ADVERTISEMENT

ಕೊನೆಗೂ ನಸ್ರು ಹತನಾದ

ಶಿವರಾಮ್
Published 16 ಏಪ್ರಿಲ್ 2011, 19:30 IST
Last Updated 16 ಏಪ್ರಿಲ್ 2011, 19:30 IST

ಹಳ್ಳಿಯವರಂತೆ ವೇಷ ಮರೆಸಿಕೊಂಡು ನಮ್ಮ ತಂಡದ ಕೆಲವರು ರಾತ್ರಿ ಹನ್ನೊಂದೂವರೆಯ ಹೊತ್ತಿಗೆ ಆನೇಕಲ್ ತಲುಪಿದೆವು. ಹೋಗುವಾಗಲೇ ವಿವಿಧ ತಂಡಗಳಲ್ಲಿ ನಾವು ಕಾರ್ಯಾಚರಣೆ ಮಾಡುವುದೆಂದು ತೀರ್ಮಾನ ಮಾಡಿಕೊಂಡೆವು. ನಾವು ಅಲ್ಲಿಗೆ ಹೋಗುತ್ತಿರುವುದರ ಸುಳಿವು ನಸ್ರುಗೆ ಸಿಗದಿರಲಿ ಎಂಬ ಕಾರಣಕ್ಕೆ ಅಲ್ಲಿನ ಸ್ಥಳೀಯ ಪೊಲೀಸರಿಗೂ ವಿಷಯ ತಿಳಿಸಿರಲಿಲ್ಲ. ಆನೇಕಲ್‌ನ ವಿವಿಧ ಬೀದಿಗಳಿಗೆ ನಮ್ಮ ತಂಡಗಳು ಇಳಿದವು.

ವೀವರ್ಸ್‌ ಕಾಲೋನಿಯ ರಸ್ತೆಯಲ್ಲಿ ನಿಂತಿದ್ದ ಒಂದು ಕೆಂಪು ಪಲ್ಸರ್ ಮೋಟಾರ್ ಬೈಕ್ ನಮ್ಮ ಕಣ್ಣಿಗೆ ಬಿತ್ತು. ‘ಕೆಎ-04-8926’ ಎಂಬ ನಂಬರಿನ ಆ ಬೈಕ್ ನೋಡಿದಾಗ ನಮಗೆ ತಕ್ಷಣಕ್ಕೆ ನಸ್ರು ಉಪಯೋಗಿಸುತ್ತಿದ್ದ ಬೈಕ್ ನೆನಪಾಯಿತು. ನಂಬರ್ ಪ್ಲೇಟನ್ನು ಸೂಕ್ಷ್ಮವಾಗಿ ಗಮನಿಸಿದೆವು. ಸ್ಟಿಕ್ಕರ್ ನಂಬರ್‌ಗಳನ್ನು ಅಂಟಿಸಿದ್ದರು. ಅದನ್ನು ಅಂಟಿಸಿ ಹೆಚ್ಚು ದಿನಗಳೇನೂ ಆಗಿರಲಿಲ್ಲ ಎಂಬುದೂ ನಮಗೆ ಗೊತ್ತಾಯಿತು. ಆ ಸಂಖ್ಯೆಯ ನಂಬರ್‌ಗಳನ್ನು ನಸ್ರು ಹೆಚ್ಚಾಗಿ ಬಳಸುತ್ತಿದ್ದ. ಎರಡೂಮುಕ್ಕಾಲು ಗಂಟೆ ರಾತ್ರಿ. ಬೈಕ್ ನಿಂತಿದ್ದ ಜಾಗದ ಮನೆಯವರನ್ನು ಎಬ್ಬಿಸಿದೆವು.  ಜಯಮ್ಮ ಎಂಬ ಮಹಿಳೆ ಹೊರಬಂದರು. ‘ಯಾರು, ಏನಾಗಬೇಕು’ ಎಂದು ಕೇಳಿದರು. ನಾವು ಬೈಕ್ ಯಾರದ್ದು ಎಂದು ಕೇಳಿದೆವು. ಒಂದು ವಾರದ ಹಿಂದಷ್ಟೇ ಅವರು ತಮ್ಮ ಮನೆಯನ್ನು ಐದಾರು ಮುಸ್ಲಿಂ ಹುಡುಗರಿಗೆ ಬಾಡಿಗೆಗೆ ಕೊಟ್ಟಿದ್ದಾಗಿ ತಿಳಿಸಿದರು. ಆ ಬೈಕ್ ಅವರದ್ದೇ ಎಂದು ಸ್ಪಷ್ಟಪಡಿಸಿದರು.

