ಮಹಾರಾಷ್ಟ್ರದ ಜಖನಗಾಂವ್ ಹಳ್ಳಿಯಲ್ಲೀಗ ಜಲ ಸಂಭ್ರಮ. ದಶಕಗಳ ಕಾಲ ಬರದ ದವಡೆಗೆ ಸಿಲುಕಿದ್ದ ಈ ಗ್ರಾಮದ ಕೊಳವೆಬಾವಿಗಳಲ್ಲಿ ಯಥೇಚ್ಛ ನೀರು. ಕೃಷಿ ತೊರೆದು ಸತಾರಾ ಪಟ್ಟಣಕ್ಕೆ ಗುಳೇ ಹೋದವರು ಮರಳಿದ್ದಾರೆ.
ಲಕ್ಷಗಟ್ಟಲೇ ಮೊತ್ತದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ಕೋರೆಗಾಂವ್ ತಾಲ್ಲೂಕಿನ ವೇಲು ಗ್ರಾಮದ್ದು ಇದೇ ಸಂತಸದ ಕಥೆ. ಕಳೆದ ವರ್ಷದ ಮೊದಲ ಮಳೆಗೆ ಅಲ್ಲಿನ ವಾತಾವರಣವೇ ಬೇರೆಯಾಗಿತ್ತು. ಬಾವಿಗಳಲ್ಲಿ ನೀರು; ಕೊಳವೆಬಾವಿಗಳಲ್ಲೂ ನೀರು. ನೆಲ ನಳನಳಿಸಲು ಹೆಚ್ಚೇನು ಬೇಕು?
ಸತಾರಾ ಜಿಲ್ಲೆಯ ಹಳ್ಳಿಗಳನ್ನು ಕಾಡುತ್ತಿರುವ ‘ಬರ' ರೋಗಕ್ಕೆ ಚಿಕಿತ್ಸೆ ನೀಡಿದ್ದು ಡಾ. ಅವಿನಾಶ್ ಪೋಲ್. ದಂತ ವೈದ್ಯ. ಹಾಗೆಂದು ವೃತ್ತಿಯನ್ನು ತೊರೆದು, ನೀರ ಹಿಂದೆ ಓಡಿದವರಲ್ಲ. ಕೆಲಸದ ಜತೆಜತೆಗೆ ತಮಗೆ ಅನಾಯಾಸವಾಗಿ ಸಿಗುವ ಸಂಪರ್ಕಗಳನ್ನು ಹಳ್ಳಿಯ ಅಭಿವೃದ್ಧಿಗೆ ಬಳಸಿ ಕೊಂಡಿರುವ ಪರಿ ಅನನ್ಯ. ಹಳ್ಳಿಗರು ಇವರನ್ನು ಪ್ರೀತಿಯಿಂದ `ಪಾಣ್ಯಾಚೆ ಡಾಕ್ಟರ್' (ನೀರಿನ ಡಾಕ್ಟರ್) ಎಂದೇ ಕರೆಯುತ್ತಾರೆ.
ಎರಡು ದಶಕಗಳಿಂದ ಸದ್ದಿಲ್ಲದೇ ನೆಲ-ಜಲ ಸಂರಕ್ಷಣೆಯಲ್ಲಿ ತೊಡಗಿರುವ ಡಾ. ಅವಿನಾಶ್, 'ನಾನೇನೂ ಹೆಚ್ಚು ಕೆಲಸ ಮಾಡುತ್ತಿಲ್ಲ. ಸರ್ಕಾರದ ಯೋಜನೆಗಳು ಹಳ್ಳಿಯನ್ನು ತಲುಪುವಂತೆ ಮಾಡುವ ಒಂದು ಸೇತುವೆ ಅಷ್ಟೇ' ಎಂದು ವಿನಮ್ರತೆಯಿಂದ ನುಡಿಯುತ್ತಾರೆ.
ನೀರ ಸಂರಕ್ಷಣೆಯನ್ನು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಅವಿನಾಶ್, ಈ ದಾರಿ ಹಿಡಿದಿದ್ದೇ ಆಕಸ್ಮಿಕ. ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಿದ ಬಳಿಕ, ಸತಾರಾದಲ್ಲಿ ಆಸ್ಪತ್ರೆ ತೆರೆದರು.
