ADVERTISEMENT

ಕೇಜ್ರಿವಾಲ್‌ ಮತ್ತು ಸಾಂವಿಧಾನಿಕ ಬಿಕ್ಕಟ್ಟು

ಶೇಖರ್ ಗುಪ್ತ
Published 30 ಜುಲೈ 2016, 19:30 IST
Last Updated 30 ಜುಲೈ 2016, 19:30 IST

ಪ್ರಧಾನಿ ತಮ್ಮನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂಬ ಅರವಿಂದ ಕೇಜ್ರಿವಾಲ್‌ ಅವರ ಆರೋಪ ಮುಖ್ಯಮಂತ್ರಿಯೊಬ್ಬರ ಮಾಮೂಲಿ ನಿಂದನಾತ್ಮಕ ರಾಜಕೀಯ ಹೇಳಿಕೆಯಾಗಷ್ಟೇ ಉಳಿದಿಲ್ಲ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ರಾಜಕೀಯ ಬದುಕಿನಲ್ಲಿನ ಇತ್ತೀಚಿನ ತಿರುವಿನ ಬಗ್ಗೆ, ‘ನಾನು ಈ ಹಿಂದೆಯೇ ನಿಮಗೆ ಹೇಳಿರಲಿಲ್ಲವೇ’ ಎಂದು ಖಂಡಿತವಾಗಿಯೂ ನಾನು ಹೇಳಲು ಇಷ್ಟಪಡಲಾರೆ. ಇದಕ್ಕೆ ವಿರುದ್ಧವಾದುದನ್ನೇ ಹೇಳಲು ನಾನು ಆಶಿಸುವೆ. ‘ಕೇಜ್ರಿವಾಲ್‌ ಅವರು ರಾಷ್ಟ್ರೀಯ ರಾಜಕಾರಣಿಯಾಗಿ ಬೆಳೆಯುತ್ತಿದ್ದಂತೆ ಶಾಂತಿ, ಸಹನೆಯ ಮಧ್ಯಮ ಮಾರ್ಗ ಅನುಸರಿಸುತ್ತಾರೆ.

ಸಾರ್ವಜನಿಕ ಬದುಕಿನಲ್ಲಿ ಉನ್ನತ ಹುದ್ದೆ ನಿಭಾಯಿಸುವುದರ ಜತೆಗೆ ನಿರಂತರವಾಗಿ ಬಂಡಾಯಗಾರನಾಗಿಯೂ ಇರಲು ಸಾಧ್ಯವಿಲ್ಲ’ ಎಂದು 2014ರಲ್ಲಿ ಪ್ರಕಟವಾದ ನನ್ನ ಪುಸ್ತಕ ‘ಆ್ಯಂಟಿಸಿಪೇಟಿಂಗ್‌ ಇಂಡಿಯಾ’ದಲ್ಲಿ ನಾನು ಬರೆದಿದ್ದೆ. ಹಾಗೆಂದು ನಾನು ಭಾವಿಸಿದ್ದೆ ಕೂಡ. ಅವರ ಬಗೆಗಿನ ನನ್ನ ಆ ಲೆಕ್ಕಾಚಾರ ತಪ್ಪಾಗಿತ್ತು ಎಂದು ಈಗ ಅನಿಸುತ್ತಿದೆ.

ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ಜನಪ್ರಿಯತೆ ಕಂಡು ಹತಾಶರಾಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಮುಗಿಸಲೂಬಹುದು ಎಂದು ಕೇಜ್ರಿವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಬೆಂಬಲಿಗರು ಮತ್ತು ಇತರರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಈ ಹೇಳಿಕೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹೊಸ ತಿರುವು ನೀಡಲಿದೆ. ಕೇಜ್ರಿವಾಲ್‌ ಅವರ ಹೇಳಿಕೆಯು ರಾಜಕೀಯವು ಯಾವ ಕೀಳು ಮಟ್ಟ ತಲುಪಬಹುದು ಎನ್ನುವುದಕ್ಕೆ ನಿದರ್ಶನ ಎಂದು ಹೇಳಲು ನಾನು ನಾಚಿಕೆಪಡಲಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಂತರದ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ರಾಜಕೀಯ ಮುಖಂಡರಾಗಿ ರಾಹುಲ್‌ ಗಾಂಧಿ ಬದಲಿಗೆ ಅರವಿಂದ ಕೇಜ್ರಿವಾಲ್‌ ದೇಶದಾದ್ಯಂತ ಸುದ್ದಿ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕೇಜ್ರಿವಾಲ್‌ ಅಭಿಮಾನಿಗಳ ಸಂಖ್ಯೆಯು ಎಲ್ಲೆಡೆ ದಿನೇ ದಿನೇ ಹೆಚ್ಚುತ್ತಿದೆ.

ಮೋದಿ ಅವರೇ ಲೋಕಸಭಾ  ಚುನಾವಣೆ ಸಂದರ್ಭದಲ್ಲಿ ಕೇಜ್ರಿವಾಲ್‌ ಅವರೊಬ್ಬ ‘ಎಕೆ–49’ (ದೆಹಲಿ ಮುಖ್ಯಮಂತ್ರಿಯಾಗಿ ಅವರ ಮೊದಲ ಅವಧಿ 49 ದಿನಗಳಿಗೆ ಕೊನೆಗೊಂಡಿತ್ತು) ಎಂದು ಮೂದಲಿಸಿ ಅವರ ವಿರುದ್ಧ ವಾಗ್ದಾಳಿ ಆರಂಭಿಸಿದ್ದರು. 

ADVERTISEMENT

ಅದೊಂದು ಎರಡಲಗಿನ ಇರಿತವಾಗಿತ್ತು. ನಂತರದ ವಿಧಾನಸಭೆ ಚುನಾವಣೆಯಲ್ಲಿ 70 ಸೀಟುಗಳ ಪೈಕಿ 67 ಸೀಟುಗಳನ್ನು ಭರ್ಜರಿಯಾಗಿ ಗೆದ್ದು ಕೇಜ್ರಿವಾಲ್‌ ಅಧಿಕಾರಕ್ಕೆ ಬಂದರು.

ಚುನಾವಣೆ ನಂತರವೂ ಕೇಜ್ರಿವಾಲ್‌ ಮತ್ತು ಮೋದಿ ನಡುವಣ ವೈಯಕ್ತಿಕ ಕಲಹವೇನೂ ಕೊನೆಗೊಳ್ಳಲಿಲ್ಲ. ರಾಜಕೀಯ ಕೆಸರೆರಚಾಟವು ಇಬ್ಬರು ಸಮರ ಕಲಿಗಳ ನಡುವಣ ಹೋರಾಟದ ಸ್ವರೂಪ ಪಡೆದುಕೊಂಡಿತು.

ಮುಖ್ಯಮಂತ್ರಿಯೊಬ್ಬರು ದೇಶದ ಪ್ರಧಾನಿ ವಿರುದ್ಧ ಸಮರ ಸಾರಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಎನ್‌.ಟಿ.ರಾಮರಾವ್‌, ಜ್ಯೋತಿ ಬಸು, ಮಾಯಾವತಿ ಅವರೂ ಕೇಂದ್ರದ ಜತೆ ಮಾತಿನ ಜಟಾಪಟಿ ನಡೆಸಿದ್ದರು. ಈ ವಿಷಯದಲ್ಲಿ ಪಂಜಾಬ್‌ನ ಅಕಾಲಿಗಳೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಇತ್ತೀಚಿನ ದಿನಗಳಲ್ಲಿ ನಿತೀಶ್‌ ಕುಮಾರ್‌, ಅಖಿಲೇಶ್‌ ಯಾದವ್‌, ಮಮತಾ ಬ್ಯಾನರ್ಜಿ ಅವರೂ ಸಮಯ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತಿನ ಚಕಮಕಿ ನಡೆಸುತ್ತಲೇ ಸುದ್ದಿ ಮಾಡುತ್ತಿದ್ದಾರೆ.

ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡ ಮುಖ್ಯಮಂತ್ರಿಗಳ ಕುರ್ಚಿ ಅಲುಗಾಡಿಸಿದ ಸಂದರ್ಭಗಳಲ್ಲಿ  ವ್ಯಕ್ತವಾದ ಕೋಪತಾಪಗಳೂ ಸೀಮಿತ ಪರಿಧಿಯಲ್ಲಿದ್ದವು. ಆದರೆ, ಕೇಜ್ರಿವಾಲ್‌ ಅವರು ಪ್ರಧಾನಿ ವಿರುದ್ಧ ಹೊಸ ಬಗೆಯ ಸಮರವನ್ನೇ ಸಾರಿದ್ದಾರೆ.

ಪ್ರಧಾನಿ ತಮ್ಮನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ಮುಖ್ಯಮಂತ್ರಿಯೊಬ್ಬರು ಆರೋಪಿಸಿರುವುದು ಮಾಮೂಲಿ ನಿಂದನಾತ್ಮಕ ರಾಜಕೀಯ ಹೇಳಿಕೆಯಾಗಷ್ಟೇ ಉಳಿದಿಲ್ಲ. ಇದಕ್ಕೆ ಬರೀ  ಎಎಪಿಯನ್ನಷ್ಟೇ ದೂಷಿಸುವಂತಿಲ್ಲ.

ಮೋದಿ ಅವರು 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಪರವಾಗಿ ನಡೆಸಿದ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಸೋನಿಯಾ ಗಾಂಧಿ ಕುಟುಂಬದ ಬಗ್ಗೆ ಸುಸಂಸ್ಕೃತವಲ್ಲದ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದರು.

‘ಗಾಂಧಿ ಕುಟುಂಬದ ಸದಸ್ಯರು ಚಾಲಕ, ಗುಮಾಸ್ತ ಹುದ್ದೆ ನಿಭಾಯಿಸಲೂ ಲಾಯಕ್ಕಾಗಿಲ್ಲ. ಸೋನಿಯಾ ಅವರ ಪೂರ್ವಾಪರ ಗೊತ್ತಿದ್ದವರು ಅಥವಾ ರಾಜೀವ್‌ ಗಾಂಧಿ ಅವರನ್ನು ಮದುವೆಯಾಗುವ ಮುಂಚೆ ಅವರೇನಾಗಿದ್ದರು ಎನ್ನುವುದನ್ನು ತಿಳಿದವರು ಅವರಿಗೆ ಬಾಡಿಗೆ ಮನೆಯನ್ನೂ ನೀಡುವುದಿಲ್ಲ.

ಸೋನಿಯಾ ಅವರು ಪಕ್ಷದ ಅಧ್ಯಕ್ಷೆಯಾಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷವು ವಂದೇ ಮಾತರಂ ಬದಲಿಗೆ ವಂದೇ ಮಾತಾ ರೋಂ ಘೋಷಣೆ ಕೂಗಲು ಆರಂಭಿಸಿದೆ’ ಎಂದೆಲ್ಲ ಮೋದಿ ಅವರು ಗಾಂಧಿ ಕುಟುಂಬವನ್ನು ಹೀಯಾಳಿಸಿ ಮಾತನಾಡಿದ್ದರು.

ಆದರೆ, ಬಿಜೆಪಿಯು ಮೋದಿ ಅವರ ಇಂತಹ ವಾಗ್ದಾಳಿಯಿಂದ ಅಂತರ ಕಾಯ್ದುಕೊಂಡಿತ್ತು. ಪಕ್ಷದ ಆಗಿನ ಅಧ್ಯಕ್ಷ ವೆಂಕಯ್ಯ ನಾಯ್ಡು ಮೋದಿ ವಾಗ್ದಾಳಿ ಬಗ್ಗೆ ತಮ್ಮ ಅಸಂತೋಷ ಹೊರ ಹಾಕಿದ್ದರು.

