ಸಂಗೀತ ಗೊತ್ತಿರಲಿ, ಬಿಡಲಿ ಈ ಹೆಣ್ಣುಮಗಳ ಬಗ್ಗೆ ಗೊತ್ತಿಲ್ಲದವರು ವಿರಳ. ಅನೇಕ ಸಂದರ್ಭಗಳಲ್ಲಿ ಇದು ಎಂ.ಎಸ್. ಸುಬ್ಬುಲಕ್ಷ್ಮಿ ಎನ್ನುವ ಹೆಸರೇ ಗೊತ್ತಿಲ್ಲದೆಯೇ ವೆಂಕಟೇಶ್ವರ ಸುಪ್ರಭಾತವನ್ನು ಆನಂದಿಸುವ, ಭಕ್ತಿಭಾವದಲ್ಲಿ ಮಿಂದೇಳುವವರೂ ಇದ್ದಾರೆ. (ಈ ಸುಪ್ರಭಾತವು ವೆಂಕಟೇಶ್ವರನನ್ನು ಶುದ್ಧ ಲೌಕಿಕನಂತೆಯೂ ಬದುಕಿನ ಭೋಗ ಭಾಗ್ಯಗಳಲ್ಲಿ ಪರಮ ಆಸಕ್ತನಂತೆಯೂ ಚಿತ್ರಿಸುತ್ತದೆ. ಆಂಡಾಳರ ಉತ್ಕಟ ಪ್ರಣಯಗೀತೆಗಳನ್ನು ದೈವ ಸಾಕ್ಷಾತ್ಕಾರದ ಅನಾವರಣ ಗೀತೆಗಳಂತೆ, ಭಕ್ತಿ ಭಾವದಲ್ಲಿ ಹಾಡುವುದನ್ನು ಕೇಳಿದಾಗಲೂ ಹೀಗೇ ಕಸಿವಿಸಿಯಾಗುತ್ತದೆ. ಅಥವಾ ಇದೂ ಪ್ರತಿರೋಧದ ಕ್ರಿಯಾಶೀಲ ಮಾದರಿಯೇ ಇರಬಹುದೆ?).
ನೆಹರೂ ಇವರ ಸಂಗೀತ ಕಛೇರಿಯೊಂದರ ನಂತರ ಉದ್ಗರಿಸಿದ, ‘‘ನಾನೋ ಕೇವಲ ಒಬ್ಬ ಪ್ರಧಾನ ಮಂತ್ರಿ, ಈಕೆಯಾದರೋ ಸಂಗೀತ ಸಾಮ್ರಾಜ್ಞಿ’’ ಎನ್ನುವ ಮಾತುಗಳನ್ನು ಸುಬ್ಬುಲಕ್ಷ್ಮಿಯವರ ವ್ಯಕ್ತಿತ್ವ ಮತ್ತು ಸಾಧನೆಯ ಅಂತಿಮ ವ್ಯಾಖ್ಯಾನದಂತೆಯೇ ಯಾವಾಗಲೂ ಮಂಡಿಸಲಾಗುತ್ತದೆ. ಈ ಮಾತುಗಳ ಹಿಂದಿನ ಪ್ರಾಮಾಣಿಕತೆ, ಕಲಾಪ್ರೇಮವನ್ನು ನಾವು ಪ್ರಶ್ನಿಸಲು ಕಾರಣಗಳಿಲ್ಲ. ಕಲೆಯೆನ್ನುವುದು ಕಾಲವನ್ನು ಗೆಲ್ಲುವ ಮನುಷ್ಯನ ಮಹತ್ವಾಕಾಂಕ್ಷೆ ಮತ್ತು ಪ್ರಯತ್ನದ ಸಿದ್ಧಿ ಎನ್ನುವ ಕಲೆಯನ್ನು ಕುರಿತ ಆದಿಮ ವ್ಯಾಖ್ಯಾನಕ್ಕೂ ಸುಬ್ಬುಲಕ್ಷ್ಮಿ ಸಲ್ಲುತ್ತಾರೆ ಎನ್ನುವುದರ ಬಗೆಗೂ ನಮಗೆ ಅನುಮಾನಗಳಿರಲು ಸಾಧ್ಯವಿಲ್ಲ.
ಆದರೆ ತನ್ನ ಬದುಕು ಮತ್ತು ವ್ಯಕ್ತಿತ್ವದ ವಿನ್ಯಾಸದಿಂದಾಗಿಯೇ ಈ ಅಪೂರ್ವ ಹೆಣ್ಣುಮಗಳು ಭಾರತದ ಮಹಿಳೆಯರ ಹೋರಾಟಕ್ಕೆ ನೀಡಿದ ರಾಜಕೀಯ ಆಯಾಮ ಮತ್ತು ನೈತಿಕ ಬಲವನ್ನು ಭಿನ್ನ ಆಯಾಮಗಳಲ್ಲಿ ಚರ್ಚಿಸಬೇಕಾದ ಅಗತ್ಯವಿದೆ ಎನಿಸುತ್ತದೆ. ಕಲೆ ಮತ್ತು ಭಕ್ತಿಯ ಆಚೆಗಿನ ಸಾಮಾಜಿಕ ಮತ್ತು ರಾಜಕೀಯ ಭಿತ್ತಿಗಳಲ್ಲಿ ಸುಬ್ಬುಲಕ್ಷ್ಮಿ ಅವರನ್ನು ಚರ್ಚಿಸುವುದು ಅವರನ್ನು ಪ್ರಸ್ತುತಗೊಳಿಸಿಕೊಳ್ಳುವ ಸಂಗತಿಯೆಷ್ಟೋ ಅಷ್ಟೇ ಮಹಿಳೆಯರ ಹೋರಾಟವನ್ನು ಬಲಗೊಳಿಸಿಕೊಳ್ಳುವ ಸಂಗತಿಯೂ ಹೌದು.
