ್ತಮ ಚುನಾವಣಾ ಆಯುಕ್ತರಲ್ಲಿ ಒಬ್ಬರು. ನಿವೃತ್ತಿ ಆಗುವುದಕ್ಕಿಂತ ಮುಂಚೆ ಚುನಾವಣೆ ಪದ್ಧತಿಯಲ್ಲಿ ಏನೇನು ಸುಧಾರಣೆ ತರಬಹುದೋ ಅದನ್ನೆಲ್ಲ ತಂದವರು. ಯಾವ ಅಂಕೆಯೂ ಇಲ್ಲದಂತೆ ವರ್ತಿಸುವ ರಾಜಕಾರಣಿ ಗಳ ಅಹಂಕಾರದ ವರ್ತನೆಗೆ ಮೂಗುದಾರ ಹಾಕಿದವರು. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಗಳಹುತ್ತಿದ್ದ ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಛೀಮಾರಿ ಹಾಕಿ ಅವರು ಕ್ಷಮೆ ಕೇಳುವಂತೆ ಮಾಡಿದವರು. ಅದಕ್ಕಿಂತ ಹೆಚ್ಚಾಗಿ ಮತದಾರರು ಮತಗಟ್ಟೆಗಳಿಗೆ ದಾಖಲೆ ಸಂಖ್ಯೆಯಲ್ಲಿ ಬರುವಂತೆ ಮತ್ತು ಮತದಾನ ಹಿಂಸೆಯಿಲ್ಲದಂತೆ ನಡೆಸಿದವರು.
ಚುನಾವಣೆ ಆಯೋಗದಲ್ಲಿನ ತಮ್ಮ ಸುದೀರ್ಘ ಸೇವಾವಧಿಯ ಅನುಭವಗಳನ್ನು ಆಧರಿಸಿ ‘An Undocumented Wonder The Making of the Great Indian Election’ ಎಂಬ 434 ಪುಟಗಳ ಸಾಕಷ್ಟು ದೊಡ್ಡ ಪುಸ್ತಕ ಬರೆದಿರುವ ಖುರೇಷಿ ಅವರ ಉದ್ದೇಶ, ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಯನ್ನು ಇನ್ನಷ್ಟು ಅರ್ಥಪೂರ್ಣ ಮಾಡುವುದು. ಹಿಂಸಾಚಾರವಿಲ್ಲದ, ದೊಡ್ಡ ಸಂಖ್ಯೆಯಲ್ಲಿ ಪಾಲುಗೊಳ್ಳುವ ಚುನಾವಣೆಯಿಂದ ದೇಶದಲ್ಲಿ ಬದಲಾವಣೆಯನ್ನು ತರುವುದು. ಆ ದಾರಿಯಲ್ಲಿ ಇರುವ ಅಡಚಣೆಗಳನ್ನು ಗುರುತಿಸುವುದು ಮತ್ತು ನಿವಾರಿಸುವುದು ಹೇಗೆ ಎಂದು ಪಟ್ಟಿ ಮಾಡುವುದು.
ಅನುಭವ ಎನ್ನುವುದು ದೊಡ್ಡದು. ಅನುಭವ ಕಲಿಸುವ ಪಾಠ ಇನ್ನೂ ದೊಡ್ಡದು. ಖುರೇಷಿ ಅವರ ಪುಸ್ತಕದಲ್ಲಿ ಅದು ಹೆಜ್ಜೆ ಹೆಜ್ಜೆಗೂ ಗೊತ್ತಾಗುತ್ತದೆ.
1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಈಗ ನಡೆಯುತ್ತಿರುವ ಹದಿನಾರನೇ ಲೋಕಸಭೆ ಚುನಾವಣೆವರೆಗೆ ದೇಶದ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಸ್ವಾತಂತ್ರ್ಯ ಬರುವುದಕ್ಕಿಂತ 25ವರ್ಷಗಳಷ್ಟು ಮುಂಚೆಯೇ, ‘ನಮಗೆಲ್ಲ ಚೆನ್ನಾಗಿ ಗೊತ್ತಿರಬೇಕು, ಸ್ವರಾಜ್ ಒಮ್ಮಿಂದೊಮ್ಮೆಲೆ ಅಥವಾ ಬಹುಕಾಲದವರೆಗೆ ನಮಗೆ ಒಳ್ಳೆಯ ಸರ್ಕಾರವನ್ನಾಗಲಿ, ಜನರಿಗೆ ಸಂತೋಷವನ್ನಾಗಲೀ ತರುವುದಿಲ್ಲ.
