ADVERTISEMENT

ಭಾಷೆ ಯಾಕೆ?

ಓ.ಎಲ್.ನಾಗಭೂಷಣ ಸ್ವಾಮಿ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST
ಭಾಷೆ ಯಾಕೆ?
ಭಾಷೆ ಯಾಕೆ?   

ಭಾಷೆ ನಿಜವಾಗಲೂ ಯಾಕೆ ಇದೆ? ಇದೆಂಥ ಪ್ರಶ್ನೆ, ಉತ್ತರ ಎಲ್ಲರಿಗೂ ಗೊತ್ತು- ಉಪಯುಕ್ತವಾದ ಮಾಹಿತಿಯನ್ನು ತಿಳಿಸುವುದಕ್ಕೆ, ತಿಳಿಯುವುದಕ್ಕೆ ಅನ್ನುವ ಉತ್ತರ ಸಿದ್ಧವಾಗಿರುತ್ತದೆ. ಜಾನ್ ಲೋಕ್ ಎಂಬ ತತ್ವಜ್ಞ 1690ರಲ್ಲಿ ಹೇಳಿದ- ಮನುಷ್ಯರು ತಮ್ಮ ಸಂಶೋಧನೆ, ವಿಚಾರ, ಜ್ಞಾನಗಳನ್ನು ಭಾಷೆಯ ವಾಹಕದ ಮೂಲಕ ಪರಸ್ಪರ ತಿಳಿಯಪಡಿಸುತ್ತಾರೆ.

ಆದರೆ, ಭಾಷೆ ಮಾಹಿತಿಯನ್ನೋ ತಿಳಿವಳಿಕೆಯನ್ನೋ ಒಬ್ಬರಿಂದ ಒಬ್ಬರಿಗೆ ಸಾಗಿಸುವ ಬದಲಾಗಿ ಸುಮ್ಮನೆ ಹರಟೆಯಾಗಿರುವ ಸಂದರ್ಭಗಳೇ ಹೆಚ್ಚು. ಮಾಹಿತಿಯನ್ನು ತಿಳಿಸಲಾಗುತ್ತಿದೆ ಅನ್ನುವಾಗಲೂ ಆ ಮಾಹಿತಿ ನಂಬಬಹುದಾದದ್ದು ಅನ್ನುವ ಗ್ಯಾರಂಟಿಯೂ ಇಲ್ಲ. ನುಡಿಯುತ್ತಿರುವವನು ಸುಳ್ಳು ಹೇಳುತ್ತಿರಬಹುದು, ಅಥವ ಕೇಳುವವರು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು.

ಮೇಲು ನೋಟಕ್ಕೆ ಸಮರ್ಪಕ ಅನ್ನಿಸುವಂಥ ನೂರಾರು ವಿವರಣೆಗಳಿವೆ- ಮನುಷ್ಯ ತನ್ನ ಆಲೋಚನೆಗಳನ್ನು ಸಂವಹಿಸುವುದಕ್ಕಾಗಿ ಕೇವಲ ನೋಟ ಅಥವ ಅಂಗಭಂಗಿ ಸಾಲದು ಅನ್ನಿಸಿದಾಗ ಭಾಷೆಯನ್ನು ಕಂಡುಹಿಡಿದ ಎಂದು ಮ್ಯಾಕ್ಸ್‌ಮುಲ್ಲರ್ ಹೇಳಿದ್ದು ಇಂಥ ಒಂದು ವಿವರಣೆ. ಇಲ್ಲಿ `ಆಲೋಚನೆ~ ಎಂದರೇನು ಅನ್ನುವುದು ಅಸ್ಪಷ್ಟ. ಭಾಷೆ ಇಲ್ಲದೆ ಆಲೋಚನೆ ಇರಲು ಸಾಧ್ಯವೇ? ಮೊದಲು ಆಲೋಚನೆ ಆಮೇಲೆ ಭಾಷೆ ಅನ್ನುವುದು ಸರಿಯೇ ಅನ್ನುವ ತಕರಾರುಗಳು ಏಳುತ್ತವೆ.

