ಪತ್ರಿಕೋದ್ಯಮ ಕಷ್ಟದಲ್ಲಿ ಇದೆಯೇ? ಅದು ಎಷ್ಟು ಕಷ್ಟದಲ್ಲಿ ಇದೆ ಎಂದರೆ ಅದನ್ನು ಸುಧಾರಿಸಲು ಇದು ಕೊನೆಯ ಅವಕಾಶವೇ? ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರ ಬಗ್ಗೆ ಜನರಿಗೆ ಅನುಮಾನಗಳು ಶುರುವಾಗಿವೆಯೇ? ಅವರನ್ನೂ ಭ್ರಷ್ಟರ ಪಟ್ಟಿಯಲ್ಲಿ ಜನರು ಸೇರಿಸಿ ಬಿಟ್ಟಿದ್ದಾರೆಯೇ? ಪತ್ರಿಕೋದ್ಯಮ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆಯೇ?...
ನನ್ನ ಪ್ರೀತಿಯ ಪತ್ರಕರ್ತ ವಿನೋದ್ ಮೆಹ್ತಾ, ‘ಎಡಿಟರ್ ಅನ್‌ಪ್ಲಗ್ಡ್’ ಎಂದು ಮತ್ತೆ ಒಂದು ಪುಸ್ತಕ ಬರೆದಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ಅದು ಬಿಡುಗಡೆಯಾಗಿದೆ. 2011ರಲ್ಲಿ ಅವರು ತಮ್ಮ ಆತ್ಮಚರಿತ್ರೆ ‘ಲಖನೌ ಬಾಯ್’ ಬಿಡುಗಡೆ ಮಾಡಿದ್ದರು. ಹೊಸ ಪುಸ್ತಕವನ್ನೂ ಪೆಂಗ್ವಿನ್‌ನವರೇ ಪ್ರಕಟ ಮಾಡಿದ್ದಾರೆ. ಕಳೆದ ವರ್ಷದ ಕೊನೆಯಿಂದ ಈ ವರ್ಷದ ಆರಂಭದವರೆಗೆ ಒಂದೇ ಪಟ್ಟಿಗೆ ಓದಿದ ಈ ಪುಸ್ತಕ ನಾನು ಈಚೆಗೆ ಓದಿದ ಅತ್ಯುತ್ತಮ ಪುಸ್ತಕ. ಮಾಧ್ಯಮದಲ್ಲಿ ಇರುವವರು, ಮಾಧ್ಯಮದಲ್ಲಿ ಏನೇನು ಆಗುತ್ತಿದೆ ಎಂದು ಆಸಕ್ತಿ ಇರುವವರು ಓದಲೇಬೇಕಾದ ಪುಸ್ತಕ ಕೂಡ.
ಅವರ ಮೊದಲ ಪುಸ್ತಕದಲ್ಲಿ ಆತ್ಮಚರಿತ್ರೆಯ ಅಂಶಗಳು ಹೆಚ್ಚಿಗೆ ಇದ್ದುವು. ಅದಕ್ಕೆ ಪೂರಕವಾಗಿರುವ ಎರಡನೇ ಮತ್ತು ಅವರೇ ಹೇಳಿದ ಹಾಗೆ ಕೊನೆಯದಾಗಿರುವ ಈ ಪುಸ್ತಕದಲ್ಲಿ ಆತ್ಮಚರಿತ್ರೆಯ ಅಂಶಗಳು ಹೆಚ್ಚಿಗೆ ಇಲ್ಲ. ಅವು ಅಲ್ಲಲ್ಲಿ ಇಣುಕಿದರೂ ಒಟ್ಟಾರೆಯಾಗಿ ಪತ್ರಿಕೋದ್ಯಮದ ಏರುಪೇರು ಕುರಿತ ಪುಸ್ತಕ ಇದು. ತನ್ನ ಸುವರ್ಣ ಕಾಲದಿಂದ ಸುಧಾರಿಸಿಕೊಳ್ಳಲು ಕೊನೆಯ ಅವಕಾಶ ಎನ್ನುವ ಹಂತಕ್ಕೆ ಬಂದು ನಿಂತಿರುವ ಉದ್ಯಮದ ಚಕ್ರಗತಿಯನ್ನೂ ಈ ಪುಸ್ತಕ ಗುರುತಿಸುತ್ತದೆ.
