ADVERTISEMENT

ಮನೆಗೆ ಒಬ್ಬರು ಬನ್ನಿ ನೀರ ಕಾಯಕಕ್ಕೆ...

ರವೀಂದ್ರ ಭಟ್ಟ
Published 21 ಮಾರ್ಚ್ 2017, 19:56 IST
Last Updated 21 ಮಾರ್ಚ್ 2017, 19:56 IST
ಮನೆಗೆ ಒಬ್ಬರು ಬನ್ನಿ ನೀರ ಕಾಯಕಕ್ಕೆ...
ಮನೆಗೆ ಒಬ್ಬರು ಬನ್ನಿ ನೀರ ಕಾಯಕಕ್ಕೆ...   

ಬೆಂಗಳೂರು: ಕಳೆದ ವರ್ಷ 168 ಹಳ್ಳಿಗಳಿಗೆ ನೀರು ಪೂರೈಸಿದ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಕೊಪ್ಪಳ ಜಿಲ್ಲೆ ತಳ್ಳೂರು ಗ್ರಾಮದ ಕೆರೆ ಅಭಿವೃದ್ಧಿಗೆ ಕೈಹಾಕಿದ್ದಾರೆ.

ನೀರಿಗೆ ಪರದಾಟ ನಡೆಸುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕೊಟ್ಟರೆ ಏನೂ ಪ್ರಯೋಜನವಿಲ್ಲ ಎನ್ನುವುದು ಅವರಿಗೆ ಅರ್ಥವಾಗಿದೆ. ಅದಕ್ಕೇ ಕೆರೆ ಉಳಿಸುವುದು ಅನಿವಾರ್ಯ ಎಂದು ಕೆರೆ ಅಭಿವೃದ್ಧಿ ಕಾಯಕದಲ್ಲಿ ತೊಡಗಿದ್ದಾರೆ. ಮನೆಗೊಬ್ಬ ವ್ಯಕ್ತಿ ನೀರು ಕಾಯಕದಲ್ಲಿ ತೊಡಗಿಕೊಂಡರೆ ರಾಜ್ಯಕ್ಕೆ ಬರ ನಿರೋಧಕ ಶಕ್ತಿ ಬರುತ್ತದೆ ಎನ್ನುವುದು ಅವರ ನಂಬಿಕೆ.

ಮಡಕೆ ನೀರು ಚೆಲ್ಲಿ ಮಳೆ ಬರಲಿ ಎಂದು ಕಾಯುತ್ತಾ ಕುಳಿತುಕೊಳ್ಳುವ ಬದಲು ಮಳೆ ಬಂದಾಗಲೇ ಅದನ್ನು ಹಿಡಿದಿಟ್ಟುಕೊಂಡು ಬೇಸಿಗೆಯಲ್ಲಿ ಅದನ್ನು ಬಳಸಲು ಮುಂದಾಗುವುದು ಮುಖ್ಯ ಎಂದು ಅವರು ಪ್ರತಿಪಾದಿಸುತ್ತಾರೆ.ಸಿನಿಮಾ ನಟನಾಗಿದ್ದರೂ ಜಲ ಕಾರ್ಯಕರ್ತನಾಗಿ ಬದಲಾದ ಕತೆಯನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

