ದಿನನಿತ್ಯದ ಬದುಕಿನಲ್ಲಿ ಸ್ನಾನದ ಕೋಣೆ ಹಾಗೂ ಶೌಚಾಲಯ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಮನೆಯಲ್ಲಿ ಅಡುಗೆ ಕೋಣೆ, ಮಲಗುವ ಕೋಣೆ ಎಷ್ಟು ಮುಖ್ಯವೋ ಸ್ನಾನದ ಕೋಣೆ ಹಾಗೂ ಶೌಚಾಲಯವೂ ಅಷ್ಟೇ ಮುಖ್ಯ. ಹಿಂದೆ ಸ್ನಾನದ ಕೋಣೆ ಹಾಗೂ ಶೌಚಾಲಯಗಳು ಮನೆಯಿಂದ ಹೊರಗಿರುತ್ತಿದ್ದವು. ಆದರೆ ಕ್ರಮೇಣ ಆಧುನಿಕತೆಯ ಪ್ರಭಾವದಿಂದ ಸ್ನಾನದ ಕೋಣೆ ಹಾಗೂ ಶೌಚಾಲಯ ಮನೆಯ ಒಳಗೆ ಸ್ಥಾನ ಪಡೆದುಕೊಂಡವು.
ಇಂದಿಗೂ ಹಳ್ಳಿಗಳಲ್ಲಿ ಸ್ನಾನದ ಕೋಣೆ ಹಾಗೂ ಶೌಚಾಲಯ ಮನೆಯ ಹೊರಗಡೆ ಇರುತ್ತವೆ. ಆದರೆ ನಗರಗಳಲ್ಲಿ ಸ್ಥಳದ ಅಭಾವ ಹಾಗೂ ಕಳ್ಳಕಾಕರ ಭಯದಿಂದ ಶೌಚಾಲಯವನ್ನು ಮನೆಯ ಒಳಗೆ ನಿರ್ಮಿಸಿಕೊಳ್ಳುತ್ತಾರೆ. ಒಂದು ಮನೆಗೆ ಕೇವಲ ಒಂದೇ ಸ್ನಾನದ ಕೋಣೆ ಹಾಗೂ ಶೌಚಾಲಯ ಇರುತ್ತಿದ್ದವು.
ಆದರೆ ಜನರು ಐಷಾರಾಮಿ ಜೀವನದತ್ತ ಮುಖ ಮಾಡಲು ಪ್ರಾರಂಭಿಸಿದಾಗಿನಿಂದ ಮನೆಗಳಲ್ಲಿ ಎರಡಕ್ಕಿಂತ ಹೆಚ್ಚು ಸ್ನಾನದ ಕೋಣೆ ಹಾಗೂ ಶೌಚಾಲಯಗಳು ತಲೆಎತ್ತಲು ಪ್ರಾರಂಭವಾಯಿತು. ಆದರೆ ಮೆಟ್ರೊ ನಗರಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಕೆಲಸಕ್ಕೆ ಹೋಗುವುದು ಮತ್ತು ಮಕ್ಕಳು ಶಾಲೆಗಳಿಗೆ ಹೋಗುವ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಸ್ನಾನದ ಕೋಣೆ ಹಾಗೂ ‘ಅಟ್ಯಾಚ್ಡ್ ಬಾತ್‌ರೂಮ್’ ಅಗತ್ಯವಾಗಿ ಹೋಗಿದೆ.
ಹೀಗಾಗಿಯೇ ಬಾಡಿಗೆ ಮನೆ ಹುಡುಕುವಾಗ ಹೆಚ್ಚಿನ ಜನರು ಕಾಮನ್ ಬಾತ್‌ರೂಮ್ ಜೊತೆಗೆ ಮಲಗುವ ಕೋಣೆಗೆ ‘ಅಟ್ಯಾಚ್ಡ್ ಬಾತ್‌ರೂಮ್’ ಇದೆಯೇ ಎಂದು ಕೇಳುತ್ತಾರೆ. ಇದರಿಂದಾಗಿ ಈಗ ಬಾಡಿಗೆಗೆ ನೀಡಲು ಕಟ್ಟುವ ಮನೆಗಳಲ್ಲಿ ಕಾಮನ್ ಮತ್ತು ‘ಅಟ್ಯಾಚ್ಡ್ ಬಾತ್‌ರೂಮ್’ ಸಾಮಾನ್ಯವಾಗಿ ಹೋಗಿದೆ. ಅದರಲ್ಲೂ ಎರಡು ಕೋಣೆಗಳಿರುವ ಮನೆಯಲ್ಲಂತೂ ಅದು ಕಡ್ಡಾಯ ಎನ್ನುವಂತಾಗಿದೆ.