ಇಂದು ಸುಬ್ಬುಲಕ್ಷ್ಮಿಯವರನ್ನು ಅಪ್ರತಿಮ ಕಲಾವಿದೆಯೆಂದು ಗುರುತಿಸುವುದರ ಜೊತೆಗೇ ಭಾರತೀಯ ಹೆಣ್ಣಿನ ಆತ್ಯಂತಿಕ ಮಾದರಿ ಎಂದೂ ಪ್ರಸ್ತುತ ಪಡಿಸಲಾಗುತ್ತಿದೆಯಷ್ಟೇ. ಪಿತೃಸಂಸ್ಕೃತಿಯ ಅಪೇಕ್ಷಿತ ಹೆಣ್ಣಿನ ಗುಣಗಳೆಲ್ಲ ಇವರಲ್ಲಿ ಮೈದಳೆದಿವೆಯೆಂದೂ ಮತ್ತೆ ಮತ್ತೆ ಹೇಳಲಾಗುತ್ತದೆ. ಇವರ ವೇಷಭೂಷಣದಿಂದ ಹಿಡಿದು, ನಯ ವಿನಯ, ನಡವಳಿಕೆ ಎಲ್ಲದರಲ್ಲೂ ಈಕೆ ಅನುಸರಿಸಬೇಕಾದ ಮಾದರಿ ಎನ್ನುವುದನ್ನು ಒತ್ತಿ ಹೇಳಲಾಗುತ್ತದೆ. ಅತ್ಯಂತ ಸಂಕೀರ್ಣವಾದ ಸುಬ್ಬುಲಕ್ಷ್ಮಿಯವರ ಬದುಕನ್ನು ಅವರವರ ಭಾವಕ್ಕೆ ತಕ್ಕಂತೆ ವಿವರಿಸಿಕೊಳ್ಳುವ ಅನೇಕ ಕ್ರಮಗಳನ್ನು ನಾವು ಗಮನಿಸಬಹುದು. ಈಕೆಯೊಬ್ಬ ಪರಾವಲಂಬಿ ಜೀವಿ ಎನ್ನುವುದರಿಂದ ಹಿಡಿದು, ಸುಸ್ವರ ಲಕ್ಷ್ಮಿ ಎನ್ನುವ ತನಕ. ಈ ಅತಿರೇಕದ, ಕಲಾಭಿಮಾನದ ಮತ್ತು ಸಾಂಪ್ರದಾಯಿಕ ವ್ಯಾಖ್ಯಾನಗಳಿಗೆ ದಕ್ಕದ ಸ್ವಾಯತ್ತ ವ್ಯಕ್ತಿತ್ವವೊಂದು ಸುಬ್ಬುಲಕ್ಷ್ಮಿಯವರಲ್ಲಿ ಇದೆಯೇ? ಸಂಗೀತದ ಮೂಲಕ ವ್ಯಕ್ತಿತ್ವವೊಂದು ಲಿಂಗರಾಜಕಾರಣವನ್ನು ಮೀರಿದ ನೆಲೆಯಲ್ಲಿ ಪಡೆದುಕೊಂಡ ಸಿದ್ಧಿಯ ಶಿಖರವಾಗಿ ಇವರನ್ನು ನೋಡಲಾಗಿದೆ. ಸುಧಾರಣಾವಾದಿ ಪ್ರಕ್ರಿಯೆಗೆ ತನ್ನನ್ನು ಕೊಟ್ಟುಕೊಂಡು ಬ್ರಾಹ್ಮಣೀಕರಣದ ಸಂಸ್ಕೃತೀಕರಣಕ್ಕೆ ಪಕ್ಕಾಗುವುದರಲ್ಲಿ ತನ್ನ ಅನನ್ಯತೆಯನ್ನು ಈಕೆ ಕಳೆದುಕೊಂಡು ಬಿಟ್ಟರೋ ಎನ್ನುವ ಪ್ರಶ್ನೆಯನ್ನೂ ಎತ್ತಲಾಗಿದೆ. ಪತಿ ಸದಾಶಿವಂ ಅವರ ಅಸಾಧಾರಣ ಸಾರ್ವಜನಿಕ ಸಂಪರ್ಕಾಧಿಕಾರಿ ಶಕ್ತಿಯಿಂದಲೇ ಈಕೆಗೆ ಇಷ್ಟೆಲ್ಲ ದೊರೆಯಿತು ಎನ್ನುವವರಿದ್ದಾರೆ. ರಾಜಾಜಿಯವರು ಕಾಂಗ್ರೆಸ್‌ನ ವರ್ಚಸ್ಸಿನ ವರ್ಧನೆಗಾಗಿ ಸುಬ್ಬುಲಕ್ಷ್ಮಿಯವರನ್ನು ಬಳಸಿದರು ಎನ್ನುವ ಮಾತೂ ಇದೆ. ಈ ಪಟ್ಟಿಯನ್ನು ಇನ್ನೂ ಮುಂದುವರಿಸಬಹುದು. ಆದರೆ ಈ ಎಲ್ಲದರ ಆಚೆಗೂ, ಒಳಗೂ ಇರುವ ಸುಬ್ಬುಲಕ್ಷ್ಮಿಯವರ ವ್ಯಕ್ತಿತ್ವದ ಅಪ್ಪಟ ಚಹರೆಯೊಂದನ್ನು ನಾವು ಇನ್ನೂ ಅನಾವರಣ ಮಾಡಿಕೊಳ್ಳಬೇಕಾಗಿದೆಯೆ?