l   ನಿಮ್ಮ ಜಲ ಕಾಯಕಕ್ಕೆ  ಪ್ರೇರಣೆ ಏನು?
ಪರಿಸ್ಥಿತಿಯೇ ಪ್ರೇರಣೆ. ಎಲ್ಲರೂ ರೈತರ ಬಗ್ಗೆ ಮಾತನಾಡುತ್ತಿದ್ದರು. ರೈತರ ಆತ್ಮಹತ್ಯೆ ತಡೆಯಬೇಕು ಎನ್ನುತ್ತಿದ್ದರು. ರೈತರ ಸ್ಥಿತಿ ಅರಿಯಲು ಪ್ರವಾಸ ಮಾಡಿದಾಗ ಕೆಲವು ರೈತರು ‘ನಮಗೆ ನೀರು ಸಿಕ್ಕರೆ ನಾವೇ ಸಾಲ ಕೊಡುತ್ತೇವೆ’ ಎಂದರು. ಅದಕ್ಕಾಗಿ ರೈತರಿಗೆ ಏನಾದರೂ ಮಾಡಬೇಕು ಎಂದು ಅನ್ನಿಸಿತು. ಕಳೆದ ಬೇಸಿಗೆಯಲ್ಲಿ ಹಲವಾರು ಊರುಗಳಿಗೆ ಭೇಟಿ ನೀಡಿದಾಗ ಅವರು ಕುಡಿಯುವ ನೀರಿಗೆ ಕಷ್ಟ ಪಡುವುದು ಗೊತ್ತಾಯಿತು. ಯಶೋ ಮಾರ್ಗ ಸಂಸ್ಥೆಯ ಮೂಲಕ ಕಳೆದ ವರ್ಷ 160 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಿದ್ದಾಯಿತು. ನಂತರದ ದಿನಗಳಲ್ಲಿ ಆ ಗ್ರಾಮಗಳಲ್ಲಿ ಒಳ್ಳೆಯ ಮಳೆಯಾಯಿತು. ಮಳೆ ನೋಡಿ ನನಗೆ ಖುಷಿ. ಈ ಗ್ರಾಮಗಳ ರೈತರಿಗೆ ಇನ್ನು ತೊಂದರೆ ಇಲ್ಲ ಎಂದುಕೊಂಡೆ. ಈ ಬಾರಿ ಮತ್ತೆ ಆ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ. ಆಗ ನನಗೆ ಗೊತ್ತಾಯಿತು. ಬೇಸಿಗೆ ಬಂದಾಗ ನೀರು ಕೊಟ್ಟರೆ ಫಲವಿಲ್ಲ. ಮಳೆ ಬಂದಾಗ ಅದನ್ನು ಹಿಡಿದಿಟ್ಟುಕೊಳ್ಳಬೇಕು ಎಂದು. ಅದಕ್ಕಾಗಿಯೇ ಕೆರೆ ಅಭಿವೃದ್ಧಿ ಮಾಡಲು ಮುಂದಾದೆ.

l   ನಿಮ್ಮ ಹಣವನ್ನು ಹಾಕಿ ತಲ್ಲೂರು ಕೆರೆ ಅಭಿವೃದ್ಧಿ ಮಾಡುತ್ತಿದ್ದೀರಿ. ಹೀಗೆ ಎಷ್ಟು ಕೆರೆ ಅಭಿವೃದ್ಧಿ ಮಾಡಲು ಸಾಧ್ಯ.
ರಾಜ್ಯದಲ್ಲಿರುವ 36 ಸಾವಿರ ಕೆರೆಗಳನ್ನೂ ನಾನೊಬ್ಬನೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾನು ದುಡಿದ ಹಣದಿಂದ ಒಂದು ಕೆರೆಯನ್ನಾದರೂ ಅಭಿವೃದ್ಧಿ ಮಾಡಬಹುದು ಎಂದು ತಲ್ಲೂರು ಕೆರೆ ಅಭಿವೃದ್ಧಿಗೆ ಮುಂದಾಗಿದ್ದೇನೆ. ಜನ ಎಷ್ಟು ಒಳ್ಳೆಯವರು ಎಂದರೆ ಈಗ ಅವರೇ ಮುಂದಾಗಿ ಕೆರೆಯ ಹೂಳು ತೆಗೆಯುತ್ತಿದ್ದಾರೆ. ಇದೊಂದು ಮಾದರಿ ಅಷ್ಟೆ. ರಾಜ್ಯದಲ್ಲಿರುವ ಶ್ರೀಮಂತರು ಒಂದೊಂದು ಕೆರೆ ಅಭಿವೃದ್ಧಿ ಮಾಡಿದರೂ ಅಷ್ಟರಮಟ್ಟಿಗೆ ಬರ ನಿರೋಧಕ ಶಕ್ತಿ ಬರುತ್ತದೆ. ನಮ್ಮ ಹಿಂದಿನವರು ಕರೆಕಟ್ಟೆಗಳನ್ನು ಶುದ್ಧವಾಗಿ ಇಟ್ಟುಕೊಳ್ಳುತ್ತಿದ್ದರು. ಭೂಮಿ, ನೀರು, ಗಾಳಿಗೆ ಗೌರವ ಕೊಡುತ್ತಿದ್ದರು. ಯಾವುದನ್ನೂ ಕಲುಷಿತ ಮಾಡಲು ಬಿಡುತ್ತಿರಲಿಲ್ಲ. ನೀರಿಗಾಗಿ ನಾವು ಈಗ ಕೆರೆ ಕಟ್ಟೆಗಳನ್ನು ಬತ್ತಿಸಿದೆವು. ನದಿಗಳನ್ನು ಖಾಲಿ ಮಾಡಿದೆವು. ಅಣೆಕಟ್ಟು ಬರಿದಾಯಿತು. ಅಂತರ್ಜಲ ಮುಗಿದು ಹೋಯಿತು. ಈಗ ನಮ್ಮ ಕಣ್ಣು ಸಮುದ್ರದ ಮೇಲೆ ಬಿದ್ದಿದೆ. ಅಲ್ಲಿಂದ ನೀರು ತರುತ್ತೇವೆ ಎನ್ನುತ್ತಿದ್ದೇವೆ. ಹೀಗೆ  ಬಿಟ್ಟರೆ  ಸಮುದ್ರವನ್ನೂ ಖಾಲಿ ಮಾಡುತ್ತೇವೆ. ಆದರೆ ಆಕಾಶದಿಂದ ಬೀಳುವ ನೀರಿನ ಬಗ್ಗೆ ನಮ್ಮ ಗಮನವೇ ಇಲ್ಲ.

