ADVERTISEMENT

ಶಾಸಕರ ಕಳಕಳಿ–ಜಲ ಚಳವಳಿ

ವಿಶ್ವ ಜಲದಿನ ವಿಶೇಷ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:34 IST
Last Updated 21 ಮಾರ್ಚ್ 2017, 19:34 IST
ಶಾಸಕರ ಕಳಕಳಿ–ಜಲ ಚಳವಳಿ
ಶಾಸಕರ ಕಳಕಳಿ–ಜಲ ಚಳವಳಿ   
ಭಗೀರಥ ಪ್ರಯತ್ನ
ಬರಗಾಲವೇ ಬೆನ್ನುಹತ್ತಿದ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಕ್ಕೆ ಹೇಮಾವತಿ ನದಿ ನೀರನ್ನು ಹರಿಸಿ,  ಕೆರೆ ಗಳನ್ನು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿದ ಕಥನ ಇಲ್ಲಿದೆ

ಶಿರಾ ಕ್ಷೇತ್ರದ ಶಾಸಕ, ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಹೇಮಾವತಿ ನೀರನ್ನು ಕ್ಷೇತ್ರಕ್ಕೆ ಹರಿಯಿಸುವ ಛಲ ತೊಟ್ಟಿದ್ದರು. ಕೇಂದ್ರ ಸರ್ಕಾರದ ₹150 ಕೋಟಿ ಅನುದಾನದಲ್ಲಿ ಕೆರೆ ತುಂಬಿಸುವ, ಹಳ್ಳಿಗಳಿಗೆ ಕುಡಿ­ಯುವ ನೀರು ಒದಗಿಸುವ, ಅಂತರ್ಜಲ ಮರುಪೂರಣ ಮಾಡುವ ಮೂರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ ಎನ್ನುತ್ತಾರೆ ಜಯಚಂದ್ರ.

ಗುಬ್ಬಿ ತಾಲ್ಲೂಕಿನ ಪಟ್ರಾವತಾನಹಳ್ಳಿ ಬಳಿ ಹೇಮಾವತಿ ನಾಲೆಯಿಂದ 0.9 ಟಿ.ಎಂ.ಸಿ ಅಡಿ ನೀರನ್ನು ಕಳ್ಳಂಬೆಳ್ಳ ಕೆರೆಗೆ ತರುವ ಯೋಜನೆ ಮೊದಲು ಜಾರಿ ಮಾಡಲಾಯಿತು. ₹18 ಲಕ್ಷ ವೆಚ್ಚದಲ್ಲಿ 16 ಕಿ.ಮೀ. ಉದ್ದದ ಕಾಲುವೆ ಮೂಲಕ ನೀರು ಹರಿಯಿಸುವುದು. ಕಳ್ಳಂಬೆಳ್ಳ ಮತ್ತು ಶಿರಾ ಸುತ್ತಮುತ್ತಲ ಹಳ್ಳಿಗಳಿಗೆ ನೀರುಣಿಸುವ ಸಂಕಲ್ಪ ಯೋಜನೆಯ ಭಾಗವಾಗಿತ್ತು.

ಕಳ್ಳಂಬೆಳ್ಳ ಕೆರೆಗೆ ನೀರು ಹರಿದ ಮೇಲೆ ಯಲಿಯೂರು, ಶಿರಾ ಕೆರೆಗಳಿಗೆ ನೀರು ಹರಿಸುವುದು, ಶಿರಾ ಕೆರೆಯಿಂದ ತಾವರೆಕೆರೆಗೆ ನೀರು ಹರಿಸುವ ಯೋಜನೆಯನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
 
