
ಅನುಮಾನವೇ ಇಲ್ಲ, ‘ಸಿದ್ದರಾಮಯ್ಯನವರಿಗೆ ಪರಮಾನಂದವಾಗಿದೆ.’ ಹಾಗೆಂದು ಅವರ ರಾಜಕೀಯ ಕಡುವೈರಿ ದೇವೇಗೌಡರೇ ಒಪ್ಪಿಕೊಂಡಿದ್ದಾರೆ. ವಿಧಾನಪರಿಷತ್ತಿಗೆ ನಡೆದ ಚುನಾವಣೆ ವಿಧಾನ ಕುರಿತು ಈಗಲೇ ಚರ್ಚೆ ಮುಗಿಯುವುದಿಲ್ಲ; ಮುಗಿಯಲೂ ಬಾರದು. ಆದರೆ, ಬಂದಿರುವ ಫಲಿತಾಂಶ ಮುಖ್ಯಮಂತ್ರಿಗಳಿಗೆ ಬಹಳ ಪ್ರಶಸ್ತವಾಗಿದೆ. ಮಲಗಿದಂತೆ ಕಾಣುತ್ತಿರುವ ಅವರ ಸರ್ಕಾರ ಗೆಲುವಿನ ಸಂಭ್ರಮದಲ್ಲಿ ಪೂರಾ ಮಲಗಿಯೇ ಬಿಡಬಾರದು ಎಂಬ ಎಚ್ಚರಿಕೆಯೂ ಇಲ್ಲಿ ಇರುವಂತಿದೆ!
ಈ ಚುನಾವಣೆ ನಂತರ ಪರಿಷತ್ತಿನ ವಿವಿಧ ಪಕ್ಷಗಳ ಸದಸ್ಯರ ಬಲಾಬಲದಲ್ಲಿ ಭಾರಿ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ಚುನಾವಣೆ ನಡೆದ 25 ಸೀಟುಗಳಲ್ಲಿ 13ರಲ್ಲಿ ಗೆದ್ದು ಸಿದ್ದರಾಮಯ್ಯನವರು ತಮ್ಮ ಕುರ್ಚಿಯನ್ನು ಇನ್ನಷ್ಟು ಭದ್ರ ಮಾಡಿಕೊಂಡಿದ್ದಾರೆ. ಬಹಳ ಮುಖ್ಯವಾಗಿ, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ನಿಂತಿದ್ದ ಇಬ್ಬರೂ ಬಂಡಾಯ ಅಭ್ಯರ್ಥಿಗಳು ಸೋತಿದ್ದಾರೆ. ಅದರಲ್ಲಿ ಒಬ್ಬರಿಗೆ ಹಣದ ಬಲ ಇತ್ತು. ಇನ್ನೊಬ್ಬರಿಗೆ ಒಳ್ಳೆಯ ಹೆಸರಿನ ಬಲ ಇತ್ತು. ಅವರಲ್ಲಿ ಯಾರು ಗೆದ್ದಿದ್ದರೂ ಮುಖ್ಯಮಂತ್ರಿಗೆ ಮುಖಭಂಗ ಆಗುತ್ತಿತ್ತು.
ಹಾಸನದಲ್ಲಿ ತಮ್ಮ ಪಕ್ಷ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯನವರು ಕನಸು ಮನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ. ಏಕೆಂದರೆ ಅದು ದೇವೇಗೌಡರ ಭದ್ರಕೋಟೆ. ಆದರೆ, ಅಲ್ಲಿ ಸಿದ್ದರಾಮಯ್ಯನವರಿಂದಲೇ ತಾವು ಸೋತೆವು ಎಂದು ದೇವೇಗೌಡರೇ ಹೇಳುತ್ತಿದ್ದಾರೆ. ಹಾಗೆ ಹೇಳುವ ಮೂಲಕ ಸಿದ್ದರಾಮಯ್ಯನವರ, ಈಗಾಗಲೇ ಉಬ್ಬಿರುವ, ಹೆಮ್ಮೆಯನ್ನು ಮತ್ತಷ್ಟು ಹಿಗ್ಗಿಸುತ್ತಿದ್ದಾರೆ.