‘Drinking in the Last Chance Saloon’ ಎಂಬ ಅಧ್ಯಾಯದಲ್ಲಿ ಅದನ್ನೇ ಅವರು ದೀರ್ಘವಾಗಿ ಚರ್ಚಿಸಿದ್ದಾರೆ. ಬಹುಶಃ ಪುಸ್ತಕದ ಅತ್ಯುತ್ತಮ ಎನ್ನಬಹುದಾದ ಅಧ್ಯಾಯ ಕೂಡ ಅದೇ ಆಗಿದೆ. ಎರಡನೇ ಅತ್ಯುತ್ತಮ ಅಧ್ಯಾಯ ನೀರಾ ರಾಡಿಯಾ ಕುರಿತಾದುದು. ಎರಡಕ್ಕೂ ಒಂದು ಅಂತರ್‌ಸಂಬಂಧವೂ ಇದೆ! ಪತ್ರಿಕೋದ್ಯಮದ ಸುವರ್ಣ ಕಾಲ ಎಂದು ಯಾವ ಕಾಲಘಟ್ಟಕ್ಕೆ ಕರೆಯಬೇಕು? ಅದು ಅರವತ್ತು ಮತ್ತು ಎಪ್ಪತ್ತನೇ ದಶಕದಲ್ಲಿಯೇ ಮುಗಿದು ಹೋಯಿತೇ? ಆಗೆಲ್ಲ ಎಂಥೆಂಥ ಪತ್ರಕರ್ತರು ಇದ್ದರು!
ಶ್ಯಾಮಲಾಲ್, ಗಿರಿಲಾಲ್ ಜೈನ್, ಎನ್.ಜೆ.ನಾನ್‌ಪೊರಿಯಾ, ಖುಷ್ವಂತ್‌ಸಿಂಗ್, ಫ್ರಾಂಕ್ ಮೊರೇಸ್, ಎಸ್.ಮುಳಗಾಂವಕರ್, ಜಾರ್ಜ್ ವರ್ಗೀಸ್... ಒಬ್ಬರೇ ಇಬ್ಬರೇ? ಎಲ್ಲರೂ ದೊಡ್ಡವರು. ಗಿರಿಲಾಲ್ ಜೈನ್ ಅವರಂತೂ ತಾವು ಪ್ರಧಾನಿಗೆ ಮತ್ತು ಇನ್ನೊಬ್ಬರಿಗೆ ಮಾತ್ರ ಬರೆಯುತ್ತೇನೆ ಎಂದುಕೊಂಡಿದ್ದರು! ಆದರೆ, ಇನ್ನೊಬ್ಬರು ಯಾರು ಎಂದು ಅವರಿಗೆ ಗೊತ್ತಿರಲಿಲ್ಲ! ಅವರೆಲ್ಲ ಪತ್ರಿಕೆಯಲ್ಲಿ ಸಂಪಾದಕೀಯ ಪುಟವೇ ಶ್ರೇಷ್ಠ ಪುಟ ಎಂದುಕೊಂಡವರು.