ಚುನಾವಣೆಗಳು ಮತ್ತು ಅವು ಹುಟ್ಟಿ ಹಾಕುವ ಭ್ರಷ್ಟಾಚಾರ, ಅನ್ಯಾಯ, ಸಂಪತ್ತಿನ ಅಧಿಕಾರ ಮತ್ತು ದುರಾಚಾರ, ಆಡಳಿತದಲ್ಲಿನ ಭ್ರಷ್ಟಾಚಾರ ಸ್ವಾತಂತ್ರ್ಯ ಬಂದ ಕೂಡಲೇ ಜನರ ಬದುಕನ್ನು ನರಕ ಮಾಡುತ್ತವೆ’ ಎಂದು ರಾಜಾಜಿ ಭವಿಷ್ಯ ನುಡಿದಿದ್ದರು. ದೃಷ್ಟಾರನಂಥ ರಾಜಾಜಿ ಅವರ ಮಾತುಗಳನ್ನು ಖುರೇಷಿ ಅವರ ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಲ್ಲಿ ಗೋಪಾಲಕೃಷ್ಣ ಗಾಂಧಿ ಉಲ್ಲೇಖಿಸಿದ್ದಾರೆ.
ರಾಜಾಜಿ ಅವರಿಗೆ ನಾವು ಎಂಥ ಜನ ಎಂದು ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿಯೇ ಗೊತ್ತಿತ್ತು ಎಂದು ಕಾಣುತ್ತದೆ.. ಈಗಲೂ ಅವರ ಮಾತು ನಿಜ. ಚುನಾವಣೆಗಳೇ ಈಗಲೂ ಈ ದೇಶಕ್ಕೆ ಶಾಪ ಮತ್ತು ವರ. ಶಾಪ ಏಕೆ ಎಂದರೆ ಅಲ್ಲಿ ಕಪ್ಪು ಹಣ ನಿರ್ಲಜ್ಜವಾಗಿ ಬಳಕೆಯಾಗುತ್ತದೆ. ಮತ್ತು ಹೀಗೆ ಖರ್ಚು ಮಾಡಿದ ಹಣವನ್ನು ಗಳಿಸಲು ಚುನಾವಣೆ ನಂತರ ಸಿಗುವ ಅಧಿಕಾರ ಬಳಕೆಯಾಗುತ್ತದೆ. ಜನರು ಚುನಾವಣೆಗೆ ನಿಲ್ಲಲು ಮತ್ತು ಗೆಲ್ಲಲು ಏಕೆ ‘ಸಾಯುತ್ತಾರೆ’ ಎಂದರೆ ಚುನಾವಣೆ ನಂತರ ಅವರಿಗೆ ಸಿಗುವ ನಿರಂಕುಶ ಎನ್ನುವಂಥ ಅಧಿಕಾರ ಮತ್ತು ಅದು ತರುವ ‘ಮದ’. ಜನರ ಸೇವೆ ಎನ್ನುವುದೆಲ್ಲ ಅವರು ನಮ್ಮ ಮುಖಕ್ಕೆ ಸವರುವ ಮಂಕುಬೂದಿ. ಇದು ಶಾಪದ ಕಥೆಯಾಯಿತು. ವರ ಏಕೆ ಎಂದರೆ ಆಮ್ ಆದ್ಮಿಯಂಥ ಧನಬಲ, ತೋಳ್ಬಲ ಏನೇನೂ ಇಲ್ಲದ ಒಂದು ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದು ಬಿಡಬಹುದು!