‘ನಮ್ಮ ಪಕ್ಷದ ಒಳಗಿನ ಅಸಮಾಧಾನಗಳಿಂದ ನಾವು ಸೋತೆವು’ ಎಂದು ದೇವೇಗೌಡರು ಒಪ್ಪಿಕೊಂಡಿದ್ದರೆ ಯಾರೂ ಅದನ್ನು ಆಕ್ಷೇಪಿಸುತ್ತಿರಲಿಲ್ಲ. ಅದು ನಿಜವೂ ಹೌದಾಗಿತ್ತು. ಆದರೆ, ಅಷ್ಟು ಪಳಗಿದ ರಾಜಕಾರಣಿ ಏಕೋ ತಮ್ಮ ಪಕ್ಷವನ್ನು ಸೋಲಿಸಿದ ಶ್ರೇಯವನ್ನು ತಮ್ಮ ಕಡುವೈರಿಗೆ ಬಿಟ್ಟುಕೊಡುತ್ತಿದ್ದಾರೆ. ‘ನಾವೇ ಸೋತೆವು’ ಎಂದು ಹೇಳುವುದು ಬೇರೆ. ‘ನಮ್ಮನ್ನು ಸೋಲಿಸಲಾಯಿತು’ ಎಂದು ಒಪ್ಪಿಕೊಳ್ಳುವುದು ಬೇರೆ. ಎರಡರ ನಡುವೆ ಸೂಕ್ಷ್ಮ ವ್ಯತ್ಯಾಸ ಇದೆ.
ಶಿವಮೊಗ್ಗ ಕ್ಷೇತ್ರದಲ್ಲಿನ ಗೆಲುವು ಕೂಡ ಸಿದ್ದರಾಮಯ್ಯನವರ ಕೈಯನ್ನು ಇನ್ನಷ್ಟು ಮೇಲೆ ಮಾಡಿದೆ. ಹಾಸನದಲ್ಲಿ ದೇವೇಗೌಡರಿಗೆ ಮುಖಭಂಗವಾಗಿದ್ದರೆ ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪನವರಂಥ ಹಿರಿಯ ಮುಖಂಡರ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ವಿಧಾನಪರಿಷತ್ತಿನ ವಿರೋಧಿ ನಾಯಕ ಈಶ್ವರಪ್ಪನವರೂ ಅದೇ ಜಿಲ್ಲೆಯವರು. ಅವರು ನಿಜವಾಗಿಯೂ ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕಾದಂಥ ಸೋಲು ಇದು. ಏಕೆಂದರೆ ಅವರ ಪಕ್ಷ ಅಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ತಾವು ಹಾಕಿದ ಸನ್ಯಾಸದ ಸವಾಲನ್ನು ಸಮರ್ಥಿಸಿಕೊಳ್ಳಲು ಅವರು ಎಷ್ಟು ಕಷ್ಟಪಡುತ್ತಿದ್ದಾರೆ ಎಂದು ಯಾರಿಗಾದರೂ ಅರ್ಥವಾಗುತ್ತದೆ.
ಅದೃಷ್ಟ ಹೇಗೆ ಇರುತ್ತದೆ ಎಂದರೆ ಕೆಲವು ಸಾರಿ ಅದು ತೀರಾ ಅನಿರೀಕ್ಷಿತವೂ ಆಗಿರುತ್ತದೆ. ಒಮ್ಮೊಮ್ಮೆ ಅದು ಗೆಲುವಿನ ರೂಪದಲ್ಲಿ ಇರುತ್ತದೆ. ಇನ್ನೊಮ್ಮೆ ಅದು ಸೋಲಿನ ರೂಪದಲ್ಲಿ ಇರುತ್ತದೆ. ವ್ಯತ್ಯಾಸವೆಂದರೆ ಗೆಲುವು ನಮಗೆ ಆಗಿರುತ್ತದೆ. ‘ಸೋಲು’ ಇನ್ನಾರಿಗೋ ಆಗಿರುತ್ತದೆ! ಕಲಬುರ್ಗಿ, ತುಮಕೂರು, ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ.