ಆಗಿನ ಕಾಲದಲ್ಲಿ ಪತ್ರಿಕೆಗಳಲ್ಲಿ ಒಂದು ವಿನ್ಯಾಸ ಎಂದು ಇರುತ್ತಿರಲಿಲ್ಲ. ಮೊದಲನೇ ಪುಟದಲ್ಲಿ ಕನಿಷ್ಠ ನೂರು ಸುದ್ದಿಗಳು ಇರುತ್ತಿದ್ದುವು. ಆಗಿನ ಪ್ರಧಾನಿಯೋ, ಮುಖ್ಯಮಂತ್ರಿಯೋ ಏನು ಹೇಳಿದರೂ ಅದೇ ಮರುದಿನದ ಮುಖ್ಯ ಸುದ್ದಿ ಎಂದು ಅನಿಸುತ್ತಿತ್ತು. ಅವರೆಲ್ಲ ಒಂದು ರೀತಿಯಲ್ಲಿ ದಂತಗೋಪುರದಲ್ಲಿ ಇದ್ದ ಸಂಪಾದಕರು. ಹಾಗೆ ನೋಡಿದರೆ ಅವರ ಪೈಕಿ ಖುಷ್ವಂತ್ ಸಿಂಗ್ ಒಬ್ಬರೇ ಒಂದಿಷ್ಟು ಹುಲುಮಾನವರ ಜತೆ ಮಾತನಾಡಬಹುದಾದಂಥ ವ್ಯಕ್ತಿಯಾಗಿದ್ದರು. ಉಳಿದ ಎಲ್ಲರಿಗಿಂತ ಅವರಿಗೆ ನೆಲದ ಜತೆಗೆ, ಮಣ್ಣಿನ ಜತೆಗೆ ಹೆಚ್ಚು ಸಂಪರ್ಕ ಇತ್ತು. ಪೋಲಿ ಮಾತುಗಳನ್ನು ಆಡಿ, ಬರೆದು ಸಿಂಗ್ ಕಾಲ ಕಳೆಯುತ್ತಿದ್ದರು.
ಹಳೆಯ ಕಾಲದ ಸಂಪಾದಕರ ಬಗ್ಗೆ, ಅವರು ತಮ್ಮ ಸುತ್ತಲೇ ಸುತ್ತಿಕೊಂಡ ಪ್ರಭಾವಳಿಯ ಬಗ್ಗೆ ಏನೇ ಹೇಳಿದರೂ ಅವರಿಗೆ ರಾಜಕೀಯ ಆಕಾಂಕ್ಷೆಗಳು ಇರಲಿಲ್ಲ. ಹಣ ಅವರಿಗೆ ಮುಖ್ಯ ಎನಿಸಿರಲಿಲ್ಲ. ಅವರು ರಾಜ್ಯಸಭೆಗೋ, ವಿಧಾನ ಪರಿಷತ್ತಿಗೋ ಅಥವಾ ಇನ್ನಾವುದೋ ಸರ್ಕಾರದ ಹುದ್ದೆಗೆ ಹೋಗಲು ಆಸೆಪಟ್ಟವರು ಅಲ್ಲ. ಅವರು ಏನಿದ್ದರೂ ತಾವು ಕೆಲಸ ಮಾಡುವ ರಾಜ್ಯದ ಅಥವಾ ರಾಷ್ಟ್ರದ ಪತ್ರಿಕೆಯನ್ನು ಸಂಪಾದನೆ ಮಾಡುವುದೇ ದೊಡ್ಡ ಕೆಲಸ, ಗೌರವ ಎಂದು ಅಂದುಕೊಂಡವರು.
ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಹೇಳಿದ ಹಾಗೆ, ಜನರ ಕಣ್ಣೀರು ಒರೆಸುವುದೇ ತಮ್ಮದೂ ಕೈಂಕರ್ಯ ಎಂದುಕೊಂಡವರು. ಈಗಿನ ಸಂಪಾದಕರ ಹಾಗೆ ಜಾಹೀರಾತುದಾರರ ಜತೆಗೆ ಪಂಚತಾರಾ ಹೋಟೆಲ್‌ಗೆ ಹೋಗಿ ಸಭೆ ಮಾಡಬೇಕು ಎಂದು ಅವರಿಗೇನಾದರೂ ಅವರ ಮಾಲೀಕರು ಹೇಳಿದ್ದರೆ ಬಹುಶಃ ಅವರು ರಾಜೀನಾಮೆ ಕೊಟ್ಟು ಹೊರಟುಬಿಡುತ್ತಿದ್ದರು.
ಈಗ ಕಾಲ ಬದಲಾಗಿದೆ. ಸಂಪಾದಕೀಯ ಪುಟವನ್ನು ಓದುವವರು ಕಡಿಮೆ.