ನಸ್ರುವಿನ ಗ್ಯಾಂಗ್ ಆ ಮನೆಯಲ್ಲೇ ತಂಗಿದೆ ಎಂಬ ನಮ್ಮ ಅನುಮಾನ ಜಯಮ್ಮನವರ ಹೇಳಿಕೆಯಿಂದ ಬಲಗೊಂಡಿತು. ತಕ್ಷಣವೇ ನಾನು ಆ ಮನೆಯನ್ನು ಕವರ್ ಮಾಡಿಸಿದೆ. ಬಲ ಹಾಗೂ ಎಡಗಡೆಗೆ ಉಮೇಶ್ ಮತ್ತು ನಂಜುಂಡೇಗೌಡರನ್ನು ನಿಯೋಜಿಸಿದೆ. ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ರೇವಣ್ಣನವರನ್ನು ಅಲರ್ಟ್ ಮಾಡಿದೆ. ಎದುರಿನಿಂದ ನುಗ್ಗಲು ನಾನು, ರತ್ನಾಕರ್ ಶೆಟ್ಟಿ, ನಾಗನಗೌಡ, ಹನುಮಂತಯ್ಯ, ಕಾಳೇಗೌಡ, ಸುರೇಶ್, ಮಹದೇವ್, ಶಿವರಾಜ್, ದಿನೇಶ್ ಶೆಟ್ಟಿ, ರಮೇಶ್ ಮೊದಲಾದವರು ಸಿದ್ಧರಾದೆವು.