ಕಲಬುರ್ಗಿ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಜಿಲ್ಲೆ. ತುಮಕೂರು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಜಿಲ್ಲೆ. ಕೋಲಾರ, ಎಡಗೈ ದಲಿತ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು ಆರು ಸಾರಿ ಲೋಕಸಭೆಗೆ ಗೆಲ್ಲಿಸಿರುವ ಜಿಲ್ಲೆ. ಅವಕಾಶ ಸಿಕ್ಕರೆ ತಾನು ಮುಖ್ಯಮಂತ್ರಿಯೋ ಇಲ್ಲವೇ ಕೆಪಿಸಿಸಿ ಅಧ್ಯಕ್ಷನೋ ಆಗಬೇಕು ಎಂದು ಮುನಿಯಪ್ಪನವರು ಆಗಾಗ ‘ಗಾಳಿಪಟ’ ಬಿಡುತ್ತಲೇ ಇರುತ್ತಾರೆ! ಮಂಡ್ಯ, ಕಾಂಗ್ರೆಸ್ಸಿನ ಅಗ್ರನಾಯಕರಲ್ಲಿ ಒಬ್ಬರಾದ ಎಸ್.ಎಂ.ಕೃಷ್ಣ ಅವರ ಜಿಲ್ಲೆ. ಇಲ್ಲೆಲ್ಲ ಕಾಂಗ್ರೆಸ್ ಸೋತಿದೆ. ತಾವು ಪ್ರತಿನಿಧಿಸುವ ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಹೈಕಮಾಂಡಿನ ಮುಂದೆ ಆಗೀಗ ಹೋಗಿ ತಮ್ಮ ವಿರುದ್ಧ ಚಾಡಿ ಹೇಳುವ ನಾಯಕರ ಬಾಯಿಯನ್ನು ಮುಚ್ಚಿಸಲು ಇದಕ್ಕಿಂತ ಇನ್ನೇನು ಬೇಕು? ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿಯೂ ಹೀಗೆಯೇ ಆಗಿತ್ತು. ಪಕ್ಷದ ಸೋಲನ್ನು ತಮ್ಮ ಗೆಲುವಾಗಿ ಮುಖ್ಯಮಂತ್ರಿ ಪರಿವರ್ತಿಸಿಕೊಂಡಿದ್ದರು!
ಆದರೆ, ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಆಗಿರುವ ಹಿನ್ನಡೆಯ ಹೊಣೆಯನ್ನು ಬಹುಶಃ ಮುಖ್ಯಮಂತ್ರಿಗಳೇ ಹೊತ್ತುಕೊಳ್ಳಬೇಕಾಗುತ್ತದೆ. ಅಲ್ಲಿ ಪಕ್ಷದಲ್ಲಿನ ಮನೆಮುರುಕತನವೇ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕರು ಬಹಿರಂಗವಾಗಿಯೇ ಪಕ್ಷದ ವಿರುದ್ಧ ಕೆಲಸ ಮಾಡಿದರು. ಅಧಿಕೃತ ಅಭ್ಯರ್ಥಿಗೆ ಸೋಲು ಎಷ್ಟು ಖಚಿತವಾಗಿತ್ತು ಎಂದರೆ ಅವರಾಗಲೀ ಅವರ ಪ್ರತಿನಿಧಿಗಳಾಗಲೀ ಎಣಿಕೆ ಕೇಂದ್ರದ ಕಡೆಗೆ ಬರಲೇ ಇಲ್ಲ! ಅಲ್ಲಿ ಪಕ್ಷೇತರರಾಗಿ ನಿಂತಿದ್ದ ವಿವೇಕ ಪಾಟೀಲರು ರಾಜ್ಯದಲ್ಲಿಯೇ ಅತಿ ಹೆಚ್ಚು ಮತ ಗಳಿಸಿ ಗೆದ್ದರು ಮತ್ತು ಅವರ ಬೆನ್ನಿಗೆ ಕಾಂಗ್ರೆಸ್ ಶಾಸಕರು ನಿಂತಿದ್ದರು.
