ADVERTISEMENT

ರೊಸೆಟ್ಟಾ ಕಲ್ಲಿನ ಕಥೆ

ಓ.ಎಲ್.ನಾಗಭೂಷಣ ಸ್ವಾಮಿ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST
ರೊಸೆಟ್ಟಾ ಕಲ್ಲಿನ ಕಥೆ
ರೊಸೆಟ್ಟಾ ಕಲ್ಲಿನ ಕಥೆ   

ಇದು ಶಾಸನವೊಂದರ ಕಥೆ. ಎರಡು ಭಾಷೆಗಳಲ್ಲಿ, ಮೂರು ಲಿಪಿಗಳಲ್ಲಿ ಈ ಶಾಸನ ಸೃಷ್ಟಿಯಾಗಿದ್ದು ಕ್ರಿ.ಪೂ. 196ರಲ್ಲಿ, ಚಕ್ರವರ್ತಿ ಐದನೆಯ ಟಾಲೆಮಿಯ ಕಾಲದಲ್ಲಿ. ಪತ್ತೆಯಾಗಿದ್ದು ಜುಲೈ 15, 1799ರಂದು, ನೆಪೋಲಿಯನ್‌ನ ಈಜಿಪ್ಟ್ ವಿಜಯದ ಕಾಲದಲ್ಲಿ. 

ಈ ಕಥೆಯನ್ನು ವಿಸ್ತಾರವಾಗಿ ಹೇಳುವುದಕ್ಕೆ ಮುಖ್ಯವಾದ ಒಂದು ಕಾರಣವಿದೆ. ನಾವು ಆಧುನಿಕತೆ ಅನ್ನುವುದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಅನ್ವೇಷಣೆಗಳ ಫಲ ಎಂದು ತಿಳಿದಿದ್ದೇವೆ, ನಮ್ಮ ವಿದ್ಯಾರ್ಥಿಗಳಿಗೂ ಹಾಗೇ ಹೇಳಿಕೊಡುತಿದ್ದೇವೆ.

ಆದರೆ ಆಧುನಿಕತೆಯ ವಿಕಾಸದಲ್ಲಿ ಭಾಷೆಗಳ ಅಧ್ಯಯನ, ಮಾನವಿಕ ವಿಷಯಗಳ ಸಂಶೋಧನೆಗಳು ದೊಡ್ಡ ಪ್ರಮಾಣದಲ್ಲೇ ಇವೆ, ಅವುಗಳತ್ತಲೂ ನಾವು ಗಮನಹರಿಸಬೇಕು ಅನ್ನುವುದೇ ಆ ಕಾರಣ.
 
ಡಾರ್ವಿನ್ ಹೇಳಿದ ವಿಕಾಸವಾದ, ಮನಸ್ಸಿನ ಸ್ವರೂಪದ ಬಗ್ಗೆ ಫ್ರಾಯ್ಡ ತಿಳಿಸಿದ ಸಂಗತಿಗಳು, ಜೇಮ್ಸವ್ಯಾಟ್ ಉಗಿಬಂಡಿಯನ್ನು ರೂಪಿಸಿದ್ದು, ಕೈಗಾರಿಕಾ ಕ್ರಾಂತಿ ಇವೆಲ್ಲ ಆಧುನಿಕತೆಯನ್ನು ರೂಪಿಸಿದ ಶಕ್ತಿಗಳು ಎಂದು ಪಾಠ ಒಪ್ಪಿಸುತ್ತ ಮಿಕ್ಕ ಕೆಲವು ಸಂಗತಿಗಳನ್ನು ಲೆಕ್ಕಕ್ಕೇ ಇಟ್ಟುಕೊಳ್ಳದೆ ತಪ್ಪು ಮಾಡುತಿದ್ದೇವೆ ಅನ್ನುವುದನ್ನು ಸೂಚಿಸಲು ಈ ದೊಡ್ಡ ಕಥೆ, ಆಮೇಲೆ ಆ ಬಗ್ಗೆ ವ್ಯಾಖ್ಯಾನ.