ಮುಖಪುಟ ರೂಪಿಸಲು ನಮ್ಮೊಳಗೇ ಭಾರಿ ಪೈಪೋಟಿ ನಡೆದಿದೆ. ಅದಕ್ಕೇ ನಾವು ಚಿತ್ರ ವಿಚಿತ್ರ ಶೀರ್ಷಿಕೆ ಕೊಡುತ್ತಿದ್ದೇವೆ. ಪತ್ರಿಕೆಗಳ ಸಂಖ್ಯೆ ಬೆಳೆದಿದೆ. ಸಂಖ್ಯೆಯನ್ನು ಬೆಳೆಸಲು ಏನೇನು ಮಾಡಬೇಕೋ, ಮಾಡಬಾರದೋ ಅದನ್ನೂ ಮಾಡುತ್ತಿದ್ದೇವೆ. ಮೆಹ್ತಾ ಅವರು ತಮ್ಮ ಪುಸ್ತಕದಲ್ಲಿ ಈಗಿನ ಸ್ಪರ್ಧೆಯನ್ನು ‘ಹುಚ್ಚುತನದ್ದು’ ಎಂದು ಕರೆದಿದ್ದಾರೆ. ‘ಎಪ್ಪತ್ತರ ದಶಕದಲ್ಲಿ 12,000 ಇದ್ದ ಪತ್ರಿಕೆಗಳ ಸಂಖ್ಯೆ ಈಗ ಪ್ರಾದೇಶಿಕ ಪತ್ರಿಕೆಗಳ ಸಂಖ್ಯೆಯನ್ನೂ ಸೇರಿಸಿದರೆ 80,000ಕ್ಕೆ ಏರಿದೆ. 33 ಕೋಟಿ ಪತ್ರಿಕೆಗಳು ಮಾರಾಟ ಆಗುತ್ತಿವೆ. ಒಂದು ಪತ್ರಿಕೆಯ ಯಶಸ್ಸಿನಲ್ಲಿ ಸಂಪಾದಕನ ಪಾತ್ರ ದೊಡ್ಡದು. ಅದು ಸೋತರೆ ಅವನ ಕತ್ತು ಕಳಚಿ ಬೀಳುತ್ತದೆ. ಗೆದ್ದರೆ ಮಾರುಕಟ್ಟೆ ವಿಭಾಗಕ್ಕೆ ತುರಾಯಿ ಸಿಗುತ್ತದೆ!
ಎಪ್ಪತ್ತರ ದಶಕದ ಸಂಪಾದಕ ತನ್ನನ್ನೇ ತಾನು ವೃತ್ತಿಗೆ ಸಮರ್ಪಿಸಿಕೊಂಡಿದ್ದ. ಆತ ತುಂಬ ಓದಿಕೊಂಡವನಾಗಿದ್ದ, ಅನುಭವಿಯಾಗಿದ್ದ. ಆದರೆ, ಆತ ಈಗಿನ ಕಾಲದ ಸಂಪಾದಕನ ಹಾಗೆ ‘ಆಲ್ ರೌಂಡರ್’ ಆಗಿರಲಿಲ್ಲ. ಈಗಿನ ಸಂಪಾದಕ ಬ್ಯಾಟಿಂಗು, ಬೌಲಿಂಗು, ಫೀಲ್ಡಿಂಗು ತಿಳಿದವನು ಮಾತ್ರ ಆಗಿದ್ದರೆ ಸಾಲದು. ಅಗತ್ಯ ಬಿದ್ದರೆ 12ನೇ ಆಟಗಾರನ ಹಾಗೆ ‘ಡ್ರಿಂಕ್ಸ್’ ಅನ್ನೂ ತಂದು ಕೊಡಬೇಕು’ ಎಂದು ಮೆಹ್ತಾ ಆತನ ಅಥವಾ ಆಕೆಯ ಕಷ್ಟಗಳನ್ನು ಗುರುತಿಸಿದ್ದಾರೆ.