ಎಲ್ಲ ಅರೆಕೊರೆಗಳ ನಡುವೆ ಭಾರತದ ಪ್ರಜಾತಂತ್ರದಲ್ಲಿ ಅನೇಕ ವಿಸ್ಮಯಗಳು ಘಟಿಸಿವೆ. ಮನೆ ಮನೆಗೆ ವೃತ್ತಪತ್ರಿಕೆ ಹಂಚುತ್ತಿದ್ದ ಅಬ್ದುಲ್ ಕಲಾಂ ಅವರಂಥ ಸರಳ ವ್ಯಕ್ತಿ ದೇಶದ ರಾಷ್ಟ್ರಪತಿ ಆದರು. ಕಡುಬಡತನದಲ್ಲಿ ಬೀದಿ ದೀಪಗಳ ಅಡಿ ಓದಿದ ಮನಮೋಹನಸಿಂಗ್ ಪ್ರಧಾನಿ ಆದರು. ಇಂಥ ಸಾಧ್ಯತೆಗಳನ್ನು ನಮ್ಮ ಸಂವಿಧಾನವೇ ನಮಗೆ ಕೊಟ್ಟಿದೆ.
ನಮ್ಮ ದೇಶದಲ್ಲಿ1950ರಲ್ಲಿಯೇ 21 ವರ್ಷ ಆದ ಎಲ್ಲ ನಾಗರಿಕರಿಗೆ ಮತದಾನದ ಹಕ್ಕನ್ನು ಕೊಡಲಾಯಿತು. ಅಲ್ಲಿ ಗಂಡು–ಹೆಣ್ಣು ಎಂದು ತರತಮ ಮಾಡಲಿಲ್ಲ. ಸರಿಯಾಗಿ 38 ವರ್ಷಗಳ ನಂತರ 1988ರಲ್ಲಿ ಈ ಹಕ್ಕು18 ವರ್ಷ ಮೀರಿದ ಎಲ್ಲರಿಗೂ ಸಿಕ್ಕಿತು. ಆಶ್ಚರ್ಯ ಎಂದರೆ ಅಮೆರಿಕ ದೇಶಕ್ಕೆ ಹೆಣ್ಣು ಮಕ್ಕಳಿಗೆ ಇಂಥ ಹಕ್ಕು ಕೊಡಲು 144 ವರ್ಷಗಳು ಹಿಡಿದುವು. ಆಧುನಿಕ ಜಗತ್ತಿನ ಪ್ರಜಾತಂತ್ರದ ತವರು ಎನಿಸಿದ ಬ್ರಿಟನ್‌ಗೆ ನೂರು ವರ್ಷಗಳೇ ಬೇಕಾದುವು!
ಮತದಾನದ ಹಕ್ಕೇನೋ ಸಿಕ್ಕಿತು. ಆದರೆ, ಉತ್ತಮ, ದಕ್ಷ, ಭ್ರಷ್ಟಾಚಾರ ರಹಿತ ಸ್ವಯಮಾಡಳಿತದ ಕನಸು ನನಸಾಗಲಿಲ್ಲ. ಚುನಾವಣೆಯ ಮುಖ್ಯ ಉದ್ದೇಶವೇ ದಕ್ಷ ಆಡಳಿತಗಾರರನ್ನು, ಸ್ವಚ್ಛ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು. ಆದರೆ, ನಮ್ಮ ಸರ್ಕಾರಗಳು ನಮ್ಮ ಇಚ್ಛೆಯನ್ನು, ಆಶಯವನ್ನು ಪ್ರತಿನಿಧಿಸುವುದಿಲ್ಲ. ನಾವು ಚುನಾಯಿಸಿದ ಸರ್ಕಾರವೇ ಪರಮ ಭ್ರಷ್ಟ ಎಂದು ನಮಗೆ ಏಕೆ ಅನಿಸುತ್ತದೆ? ಚುನಾಯಿತ ಪ್ರತಿನಿಧಿಗಳು, ಆಡಳಿತ ಮಾಡುವ ಸರ್ಕಾರಗಳು ಜನರ ನಿತ್ಯದ ಜೀವನವನ್ನು ಜಂಜಡ ಮುಕ್ತಗೊಳಿಸಬೇಕು.