ಈ ಶಾಸನವನ್ನು ಪತ್ತೆ ಹಚ್ಚಿದವನು ನೆಪೋಲಿಯನ್ ಸೈನ್ಯದಲ್ಲಿದ್ದ ಯಾರೋ ಒಬ್ಬ ಅನಾಮಧೇಯ. 1798-1801ರ ಅವಧಿಯಲ್ಲಿ ನೆಪೋಲಿಯನ್ ಈಜಿಪ್ಟಿನ ಮೇಲೆ ದಂಡೆತ್ತಿ ಬಂದಿದ್ದ. ಬ್ರಿಟಿಷರು ಭಾರತಕ್ಕೆ ತೆರಳುವ ಮಾರ್ಗವನ್ನು ತನ್ನ ವಶಮಾಡಿಕೊಳ್ಳಬೇಕು, ಫ್ರೆಂಚರ ವ್ಯಾಪಾರ ತಡೆಯಿಲ್ಲದೆ ಸಾಗಬೇಕು ಅದು ಅವನ ಮುಖ್ಯ ಉದ್ದೇಶ.
 
ತನ್ನ ಜೊತೆಗೆ 167 ಜನ ವಿದ್ವಾಂಸರ, ತಂತ್ರಜ್ಞರ ತಂಡವನ್ನು ಕರಕೊಂಡು ಹೋಗಿದ್ದ- ಈಜಿಪ್ಟ್‌ನ ಬಗ್ಗೆ ತಿಳಿವಳಿಕೆಯನ್ನು ಪಡೆಯಬೇಕೆಂದೇ ಕೈರೋದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಈಜಿಪ್ಟ್ ಸ್ಥಾಪನೆ ಮಾಡಿದ್ದ. ಪ್ರಾಚೀನ ವಸ್ತುಗಳ, ಕಲೆ ಮತ್ತು ವಾಸ್ತು ಮಾದರಿಗಳ ದೊಡ್ಡ ಪ್ರಮಾಣದ ಸಂಗ್ರಹ, ಅಧ್ಯಯನ ಶುರುವಾಗಿ ಈಜಿಪ್ಟಾಲಜಿ ಅನ್ನುವುದು ತಲೆಯೆತ್ತಿದ್ದು, ಈಜಿಪ್ಟು ಜನಸಾಮಾನ್ಯರ ಕಲ್ಪನೆಯನ್ನು ಮೆರೆದು ಆಳತೊಡಗಿದ್ದು ನೆಪೋಲಿಯನ್‌ನ ಆಸಕ್ತಿಯ ಫಲವಾಗಿ.  

ಈಜಿಪ್ಟಿನ ಈಶಾನ್ಯ ಕರಾವಳಿಯಲ್ಲಿ, ರೊಸೆಟ್ಟಾ ಅನ್ನುವುದೊಂದು ಊರು. ಅದರ ಸ್ಥಳೀಯ ಹೆಸರು ರಶೀದ್. ಅಲ್ಲಿಂದ ಕೆಲವು ಮೈಲು ದೂರದಲ್ಲಿ, ನೈಲ್ ನದಿಯ ಎಡ ದಂಡೆಯ ಮೇಲೆ ಜ್ಯೂಲಿಯನ್ ಎಂಬ ಹೆಸರಿನ ಕೋಟೆ ಇತ್ತು.

ನೆಪೋಲಿಯನ್ ಆ ಕೋಟೆಯ ರಿಪೇರಿ ಮಾಡಿಸುತಿದ್ದ. ಲೆಫ್ಟಿನೆಂಟ್ ಪಿಯರೆ ಫ್ರಾಂಕೋಸ್ ಬುಚರ್ಡ್ ಕೋಟೆಯ ರಿಪೇರಿ ಕೆಲಸದ ಉಸ್ತುವಾರಿ ನೋಡಿಕೊಳ್ಳುತಿದ್ದ. ಅವತ್ತು ಗೋಡೆಯನ್ನು ಬೀಳಿಸಿ ದೊಡ್ಡ ಕಲ್ಲುಗಳನ್ನು ಕೀಳುತಿದ್ದ ಸೈನಿಕನೊಬ್ಬನಿಗೆ ಆ ಶಾಸನ ಕಲ್ಲು ಕಾಣಿಸಿತು. ಲೆಫ್ಟಿನೆಂಟನಿಗೆ ತೋರಿಸಿದ.
 