ಭಾಷೆ ಯಾಕೆ ಅನ್ನುವುದರಲ್ಲಿ ಎರಡು ಪ್ರಶ್ನೆಗಳಿವೆ- ಭಾಷೆ ಯಾವ ಉದ್ದೇಶಕ್ಕಾಗಿ ವಿಕಾಸ ಹೊಂದಿತು ಅನ್ನುವುದೊಂದು, ಭಾಷೆ ಯಾವ ಉದ್ದೇಶಗಳಿಗಾಗಿ ಈಗ ಬಳಕೆಯಾಗುತ್ತಿದೆ ಅನ್ನುವುದು ಇನ್ನೊಂದು. ಇವೆರಡೂ ಪ್ರಶ್ನೆಗಳಿಗೆ ದೊರೆಯುವ ಉತ್ತರ ಬೇರೆ ಬೇರೆಯೇ. ರಾಜಕಾರಣಿಯು `ಭಾಷೆ ಇರುವುದೇ ವಾಗ್ದಾನ ಮಾಡಲಿಕ್ಕೆ, ಭಾಷಣ ಮಾಡಲಿಕ್ಕೆ~ ಅನ್ನಬಹುದು; ವ್ಯಾಪಾರಿ `ಭಾಷೆ ಇರುವುದೇ ಗಿರಾಕಿಯನ್ನು ಸೆಳೆದು ಮನವೊಲಿಸಿ ಲಾಭಮಾಡಿಕೊಳ್ಳುವುದಕ್ಕೆ~ ಅನ್ನಬಹುದು. ಆದರೆ ಇವು ಯಾವುವೂ ಭಾಷೆಯ ಪ್ರಥಮ ಉದ್ದೇಶಗಳಾಗಿರಲಾರವು.

ಇವತ್ತು ಭಾಷೆಯನ್ನು ಎಷ್ಟೊಂದೆಲ್ಲ ಉದ್ದೇಶಗಳಿಗೆ ಬಳಸುತ್ತೇವೆಂದರೆ ಭಾಷೆಯ ಮೂಲ ಉದ್ದೇಶವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ.

ಸಾಮಾನ್ಯವಾಗಿ ಭಾಷೆಗೆ ಆರು ಉಪಯೋಗಗಳಿವೆ ಅನ್ನುತ್ತಾರೆ:
1. ಮಾಹಿತಿ ಒದಗಿಸುವುದು: `ಧಾರವಾಡಕ್ಕೆ ಹೊರಡುವ ರೈಲು ಗಾಡಿ ಎರಡನೆಯ ಪ್ಲಾಟ್‌ಫಾರ್ಮಿಗೆ ಬಂದಿದೆ~.
2. ಆಜ್ಞೆ ಮಾಡುವುದು, `ಮಾತಾಡಬೇಡ!~
3. ಭಾವನೆಗಳನ್ನು ಹೇಳುವುದು: `ಇದು ಬರಿಯ ಬೆಳಗಲ್ಲ~.
4. ಸಾಮಾಜಿಕವಾದ ಮಾತುಕತೆ: `ಬನ್ನಿ, ಈಗ ಬಂದಿರಾ, ಚೆನ್ನಾಗಿದ್ದೀರಾ~.
5. ಪದಕ್ರೀಡೆ ಮತ್ತು ಕಾವ್ಯ: `ಕನ್ನಡವ ಕನ್ನಡಿಸುತಿಹುದು~.
6. ಭಾಷೆಯ ಬಗ್ಗೆಯೇ ಮಾತಾಡುವುದು: `ಕನ್ನಡದಲ್ಲಿ ಕ್ರಿಯಾಪದವೇ ಕರ್ತೃವನ್ನೂ ಸೂಚಿಸುತ್ತದೆ~.