ಅಲ್ಲಿಂದ ಮದಲೂರು ಕೆರೆಗೆ ನೀರು ತಲುಪಿಸುವ ಯೋಜನೆ ಮೂರನೇ ಹಂತದಲ್ಲಿ ಕೈಗೆತ್ತಿಕೊಂಡು ಕಾಲುವೆಯನ್ನು ನಿರ್ಮಿಸಲಾಗಿದೆ. ಹೇಮಾವತಿ ನೀರು ಈ ಬಾರಿ ಹರಿದಿದ್ದರೆ ಮದಲೂರು ಕೆರೆಗೂ ನೀರು ತಲುಪಿ, ಇಡೀ ಕ್ಷೇತ್ರದ ಬಹುತೇಕ ಪ್ರದೇಶಕ್ಕೆ ನೀರು ಸಿಕ್ಕಿದಂತಾಗುತ್ತಿತ್ತು.

ಅಲ್ಲಲ್ಲಿ ನೀರು ಸಂಗ್ರಹಿಸಲು 18 ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಎಂಟು ಪಿಕಪ್‌ ಡ್ಯಾಂ ಅಥವಾ ಬ್ಯಾರೇಜ್‌ ಕಂ ಬ್ರಿಡ್ಜ್‌ ನಿರ್ಮಿಸಲಾಗಿದೆ. ಎರಡು ವರ್ಷದ ಹಿಂದೆ ಮಳೆಯಾಗಿ, ಹೇಮಾವತಿ  ನೀರು ಹರಿದಾಗ ಈ ಎಲ್ಲಾ ಚೆಕ್‌ಡ್ಯಾಂಗಳು ತುಂಬಿದ್ದವು. ಹೀಗಾಗಿ ಕಾಲುವೆ, ಚೆಕ್‌ಡ್ಯಾಂ ಮತ್ತು ಕೆರೆಗಳ ಪಾತ್ರದಲ್ಲಿ ಅಂತರ್ಜಲ ಮಟ್ಟ ಗಮನಾರ್ಹವಾಗಿ ಏರಿಕೆಯಾಗಿದೆ.
 
ಎರಡು ವರ್ಷ ಮಳೆ ಬೀಳದೆ, ಹೇಮಾವತಿಯಿಂದ ನೀರು ಬರದೇ ಇದ್ದರೂ ಅಂತರ್ಜಲ ಮಟ್ಟ ಗಂಭೀರ ಅಪಾಯಕಾರಿ ಹಂತಕ್ಕೆ ತಲುಪಿಲ್ಲ. ಹೇಮಾವತಿ ನೀರು ಹರಿಯುವ ಮೊದಲು 800–1000 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು 400–450 ಅಡಿಗೆ ಸಿಗುತ್ತಿದೆ.
 
ಮಿತಬಳಕೆಯ  ಯೋಜನೆ
ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ  ಶಿಗ್ಗಾಂವಿ ಮತ್ತು ಸವಣೂರು ತಾಲ್ಲೂಕಿನಲ್ಲಿ ಕೃಷಿಗೆ ಹನಿ ಮತ್ತು ತುಂತುರು ನೀರಾವರಿ ಯೋಜನೆ ಅನುಷ್ಠಾನ ಮಾಡಿ ನೀರು ಉಳಿಸುವ ಯೋಜನೆ ಜಾರಿಗೆ ತಂದಿದ್ದಾರೆ.  ರಾಜ್ಯ ಸರ್ಕಾರದ ₹300 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗಿದೆ.

ಶಿಗ್ಗಾಂವಿ ಮತ್ತು ಸವಣೂರು ತಾಲ್ಲೂಕುಗಳ 26 ಸಾವಿರ ಎಕರೆ ಭೂಮಿಯಲ್ಲಿ ನೀರು ಹಾಯಿಸುವ ಮಾದರಿ ಅಳವಡಿಸಿದ್ದರೆ 2.26 ಟಿ.ಎಂ.ಸಿ ಅಡಿ ನೀರು ಬೇಕಾಗುತ್ತಿತ್ತು. ಹನಿ ಮತ್ತು ತುಂತುರು ನೀರಾವರಿ ಯೋಜನೆ ಅಳವಡಿಸಿದ್ದರಿಂದ 0.9 ಟಿ.ಎಂ.ಸಿ ಅಡಿ ನೀರು ಸಾಕಾಗಿದೆ. ಈ ನೀರನ್ನೇ ಬಳಸಿಕೊಂಡು 66 ಕೆರೆಗಳನ್ನು ತುಂಬಿಸುವ ಯೋಜನೆಯೂ ಅನುಷ್ಠಾನದ ವಿವಿಧ ಹಂತದಲ್ಲಿದೆ.