ನಾನು ಮೊದಲಿಗೆ ಹೋಗಿ ಮನೆಯ ಕದ ತಟ್ಟಿದೆ. ಒಳಗಿನಿಂದ ‘ರೇ... ಕೌನ್ ರೇ’ ಎಂಬ ಕರ್ಕಶವಾದ ದನಿ ಕೇಳಿತು. ಅದು ನಸ್ರುವಿನದ್ದೇ ಕಂಠವೆಂಬುದು ನನಗೆ ಖಾತರಿಯಾಯಿತು. ‘ನಾನು ಸಿಸಿಬಿಯಿಂದ ಎಸಿಪಿ ಬಂದಿದೀನಿ. ಮೊದಲು ಮನೆಯ ಒಳಗೆ, ಹೊರಗೆ ಲೈಟ್ ಹಾಕು’ ಎಂದೆ. ನಮ್ಮ ಕೈಲಿ ವೆಪನ್ ಹಿಡಿದಿರುವುದು ಅವನಿಗೆ ಕಂಡರೆ ದಾಳಿ ನಡೆಸುವ ಧೈರ್ಯ ಮಾಡದಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೊರಗೂ ಲೈಟ್ ಹಾಕುವಂತೆ ಹೇಳಿದೆ. ಅವನು ಲೈಟ್ ಹಾಕಿದ. ಬಾಗಿಲು ಸಂದಿಯಿಂದ ನೋಡಿದರೆ ನಸ್ರು, ವಾಸಿಂ, ಜಫ್ರು ಇರುವುದು ಕಂಡಿತು. ‘ಶಫಿಖಾನ್ ಕೊಲೆ ಕೇಸಿನ ವಾಂಟೆಡ್ ಲಿಸ್ಟ್‌ನಲ್ಲಿ ನೀನು ಇದ್ದೀಯ. ಸರೆಂಡರ್ ಆಗು’ ಎಂದೆ. ಅವನು ಬಾಗಿಲಿನತ್ತ ಬರತೊಡಗಿದ. ಇನ್ನೇನು ಶರಣಾಗಿಬಿಡುತ್ತಾನೆ ಎಂದೇ ನಾನು ಭಾವಿಸಿದ್ದೆ. ಬಾಗಿಲಿನವರೆಗೆ ತಣ್ಣಗೆ ಬಂದ ಅವನು ಅದನ್ನು ತೆಗೆದದ್ದೇ ಏಕಾಏಕಿ ತಲ್ವಾರ್ ಬೀಸಿದ. ರತ್ನಾಕರ್ ಶೆಟ್ಟಿಯವರ ಕುತ್ತಿಗೆಗೆ ಬಲವಾದ ಪೆಟ್ಟು ಬಿತ್ತು. ಕುಸಿಯುವ ಮೊದಲು ಆತ್ಮರಕ್ಷಣೆಗೆಂದು ರತ್ನಾಕರ್ ಶೆಟ್ಟಿ ಗುಂಡು ಹಾರಿಸಿದರು. ನೋಡನೋಡುತ್ತಲೇ ವಾಸಿಂ ಮಾಂಸ ಹತ್ತರಿಸಲು ಬಳಸುವ ಹರಿತವಾದ ಕತ್ತಿ ಹೊರಗೆಳೆದು ನುಗ್ಗಿದ. ‘ಕಿಸೀ ಕೋ ಛೋಡ್ನಾ ನಹೀ’ (ಯಾರನ್ನು ಬಿಡಬೇಡ) ಎಂದು ನಸ್ರು ಕೂಗುತ್ತಲೇ ಇದ್ದ. ನಮ್ಮತ್ತ ನುಗ್ಗಿಬಂದ ಅವರು ಎಎಸ್‌ಐ ಹನುಮಂತಯ್ಯನವರ ಬೆರಳನ್ನು ಘಾಸಿಗೊಳಿಸಿದರು. ರುದ್ರಮೂರ್ತಿಯವರ ಕೈಗೆ ಪೆಟ್ಟು ಬಿತ್ತು. ‘ನುಗ್ಗಿಬಂದರೆ ಗುಂಡು ಹಾರಿಸಬೇಕಾಗುತ್ತದೆ’ ಎಂದು ನಾವು ಎಚ್ಚರಿಸುತ್ತಲೇ ಇದ್ದೆವು. ಅದಕ್ಕೆ ನಸ್ರು, ವಾಸಿಂ ಇಬ್ಬರೂ ಕಿವಿಗೊಡಲಿಲ್ಲ. ಪೆಟ್ಟು ಬಿದ್ದ ನಂತರವೂ ಹನುಮಂತಯ್ಯ, ರುದ್ರಮೂರ್ತಿ ಧೃತಿಗೆಡಲಿಲ್ಲ. ರತ್ನಾಕರ ಶೆಟ್ಟಿಯವರೂ ಪೆಟ್ಟು ಬಿದ್ದ ನಂತರ ಜೋರಾಗಿ ಚೀರಿಕೊಳ್ಳಲಿಲ್ಲ. ಅವರಿಗೆ ಇನ್ನೊಂದು ಪೆಟ್ಟು ಬಿದ್ದರೆ ಕಷ್ಟವಾಗುತ್ತದೆಂದು ಪಕ್ಕದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆವು.

ಒಳಗೆ ಇಬ್ಬರ ಕೈಲಿ ಕತ್ತಿಗಳು. ಹೊರಗೆ ನಸ್ರು, ವಾಸಿಂ ಆರ್ಭಟ. ಅವರು ನುಗ್ಗಿಬಂದ ರೀತಿ ನಾವು ಹಿಂದಡಿ ಇಡಲು ಒತ್ತಡ ಹೇರುವಂತೆ ಇತ್ತು. ಆದರೆ, ಉಮೇಶ್ ಹಾಗೂ ನಂಜುಂಡೇಗೌಡ ಹೆದರುವವರ ಪೈಕಿ ಅಲ್ಲ. ಅಪಾಯವನ್ನು ಲೆಕ್ಕಿಸದೆ, ಎಚ್ಚರಿಕೆ ನೀಡಿ ಇಬ್ಬರೂ ಗುಂಡು ಹಾರಿಸಿದರು. ನಾನೂ ಎಚ್ಚರಿಕೆ ನೀಡುತ್ತಾ ಇನ್ನೊಂದು ಗುಂಡು ಹಾರಿಸಿದೆ. ಕತ್ತಲಲ್ಲಿ ಗುಂಡು ಹಾರಿಸುವುದು ತುಂಬಾ ಅಪಾಯಕಾರಿ. ಕ್ರಾಸ್ ಫೈರ್ ಆದಾಗ ನಾವು ಹಾರಿಸುವ ಗುಂಡು ನಮ್ಮವರಿಗೇ ತಗಲುವ ಆತಂಕ ಇರುತ್ತದೆ. ಆದರೆ, ನಾವು ಆ ಸಂದರ್ಭದಲ್ಲಿ ಸುಮ್ಮನಿರುವಂತೆ ಇರಲಿಲ್ಲ. ಆತ್ಮರಕ್ಷಣೆಗೆ ಗುಂಡು ಹಾರಿಸಲೇಬೇಕಾಯಿತು. ಸುಮಾರು ಸುತ್ತು ಗುಂಡು ಹಾರಿಸಿದ ನಂತರವಷ್ಟೇ ಪರಿಸ್ಥಿತಿ ಹತೋಟಿಗೆ ಬಂದದ್ದು. ಒಂದು ಗುಂಡು ತಗುಲಿದ ನಸ್ರು ಅಲ್ಲೇ ಮೃತಪಟ್ಟಿದ್ದ. ಎರಡು ಗುಂಡುಗಳು ದೇಹ ಹೊಕ್ಕಿದ್ದರೂ ವಾಸಿಂ ಇನ್ನೂ ಉಸಿರಾಡುತ್ತಿದ್ದ. ದಿನೇಶ್ ಶೆಟ್ಟಿ, ಮಹದೇವ್ ಹಾಗೂ ಸುರೇಶ್ ಒಳಗೆ ಆರ್ಭಟಿಸುತ್ತಿದ್ದ ಇನ್ನೂ ಇಬ್ಬರನ್ನು ಬಡಿದು, ವಶಕ್ಕೆ ತೆಗೆದುಕೊಂಡರು. ಮನೆಯೊಳಗೆ ಒಬ್ಬ ಮಹಿಳೆ ಹಾಗೂ ಒಂದು ಮಗು ಇತ್ತು. ಪ್ರತ್ಯೇಕ ಕೋಣೆಯೇ ಇಲ್ಲದ ಆ ಮನೆಯಲ್ಲಿ ಆ ಮಹಿಳೆಯನ್ನು ಅನೇಕ ದಿನಗಳಿಂದ ನಸ್ರು ಗ್ಯಾಂಗ್ ಒತ್ತೆಯಲ್ಲಿಟ್ಟುಕೊಂಡಿತ್ತು. ಆ ಮಹಿಳೆಯ ಹೆಸರು ಜಾಸ್ಮಿನ್; ಮುಂಬೈ ಮೂಲದಾಕೆ. ಅವಳ ಮಗುವಿನ ಹೆಸರು ಫಿರ್ದೋಸ್.

ಇಷ್ಟೆಲ್ಲಾ ಆಗುವಷ್ಟರಲ್ಲಿ ರತ್ನಾಕರ ಶೆಟ್ಟಿಯವರ ಕುತ್ತಿಗೆಯಿಂದ ರಕ್ತ ಹರಿದುಹೋಗುತ್ತಿತ್ತು. ಹನುಮಂತಯ್ಯ ಹಾಗೂ ರುದ್ರಮೂರ್ತಿಯವರಿಗೂ ನೋವು ನೀಡುವ ಮಟ್ಟಕ್ಕೆ ಪೆಟ್ಟು ಬಿದ್ದಿತ್ತು. ಮೇಧಾವಿ ಸಬ್ ಇನ್ಸ್‌ಪೆಕ್ಟರ್ ಎನಿಸಿದ್ದ ನಾಗನಗೌಡ ಅವರ ಕಾಲಿಗೆ ನಾವು ಹಾರಿಸಿದ ಗುಂಡೇ ಬಿದ್ದಿತ್ತು. ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸುವಂತೆ ಇನ್ಸ್‌ಪೆಕ್ಟರ್ ರೇವಣ್ಣನವರಿಗೆ ಹೇಳಿದೆ. ಇವರಲ್ಲಿ ಯಾರಿಗೆ ತೊಂದರೆಯಾದರೂ ಜೀವನಪರ್ಯಂತ ನಿಮ್ಮ ಜೊತೆ ಮಾತಾಡುವುದಿಲ್ಲ ಎಂದುಬಿಟ್ಟೆ. ಆಗಿನ ಒತ್ತಡ ಹಾಗಿತ್ತು. ಅಷ್ಟೊಂದು ರಕ್ತ, ಅಷ್ಟೆಲ್ಲಾ ಗಾಯಾಳುಗಳು. ಪೊಲೀಸರನ್ನು ಉಳಿಸುವ ಕಷ್ಟ ಒಂದೆಡೆಯಾದರೆ, ಸಿಕ್ಕವರು ಓಡಿಹೋಗದಂತೆ ಎಚ್ಚರ ವಹಿಸುವ ಉಸಾಬರಿ ಇನ್ನೊಂದು ಕಡೆ.