ಕನಿಷ್ಠ ಸವಲತ್ತುಗಳು ನಮ್ಮ ಊರಿನಲ್ಲಿಯೇ ಸಿಗುವಂತೆ ಆಗಬೇಕು. ರಸ್ತೆ, ಆಸ್ಪತ್ರೆ, ಶಿಕ್ಷಣದಂಥ ಮೂಲಸೌಕರ್ಯ ಗಳಲ್ಲಿ ಕೊರತೆ ಇರಬಾರದು. ಜನರ ಕುಂದು ಕೊರತೆಗಳಿಗೆ ಅಧಿಕಾರಿಗಳು ಓಗೊಡುವಂತೆ ಆಗಬೇಕು. ಹೆಣ್ಣು ಗಂಡಿನ ನಡುವೆ ಭಿನ್ನಭೇದ ಇರಬಾರದು. ಎಲ್ಲ ಸಮುದಾಯಗಳು ಶಾಂತಿಯಿಂದ, ಜಗಳವಿಲ್ಲದೆ ಬದುಕುವಂತೆ ಆಗಬೇಕು. ಅಂಗವಿಕಲರು, ಜನಾಂಗೀಯ ಅಲ್ಪಸಂಖ್ಯಾತರು ಭೀತಿಯಿಲ್ಲದೇ ಬದುಕಲು ಸಾಧ್ಯವಾಗಬೇಕು. ಆದರೆ, ನಾವು ಚುನಾಯಿಸಿದ ಸರ್ಕಾರಗಳು ಇದನ್ನೆಲ್ಲ ಮಾಡುತ್ತವೆಯೇ?
ಚುನಾವಣೆ ನಡೆಯುವಾಗಲೇ ಅವರು ದಿಕ್ಕು ತಪ್ಪುತ್ತಾರೆ, ಅಥವಾ ನಮ್ಮ ದಿಕ್ಕು ತಪ್ಪಿಸುತ್ತಾರೆ. ನಮ್ಮ ಬದುಕನ್ನು ಉತ್ತಮಗೊಳಿಸುವ ಒಂದು ಮಾತೂ ನಮಗೆ ಕೇಳಿಬರುವುದಿಲ್ಲ. ಯಾರು ತಮ್ಮ ಹೆಂಡತಿಯನ್ನು ಏಕೆ ಬಿಟ್ಟರು, ಯಾರು ಇನ್ನೊಬ್ಬರ ಹೆಂಡತಿಯನ್ನು ಏಕೆ ಹಾರಿಸಿಕೊಂಡು ಹೋದರು ಎಂಬುದೆಲ್ಲ ರಾಷ್ಟ್ರೀಯ ಚರ್ಚೆ ಎನಿಸುವ ದುರಂತ ಸನ್ನಿವೇಶದಲ್ಲಿ ಭಾರತದ ಪ್ರಜಾತಂತ್ರ ಇದೆ. ರಾಜಕೀಯ ನಾಯಕರು ಬೇಕೆಂದೇ ಹೀಗೆಲ್ಲ ಮಾಡುತ್ತಿರಬಹುದು ಎಂದು ಅನಿಸುತ್ತದೆ. ಚುನಾವಣೆ ನಂತರ ಅಧಿಕಾರ ಹಿಡಿದ ಮೇಲೂ ಇಂಥದೇ ಚಿಲ್ಲರೆ ಸಂಗತಿಗಳ ಚರ್ಚೆ ಮಾಡುತ್ತ ಜನರ ಗಮನ ಬೇರೆ ಕಡೆ ಸೆಳೆದು ತಾವು ಹಾಯಾಗಿ ಇದ್ದು ಬಿಡಬೇಕು ಎಂದು ಅವರು ಅಂದುಕೊಂಡಿರಬಹುದು.