ಈ ದೈವಿಕ ಪ್ರಭೆಯ ಹೆಣ್ಣನ್ನು ಹೆಣ್ಣಿನ ರಾಜಕೀಯ ಹೋರಾಟದ ದೃಷ್ಟಿಯಲ್ಲಿ ನೋಡಿದರೆ ಹೇಗಿರುತ್ತದೆ? ಈ ಪ್ರಭೆಯು ದೈವದತ್ತವಾದುದೋ ಇಲ್ಲವೋ– ಈ ಹೆಣ್ಣುಮಗಳು ತನ್ನ ಏಕೋನಿಷ್ಠೆಯಿಂದ ತನ್ನೆಲ್ಲ ಶಕ್ತಿ–ಸಾಧ್ಯತೆಗಳನ್ನು ನಿಶ್ಶಂಕೆಯಿಂದ ಬಳಸಿ ಸಾಧಿಸಿಕೊಂಡ ಸ್ವಯಂಪ್ರಭೆಯೆಂದು, ತನ್ನ ಆತ್ಮಶ್ರೀಗಾಗಿ ನಿರಂಕುಶಮತಿಯೂ ಆದವಳೆಂದು ನೋಡಲು ಸಾಧ್ಯವಿದೆಯೇ?
ತನ್ನ ಆತ್ಮಚರಿತ್ರಾತ್ಮಕ ನಿರೂಪಣೆಯಲ್ಲಿ ಸುಬ್ಬುಲಕ್ಷ್ಮಿ ಎಳವೆಯಿಂದಲೇ ತನ್ನನ್ನು ಆವರಿಸಿದ ಮಧುರೆ ಮೀನಾಕ್ಷಿಯ ಬಗ್ಗೆ ಭಕ್ತಿ ಆರಾಧನೆ ಎರಡೂ ಬೆರೆತ ಧ್ವನಿಯಲ್ಲಿ ಪ್ರಸ್ತಾಪಿಸುತ್ತಾರೆ. ಅವಳ ಧೀರವಾದ ಮುಖ, ಹಿಮ್ಮೆಟ್ಟದ ಮಾನಸಿಕ ಸ್ಥೈರ್ಯ, ದೊಡ್ಡ ಸೈನ್ಯವನ್ನು ಕಟ್ಟಿಕೊಂಡು ಅನೇಕ ರಾಜ್ಯಗಳನ್ನು ಗೆದ್ದು ಕೊನೆಗೆ ಶಿವನನ್ನು ಮದುವೆಯಾಗಿ ಮಧುರೆಯಲ್ಲಿ ನೆಲೆಸಿದ ಈ ಮೀನಾಕ್ಶಿ ಸಾಮಾನ್ಯಳಲ್ಲ ಎನ್ನುತ್ತಾ, ಶಿವನೂ ತನ್ನ ಕಾಡು ವೇಷವನ್ನು, ಭಸ್ಮೋದ್ಧೂಳಿತ ವೇಷವನ್ನೆಲ್ಲ ಬಿಟ್ಟು ಈ ಮೀನಾಕ್ಷಿಗಾಗಿ ಸುಂದರೇಶ್ವರನಾದುದನ್ನು ಬಲು ಆಸ್ಥೆಯಿಂದ ಸುಬ್ಬುಲಕ್ಷ್ಮಿ ವರ್ಣಿಸುತ್ತಾರೆ. ದೇಹಬಲ, ಮನೋಬಲ ಮತ್ತು ಆತ್ಮಬಲಗಳ ಎರಕದಂತೆ ಕಾಣಿಸುವ ಈ ಮೀನಾಕ್ಷಿ ಇವರಿಗೆ ಕೊನೆಯವರೆಗೂ ಒಂದು ಗುರಿಯಾಗಿಯೇ ಕಂಡಿದ್ದಿರಬೇಕು.