ಕಲ್ಲಿನ ಮೇಲೆ ಏನೇನೋ ಬರೆದಿತ್ತು. ಲೆಫ್ಟಿನೆಂಟ್ ಅದನ್ನು ಜನರಲ್ ಜಾಕ್ವೆಸ್ ಮೆನೋನ ಗಮನಕ್ಕೆ ತಂದ. ನೆಪೋಲಿಯನ್ ಕೂಡ ಕಲ್ಲನ್ನು ನೋಡಿದ ಅದಕ್ಕೆ `ರೊಸೆಟ್ಟಾ ಶಿಲೆ~ ಎಂದು ನಾಮಕರಣವಾಯಿತು. ಕಲ್ಲಿನ ಅಧ್ಯಯನ ಶುರುವಾಯಿತು.

ಶಾಸನ ಈಜಿಪ್ಟ್ ಇನ್‌ಸ್ಟಿಟ್ಯೂಟಿಗೆ ತಲುಪಿತು. ಅಲ್ಲಿದ್ದವನು ಆಂಗೆ ಲಾನ್‌ಸೆರ್ಟ್ ಎಂಬ ಎಂಜಿನಿಯರ್. ಈಜಿಪ್ಟಿನ ಕಟ್ಟಡಗಳ ವಿವರಗಳನ್ನು ದಾಖಲೆ ಮಾಡಿಕೊಳ್ಳುತಿದ್ದ. ಕಲ್ಲನ್ನು ಪರಿಶೀಲಿಸಿ ಅದರಲ್ಲಿ ಒಂದೇ ವಿಷಯವನ್ನು ಮೂರು ಲಿಪಿಗಳಲ್ಲಿ ಬರೆದಿರಬಹುದು ಎಂದು ಊಹಿಸಿದ.

ಫ್ರೆಂಚ್ ಸಾಹಸಗಳ ಬಗ್ಗೆ ಅಧಿಕೃತ ವರದಿ ಮಾಡುತಿದ್ದ ಕೊರಿಯರ್ ಡಿ ಈಜಿಪ್ಟ್ ಎಂಬ ಫ್ರೆಂಚ್ ಪತ್ರಿಕೆ 1799ರ ಸೆಪ್ಟೆಂಬರ್ ರೊಸೆಟ್ಟಾ ಶಾಸನದ ಬಗ್ಗೆ ಲೇಖನ ಬರೆಯಿತು. ಅನಾಮಧೇಯ ವರದಿಗಾರ ಈ ಶಾಸನದಿಂದ ಒಂದಲ್ಲ ಒಂದು ದಿನ ಹಿರೋಗ್ಲಿಫಿಕ್ಸ್ ರಹಸ್ಯ ಬಯಲಾಗಬಹುದು ಅಂದಿದ್ದ.
 
1800ರಲ್ಲಿ ಕಲಾವಿದ ಸಂಶೋಧಕ ನಿಕೊಲಸ್ ಜಾಕ್ವೆಸ್ ಕೌಂಟ್ ಶಾಸನ ಶಿಲೆಯನ್ನೇ ಮುದ್ರಣ ಬ್ಲಾಕ್ ಥರ ಬಳಸಿಕೊಂಡು ಕಾಗದದ ಮೇಲೆ ಲಿಪಿ ಅಚ್ಚೊತ್ತಿಕೊಳ್ಳಬಹುದು ಅಂದ. ಮುದ್ರಕ ಮತ್ತು ಭಾಷಾಪ್ರೇಮಿ ಜೀನ್ ಜೋಸೆಫ್ ಮಾರ್ಸೆಲ್ ಶಾಸನದ ಮಧ್ಯ ಪಠ್ಯ ಎಲ್ಲರೂ ಅಂದುಕೊಂಡಿರುವ ಹಾಗೆ ಸಿರಿಯಕ್ ಲಿಪಿ ಅಲ್ಲ, ಈಜಿಪ್ಟಿನ ಡೆಮಾಟಿಕ್ ಲಿಪಿ ಅಂದ.
 