ರೇವಣ್ಣನವರು ಹದಿನೆಂಟೇ ನಿಮಿಷದಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಗಾಯಾಳು ಪೊಲೀಸರನ್ನು ಸಾಗಿಸಿದ್ದರೆಂಬುದು ಆಮೇಲೆ ನನಗೆ ಗೊತ್ತಾಯಿತು. ಕುಸಿದು ಬಿದ್ದಿದ್ದ ವಾಸಿಂನನ್ನು ಆನೇಕಲ್ ಇನ್ಸ್‌ಪೆಕ್ಟರ್ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ಪಕ್ಕೆಗೆ ಎರಡು ಗುಂಡು ಬಿದ್ದಿದ್ದರೂ ಅವನು ಬದುಕುಳಿದ. ಹಲ್ಲೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಸಿಕ್ಕವರ ಮೇಲೆ ಕೇಸು ದಾಖಲಿಸಿದೆವು. ಆನೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರೇಮಸಾಗರ್ ರೈ ಹಾಗೂ ರಾಮಲಿಂಗಪ್ಪ ಎಂಬುವರು ಉತ್ತಮ ರೀತಿಯಲ್ಲಿ ತನಿಖೆ ನಡೆಸಿದರು. ಬೆಂಗಳೂರಿನಿಂದ ಕಮಿಷನರ್ ಮರಿಸ್ವಾಮಿ, ಅಡಿಷನಲ್ ಕಮಿಷನರ್ ಕಿಶೋರ್ ಚಂದ್ರ ಹಾಗೂ ಜಂಟಿ ಕಮಿಷನರ್ ನಾರಾಯಣಗೌಡ ಘಟನೆ ನಡೆದ ದಿನ ಆ ಸ್ಥಳಕ್ಕೆ ಧಾವಿಸಿ ನಮಗೆಲ್ಲಾ ಧೈರ್ಯ ತುಂಬಿದ್ದರು. ಅವರು ಬಂದು ನಮ್ಮನ್ನು ವಿಚಾರಿಸಿಕೊಂಡ ರೀತಿ ನೋಡಿದರೆ, ನಮಗೆ ಯಾವ ಪದಕವೂ ಬೇಡ ಎನ್ನಿಸಿತ್ತು.