ಏಕೆಂದರೆ, ಆತ್ಮವಿಲ್ಲ ಎಂದು ಘೋಷಿಸುವುದು ಒತ್ತಟ್ಟಿಗಿರಲಿ ಅನೇಕ ಬಾರಿ ಅವಳ ಮನೋಬಲವೇ ಮೇಲೇಳದಂತೆ ಅದು ಸದಾ ಇತರರ ಬೇಡಿಕೆಗಳ ಈಡೇರುವಿಕೆಗಾಗಿಯೇ ಸೃಷ್ಟಿಯಾಗಿರುವ ಪ್ರಾಣಿವಿಶೇಷದಂತೆ ಅವಳನ್ನು ರೂಪಿಸಿ ರಚಿಸುವುದರಲ್ಲಿ ಮೌಲ್ಯವ್ಯವಸ್ಥೆ ಮೇಲುಗೈಯಾಗುವ ಸನ್ನಿವೇಶಗಳೇ ಹೆಚ್ಚು. ಅದರಲ್ಲೂ ದೇವದಾಸಿ ವರ್ಗಕ್ಕೆ ಸೇರಿದ ಸ್ಫುರದ್ರೂಪಿ ಹೆಣ್ಣುಮಗಳೊಬ್ಬಳು ಇವರಿಗೆ ಸುಲಭದ ತುತ್ತಾಗುವುದು ಸಾಧ್ಯವಿತ್ತು. ಸುಬ್ಬುಲಕ್ಷ್ಮಿಯವರೇ ಸಂದರ್ಶನವೊಂದರಲ್ಲಿ, ‘‘ನನ್ನ ಹದಿಹರೆಯದ ದಿನಗಳಲ್ಲಿ ಎಲ್ಲರೂ ನನ್ನನ್ನು ಹೇಗೆ ಹಾಳುಮಾಡಬೇಕೆಂದೇ ಯೋಚಿಸುತ್ತಿದ್ದರು ಮತ್ತು ಪ್ರಯತ್ನಿಸುತ್ತಿದ್ದರು’’ ಎನ್ನುತ್ತಾರೆ. ಹೆಣ್ಣನ್ನು ಅವಳ ದೇಹ ಮತ್ತು ಮನಸ್ಸು ಎರಡರಲ್ಲೂ ಅಭದ್ರ ಭಾವ ಮೂಡಿಸುವುದರ ಮೂಲಕವೇ ಪಡೆಯುವ ಗೆಲುವಿಗೆ ಅವಕಾಶ ಕೊಡದೇ ಇದ್ದದ್ದೇ ಸುಬ್ಬುಲಕ್ಷ್ಮಿಯವರ ಮೊದಲ ಗೆಲುವಿನ ಹೆಜ್ಜೆ. ಮಧುರೆ ಮೀನಾಕ್ಷಿಯೆನ್ನ್ನುವ ಹೋರಾಟದ ಹೆಣ್ಣಿನಿಂದ ಪಡೆದ ಪ್ರೇರಣೆಯೇ ಆಗಿದ್ದಿರಬಹುದು! ಸುಬ್ಬುಲಕ್ಷ್ಮಿ ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ತಾಯಿ ಇವರನ್ನು ರಾಜಮನೆತನದ ಗಣಿಕೆಯಾಗಿಸಲು ಎಲ್ಲ ಸಿದ್ಧತೆಗಳನ್ನೂ ನಡೆಸಿದ್ದಾಗ, ವ್ಯಗ್ರತೆ, ಕೋಪ ತಾಪಗಳಿಲ್ಲದೆಯೇ ತನಗೆ ಇದು ಒಪ್ಪಿಗೆಯಿಲ್ಲ ಎಂದು ಶಾಂತವಾಗಿಯೇ ಹೇಳಿ ತಾಯಿಯನ್ನು ಒಪ್ಪಿಸುವುದರಲ್ಲಿ ಸೋಲುತ್ತಾರೆ ಸುಬ್ಬುಲಕ್ಷ್ಮಿ. ತಾಯಿಯ ಪ್ರಯತ್ನಗಳು ಮುಂದುವರಿದಾಗ ರಾತ್ರಿ ರೈಲೊಂದನ್ನು ಹತ್ತಿ ಮದ್ರಾಸಿಗೆ ಬಂದು, ಸದಾಶಿವಂ ಅವರ ಸಹಾಯ ಪಡೆಯುತ್ತಾರೆ. ಹೀಗೆ ಸದಾಶಿವಂ ಹತ್ತಿರ ಬರುವಾಗ ಸದಾಶಿವಂ ಅವರ ಪ್ರೇರಣೆಯೇನೂ ಇರಲಿಲ್ಲ. ಎಂದರೆ, ಇದು ಸ್ವತಃ ಸುಬ್ಬುಲಕ್ಷ್ಮಿ ತೆಗೆದುಕೊಂಡ ನಿರ್ಧಾರ. ಇದಕ್ಕೆ ಮುಂಚೆ ಪರಸ್ಪರರಲ್ಲಿ ಆಸಕ್ತಿ, ಅನುರಾಗ ಇದ್ದೀತು. ಆದರೆ ತನ್ನ ಬದುಕಿನ ಅತಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ಸುಬ್ಬುಲಕ್ಷ್ಮಿ ತೋರಿಸಿದ ಆಯ್ಕೆಯ ಧೈರ್ಯ ಆಕೆಗಿದ್ದ ಮನೋಬೌದ್ಧಿಕ ಸ್ಪಷ್ಟತೆಯನ್ನು ಹೇಳುತ್ತದೆ. ಕುವೆಂಪು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎನ್ನುತ್ತಾರಲ್ಲ, ಅಂಥ ಆತ್ಮಶ್ರೀಯ ಹುಡುಕಾಟವನ್ನು ಎಲ್ಲರೂ ಮೊದಲ ಘಟ್ಟದಲ್ಲಿ ಏಕಾಂಗಿಗಳಾಗಿಯೇ ಆರಂಭಿಸಬೇಕು. ಏಕಾಂಗಿಯಾಗಿ ಇದನ್ನು ಆರಂಭಿಸಲು ಹೆಣ್ಣುಮಕ್ಕಳಿಗೆ ಬೇಕಾದ ಸ್ವಪ್ರಜ್ಞೆ ಸುಬ್ಬುಲಕ್ಷ್ಮಿಯವರಲ್ಲಿ ಪ್ರಖರವಾಗಿಯೇ ಕಾಣಿಸುತ್ತದೆ. ತನ್ನ ವ್ಯಕ್ತಿತ್ವ, ತನ್ನ ಭವಿಷ್ಯ, ತನ್ನ ಆತ್ಮಗೌರವದ ಬಗ್ಗೆ ಇದ್ದ ಸ್ಪಷ್ಟತೆಯಿಂದಾಗಿಯೇ ಆಕೆಗೆ ಇಂಥ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಯಿತು. ವಿವಾಹಿತರಾಗಿದ್ದ ಸದಾಶಿವಂ ಅವರ ಜೊತೆ ನಾಲ್ಕು ವರ್ಷ ಹೆಸರಿಲ್ಲದ, ಮನ್ನಣೆಯಿಲ್ಲದ ಸಂಬಂಧವೊಂದರಲ್ಲಿ ಇರುವುದು ಆ ಕಾಲಕ್ಕಂತೂ ಸಾಮಾನ್ಯವಾದ ಸಂಗತಿಯಾಗಿರಲಿಲ್ಲ. ದೇವದಾಸಿ ಹಿನ್ನೆಲೆಯಿಂದಾಗಿ ಆಕೆಗೆ ಇದು ಕಷ್ಟವಾಗಲಿಲ್ಲ ಎನ್ನುವವರಿದ್ದಾರೆ. ಆದರೆ ಆ ಹೊತ್ತಿಗಾಗಲೇ ಸಾರ್ವಜನಿಕವಾಗಿ ಖ್ಯಾತಳಾಗಿದ್ದ ಹೆಣ್ಣಿನ ಮಟ್ಟಿಗೆ ಖಂಡಿತಕ್ಕೂ ಇದು ಸುಲಭದ ಸಂಗತಿಯಾಗಿರಲಿಲ್ಲ.
ಇಲ್ಲಿಂದಲೇ ಸುಬ್ಬುಲಕ್ಷ್ಮಿಯವರ ಬದುಕು ಹೊರಗಿನಿಂದ ಆರೋಹಣ ಪರ್ವದ ಹಾಗೆ ಕಂಡರೂ ಆಳದಲ್ಲಿ ಬಿಡಿಸಬರದ ಸಂಕೀರ್ಣತೆಗಳ ಗೂಡಾಗತೊಡಗಿತು. ಸದಾಶಿವಂ ಅವರ ಮೊದಲ ಹೆಂಡತಿಯ ಸಾವು, ಅದರ ಸುತ್ತ ಕಟ್ಟಿದ ಅನುಮಾನಗಳ ಹುತ್ತ, ಕರ್ಮಠ ಬ್ರಾಹ್ಮಣರ ಮೂಕ ಅಮೈತ್ರಿ, ಇದನ್ನು ಮೀರಿಕೊಳ್ಳಲು ಬೇಕಾದ ದಾರಿಗಳ ಹುಡುಕಾಟ... ಸುಬ್ಬುಲಕ್ಷ್ಮಿಯವರ ಸಂಸ್ಕೃತೀಕರಣದ ಪ್ರಯತ್ನಗಳನ್ನು ಈ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳಲ್ಲಿ ಇಟ್ಟು ನೋಡಬೇಕು. ಇಷ್ಟಕ್ಕೂ ಅದು ಮೇಲ್ಮುಖಿ ಚಲನೆಯ ಸುಧಾರಣಾವಾದಿ ಕಾಲಘಟ್ಟ. ‘ಸುಸಂಸ್ಕೃತ’ ಭಾಷೆ, ಉಚ್ಛಾರ, ನಡವಳಿಕೆ, ವೇಷಭೂಷಣಗಳು ಶ್ರೇಣೀಕರಣವನ್ನು, ಅವಮಾನ ಅವಹೇಳನಗಳನ್ನು ದಾಟುವ ಮಾದರಿಗಳು ಎಂದು ನಂಬಿದ್ದ ಆ ಕಾಲದಲ್ಲಿ ಇದು ಸಹಜವಾಗಿಯೇ ಇತ್ತು. ಅನುಕರಣಾ ಮಾದರಿ ಎಂದು ಈಗ ಭಾಸವಾಗುತ್ತಿರುವುದು ಆಗ ನಡೆಯಬಹುದಾದ ದಾರಿಯಾಗಿಯೇ ಕಂಡಿತ್ತು. ಇದು ಉಪಾಯವೂ ಆಗಿತ್ತು, ಅನಿವಾರ್ಯವೂ ಆಗಿತ್ತು. ಬದುಕುವ ದಾರಿ ಎನ್ನೋಣ ಬೇಕಾದರೆ. ಆ ಕಾಲದಲ್ಲಂತೂ ಅದು ಶ್ರೇಷ್ಠತೆಯ ವ್ಯಸನವಾಗಿರಲಿಲ್ಲ ಎನಿಸುತ್ತದೆ.