ಅದುವರೆಗೆ ಆ ಲಿಪಿಯ ಶಾಸನ ಸಿಕ್ಕಿರಲಿಲ್ಲ. ಯೂರೋಪಿನ ವಿದ್ವಾಂಸರೆಲ್ಲ ಶಾಸನದ ಪ್ರತಿಗಳನ್ನು ಹಿಡಿದುಕೊಂಡು ಓದುವುದಕ್ಕೆ ತಿಣುಕುತಿದ್ದರು. ಪ್ರಾಚೀನ ಶಾಸನ ಜನರ, ವಿದ್ವಾಂಸರ ಕಲ್ಪನೆಗಳನ್ನು ಕೆರಳಿಸಿತ್ತು.

ಬ್ರಿಟಿಷ್ ಮತ್ತು ಓಟ್ಟೋಮನ್ ದಾಳಿ ನಡೆದೇ ಇತ್ತು. 1801 ಆಗಸ್ಟ್ 30ರಂದು ಫ್ರೆಂಚ್ ಸೇನೆಯ ಜನರಲ್ ಬ್ರಿಟಿಷರಿಗೆ ಶರಣಾದ. 

ಫ್ರೆಂಚರು ಕಂಡು ತಮ್ಮದಾಗಿಸಿಕೊಂಡಿದ್ದ ವಸ್ತುಗಳು, ಅವಶೇಷಗಳು, ಪ್ಲಾನುಗಳು, ಕಲಾಕೃತಿಗಳನ್ನೆಲ್ಲ ಏನು ಮಾಡಬೇಕು? ಇದು ಇನ್‌ಸ್ಟಿಟ್ಯೂಟಿಗೆ ಸೇರಿದ್ದು ಅನ್ನುವುದು ಫ್ರೆಂಚ್ ಕರ್ನಲ್ ಮೆನೋ ವಾದಿಸಿದರೆ, ಇಲ್ಲ ಗೆದ್ದವರದು ಎಂದು ಇಂಗ್ಲಿಷರ ವಾದ. ಇಂಗ್ಲೆಂಡಿನಿಂದ ಇಬ್ಬರು ತಜ್ಞರು ಬಂದರು. ಫ್ರೆಂಚರು ಲೋಕಕ್ಕೆ ತಿಳಿಸಿದ್ದಕ್ಕಿಂತ, ನಾವು ಊಹಿಸಿದ್ದಕ್ಕಿಂತ ಹೆಚ್ಚು ವಸ್ತುಗಳು ಇವೆ ಅಂತ ವರದಿ ಮಾಡಿದರು.
 
ಎಲ್ಲವೂ ನಮ್ಮ ಚರ್ಕವರ್ತಿಗೆ ಸೇರಿದೆಂದು ಇಂಗ್ಲಿಷರ ಹಟ; ಹಾಗೆ ಹಟ ಮಾಡಿದರೆ ಎಲ್ಲ ಸುಟ್ಟು ಹಾಕುತ್ತೇವೆ ಎಂದು ಫ್ರೆಂಚ್ ಮುಖಂಡ ಎಟಿಯನ್ ಜಾಫ್ರೆ ಸೇಂಟ್ ಹಿಲರಿ ಮೊಂಡುತನ ಮಾಡಿದ. ಕೊನೆಗೆ ನೈಸರ್ಗಿಕ ಮಾದರಿಗಳನ್ನು ವಿದ್ವಾಂಸರು ಖಾಸಗಿ ಆಸ್ತಿ ಅಂತ ಇಟ್ಟುಕೊಳ್ಳಬಹುದು ಅಂತಾಯಿತು. ರೊಸೆಟ್ಟಾ ಶಿಲೆ ನನ್ನ ಸ್ವಂತದ್ದು ಅಂದ ಮೆನೋ. ಅದರ ಬೆಲೆ ಗೊತ್ತಿದ್ದ ಇಂಗ್ಲಿಷ್ ಅಧಿಕಾರಿ ಹಚಿನ್ ಒಪ್ಪಲಿಲ್ಲ. ಬ್ರಿಟಿಷ್, ಫ್ರೆಂಚ್, ಆಟ್ಟಮನ್ ಒಪ್ಪಂದ ಆಯಿತು. ರೊಸೆಟ್ಟಾ ಬ್ರಿಟಿಷರ ಪಾಲಾಯಿತು.