ನಂತರ ‘ಎಫ್‌ಟಿಸಿ 5 ಗ್ರಾಮಾಂತರ ಕೋರ್ಟ್’ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ನಾನೇ ಪ್ರಮುಖ ಸಾಕ್ಷಿದಾರ. ಕೋರ್ಟಿಗೆ ನಾನು ಹೋದಾಗ ದೀರ್ಘ ಕಾಲ ಸವಾಲುಗಳನ್ನು ಎದುರಿಸಬೇಕಾಯಿತು. ನಾವು ಹಿಡಿದಿದ್ದ ವಾಸಿಂ ಹಾಗೂ ಜಫ್ರು ಉದ್ದ ಕೂದಲನ್ನು ಬಿಟ್ಟಿದ್ದರು. ಪ್ರೇಮ್ ಎಂಬ ಇನ್ನೊಬ್ಬ ಹುಡುಗನನ್ನೂ ನಾವು ಹಿಡಿದಿದ್ದೆವು. ಸಾಕ್ಷಿ ಹೇಳಲು ನಾವು ಹೋಗುವ ಕಾಲಕ್ಕೆ ವಾಸಿಂ ಮಾತ್ರ ಜೈಲಿನಲ್ಲಿದ್ದ. ಜಫ್ರು ಮತ್ತು ಪ್ರೇಮ್‌ಗೆ ಜಾಮೀನು ಸಿಕ್ಕಿತ್ತು. ನಾವು ನಸ್ರು ಗ್ಯಾಂಗ್ ಮೇಲೆ ದಾಳಿ ಮಾಡಿದಾಗ ರಕ್ಷಿಸಿದ್ದ ಜಾಸ್ಮಿನ್ ಎಂಬ ಮಹಿಳೆ ಜಫ್ರು ಜೊತೆಯಲ್ಲಿ ಕೋರ್ಟ್‌ಗೆ ಬರುತ್ತಿದ್ದಳು. ಅವಳ ಮಗ ಎತ್ತರಕ್ಕೆ ಬೆಳೆದಿದ್ದ. ನಮಗೆ ಅಪರಾಧಿಗಳ ತೆಕ್ಕೆಯಲ್ಲೇ ಈಗಲೂ ಅವಳು ಉಳಿದದ್ದನ್ನು ಕಂಡು ಅಚ್ಚರಿಯಾಯಿತು.

ಶಿವರಾಂ ಹಾಗೂ ಉಮೇಶ್ ಇಬ್ಬರ ತಲೆ ತೆಗೆಯುವವರೆಗೆ ಕೂದಲನ್ನು ಕತ್ತರಿಸುವುದಿಲ್ಲ ಎಂದು ವಾಸಿಂ, ಜಫ್ರು ಶಪಥ ಮಾಡಿದ್ದಾರೆಂದು ಇದ್ದಕ್ಕಿದ್ದಂತೆ ಕೆಲವು ಮಾಧ್ಯಮ ವರದಿ ಮಾಡಿದವು. ನಾನು ಅದನ್ನು ನಿರ್ಲಕ್ಷಿಸಿದೆ. ಪೊಲೀಸ್ ರಕ್ಷಣೆ ಪಡೆಯುವಂತೆ ನನ್ನ ಕೆಲವು ಹಿತೈಷಿಗಳು ಸಲಹೆ ಕೊಟ್ಟರು.  ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ ಎಂಬ ನಂಬಿಕೆ ಇದೆ ಎಂದಷ್ಟೇ ಹೇಳಿ ಸುಮ್ಮನಾದೆ.

ಇಷ್ಟೆಲ್ಲಾ ನಡೆಯುವ ನಡುವೆಯೇ ಶಫಿಖಾನ್‌ನನ್ನು ಕೊಂದ ಗ್ಯಾಂಗ್‌ನವರೇ ನಸ್ರುವಿನ ಅಣ್ಣ ಜಬಿಯನ್ನು ಕೊಂದುಹಾಕಿದರು. ಅಧಿಕಾರ ದುರುಪಯೋಗ ಪಡಿಸಿಕೊಂಡು ಜೈಲಿನಲ್ಲಿರುವ ವಾಸಿಂ, ಜಫ್ರು ಇಬ್ಬರನ್ನೂ ಮುಗಿಸಲು ನಾನು ಹಾಗೂ ಉಮೇಶ್ ಹುನ್ನಾರ ಹೂಡಿದ್ದೇವೆ ಎಂದು ಪಾತಕಲೋಕದ ಕೆಲವು ಬುದ್ಧಿಜೀವಿಗಳು ಕುಮ್ಮಕ್ಕು ಕೊಟ್ಟರು. ಅದರಿಂದ ವಾಸಿಂ, ಜಫ್ರು ನಮ್ಮ ವಿರುದ್ಧ ದೂರನ್ನು ಕೂಡ ನೀಡಿದರು. ನಾವು ನಿರ್ದೋಷಿಗಳೆಂಬುದು ವಿಚಾರಣೆ ವೇಳೆ ಸ್ಪಷ್ಟವಾಯಿತು.

