ADVERTISEMENT

ಅರಾಜಕನ ಅಧಿಕಾರದ ಕನಸೂ... ಸಾಮಾನ್ಯರ ಬದುಕಿನ ಕನಸೂ...

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:10 IST
Last Updated 16 ಜೂನ್ 2018, 9:10 IST

ಒಬ್ಬ ಅದ್ಭುತ ಹೋರಾಟಗಾರ ಒಬ್ಬ ಒಳ್ಳೆಯ ಆಡಳಿತಗಾರ ಆಗಲಾರನೇ? ಆಡಳಿತಗಾರನಾಗಲು ಹೋರಾಟದ ಹಿನ್ನೆಲೆ ಇರಬೇಕೇ, ಇರಬಾರದೇ? ಆಡಳಿತ ಮಾಡಲು ವ್ಯವಸ್ಥೆಯ ಜತೆಗೆ ರಾಜಿ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆಯೇ? ಈ ಪ್ರಶ್ನೆಗಳು ಮತ್ತೆ ಈಗ ಎದ್ದು ನಿಂತಿವೆ. ದೆಹಲಿ ರಾಜ್ಯಕ್ಕೆ ಮುಂದಿನ ತಿಂಗಳು ಮೊದಲ ವಾರ ಚುನಾವಣೆ ನಡೆಯಲಿದೆ. ತಾನು ‘ಅರಾಜಕ’ ಎಂದು ಹೇಳಿಕೊಂಡ ಅರವಿಂದ್ ಕೇಜ್ರಿವಾಲ್‌ ಮತ್ತೆ ಈಗ ಆ ಗದ್ದುಗೆ ಮೇಲೆ ಕಣ್ಣು ಹಾಕಿದ್ದಾರೆ.

ಆ ಗದ್ದುಗೆ ಮೇಲೆ ಕಳೆದ ವರ್ಷ  ಇದೇ ದಿನಗಳಲ್ಲಿ ಅವರು 49 ದಿನ ಹೀಗೆ ಕುಳಿತು ಹಾಗೆ ಎದ್ದು ಹೊರಟು ಹೋದರು. ಒಬ್ಬ ಆಡಳಿತಗಾರನಿಗೆ ಇರಬೇಕಾದ ಸಮಾಧಾನ, ಮುತ್ಸದ್ದಿತನ, ಹೊಂದಾಣಿಕೆ ಯಾವುದೂ ಅವರಲ್ಲಿ ಇರುವಂತೆ ಕಂಡಿರಲಿಲ್ಲ. ಅವರು ಆಗಷ್ಟೇ ಜಂತರ್‌ ಮಂತರ್‌ನ ಪ್ರತಿಭಟನೆಯ ವೇದಿಕೆಯಿಂದ ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ಬಂದವರಂತೆ ವರ್ತಿಸಿದ್ದರು. ಆಡಳಿತದ ಕೆಲವು ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲೂ ಅವರಿಗೆ ವ್ಯವಧಾನ ಇದ್ದಂತೆ ಕಾಣುತ್ತಿರಲಿಲ್ಲ.

ಅವರು ಪ್ರಜಾಪ್ರಭುತ್ವ ಪದ್ಧತಿಯಂತೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಅವರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಒಬ್ಬ ನಾಯಕನಲ್ಲಿ ಇರಬೇಕಾದ ಚರ್ಚೆ, ಮಾತುಕತೆ, ಸಲಹೆ ಕೇಳುವುದು, ಒಮ್ಮತಕ್ಕೆ ಪ್ರಯತ್ನ ಮಾಡುವುದು ಇಂಥ ಯಾವ ಗುಣಗಳೂ ಇರಲಿಲ್ಲ ಎಂದು ಅವರ ಸಹವರ್ತಿಗಳೇ ಹೇಳಿದರು. ಅವರ ಪಕ್ಕದಲ್ಲಿ ನಂಬರ್‌ ಒಂದು ಮತ್ತು ಎರಡರಂಥ ಹತ್ತಿರದ ಸ್ಥಾನಗಳಲ್ಲಿ ಇದ್ದವರು ಕೂಡ ಪಕ್ಷವನ್ನು ತೊರೆದು ಹೋದರು. ಹೌದು, ಕೇಜ್ರಿವಾಲ್‌ ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಕೊನೆಯ ಪಕ್ಷ ಶಾಜಿಯಾ ಇಲ್ಮಿ ಮತ್ತು ಯೋಗೇಂದ್ರ ಯಾದವ್‌ ಅವರಂಥ ತಮ್ಮ ಅಕ್ಕಪಕ್ಕದಲ್ಲಿ ಇದ್ದವರ ಮಾತನ್ನಾದರೂ ಕೇಳಬೇಕಿತ್ತು.