ಚಿಕಿತ್ಸೆಗೆಂದು ಬರುತ್ತಿದ್ದ ರೋಗಿಗಳ ಜತೆ ಉಭಯಕುಶಲೋಪರಿ ಮಾತುಗಳೆಲ್ಲ ನೀರಿನ ಕಡೆಗೇ ತಿರುಗುತ್ತಿದ್ದುದನ್ನು ಕುತೂಹಲದಿಂದ ಗಮನಿಸಿದರು; ಅದು ಬೇಸಾಯ ತೊರೆದು ಪಟ್ಟಣಕ್ಕೆ ಗುಳೇ ಬಂದಿರುವುದು ಇರಬಹುದು ಅಥವಾ ಮಲಿನ ನೀರು ಸೇವನೆಯಿಂದ ಆರೋಗ್ಯ ಏರುಪೇರಾಗಿದ್ದು ಇರಬಹುದು.
ಅಂತಿಮವಾಗಿ ಅದು ಶುದ್ಧ ನೀರಿನ ಕೊರತೆಯತ್ತಲೇ ಬೊಟ್ಟು ಮಾಡುವಂತಿತ್ತು. ಇದಕ್ಕೆ ಪರಿಹಾರವಾದರೂ ಏನು ಎಂಬ ಸತತ ಯೋಚನೆಯು ಸರ್ಕಾರದ ಯೋಜನೆಗಳತ್ತ ನೋಡುವಂತೆ ಮಾಡಿತು.
ವಾಸ್ತವವಾಗಿ, ಸರ್ಕಾರದ ಯೋಜನೆಗಳು ಜನರನ್ನು ತಲುಪುವುದು ವಿರಳ ಎಂಬ ದೂರು ಸಹಜ. ಅದಕ್ಕೆ ಕಾರಣಗಳು ಹಲವು. ಆದರೆ ‘ಪಾಣ್ಯಾಚೆ ಡಾಕ್ಟರ್' ಅದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ. ‘ಜನರಿಗಾಗಿಯೇ ಹಲವಾರು ಯೋಜನೆಗಳು ರೂಪುಗೊಂಡಿರುತ್ತವೆ. ನಾವು ಬಳಸಿಕೊಳ್ಳಬೇಕಷ್ಟೇ' ಎಂಬ ಚುಟುಕು ಪ್ರತಿಕ್ರಿಯೆ ಅವರದು.
ಜಲ ಸಂರಕ್ಷಣೆಯನ್ನು ಏಕವ್ಯಕ್ತಿ ಸೈನ್ಯದಂತೆ ನಿರ್ವಹಿಸುತ್ತಿರುವ ಡಾ ಅವಿನಾಶ್ ಹಾದಿ ತೀರಾ ಸರಳ. ಅವರು ಹಳ್ಳಿಗರ ದನಿಗೆ ಕಿವಿಗೊಡುತ್ತಾರೆ. ಅಲ್ಲಿಗೆ ಭೇಟಿ ನೀಡುತ್ತಾರೆ. ಸಮಸ್ಯೆ ಎಲ್ಲಿದೆ? ಪರಿಹಾರ ಹೇಗೆ ಎಂಬ ಬಗ್ಗೆ ಊರಿನವರ ಜತೆ ಚರ್ಚೆ ಮಾಡುತ್ತಾರೆ. ಊರಹಿರಿಯರಲ್ಲಿರುವ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ತಂತ್ರಜ್ಞಾನದ ಜತೆ ಮೇಳೈಸಿ, ಕೆಲಸ ಶುರು ಮಾಡುತ್ತಾರೆ.