ಆನೇಕಲ್‌ನ ಕುಮಾರ್ ಎಂಬ ಪೊಲೀಸ್ ಕಾನ್‌ಸ್ಟೇಬಲ್ ಈ ಪ್ರಕರಣದ ವಿಚಾರಣೆ  ಕಾಲಕ್ಕೆ ಸಾಕ್ಷಿಗಳನ್ನು ಕರೆದುಕೊಂಡು ಬರುವುದು, ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವುದನ್ನು ಅಚ್ಚುಕಟ್ಟಾಗಿ ಮಾಡಿದರು. ಅಷ್ಟು ವರ್ಷ ಸಾಕ್ಷ್ಯಾಧಾರಗಳನ್ನು ಕಾಪಾಡಿಕೊಳ್ಳುವುದೇ ಕಷ್ಟದ ಕೆಲಸ. ಪ್ರಾಸಿಕ್ಯೂಟರ್ ಕಾರ್ಜೋಳ ಎಂಬುವರು ನ್ಯಾಯಾಲಯದಲ್ಲಿ ಉತ್ತಮ ರೀತಿಯಲ್ಲಿ ವಾದ ನಡೆಸಿದ್ದರಿಂದ ವಾಸಿಂ, ಜಫ್ರು ಹಾಗೂ ಪ್ರೇಮ್‌ಗೆ ಹತ್ತು ವರ್ಷ ಕಠಿಣ ಶಿಕ್ಷೆಯಾಯಿತು. ಕೋರ್ಟ್ ಈ ತೀರ್ಪನ್ನು ನೀಡಿ ಒಂದು ತಿಂಗಳಾಗಿದೆಯಷ್ಟೆ.

ದೀರ್ಘ ಕಾಲ ಜೈಲಿನಲ್ಲಿದ್ದ ವಾಸಿಂಗೂ 2010ರಲ್ಲಿ ಜಾಮೀನು ಸಿಕ್ಕಿತ್ತು. ಆಗಲೂ ಅವನು ತನ್ನ ಅಣ್ಣ ಹೇಳಿಕೊಟ್ಟ ಹುಡುಗಿಯರನ್ನು ಅಪಹರಿಸುವ ಚಾಳಿಯನ್ನು ಮುಂದುವರಿಸಿದ್ದ. ಸಂಪಿಗೆಹಳ್ಳಿ ಹತ್ತಿರ ಪೊಲೀಸರು ದಾಳಿ ನಡೆಸಿ ಅವನ ಮೇಲೆ ಇನ್ನೊಂದು ಗುಂಡು ಹಾರಿಸಿದ್ದರು. ಅದು ಕಿಡ್ನಿ ಪಕ್ಕಕ್ಕೆ ತಗುಲಿತ್ತು. ಆದರೂ ಅವನು ಬದುಕುಳಿದ. ಮತ್ತೆ ಅವನನ್ನು ಬಂಧಿಸಿ ಜೈಲಿಗೆ ಕಳಿಸಿದರು. ಮೂರು ಗುಂಡು ಬಿದ್ದರೂ ಪಾತಕಲೋಕದಿಂದ ಹೊರಬರಬೇಕು ಎಂದು ಅವನಿಗೆ ಅನ್ನಿಸಲೇ ಇಲ್ಲ. ಪಾಪಿ ಚಿರಾಯು ಎಂಬ ಮಾತು ಇಂಥವರನ್ನು ಕಂಡೇ ಹುಟ್ಟಿರಬೇಕು. ಈಗ ಜೈಲಿನಲ್ಲಿ ಇರುವ ಅವನು ಮುಂದಾದರೂ ಬದಲಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೇನೆ. ಆದರೆ, ಆ ಯಾವ ಲಕ್ಷಣಗಳೂ ಅವನಲ್ಲಿ ಇಲ್ಲಿಯವರೆಗೆ ಕಂಡಿಲ್ಲ.
ಮುಂದಿನ ವಾರ: ಕೋರ್ಟಿನ ಕುತೂಹಲಕಾರಿ ಸಂಗತಿಗಳು
ಶಿವರಾಂ ಅವರ ಮೊಬೈಲ್ ನಂಬರ್ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.