ಸೋಲು ಗೆಲುವಿನ ನಡುವಿನ ಅಂತರ ಬಹಳ ದೊಡ್ಡದು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭ ಈ ಅಂತರಕ್ಕೆ ದೊಡ್ಡ ನಿದರ್ಶನ ಇದ್ದಂತೆ ಇತ್ತು. ಟೀವಿ ಪರದೆ ಮೇಲೆ ಆಗಾಗ ಕಾಣಿಸುತ್ತಿದ್ದ ಸೋನಿಯಾ ಗಾಂಧಿಯವರ ಮುಖ ಮತ್ತಷ್ಟು ಸುಕ್ಕಾದಂತೆ ಇತ್ತು. ಆಕೆ ನತದೃಷ್ಟ ಹೆಣ್ಣುಮಗಳು. ಎರಡು ಸಾರಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ, ಒಂದು ಸಾರಿಯೂ ಪ್ರಧಾನಿ ಆಗಲಿಲ್ಲ.
ಅವರು 1990ರ ದಶಕದಲ್ಲಿ ಪಕ್ಷದ ಸೂತ್ರ ಹಿಡಿದುಕೊಳ್ಳುವವರೆಗೆ ಅದು ಗಾಳಿಗೆ ಸಿಕ್ಕ ಪಟದಂತೆ ತೇಲಾಡತೊಡಗಿತ್ತು. ಈಗಲೂ ಅವರು ಪಕ್ಷಕ್ಕೆ ಬೇಕು. ಅವರು ಇಲ್ಲದಿದ್ದರೆ ಮತ್ತೆ ಪಕ್ಷ ಗಾಳಿಗೆ ಸಿಕ್ಕ ಪಟವೇ ಆಗಬಹುದು. ಪಕ್ಷದ ಈ ಅವಸ್ಥೆಗೆ ನೆಹರೂ ಕುಟುಂಬವೇ ಕಾರಣವಾಗಿರಬಹುದು. ಜವಾಹರಲಾಲರು ಬದುಕಿದ್ದಾಗಲೇ ‘ನೆಹರೂ ನಂತರ ಯಾರು’ ಎಂಬ ಪ್ರಶ್ನೆ ಇತ್ತು. ಈಗಲೂ ಕಾಂಗ್ರೆಸ್ಸಿಗೆ ‘ರಾಹುಲ್ ಬಿಟ್ಟರೆ ಯಾರು’ ಎಂಬ ಪ್ರಶ್ನೆ ಇದೆ.
ಒಬ್ಬ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಗಂಟುಬಿದ್ದ ಒಂದು ಪಕ್ಷದ ಕಥೆ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಅದು ಲಾಲುಪ್ರಸಾದರ ಆರ್‌ಜೆಡಿಗೂ ಅನ್ವಯಿಸುತ್ತದೆ, ದೇವೇಗೌಡರ ಜೆ.ಡಿ (ಎಸ್)ಗೂ ಅನ್ವಯಿಸುತ್ತದೆ. ಹೀಗೆ ವ್ಯಕ್ತಿ ಅಥವಾ ಕುಟುಂಬ ಕೇಂದ್ರಿತ ಪಕ್ಷದಲ್ಲಿ ಬಹುತೇಕ ಭಟ್ಟಂಗಿಗಳು ಮತ್ತು ಬಂದಳಿಕೆಗಳು ಮಾತ್ರ ಇರುತ್ತಾರೆ. ಅವರಿಗೆ ಸ್ವಂತ ಶಕ್ತಿ ಎಂಬುದು ಇರುವುದಿಲ್ಲ. ಹಲವು ಸಾರಿ ಸ್ವಂತ ಶಕ್ತಿ ಇರುವ ನಾಯಕರನ್ನು ಇಂಥ ಪಕ್ಷಗಳು ಒಂದೋ ಬೆಳೆಯಲು ಬಿಡುವುದಿಲ್ಲ ಇಲ್ಲವೇ ಸಹಿಸುವುದಿಲ್ಲ.