ಕರ್ನಲ್ ಟರ್ನರ್‌ಗೆ ರೊಸೆಟ್ಟಾ ಕಲ್ಲಿನ ಕಾವಲು ಜವಾಬ್ದಾರಿ ಬಂದಿತ್ತು. ಅದನ್ನ ನಾನೇ ಮೆನೋನಿಂದ ಸ್ವತಃ ಕಿತ್ತುಕೊಂಡು ಫಿರಂಗಿ ಗಾಡಿಯಲ್ಲಿ ಸಾಗಿಸಿಕೊಂಡು ಹೋದೆ ಎಂದು ಹೇಳಿಕೊಂಡಿದ್ದಾನೆ. ಈಜಿಪ್ಟ್ ಇನ್‌ಸ್ಟಿಟ್ಯೂಟ್‌ನ ಅಧಿಕಾರಿಯೊಬ್ಬ ತನ್ನನ್ನು ಮತ್ತು ಜಾನ್ ಕ್ರಿಪ್ಸ್‌ನನ್ನು ಮತ್ತು ಹಚಿನ್‌ನನ್ನು ಸಂದಿಗೊಂದಿಗಳಲ್ಲಿ ಸುತ್ತಾಡಿಸಿಕೊಂಡು ಮೆನೋನ ಮನೆಗೆ ಕರಕೊಂಡು ಹೋದ. ಅಲ್ಲಿ ಮೆನೋನ ಲಗೇಜುಗಳ ಮಧ್ಯೆ, ಕಾರ್ಪೆಟ್ಟುಗಳನ್ನು ಹೊದಿಸಿ ರೊಸೆಟ್ಟಾ ಬಚ್ಚಿಟ್ಟಿದ್ದರು, ಅದನ್ನು ಎತ್ತಿಕೊಂಡು ಬಂದೆವು ಅಂದಿದ್ದಾನೆ.

ಫ್ರೆಂಚ್ ಸೈನ್ಯದಿಂದ ವಶಪಡಿಸಿಕೊಂಡ್ದ್ದಿದ ಎಚ್‌ಎಂಎಸ್ ಈಜಿಪ್ತೈನ್ ಹಡಗಿನಲ್ಲಿ ರೊಸೆಟ್ಟಾವನ್ನು ಇಂಗ್ಲೆಂಡಿಗೆ ಫೆಬ್ರುವರಿ 1802ರಲ್ಲಿ ತಂದರು. ಆಗಿನ ಜನಪ್ರಿಯ ನಿಯತಕಾಲಿಕ ಜಂಟಲ್‌ಮ್ಯಾನ್ಸ್ ಮ್ಯಾಗಸೀನ್‌ನಲ್ಲಿ ದೊಡ್ಡದೊಂದು ಲೇಖನ ಪ್ರಕಟವಾಯಿತು.
 
ಲಂಡನ್ನಿನ ಸೊಸೈಟಿ ಆಫ್ ಆಂಟಿಕ್ವೇರೀಸ್‌ನಲ್ಲಿ ರೊಸೆಟ್ಟಾದ ಸಾರ್ವಜನಿಕ ಪ್ರದರ್ಶನ ಮಾರ್ಚ್ 11, 1802ರಂದು ನಡೆಯಿತು. ಶಾಸನದ ನಾಲ್ಕು ಪ್ರತಿಗಳನ್ನು ತಯಾರಿಸಿ ಆಕ್ಸ್‌ಫರ್ಡ್, ಕೇಂಬ್ರಿಜ್, ಎಡಿನ್‌ಬರಾ ವಿಶ್ವವಿದ್ಯಾಲಯಗಳಿಗೆ, ಡಬ್ಲಿನ್‌ನ ಟ್ರಿನಿಟಿ ಕಾಲೇಜಿಗೆ ಅಧ್ಯಯನಕ್ಕೆಂದು ಕಳಿಸಿಕೊಟ್ಟರು. ಮೊದಲ ಮಹಾಯುದ್ಧ ಕಾಲದಲ್ಲಿ ಬಾಂಬ್ ಭೀತಿ.
 