ಎನ್.ಜಿ.ಒ ಇಲ್ಲ
ಹತ್ತಾರು ಜಲಾನಯನ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸುವ ಡಾ. ಅವಿನಾಶ್, ಇದಕ್ಕಾಗಿ ತಮ್ಮದೇ ಆದ ಸ್ವಯಂ ಸೇವಾ ಸಂಸ್ಥೆಯನ್ನೇನೂ (ಎನ್.ಜಿ.ಒ) ಸ್ಥಾಪಿಸಿಲ್ಲ. 'ಸರ್ಕಾರದಲ್ಲಿ ಜಲಾನಯನದ ಸಾಕಷ್ಟು ಯೋಜನೆಗಳಿವೆ. ಹಳ್ಳಿಗರಿಗೆ ಅದು ಗೊತ್ತಿರುವುದೇ ಇಲ್ಲ. ಕೆಲವು ಅಧಿಕಾರಿಗಳಲ್ಲಿ ಈ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ಜಾರಿಗೆ ಸರಳ ವಿಧಾನ ಸಿಕ್ಕಿರುವುದಿಲ್ಲ. ನಾನು ಎರಡೂ ತುದಿಗಳನ್ನು ಜೋಡಿಸುತ್ತೇನೆ' ಎನ್ನುತ್ತಾರೆ.
ಈ ಯಶಸ್ಸಿನ ಒಂದು ಪಾಲನ್ನು ಅಧಿಕಾರಿಗಳಿಗೆ ಸಲ್ಲಿಸಲು ಮರೆಯುವುದಿಲ್ಲ! ‘ಒಂದೊಮ್ಮೆ ಯೋಜನೆಯ ಲಾಭ ಹಳ್ಳಿಗಳಿಗೆ ಯಶಸ್ವಿಯಾಗಿ ತಲುಪುತ್ತದೆ ಎಂಬುದು ಅಧಿಕಾರಿಗಳಿಗೆ ಗೊತ್ತಾದರೆ ಅವರೇ ಮುಂದೆ ಬಂದು ನನ್ನ ಬಳಿ ಮಾಹಿತಿ ನೀಡುತ್ತಾರೆ. ಎಲ್ಲ ಹಳ್ಳಿಗಳ ಸಮಸ್ಯೆಗಳನ್ನೂ ಪರಿಹರಿಸಲು ನನಗೆ ಅಸಾಧ್ಯ. ಆದರೆ ನನ್ನ ಮಟ್ಟಿಗೆ ನಾನು ಪ್ರಯತ್ನ ಮಾಡುತ್ತೇನೆ' ಎಂಬುದು ಅವರ ಮಾತು.
ಮರಳಿ ಹರಿದ ನೀರು
ಹಳ್ಳಿಗರ ಶ್ರಮದಾನ ಕೆಲಸದ ಮುಖ್ಯ ಭಾಗ. ಅದಿಲ್ಲದೇ ನೆಲಜಲ ಸಂರಕ್ಷಣೆ ಸಾಧ್ಯವಿಲ್ಲ ಎಂಬುದು ಅವರ ದೃಢ ನಿಲುವು. ಗ್ರಾಮಸ್ಥರ ನೆರವಿನೊಂದಿಗೆ ಜಲಕ್ರಾಂತಿ ಸಂಭವಿಸಿದೆ.
ಸತಾರಾ ಬಳಿಯ ಬೆಬ್ಲೆವಾಡಿ ಎಂಬ ಹಳ್ಳಿಗೆ 2001ರಲ್ಲಿ ಹೋಗಿದ್ದಾಗ, ಕೃಷಿಗೆ ನೀರು ಇರಲೇ ಇಲ್ಲ. ಅರ್ಧಕ್ಕೂ ಹೆಚ್ಚು ಜನರು ಗುಳೇ ಹೋಗಿದ್ದರು. ಊರವರ ಶ್ರಮದಾನದಿಂದ ಬದು, ಹೊಂಡ ನಿರ್ಮಿಸುವ ಯೋಜನೆ ಜಾರಿಯಾಯಿತು. ಈಗ ಆ ಹಳ್ಳಿಯಲ್ಲಿ ಕೃಷಿಗೆ ಸಮೃದ್ಧ ನೀರು ಸಿಗುತ್ತಿದೆ.