ಪಕ್ಷದಲ್ಲಿ ಇದ್ದ ಎಲ್ಲ ನಾಯಕರು, ‘ಹೈಕಮಾಂಡ್ ತೀರ್ಮಾನದಂತೆ ಎಲ್ಲವೂ ಆಗುತ್ತದೆ’ ಎಂದು ಜಪ ಮಾಡುವುದು ಇದೇ ಕಾರಣಕ್ಕಾಗಿ. ಗೆದ್ದರೆ ಎಲ್ಲವೂ ಚೆನ್ನಾಗಿ ಇರುತ್ತದೆ. ಸೋತ ಕೂಡಲೇ ಪಕ್ಷದ ದೌರ್ಬಲ್ಯಗಳು ಎದ್ದು ಕಾಣಲು ಆರಂಭಿಸುತ್ತವೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಎಲ್ಲ ಪಕ್ಷಗಳು ಅನಾಯಕತ್ವದಿಂದ ಬಳಲುತ್ತಿರುವಂತೆ, ದುರ್ಬಲವಾಗಿರುವಂತೆ ಕಾಣುತ್ತಿವೆ. ಬಹುಕಾಲ ದೇಶವನ್ನು ಆಳಿದ ಮತ್ತು ಆಡಳಿತ ಪಕ್ಷಕ್ಕೆ ಪರ್ಯಾಯವನ್ನು ಒದಗಿಸಬೇಕಾದ ಕಾಂಗ್ರೆಸ್ ಪಕ್ಷಕ್ಕೇ ಈಗ ದಿಕ್ಕು ತೋಚದಂತೆ ಆಗಿದೆ. ಪಕ್ಷದಲ್ಲಿನ ಭಟ್ಟಂಗಿಗಳು ಸೋನಿಯಾ, ರಾಹುಲ್ ಅವರನ್ನು ಬಿಟ್ಟು ಇದೀಗ ಪ್ರಿಯಾಂಕಾ ಬೆನ್ನು ಹತ್ತಿದ್ದಾರೆ. ತಮ್ಮ ಸೋಲಿಗೆ ಅವರು ಗಾಂಧಿ ಕುಟುಂಬದಲ್ಲಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ.
ನಾಯಕತ್ವ ಎಂಬುದು ಒಂದು ನಿರಂತರ ಪ್ರಕ್ರಿಯೆ ಮತ್ತು ಒಂದು ಅವಕಾಶ ಎಂದು ಆ ಪಕ್ಷಕ್ಕೂ ಅರ್ಥವಾಗುವುದಿಲ್ಲ, ಭಟ್ಟಂಗಿಗಳಿಗೆ ಆ ಹೊಣೆಯೇ ಬೇಕಾಗಿರುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿಣಿಯ ಪಟ್ಟಿಯನ್ನು ಮುಂದೆ ಇಟ್ಟುಕೊಂಡು ನೋಡಿ. ನೇರ ಚುನಾವಣೆಯಲ್ಲಿ ಆರಿಸಿ ಬಂದವರು ಎಷ್ಟು ಮಂದಿ ಇದ್ದಾರೆ ಮತ್ತು ಹಿತ್ತಿಲ ಬಾಗಿಲಿನಿಂದ ಬಂದ ಎಷ್ಟು ಮಂದಿ ಇದ್ದಾರೆ ಎಂದು ಗೊತ್ತಾಗುತ್ತದೆ.
ಹಿತ್ತಿಲ ಬಾಗಿಲಿನಿಂದ ಬರುವವರಿಗೆ ಯಾರೂ ಮತ ಹಾಕುವುದಿಲ್ಲ; ಪಕ್ಷಕ್ಕೆ ನಾಲ್ಕು ಮತಗಳನ್ನು ತರಿಸಿಕೊಡುವ ಯೋಗ್ಯತೆಯೂ ಅವರಿಗೆ ಇರುವುದಿಲ್ಲ. ಅವರಿಗೆ ಹರಕು ಬಾಯಿ ಮಾತ್ರ ಇರುತ್ತದೆ. ಎಲ್ಲದಕ್ಕೂ ಅವರು ಟೀವಿಗಳ ಮುಂದೆ ಪ್ರತಿಕ್ರಿಯೆ ಕೊಡುತ್ತ ಇರುತ್ತಾರೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿ ಹೋಗುತ್ತ ಇರುತ್ತಾರೆ. ಪಕ್ಷ ಅಧಿಕಾರದಲ್ಲಿ ಇರುವವರೆಗೆ ಇದೆಲ್ಲ ಚೆನ್ನಾಗಿ ಇರುತ್ತದೆ. ಒಂದು ಪಕ್ಷಕ್ಕೆ ಪರ್ಯಾಯವೇ ಇಲ್ಲ ಎಂದಾಗಲೂ ಇದೆಲ್ಲ ಚೆನ್ನಾಗಿ ಇರುತ್ತದೆ.