ಸೆಪ್ಟೆಂಬರ್‌ವರೆಗೆ ಮಾತ್ರ ಹರಿಯುವ ವರದಾ ನದಿಯ ನೀರನ್ನು ಬಳಸಿ ಯೋಜನೆ ರೂಪಿಸಲಾಗಿದೆ. 800 ಕಿ.ಮೀ. ಉದ್ದ ಪೈಪ್‌, 114 ಪಂಪ್‌ಹೌಸ್‌ಗಳನ್ನು ಈ ಯೋಜನೆಗೆ ಬಳಕೆ ಮಾಡಲಾಗುತ್ತಿದೆ.
 
ಅರೆ ನೀರಾವರಿ ಬೆಳೆಗಳಾದ ಶೇಂಗಾ, ಹತ್ತಿ, ಮೆಣಸಿನಕಾಯಿ, ಜೋಳ, ಸೂರ್ಯಕಾಂತಿಯಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಶೇ 50ರಷ್ಟು ಇಳುವರಿ ಹೆಚ್ಚಾಗಿದೆ. 700 ಅಡಿಗಳ ಆಳಕ್ಕೆ ಅಂತರ್ಜಲ ಇಳಿದಿತ್ತು. ಕೆರೆ ತುಂಬಿಸಿದ್ದರಿಂದಾಗಿ ಬಹುತೇಕ ಪ್ರದೇಶಗಳಲ್ಲಿ 350–400 ಅಡಿಗೆ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅಂತರ್ಜಲ ಮರುಪೂರಣವಾಗಿದೆ ಎಂದು ಹೇಳುತ್ತಾರೆ ಬೊಮ್ಮಾಯಿ.
 
ಮಳೆ ನೀರು ಸಂಗ್ರಹ ಯಶಸ್ವಿ
ಭೋರ್ಗರೆವ ಮಳೆಗೆ ಬೆಂಗಳೂರಿನ ಕೆಲ ಪ್ರದೇಶಗಳು ಮುುಳುಗುವುದು ಸರ್ವೇಸಾಮಾನ್ಯ. ಆದರೆ, ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಒಮ್ಮೆ ಮಾತ್ರ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿತ್ತು.

ಉಳಿದಂತೆ ಆಗಸದಿಂದ ಸುರಿವ ನೀರೆಲ್ಲಾ ಇಂಗಿ ಅಂತರ್ಜಲ ಸೇರಿದೆ. ಕ್ಷೇತ್ರದಾದ್ಯಂತ ಪ್ರಮುಖ ರಸ್ತೆಗಳ ಅಂಚಿನ 400 ಕಡೆಗಳಲ್ಲಿ ಮಳೆನೀರು ಕೊಯ್ಲು ಯೋಜನೆ ಅಳವಡಿಸಿದ್ದೇ ಕಾರಣ ಎನ್ನುತ್ತಾರೆ ಕ್ಷೇತ್ರದ ಶಾಸಕ ಬಿ.ಎನ್‌. ವಿಜಯಕುಮಾರ್.

ಭಾರಿ ಮಳೆ ಬಿದ್ದಾಗ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವಿಜಯಕಾಲೇಜು ಆವರಣದಲ್ಲಿ ಸಂಗ್ರಹವಾಗುತ್ತಿದ್ದ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ಅಡ್ಡಿ ಮಾಡುತ್ತಿತ್ತು. ನಾಲ್ಕು ಕಡೆ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿದ್ದರಿಂದಾಗಿ ಈ ಸಮಸ್ಯೆ ತಪ್ಪಿದೆ. ಅಲ್ಲದೆ, ಮಳೆ ನೀರು ಸಂಗ್ರಹಿಸಲು ಟ್ಯಾಂಕ್‌ ನಿರ್ಮಿಸಿದ್ದು, ಅದು ಬಳಕೆಗೆ ಸಿಗುತ್ತಿದೆ.

