ಮೈಸೂರು: ತನ್ನ ಸ್ನಿಗ್ಧ ಸೌಂದರ್ಯದ ಮೂಲಕ ವಿಶ್ವದ ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತಿರುವ ಇಲ್ಲಿನ ಅಂಬಾವಿಲಾಸ ಅರಮನೆಯು ಜಲಸಂರಕ್ಷಣೆ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದೆ.
ಅರಮನೆ ಅಂಗಳದಲ್ಲಿ ಬೀಳುವ ಮಳೆಯ ಪ್ರತಿ ಹನಿಯನ್ನು ಹಿಡಿದಿಡುವ ಕಾರ್ಯ ಆರೇಳು ವರ್ಷಗಳಿಂದ ಸದ್ದಿಲ್ಲದೆ ಸಾಗಿದೆ. ಅದಕ್ಕಾಗಿ ಪಾರಂಪರಿಕ ಕಟ್ಟಡದ ಸುತ್ತಮುತ್ತ 13 ತೊಟ್ಟಿ ನಿರ್ಮಿಸಿ ಕೋಟಿಗೂ ಅಧಿಕ ಲೀಟರ್ ನೀರು ಸಂಗ್ರಹ ಮಾಡಲಾಗುತ್ತಿದೆ. ಈ ಮೂಲಕ ಬಿರುಬೇಸಿಗೆಯಲ್ಲಿನ ನೀರಿನ ಅಭಾವ ಹೋಗಲಾಡಿಸಿ ಜಲ ಸ್ವಾವಲಂಬನೆ ಸಾಧಿಸಿದೆ.
ಅರಮನೆ ಮಂಡಳಿಯು 2009ರಿಂದ ನಾಲ್ಕು ಹಂತಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಕೈಗೆತ್ತಿಕೊಂಡು ಹೂದೋಟ, ಹುಲ್ಲು ಹಾಸು, ನರ್ಸರಿ, ಸ್ವಚ್ಛತೆ ಹಾಗೂ ಶೌಚಾಲಯಕ್ಕೆ ಬಳಸಿಕೊಳ್ಳುತ್ತಿದೆ. ಆವರಣದಲ್ಲಿರುವ ಎಂಟು ಕೊಳವೆಬಾವಿಗಳ ಅಂತರ್ಜಲವೂ ವೃದ್ಧಿಸಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್‌ಐಇ) ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನ ಕೇಂದ್ರದ (ಕ್ರೆಸ್ಟ್) ತಜ್ಞರ ತಂಡ ಇದರ ವಿನ್ಯಾಸ ರೂಪಿಸಿದೆ.
ಇದಲ್ಲದೆ ಮೈಸೂರು ಸಂಸ್ಥಾನ ಆಳಿದ ಹಿಂದಿನ ಮಹಾರಾಜರು ಅರಮನೆಯ ಮಹಡಿಗಳಲ್ಲಿ 12 ಟ್ಯಾಂಕ್ ನಿರ್ಮಿಸಿದ್ದು, 1.20 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದು. ಇವು ಬಿರು ಬೇಸಿಗೆಯಲ್ಲೂ ಪಾರಂಪರಿಕ ಕಟ್ಟಡವನ್ನು ತಂಪಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
‘72 ಎಕರೆ ವಿಸ್ತೀರ್ಣದಲ್ಲಿ ಅರಮನೆ ಇದೆ. ಅರಮನೆ ಆವರಣ, ದೇಗುಲ, ಕಚೇರಿ ಛಾವಣಿ, ವಾಹನ ನಿಲುಗಡೆ ಪ್ರದೇಶದಲ್ಲಿ ಬಿದ್ದು ಚರಂಡಿಯಲ್ಲಿ ಹರಿದು ಹೋಗುತ್ತಿದ್ದ ಮಳೆ ನೀರನ್ನು ಸುವ್ಯವಸ್ಥಿತವಾಗಿ ಹಿಡಿದಿಡಲಾಗುತ್ತಿದೆ’ ಎನ್ನುತ್ತಾರೆ ಎನ್‌ಐಇ–ಕ್ರೆಸ್ಟ್ ಮುಖ್ಯಸ್ಥ ಪ್ರೊ.ಎಸ್.ಶ್ಯಾಮಸುಂದರ್.
ಅರಮನೆ ನಿರ್ಮಾಣ ವಿನ್ಯಾಸವೂ ಮಳೆ ನೀರು ಸಂಗ್ರಹಕ್ಕೆ ಪೂರಕವಾಗಿಯೇ ಇದೆ. ಅರಮನೆ ಸೊಬಗು, ಪಾರಂಪರಿಕ ನೋಟಕ್ಕೆ ಯಾವುದೇ ಧಕ್ಕೆಯಾಗದಂತೆ ನೆಲಮಟ್ಟದಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹಿಸಲಾಗುತ್ತಿದೆ.