ಜಖನಗಾಂವ್ ಹಳ್ಳಿಯದ್ದು. ಒಂದೂವರೆ ಸಾವಿರ ಹೆಕ್ಟೇರ್ ಪೈಕಿ 25 ಹೆಕ್ಟೇರಿನಲ್ಲಿ ಮಾತ್ರ ಕೃಷಿ ನಡೆಯುತ್ತಿತ್ತು. ಸರ್ಕಾರ ನಿತ್ಯ ಪೂರೈಸುತ್ತಿದ್ದ 35 ಲೀಟರ್ ನೀರಿನಲ್ಲೇ ಇಡೀ ಕುಟುಂಬ ಬದುಕಬೇಕಿತ್ತು. ಹಳ್ಳಿಗರ ಮನವೊಲಿಸಿ, ಸರ್ಕಾರದ ಜಲಾನಯನ ಯೋಜನೆ ಬಳಸಿ ಜಲಸಂರಕ್ಷಣೆ ಕಾರ್ಯ ಜಾರಿಗೊಳ್ಳುವಂತೆ ಮಾಡಿದರು.
ಈಗ ಎರಡು ವರ್ಷಗಳಿಂದ ಅದರ ಫಲಶ್ರುತಿ ಕಾಣುತ್ತಿದೆ. ಸಾವಿರ ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯ ಪಡೆದು, ಹಸಿರಿನಿಂದ ನಳನಳಿಸುತ್ತಿದೆ. ಅರ್ಧ ಲಕ್ಷ ಲೀಟರ್ ಹಾಲು ಈ ಹಳ್ಳಿಯಲ್ಲಿ ಪ್ರತಿ ವರ್ಷ ಉತ್ಪಾದನೆಯಾಗುತ್ತಿದೆ. ‘ನಿಮಗೆ ಗೊತ್ತೇ, ಕಳೆದ ವರ್ಷ ನಾಲ್ಕೂವರೆ ಕೋಟಿ ರೂಪಾಯಿ ಮೌಲ್ಯದ ಆಲೂಗಡ್ಡೆ ಮಾರಾಟವಾಗಿದೆ' ಎಂದು ಖುಷಿಯಿಂದ ಉದ್ಗರಿಸುತ್ತಾರೆ ಡಾ. ಅವಿನಾಶ್.
ಅಲ್ವಾಡಿ, ಜಾಲ್ನಾದಂಥ ಸುಮಾರು 70 ಹಳ್ಳಿಗಳಲ್ಲಿ ಆಗಿರುವ ಈವರೆಗಿನ ಕೆಲಸದ ಶ್ರೇಯಸ್ಸನ್ನು ಊರಿನವರಿಗೇ ಅರ್ಪಿಸುತ್ತಾರೆ ಈ ‘ನೀರಿನ ಡಾಕ್ಟರ್’. ಶ್ರಮದಾನದ ಮೂಲಕ ಮಾಡುವ ಕೆಲಸಗಳಲ್ಲಿ ಒಂದಷ್ಟು ನಾಯಕರನ್ನೂ ಗುರುತಿಸಿ, ಅವರಿಗೆ ಹೆಚ್ಚುವರಿ ಹೊಣೆ ವಹಿಸುತ್ತಾರೆ.
ಮುಂದಿನ ಕೆಲಸವೆಲ್ಲ ಅವರದೇ. 'ನಾನು ಯಾವಾಗಲೂ ಅಲ್ಲಿಗೆ ಹೋಗುವುದಿಲ್ಲ. ದಾರಿ ತೋರಿಸಿದರೆ ಗುರಿ ತಲುವುವ ಬಗೆಯನ್ನು ಅವರೇ ನಿರ್ಧರಿಸುತ್ತಾರೆ. ಮುಖ್ಯವಾಗಿ ನಾಯಕತ್ವ ಗುಣ ಇರುವವರನ್ನು ಗುರುತಿಸಿ, ಗೌರವಿಸಿದರೆ ಸಾಕು; ಸಮಸ್ಯೆ ಅರ್ಧ ಪರಿಹಾರವಾದಂತೆ' ಎನ್ನುತ್ತಾರೆ ಅವಿನಾಶ್.
ನೀರಿನ ಕೊರತೆ, ಬರಗಾಲ ಇತ್ಯಾದಿ ಶಬ್ದಗಳು ತೀರಾ ಸಹಜ ಎಂಬಂತೆ ಕೇಳಿ ಬರುತ್ತಿವೆ. ಇದಕ್ಕೆ ನಾವು ಆಯ್ದುಕೊಂಡ ದಾರಿಯೇ ಕಾರಣ. ನೀರಿನ ಓಟ ಕಡಿಮೆ ಮಾಡಿ. ವೇಗವನ್ನು ಕುಂಠಿತಗೊಳಿಸಿದ ಬಳಿಕ ಅದು ನಡೆಯುವಂತೆ ಮಾಡಿ. ಹೀಗೆ ನಡೆಯುವ ನೀರನ್ನು ಇಂಗಿಸಿ.