ಪ್ರಜಾತಂತ್ರ ಎಂದರೆ ಪಾಲುಗೊಳ್ಳುವಿಕೆ, ಉತ್ತರದಾಯಿತ್ವ ಮತ್ತು ಕಾನೂನಿನ ಆಡಳಿತ. ಆಡಳಿತ ಎಂದರೆ ಅಭಿವೃದ್ಧಿಯ ಫಲಗಳನ್ನು ಜನರಿಗೆ ತಲುಪಿಸುವುದು. ದಕ್ಷ ಆಡಳಿತ, ಕಾನೂನಿನ ಆಡಳಿತ, ನಿರೀಕ್ಷೆಗೆ ತಕ್ಕ ಆಡಳಿತ ಇಲ್ಲದೇ ಇದ್ದರೆ ಸರ್ಕಾರಗಳು ಎಷ್ಟೇ ಅನುದಾನ ಬಿಡುಗಡೆ ಮಾಡಿದರೂ, ಉಚಿತ ಕೊಡುಗೆಗಳನ್ನು ನೀಡಿದರೂ ನಿರೀಕ್ಷಿತ ಅಭಿವೃದ್ಧಿಯನ್ನು ಸಾಧಿಸುವುದು ಸಾಧ್ಯವಾಗದು. ಜನರೂ ಸುಖವಾಗಿ ಬಾಳಲಾರರು.
ಅಧಿಕಾರದ ಉದ್ದೇಶವೇ ಮರೆತು ಹೋದಾಗ ಇಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ರಾಜ್ಯದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುಕ್ಕಾಲು ಕೋಟಿ ಖರ್ಚು ಮಾಡಿ ತಮ್ಮ ಮನೆ ದುರಸ್ತಿ ಮಾಡಿಸಿಕೊಂಡಾಗ ಹೀಗೆಯೇ ಅನಿಸಿತು; ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಮ್ಮ ಕಚೇರಿ ಕೊಠಡಿಯ ಗೋಡೆ ಒಡೆಸಿ ವಿಸ್ತರಿಸಿಕೊಂಡಾಗಲೂ ಹೀಗೆಯೇ ಅನಿಸಿತು. ನಾನು ಇಬ್ಬರನ್ನೂ ಬಲ್ಲೆ. ಇಬ್ಬರೂ ಕಷ್ಟಪಟ್ಟು ಮೇಲೆ ಬಂದವರು. ಇಬ್ಬರಿಗೂ ಆಡಳಿತ ಮಾಡಲು ಇದೆಲ್ಲ ಬೇಡ ಎಂದು ಹೊಳೆಯಬೇಕಿತ್ತು. ಮತ್ತು ದೂರದ ತಮ್ಮ ಊರಿನಲ್ಲಿ ತಮ್ಮ ಜನರು ಹೇಗೆ ಇದ್ದಾರೆ ಎಂಬುದು ನೆನಪು ಇರಬೇಕಿತ್ತು.
ರಾಜಕೀಯ ಪಕ್ಷಗಳಿಗೆ, ಮುಖಂಡರಿಗೆ ತಮ್ಮನ್ನು ಬೆಳೆಸಿದ ಸಿದ್ಧಾಂತಗಳು, ಸಾಮಾಜಿಕ ಚಳವಳಿಗಳು ಅಧಿಕಾರ ಹಿಡಿದ ಕೂಡಲೇ ಮರೆತು ಹೋಗುತ್ತವೆ. ಅವರ ಮೇಲೆ ಆಸೆ ಇಟ್ಟುಕೊಂಡ ಜನರಿಗೆ ನಿಧಾನವಾಗಿ ಭ್ರಮ ನಿರಸನ ಆಗುತ್ತ ಹೋಗುತ್ತದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಆಸ್ತಿ ಇದ್ದಕ್ಕಿದ್ದಂತೆ ಇಮ್ಮಡಿ, ಮುಮ್ಮಡಿ ಆಗುತ್ತ ಹೋಗುತ್ತದೆ. ಅವರು ಸಚಿವರು ಆದರಂತೂ ಇದು ಎಷ್ಟು ಪಟ್ಟು ಹೆಚ್ಚುತ್ತದೆ ಎಂದು ತಿಳಿಯಲು ಮತ್ತೆ ಚುನಾವಣೆಯೇ ಬರಬೇಕು. ಆಗ ಅವರು ಘೋಷಿಸಿದ ಆಸ್ತಿಯಲ್ಲಿಯೇ ಅದು ಬಹಿರಂಗವಾಗಬೇಕು. ಅದರಲ್ಲಿಯೂ ಎಷ್ಟು ಬಿಳಿ, ಎಷ್ಟು ಕಪ್ಪು ಎಂದು ಹೇಳುವುದು ಕಷ್ಟ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳೆಲ್ಲ ಸೇರಿದ ಇಡೀ ಉಪಖಂಡವೇ ಭ್ರಷ್ಟಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದಕ್ಕೆ ಏನು ಹೇಳೋಣ? ಆಡಳಿತದಲ್ಲಿಯೇ ಭ್ರಷ್ಟರು ಸೇರಿರುವುದೇ ಇದಕ್ಕೆ ಕಾರಣವಲ್ಲದೆ ಮತ್ತೇನು ಇರಲು ಸಾಧ್ಯ? ಅಧಿಕಾರಕ್ಕೆ ಬಂದು ಧನವಂತರು ಆದವರ ಕಥೆ ಇದು. ಖೂನಿ ಮಾಡಿ, ಗಲಭೆ ಮಾಡಿ, ಅತ್ಯಾಚಾರ ಅನಾಚಾರ ಮಾಡಿ ಅಧಿಕಾರಕ್ಕೆ ಬಂದವರ ಕಥೆಗಳಿಗೇನೂ ಕೊರತೆಯಿಲ್ಲ! 2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ಶೇಕಡಾ 60ರಷ್ಟು ಮಂದಿಯ ವಿರುದ್ಧ ಕೊಲೆ, ಅಪಹರಣ, ದರೋಡೆಯಂಥ ಮೊಕದ್ದಮೆಗಳು ಇದ್ದುವು!
ಆದರೂ ಭಾರತದ ಜನರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡಿಲ್ಲ. ಅವರು ಹಲವು ಬಾರಿ ದೆಹಲಿಯ ಜಂತರ್ ಮಂತರ್, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಕಡೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹರಿದು ಬಂದು ತಮ್ಮನ್ನು ಕಾಡುವ ದುರಾಡಳಿತದ ವಿರುದ್ಧ ಪ್ರತಿಭಟಿಸಿರಬಹುದು. ಆದರೆ, ಜಂತರ್ ಮಂತರ್ ಎಂದರೆ ಲೋಕಸಭೆ ಅಲ್ಲ, ವಿಧಾನಸಭೆ ಅಲ್ಲ ಎಂದು ಅವರಿಗೆ ಗೊತ್ತಿದೆ. ಅವರು ಮತ್ತೆ ಮತ್ತೆ ಒಳ್ಳೆಯ ಸರ್ಕಾರ ಬರಬೇಕು ಎಂದು ಮತ್ತೆ ಮತಗಟ್ಟೆಗೇ ಹೋಗಿದ್ದಾರೆ.
ಈ ಸಾರಿಯೂ ಇನ್ನು ಎರಡು ಹಂತದ ಮತದಾನ ಇರುವಾಗಲೇ ದಾಖಲೆ ಪ್ರಮಾಣದಲ್ಲಿ ಅವರು ಮತಗಟ್ಟೆಗೆ ಬಂದಿದ್ದಾರೆ. ಫಲಿತಾಂಶ ಬಂದ ಮೇಲೆ ಅವರು ಏನನ್ನು ಬಯಸಿದ್ದರು ಎಂಬುದು ಗೊತ್ತಾಗಬಹುದು. ‘ಪ್ರಜಾತಂತ್ರದ ಶ್ರೇಯ ಏನು ಎಂದರೆ ಒಬ್ಬ ಪುಟ್ಟ ಮನುಷ್ಯ, ಪುಟ್ಟ ಪುಟ್ಟದಾಗಿ ಹೆಜ್ಜೆ ಹಾಕುತ್ತ ಮತಗಟ್ಟೆಗೆ ಹೋಗುವುದು, ಒಂದು ಪುಟ್ಟ ಕಾಗದದ ಮೇಲೆ ತನ್ನ ಕೈಯಲ್ಲಿನ ಪುಟ್ಟ ಪೆನ್ಸಿಲ್ಲಿನಿಂದ ಪುಟ್ಟ ಗುರುತು ಹಾಕಿ ಹೊರಗೆ ಬರುವುದು’ ಎಂದು ಚರ್ಚಿಲ್ ಹೇಳಿದ್ದನ್ನು ಎಸ್.ವೈ.ಖುರೇಷಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಅಧಿಕಾರದ ಹತ್ತಿರಕ್ಕೆ ತಂದವರು ಇಂಥ ಪುಟ್ಟ ಮನುಷ್ಯರು.