ಕೇಜ್ರಿವಾಲ್‌ ಬಹಳ ಅವಸರದಲ್ಲಿ ಇದ್ದಂತೆ ಇತ್ತು. ಎಲ್ಲವೂ ತಮ್ಮ ಮೂಗಿನ ನೇರಕ್ಕೆ ಆಗಬೇಕು ಎಂದು ಅವರು ಬಯಸುತ್ತಿರುವಂತೆ ಇತ್ತು. ಶಾಸಕಾಂಗದ ಕೆಲಸ ಬೇರೆ, ಕಾರ್ಯಾಂಗದ ಕೆಲಸ ಬೇರೆ ಎಂದು ವಿಂಗಡಿಸಿ ನೋಡಲೂ ಅವರಿಗೆ ತಾಳ್ಮೆ ಇರಲಿಲ್ಲ. ವೇಶ್ಯಾವೃತ್ತಿಯಲ್ಲಿ ತೊಡಗಿದ್ದರು ಎನ್ನಲಾದ ವಿದೇಶಿ ಮಹಿಳೆಯರನ್ನು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆ ಬಂಧಿಸಲು ನಿರಾಕರಿಸಿದ ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಅವರು ಧರಣಿ ಕುಳಿತುದು, ಗಣರಾಜ್ಯೋತ್ಸವಕ್ಕೆ ತಡೆ ಒಡ್ಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ನಿಯಮಗಳ ಅನುಸಾರ ರಾಜ್ಯಪಾಲರ ಮೂಲಕ ಮಂಡಿಸಬೇಕಿದ್ದ ಲೋಕಪಾಲ್‌ ಮಸೂದೆಯನ್ನು ನೇರವಾಗಿ ತಾವೇ ಸದನದಲ್ಲಿ ಮಂಡಿಸಿದ್ದು... ಅವರ ಗೆಳೆಯರು ಹೇಳಿದ ಹಾಗೆಯೇ  ‘ಕೇಜ್ರಿವಾಲ್‌ ಕೊಂಚ ಕ್ರೇಜಿಯಾಗಿಯೇ’ ನಡೆದುಕೊಂಡರು.