ಗಿರೀಶ ಕಾರ್ನಾಡರ ಲೇಖನವೊಂದರಲ್ಲಿ, ಬಾಲಸರಸ್ವತಿ ಮತ್ತು ಸುಬ್ಬುಲಕ್ಷ್ಮಿಯವರ ಭೇಟಿಯ ಪ್ರಸಂಗವೊಂದರ ಉಲ್ಲೇಖವಿದೆ. ಪರಸ್ಪರರು ಒಬ್ಬರಿಗಿಂತ ಒಬ್ಬರು ಹೆಚ್ಚುತ್ತಲೇ ಹೋಗುವ ವಿನಯದಲ್ಲಿ ಇನ್ನೂ ಇನ್ನೂ ಬಾಗುತ್ತಾ ವಂದಿಸುವ ಆ ಸನ್ನಿವೇಶದ ಕೊನೆಯಲ್ಲಿ ಇಬ್ಬರೂ ತಬ್ಬಿ ಹೃತ್ಪೂರ್ವಕವಾಗಿ ನಗುವ ಆ ಸಂದರ್ಭವು ಇವತ್ತಿಗೆ ಮತ್ತೇನನ್ನೋ ಧ್ವನಿಸುತ್ತಿರುವ ಹಾಗೆ ಭಾಸವಾಗುತ್ತಿದೆ. ಕಲಾವಿದರಿಗಿರಬೇಕಾದ ಪರಸ್ಪರ ಗೌರವ, ವಿನಯದ ಆಚೆಗೆ ಸಂಸ್ಕೃತೀಕರಣದ ಅಸಂಗತತೆಯನ್ನೂ ಅವರಿಬ್ಬರೂ ಸೂಚಿಸುತ್ತಿರಬಹುದೆ?
ಇರಲಿ, ಈ ಸಂಸ್ಕೃತೀಕರಣದ ಪ್ರಕ್ರಿಯೆಯಲ್ಲಿ, ಸುಬ್ಬುಲಕ್ಷ್ಮಿ ಎಲ್ಲೋ ಕಳೆದುಹೋದರು ಎನ್ನುವುದನ್ನು ಹೇಗೆ ಚರ್ಚಿಸುವುದು? ಕರ್ನಾಟಕ ಸಂಗೀತದ ಮೇರು ಕಲಾವಿದೆಯೊಬ್ಬರು ಹೇಳಿದ ಪ್ರಸಂಗ ನೆನಪಾಗುತ್ತಿದೆ. ಸದಾಶಿವಂ ಮತ್ತು ಸುಬ್ಬುಲಕ್ಷ್ಮಿ ಇಬ್ಬರೇ ಮನೆಯಲ್ಲಿದ್ದ ದಿನ ಅದು. ಬೀದಿಯಲ್ಲಿ ದಾಸಯ್ಯನೊಬ್ಬ ಯಾವುದೋ ಜಾನಪದ ಗೀತೆಯನ್ನು ಹಾಡುತ್ತಾ ಹೋಗುತ್ತಿರುತ್ತಾನೆ. ಇವರಿಬ್ಬರೂ ಕೇಳಿ ಮೆಚ್ಚಿಕೊಳ್ಳುತ್ತಿರುವ ಹೊತ್ತಿಗೇ ಅವನು ಆ ಬೀದಿ ದಾಟಿ ಇನ್ನೊಂದು ಬೀದಿಗೆ ಹೋಗಿಬಿಡುತ್ತಾನೆ. ತಕ್ಷಣ ಸದಾಶಿವಂ ಸುಬ್ಬುಲಕ್ಷ್ಮಿಯವರಿಗೆ, ‘ಹೋಗಿ ಆ ಮಟ್ಟನ್ನು ಅವನ ಹತ್ತಿರ ಹೇಳಿಸಿಕೊಂಡು ಬಾ’ ಎನ್ನುತ್ತಾರೆ. ಅವರು ಅವನ ಬೆನ್ನಟ್ಟಿ ಹೋಗಿ ಅವನನ್ನು ಕರೆದುಕೊಂಡು ಬಂದು ಅದನ್ನು ಅಭ್ಯಾಸ ಮಾಡುತ್ತಾರೆ. ಸಂಗೀತ ವಿದ್ವಾಂಸನಾಗಿ ಸದಾಶಿವಂ ಅವರಿಗೆ ಸುಬ್ಬುಲಕ್ಷ್ಮಿ ಅತ್ಯುತ್ತಮವಾದುದನ್ನೆಲ್ಲ ಕಲಿಯಬೇಕು ಎನ್ನುವ ಹಂಬಲವಾಗಿ ಇದನ್ನು ನೋಡಬಹುದು, ಅವರ ಕಛೇರಿಗಳ ಸೂತ್ರಧಾರನಾಗಿ ಅದರ ಯಶಸ್ಸಿನ ಅಂಶಗಳನ್ನು, ಅದರಲ್ಲಿ ತರಬಹುದಾದ ಹೊಸತನವನ್ನು ಹುಡುಕುವ ಪ್ರಯತ್ನವಾಗಿ ಇದನ್ನು ನೋಡಬಹುದು. ಯಜಮಾನಿಕೆಯ ದರ್ಪವನ್ನೂ ಇದರಲ್ಲಿ ನೋಡಬಹುದು.