ಸಂಪಾದಕ ಎದುರಿಸುವ ಕಷ್ಟಕ್ಕೂ ಉದ್ಯಮ ಎದುರಿಸುತ್ತಿರುವ ಕಷ್ಟಕ್ಕೂ ಸಂಬಂಧ ಇದೆಯೆ? ಉದ್ಯಮ ಶ್ರೀಮಂತ ಆಗುತ್ತ ಹೊರಟಿರಬಹುದು, ಆದರೆ ಅದು ಜನರ ವಿಶ್ವಾಸದ ವಿಚಾರದಲ್ಲಿ ಬಡವಾಗುತ್ತ ಹೊರಟಿದೆಯೇ? ಮೆಹ್ತಾ ತಾವು ಸಂಪಾದಿಸುತ್ತಿದ್ದ ‘ಔಟ್‌ಲುಕ್’ ವಾರಪತ್ರಿಕೆಯಲ್ಲಿ ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯೊಂದನ್ನು ಪ್ರಸ್ತಾಪಿಸಿದ್ದಾರೆ. ಯಾವ ಯಾವ ವೃತ್ತಿಗೆ ಸಮಾಜದಲ್ಲಿ ಎಷ್ಟೆಷ್ಟು ಗೌರವ ಇದೆ ಎಂದು ಅರ್ಥಮಾಡಿಕೊಳ್ಳುವ ಸಮೀಕ್ಷೆ ಅದು.
ಎಂದಿನಂತೆ ರಾಜಕಾರಣಿಗಳು ಭ್ರಷ್ಟರ ಪಟ್ಟಿಯಲ್ಲಿ ಮೊದಲಿನ ಸ್ಥಾನದಲ್ಲಿ ಇದ್ದರು. ಜನರಿಗೆ ಅವರ ಬಗ್ಗೆ ಯಾವ ಗೌರವವೂ ಇರಲಿಲ್ಲ. ವೈದ್ಯರು, ಶಿಕ್ಷಕರು, ವಿಜ್ಞಾನಿಗಳು, ಸ್ವಯಂ ಸೇವಾ ಸಂಸ್ಥೆ ನಡೆಸುವವರಿಗೆ ಉನ್ನತ ಗೌರವದ ಸ್ಥಾನ ಇತ್ತು. ಪತ್ರಕರ್ತರ ಬಗೆಗೂ ಅಂಥ ಕೆಟ್ಟ ಅಭಿಪ್ರಾಯವೇನೂ ಇರಲಿಲ್ಲ. ಈಚೆಗೆ ‘ಇಂಡಿಯಾ ಟುಡೆ’ ನಡೆಸಿದ ಅದೇ ಬಗೆಯ ಸಮೀಕ್ಷೆಯಲ್ಲಿ ಪತ್ರಕರ್ತರೂ ಭ್ರಷ್ಟರ ಪಟ್ಟಿಯಲ್ಲಿ ಮೇಲಿನ ಮೂರು ನಾಲ್ಕು ಸ್ಥಾನಗಳಲ್ಲಿಯೇ ಇದ್ದಾರೆ.
ಏಕೆ ಹೀಗಾಯಿತು? ಉನ್ನತ ಆದರ್ಶಗಳನ್ನು ಇಟ್ಟುಕೊಂಡು, ಸಮಾಜವನ್ನು ಬದಲಿಸಬೇಕು ಎಂಬ ಉಮೇದಿನಿಂದ ಬಂದ ಹೊಸ ಕಾಲದ ಹುಡುಗ ಹುಡುಗಿಯರಿಗೆ ತೋಟಗಳಲ್ಲಿ ಬಂಗಲೆಗಳನ್ನು ಕಟ್ಟಿಸಿಕೊಂಡ, ದುಬಾರಿ ಕಾರುಗಳಲ್ಲಿ ಸಂಚರಿಸುವ ಪ್ರಧಾನ ಸಂಪಾದಕರು ಒಳ್ಳೆಯ ಮಾದರಿಗಳನ್ನು ಹಾಕಿಕೊಟ್ಟಿಲ್ಲ ಎಂದು ಮೆಹ್ತಾ ವಿಷಾದಿಸಿದ್ದಾರೆ. ಸಮಸ್ಯೆ ಏನಾಗಿದೆ ಎಂದರೆ ನಮ್ಮ ವರ್ತನೆಗಳು ಸಾರ್ವಜನಿಕ ಬದುಕಿನಲ್ಲಿ ವಿಮರ್ಶೆಗೆ ಒಳಪಡಬೇಕು ಎಂದು ನಾವು ಬಯಸಿಲ್ಲ.