ಇವುಗಳ ಜೊತೆಗೆ ಇನ್ನೂ ಬೇಕಾದಷ್ಟು ಸೇರಿಸಬಹುದು, ಭಾಷೆ ಇರುವುದೇ ಪ್ರಶ್ನೆ ಕೇಳುವುದಕ್ಕೆ; ಮೈಮನಸ್ಸಿನಲ್ಲಿ ಹುಟ್ಟುವ ಚೈತನ್ಯವನ್ನು ಹೊರಹಾಕುವುದಕ್ಕೆ; ಸಂಗಾತಿಯನ್ನು ಸೆಳೆಯುವುದಕ್ಕೆ, ಸಮರ್ಥನೆ ಮಾಡಿಕೊಳ್ಳುವುದಕ್ಕೆ, ಆರೋಪಿಸುವುದಕ್ಕೆ, ಸುಳ್ಳು ಹೇಳುವುದಕ್ಕೆ ಇತ್ಯಾದಿ.

ಅಂದರೆ ಭಾಷೆಯ ಮುಖ್ಯ ಪಾತ್ರವೇನು ಅನ್ನುವುದು ಅಸ್ಪಷ್ಟ. ಆದರೆ, ಭಾಷೆ ಯಾಕೆ ವಿಕಾಸ ಹೊಂದಿತು ಅನ್ನುವುದನ್ನು ತಿಳಿಯುವುದಕ್ಕೆ ಭಾಷೆ ಮನುಷ್ಯರಿಗೆ ಯಾಕೆ ಬೇಕಾಯಿತು ಅನ್ನುವುದನ್ನು ತಿಳಿಯುವುದು ಮುಖ್ಯ. ನಮಗೆ ಗೊತ್ತಿರುವ ಇಂದಿನ ಭಾಷೆ ಯಾವ ಕೆಲಸಗಳನ್ನು ಸಮರ್ಥವಾಗಿ ಮಾಡಬಲ್ಲದು, ಯಾವುದನ್ನು ಮಾಡಲಾರದು ಅನ್ನುವುದನ್ನು ಅದು ಗೊತ್ತಾಗಿಸಬಹುದು ಅನ್ನುವುದು ಒಂದು ದಾರಿ.

`ಇವರು ನಮ್ಮ ಬೀಗರ ತಮ್ಮ~ ಅನ್ನುವಂಥ ಸರಳ ಮಾಹಿತಿಯ ತುಣುಕುಗಳನ್ನು ಭಾಷೆ ತಕ್ಕಮಟ್ಟಿಗೆ ಸಮರ್ಪಕವಾಗಿ ರವಾನಿಸಬಲ್ಲದು. ಇಂಥ ಮಾಹಿತಿ ರವಾನೆಯೇ ಭಾಷೆಯ ತಿರುಳು ಅನ್ನುವ ಅಭಿಪ್ರಾಯ ಬೆಳೆದುಬಿಡುತ್ತದೆ. ಭಾಷೆಯ ಈ ಸಾಮರ್ಥ್ಯ ಕೂಡ ಯಾವ ಬಗೆಯ ಮಾಹಿತಿ ಅನ್ನುವುದನ್ನು ಅವಲಂಬಿಸಿರುತ್ತದೆ. ಹಗ್ಗ ಗಂಟು ಹಾಕುವುದು ಹೇಗೆ, ನೀವು ಕೇಳಿದ ಜಾಗಕ್ಕೆ ಇಲ್ಲಿಂದ ಹೇಗೆ ಹೋಗಬೇಕು, ದೇಹದಲ್ಲಿ ರಕ್ತಪರಿಚಲನೆ ಹೇಗೆ ನಡೆಯುತ್ತದೆ ಅನ್ನುವಂಥ `ದೇಶಸ್ಥ~ ವಿಚಾರಗಳನ್ನು ಸಮರ್ಪಕವಾಗಿ ತಿಳಿಸುವಲ್ಲಿ ಭಾಷೆ ತೀರ ವೀಕು.