ಸುಬ್ಬುಲಕ್ಷ್ಮಿಯವರನ್ನೇ ಸದಾಶಿವಂ ಅವರ ಈ ಸೂತ್ರಧಾರ ಹಿಡಿತದ ಬಗ್ಗೆ ಕೇಳಿದಾಗ, ರೂಪಕವೊಂದರಲ್ಲಿ ಅವರು ಉತ್ತರ ಕೊಡುತ್ತಾರೆ, ‘‘ಹುಲಿ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿ ಹಿಡಿದು ಕಷ್ಟದ ದಾರಿಯನ್ನು ಸಾಗಿಸಲು ನೆರವು ಕೊಡುತ್ತಿರುವಾಗ, ನೋಡುವವರಿಗೆ ಅದು ಹಿಂಸೆಯ ಹಾಗೆ ಕಾಣಿಸಬಹುದು, ಆದರೆ ಆ ಮರಿಗೆ ಬೇಕಾದ ರಕ್ಷಣೆಯನ್ನೇ ಅದು ಕೊಡುತ್ತಿರುತ್ತದೆ’’ ಎಂದು. (ಇಂಡಿಯಾ ಟುಡೆಯ ತಮಿಳು ಆವೃತ್ತಿಯ ಸಂಪಾದಕರಾಗಿದ್ದ ವಾಸಂತಿ ಅವರು, ಸದಾಶಿವಂ ಅವರ ಉಪಸ್ಥಿತಿಯಿಲ್ಲದೇ ಸುಬ್ಬುಲಕ್ಷ್ಮಿಯವರ ಏಕೈಕ ಸಂದರ್ಶನವನ್ನು ತಾನು ಮಾಡಿದ್ದೇನೆ ಎಂದು ಶ್ರೀನಗರದಲ್ಲಿ ಹೆಮ್ಮೆಯಿಂದ ಹೇಳಿಕೊಂಡದ್ದು ನೆನಪಾಗುತ್ತಿದೆ). ಅವರ ವ್ಯಕ್ತಿತ್ವದಲ್ಲಿ ರೂಪಾಂತರವನ್ನೇ ಮಾಡಿದ ಸಂಸ್ಕೃತೀಕರಣದ ಪ್ರಕ್ರಿಯೆ ಒಂದು ಕಡೆಗಾದರೆ, ರಾಜಾಜಿ, ನೆಹರೂ, ಸರೋಜಿನಿನಾಯ್ಡು ಮೊದಲಾದವರ ಸಂಪರ್ಕ ಸೇತುವೆ ಸುಬ್ಬುಲಕ್ಷ್ಮಿಯವರ ವೃತ್ತಿಬದುಕಿನ ಏರುವಿಕೆಗೆ ಕಾರಣವಾಯಿತು ಎನ್ನುವ ಸಂಗತಿ ಇನ್ನೊಂದು ಕಡೆಗಿದೆ.
ಈ ಎರಡೂ ಸುಬ್ಬುಲಕ್ಷ್ಮಿಯವರ ವ್ಯಕ್ತಿತ್ವದ ಹೊರಮೈಯಾದರೆ ಒಳಮೈಯಲ್ಲಿ ಸುಬ್ಬುಲಕ್ಷ್ಮಿಯವರ ಇಡೀ ವ್ಯಕ್ತಿತ್ವವೇ ಪಡೆದ ವಿಸ್ತಾರ ಮತ್ತು ಅನುಭಾವದ ನೆಲೆಗಳನ್ನು ನಾವು ಮುಖ್ಯವಾಗಿ ಗಮನಿಸಬೇಕು. ಹೆಣ್ಣಿನ ಸಾಮಾಜಿಕ ಮತ್ತು ರಾಜಕೀಯ ಹೋರಾಟಕ್ಕೆ ಅನುಭಾವದ ಪಾವಿತ್ರ್ಯ ಮತ್ತು ಸಂಗೀತದ ಸೌಂದರ್ಯವನ್ನು ತಂದುಕೊಟ್ಟವರು ಸುಬ್ಬುಲಕ್ಷ್ಮಿ. ಹೆಣ್ಣು ಪಡೆಯಲು ಸಾಧ್ಯವಾಗುವ ಒಳ ಮತ್ತು ಹೊರ ಬಿಡುಗಡೆಗಳೆರಡನ್ನೂ ಈಕೆ ಸಂಗೀತದ ಆತ್ಮಸಖ್ಯದಲ್ಲಿ ಪಡೆದುಕೊಂಡವರು.