ಜಿಲ್ಲೆಯ ಉಸ್ತುವಾರಿ ಸಚಿವರೂ ಮತ್ತು ಬೆಳಗಾವಿ ಜಿಲ್ಲೆಯ ರಾಜಕೀಯದ ಮೇಲೆ ಬಲವಾದ ಹಿಡಿತ ಹೊಂದಿರುವವರೂ ಆದ ಸತೀಶ ಜಾರಕಿಹೊಳಿಯವರ ‘ಬೆಂಬಲ’ ಇದ್ದಾಗಲೂ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರು. ಸಮಾಜ ಕಲ್ಯಾಣ ಖಾತೆ ಕೇಳಿದ್ದಕ್ಕೆ ಸಣ್ಣ ಕೈಗಾರಿಕೆ ಖಾತೆ ಕೊಟ್ಟು ‘ಅವಮಾನಿಸಿದ’ ಮುಖ್ಯಮಂತ್ರಿಗೆ ಸತೀಶ್ ಜಾರಕಿಹೊಳಿ ಕೊಟ್ಟ ಉತ್ತರ ಇದಾಗಿರಬಹುದೇ? ಅಥವಾ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದ ವಿವೇಕ ಪಾಟೀಲರು ಕುರುಬರಾಗಿರುವುದು ಮತ್ತು ಸೋತ ಅಧಿಕೃತ ಅಭ್ಯರ್ಥಿ ಅಲ್ಪಸಂಖ್ಯಾತರಾಗಿರುವುದು ಮುಖ್ಯಮಂತ್ರಿಗಳ ಸಮರ ತಂತ್ರದಲ್ಲಿನ ಬಿರುಕಿನ ಸೂಚನೆಗಳನ್ನು ಕೊಡುತ್ತಿರಬಹುದೇ? ಅಥವಾ ಹಾಗೆಂದು ವಿಶ್ಲೇಷಣೆ ಮಾಡಲು ಇಲ್ಲಿ ಅವಕಾಶ ಇದೆಯೇ?
ಚುನಾವಣೆ ಎಂದರೇ ಹಾಗೆ. ಪ್ರತಿಯೊಂದು ಚುನಾವಣೆಯೂ ಪ್ರಜಾಪ್ರಭುತ್ವದ ಒಂದು ಅಧ್ಯಾಯ; ಒಂದು ಪಾಠ. ಬಹುಶಃ ಈ ಸಾರಿಯ ಮೇಲ್ಮನೆ ಚುನಾವಣೆ ಕಲಿಸಿರುವ ಪಾಠ ಬಹಳ ದೊಡ್ಡದು ಹಾಗೂ ಮತ್ತೆ ಮತ್ತೆ ಯೋಚನೆ ಮಾಡಲು ಹಚ್ಚುವಂಥದು. ಈ ಸಾರಿಯದು ಅತ್ಯಂತ ನಿರ್ಲಜ್ಜ ಚುನಾವಣೆ ಎಂದು ಎಲ್ಲರಿಗೂ ಗೊತ್ತಾಗಿದೆ. ಭ್ರಷ್ಟಾಚಾರವನ್ನು ಹೀಗೆ ವಿಕೇಂದ್ರೀಕರಣ ಮಾಡಿದ್ದು, ತೀರಾ ಕೆಳ ಹಂತದ ಮತದಾರರನ್ನು ರಾಜಾರೋಷವಾಗಿ ಹಣ ಕೊಟ್ಟು ಖರೀದಿ ಮಾಡಿದ್ದು ಹಿಂದೆ ಎಂದೂ ನಡೆದಿರಲಿಲ್ಲ. ಮುಂದೆ ಇದು ಅತ್ಯಂತ ಕೆಟ್ಟ ಪರಂಪರೆಗೆ ನಾಂದಿ ಹಾಡಬಹುದು. ಇಷ್ಟೆಲ್ಲ ಆಗಿಯೂ ಯಾರಾದರೂ, ‘ನಮ್ಮ ಬಳಿ ಹಣ ಇರಲಿಲ್ಲ ಅದಕ್ಕಾಗಿ ಸೋತೆವು’ ಎಂದು ಹೇಳಿದರೆ ಅದು ಪಕ್ಕಾ ಆಷಾಢಭೂತಿತನ.