ಲೇಖಕ ಹಿಲರಿ ಬೆಲಕ್‌ನ ಮಾತು ಇದು- `ಹಗ್ಗಕ್ಕೆ ಗಂಟು ಹಾಕುವುದು ಹೇಗೆ ಅನ್ನುವುದನ್ನು ಚಿತ್ರದ, ಸನ್ನೆಗಳ ನೆರವಿಲ್ಲದೆ ನೀವು ಸರಿಯಾಗಿ ವಿವರಿಸಬಲ್ಲಿರಾದರೆ ನಿಜವಾಗಿ ನೀವು ಭಾಷೆಯ ಒಡೆಯರು~. ತಪ್ಪು, ನೀವು ಭಾಷೆಯ ಒಡೆಯರೇ ಆಗಿದ್ದರೂ ಹಗ್ಗ ಗಂಟು ಹಾಕುವುದು ಹೇಗೆ ಅನ್ನುವುದನ್ನು ವಿವರಿಸಲಾರಿರಿ ಅನ್ನಬೇಕಿತ್ತು ಅವನು!
ಸಂವೇದನೆ, ಭಾವನೆಗಳ ಬಗ್ಗೆ ಹೇಳುವಲ್ಲಿ ಕೂಡ ಭಾಷೆ ತೀರ ದುರ್ಬಲ. ನೋವಾದಾಗ ಚೀರುವುದು ಅಥವ ಅಳುವುದು ಬಿಟ್ಟು ಭಾಷೆಯಲ್ಲಿ ತಕ್ಕ ಪದಗಳನ್ನು ಹುಡುಕಲು ಆಗುತ್ತದೆಯೇ?

`ಹುಸಿಯ ನುಡಿಯಬೇಡ~ ಎಂದು ಎಲ್ಲ ಭಾಷೆಗಳು ಧರ್ಮಗಳು ಹೇಳುತ್ತಿದ್ದರೂ ದಿನ ನಿತ್ಯದ ಬದುಕಿನಲ್ಲಿ ಸುಳ್ಳುಗಳೇ ಹೆಚ್ಚು, ಸತ್ಯವನ್ನು ಬಳಸುವುದು ತೀರ ಮಿತವಾಗಿ. ದಿನ ನಿತ್ಯ ನಾವು ನೀವು ಹೇಳುವಂಥ ಸುಳ್ಳುಗಳನ್ನೆಲ್ಲ ಪುಸ್ತಕರೂಪದಲ್ಲಿ ಸಂಗ್ರಹಿಸಿಯೂ ಇದ್ದಾರೆ (ದಿ ಪೆಂಗ್ವಿನ್ ಬುಕ್ ಆಫ್ ಲೈಸ್, 1994)! ಭಾಷೆ ಬಳಸುವ ಮನುಷ್ಯ ಮಾತ್ರ ಸುಳ್ಳು ಹೇಳಬಹುದು. ಆಹಾರ, ಅಪಾಯ, ಇದು ನನ್ನ ಸ್ಥಳ ಅನ್ನುವ ಹಕ್ಕು ಸ್ಥಾಪನೆ, ಸಂಗಾತಿಯ ಬಯಕೆ ಇಂಥ ದಿನ ನಿತ್ಯದ ಘಟನೆಗಳ ಬಗ್ಗೆ ಮಾತ್ರ ಸೀಮಿತ ಮಾಹಿತಿ ಸಂವಹನ ಮಾಡಬಲ್ಲ ಪ್ರಾಣಿಗಳು ಸುಳ್ಳು ಹೇಳಲಾರವು.