ಹೊಸದಾಗಿ ಮನೆ ಕಟ್ಟುವವರು ಕುಟುಂಬದಲ್ಲಿ ವಯಸ್ಸಾದವರು, ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಮಕ್ಕಳು ಇದ್ದಾಗ ಅವರಿಗೇ ಒಂದು ಪ್ರತ್ಯೇಕ ಕೋಣೆ ಹಾಗೂ ಅದಕ್ಕೆ ‘ಅಟ್ಯಾಚ್ಡ್ ಬಾತ್‌ರೂಮ್’ ವ್ಯವಸ್ಥೆ ಕಲ್ಪಿಸುವ ಕುರಿತು ಮೊದಲೇ ಯೋಚಿಸಿರುತ್ತಾರೆ. ಉಳಿದಂತೆ ಮನೆಗೆ ಬರುವ ಅತಿಥಿಗಳು ಬಳಸಲು ಒಂದು ಬಾತ್‌ರೂಮ್ ಅಥವಾ ‘ಅಟ್ಯಾಚ್ಡ್ ಬಾತ್‌ರೂಮ್’ ಅನ್ನು ಸಹ ಕಟ್ಟಲು ಯೋಚಿಸುತ್ತಾರೆ.
ಸಾಮಾನ್ಯವಾಗಿ ಮನೆಯ ಹೊರಗೆ ಅಥವಾ ಒಳಭಾಗದಲ್ಲಿ ಕೇವಲ ಶೌಚಾಲಯ ನಿರ್ಮಿಸುವುದಾದರೆ ಕನಿಷ್ಠ 3X4 ಅಡಿ ಸ್ಥಳದಲ್ಲಿ ಒಂದು ಶೌಚಾಲಯವನ್ನು ನಿರ್ಮಿಸಬಹುದು. ಉಳಿದಂತೆ ಅದರ ಮೇಲೆ ಎಷ್ಟು ಸ್ಥಳವನ್ನು ಬೇಕಾದರೂ ಶೌಚಾಲಯಕ್ಕೆ ಮೀಸಲಿಡಬಹುದು.
ಇನ್ನು ಸ್ನಾನದ ಕೋಣೆ ವಿಷಯಕ್ಕೆ ಬಂದರೆ ಮಧ್ಯಮವರ್ಗದವರು 4X5 ಅಡಿಯಷ್ಟು ಸ್ಥಳದಲ್ಲಿ ಸ್ನಾನದ ಕೋಣೆಗಳನ್ನು ನಿರ್ಮಿಸುತ್ತಾರೆ. ಇದರಲ್ಲಿ ಸ್ನಾನ ಮಾಡಲು ಮಾತ್ರ ಅವಕಾಶ ಇರುತ್ತದೆ. ‘ಅಟ್ಯಾಚ್ಡ್ ಬಾತ್‌ರೂಮ್’ ನಿರ್ಮಿಸಲು 5X7 ಅಡಿಯಲ್ಲಿ ಒಂದು ಕಮೋಡ್ ಹಾಗೂ ಸ್ನಾನ ಮಾಡಲು ಸ್ವಲ್ಪ ವಿಶಾಲವಾದ ಸ್ಥಳ ದೊರೆಯುತ್ತದೆ. ಇದು ಈಗ ಹೆಚ್ಚು ಚಾಲ್ತಿಯಲ್ಲಿರುವ ಮಾದರಿ. ಮನೆಯೊಳಗೆ ಸ್ಥಳಾವಕಾಶ ಕಡಿಮೆ ಇದ್ದಾಗ 5X5 ಅಡಿಯಷ್ಟು ಜಾಗದಲ್ಲೂ ಬಾತ್‌ರೂಮ್ ನಿರ್ಮಿಸುತ್ತಾರೆ.
ಸಿಂಕ್, ಮೇಕಪ್ ಮಾಡಲು ಸ್ಥಳ, ಕಬೋರ್ಡ್, ಲಾಂಡ್ರಿ, ಬಾತ್‌ಟಬ್, ಶವರ್ ವ್ಯವಸ್ಥೆ ಹಾಗೂ ಪ್ರತ್ಯೇಕ ವಿಭಜಕ ಗೋಡೆ ಹೊಂದಿರುವ ಶೌಚಾಲಯ ವ್ಯವಸ್ಥೆ ಮಾಡಿಕೊಳ್ಳುವವರು 10X10 ಮತ್ತು ಅದಕ್ಕೂ ಹೆಚ್ಚಿನ ಸ್ಥಳವನ್ನು ಮೀಸಲಿಡುತ್ತಾರೆ. “ಅತಿಥಿಗಳು ಬಂದಾಗ ಉಳಿಯುವ ಗೆಸ್ಟ್ ರೂಮ್‌ಗಳಲ್ಲಿ 4X5 ಅಡಿ ಸ್ಥಳದಲ್ಲಿ ‘ಅಟ್ಯಾಚ್ಡ್ ಬಾತ್‌ರೂಮ್’ ಕಟ್ಟಬಹುದು. ಇದರಲ್ಲಿ ಸ್ನಾನ ಮಾಡಲು ಸ್ಥಳ ಹಾಗೂ ಒಂದು ಕಮೋಡ್ ಫಿಕ್ಸ್ ಮಾಡಬಹುದು.