ಚುನಾವಣೆಗಿಂತ ಮುಂಚೆಯೇ ಎಲ್ಲರಿಗೂ ಗೊತ್ತಿತ್ತು, ಗೆಲ್ಲಲು ಎಷ್ಟು ಹಣ ಬೇಕಾಗಬಹುದು ಎಂದು. ತಮ್ಮ ಎದುರಾಳಿ ಒಂದು ಕೊಟ್ಟರೆ ತಾನು ಎರಡು ಕೊಡುತ್ತೇನೆ ಎನ್ನುವವರೇ ಬಹುಪಾಲು ಚುನಾವಣೆಗೆ ನಿಂತಿದ್ದಾರೆ. ಅವರು ಗೆದ್ದಿದ್ದಾರೆಯೇ ಇಲ್ಲವೇ ಎಂಬುದು ಬೇರೆ ಮಾತು. ಕನಿಷ್ಠ ಅಷ್ಟು ‘ಸಾಮರ್ಥ್ಯ’ ಇದ್ದವರೇ ಕಣಕ್ಕೆ ಇಳಿದಿದ್ದಾರೆ ಮತ್ತು ಸೆಣಸಿದ್ದಾರೆ. ಅಂಥ ಸಾಮರ್ಥ್ಯ ಇಲ್ಲದವರು ಕಣಕ್ಕೆ ಇಳಿಯುವ ಸಾಹಸವನ್ನೇ ಮಾಡಿಲ್ಲ. ಆದರೂ ಪ್ರಜಾಪ್ರಭುತ್ವದ ಆಶಯಗಳಿಗೆ ಸಂಪೂರ್ಣವಾಗಿ ತದ್ವಿರುದ್ಧವಾದ ಈ ಸಾರಿಯ ಚುನಾವಣೆಯ ಫಲಿತಾಂಶದಲ್ಲಿ ಅಲ್ಲೊಂದು ಇಲ್ಲೊಂದು ಒಳ್ಳೆಯ ಅಂಶಗಳು ಇರುವಂತೆ ಕಾಣುತ್ತದೆ. ಚುನಾವಣೆಗಿಂತ ಕೆಲವು ತಿಂಗಳ ಮುಂಚೆ, ‘ಗೋಣಿ ಚೀಲದಲ್ಲಿ ಹಣ ತಂದು ಹಂಚುವವರು ಗೆಲ್ಲುತ್ತಾರೆ. ನಾನೂ ಗೋಣಿ ಚೀಲದಲ್ಲಿಯೇ ಹಣ ತಂದು ಹಂಚುವೆ’ ಎಂದು ಹೇಳಿದ ಅಹಂಕಾರಿಯನ್ನು ಈ ಸಾರಿ ಮತದಾರರು ಸೋಲಿಸಿದ್ದಾರೆ.