ಇದಲ್ಲದೆ ಎನ್‌ಎಂಕೆಆರ್‌ವಿ ಕಾಲೇಜು, ಆರ್‌.ವಿ. ಕಾಲೇಜು, ಕ್ಷೇತ್ರ ವ್ಯಾಪ್ತಿಯ ಉದ್ಯಾನ, ಸರ್ಕಾರಿ ಕಚೇರಿಗಳಲ್ಲಿ  ಮಳೆ ನೀರು  ಸಂಗ್ರಹ ಪದ್ಧತಿ ಅಳವಡಿಸಲಾಗಿದೆ.

ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಸಂಗ್ರಹವಾಗುವ ನೀರು ಹರಿದು ಚರಂಡಿ ಅಥವಾ ಮಳೆ ನೀರು ಕಾಲುವೆಗೆ ಸೇರುವ ಜಾಗದ ಉದ್ದಕ್ಕೂ ಮೂರು ಅಡಿ ಅಗಲ ಹಾಗೂ 30 ಅಡಿಗಳಿಂದ 40 ಅಡಿಗಳ ಆಳಕ್ಕೆ ಇಂಗುಗುಂಡಿ ನಿರ್ಮಿಸಲಾಗಿದೆ. ಇದರಿಂದ ರಸ್ತೆಯಲ್ಲಿ ನೀರು ನಿಲ್ಲುವುದು ತಪ್ಪಿದೆ.
 
ಈ ಕ್ರಮಗಳಿಂದಾಗಿ ಇಡೀ ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಗಮನಾರ್ಹ ಏರಿಕೆ ಕಂಡಿದೆ. 800–1000 ಅಡಿ ಆಳಕ್ಕೆ ಇಳಿಸಿದರೂ ನೀರು ಸಿಗದ ಪ್ರದೇಶಗಳಲ್ಲೀಗ 430–450 ಅಡಿಯ ಆಳದಲ್ಲಿ ನೀರು ಲಭ್ಯವಾಗುವ ಸಿಗುವ ಸ್ಥಿತಿ ಒದಗಿದೆ ಎಂದು ಅವರು ವಿವರಿಸುತ್ತಾರೆ.
ನಿರ್ವಹಣೆ: ವೈ.ಗ ಜಗದೀಶ
 
ಅಳಂದದಲ್ಲಿ ಅರಿವಿನ ಹರಿವು
ಕಲಬುರ್ಗಿ ಜಿಲ್ಲೆ ಅಳಂದ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲರು ಜಲಚಳವಳಿಗೆ ನಾಂದಿ ಹಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಜನರು, ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ನೀರಿನ ಸದ್ಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ. 
 
ಮಹಾರಾಷ್ಟ್ರ ಧುಳೆ ಜಿಲ್ಲೆಯ ಶಿರಪುರ ತಾಲ್ಲೂಕಿನಲ್ಲಿ ನದಿ, ಹಳ್ಳಗಳ ಪುನರುಜ್ಜೀವನ ಮಾಡಿದ ವೈಜ್ಞಾನಿಕ ಪದ್ಧತಿ ಈಗ ಶಿರಪುರ ಯೋಜನೆ ಎಂದೇ ಪ್ರಸಿದ್ಧಿಯಾಗಿದೆ. ಹಳ್ಳಗಳ ಉದ್ದಕ್ಕೂ ಕಡಿಮೆ ದುಡ್ಡಿನಲ್ಲಿ ಚೆಕ್‌ಡ್ಯಾಂ ನಿರ್ಮಿಸಿ ಪರಿಣಾಮಕಾರಿಯಾಗಿ ಅಂತರ್ಜಲ ಹೆಚ್ಚಿಸುವ ಕಾಯಕ ಮಾಡಲಾಗಿದೆ. 
 