ಈಗಿನ ಹಾಗೆ ಪಕ್ಷದ ಅಸ್ತಿತ್ವಕ್ಕೇ ಅಪಾಯ ಎನ್ನುವಂಥ ಕಾಲಘಟ್ಟ ಬಂದಾಗಲಾದರೂ ನಾಯಕರಾದವರು ಯೋಚನೆ ಮಾಡಬೇಕು. ಯೋಚನೆ ಮಾಡಲು ಆರಂಭಿಸಿದ್ದರೆ ಈ ತಿಂಗಳು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವಾಗ ಕಾಂಗ್ರೆಸ್ ಪಕ್ಷ ಸರಿಯಾದ ಹೆಜ್ಜೆ ಇಡುತ್ತದೆ, ಭಟ್ಟಂಗಿಗಳು, ವಯೋವೃದ್ಧರು ಮತ್ತು ಬಂದಳಿಕೆಗಳನ್ನು ದೂರ ಇಡುತ್ತದೆ. ಇಲ್ಲವಾದರೆ ಪಕ್ಷ ಇನ್ನೂ ಚಿಂತಾಜನಕ ಸ್ಥಿತಿಗೆ ಹೊಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಗೆಲುವಿನಲ್ಲಿ ಅವರ ಪಕ್ಷವೂ ಸೇರಿ ಎಲ್ಲ ಪಕ್ಷಗಳಿಗೂ ಅನೇಕ ಪಾಠಗಳು ಇವೆ. ಆಗಿನ್ನೂ ಲೋಕಸಭೆ ಚುನಾವಣೆ ಕಾಲ. ಮತದಾನದ ದಿನ ಹತ್ತಿರ ಬರುತ್ತಿತ್ತು. ಆಟೊದಲ್ಲಿ ಕಚೇರಿಗೆ ಬರುತ್ತಿದ್ದೆ. ಗುರುತು ಪರಿಚಯ ಇಲ್ಲದ ಚಾಲಕ ನನಗೆ ಕೇಳಿದ: ‘ಸರ್ ಮೋದಿ ಬರ್ತಾರಲ್ಲ?’ ಎಂದು. ನನಗೆ ಅಚ್ಚರಿಯಾಯಿತು. ಉತ್ತರ ಕೊಡಲಿಲ್ಲ. ಎರಡು ದಿನ ಬಿಟ್ಟು ರಾತ್ರಿ ಕಾರಿನಲ್ಲಿ ಮನೆಗೆ ಬರುತ್ತಿದ್ದಾಗ ಚಾಲಕ ಅದೇ ಪ್ರಶ್ನೆ ಕೇಳಿದ. ಅವರಿಗೂ ನಾನು ಉತ್ತರ ಕೊಡಲಿಲ್ಲ. ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಬಹುಕಾಲ ಇದ್ದು ಈಗ ಭಾರತಕ್ಕೆ ಬಂದಿರುವ ನನ್ನ ಪರಿಚಯದ ಒಬ್ಬ ಮಹಿಳೆ ಕೂಡ.
‘ಈ ಸಾರಿ ಮೋದಿ ಬರಬೇಕ್ರೀ’ ಎಂದು ಅವರ ಜತೆಗೆ ಮಾತನಾಡಿದಾಗಲೆಲ್ಲ ಹೇಳುತ್ತಿದ್ದರು. ನಾನು ಮೋದಿಯವರಿಗೆ ಮತ ಹಾಕುತ್ತೇನೋ ಇಲ್ಲವೋ ಎಂದು ಅವರಿಗೆ ಕುತೂಹಲವಿತ್ತು.