ಭಾಷೆಯ ಕಲಿಕೆಯ ಅಂತಿಮ ಉದ್ದೇಶವೇ ಸುಳ್ಳಿನ ಕಲೆಯನ್ನು ಕರಗತ ಮಾಡಿಕೊಳ್ಳುವುದು, ಅಂದರೆ ಯಾವ ಸಾಕ್ಷಿ, ಆಧಾರ ಇರದಿದ್ದರೂ ಇಲ್ಲದ್ದನ್ನು, ಕಾಲ್ಪನಿಕವಾದದ್ದನ್ನು ಕೇಳುವವರು ನಂಬುವಂತೆ ಹೇಳುವ ಸಾಮರ್ಥ್ಯವನ್ನು ಕರಗತ ಮಾಡಿಕೊಳ್ಳುವುದೇ ಭಾಷೆಯ ಕಲಿಕೆಯ ಉದ್ದೇಶ ಅನ್ನೋಣವೇ!

ಸುಳ್ಳಿನ ಕಲೆ ಅಮೂಲ್ಯ. ಸುಳ್ಳಿನ ತಿರುಳು ಸ್ಥಾನಾಂತರ ಮತ್ತು ಕಾಲಾಂತರ, ಅಂದರೆ ಕಣ್ಣೆದುರು ಇಲ್ಲದ ಅಥವ ಎಂದೂ ಎಲ್ಲೂ ಇರದ ಸಂಗತಿಗಳ ಬಗ್ಗೆ ಹೇಳುವುದು. ಇದು ಭಾಷೆಯ ಮುಖ್ಯ ಲಕ್ಷಣ. ನಿನ್ನೆ ಏನಾಯಿತೆಂದು ಇಂದು ಬೆಕ್ಕು ತಿಳಿಯಲಾರದು, ನಾಳೆ ಆಗಬಹುದಾದ ಅಪಾಯವನ್ನು ಇಂದೇ ತಿಳಿದು ಎಚ್ಚರಿಸಲೂ ಆರದು. ಅಭಾವಸೂಚಕ ವಾಕ್ಯಗಳನ್ನು ಭಾಷೆಯಲ್ಲಿ ಮಾತ್ರ ರಚಿಸಬಹುದು- ಕಾಫಿ ಮಾಡುವುದಕ್ಕೆ ಆಗುವುದಿಲ್ಲ, ಹಾಲು ಇಲ್ಲ, ಇನ್ನೂ ಬಂದಿಲ್ಲ. ಇಂಥ ರಚನೆಗಳನ್ನು ಭಾಷೆಯಲ್ಲಿ ಮನುಷ್ಯ ಮಾತ್ರ ರಚಿಸಬಲ್ಲ.

ಎಲ್ಲ ಮನುಷ್ಯ ಸಂಸ್ಕೃತಿಗಳಲ್ಲೂ ಕಥೆ ಹೇಳುವುದಕ್ಕೆ ಮುಖ್ಯ ಸ್ಥಾನವಿದೆ. ಬಹುಪಾಲು ಸಾಹಿತ್ಯ ಇರುವುದೇ ನಡೆಯದ, ನಡೆಯಲಾಗದ ಸಂಗತಿಗಳನ್ನು ಸಂಭಾವ್ಯ ಅನ್ನುವಂತೆ ನಿರೂಪಿಸುವ ಮೂಲಕ. ಕೋತಿಗಳು ಸಮುದ್ರಕ್ಕೆ ಸೇತುವೆ ಕಟ್ಟಲಿ ಕಟ್ಟದಿರಲಿ, ಮನುಷ್ಯ ಶಿವನ ಗಂಟಲನ್ನು ಮೆಟ್ಟಲಿ ಮೆಟ್ಟದಿರಲಿ, ಕವಿಗಳು ಮಾತ್ರ ಕೋತಿಗಳ ಕೈಯಲ್ಲಿ ಸೇತುವೆ ಕಟ್ಟಿಸಿದರು, ಶಿವ ಮನುಷ್ಯನ ಕಾಲಡಿಯಲ್ಲಿ ಸಿಕ್ಕು ಒದ್ದಾಡುವಂತೆ ಮಾಡಿದರು, ಏನು ಹಿರಿಮೆಯೋ ಈ ಕವಿಗಳದು? ಅನ್ನುವ ಉದ್ಗಾರ ಜ್ಞಾಪಿಸಿಕೊಳ್ಳಿ.