ಹೀಗಾಗಿ ಮೋದಿ ನಂತರದ ದಿನಗಳಲ್ಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡುವಾಗ ತಮ್ಮ ನಾಲಗೆಗೆ ಕಡಿವಾಣ ಹಾಕಿಕೊಂಡಿದ್ದರು. 2004ರಲ್ಲಿ ನನ್ನ ಜತೆಗಿನ ‘ವಾಕ್‌ ದ ಟಾಕ್‌’ ಕಾರ್ಯಕ್ರಮದಲ್ಲಿ ಮೋದಿ ಅವರು ಈ ಪ್ರಸಂಗದಿಂದ ದೂರ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರು.

‘ಕ್ರಿಕೆಟ್‌ ಆಟದಲ್ಲಿಯೂ ಕೆಲವೊಮ್ಮೆ ಬೌಲರ್‌ ತಪ್ಪಾಗಿ ನೋ ಬಾಲ್‌ ಅಥವಾ ವೈಡ್‌ ಬಾಲ್‌ ಎಸೆಯುತ್ತಾನೆ’ ಎಂದು ಹೇಳಿ ತಮ್ಮಿಂದಾದ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಸೋನಿಯಾ ಗಾಂಧಿ ಅವರೂ ಮೋದಿ ಅವರನ್ನು ‘ಸಾವಿನ ವ್ಯಾಪಾರಿ’ (ಮೌತ್‌ ಕಾ ಸೌದಾಗರ್‌) ಎಂದು ಬಣ್ಣಿಸಿ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಅವರು ಯಾವತ್ತೂ ವಿಷಾದ ವ್ಯಕ್ತಪಡಿಸಿದ್ದಾಗಲಿ, ತಮ್ಮ ಮಾತನ್ನು ಹಿಂದಕ್ಕೆ ಪಡೆದಿದ್ದಾಗಲಿ ಇಲ್ಲ.

ಆದರೆ, ಪಕ್ಷದ ಅಧ್ಯಕ್ಷೆ ಸೋನಿಯಾ ಅವರ ಇಂತಹ ಟೀಕಾಪ್ರಹಾರಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿಯೇ ಕೆಲಮಟ್ಟಿಗೆ ಆಕ್ಷೇಪ ಕೇಳಿಬಂದಿತ್ತು. ಸೋನಿಯಾ ಅವರು ಮತ್ತೆಂದೂ ಆ ಮಾತನ್ನು ಪುನರುಚ್ಚರಿಸಲಿಲ್ಲ.

ಈ ಘಟನೆಗಳಿಗೆ ಹೋಲಿಸಿದರೆ, ಕೇಜ್ರಿವಾಲ್‌ ಪ್ರಕರಣ ತುಂಬ ಭಿನ್ನವಾಗಿದೆ. ಅವರು ತಮ್ಮ ಈ ತೀಕ್ಷ್ಣ ಹೇಳಿಕೆಗೆ ವಿಷಾದವನ್ನಾಗಲಿ, ಪಶ್ಚಾತ್ತಾಪವನ್ನಾಗಲಿ ವ್ಯಕ್ತಪಡಿಸಿಲ್ಲ. ಎಎಪಿಯ ಕೆಲವರು ಪ್ರಚೋದಿತ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿರುವಾಗಲೇ ಕೇಜ್ರಿವಾಲ್‌ 10 ದಿನಗಳ ವಿಪಶ್ಶನ ಧ್ಯಾನಕ್ಕೆ (ಮೌನವ್ರತ) ಮೊರೆ ಹೋಗಿದ್ದಾರೆ. ಅವರ ಟೀಕೆ ಸಾಂವಿಧಾನಿಕ ಬಿಕ್ಕಟ್ಟನ್ನೂ ಒಳಗೊಂಡಿದೆ.

‘ಪ್ರಧಾನಿಯೇ ನಿಮ್ಮನ್ನು ಕೊಲ್ಲಲು ಉದ್ದೇಶಿಸಿದ್ದಾರೆ ಎನ್ನುವುದೇ ನಿಮ್ಮ ಆಲೋಚನೆಯಾಗಿದ್ದರೆ ನೀವು ಯಾರ ಸಹಾಯ ಯಾಚಿಸುವಿರಿ? ಅಥವಾ ಯಾರಿಂದ ರಕ್ಷಣೆ ಕೇಳುವಿರಿ? ನಿಮ್ಮ ‘ಅರೆ –ರಾಜ್ಯ’ದಲ್ಲಿ ಪೊಲೀಸರು ನಿಮ್ಮ  ನಿಯಂತ್ರಣದಲ್ಲಿಯೇ ಇಲ್ಲದಿರುವಾಗ ನೀವು ಅವರನ್ನೂ ನಂಬುವಂತಿಲ್ಲ.

ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಭವಿಸಿರುವ ಇಂತಹ ಅಸಾಮಾನ್ಯ ಬಿಕ್ಕಟ್ಟನ್ನು ನೀವು ಹೇಗೆ  ಬಗೆಹರಿಸಿಕೊಳ್ಳುವಿರಿ’ ಎಂದು ನಾನು ಕೇಜ್ರಿವಾಲ್‌ ಅವರನ್ನು ಕೇಳಲು ಬಯಸುತ್ತೇನೆ. ಈ ಬಿಕ್ಕಟ್ಟಿನಲ್ಲಿ ಮಧ್ಯ ಪ್ರವೇಶಿಸಲು ಯಾರೊಬ್ಬರಿಗೂ ಸಂವಿಧಾನಾತ್ಮಕ ಅಧಿಕಾರ ಇಲ್ಲ.

ರಾಷ್ಟ್ರಪತಿಯು ಮುಖ್ಯಮಂತ್ರಿಗೆ ಉಪದೇಶ ಅಥವಾ ಸಲಹೆ ನೀಡಲೂ ನಮ್ಮಲ್ಲಿ ಅವಕಾಶ ಇಲ್ಲ. ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅಂತಹ ಪ್ರಯತ್ನವನ್ನೂ ಮಾಡಲಾರರು.

ಹಾಗಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡಲು ಹೇಗೆ ಸಾಧ್ಯವಾದೀತು? ಅದರಲ್ಲೂ ದೇಶದ ರಾಜಧಾನಿಯನ್ನು ಒಳಗೊಂಡಿರುವ, ಸಂಕೀರ್ಣ ಸ್ವರೂಪದ ಸಂವಿಧಾನಾತ್ಮಕ ವ್ಯವಸ್ಥೆಯುಳ್ಳ ರಾಜ್ಯವು ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಜತೆ ಹೇಗೆ ಸಹಕರಿಸಬಹುದು ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತದೆ.

‘ಎಎಪಿ’ಯ ಜನಪ್ರತಿನಿಧಿಗಳು, ಕಾರ್ಯಕರ್ತರು, ದೆಹಲಿ ಸರ್ಕಾರಿ ನೌಕರರ ವಿರುದ್ಧ ಪೊಲೀಸರು ಮತ್ತು ಸಿಬಿಐ ಕೈಗೊಂಡಿರುವ ಕ್ರಮಗಳು  ಕೆಟ್ಟದ್ದಾಗಿದ್ದವು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪೊಲೀಸರು ಮತ್ತು ಸಿಬಿಐ ವರ್ತನೆಯು ಸಮರ್ಥನೀಯವೂ ಆಗಿಲ್ಲ.

ದೆಹಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಕೊನೆಗೊಂಡ ನಂತರವೂ ಬಿಜೆಪಿ ಮತ್ತು ಎಎಪಿ ನಡುವಣ ರಾಜಕೀಯ ಆರೋಪ–ಪ್ರತ್ಯಾರೋಪಗಳು ಕೊನೆಗೊಂಡು ಪರಿಸ್ಥಿತಿ ಸಹಜಗೊಂಡಿಲ್ಲ ಎಂಬುದೂ ನಿಜ. ಸಂವಿಧಾನಾತ್ಮಕ ಔಚಿತ್ಯಕ್ಕೆ ಬಾಧ್ಯರಾಗಬೇಕಾಗಿದ್ದ ಪ್ರಧಾನಿ ಮತ್ತು ಮುಖ್ಯಮಂತ್ರಿ ಇಬ್ಬರೂ ಈಗಲೂ ಪರಸ್ಪರ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದ್ದಾರೆ.