ರೊಸೆಟ್ಟಾ ಮತ್ತು ಇತರ ಚರ ಅಮೂಲ್ಯ ವಸ್ತುಗಳನ್ನು ಹೋಲ್‌ಬರ್ನ್ ಹತ್ತಿರದ ಸುರಂಗ ರೈಲಿನ ಪೋಸ್ಟಲ್ ಟ್ಯೂಬ್ ರೇಲ್ವೆ ಸ್ಟೇಷನ್, ಮೌಂಟ್ ಪ್ಲೆಸೆಂಟ್‌ನಲ್ಲಿ ಬಚ್ಚಿಟ್ಟಿದ್ದು ಬಿಟ್ಟರೆ ಈ ಶಾಸನ 1802ರಿಂದಲೂ ಬ್ರಿಟಿಷ್ ಮ್ಯೂಸಿಯಮ್‌ನಲ್ಲಿ ಉಳಿದುಕೊಂಡಿದೆ- 1801ರಲ್ಲಿ ಬ್ರಿಟಿಷ್ ಸೈನ್ಯ ಈಜಿಪ್ಟಿನಲ್ಲಿ ವಶಪಡಿಸಿಕೊಂಡದ್ದು, 3ನೆಯ ಜಾರ್ಜ್‌ಗೆ ಕೊಡುಗೆಯಾಗಿ ನೀಡಿದ್ದು ಅನ್ನುವ ಒಕ್ಕಣೆಯೊಂದಿಗೆ!

ರೊಸೆಟ್ಟ ಕಲ್ಲು ರೊಸೆಟ್ಟಾದ್ದೇ ಅಲ್ಲ. ಇನ್ನೂ ಒಳನಾಡಿನ ಸಾಯಿಸ್ ಎಂಬಲ್ಲಿದ್ದ ದೇವಾಲಯದ್ದಿರಬಹುದು. ಈಜಿಪ್ಟು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದಾಗ ಕ್ರಿಶ್ಚಿಯನ್ ಅಲ್ಲದ ಎಲ್ಲ ದೇವಸ್ಥಾನಗಳನ್ನು ಮುಚ್ಚಬೇಕೆಂದು ರೋಮನ್ ಚಕ್ರವರ್ತಿ ಆಜ್ಞೆ ಮಾಡಿದ್ದ. ಹಾಗಾಗಿ ಅದನ್ನ ಕ್ರಿ.ಶ. 392ರಲ್ಲಿ ಮುಚ್ಚಿದ್ದರು.

ಹಳೆಯ ದೇಗುಲ ಕೆಡವಿ ಅದರ ಕಲ್ಲುಗಳನ್ನು ಬೇರೆ ಕಟ್ಟಡಗಳ ನಿರ್ಮಾಣಕ್ಕೆ ಬಳಸಿದ್ದರು. 1416ರಲ್ಲಿ ಮಾಮೆಲುಕ್ ಸುಲ್ತಾನ್ ಖಿತ್ಬಿ ನೈಲ್ ನದಿಯ ದಡದ ರಶೀದ್‌ನಲ್ಲಿ ಕೋಟೆ ರಿಪೇರಿ ಮಾಡಿಸುತ್ತ ರೊಸೆಟ್ಟಾ ಕಲ್ಲು ಅಲ್ಲಿಗೆ ಬಂದಿರಬಹುದು. ಅದಾಗಿ ಸುಮಾರು ಮುನ್ನೂರ ಐವತ್ತು ವರ್ಷಗಳ ನಂತರ ಫ್ರೆಂಚ್ ಸೈನಿಕನ ಕಣ್ಣಿಗೆ ಬಿದ್ದಿತ್ತು!

ರೊಸೆಟ್ಟ ಕಲ್ಲು ನೈಲ್ ನದಿಯ ದಕ್ಷಿಣ ದಂಡೆಯ ಗೆಬೆಲ್ ಟಿಂಗರ್ ಅನ್ನುವ ಕ್ವಾರಿಯಿಂದ ಬಂದಿರಬಹುದು ಅನ್ನುವುದು ಪ್ರಯೋಗಗಳ ಮೂಲಕ 1999ರಷ್ಟು ಈಚೆಗೆ ಸ್ಪಷ್ಟವಾಯಿತು.
 