ಸಣಕಲು ಶರೀರದ, ಅಷ್ಟೇನೂ ಆರೋಗ್ಯ ಚೆನ್ನಾಗಿ ಇರದ, ತೀವ್ರ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಅರವಿಂದ್‌ ಕೇಜ್ರಿವಾಲ್‌ ಸರ್ಕಾರದ ಉನ್ನತ ಹುದ್ದೆಯನ್ನು ಬಿಟ್ಟುಕೊಟ್ಟು ಹೋರಾಟದ ಬಯಲಿಗೆ ಬಂದವರು. ರಾಳೆಗಣಸಿದ್ಧಿಯ ಸಂತ ಅಣ್ಣಾ ಹಜಾರೆ ಜತೆಗೆ ಸರ್ಕಾರದೊಡನೆ ಸಂಘರ್ಷದ ವೇದಿಕೆ ಏರಿದ ಕೇಜ್ರಿವಾಲ್‌ ಮರಳಿ  ನೋಡಲೇ ಇಲ್ಲ. ಆದರೆ, ಅಣ್ಣಾ ದೊಡ್ಡ ಮುತ್ಸದ್ದಿ. ಹೋರಾಟದ ಇತಿಮಿತಿಗಳು ಅವರಿಗೆ ಗೊತ್ತಿದ್ದ ಹಾಗೆ ಕೇಜ್ರಿವಾಲ್‌ ಅವರಿಗೆ ಗೊತ್ತಿದ್ದಂತೆ ಕಾಣಲಿಲ್ಲ. ಕೇಜ್ರಿವಾಲ್‌ ಅವರು ಜಂತರ್‌ ಮಂತರ್‌ ವೇದಿಕೆಯ ಹೋರಾಟದ ಮಂಚ, ದೆಹಲಿ ವಿಧಾನಸಭೆಯ ದಾರಿ ಎಂದು ಯಾವಾಗ ಕಂಡುಕೊಂಡರೋ ಆಗ ಅಣ್ಣಾ ಹಜಾರೆ ಮತ್ತು ಕೇಜ್ರಿವಾಲ್‌ ಅವರ ದಾರಿಗಳು ಬೇರೆ ಬೇರೆ ಆದುವು. ಮತ್ತೆ ಅವು ಕೂಡುವಂತೆ ಕಾಣುವುದಿಲ್ಲ. ಬಹುಶಃ, ಕೇಜ್ರಿವಾಲ್‌ ಅವರಿಗೆ ಸಕ್ರಿಯ ರಾಜಕೀಯ ಸಾಕು ಎಂದು ಅನಿಸಿದಾಗ ಮತ್ತೆ ಅವರ ದಾರಿಗಳು ಕೂಡಬಹುದು.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮತದಾರರಲ್ಲಿ ಮೂಡಿಸಿದ ಭರವಸೆ, ಆಶಾವಾದವನ್ನೇ 2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್‌ ಮೂಡಿಸಿದ್ದರು. ಹಾಗೆ ನೋಡಿದರೆ ಮೋದಿ ಅವರಿಗಿಂತ ಹೆಚ್ಚಿನ ಹಾಗೂ ನೈಜ ಜನಪ್ರಿಯತೆ ಕೇಜ್ರಿವಾಲ್‌ ಅವರಿಗೆ ಇದ್ದಂತೆ ಇತ್ತು. ಮೋದಿ ಅವರ ಜನಪ್ರಿಯತೆಯಲ್ಲಿ ಪ್ರಚಾರ ತಂತ್ರವನ್ನು ರೂಪಿಸುವವರ ಪಾತ್ರವೂ ಬಹಳ ಇತ್ತು. ಆದರೆ, ಕೇಜ್ರಿವಾಲ್‌ ಸುತ್ತ ಅದೆಲ್ಲ ಏನೂ ಇರಲಿಲ್ಲ. ಕೀರಲು ದನಿಯ, ಸಾಧಾರಣ ಬಟ್ಟೆ ಮತ್ತು ಸಾದಾ ಚಪ್ಪಲಿ ಧರಿಸುವ ಕೇಜ್ರಿವಾಲ್ ತಮ್ಮ ಕತ್ತಿನ ಸುತ್ತಲಿನ ಬೂದುಬಣ್ಣದ ಮಫ್ಲರ್‌ನಿಂದ ನಮ್ಮ ನಿಮ್ಮ ಹಾಗೆಯೇ ಕಾಣುತ್ತಿದ್ದರು.

2014ರ ಲೊಕಸಭೆ ಚುನಾವಣೆ ಮತ್ತು 2013ರ ದೆಹಲಿ ವಿಧಾನಸಭೆಯ ಚುನಾವಣೆ ಸಂದರ್ಭ ಮತ್ತು ಹಿನ್ನೆಲೆ ಒಂದೇ ಆಗಿತ್ತು. ದೆಹಲಿಯ ಮತದಾರರಿಗೆ ಕಾಂಗ್ರೆಸ್‌  ಸರ್ಕಾರ ಸುಸ್ತು ಹೊಡೆಸಿತ್ತು. ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೆಹಲಿ ಜನರನ್ನು ತಲ್ಲಣಗೊಳಿಸಿತ್ತು. ತಮ್ಮ ಬದುಕು ಎಲ್ಲ ಅರ್ಥದಲ್ಲಿಯೂ ಸುರಕ್ಷಿತವಲ್ಲ ಎಂದು ಅವರಿಗೆ ಖಚಿತವಾಗಿ ಹೋಗಿತ್ತು. ಅವರು ಹೊಸ ಆಸೆಯ ಬೆನ್ನು ಹತ್ತಿದ್ದರು.