ಅರ್ಧ ಕಿ.ಮೀ.ಗೆ ಒಂದರಂತೆ ಚೆಕ್‌ಡ್ಯಾಂ, ಬಾಂದಾರ ನಿರ್ಮಿಸಿದ್ದರಿಂದ ಹಳ್ಳ, ಕಿರುನದಿಗಳ ಅಕ್ಕಪಕ್ಕ ಜಲಮರುಪೂರಣವಾಗಿದೆ. ಹಳ್ಳದ ಮಧ್ಯದಲ್ಲಿ ಆಳದ ಗುಂಡಿ ತೋಡಿ, ಮಳೆ ನೀರು ಕೊಯ್ಲು ಮಾದರಿಯಲ್ಲಿ ಇಂಗು ಗುಂಡಿ ನಿರ್ಮಿಸಲಾಗಿದೆ. ಹಳ್ಳದ ತಳದಲ್ಲಿ ಕಠಿಣ ಶಿಲಾಪದರ ಹರಡಿಕೊಂಡಿದ್ದ ಪ್ರದೇಶದಲ್ಲಿ ಕೊಳವೆಬಾವಿ ಕೊರೆದು, ನೀರು ಭೂಮಿ ಆಳಕ್ಕೆ ಇಳಿಯುವ  ವ್ಯವಸ್ಥೆ ಮಾಡಲಾಗಿದೆ.
 
ಅಳಂದ ಕ್ಷೇತ್ರದಲ್ಲಿ ಇಂತಹದೆ ಮಾದರಿ ಯೋಜನೆ ಕೈಗೊಳ್ಳಲು ಈ ವರ್ಷದ ಬಜೆಟ್‌ನಲ್ಲಿ ವಿಶೇಷ ಯೋಜನೆ ಘೋಷಿಸಲಾಗಿದ್ದು, ₹80 ಕೋಟಿ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಜನಾರಣ್ಯ ಬೆಳೆಸಲು, ಈ ವರ್ಷದ ಮಳೆಗಾಲದಲ್ಲಿ 5 ಸಾವಿರ ಗಿಡ ನೆಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸುತ್ತಾರೆ ಬಿ.ಆರ್‌. ಪಾಟೀಲ.
 
ಕೆರೆ ತುಂಬಿಸುವ ಕಾಯಕ
ಕಾವೇರಿ ಜಲಾಶಯದಿಂದ ಅಳಿದುಳಿವ ನೀರನ್ನು ಚನ್ನಪಟ್ಟಣ ತಾಲ್ಲೂಕಿನ ಕೆರೆಗಳಿಗೆ ಹರಿಸಿ ಕ್ಷೇತ್ರವನ್ನು ಹಸಿರಿನತ್ತ ಕೊಂಡೊಯ್ದ ಕಾಯಕವನ್ನು ಶಾಸಕ ಸಿ.ಪಿ. ಯೋಗೇಶ್ವರ್‌ ಮಾಡಿದ್ದಾರೆ. ಉಳಿದ ಜನಪ್ರತಿನಿಧಿಗಳು ಈ ಯೋಜನೆ ವೀಕ್ಷಿಸಲು ತಾಲ್ಲೂಕಿಗೆ ಭೇಟಿ ನೀಡುವಷ್ಟು  ಬದಲಾವಣೆ ಇಲ್ಲಿ ನಡೆದಿದೆ.