ಬಿಜೆಪಿ ಹತಾಶೆಗೊಂಡಿದ್ದರೆ, ಎಎಪಿಯು ಯೋಜಿತ ರೀತಿಯ ಕಾರ್ಯತಂತ್ರ ಹೆಣೆಯುವಲ್ಲಿ ಮಗ್ನವಾಗಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರನ್ನು ಬದಿಗಿಟ್ಟು ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಎಎಪಿ ರಾಜಕೀಯ ತಂತ್ರ ರೂಪಿಸುತ್ತಿದೆ. ಇಂತಹ ಕಾರ್ಯ ಯೋಜನೆಯು ಎಎಪಿ ಪಾಲಿಗೆ ಇದುವರೆಗೆ ಫಲ ನೀಡಿದೆ. ಆದರೆ ನಯ ವಿನಯ, ಶಿಷ್ಟಾಚಾರಗಳನ್ನೆಲ್ಲ ಗಾಳಿಗೆ ತೂರಲಾಗಿದೆ.

ಈ ವಿವಾದವು ಬರೀ ರಾಜಕೀಯ ಭಾಷೆಗಷ್ಟೇ ಸೀಮಿತವಾಗಿಲ್ಲ. ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಮಾಡುತ್ತಿರುವ ರಂಪಾಟದಂತೆ ಈ ಬೆಳವಣಿಗೆಯು ಭಾರತದ ರಾಜಕಾರಣದಲ್ಲೂ ದಿಗಿಲು ಮೂಡಿಸಿದೆ. ಎಎಪಿಯ ಹಿರಿಯ ನಾಯಕರೊಬ್ಬರು ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಯಾರೊಬ್ಬರೂ ನಿರ್ಲಕ್ಷಿಸುವಂತಿಲ್ಲ. ‘ದೆಹಲಿ ಪೊಲೀಸರು ತಮ್ಮ ನಡವಳಿಕೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಒಳಿತು.

ಮುಂದೊಂದು ದಿನ ಪಂಜಾಬ್‌ ಪೊಲೀಸರೂ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ದಿನಗಳು ಬರಬಹುದು. ಎಚ್ಚರದಿಂದ ಇರಿ’ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆಯಲ್ಲಿ ಅವರು ಈ ರೀತಿ ಮಾತನಾಡಿದ್ದಾರೆ.

ರಾಜಕಾರಣಿಗಳಿಗೆ ಏನಾದರೂ ಮಾತನಾಡುವ ಚಪಲ ಇದ್ದೇ ಇರುತ್ತದೆ. ಅವರು ಹೇಳಿದ್ದೆಲ್ಲವೂ ವಾಸ್ತವದಲ್ಲಿ ನಿಜವಾಗಲಾರದು. ಬಹುತೇಕ ಸಂದರ್ಭಗಳಲ್ಲಿ ಅದೊಂದು ಒಣ ರಾಜಕೀಯ ಭರವಸೆಯಷ್ಟೇ ಆಗಿರುತ್ತದೆ.

ಆದರೆ, ಈ ಬಗ್ಗೆ ಖಚಿತ ನಿಲುವಿಗೆ ಬರುವುದೂ ಸರಿಯಲ್ಲ. ರಾಜಕೀಯದಲ್ಲಿ ಏನೆಲ್ಲಾ ನಡೆಯಬಹುದು ಎನ್ನುವುದಕ್ಕೆ ಹಲವು ಪೂರ್ವ ನಿದರ್ಶನಗಳು ಇವೆ. ಪಾಕಿಸ್ತಾನದಲ್ಲಿ ಬೆನಜೀರ್ ಭುಟ್ಟೊ ಅವರ ಸರ್ಕಾರ ಇದ್ದ ಸಂದರ್ಭದಲ್ಲಿ ಅಲ್ಲಿನ ಪಂಜಾಬ್‌ ರಾಜ್ಯ ಸರ್ಕಾರವು ನವಾಜ್‌ ಷರೀಫ್‌ ಅವರ ನಿಯಂತ್ರಣದಲ್ಲಿತ್ತು. ಈ ರಾಜ್ಯ ಸರ್ಕಾರವು ಭುಟ್ಟೊ ಮಂತ್ರಿಮಂಡಳದ ಸಚಿವರೊಬ್ಬರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿತ್ತು.