ವೃತ್ತಿಪರ ರಾಜಕಾರಣಿಯಲ್ಲದ, ಕೆಂಡ ಉಗುಳಿದಂತೆ ಮಾತನಾಡುವ, ಬಡವರ, ಕೂಲಿಕಾರರ ಪರವಾಗಿ ಮಾತನಾಡುವ ಕೇಜ್ರಿವಾಲ್‌ ತಮ್ಮ ಒಳಗಿನಿಂದಲೇ ಎದ್ದುಬಂದು ವಿಧಾನಸಭೆಯ ಗದ್ದುಗೆ ಏರಲು ಹೊರಟಂತೆ ದೆಹಲಿ ಜನರಿಗೆ ಕಾಣಿಸಿತ್ತು. ಆಟೊವಾಲಾಗಳಿಗೆ ತಮ್ಮವನೇ ಒಬ್ಬನು ಮುಖ್ಯಮಂತ್ರಿ ಆಗುತ್ತಾನೆ ಎಂದು ಅನಿಸಿತ್ತು. ಅವರು ಕೇಜ್ರಿವಾಲ್‌ ಅವರ ಚಿತ್ರಗಳು ಇದ್ದ ಜಾಹೀರಾತುಗಳನ್ನು ಯಾವ ಶುಲ್ಕವನ್ನೂ ತೆಗೆದುಕೊಳ್ಳದೇ ತಮ್ಮ ಆಟೊಗಳ ಹಿಂದೆ ಹಾಕಿ ಚುನಾವಣೆ ಪ್ರಚಾರ ಮಾಡಿದರು. ಅಂಥವರು ಒಬ್ಬರು ಇಬ್ಬರು ಅಲ್ಲ. ಅವರ ಸಂಖ್ಯೆ ಹತ್ತು ಸಾವಿರ ದಾಟಿತು.

  ಕೇಜ್ರಿವಾಲ್‌, ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಗದ್ದುಗೆ ಏರಿದ ತಕ್ಷಣ ನಮ್ಮ ಸಿದ್ದರಾಮಯ್ಯ, ನಮ್ಮ ರಾಜಶೇಖರ ರೆಡ್ಡಿ ಅವರ ಹಾಗೆಯೇ ನಡೆದುಕೊಂಡರು. ದೆಹಲಿ ಜನರು ಪ್ರತಿ ತಿಂಗಳು 20,000 ಲೀಟರ್‌ವರೆಗೆ ನೀರನ್ನು ಉಚಿತವಾಗಿ ಬಳಸಬಹುದು ಎಂದು ಘೋಷಿಸಿದರು. ವಿದ್ಯುತ್‌ ದರವನ್ನು ಶೇಕಡ 40ರಷ್ಟು ಇಳಿಸುವುದಾಗಿ ಪ್ರಕಟಿಸಿದರು. ಅದಕ್ಕಿಂತ ಮುಂಚೆ ಅವರು ಅಧಿಕಾರಿಗಳ ಜತೆಗೆ ಸಭೆ ನಡೆಸಿದರೇ? ದೆಹಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿದರೇ? ಮಾಡಿದ ಹಾಗೆ ಕಾಣಲಿಲ್ಲ.