ಪ್ರಜಾವಾಣಿಯ ಡಿಸೆಂಬರ್ 13ರ ಸಂಚಿಕೆಯಲ್ಲಿ, ‘ಇನ್ನು ಮುಂದೆ ಮೇಲ್ಮನೆ ಇರುವುದು ಹೀಗೇನಾ...’ ಎಂದು ಬರೆದಿದ್ದೆ. ಅಂದು ದಕ್ಷಿಣ ಕರ್ನಾಟಕದ ಒಬ್ಬ ಶಾಸಕರು ಫೋನ್ ಮಾಡಿದರು. ‘ನೀವು ಬರೆದುದು ಸಂಪೂರ್ಣ ನಿಜ. ಅದರಲ್ಲಿ ಲವಲೇಶವೂ ಸುಳ್ಳಿಲ್ಲ. ಆದರೆ, ನಮ್ಮ ಜಿಲ್ಲೆಯಲ್ಲಿ ಒಂದು ಪ್ರಯೋಗ ಮಾಡುತ್ತಿದ್ದೇವೆ. ಕಂದಾಯ ಇಲಾಖೆಯಲ್ಲಿ ಯಾವುದೋ ಪುಟ್ಟ ನೌಕರಿ ಮಾಡಿದ ವ್ಯಕ್ತಿಯೊಬ್ಬ ತನ್ನ ಬಳಿ ₹12 ಕೋಟಿ ಇವೆ. ಟಿಕೆಟ್ ಕೊಡಿಸಿ ಎಂದು ಬಂದಿದ್ದ. ಅವನನ್ನು ಹಾಗೆಯೇ ಸಾಗಹಾಕಿ ನಮ್ಮ ಪಕ್ಷದ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದೇವೆ. ಅವರ ಬಳಿ ಹಣ ಇಲ್ಲ. ನಾವೇ ಕೆಲವರು ಅವರ ಪರವಾಗಿ ಹಣ ಹಂಚುವ ಹೊಣೆ ಹೊತ್ತುಕೊಂಡಿದ್ದೇವೆ. ಅವರನ್ನು ಗೆಲ್ಲಿಸುತ್ತೇವೆ. ಇದು ಉತ್ತಮ ದಾರಿ ಅಲ್ಲ, ಆದರ್ಶವೂ ಅಲ್ಲ. ಆದರೆ, ಪಕ್ಷದ ಒಬ್ಬ ಕಾರ್ಯಕರ್ತ ಗೆಲ್ಲುತ್ತಾನೆ ಎಂಬುದು ಒಂದೇ ಸಮಾಧಾನ’ ಎಂದರು. ‘ನೀವು ಒಬ್ಬರಿಗೆ ಎಷ್ಟು ಹಣ ಕೊಡುತ್ತೀರಿ’ ಎಂದು ಅವರಿಗೆ ಕೇಳಿದೆ. ‘ನಾವೂ ಇಪ್ಪತ್ತು ಸಾವಿರ ಕೊಡಲೇಬೇಕಾಗುತ್ತದೆ’ ಎಂದರು ಅವರು. ಆ ಕಾರ್ಯಕರ್ತ ಗೆದ್ದಿದ್ದಾರೆ. ಆದರೆ, ‘ಗೋಣಿ ಚೀಲದಲ್ಲಿ ಹಣ ತರುವೆ’ ಎಂದ ಧಿಮಾಕನ್ನು ಅಲ್ಲಿ ಸೋಲಿಸಿದ ಮತದಾರರು, ಇಲ್ಲಿ ಗೆದ್ದರೇ? ಅನುಮಾನ.