ನಮ್ಮ ಇಷ್ಟಾನಿಷ್ಟಗಳು ಬೇರೆ. ಆದರೆ, ಜನರು ಮೋದಿ ಅವರಿಗೆ ಬಹುಮತ ಕೊಟ್ಟಿದ್ದಾರೆ. ಹಿಮಾಲಯದೆತ್ತರದ ಅವರ ನಿರೀಕ್ಷೆಗಳು ಮೋದಿಯವರ ಹೆಗಲ ಮೇಲೆ ಕುಳಿತಿವೆ. ಯುವಕರು, ಬಡವರು, ಮಹಿಳೆಯರು, ಮುಸಲ್ಮಾನರು, ಹಿಂದುಳಿದವರು, ಮುಂದುವರಿದವರು ಎಲ್ಲರೂ ಮೋದಿ ಅವರಿಗೆ ಮತ ಹಾಕಿದಂತೆ ಕಾಣುತ್ತದೆ. 1971ರ ಲೋಕಸಭೆ ಚುನಾವಣೆ ನಂತರ ಒಂದು ಪಕ್ಷಕ್ಕೆ ಅಲ್ಲ, ಒಬ್ಬ ವ್ಯಕ್ತಿಗೆ ಭಾರಿ ಜನಾದೇಶ ಸಿಕ್ಕಿದೆ. 1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ‘ಗರೀಬಿ ಹಟಾವೊ’ ಎಂಬ ಘೋಷಣೆ ಕೂಗಿ ಇಂಥದೇ ದಿಗ್ವಿಜಯ ಸಾಧಿಸಿದ್ದರು. ಅವರ ಪಕ್ಷ 350 ಸೀಟುಗಳನ್ನು ಗೆದ್ದಿತ್ತು. ಆಗಿನ ಜನಸಂಘಕ್ಕೆ ಮೂವತ್ತು ಸೀಟುಗಳಲ್ಲೂ ಜಯ ಸಿಕ್ಕಿರಲಿಲ್ಲ!
ಇಂದಿರಾ ಅವರು ಕೇಂದ್ರದಿಂದ ಎಡಕ್ಕೆ ವಾಲಿದವರಾಗಿದ್ದರು. ಅವರು ಆಗಷ್ಟೇ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರು. ನಿಜಲಿಂಗಪ್ಪ, ಮೊರಾರ್ಜಿ ಮುಂತಾದ ‘ಯಥಾಸ್ಥಿತಿವಾದಿ’ ವಯೋವೃದ್ಧರನ್ನು ಪಕ್ಷದಿಂದ ಹೊರಗೆ ಹಾಕಿದ್ದರು. ರಾಯಧನವನ್ನು ರದ್ದು ಮಾಡಿದ್ದರು. ಇಂದಿರಾ ಹೆಸರಿನಲ್ಲಿ ಕತ್ತೆ, ಕುದುರೆಗಳೂ ಚುನಾವಣೆಯಲ್ಲಿ ಗೆದ್ದು ಬಿಡಬಹುದು ಎಂಬ ಪ್ರತೀತಿ ಹುಟ್ಟಿದ್ದು ಆಗಲೇ. 1984ರಲ್ಲಿ ರಾಜೀವ್ ಗಾಂಧಿಯವರಿಗೆ ಇದಕ್ಕಿಂತ ದೊಡ್ಡ ಜನಾದೇಶ ಸಿಕ್ಕಿತಾದರೂ ಅದು ಅವರ ತಾಯಿ ಇಂದಿರಾರ ಹತ್ಯೆಯಿಂದ ಹುಟ್ಟಿಕೊಂಡ ಅನುಕಂಪೆಯಿಂದ ಸಿಕ್ಕ ಜನಾದೇಶವಾಗಿತ್ತು.