ಈ ತೊಟ್ಟಿಗಳನ್ನು 4.5x3 ಮೀಟರ್ ಅಳತೆಯಲ್ಲಿ ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ. ಪ್ರತಿ ತೊಟ್ಟಿ 1.5 ಮೀಟರ್ ಆಳ ಇದೆ. ಭುವನೇಶ್ವರಿ ದೇಗುಲ ಬಳಿ ಇರುವ ತೊಟ್ಟಿಯಲ್ಲಿ 2.50 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದು. ಕಚೇರಿ ಪಕ್ಕದ ನರ್ಸರಿಯಲ್ಲಿ ಮೂರು ತೊಟ್ಟಿಗಳಿವೆ.
ಇವುಗಳಲ್ಲಿ ಸುಮಾರು 10 ಲಕ್ಷ ಲೀಟರ್‌ವರೆಗೆ ಸಂಗ್ರಹಿಸಬಹುದು. ಹೀಗೆ, ಹತ್ತಾರು ಬಾರಿ ಮಳೆ ಬಂದಾಗ ತೊಟ್ಟಿಗಳಲ್ಲಿ ಸೇರುವ ನೀರು ಒಂದು ಕೋಟಿ ಲೀಟರ್ ದಾಟುತ್ತದೆ. ಅರಮನೆಗೆ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ರಾಜವಂಶಸ್ಥರೂ ಇಲ್ಲೇ ವಾಸವಿದ್ದಾರೆ. 100ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಹೀಗಾಗಿ, ನೀರಿಗೆ ಬೇಡಿಕೆ ಹೆಚ್ಚು. ಅಲ್ಲದೆ, 25 ಎಕರೆ ವಿಸ್ತೀರ್ಣದ ಉದ್ಯಾನಕ್ಕೆ ನೀರು ಹಾಯಿಸಬೇಕು. ರಾಜವಂಶಸ್ಥರಿಗೆ ಸೇರಿದ ಮೂರು ಆನೆಗಳ ಸ್ನಾನಕ್ಕೆ ನೀರು ಹೊಂದಿಸಬೇಕು.
ಸಾಕಷ್ಟು ನೀರಿನ ವ್ಯವಸ್ಥೆ ಇರುವುದರಿಂದ ಬಿಸಿಲ ಧಗೆಯಲ್ಲೂ ಯಾವುದೇ ಸಮಸ್ಯೆ ಉದ್ಭವಿಸಿಲ್ಲ. ಕುಡಿಯುವ ನೀರಿಗೆ ಮಾತ್ರ ಪಾಲಿಕೆ (ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರ) ಮೇಲೆ ಅವಲಂಬಿತವಾಗಿದೆ.
‘ಉದ್ಯಾನದಿಂದ ಹಿಡಿದು ಬಹುತೇಕ ಕೆಲಸಗಳಿಗೆ ಮಳೆ ನೀರು ಹಾಗೂ ಕೊಳವೆಬಾವಿ ನೀರು ಬಳಸುತ್ತೇವೆ. ಮಳೆನೀರು ಸಂಗ್ರಹದಿಂದ ಕೊಳವೆ ಬಾವಿಗಳಲ್ಲೂ ನೀರು ಬರುತ್ತಿದೆ. ಉದ್ಯಾನದ ನಿರ್ವಹಣೆಗೆ ತಿಂಗಳಿಗೆ 8 ಲಕ್ಷ ಲೀಟರ್ ನೀರು ಬೇಕು. ಹಿಂದೆ ಪಾಲಿಕೆ ಹರಿಸುವ ನೀರನ್ನು ಅವಲಂಬಿಸಿದ್ದೆವು’ ಎನ್ನುತ್ತಾರೆ ಅರಮನೆ ಮಂಡಳಿಯ ತೋಟಗಾರಿಕಾ ಅಧಿಕಾರಿ ರಾಮಕೃಷ್ಣ.
**
ಅರಮನೆ ನಿರ್ಮಾಣ ಸ್ವರೂಪವೇ ಮಳೆ ನೀರು ಸಂಗ್ರಹಿಸುವ ವಿಧಾನಕ್ಕೆ ಮಾದರಿಯಾಗಿದೆ. ಜಲ ಸ್ವಾವಲಂಬನೆ ಸಾಧ್ಯವಾಗಿದ್ದು, ಬಿರುಬೇಸಿಗೆಯಲ್ಲೂ ನೀರಿಗೆ ಕೊರತೆ ಇಲ್ಲ.
ಟಿ.ಎಸ್.ಸುಬ್ರಮಣ್ಯ, ಉಪನಿರ್ದೇಶಕ, ಅರಮನೆ ಮಂಡಳಿ
**
ಅರಮನೆ ಅಂಗಳದಲ್ಲಿ ಬೀಳುವ ಮಳೆ ನೀರನ್ನು ಹರಿಯಲು ಬಿಡದೆ ವ್ಯವಸ್ಥಿತವಾಗಿ ಸಂಗ್ರಹಿಸಲಾಗುತ್ತಿದೆ. ಇಲ್ಲಿ ಬೀಳುವ ಶೇ 60ರಷ್ಟು ಮಳೆ ನೀರು ಉಪಯೋಗಕ್ಕೆ ಬರುತ್ತಿದೆ
ಪ್ರೊ.ಎಸ್.ಶ್ಯಾಮಸುಂದರ್, ಮುಖ್ಯಸ್ಥ, ಎನ್‌ಐಇ–ಕ್ರೆಸ್ಟ್, ಮೈಸೂರು