ಪ್ರಜಾತಂತ್ರದ ದುರಂತ ಎಂದರೆ, ಆಮ್ ಆದ್ಮಿಯ ದುರಂಧರರ ಹಾಗೆ ಜನಪ್ರತಿನಿಧಿಗಳು ಮತ್ತೆ ಮತ್ತೆ ಮತದಾರರಿಗೆ ನಿರಾಶೆ ಮಾಡುತ್ತಾರೆ. ನಮ್ಮ ಹಣೆಬರಹ ಎಂದರೆ ನಾವು ಮತ್ತೆ ಮತ್ತೆ ಮತಗಟ್ಟೆಗೇ ಹೋಗಬೇಕು. ಅಲ್ಲಿನ ಯಂತ್ರದ ಒಂದು ಬಟನ್ನಿನ ಮೇಲೆ ಬೆರಳು ಒತ್ತಬೇಕು. ನಮ್ಮ ನಿರೀಕ್ಷೆಯ ಸರ್ಕಾರ ಈಗಲೂ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ಅತಿ ಶ್ರೇಷ್ಠ ಪ್ರಜಾತಂತ್ರ ಎನಿಸುವ ಹಾಗೆ ಮಾಡಬೇಕಾಗಿದೆ. ಅದನ್ನು ಆಗುಮಾಡಿಸುವ ಒಂದೇ ದಾರಿ ಎಂದರೆ ಚುನಾವಣೆ. ಕಡುಭ್ರಷ್ಟ, ಅದಕ್ಷ ಎನಿಸಿದ ಆಡಳಿತ ಯಂತ್ರವನ್ನೇ ಇಟ್ಟುಕೊಂಡು ಯಶಸ್ವಿ ಚುನಾವಣೆ ನಡೆಸಿದ ಚುನಾವಣೆ ಆಯೋಗದಲ್ಲಿ ಶೇಷನ್ ಅವರಂಥವರು, ಖುರೇಷಿ ಅವರಂಥವರು ನೇತಾರರಾಗಿ ಇದ್ದರು ಎಂಬುದೇ ಒಂದು ಹೆಮ್ಮೆಯ ಸಂಗತಿ.
‘An Undocumented ...’ ಪುಸ್ತಕದ ಮುನ್ನುಡಿಯಲ್ಲಿ ಗೋಪಾಲಕೃಷ್ಣ ಗಾಂಧಿಯವರು, ‘ಬರೀ ಚುನಾವಣೆ ರಾಜಕೀಯ ದಲ್ಲಿ ಮಾತ್ರವಲ್ಲ ಈ ದೇಶ ಶ್ರೇಷ್ಠ ಪ್ರಜಾತಂತ್ರವಾಗಬೇಕು ಎಂದು ಬಯಸುವ ಎಲ್ಲರೂ ಓದಬೇಕಾದ ಪುಸ್ತಕವಿದು’ ಎಂದು ಶಿಫಾರಸು ಮಾಡಿದ್ದಾರೆ. ಅವರ ಮಾತು ಅಕ್ಷರಶಃ ನಿಜ ಮಾಡುವಂಥ ಪುಸ್ತಕವನ್ನು ಖುರೇಷಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.