ಇಸ್ಲಾಮಾಬಾದ್‌ನಲ್ಲಿ ನೆಲೆಸಿದ್ದ ಸಚಿವರನ್ನು ಬಂಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇಸ್ಲಾಮಾಬಾದ್‌ ನಗರವು ಒಕ್ಕೂಟದ ಆಡಳಿತಕ್ಕೆ ಒಳಪಟ್ಟ ರಾಜಧಾನಿ ಪ್ರದೇಶವಾಗಿತ್ತು. ಹೀಗಾಗಿ ಪಂಜಾಬ್‌ ಪೊಲೀಸರ ಕೈ ಕಟ್ಟಿಹಾಕಿದಂತಾಗಿತ್ತು.

ಇಸ್ಲಾಮಾಬಾದ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಪಂಜಾಬ್‌ ಸರ್ಕಾರದ ನಿಯಂತ್ರಣದಲ್ಲಿನ ಪ್ರದೇಶದ ಮೂಲಕವೇ ಹಾದು ಹೋಗಿತ್ತು. ಈ ಪ್ರದೇಶದಲ್ಲಿ ಸಚಿವರನ್ನು ಬಂಧಿಸುವ ಅವಕಾಶ ಪಂಜಾಬ್‌ ಪೊಲೀಸರಿಗೆ ಇತ್ತು. ಆದರೆ, ಪೊಲೀಸರ ಕೈಗೆ ಸಿಗಬಾರದೆನ್ನುವ ಕಾರಣಕ್ಕೆ ಸಚಿವರು ಹೆಲಿಕಾಪ್ಟರ್‌ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು!

ಸಂವಿಧಾನಾತ್ಮಕ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆ ನಿಜಕ್ಕೂ ತಮಾಷೆಯ ವಿಷಯವಲ್ಲ. ಪ್ರತಿಯೊಬ್ಬರೂ ಮತ್ತು ಪ್ರತಿ ರಾಜ್ಯವೂ ಪ್ರಬುದ್ಧ ಹೊಣೆಗಾರಿಕೆಯಿಂದ ತಮ್ಮ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ ಎನ್ನುವ ನಂಬಿಕೆಯ ಆಧಾರದ ಮೇಲೆ ಒಕ್ಕೂಟ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ.

ಯಾರೊಬ್ಬರೂ ಶಾಶ್ವತವಾಗಿ ಅಧಿಕಾರದಲ್ಲಿಯೂ ಇರುವುದಿಲ್ಲ. ಮೋದಿ ಸರ್ಕಾರ ತಮ್ಮನ್ನು ಸಂಪೂರ್ಣವಾಗಿ ದಮನ ಮಾಡಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಕೇಜ್ರಿವಾಲ್‌ ವಾದಿಸುತ್ತಾರೆ.

ಇಂತಹ ಆರೋಪ ಮಾಡುವುದರಲ್ಲಿಯೇ ಅವರು ಅತಿಯಾದ ರಂಜನೆ ಪಡೆಯುತ್ತಿದ್ದಾರೆ. ರಾಜಕೀಯದ ಒಟ್ಟಾರೆ ಸ್ವರೂಪವನ್ನೇ ಬದಲಿಸುವ ಬಗ್ಗೆ ತಾವೇ ನೀಡಿದ್ದ ಭರವಸೆಗೆ ವ್ಯತಿರಿಕ್ತವಾಗಿ ಕೇಜ್ರಿವಾಲ್‌ ನಡೆದುಕೊಳ್ಳುತ್ತಿದ್ದಾರೆ. ಅವರ ಭವಿಷ್ಯದ ರಾಜಕೀಯದ ನಡೆ ಏನಿರಬಹುದು ಎನ್ನುವುದನ್ನು ನಾವು ಸಮಾಧಾನಚಿತ್ತದಿಂದಲೇ ನಿರೀಕ್ಷಿಸೋಣ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.