ಕಾವೇರಿ ಉಪನದಿ ಶಿಂಷಾದಿಂದ ಇಗ್ಗಲೂರು ಬ್ಯಾರೇಜ್‌ಗೆ  ನೀರು ಹಾಯುತ್ತಿತ್ತು. ಅದನ್ನು  ಕಣ್ವ ಜಲಾಶಯದವರೆಗೆ ಹರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.  ರಾಜ್ಯ ಸರ್ಕಾರದ ₹300 ಕೋಟಿ ಬಳಸಿಕೊಂಡು, ಕೆರೆ ತುಂಬಿಸುವ ಯೋಜನೆ ರೂಪಿಸಲಾಯಿತು.

ನೀರು ಹರಿಯುವ ದಾರಿಯ ಇಕ್ಕೆಲಗಳಲ್ಲಿ ಸಿಗುವ ಎಲ್ಲಾ ಕೆರೆಗಳಿಗೆ ಉಪ ಕೊಳವೆಗಳ ಮೂಲಕ ನೀರು ಹರಿಸಲಾಯಿತು. ಕೆರೆಗೆ ನೀರು ತುಂಬಿಸುವ ಮೊದಲು ಹೂಳು ತೆಗೆದು, ಮೂರು ಅಡಿ ಅಗಲ, 50 ಅಡಿಯಿಂದ 80 ಅಡಿ ಆಳದ ಇಂಗುಗುಂಡಿಯಲ್ಲಿ ನೀರಿಂಗಿಸುವ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಇದಲ್ಲದೇ ಹೂಳು ತುಂಬಿ, ಒತ್ತುವರಿಯಿಂದ ಕಾಣೆಯಾಗಿದ್ದ ಕೆರೆಗಳನ್ನು ಪುನರುಜ್ಜೀವನ ಮಾಡಲಾಯಿತು. ತಾಲ್ಲೂಕಿಗೊಂದು ಕೆರೆ ಅಭಿವೃದ್ಧಿ ಯೋಜನೆ ಬದಲು ಊರಿಗೊಂದು ಕೆರೆ ನಿರ್ಮಿಸುವ ಯೋಜನೆ ರೂಪಿಸಲಾಯಿತು.
 
80 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಸರ್ಕಾರಿ, ಖರಾಬು ಭೂಮಿಯನ್ನು ಬಳಸಿಕೊಂಡು, ಗೋಮಾಳ ಒತ್ತುವರಿ ತೆರವು ಮಾಡಿ ಹೊಸದಾಗಿ 30 ಕೆರೆ ನಿರ್ಮಾಣ ಮಾಡಲಾಗಿದೆ. ಸತತವಾಗಿ ಕೆರೆಗೆ ನೀರು ತುಂಬಿಸಿದ್ದರಿಂದ ತಾಲ್ಲೂಕಿನ ಶೇ 75ರಷ್ಟು ಭಾಗದಲ್ಲಿ 100 ಅಡಿಯಿಂದ200 ಅಡಿಯ ಮಟ್ಟಕ್ಕೆ ಅಂತರ್ಜಲ ಏರಿಕೆಯಾಗಿದೆ.
 
ಜಲಮರುಪೂರಣ ನಡೆದಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಕುಡಿಯುವ ನೀರಿಗೆ ಸಮಸ್ಯೆ ಇಲ್ಲವಾಗಿದೆ. ಕಣ್ವ ಜಲಾಶಯದಿಂದ ಮುಂದೆ ನದಿಯಲ್ಲಿ ಅಕ್ರಮ ಮರಳುಗಣಿಗಾರಿಕೆ, ಒತ್ತುವರಿಯಿಂದಾಗಿ ನೀರು ಹರಿಯುವ ಪರಿಸ್ಥಿತಿ ಇರಲಿಲ್ಲ. ಇವೆಲ್ಲವನ್ನೂ ತೆರವುಗೊಳಿಸಿ 25 ಕಿ.ಮೀ ವರೆಗೆ ನದಿ ಪುನರುಜ್ಜೀವನ ಕೆಲಸವನ್ನು ಮಾಡಲಾಗಿದೆ ಎನ್ನುತ್ತಾರೆ ಯೋಗೇಶ್ವರ್‌.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.