ನೆಲದಲ್ಲಿ ಇಂಗಿದ ನೀರನ್ನು ಕರೆದರೆ ಅದು ಮಳೆ ರೂಪದಲ್ಲಿ ಬಾರದೇ ಇದ್ದೀತೆ? ಹಳ್ಳಿ ಮಟ್ಟದಲ್ಲಿ ಕೆಲಸ ನಡೆಯಬೇಕು. ಹೊಲಗಳಲ್ಲಿ ಬದು, ಅಗಳು, ಹೊಂಡ ಮಾಡಬೇಕು. ಮಳೆನೀರು ಹೀಗೆ ಇಂಗಿ, ಮಣ್ಣು ಸಹ ಉಳಿಯುತ್ತದೆ. ಇದು ಅವರ ಸರಳ ತತ್ವ. ಪಾಣ್ಯಾಚೆ ಡಾಕ್ಟರ್ ಹಳ್ಳಿಗರ ಪಾಲಿಗೆ ಬರೀ ವೈದ್ಯನಲ್ಲ; ಭಗೀರಥ ಕೂಡ.
**
'ಪಾನಿ' - 'ನಾಮ್' ಫೌಂಡೇಶನ್
ಬಾಲಿವುಡ್ ನಟ ಆಮೀರ್ ಖಾನ್ ಸ್ಥಾಪಿಸಿರುವ ‘ಪಾನಿ ಫೌಂಡೇಶನ್' ಜಲ ಸಂರಕ್ಷಣೆ ಸಂಬಂಧಿ ಚಟುವಟಿಕೆಗಳನ್ನು ಕೈಗೊಂಡು, ಮಹಾರಾಷ್ಟ್ರದಲ್ಲಿ ಸುದ್ದಿ ಮಾಡುತ್ತಿದೆ. ಹಳ್ಳಿಗಳನ್ನು ಕಾಡುತ್ತಿರುವ ನೀರ ಕೊರತೆಯನ್ನು ಪರಿಹರಿಸಲು ಹಲವು ಯೋಜನೆಗಳನ್ನು ಅದು ಜಾರಿಗೊಳಿಸುತ್ತಿದೆ.
ಡಾ. ಅವಿನಾಶ್ ಕೆಲಸದ ಮಾದರಿಗಳನ್ನು ಗಮನಿಸಿರುವ ಈ ಪ್ರತಿಷ್ಠಾನ, ಇವರನ್ನು ತನ್ನ ಕಾರ್ಯಕ್ರಮಗಳ ಯೋಜನಾ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದೆ. ಹಳ್ಳಿಮಟ್ಟದಲ್ಲಿ ನಡೆಯುವ ಕೆಲಸಗಳ ರೂಪುರೇಷೆ ನಿರ್ಧರಿಸಿ, ಮಾರ್ಗದರ್ಶನ ನೀಡುವ ಕೆಲಸ ಇವರದು.
ಇದರ ಜತೆಗೆ, ನಾನಾ ಪಾಟೇಕರ್ ಅವರ ‘ನಾಮ್ ಫೌಂಡೇಶನ್'ನ ಟ್ರಸ್ಟಿ ಕೂಡ ಆಗಿದ್ದಾರೆ. ಈ ಪ್ರತಿಷ್ಠಾನದ ಹಲವು ಯೋಜನೆಗಳಿಗೆ ಅವಿನಾಶ್ ಸಲಹೆ ಸೂಚನೆ ನೀಡುತ್ತಾರೆ.
***
ಕಳೆದುಹೋಗಿರುವ ನೀರನ್ನು ಮತ್ತೆ ಮರಳಿ ತರುವುದು ತೀರಾ ಕಷ್ಟದ ಕೆಲಸ. ಆದರೆ ಅದು ತೀರಾ ಸುಲಭವೂ ಹೌದು
ಡಾ. ಅವಿನಾಶ್ ಪೋಲ್