ಪತ್ರಕರ್ತರೂ ರಾಜಕಾರಣಿಗಳ ಹಾಗೆ ಪ್ರತಿ ವರ್ಷ ತಮ್ಮ ಆಸ್ತಿಪಾಸ್ತಿ ಘೋಷಿಸಬೇಕು ಎಂದು ನಮ್ಮವರಲ್ಲಿಯೇ ಯಾರಾದರೂ ಕೇಳಿದರೆ ಆತನಿಗೆ ‘ಹರಿಶ್ಚಂದ್ರ’ ಎಂದು ಹಂಗಿಸಿದ್ದೇವೆ. ಬೇರೆ ಯಾರಾದರೂ ಹೇಳಿದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಹುಯಿಲು ಎಬ್ಬಿಸಿದ್ದೇವೆ. ದೂರ ಸಂಪರ್ಕ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಲಾಬಿ ಮಾಡಿ ಸಿಕ್ಕಿ ಬಿದ್ದ ನೀರಾ ರಾಡಿಯಾ ಟೇಪುಗಳನ್ನು ಬಹಿರಂಗ ಪಡಿಸಿ ಕಷ್ಟದಲ್ಲಿ ಸಿಲುಕಿದ ವಿನೋದ್ ಮೆಹ್ತಾ ಒಟ್ಟು ಪತ್ರಿಕೋದ್ಯಮದಲ್ಲಿ ಅದು ಒಂದು ‘ಪ್ರಮುಖ ಕಾಲಘಟ್ಟ’ ಎಂದು ಗುರುತಿಸಿದ್ದಾರೆ. ಪತ್ರಕರ್ತರನ್ನು ನೀರಾ ಬೆತ್ತಲು ಮಾಡಿಬಿಟ್ಟರು.
ಬೆತ್ತಲಾದವರಲ್ಲಿ ಪತ್ರಕರ್ತೆಯರೂ ಇದ್ದರು! ಎಲ್ಲಿಂದಲೋ ಬಂದ ಈ ಚೆಲುವೆ ಎಲ್ಲ ಸಂಸ್ಥೆಗಳ ದೌರ್ಬಲ್ಯವನ್ನು ತೆರೆದು ಇಟ್ಟರು. ಯಾರಿಗೂ ಲಂಚ ಕೊಡದವರು, ಏನನ್ನೂ ಅಕ್ರಮ ಮಾಡದವರು ಎಂಬ ಪ್ರಖ್ಯಾತಿಯ ಉದ್ಯಮಿಗಳ ಅಚ್ಚ ಬಿಳಿ ಅಂಗಿಯ ಮೇಲೂ ಕಪ್ಪು ಕಲೆಗಳು ಇವೆ ಎಂದು ತೋರಿಸಿಕೊಟ್ಟರು. ಎಪ್ಪತ್ತರ ದಶಕದಲ್ಲಿ ಯಾವ ಪತ್ರಕರ್ತರ ಕೊಠಡಿಗೆ ಹೋಗಲು ಹೆದರಿಕೆ ಆಗುತ್ತಿತ್ತೋ ಈಗ ಅವರೂ ನಮ್ಮ ಹಾಗೆಯೇ ಆಮಿಷಗಳಿಗೆ ಬಲಿಯಾಗುವವರು, ಮನುಷ್ಯರು ಎಂದು ಅವರನ್ನು ‘ಬಲಿ’ ಹಾಕಬೇಕು ಎಂದು ಕಾಯುವವರಿಗೆ ಗೊತ್ತಾಯಿತು.