ಸಿದ್ದರಾಮಯ್ಯ ಕೂಡ ಒಂದು ರೂಪಾಯಿಗೆ ಒಂದು ಕಿಲೊ ಅಕ್ಕಿ ಕೊಡುವುದಾಗಿ ಪ್ರಕಟಿಸಿದ್ದರು. ಕೇಜ್ರಿವಾಲ್‌, ಅವರಿಗಿಂತ ಅನೇಕ ಹೆಜ್ಜೆ ಮುಂದೆ ಹೋಗಿ ಉಚಿತ ನೀರು ಪೂರೈಕೆಯ ಪ್ರಕಟಣೆ ಮಾಡಿದರು. ಉಚಿತವಾಗಿ ಕೊಡುವ ಯಾವುದಕ್ಕೂ ಬೆಲೆ ಇರುವುದಿಲ್ಲ. ಎಲ್ಲರಿಗೂ 20,000 ಲೀಟರ್‌ ನೀರು ಉಚಿತವಾಗಿ ಸಿಗುವಾಗ ಒಬ್ಬರ, ಇಬ್ಬರ ಚಿಕ್ಕ ಕುಟುಂಬಗಳೂ ನೀರನ್ನು ಪೋಲು ಮಾಡುವ ಅವಕಾಶ ಇತ್ತು. ಕೇಜ್ರಿವಾಲ್‌ ವೃತ್ತಿ ರಾಜಕಾರಣಿಗಳಿಗಿಂತ ಭಿನ್ನ ಎನಿಸಲಿಲ್ಲ. ಆದರೆ, ಅವರು ಅಧಿಕಾರದಲ್ಲಿ ಹತ್ತಿಪ್ಪತ್ತು ದಿನ ಕಳೆಯುವುದರೊಳಗೆ ಜನರಿಗೆ, ‘ಈತನೊಬ್ಬ  ಅರಾಜಕ, ಈತ ಕುಳಿತು ಆಡಳಿತ ಮಾಡಲಾರ’ ಎಂದು ಖಾತ್ರಿಯಾಯಿತು. ಜನರಿಗೆ ಎಷ್ಟು ಸಿಟ್ಟು ಬಂತು ಎಂದರೆ ಕೆಲವರು ಬಂದು ಅವರ ಮೇಲೆ ಹಲ್ಲೆ ಮಾಡಿದರು. ಕೆನ್ನೆಗೆ ಬಾರಿಸಿದರು. ಅವರ ಕನಸುಗಳೆಲ್ಲ ಇಷ್ಟು ಬೇಗ ಕರಗಿ ಹೋಗಬಾರದಿತ್ತು. ಅಂದರೆ ಅವರಿಗೆ ಉಚಿತ ನೀರು, ಕಡಿಮೆ ದರದ ವಿದ್ಯುತ್‌ಗಿಂತ ಹೆಚ್ಚಿನದು ಇನ್ನೇನೋ ಬೇಕಿತ್ತು. ಅದನ್ನು ಕೇಜ್ರಿವಾಲ್‌ ಅರ್ಥ ಮಾಡಿಕೊಳ್ಳಲಿಲ್ಲ.

ಕೇಜ್ರಿವಾಲ್‌ ಇನ್ನೂ ಅನೇಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ. ಉದ್ಯಮಿಗಳಲ್ಲಿ ಯಾರ ವಿರುದ್ಧ ಮಾತನಾಡಿದರೆ ತಮಗೆ ಕಷ್ಟವಾಗುತ್ತದೆ ಎಂದು ಅವರಿಗೆ ಅರ್ಥವಾಗಲಿಲ್ಲ. ಯಾರ ವಿರುದ್ಧ ಮಾತನಾಡಬಾರದಿತ್ತೋ ಅವರೆಲ್ಲರ  ವಿರುದ್ಧ ಹರಿಹಾಯ್ದರು. ಅವರು ಜಂತರ್‌ ಮಂತರ್‌ನಲ್ಲಿ ಅಣ್ಣಾ ಹಜಾರೆ ಜತೆಗೆ ಹೋರಾಟ ಮಾಡುತ್ತಿದ್ದಾಗಲೆಲ್ಲ ಇವರ ಒಂದು ಬೈಟಿಗಾಗಿ ದಿನಗಟ್ಟಲೆ ಕಾಯುತ್ತಿದ್ದ ಮಾಧ್ಯಮದವರನ್ನು ‘ಭ್ರಷ್ಟರು’ ಎಂದು ಸಾರಾಸಗಟಾಗಿ ಆರೋಪಿಸಿದರು. ತಾನು ದೆಹಲಿ ಗದ್ದುಗೆ ಏರಲು ಇದೇ ಮಾಧ್ಯಮ ತನ್ನ ಪರವಾಗಿ ನಿಂತಿತ್ತು, ಭ್ರಷ್ಟಾಚಾರದ  ವಿರುದ್ಧ ತಾನು ಎತ್ತಿದ ದನಿ ಮೊಳಗುವಂತೆ ಕಹಳೆಯಾಗಿ ಕೆಲಸ ಮಾಡಿತ್ತು ಎಂಬುದನ್ನು ಕೇಜ್ರಿವಾಲ್‌ ಅರ್ಥ ಮಾಡಿಕೊಂಡಿರಲಿಲ್ಲ.