70ರ ಇಳಿವಯಸ್ಸಿನಲ್ಲಿ, ಕಛೇರಿಯೊಂದನ್ನು ಮುಗಿಸಿ ಕೆಳಗಿಳಿದು ಬಂದಾಗ, 30 ಮೈಲಿ ಇವರ ಸಂಗೀತ ಕೇಳಲೆಂದೇ ಬಂದ ದಂಪತಿಗಳು, ‘ಬರುವುದರಲ್ಲಿ ತಡವಾಗಿ ಕೊನೆಯ ಘಳಿಗೆಯಲ್ಲಿ ಬಂದೆವು’ ಎಂದು ಹೇಳಿ, ಆಶೀರ್ವಾದವನ್ನಾದರೂ ಮಾಡಿ ಎಂದರೆ, ಅವರಿಬ್ಬರ ಸಲುವಾಗಿ ರಾತ್ರಿ 11ಗಂಟೆಯ ಹೊತ್ತಿಗೆ ಮತ್ತೆ ವೇದಿಕೆಯ ಮೇಲೆ ಹೋಗಿ ಎರಡು ಗಂಟೆಗಳ ಕಛೇರಿ ಮಾಡುತ್ತಾರೆ. ಕನ್ನಡದ ಹಿರಿಯ ಚೇತನ, ನವರತ್ನರಾಮರಾಯರು ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದಾಗ, ಅವರನ್ನು ನೋಡಲೆಂದು ದಂಪತಿಗಳು ಹೋಗುತ್ತಾರೆ. ಇವರ ಕಛೇರಿ ಕೇಳಲಾಗಲಿಲ್ಲವಲ್ಲ ಎಂದು ಅವರು ಪರಿತಪಿಸಿದರೆ, ಕಛೇರಿಯೇ ಇಲ್ಲಿಗೆ ಬರುತ್ತದೆ ಬಿಡಿ ಎಂದು ಹೇಳಿ ಅಂದೇ ಸಂಜೆ ಅವರೊಬ್ಬರ ಸಲುವಾಗಿಯೇ ಅವರ ಮನೆಯಲ್ಲಿಯೇ ಕಛೇರಿ ಮಾಡುತ್ತಾರೆ. ಇವೆಲ್ಲ ವೈಯಕ್ತಿಕ ಸನ್ನಿವೇಶಗಳು ಎಂದರೆ, ಯುದ್ಧದ ಸಂದರ್ಭದಲ್ಲಿ ಹಾಕಿಕೊಂಡಿದ್ದ ಅಷ್ಟೂ ಒಡವೆಯನ್ನು ಬಿಚ್ಚಿ ನೆಹರೂ ಕೈಗಿಡುತ್ತಾರೆ. ಕೆಲಸದವನು ಮಗಳ ಮದುವೆ ಮಾಡುವುದು ಕಷ್ಟ ಎಂದರೆ, ಮತ್ತೆ ಕೈಯಲ್ಲಿದ್ದ ಬಳೆ ಬಿಚ್ಚಿ ಅವನಿಗೆ ಕೊಡುತ್ತಾರೆ. ಈ ಎಲ್ಲ ಒಂದು ತೂಕವಾದರೆ, ಇವರು ನಡೆಸಿಕೊಟ್ಟ ಸಹಾಯಾರ್ಥ ಕಛೇರಿಗಳ ಸಂಖ್ಯೆಯೇ ೪೦೦ಕ್ಕೂ ಹೆಚ್ಚು. ಇದರಿಂದ ಅವರು ಸಮಾಜಕ್ಕೆ, ಸಂಘಸಂಸ್ಥೆಗಳಿಗೆ ಕೊಟ್ಟ ಹಣ ಕೋಟ್ಯಂತರ.
ಹೆಣ್ಣಿಗೇ ನಿರ್ದಿಷ್ಟವಾದ ಎಲ್ಲ ಬಗೆಯ ಬಂಧನಗಳನ್ನು, ನಿರ್ಬಂಧಗಳನ್ನು ಕಲೆಯ ಪರಿವೇಷದಲ್ಲೂ ಆತ್ಮದ ಪರಿಪ್ರೇಕ್ಷ್ಯದಲ್ಲೂ ನೀಗಿಕೊಳ್ಳುತ್ತಲೇ ಹೋದವರು ಎಂ.ಎಸ್.ಎಸ್. ಅದೆಷ್ಟೋ ಅವಮಾನಗಳನ್ನು, ನೋವುಗಳನ್ನು ಸಖನ ಮತ್ತು ಸಂಗೀತದ ಸಖ್ಯದಲ್ಲಿ ಮೀರಿಕೊಳ್ಳುತ್ತಲೇ ಅನಿಕೇತನವಾದವರು, ಲೌಕಿಕ ಮತ್ತು ಅಲೌಕಿಕಗಳೆರಡನ್ನೂ ಹೀಗೆ ತಮ್ಮ ಜೀವಿತಾವಧಿಯಲ್ಲಿಯೇ ಸಾಧಿಸಿಕೊಳ್ಳಬಲ್ಲವರು ವಿರಳರಲ್ಲಿ ವಿರಳ. ಬದುಕಿನ ಸವಾಲುಗಳನ್ನೇ ಅವಕಾಶಗಳಾಗಿ ಮಾರ್ಪಡಿಸಿಕೊಳ್ಳುತ್ತಾ ಹೋದ ಸುಬ್ಬುಲಕ್ಷ್ಮಿ ಅದರ ಮೂಲಕವೇ ಹೆಣ್ಣಿನ ಹೋರಾಟದ ಮತ್ತು ಧಾರಣ ಶಕ್ತಿಯ ಅದ್ಭುತ ಕಟ್ಟಡವೊಂದನ್ನು ಕಟ್ಟಿದರು, ಆದರೆ ಅದರ ಒಡೆತನವನ್ನು ಎಂದೂ ತನ್ನದೆಂದು ಹೇಳಿಕೊಳ್ಳಲಿಲ್ಲ. ಇದೇ ಅವರ ಆತ್ಯಂತಿಕ ಸಾಧನೆ. ತಾನು ಪಡೆದದ್ದರ ಸಾವಿರ ಪಟ್ಟನ್ನು ಸಮುದಾಯಕ್ಕೆ ಮರಳಿ ನೀಡುವ ಮೂಲಕ ಸ್ತ್ರೀಸಂಕುಲಕ್ಕೂ ಮಾನವಕುಲಕ್ಕೂ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟರು.
ಸುಬ್ಬುಲಕ್ಷ್ಮಿ– ನಿಮಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.