ಚುನಾವಣೆ ಎಂದರೆ ಅದು ಸಮಾನ ಹೋರಾಟದ ಅವಕಾಶ ಕಲ್ಪಿಸುವ ಒಂದು ಕಣ. ಮೇಲ್ಮನೆಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಹೆಣ್ಣು ಮಕ್ಕಳು ಸ್ಪರ್ಧಿಸಲು ಸಾಧ್ಯ ಇದೆಯೇ? ಅವರನ್ನು ಎಲ್ಲ ಪಕ್ಷಗಳೂ, ಎಲ್ಲೋ ಒಂದೆರಡು ಅಪವಾದ ಬಿಟ್ಟು, ದೂರ ಇಟ್ಟುದು ಏನನ್ನು ಹೇಳುತ್ತದೆ? ಅವರಿಗೆ ಗೆಲ್ಲಲು ಸಾಮರ್ಥ್ಯವೇ ಇಲ್ಲ ಎಂದೇ? ಜನಸಂಖ್ಯೆಯ ಅರ್ಧಭಾಗವನ್ನೇ ಹೀಗೆ ದೂರ ಇಟ್ಟು ನಾವು ಎಂಥ ಪ್ರಜಾಪ್ರಭುತ್ವ ತರಲು ಹೊರಟಿದ್ದೇವೆ? ಅಥವಾ ತಾವು ಹೀಗೆ ಮಾನ ಮರ್ಯಾದೆ ಬಿಟ್ಟು ಹಣ ಹಂಚಲು ಗಂಡಸರಷ್ಟು ನಾಚಿಕೆಯಿಲ್ಲದವರು ಅಲ್ಲ ಎಂದು ಹೆಣ್ಣುಮಕ್ಕಳು ಹೇಳುತ್ತಿರಬಹುದೇ? ಗೆದ್ದ ಎಲ್ಲ 25 ಮಂದಿಯಲ್ಲಿ ಒಬ್ಬರೂ ಹೆಣ್ಣು ಮಗಳು ಇಲ್ಲ ಎಂದರೆ ಏನರ್ಥ?
ಹಣ ಯಾರು ಯಾರನ್ನೋ ಗೆಲ್ಲಿಸುತ್ತದೆ. ಇನ್ನು ಯಾರು ಯಾರನ್ನೋ ಸೋಲಿಸುತ್ತದೆ. ಕೆಲವು ಸಾರಿ ಅದು ನಮ್ಮ ಒಳಗಿನ ಕೆಚ್ಚನ್ನೂ ದುರ್ಬಲಗೊಳಿಸುತ್ತದೆ. ಈ ಸಾರಿಯ ಚುನಾವಣೆಯಲ್ಲಿ ಹೋರಾಟದ ಹಿನ್ನೆಲೆಯ ಮಾಜಿ ಶಾಸಕರೊಬ್ಬರು ಒಂದು ಪಕ್ಷದ ವಿರುದ್ಧ ಕೆಲಸ ಮಾಡಲು ಮತ್ತು ಇನ್ನೊಂದು ಪಕ್ಷದ ಪರವಾಗಿ ಕೆಲಸ ಮಾಡಲು ಭಾರಿ ಪ್ರಮಾಣದ ಹಣ ತೆಗೆದುಕೊಂಡರು ಎಂದು ಕೇಳಿ ತಿಳಿದೆ. ಮನವರಿಕೆ ಮಾಡಿಕೊಳ್ಳಲು ಮತ್ತೆ ಮತ್ತೆ ಕೇಳಿದೆ. ಎಲ್ಲ ಹೋರಾಟಗಾರರು ಕೊನೆ ಕೊನೆಗೆ ಹೀಗೆಯೇ ಸೋತು ಬಿಡುತ್ತಾರೆಯೇ ಎಂದು ಚಿಂತೆಯಾಯಿತು.
ಎಲ್ಲವನ್ನೂ, ಎಲ್ಲರನ್ನೂ ಭ್ರಷ್ಟಗೊಳಿಸುವ ಇಂಥ ಒಂದು ಚುನಾವಣೆಯಿಂದ ನಾವು ಏನು ಸಾಧಿಸಲು ಹೊರಟಿದ್ದೇವೆ? ಒಂದು ವ್ಯವಸ್ಥೆ ಇನ್ನೂ ಎಷ್ಟು ಕೆಳಗೆ ಹೋದ ಮೇಲೆ ಅದು ಮೇಲೆ ಬರಲು ಆರಂಭಿಸುತ್ತದೆ?... ಜಾರುವ ದಾರಿಗೆ ಕೊನೆ ಎಂಬುದು ಇರುತ್ತದೆಯೇ? ಅಥವಾ ಇರುವುದೇ ಇಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.