ಅಧಿಕಾರ ಕಳೆದುಕೊಂಡ ಮೇಲೂ ಅವರ ಕತ್ತು ಕುತ್ತಿಗೆ ಮೇಲೆ ನಿಂತಿರಲಿಲ್ಲ. ತಾವು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮರ್ಥ ಎದುರಾಳಿ ಎಂದುಕೊಂಡರು. ಇಡೀ ದೇಶದಲ್ಲಿ 434 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ವಾರಾಣಸಿಯಲ್ಲಿ ಮೋದಿ ಎದುರು 3.3 ಲಕ್ಷ ಮತಗಳ ಭಾರಿ ಅಂತರದಿಂದ ಕೇಜ್ರಿವಾಲ್‌ ಸೋತು ಹೋದರು. 434 ಅಭ್ಯರ್ಥಿಗಳಲ್ಲಿ 414 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಜನರು ಅಷ್ಟು ಬೇಗ ಹೊಸದೊಂದು ಭರವಸೆಯ ಬೆನ್ನು ಹತ್ತಿ ಹೊರಟಿದ್ದರು ಎಂದು ಕೇಜ್ರಿವಾಲ್ ಅರ್ಥ ಮಾಡಿಕೊಂಡಿರಲಿಲ್ಲ.

ಜನರು ಹಾಗೆಯೇ. ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅವರು ಬಹುಬೇಗ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಅವುಗಳ ಹಿಂದೆ ಕೊಂಚ  ಕಾಲ ಬೆನ್ನು ಹತ್ತುತ್ತಾರೆ. ಅವು ನನಸಾಗುವುದಿಲ್ಲ ಎಂದು ಅನಿಸಿದರೆ ಮತ್ತೆ ಹೊಸ ಕನಸುಗಳನ್ನು ಕಾಣತೊಡಗುತ್ತಾರೆ. ಸ್ವಾತಂತ್ರ್ಯ ಬಂದ ಕಳೆದ 67 ವರ್ಷಗಳಲ್ಲಿ ಅವರು ಹೀಗೆ ಕಂಡ ಕನಸುಗಳಿಗೆ ಲೆಕ್ಕವಿಲ್ಲ. ಹಾಗೆ ನೋಡಿದರೆ ಕೇಜ್ರಿವಾಲ್‌ ಬಗ್ಗೆ ಅವರು ಕಂಡಿದ್ದ ಕನಸುಗಳು ಸಂಪೂರ್ಣವಾಗಿ ಬೇರೆಯವೇ ಆಗಿದ್ದುವು. ಆಯ್ಕೆಯಾಗುವವರೆಗೆ ತಮ್ಮ  ಜತೆಗೇ ಇದ್ದು, ಚುನಾಯಿತರಾದ ಕೂಡಲೇ  ನಿಲುಕದಷ್ಟು ಬಹುದೂರ ಹೊರಟು ಹೋದ, ಬರೀ ದೂರ ಹೋದುದು ಅಷ್ಟೇ ಅಲ್ಲದ ಪರಮ ಭ್ರಷ್ಟರಾದ ವೃತ್ತಿಪರ ರಾಜಕಾರಣಿಗಳ ದ್ರೋಹದಿಂದ ಅವರು ಬೇಸತ್ತು ಹೋಗಿದ್ದರು. ಬೆಳ್ಳಿತೆರೆಯ ಹೀರೊಗಳ ಹಾಗೆ ಯಾರನ್ನಾದರೂ ಎದುರು ಹಾಕಿಕೊಳ್ಳಬಲ್ಲ, ಹೊಡೆದು ಚಚ್ಚಿಹಾಕಬಲ್ಲ ನಮ್ಮ ನಿಮ್ಮ ಹಾಗಿನ ಕೃಶಕಾಯದ ಕೇಜ್ರಿವಾಲ್‌ ಜನಮಾನಸವನ್ನು ಗೆದ್ದ  ಕಾರಣಗಳು ಸ್ಪಷ್ಟವಾಗಿದ್ದುವು.