1971ರ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇಂದಿರಾ ಹೆಸರು ಜನ ಜನಿತವಾಗಿತ್ತು. ಆಗೇನು ಈಗಿನ ಹಾಗೆ ಮನೆ ಮನೆಯಲ್ಲಿ ಟೀವಿಗಳು ಇರುತ್ತಿರಲಿಲ್ಲ. ಜನರು ಹೇಗೆ ಆ ಹೆಣ್ಣು ಮಗಳ ಹೆಸರು ಕೇಳಿದ್ದರೋ ಏನು ಕಥೆಯೋ ಇಂದಿರಾ ಹೆಸರು ಅವರ ನಾಲಿಗೆ ಮೇಲೆಯೇ ಇತ್ತು. ಇಂದಿರಾ ಅವರು ಅಂದುಕೊಂಡ ಹಾಗೆ ‘ಗರೀಬಿ ಹಟಾವೊ’ ಮಾಡಲು ಆಗಲಿಲ್ಲ. ಆಗ ಅವರು ಬಡತನ ನಿವಾರಣೆಗೆ ಒದಗಿಸಿದ ಹಣವೂ ಶೇಕಡಾ ನಾಲ್ಕರಷ್ಟು ಮಾತ್ರ ಇತ್ತು. ಆದರೆ, ಆಕೆ ತಮ್ಮ ತಂದೆಯ ಹಾಗೆ ಸಮಾಜವಾದಿ ನೆಲೆಯ ಸಮಾಜ ನಿರ್ಮಾಣಕ್ಕೇ ಒತ್ತು ಕೊಟ್ಟವರು. ಅವರು ಅಮೆರಿಕಕ್ಕಿಂತ ಆಗಿನ ಸೋವಿಯತ್ ರಷ್ಯಾ ಕಡೆಗೆ ಹೆಚ್ಚು ಒಲವು ಇಟ್ಟುಕೊಂಡಿದ್ದರು.
ಆ ಚುನಾವಣೆಯಲ್ಲಿ ಈಗ 60ರ ಅಂಚಿನಲ್ಲಿರುವ ನನಗೆ ಕೂಡ ಮತ ಹಾಕುವ ಅಧಿಕಾರ (ವಯಸ್ಸು) ಇರಲಿಲ್ಲ. ಅದಾಗಿ ದಶಕಗಳೇ ಕಳೆದಿವೆ. ಕಾಂಗ್ರೆಸ್ಸಿಗರಿಗೆ ಈಗಲೂ ಅದೇ ಇಂದಿರಾ ಹೆಸರು ಜಾದೂ ಮಾಡುತ್ತದೆ ಎಂಬ ನಂಬಿಕೆ ಇದ್ದಂತೆ ಇದೆ. ಅವರು ಈಗಲೂ ಮಾತನಾಡುವುದು ಇಂದಿರಾ ಮತ್ತು ರಾಜೀವ್ ಅವರ ‘ಬಲಿದಾನ’ ಕುರಿತು ಹಾಗೂ ಹೆಚ್ಚೆಂದರೆ ಸೋನಿಯಾ ಅವರ ‘ತ್ಯಾಗ’ದ ಕುರಿತು. ಆ ‘ಬಲಿದಾನ’ ಮತ್ತು ‘ತ್ಯಾಗ’ಗಳು ಎಷ್ಟೇ ದೊಡ್ಡವಾಗಿದ್ದರೂ ಕಾಲ ಸರಿದಂತೆ ಅವುಗಳ ಮಹತ್ವ ಕಡಿಮೆ ಆಗುತ್ತ ಹೋಗುತ್ತದೆ.
ಇಂದಿರಾ ಅವರ ಹತ್ಯೆಯಾದಾಗ ಹುಟ್ಟದೇ ಇದ್ದ ಒಂದು ದೊಡ್ಡ ಪೀಳಿಗೆ ಈ ಸಾರಿ ಮತದಾನ ಮಾಡಿದೆ. ವಿಪರ್ಯಾಸ ಎಂದರೆ ಅವರು 1984ರಲ್ಲಿ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿಯವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಮಹತ್‌ಕ್ರಾಂತಿಯ ಮತ್ತು ಕಾಂಗ್ರೆಸ್ ಪಕ್ಷವೇ 1991ರಲ್ಲಿ ಜಾರಿಗೆ ತಂದ ಆರ್ಥಿಕ ಉದಾರೀಕರಣದ ಲಾಭ ಪಡೆದ ಪೀಳಿಗೆಯೂ ಇದೇ ಆಗಿದೆ! ಈ ಪೀಳಿಗೆಗೆ ಹತ್ತು ವರ್ಷಗಳ ಹಿಂದೆ ಸೋನಿಯಾ ಅವರು ಅಧಿಕಾರ ಬಿಟ್ಟುಕೊಟ್ಟುದು ಕೂಡ ನೆನಪು ಇಲ್ಲ. ಪಾಠ ಇಷ್ಟೇ ಮತ್ತು ಅದೂ ಹೊಸಪಾಠವೇನೂ ಅಲ್ಲ : ಸಾರ್ವಜನಿಕ ನೆನಪು ಕಡಿಮೆ!