ಈ ಕಲ್ಲು 45 ಇಂಚು ಎತ್ತರ 28.5 ಇಂಚು ಅಗಲ, 11 ಇಂಚು ದಪ್ಪ. 760 ಕೆಜಿ ತೂಕದ್ದು. ಇನ್ನೂ ದೊಡ್ಡ ಶಾಸನ ಶಿಲೆಯ ತುಣುಕು ಇದು. ಮೂಲ ಶಾಸನ 59 ಇಂಚು ಎತ್ತರ ಇದ್ದಿರಬಹುದು. ಮೂರು ಪಠ್ಯಗಳಲ್ಲಿ ಒಂದು ಕೂಡಾ ಪೂರಾ ಇಲ್ಲ. ಹಿರೊಗ್ಲಿಫಿಕ್ಸ್ 14, ಡೆಮಾಟಿಕ್ 32 ಸಾಲು, ಗ್ರೀಕ್ 54 ಸಾಲು ಉಳಿದಿವೆ.

ಒಬ್ಬೊಬ್ಬ ವಿದ್ವಾಂಸ ಒಂದೊಂದು ಅಂಶದ ಮೇಲೆ ಬೆಳಕು ಚೆಲ್ಲುತ್ತ ಈ ಅಪೂರ್ಣ ಶಾಸನವನ್ನು ಸರಿಯಾಗಿ ಬಿಡಿಸಿ ಓದಿ ಅರ್ಥಮಾಡಿಕೊಳ್ಳುವುದಕ್ಕೆ ಸುಮಾರು ಇಪ್ಪತ್ತೈದು ವರ್ಷಗಳ ಶ್ರಮ ಬೇಕಾಯಿತು. ಫಲಿತಾಂಶ ಮಾತ್ರ ಕಲ್ಪನೆಗೂ ಮೀರಿದ ಅಗಾಧ ಸಾಧ್ಯತೆಗಳನ್ನು ತೆರೆದು ತೋರಿತು.

ಇಡಿಯಾದ ದೊಡ್ಡ ರಹಸ್ಯವನ್ನು ಅರಿಯುವುದಕ್ಕೆ ದೊರೆಯುವ ಆಂಶಿಕ ಸುಳಿವು ಅನ್ನುವ ಅರ್ಥದಲ್ಲಿ ರೊಸೆಟ್ಟಾ ಅನ್ನುವ ಪದ ಬಳಕೆಯಾಗತೊಡಗಿತು. ಗ್ಲೂಕೋಸಿನ ರಾಸಾಯನಿಕ ಸಂಯೋಜನೆಯನ್ನು ಪತ್ತೆ ಮಾಡಿದ್ದನ್ನು ವಿವರಿಸುವುದಕ್ಕೆ ರೊಸೆಟ್ಟಾ ರೂಪಕವಾಯಿತು; ವೆಲ್ಸ್ ತನ್ನ ಕಾದಂಬರಿಯೊಂದರಲ್ಲಿ ನಾಯಕನು ಶೀಘ್ರಲಿಪಿಯಲ್ಲಿದ್ದ ಹಸ್ತಪ್ರತಿಯನ್ನು ಓದಿದ್ದನ್ನು ವರ್ಣಿಸುವಾಗ ರೊಸೆಟ್ಟಾ ಓದಿದ ಹಾಗೆ ಅಂತ ವರ್ಣಿಸಿದ;

ನೊಬೆಲ್ ವಿಜೇತ ವಿಜ್ಞಾನಿ ಆಧುನಿಕ ಭೌತಶಾಸ್ತ್ರದ ರೊಸೆಟ್ಟಾ ಎಂದು ಜಲಜನಕ ಕಣಗಳ ವರ್ಣಪಟಲವನ್ನು ವರ್ಣಿಸಿ ಅದು ತಿಳಿದರೆ ಭೌತಶಾಸ್ತ್ರದ ಎಷ್ಟೋ ವಿಷಯಗಳು ತಿಳಿಯುತ್ತವೆ ಅಂದ.

ಹಾಗೆಯೇ ದೇಹದ ರೋಗನಿರೋಧ ಶಕ್ತಿಯ ತಿಳಿವಳಿಕೆಯ, ಗ್ಯಾಮಾ ಕಿರಣಗಳ, ಹೃದಯದ ಡಯಸ್ಟಾಲಿಕ್ ಏರುಪೇರುಗಳ ಅಧ್ಯಯನದ ತೊಡಕುಗಳನ್ನು ನಿವಾರಿಸಬಲ್ಲ, ಇನ್ನೂ ಅರ್ಥವಾಗಿಲ್ಲದ ಸುಳಿವುಗಳನ್ನೆಲ್ಲ ರೊಸೆಟ್ಟಾ ಎಂದೇ ವರ್ಣಿಸಿದ್ದಾರೆ.

ಸೌರಮಂಡಲದ ಉಗಮವನ್ನು ಅರಿಯುವ ಒಂದು ಯೋಜನೆಯಲ್ಲಿ ಬಳಕೆಯಾಗಿರುವ ಆಕಾಶನೌಕೆಯ ಹೆಸರು ರೊಸೆಟ್ಟಾ ಸ್ಪೇಸ್‌ಕ್ರಾಫ್ಟ್.

ಕಂಪ್ಯೂಟರುಗಳಲ್ಲಿ ಬಳಕೆಯಾಗುವ ಭಾಷಾಂತರ ತಂತ್ರಾಂಶವೊಂದರ ಹೆಸರು ರೊಸೆಟ್ಟಾ. ಪ್ರೊಟೀನುಗಳ ಸಂರಚನೆಯನ್ನು ಅರಿಯುವ ಪ್ರಾಜೆಕ್ಟಿನ ಹೆಸರೂ ಅದೇ, ರೊಸೆಟ್ಟಾ. ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದ ಗ್ರಂಥಾಲಯ ರೊಸೆಟ್ಟಾ ಪ್ರಾಜೆಕ್ಟ್ ಹೆಸರಿನಲ್ಲಿ ಕ್ರಿ.ಶ. 1200ರಿಂದ 2000ದವರೆಗಿನ ಒಟ್ಟು 1500 ಭಾಷೆಗಳ ಮಾದರಿಯನ್ನು ಹದಿಮೂರು ಸಾವಿರ ಪುಟಗಳಲ್ಲಿ ಸಂಗ್ರಹಿಸಿದೆ:

http://rosettaproject.org/..ವಿದೇಶೀ ಭಾಷೆಗಳನ್ನು ಕಲಿಯಬಹುದಾದ ತಾಣ http://www.rosettastone.com/.  ರೊಸೆಟ್ಟಾ ಶಿಲೆಯ ಮತ್ತಷ್ಟು ಮಾಹಿತಿಗೆ ನೋಡಿ: http://www.britishmuseum.org/explore/highlights/highlight_objects/aes/t/the_rosetta_stone.aspx.
ರೊಸೆಟ್ಟಾ ಶಾಸನವನ್ನು ಓದಿದ ಪತ್ತೇದಾರಿಯಂಥ ಕಥೆ; ಡಾರ್ವಿನ್, ಫ್ರಾಯ್ಡ, ವ್ಯಾಟ್ ಇವರ ಶೋಧಗಳಂತೆಯೇ ಪ್ರಾಚೀನ ಭಾಷೆಗಳ ಅಧ್ಯಯನ ಪ್ರಾಚೀನ ಆಧುನಿಕತೆಯ ಸ್ವರೂಪವನ್ನು ಹೇಗೆ ನಿರ್ಧರಿಸಿತು, ಆಧುನಿಕತೆಯ ಮುಖ್ಯ ಲಕ್ಷಣಗಳಾದ ವೈಚಾರಿಕತೆ ಮತ್ತು ವೈಜ್ಞಾನಿಕತೆಗಳಂತೆಯೇ ಅವುಗಳ ವಿರುದ್ಧ ಧ್ರುವವಾದ ಮೂಲಭೂತವಾದ ಗಟ್ಟಿಗೊಳ್ಳುವುದಕ್ಕೂ ಹೇಗೆ ಕಾರಣವಾಯಿತು ಅದನ್ನೆಲ್ಲ ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.