l   ನೀರು ಉಳಿತಾಯದ ಆಂದೋಲನಕ್ಕೆ ನೀವು ನಾಂದಿ ಹಾಡಿದ್ದೀರಾ?
ಆಂದೋಲನ ಬಹುದೊಡ್ಡ ಶಬ್ದ. ನಾನು ನನ್ನ ಕೈಯಲ್ಲಿ ಏನಾಗುತ್ತದೋ ಅದನ್ನು ಮಾಡುತ್ತೇನೆ. ನನ್ನಂತೆಯೇ ಎಲ್ಲ ಕಲಾವಿದರೂ, ಎಲ್ಲ ಸೆಲಿಬ್ರಿಟಿಗಳೂ ಜಲ ಕಾಯಕದಲ್ಲಿ ಮುಂದಾಗಲಿ ಎನ್ನುವುದಷ್ಟೇ ನನ್ನ ಬಯಕೆ.

l   ಬರಗಾಲ ತೀವ್ರವಾಗಿದ್ದರೂ ಜನರಲ್ಲಿ ಇನ್ನೂ ಜಲಜಾಗೃತಿ ಮೂಡದೇ ಇರಲು ಕಾರಣವೇನು?
ಇದಕ್ಕೆ ಮುಖ್ಯ ಕಾರಣ ನೀರಿನ ಬಗ್ಗೆ ನಮಗೆ ಇರುವ ಅಜ್ಞಾನ ಮತ್ತು ನಿರ್ಲಕ್ಷ್ಯ. ಭೂಮಿಯ ಮೇಲೆ ಶೇ 70ರಷ್ಟು ನೀರಿದೆ ಎಂಬ ನಂಬಿಕೆ. ಇಷ್ಟೊಂದು ಪ್ರಮಾಣದ ನೀರಿದ್ದರೂ ನಮ್ಮ ಬಳಕೆಗೆ ಸಿಗುವುದು ಶೇ 0.2ರಷ್ಟು ನೀರು ಮಾತ್ರ. ನಮ್ಮ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಒಂದು ಹನಿ ನೀರನ್ನು ನಾವು ಉತ್ಪಾದನೆ  ಮಾಡಲು ಸಾಧ್ಯವಿಲ್ಲ. ಸಾವಿರ ವರ್ಷಗಳ ಹಿಂದೆ ಎಷ್ಟು ನೀರಿತ್ತೋ ಈಗಲೂ ಅಷ್ಟೇ ಇದೆ. ಆದರೆ ಜನಸಂಖ್ಯೆ ಹೆಚ್ಚಾಗಿದೆ. ನೀರಿನ ಬಳಕೆ ವಿಪರೀತವಾಗಿದೆ. ಈ ಸತ್ಯ ಅರಿತುಕೊಂಡು ನೀರಿನ ಮಿತಬಳಕೆ ಮಾಡದಿದ್ದರೆ ಮುಂದಿನ ಜನಾಂಗ ಕ್ಷಮಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.