ಸುಮ್ಮನೆ ಮಾತಾಡುವುದು ಜನರ ನಡುವೆ ಸಂಪರ್ಕ ಉಳಿಯುವುದಕ್ಕೆ, ಬೆಳೆಯುವುದಕ್ಕೆ ಅಗತ್ಯ. ಸುಮ್ಮನೆ ಆಡುವ ಮಾತು ಸಮಾಜವೆಂಬ ಬಂಡಿಯ ಗಾಲಿಗೆ ಅಗತ್ಯವಾದ ಕೀಲೆಣ್ಣೆ. ಇಲ್ಲಿ ವಿನಿಮಯವಾಗುವ ಮಾಹಿತಿ ಏನೂ ಇರುವುದಿಲ್ಲ. `ಎಷ್ಟು ಬಿಸಿಲು ಈ ವರ್ಷ~, `ಮನೆಯಲ್ಲಿ ಎಲ್ಲರೂ ಆರಾಮವೇ~ ಇಂಥ ಮಾತುಗಳಿಗೆ ಮುಖಬೆಲೆ ಇಲ್ಲ, ಮನುಷ್ಯ ಸಂಪರ್ಕದ ಅಗತ್ಯವಾಗಿ ಮಾತ್ರ ಇರುತ್ತವೆ.

ಕನಿಷ್ಠ ಮಾಹಿತಿ ಇದ್ದು, ಗರಿಷ್ಠ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯ. ಗೆಳೆಯರ ನಡುವೆ ನಡೆವ ಮಾತಿನಲ್ಲಿ ಪುನರುಕ್ತಿಗಳು, ತಾನೇ ಹೇಳಿದ ಮಾತಿನದು, ಗೆಳೆಯ ಹೇಳಿದ ಮಾತಿನದು, ಅರ್ಥವಿಲ್ಲದ ಪದಗಳು, ತಪ್ಪು ಅರ್ಥ ಕೊಡುವ ಪದಗಳೂ ಎಲ್ಲವೂ ಸಂಪರ್ಕವೃದ್ಧಿಗೆ ಸಹಾಯಕವೇ. ಸಂಪರ್ಕ ಸ್ಥಾಪನೆ, ಸಂಬಂಧವೃದ್ಧಿ ಇತ್ಯಾದಿ ಕಾರಣಗಳಿಗೆ ಆಡುವ ಮಾತು ತೀರ ವ್ಯಾಪಕ ಮತ್ತು ಮುಖ್ಯ. ಭಾಷೆಯ ಮುಖ್ಯ ಕಾರ್ಯಗಳಲ್ಲಿ ಅದೂ ಒಂದು ಆಗಿರಬಹುದು.

ಅಧಿಕಾರಕ್ಕಾಗಿ ನಡೆವ ಹೋರಾಟಗಳಲ್ಲಿ ಭಾಷೆ ಪ್ರಬಲವಾದ ಉಪಕರಣ. ಖಾಸಗಿ ಬದುಕಿನಲ್ಲೂ ಸಾರ್ವಜನಿಕ ಬದುಕಿನಲ್ಲೂ ಭಾಷೆಗೆ ಇರುವ ಮನವೊಲಿಕೆಯ ಗುಣದ ಬಗ್ಗೆ ಬಲು ಹಿಂದೆಯೇ ಅರಿವು ಮೂಡಿದೆ. ಜಾಹೀರಾತುಗಳು ಯಶಸ್ವಿಯಾಗುವುದೇ ಮನವೊಲಿಸುವ ಗುಣದಿಂದ. ಜಾರ್ಜ್ ಆರ‌್ವೆಲ್ ಹೇಳಿದ್ದು ಇದು- ರಾಜಕೀಯದ ಭಾಷೆ ಅಂದರೆ ಸುಳ್ಳನ್ನು ಸತ್ಯವೆಂದು ಕೇಳಿಸುವಂತೆ ಹೇಳುವ, ಕೊಲೆಯನ್ನು ಗೌರವಕ್ಕೆ ಅರ್ಹವಾದ ಕೆಲಸ ಎಂದು ನಂಬಿಸುವ, ಕಣ್ಣಿಗೆ ಕಾಣದ ಗಾಳಿಯನ್ನೂ ಬಂಡೆಯಷ್ಟು ಗಟ್ಟಿ ಎಂದು ನಂಬಿಸುವ ಭಾಷೆ.