ನವಪೀಳಿಗೆಗೆ, ಕೇಂದ್ರದಿಂದ ಎಡಕ್ಕೆ ಇರುವುದೆಲ್ಲ ಅಗತ್ಯ ಎಂದು ಅನಿಸುತ್ತಿಲ್ಲ; ಪ್ರಗತಿಪರ ಎಂದೂ ಅನಿಸುತ್ತಿಲ್ಲ. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಪ್ರಧಾನ ಸಂಪಾದಕ ಶೇಖರ್ ಗುಪ್ತ ಮೊನ್ನೆ ನಮ್ಮ ಕಚೇರಿಗೆ ಬಂದು ನಮ್ಮ ಜತೆಗೆ ಸಂವಾದ ಮಾಡಿದರು. ಅವರು ‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಸಾರಿಯ ಚುನಾವಣೆ ಒಂದು ದೊಡ್ಡ ಘಟ್ಟ’ ಎಂದು ಹೇಳುತ್ತಿದ್ದರು. ‘ಒಂದು ದೇಶ ಕೇಂದ್ರದಿಂದ ಬಲಕ್ಕೆ ತಿರುಗಿದ ಘಟ್ಟ ಇದು.
ಕಾಂಗ್ರೆಸ್ ಪಕ್ಷ ಕೇಂದ್ರದಿಂದ ತೀರಾ ಎಡಕ್ಕೆ ಹೋಗಿ ತಪ್ಪು ಮಾಡಿತು. ಬಿಜೆಪಿ ಕೂಡ ಈಗ ಕೇಂದ್ರದಿಂದ ತೀರಾ ಬಲಕ್ಕೆ ಹೋಗಬಾರದು’ ಎಂದೂ ಅವರು ಹೇಳುತ್ತಿದ್ದರು. ಬಿಜೆಪಿಯವರು ರಾಮಮಂದಿರ ಕಟ್ಟಬೇಕು ಎಂದು ಈಗ ಮೋದಿಯವರಿಗೆ ಮತ ಹಾಕಿದವರು ಬಯಸುತ್ತಾರೆ ಎಂದು ನನಗೂ ಅನಿಸುವುದಿಲ್ಲ. ಅದನ್ನು ಬಯಸುವವರು ಕೆಲವರು ಮಹಂತರು, ಸಂಘದವರು ಅಥವಾ ಬಿಜೆಪಿಯ ಹಳೆಯ ತಲೆಮಾರಿನವರು ಇರಬಹುದು. ಈ ಸಾರಿ ಜನರು ಬಿಜೆಪಿಗೆ, ಸಂಘಕ್ಕೆ ಮತ ಹಾಕಿಲ್ಲ ಎಂದೇ ಎಲ್ಲರ ಭಾವನೆ. ಇದು ಮೋದಿ ಅವರಿಗೆ ಕೊಟ್ಟ ಮತ; ಅದು ಎಲ್ಲವನ್ನೂ ಮರೆತು ‘ವಿಕಾಸ’ ಬಯಸಿ ಹಾಕಿದ ಮತ. ಮೋದಿ ಒಬ್ಬ ವ್ಯಕ್ತಿ ಹೌದು ಮತ್ತು ಅಲ್ಲ. ಅವರು ಈಗ ಒಟ್ಟು ಜನರ ಆಶೋತ್ತರದ ಪ್ರತಿನಿಧಿ. ಜನರ ಆಗಸದ ಎತ್ತರದ ಆಸೆಗಳು ಈಡೇರದೆ ಇದ್ದರೆ ಮೋದಿಯವರೂ ಜಾಗ ಖಾಲಿ ಮಾಡಬೇಕಾಗುತ್ತದೆ. ಆದರೆ, ಪರ್ಯಾಯ?