ತನ್ನ ಅನುಕೂಲಕ್ಕೆ ಪತ್ರಿಕೆಯನ್ನು ಬಳಸಿಕೊಳ್ಳಬಹುದು, ಅದರಿಂದ ತಾನೂ ಅನುಕೂಲ ಪಡೆಯಬಹುದು, ತನಗೆ ಅನುಕೂಲ ಮಾಡಿಕೊಟ್ಟವನಿಗೂ ಒಂದಿಷ್ಟು ಅನುಕೂಲ ಮಾಡಿಕೊಡಬಹುದು ಎಂದು ಅವರಿಗೆಲ್ಲ ಗೊತ್ತಾಯಿತು. ಮೊದಲು ಚಿಟಿಕೆ ಉಪ್ಪಿನ ಜತೆಗೆ ಪತ್ರಿಕೆ ಓದುತ್ತಿದ್ದ ಜನರು ಈಗ ಪಕ್ಕದಲ್ಲಿ ಒಂದು ಬಕೆಟ್ ಉಪ್ಪು ಇಟ್ಟುಕೊಂಡು ಪತ್ರಿಕೆ ಓದುವಂತೆ ಆಯಿತು. ಟೀವಿ ಜಗತ್ತಿನದು ಇನ್ನೊಂದು ಕಥೆ.
ಪತ್ರಕರ್ತರಿಗೆ ಸಾಮಾನ್ಯವಾಗಿ ತಲೆಯ ಮೇಲೆ ಎರಡು ಮೂರು ಕೊಂಬುಗಳು ಇರುತ್ತವೆ; ಟೀವಿ ಪತ್ರಕರ್ತರಿಗೆ ತಲೆ ತುಂಬ ಬರೀ ಕೊಂಬುಗಳು! ಅವರನ್ನು ಹಿಡಿದು ನಿಲ್ಲಿಸಿ ಮಾತನಾಡುವುದೇ ಕಷ್ಟ. ಅವರೆಲ್ಲ ಬೇರೆ ಲೋಕದಿಂದ ಬಂದವರ ಹಾಗೆ ಕಾಣಿಸುತ್ತಾರೆ! ಇಡೀ ದೇಶವೇ ತಮ್ಮ ಮಾತನ್ನು ಕೇಳುತ್ತದೆ ಎನ್ನುವ ಹಾಗೆ ಬೋಧಿಸುತ್ತಾರೆ. ಐದು ವರ್ಷಗಳ ಹಿಂದೆ ನೀರಾ ರಾಡಿಯಾ ಟೇಪುಗಳನ್ನು ಬಹಿರಂಗ ಮಾಡಿದವರು ವಿನೋದ್ ಮೆಹ್ತಾ. ಯಾವ ಪತ್ರಿಕೆಯಲ್ಲಿಯೂ ಬಹುಕಾಲ ಉಳಿಯದ ಮೆಹ್ತಾ, ರಹೇಜಾ ಒಡೆತನದ ‘ಔಟ್‌ಲುಕ್’ ಪತ್ರಿಕೆಯಲ್ಲಿ 17 ವರ್ಷ ನಿರಂತರವಾಗಿ ಕೆಲಸ ಮಾಡಿದ್ದು ಉಳಿದವರಿಗೆ ಮಾತ್ರವಲ್ಲ ಸ್ವತಃ ಅವರಿಗೂ ಅಚ್ಚರಿ. ಆದರೆ, ಅದೇ ಟೇಪು, ಮೆಹ್ತಾ ಅವರ ಸಂಪಾದಕತ್ವಕ್ಕೂ ಸಂಚಕಾರ ತಂದಿತು.