ಭಾಷೆಯ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಾ, ತನ್ನದು ಅಂದುಕೊಂಡ ಬಿಂಬವನ್ನೇ ಇತರರಲ್ಲೂ ನಿಜವೆಂಬಂತೆ ಮೂಡಿಸಲು ಹೆಣಗುವುದು, ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು, ಇತರರನ್ನು ಪ್ರಭಾವಗೊಳಿಸುವುದು, ಬದಲಿಸುವುದು, ಈ ಕೆಲಸಗಳಿಗೆ ಭಾಷೆಯ ಬಳಕೆ ಹೆಚ್ಚು. ಇದು ಸಾಧ್ಯವಾಗುವುದಕ್ಕೆ ಸಂಪರ್ಕ, ಸಂಪರ್ಕ ಸಾಧ್ಯವಾಗುವುದಕ್ಕೆ ಮನವೊಲಿಕೆ, ಅದಕ್ಕೆ ಪೂರಕವಾಗಿ ಮಾಹಿತಿ ಈ ಕ್ರಮದಲ್ಲಿ ಭಾಷೆಯ ಬಳಕೆ ಈಗ ಹೆಚ್ಚು ಅನಿಸುತ್ತದಲ್ಲವೇ?

ಭಾಷೆ ಯಾಕೆ ಅನ್ನುವುದು ಅರ್ಥದ ಪ್ರಶ್ನೆ, ಅಹಂಕಾರದ ಪ್ರಶ್ನೆ, ಸಮಾಜದ ಪ್ರಶ್ನೆ, ಧರ್ಮದ ಪ್ರಶ್ನೆ, ಚರಿತ್ರೆಯ ಪ್ರಶ್ನೆ, ಮನಸ್ಸಿನ ಸ್ವರೂಪದ ಪ್ರಶ್ನೆ, ದೇಹ ಮತ್ತು ಮಿದುಳಿನ ರಚನೆಯ ಪ್ರಶ್ನೆಗಳನ್ನೆಲ್ಲ ಒಳಗೊಳ್ಳುವ ಅಂತರಂಗದ ಅರಿವನ್ನೂ ಬಹಿರಂಗದ ತಿಳಿವನ್ನೂ ಒಳಗೊಳ್ಳುವ ಮಹಾ ಶೋಧವೇ ಆಗಿಬಿಡುತ್ತದೆ. ಭಾಷೆ ಇರದಿದ್ದರೆ ಮನುಷ್ಯನಿಲ್ಲ, ಮನುಷ್ಯನಿರದಿದ್ದರೆ ಭಾಷೆಯೂ ಇಲ್ಲವಾದ್ದರಿಂದಲೇ ಶತಮಾನಗಳಿಂದ ನಡೆದೇ ಇರುವ ಎಲ್ಲ ಚಿಂತನೆಗಳೂ ಅಂತಿಮವಾಗಿ ಭಾಷೆಯ ಪ್ರಶ್ನೆಯನ್ನು ಕುರಿತದ್ದೇ ಅನಿಸಿಬಿಡುತ್ತದೆ.

ಚಿತ್ರ: ಡಾ. ಸಿ. ರವೀಂದ್ರನಾಥ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT