ADVERTISEMENT

ಅಪಾತ್ರರನ್ನು ಪ್ರೀತಿಸಿದವರ ದಾರುಣ ಬದುಕು

ಶಿವರಾಮ್
Published 10 ಡಿಸೆಂಬರ್ 2011, 19:30 IST
Last Updated 10 ಡಿಸೆಂಬರ್ 2011, 19:30 IST

ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಾನು ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಾಲ. ಗಣಿತದಲ್ಲಿ ಎಂಎಸ್.ಸಿ ಮಾಡುತ್ತಿದ್ದ ಪ್ರತಿಭಾವಂತ ಹೆಣ್ಣುಮಗಳೊಬ್ಬಳು ತನ್ನ ಮನೆಯ ಎದುರಲ್ಲಿದ್ದ ಎಸ್ಸೆಸ್ಸೆಲ್ಸಿ ಫೇಲಾದ ಯುವಕನನ್ನು ಮೆಚ್ಚಿದಳು.

ಮುಸ್ಲಿಂ ಕುಟುಂಬಕ್ಕೆ ಸೇರಿದ ಆ ಹೆಣ್ಣುಮಗಳ ತಾಯಿ ನಿವೃತ್ತ ಶಿಕ್ಷಕಿ. ಅವರದ್ದು ವಿದ್ಯಾವಂತರ ಕುಟುಂಬ. ಯಾವ ಕಾರಣಕ್ಕೆ ಆ ಹುಡುಗನನ್ನು ಹುಡುಗಿ ಇಷ್ಟಪಟ್ಟಳೋ? ಮನೆಯವರು ಎಷ್ಟು ಹೇಳಿದರೂ ಕೇಳಲಿಲ್ಲ.

ಹಿಂದೂ ಧರ್ಮಕ್ಕೆ ಸೇರಿದ ಆ ಹುಡುಗನ ಜೊತೆ ಎಂಎಸ್.ಸಿ. ಓದುತ್ತಿದ್ದ ಆ ಹುಡುಗಿ ಓಡಿಹೋದಳು. ಯಥಾಪ್ರಕಾರ ಪೊಲೀಸರಿಗೆ ಎಲ್ಲಿ ಅದು ಕೋಮುಗಲಭೆಗೆ ಕಾರಣವಾಗುತ್ತದೋ ಎಂಬ ಆತಂಕ ಶುರುವಾಯಿತು. ಹುಡುಗಿಯ ತಾಯಿಗೂ ಭಯ.

ಹುಡುಗನ ಮನೆಯವರಿಗೆ ತಮ್ಮ ಮಗನ ಗತಿ ಏನಾಗುವುದೋ ಎಂಬ ಭೀತಿ. ಮೊದಲು ಮನೆಬಿಟ್ಟ ಆ ಜೋಡಿ ಆಮೇಲೆ ಬೆಂಗಳೂರನ್ನೇ ಬಿಟ್ಟು ಓಡಿಹೋಯಿತು. ದಿನಗಳು ಕಳೆದಂತೆ ಆ ಘಟನೆಯನ್ನು ಅವರವರ ಮನೆಯವರು ಮರೆತರು.

ಹುಡುಗಿ ಬಹಳ ರೂಪವಂತೆ. ಹುಡುಗ ಅವಳನ್ನು ಮದುವೆಯಾಗಿ ದೆಹಲಿಯಲ್ಲಿದ್ದ ತನ್ನ ಸಂಬಂಧಿಕರ ಮನೆಯಲ್ಲಿ ಕರೆದುಕೊಂಡು ಹೋಗಿ, ನೆಲೆಸಿದ್ದ. ಹೊಟ್ಟೆಪಾಡಿಗಾಗಿ ಆ ಹುಡುಗಿ ಮನೆಪಾಠ ಹೇಳುತ್ತಿದ್ದಳು. ಹೇಗೊ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಸಂದರ್ಭದಲ್ಲೇ ಅವಳು ಗರ್ಭವತಿಯಾದಳು.
 
ಆತಂಕದಲ್ಲೇ ಬದುಕುತ್ತಿದ್ದ ಕಾರಣಕ್ಕೋ ಏನೋ ಆಕೆಗೆ ಗರ್ಭಪಾತವಾಯಿತು. ಹಾಗಾದಾಗ ಮನಸ್ಸು ಆತ್ಮೀಯರನ್ನು ಬಯಸುವುದು ಸಹಜ. ಆ ಹುಡುಗಿಗೂ ತನ್ನ ತಾಯಿಯ ನೆನಪಾಯಿತು. ಆಕೆಯನ್ನು ಸಂಪರ್ಕಿಸಿ ನಡೆದ ಅಷ್ಟೂ ಘಟನೆಯನ್ನು ವಿವರಿಸಿ, ತಾನು ಸ್ವಲ್ಪ ದಿನಗಳ ಮಟ್ಟಿಗೆ ಬೆಂಗಳೂರಿನ ತವರುಮನೆಗೆ ಬರುವುದಾಗಿ ಕೇಳಿಕೊಂಡಳು.

ಅಷ್ಟೆಲ್ಲಾ ಆಗಿದ್ದರೂ ತಾಯಿಕರುಳು ಚುರ‌್ರೆಂದಿತು. ಮಗಳೆಂಬ ಮಮಕಾರದಿಂದ ಕರೆದುಕೊಂಡು ಬಂದಳು. ಜೀವನದಲ್ಲಿ ತನ್ನ ಮಗಳು ಸಾಕಷ್ಟು ನೊಂದಿದ್ದಾಳೆ ಎಂಬುದನ್ನು ಅರಿತ ಆ ತಾಯಿ ಮಗಳನ್ನು ಮತ್ತೆ ಆಕೆಯ ಗಂಡನ ಮನೆಗೆ ಕಳಿಸಿಕೊಡಲೇ ಇಲ್ಲ. ತನ್ನಲ್ಲೇ ಇಟ್ಟುಕೊಂಡಳು.

ಎಷ್ಟು ದಿನವಾದರೂ ತನ್ನ ಪತ್ನಿ ಮರಳಲಿಲ್ಲ ಎಂಬ ಕಾರಣಕ್ಕೆ ಆ ಯುವಕ ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ. ತಾಯಿಮನೆಗೆ ಹೋದ ಹೆಂಡತಿ ವಾಪಸ್ ಬಂದಿಲ್ಲ. ಅವಳನ್ನು ಎಲ್ಲೋ ಅಕ್ರಮವಾಗಿ ಮುಚ್ಚಿಟ್ಟಿದ್ದಾರೆ ಎಂದು ದೂರಿದ.

ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿತು. ಆ ಹೆಣ್ಣುಮಗಳನ್ನು ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿತು. ನಾವು ಆಕೆಯನ್ನು ಹಾಜರುಪಡಿಸಿದೆವು.

ಮುಖ್ಯ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ದೂರ ದೂರ ಇದ್ದ ಗಂಡ-ಹೆಂಡತಿ ಇಬ್ಬರೂ ಸಿನಿಮಾದಲ್ಲಿ ಆಗುವಂತೆ ಓಡಿಬಂದು ಅಪ್ಪಿಕೊಂಡರು.
ಅದನ್ನು ನೋಡಿದ ಮುಖ್ಯ ನ್ಯಾಯಾಧೀಶರು `ಇದೇನಾಗುತ್ತಿದೆ~ ಎಂದು ನಮ್ಮನ್ನು ತರಾಟೆಗೆ ತೆಗೆದುಕೊಂಡರು. ಅವರಿಬ್ಬರೂ ದಿಢೀರನೆ ಹಾಗೆ ಅಪ್ಪಿಕೊಳ್ಳುತ್ತಾರೆಂದು ಯಾರೂ ಲೆಕ್ಕಿಸಿರಲಿಲ್ಲ.

ಆ ಹುಡುಗಿಯನ್ನು ಕರೆತಂದಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಮೂಕಪ್ರೇಕ್ಷಕರಾಗಿದ್ದರು. ಲೋಕಾಯುಕ್ತರಾಗಿ ಇತ್ತೀಚೆಗೆ ಹೆಸರು ಮಾಡಿದ್ದ ಸಂತೋಷ್ ಹೆಗ್ಡೆ ಅವರು ಆಗ ಅಲ್ಲಿ ಅಡ್ವೊಕೇಟ್ ಜನರಲ್ ಆಗಿದ್ದರು. ಹುಡುಗಿಯನ್ನು ಹಾಜರುಪಡಿಸಿದ ನಂತರ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾ ಮಾಡಿ ಮುಖ್ಯ ನ್ಯಾಯಾಧೀಶರು ಇನ್ನೇನು ಉಕ್ತಲೇಖನ ಕೊಡಬೇಕು, ಅಷ್ಟರಲ್ಲಿ ಆ ಹುಡುಗಿಯ ತಾಯಿ ಕೋರ್ಟಿನ ನಡುಭಾಗದಲ್ಲಿ ಮಂಡಿಯೂರಿ ಕುಳಿತರು. ತಲೆತುಂಬಾ ಹೊದ್ದ ಸೆರಗನ್ನು ಎರಡೂ ಕೈಗಳಲ್ಲಿ ಅಗಲವಾಗಿ ಹಿಡಿದುಕೊಂಡು ಪ್ರಾರ್ಥನೆ ಸಲ್ಲಿಸುವ ಭಂಗಿಯಲ್ಲಿ ಅವರು ಕುಳಿತದ್ದು.
 
`ಮೈ ಲಾರ್ಡ್... ದಯವಿಟ್ಟು ನನ್ನ ಮಗುವನ್ನು ನನಗೆ ಕೊಟ್ಟುಬಿಡಿ. ನನ್ನ ನೋವನ್ನು ಆಲಿಸಿ. ನಾನು ತುಂಬಾ ಕಷ್ಟಪಟ್ಟು ಬೆಳೆಸಿದ ಒಬ್ಬಳೇ ಮಗಳು ಇವಳು. ಎಂಎಸ್.ಸಿಯಲ್ಲಿ ರ‌್ಯಾಂಕ್ ಬಂದಿದ್ದಾಳೆ. ಈಗ ಯಾವುದೋ ಮೋಹದಿಂದಾಗಿ ತನ್ನ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾಳೆ.
 
ದಯವಿಟ್ಟು ಈ ಮದುವೆಯನ್ನು ಅನೂರ್ಜಿತಗೊಳಿಸಿ, ನನ್ನ ಮಗಳನ್ನು ನನ್ನ ಜೊತೆ ಕಳುಹಿಸಿಕೊಡಿ. ನಿಮ್ಮನ್ನು ಬೇಡಿಕೊಳ್ಳುತ್ತೇನೆ~ ಎಂದು ಆಕೆ ಮುಖ್ಯ ನ್ಯಾಯಾಧೀಶರಲ್ಲಿ ಅಂಗಲಾಚಿದರು. ಇಡೀ ಕೋರ್ಟ್‌ನಲ್ಲಿ ಮೌನ. ಮುಖ್ಯ ನ್ಯಾಯಾಧೀಶರು ಕೂಡ ಸ್ತಂಭೀಭೂತರಾದರು.

`ಏನಮ್ಮಾ, ನೀನು ಏನು ಹೇಳ್ತೀಯಾ~ ಎಂದು ಆ ಹುಡುಗಿಯನ್ನು ಮುಖ್ಯ ನ್ಯಾಯಾಧೀಶರು ಕೇಳಿದರು. `ನನ್ನ ತಾಯಿ ಹೇಳಿದ್ದೆಲ್ಲ ನಿಜ. ನಾನು ಎಂಎಸ್.ಸಿ ರ‌್ಯಾಂಕ್ ಹೋಲ್ಡರ್ ಎಂಬುದೂ ನಿಜ. ಆದರೆ, ಪ್ರೀತಿಸಿ ಅವರನ್ನು ಮದುವೆಯಾಗಿದ್ದೇನೆ.

ನಾನು ಅವರ ಜೊತೆಯಲ್ಲೇ ಬಾಳಬೇಕು. ಈಗೇನೂ ಮಾಡಲು ಸಾಧ್ಯವಿಲ್ಲ~ ಎಂದುಬಿಟ್ಟಳು. ಮುಖ್ಯ ನ್ಯಾಯಮೂರ್ತಿ ತಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹುಡುಗಿಯ ತಾಯಿಗೆ ಹೇಳಿದರು. ಅದನ್ನು ಕೇಳಿದಾಕ್ಷಣ ಆ ಮಹಿಳೆ ರೋದಿಸತೊಡಗಿದರು. ಕೋರ್ಟ್‌ನಲ್ಲಿದ್ದ ಎಲ್ಲರ ಕಣ್ಣುಗಳೂ ತಂತಾವೇ ತುಂಬಿಕೊಂಡವು.

ಈ ಬಗ್ಗೆ ಒಂದು ಕೌನ್ಸೆಲಿಂಗ್ ಮಾಡಿ ಅಮ್ಮ-ಮಗಳ ಜೊತೆ ಮಾತನಾಡಿ ಏನಾದರೂ ಪರಿಹಾರ ಸಾಧ್ಯವೇ ನೋಡಿ ಎಂದು ಮುಖ್ಯ ನ್ಯಾಯಾಧೀಶರು ಸಂತೋಷ್ ಹೆಗ್ಡೆ ಅವರಿಗೆ ಸೂಚಿಸಿದರು. ಸಂತೋಷ್ ಹೆಗ್ಡೆ ಅಮ್ಮ- ಮಗಳ ಜೊತೆ ಒಂದು ತಾಸು ಮಾತಿನ ಮಂಥನ ನಡೆಸಿದರು. ಆ ಹುಡುಗಿ ತನ್ನ ಗಂಡನ ಜೊತೆಗೇ ಬಾಳುವುದಾಗಿ ಪಟ್ಟುಹಿಡಿದಳು.

ಮಧ್ಯಾಹ್ನ ಮತ್ತೆ ಕೋರ್ಟ್ ಎದುರು ಬಂದ ಸಂತೋಷ್ ಹೆಗ್ಡೆ, `ಪ್ರೀತಿ ಗೆದ್ದಿದೆ, ಏನೂ ಮಾಡಲಾಗದು~ ಎಂದರು. ಆ ಹುಡುಗಿಯನ್ನು ಗಂಡನ ಜೊತೆ ದೆಹಲಿಗೆ ಕಳುಹಿಸಿಕೊಟ್ಟರು. ಬರಿಗೈ ನೋಡಿಕೊಂಡ ತಾಯಿ ಕಂಗಾಲು ಮುಖವನ್ನು ಹೊತ್ತು ನಡೆಯತೊಡಗಿದರು. ಅವರ ಹೆಜ್ಜೆಗಳು ಭಾರವಾಗಿದ್ದವು.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನಡೆದ ಇನ್ನೊಂದು ಘಟನೆ. ಆಗ `ಎಸ್ಕೇಪ್ ರಾಜ~ ಎಂಬ ಮಹಾನ್ ಚೋರ ಇದ್ದ. ಹತ್ತು ಹನ್ನೆರಡು ಸಲ ಅವನು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಹೋಗಿದ್ದನೆಂಬ ಕಾರಣಕ್ಕೆ ಅವನ ಹೆಸರಿಗೆ `ಎಸ್ಕೇಪ್~ ಎಂಬ ಗುಣ ವಿಶೇಷಣ ಅಂಟಿಕೊಂಡಿತ್ತು.
 
ಬೀಗ ಒಡೆದು ಕಳ್ಳತನ ಮಾಡುವುದರಲ್ಲಿ ಅವನು ನಿಸ್ಸೀಮನಾಗಿದ್ದ. ಬೆಂಗಳೂರು, ತುಮಕೂರು, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಕಳ್ಳತನ ಮಾಡಿ ಕುಖ್ಯಾತನಾಗಿದ್ದ.

ಅಶೋಕನಗರ ಪೊಲೀಸ್ ಕ್ವಾರ್ಟ್ರಸ್ ಮಧ್ಯೆ ಇದ್ದಂಥ ತಾತ್ಕಾಲಿಕ ಕಟ್ಟಡದಲ್ಲಿ ಆಗ ಪೊಲೀಸ್ ಠಾಣೆಯು ಕಾರ್ಯ ನಿರ್ವಹಿಸುತ್ತಿತ್ತು. ಕಟ್ಟಡದ ಒಂದು ಕೊಠಡಿಯನ್ನೇ ಲಾಕಪ್ ಆಗಿ ಪರಿವರ್ತಿಸಲಾಗಿತ್ತು. ಅದರ ಹಿಂಭಾಗದಲ್ಲೇ ಹೆಡ್‌ಕಾನ್‌ಸ್ಟೇಬಲ್ ವಾಸ ಮಾಡುತ್ತಿದ್ದ ಮನೆಯಿತ್ತು.

ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಎಸ್ಕೇಪ್ ರಾಜನನ್ನು ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡಿದ್ದೆವು. ಆಗ ಅವನು ಅದೇ ಲಾಕಪ್‌ನಲ್ಲಿ ಇದ್ದದ್ದು. ನ್ಯಾಯಾಲಯಕ್ಕೆ ಹಾಜರುಪಡಿಸಿ ನಮ್ಮ ಕರ್ತವ್ಯವನ್ನು ಮುಗಿಸಿದೆವು. ಹದಿನೈದು ದಿನದ ನಂತರ ಅವನಿಗೆ ಜಾಮೀನು ಸಿಕ್ಕಿತು. ಅದಾದ ಮೇಲೆ ಒಂದು ದಿನ ಸಂಜೆ ಏಳು ಗಂಟೆ ಸಮಯ. ನಮ್ಮ ಸಿಬ್ಬಂದಿ ಬಂದು, `ಎಸ್ಕೇಪ್ ರಾಜ ಬಂದಿದಾನೆ. ಹಿಂದಿನ ಮನೆ ಹತ್ತಿರ ಇದಾನೆ~ ಎಂದರು.

ನನಗೆ ಆಶ್ಚರ್ಯವಾಯಿತು. ಮತ್ತೆ ಕಳ್ಳತನ ಮಾಡಲು ಬಂದಿರಬಹುದೇನೋ ಎಂದುಕೊಂಡು ಅವನನ್ನು ಹಿಡಿದುಕೊಂಡೆವು. ಆಮೇಲೆ ನೋಡಿದರೆ ಹೆಡ್ ಕಾನ್‌ಸ್ಟೇಬಲ್ ಮಗಳು ಅವನ ಜೊತೆ ಓಡಿಹೋಗಲು ಸೂಟ್‌ಕೇಸ್ ಅಣಿಮಾಡಿಕೊಂಡು ಸಜ್ಜಾಗಿದ್ದಳು.

ಲಾಕಪ್‌ನಲ್ಲಿ ರಾಜ ಇದ್ದದ್ದು ಏಳೇ ದಿನ. ಅಷ್ಟರಲ್ಲೇ ಕಿಟಕಿ ಮೂಲಕ ಮಾತನಾಡಿಕೊಂಡೇ ಆ ಹುಡುಗಿಯನ್ನು ಒಲಿಸಿಕೊಂಡಿದ್ದ.  ಅವನಿಗೆ ಅವಳು ಅಲ್ಲಿಂದಲೇ ನೀರು, ತಿಂಡಿ ಸರಬರಾಜು ಮಾಡುತ್ತಿದ್ದಳು. ಮಾತು ಮಾತು ಮಥಿಸಿ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಅವನು ತನ್ನನ್ನು ತಾನು ದೊಡ್ಡ ರೌಡಿ ಎಂದು ಬಣ್ಣಿಸಿಕೊಂಡಿದ್ದ.

ಜಯರಾಜ್, ಕೊತ್ವಾಲನ ಭಂಟ ಎಂದು ವೈಭವೀಕರಿಸಿಕೊಂಡಿದ್ದ. ಅವನು ಹೇಳಿದ ರೋಚಕ ಕಥೆಗಳನ್ನು ಕೇಳಿಯೇ ಅವಳು ಓಡಿಹೋಗಲು ತಯಾರಾಗಿಬಿಟ್ಟಿದ್ದಳು. ವಿಷಯ ಗೊತ್ತಾದದ್ದೇ ನಾವು ಯಾರಿಗೂ ಗೊತ್ತಾಗದ ಹಾಗೆ ಅವಳ ಮನಃಪರಿವರ್ತನೆ ಮಾಡಿದೆವು.
ಅವನ ನಿಜವಾದ ಬದುಕು ಹೇಗಿದೆ ಎಂಬುದನ್ನು ತಿಳಿಸಿದಾಗ ಅವಳಿಗೆ ತಾನು ಮಾಡಲು ಹೊರಟಿದ್ದು ತಪ್ಪೆಂಬುದು ಗೊತ್ತಾಯಿತು. ಅಕಸ್ಮಾತ್ ಆ ದಿನ ಎಸ್ಕೇಪ್ ರಾಜ ಪೊಲೀಸರ ಕಣ್ಣಿಗೆ ಬೀಳದೆ ಇದ್ದಿದ್ದರೆ ಆ ಹುಡುಗಿಯ ಬದುಕು ಹಾಳಾಗುತ್ತಿತ್ತು.  

 ಕೊತ್ವಾಲ್ ರಾಮಚಂದ್ರನ ಸಹಚರನೊಬ್ಬ ಶೇವಿಂಗ್ ಸಲೂನ್ ಇಟ್ಟಿದ್ದ.  ಶೋಕೀಲಾಲ ಕೊತ್ವಾಲ್ ಅಲ್ಲಿಗೆ ಪದೇಪದೇ ಹೋಗುತ್ತಿದ್ದ. ಆ ಸಲೂನಿನ ಪಕ್ಕದಲ್ಲೇ ಹೈದರಾಬಾದ್ ಮೂಲದ ಮಹಿಳೆಯೊಬ್ಬಳು ಕಟ್ಟಡ ಸಾಮಗ್ರಿ ಮಾರುವ ದೊಡ್ಡ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಳು.
 
ಕೊತ್ವಾಲನ ಅಜಾನುಬಾಹು ದೇಹ, ಕತ್ತಿನಲ್ಲಿದ್ದ ದಪ್ಪ ಚೈನು ಎಲ್ಲವನ್ನೂ ನೋಡಿ ಅವಾಕ್ಕಾದ ಆ ಮಹಿಳೆ ಅವನನ್ನು ಇಷ್ಟಪಟ್ಟಳು. ಇಬ್ಬರ ನಡುವೆ ಪ್ರೇಮಾಂಕುರವಾಯಿತು.

ಆಗ `ಬಾಟಲ್ ಗ್ರೀನ್~ ಬಣ್ಣದ ಫಿಯೆಟ್ ಕಾರಿನಲ್ಲಿ ಕೊತ್ವಾಲ ಓಡಾಡುತ್ತಿದ್ದ. ಟಿವಿಎಸ್ ಕಂಪೆನಿಯವರು ದೆಹಲಿಯಿಂದ ವಿಶೇಷ ಕಾರ್ಗೋದಲ್ಲಿ ಅದನ್ನು ಅವನಿಗಾಗಿ ತರಿಸಿಕೊಟ್ಟಿದ್ದರು. ಬೆಂಗಳೂರಿನಲ್ಲಿ ಆಗ ಆ ಬಣ್ಣದ ನಾಲ್ಕೇ ಕಾರುಗಳು ಇದ್ದದ್ದು.
 
ಮಂತ್ರಿ ಮಹೋದಯರ ಜೊತೆಯಲ್ಲಿ ನಿಂತು ತಾನು ತೆಗೆಸಿಕೊಂಡ ಫೋಟೋಗಳನ್ನೆಲ್ಲಾ ಆಕೆಗೆ ತೋರಿಸಿ ಅವನು ಮರುಳು ಮಾಡಿದ್ದ. ಇಬ್ಬರೂ ಪದೇಪದೇ ಹೈದರಾಬಾದ್‌ಗೆ ಹೋಗಿಬರುತ್ತಿದ್ದ ಸುದ್ದಿಯೂ ಇತ್ತು. ಆಮೇಲೆ ಆ ಮಹಿಳೆಗೆ ಅವನ ಅಸಲೀ ರೂಪ ಗೊತ್ತಾದ ನಂತರ ಏನಾಯಿತೋ ನಮಗೆ ಗೊತ್ತಾಗಲಿಲ್ಲ.

ಎನ್‌ಕೌಂಟರ್‌ನಲ್ಲಿ ಮೃತಪಟ್ಟ ರೌಡಿಯೊಬ್ಬನ ಹೆಂಡತಿಗೆ ಕೆಲವು ಪೊಲೀಸರೇ ಮುಂದೆನಿಂತು ಮೃತನಾದ ರೌಡಿಯ ಸಹಚರನಿಗೆ ಮದುವೆ ಮಾಡಿಸಿದ್ದನ್ನೂ ನಾನು ಕಂಡಿದ್ದೇನೆ.
 
ಹೊರಗೆ ಕಾಣುವ ಥಳುಕನ್ನು ನೋಡಿಯೇ ರೌಡಿಗಳಿಗೆ, ಸಮಾಜಘಾತುಕರಿಗೆ ಮರುಳಾಗಿ ಇಡೀ ಬದುಕನ್ನು ಹಾಳು ಮಾಡಿಕೊಳ್ಳುವ ಹೆಣ್ಣುಮಕ್ಕಳ ಹೃದಯವಿದ್ರಾವಕ ಕಥೆಗಳು ಈಗಲೂ ಮುಂದುವರಿದಿರುವುದು ದುರಂತ.

ಮುಂದಿನ ವಾರ: ಮತ್ತೊಂದು ಹೃದಯವಿದ್ರಾವಕ ಪ್ರೇಮಕಥೆ
ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.