ಇದನ್ನು ಮೆಹ್ತಾ, ತಮ್ಮ ಹೊಸ ಪುಸ್ತಕ ಬಿಡುಗಡೆ ಆಗುವುದಕ್ಕಿಂತ ಮುಂಚೆ ‘ಸ್ಕ್ರೋಲ್’ ಆನ್‌ಲೈನ್ ಸುದ್ದಿ ಸಂಸ್ಥೆಗೆ ಕೊಟ್ಟ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಪತ್ರಿಕೆಗಳ ಸತ್ಯ ಪ್ರತಿಪಾದನೆಯ ಕೆಲಸದಲ್ಲಿ ಜಾಹೀರಾತು ಹಿತಾಸಕ್ತಿ ಹೇಗೆ ಅಡ್ಡಿಯಾಗುತ್ತದೆ ಎಂಬುದಕ್ಕೆ ರಾಡಿಯಾ ಟೇಪು ಪ್ರಕರಣ ಒಂದು ಬಹುದೊಡ್ಡ ನಿದರ್ಶನವೇ? ಇಲ್ಲ ಎಂದು ಹೇಳುವುದು ಬಹಳ ಕಷ್ಟ. ಈ ಟೇಪು ಬಹಿರಂಗ ಮಾಡುವ ಮೂಲಕ ಉದ್ಯಮದಲ್ಲಿ ಮತ್ತು ವೃತ್ತಿಯಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದ್ದ ಮೆಹ್ತಾ ಕೂಡ ಈಗ ‘ಕಿಚ್ಚು ಇಲ್ಲದ ಸಂಪಾದಕ!’ (Editor Unplugged!).
ಸಂಪಾದಕನಲ್ಲಿ ಕಿಚ್ಚು ಇರಬೇಕು. ಕೆಚ್ಚೂ ಇರಬೇಕು. ಏಕೆಂದರೆ ರಾಜಕಾರಣ ಮತ್ತು ಪತ್ರಿಕೆಗಳ ನಡುವೆ ಸಂಬಂಧ ಸುಮಧುರ ಆಗುತ್ತ ಹೋದಷ್ಟೂ ಜನರ ಕಷ್ಟಗಳು ಹೆಚ್ಚಾಗುತ್ತ ಹೋಗುತ್ತವೆ. ಜನರಿಗೆ ಪತ್ರಿಕೆಗಳ ಮೇಲಿನ ನಂಬಿಕೆ ಕಡಿಮೆ ಆಗುತ್ತ ಹೋಗುತ್ತದೆ. ಪತ್ರಿಕೆಗಳ ಬಗೆಗೆ ಜನರಿಗೆ ಈಗ ಆಕ್ಷೇಪ ಇದ್ದರೆ ಅವರು ಯಾರ ಬಳಿಯೂ ಹೋಗುವಂತೆ ಇಲ್ಲ. ದೂರುವಂತೆ ಇಲ್ಲ. ಪತ್ರಿಕಾ ಮಂಡಳಿಗೆ ಮಾರ್ಕಂಡೇಯ ಕಟ್ಜು ಅವರಂಥ ಖಡಕ್ ನಿವೃತ್ತ ನ್ಯಾಯಮೂರ್ತಿಗಳು ಅಧ್ಯಕ್ಷರಾದರೂ ದಾರಿ ತಪ್ಪಿದ ಒಂದು ಪತ್ರಿಕೆಯನ್ನೂ ಅವರು ಸರಿದಾರಿಗೆ ತರಲು ಆಗಲಿಲ್ಲ.
ಹಾಗಾದರೆ, ಮಾಧ್ಯಮದವರನ್ನೇ ಒಳಗೊಂಡ ಒಂದು ಸಂಸ್ಥೆಯನ್ನು ಏಕೆ ಸ್ಥಾಪಿಸಬಾರದು ಎಂದು ಮೆಹ್ತಾ ಪ್ರಶ್ನಿಸಿದ್ದಾರೆ. ನಾವು ನಾವೇ ಸೇರಿಕೊಂಡು ಒಂದು ಸಂಸ್ಥೆಯನ್ನು ಹುಟ್ಟುಹಾಕಬೇಕು. ತಪ್ಪು ಮಾಡಿದ ಮಾಧ್ಯಮದವರನ್ನು ಅವರೇ ಕರೆದು ವಿಚಾರಿಸಬೇಕು. ಅವರೇ ಶಿಕ್ಷೆ ಕೊಡಬೇಕು. ಇಲ್ಲವಾದರೆ ಕಾಲ ಮಿಂಚಿ ಹೋಗಿಬಿಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.