ಆದರೆ, ಅದೆಲ್ಲ ಆಗಿ ಬಹಳ ದಿನಗಳೇನೂ ಆಗಿಲ್ಲ. ಹಾಗೆ ನೋಡಿದರೆ ಇನ್ನೂ ಒಂದು ವರ್ಷವೂ ಆಗಿಲ್ಲ. ಈಗ ಅದೇ ಬಡವರು, ಆಟೊವಾಲಾಗಳು ಕೇಜ್ರಿವಾಲ್‌ ಅವರ ಚಿತ್ರವಿದ್ದ ಜಾಹೀರಾತನ್ನು ತಮ್ಮ ಆಟೊಗಳ ಹಿಂದೆ ಹಾಕಲು ನಿರಾಕರಿಸುತ್ತಿದ್ದಾರೆ. ‘ಈ ಮನುಷ್ಯನ ಬಗ್ಗೆ ಏನು ಖಾತ್ರಿ? ಈತ ಮತ್ತೆ ನಡುರಾತ್ರಿ ರಾಜಭವನದ ಮುಂದೆ ಧರಣಿ ಮಾಡುವುದಿಲ್ಲ ಎಂದು ಹೇಗೆ ನಂಬುವುದು’ : ಅವರ ಪ್ರಶ್ನೆಗಳನ್ನು ಸುಲಭವಾಗಿ ತಳ್ಳಿ ಹಾಕುವುದು ಕಷ್ಟ. 

2013ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗಲೂ ಜನರು ಕೇಜ್ರಿವಾಲ್‌ ಅವರ ಪಕ್ಷವನ್ನು ಎರಡನೇ ಸ್ಥಾನದಲ್ಲಿಯೇ ಇಟ್ಟಿದ್ದರು. ಈ ಸಾರಿಯೂ ಚುನಾವಣೆ ಪೂರ್ವ ಸಮೀಕ್ಷೆಗಳು ನಿಜ ಎನ್ನುವುದಾದರೆ ಮತ್ತೆ ಎರಡನೇ ಸ್ಥಾನದಲ್ಲಿಯೇ ಇಟ್ಟಿದ್ದಾರೆ. ಆದರೆ, ಕಳೆದ ಸಾರಿ ಬಿಜೆಪಿ ಮತ್ತು ಎಎಪಿ ನಡುವೆ ಕೇವಲ ಮೂರು ಸೀಟುಗಳ ವ್ಯತ್ಯಾಸ ಇತ್ತು. ಈ ಸಾರಿ? ಫಲಿತಾಂಶ ಬರುವ ಫೆಬ್ರುವರಿ ಹತ್ತರವರೆಗೆ ಕಾಯೋಣ. ಆದರೆ, ಏನು ಫಲಿತಾಂಶ ಬರುತ್ತದೆ ಎಂಬ ಬಗೆಗೆ ನನಗೇನೂ ಅನುಮಾನ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.