ಮೋದಿಯವರು ತಪ್ಪು ಮಾಡಲಿ ಎಂದು ಕಾಯುತ್ತ ಕೂಡುವುದು ಒಂದು ರೀತಿ. ಸ್ಮೃತಿ ಇರಾನಿಯವರ ವಿದ್ಯಾರ್ಹತೆ ಏನು ಎಂದು ಹುಡುಕುತ್ತ ಕಾಲ ಕಳೆಯುವುದೂ ಅದೇ ರೀತಿ. ಎರಡೂ ನಕಾರಾತ್ಮಕವಾದುವು. ಮುಂದಿನ ಚುನಾವಣೆ ಇನ್ನೂ ಐದು ವರ್ಷ ಇದೆ ನಿಜ. ಆದರೆ, ರಾಹುಲ್ ಸಮೇತರಾಗಿ ಕಾಂಗ್ರೆಸ್ಸಿನ ನಾಯಕರು ಹಳ್ಳಿಯ ಕಡೆಗೆ ಹೋಗಲು ಇದು ಸಕಾಲ. ಒಂದು ಕಾಲದಲ್ಲಿ ಹೆಮ್ಮರವಾಗಿದ್ದ ಪಕ್ಷದ ತುಂಬೆಲ್ಲ ಹಬ್ಬಿಕೊಂಡಿರುವ ಬಂದಳಿಕೆಗಳನ್ನು ಕತ್ತರಿಸಿ ತೆಗೆಯಲೂ ಇದು ಒಳ್ಳೆಯ ಕಾಲ. ಪಕ್ಷದಲ್ಲಿ ಬೇರು ಬಿಟ್ಟಿರುವ ಭಟ್ಟಂಗಿಗಳನ್ನು ಬಿಟ್ಟು (ಒದ್ದೋಡಿಸಿ ಎಂದು ಬರೆಯಬೇಕು ಎಂದು ಅನಿಸಿದ್ದರೂ ಹಾಗೆ ಬರೆಯುತ್ತಿಲ್ಲ) ನೇರವಾಗಿ ಮಾತನಾಡುವ ಯುವಕರಿಗೆ ಅವಕಾಶ ಕೊಡಲೂ ಇದು ಸೂಕ್ತ ಕಾಲ
ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ತಮ್ಮ ಸಂಪುಟದಲ್ಲಿ ಯುವಕರಿಗೆ ಹೆಚ್ಚು ಅವಕಾಶ ಕೊಡಲಿಲ್ಲ. ರಾಹುಲ್ ಅವರಿಗೂ ತಮ್ಮ ಸಮಕಾಲೀನರಿಗೆ ಅಧಿಕಾರ ಕೊಡಿಸಲು ಆಗಲಿಲ್ಲ. ಯಾರಿಗೆಲ್ಲ ದೇಶದ ಉದ್ದಗಲಕ್ಕೂ ಮಿಂಚಿನ ಹಾಗೆ ಸಂಚರಿಸುವ ಶಕ್ತಿ ಇದೆಯೋ, ಯಾರಿಗೆ ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳುವ ಇರಾದೆ ಇದೆಯೋ, ಯಾರು ಕಷ್ಟಪಡಲು ಸಿದ್ಧರಿದ್ದಾರೋ ಅಂಥ ನಾಯಕರಿಗೆ ಈಗ ಅವಕಾಶ ಸಿಗಬೇಕು.
ನರೇಂದ್ರ ಮೋದಿಯವರು ಸೋಲಬಾರದು. ಅವರು ಸೋತರೆ ಈ ಸಾರಿಯ ‘ಜನಾದೇಶ’ಕ್ಕೆ ಸೋಲು ಆದಂತೆ. ಒಂದು ವೇಳೆ ಅವರು ಸೋತರೆ ದಾರಿ ತಪ್ಪಿ ನಡೆದರೆ ಎಚ್ಚರಿಸಲು ಮತ್ತು ಈ ದೇಶಕ್ಕೆ ಪರ್ಯಾಯ ಕೊಡಲು ತಾನು ಸಿದ್ಧ ಎಂದು ತೋರಿಸಲು ಕಾಂಗ್ರೆಸ್ ಪಕ್ಷ ಸನ್ನದ್ಧವಾಗಿರಬೇಕು. ಕುಟುಂಬದ ಚಿಕ್ಕ ಚೌಕಟ್ಟನ್ನು ಮೀರಿ ಯೋಚಿಸಿದರೆ ಮಾತ್ರ ಇದು ಸಾಧ್ಯ. ಹಾಗೆ ಆದೀತೇ? ಆಸೆ ಕಳೆದುಕೊಳ್ಳುವುದು ಬೇಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.