ಆದರೆ ಸ್ವಲ್ಪ ಇಕ್ಕಟ್ಟಾಗಿರುತ್ತದೆ. ಹೀಗಾಗಿ ಇದು ಕೇವಲ ಗೆಸ್ಟ್‌ರೂಂಗಳಿಗೆ ಹಾಗೂ ಚಿಕ್ಕದಾಗಿರುವ ಬಾಡಿಗೆ ಮನೆಗಳಿಗೆ ಸರಿಹೊಂದುತ್ತದೆ. ‘ಅಟ್ಯಾಚ್ಡ್ ಬಾತ್‌ರೂಮ್’ ಕಟ್ಟುವಾಗ ವಾಸ್ತು ಪ್ರಕಾರ ಕಟ್ಟುವುದು ಸುಲಭದ ಮಾತಲ್ಲ. ಹೀಗಾಗಿ ರೂಂನಲ್ಲಿ ಎಷ್ಟು ಹಾಗೂ ಎಲ್ಲಿ ಸ್ಥಳಾವಕಾಶ ಸಿಗುತ್ತದೆಯೋ ಅದಕ್ಕೆ ತಕ್ಕಂತೆ ಕಟ್ಟುವುದು ಉತ್ತಮ.
ಇನ್ನು ಯಾವುದೇ ಬಾತ್‌ರೂಮ್ ಹಾಗೂ ಶೌಚಾಲಯ ನಿರ್ಮಿಸುವಾಗ ‘ಕರ್ವ್ಡ್ ವಾಲ್ಸ್’, ‘ಬಂಪ್ ಔಟ್’ ಒಂದಕ್ಕಿಂತ ಹೆಚ್ಚು ಗೋಡೆಗಳಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಪೈಪ್ ಅಳವಡಿಸುವುದರಿಂದ ವೆಚ್ಚ ಹೆಚ್ಚಾಗುತ್ತದೆ. ಒಳಾಂಗಣ ವಿನ್ಯಾಸ ಹೆಚ್ಚಾದಂತೆ ವೆಚ್ಚವೂ ಹೆಚ್ಚುತ್ತದೆ. ಕಾಮನ್ ಬಾತ್‌ರೂಮ್ ಹಾಗೂ ಶೌಚಾಲಯವನ್ನು ಕಟ್ಟುವಾಗ ಗಾಳಿ, ಬೆಳಕಿನ ವ್ಯವಸ್ಥೆ ಇದೆಯೇ ಎಂದು ಗಮನಿಸುವುದು ಮುಖ್ಯ’’ ಎನ್ನುತ್ತಾರೆ ಸಿವಿಲ್ ಎಂಜಿನಿಯರ್ ಶ್ರೀನಾಥ ಎಸ್.ವಿ.
ವಿನ್ಯಾಸ
‘ಅಟ್ಯಾಚ್ಡ್ ಬಾತ್‌ರೂಮ್’ ಕಟ್ಟುವಾಗ ಬಾಗಿಲು ತೆರೆದ ಕೂಡಲೇ ಶೌಚಾಲಯ ಕಾಣುವಂತೆ ಮಾಡಬಾರದು. ಬಾಗಿಲ ಹಿಂದೆ ಅಥವಾ ವಸ್ತುಗಳನ್ನು ಇಡಲು ಮಾಡುವ ಕಬೋರ್ಡ್ ಹಾಗೂ ಸಿಂಕ್ ಪಕ್ಕದಲ್ಲಿ ಮರೆಯಲ್ಲಿರುವಂತೆ ಕಮೋಡ್ ನಿರ್ಮಿಸುವುದು ಉತ್ತಮ. ಇನ್ನು ಕಮೋಡ್ ಕಾಣದಂತೆ ಪ್ಲಾಸ್ಟಿಕ್, ಪರದೆ ಅಥವಾ ಗಾಜಿನ ವಿಭಜಕ ಗೋಡೆಗಳನ್ನು ನಿರ್ಮಿಸಿಕೊಳ್ಳಬಹುದು. ಶವರ್ ಹಾಗೂ ಬಾತ್‌ಟಬ್ ಎರಡನ್ನೂ ಹೊಂದಿರುವವರು ಶವರ್‌ಗೆ ಪ್ರತ್ಯೇಕ ಪರದೆ ವ್ಯವಸ್ಥೆ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೇಡ್ ಶವರ್ ಬಾಕ್ಸ್‌ಗಳನ್ನು ಖರೀದಿಬಹುದು.
ಕಮೋಡ್‌ಗಳ ಆಯ್ಕೆ
ನೀರನ್ನು ಕಡಿಮೆ ಬಳಸಿಕೊಳ್ಳುವ ಕಮೋಡ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಜೊತೆಗೆ ಮನೆಯಲ್ಲಿ ಹಿರಿಯರು ಬಳಸುವ ಬಾತ್‌ರೂಮ್‌ಗಳಲ್ಲಿ ಕಮೋಡ್ ಬಳಸುವುದು ಉತ್ತಮ. ಕಾರಣ ಇದರಲ್ಲಿ ಯಾವುದೇ ಗಲೀಜು ಆಗುವುದಿಲ್ಲ. ನಿರ್ವಹಣೆ ಸುಲಭ. ಕಮೋಡ್‌ನಿಂದ ನೀರು ಸಿಡುದು ಜಾರಿ ಬೀಳುವ ಅಪಾಯ ಇರುವುದಿಲ್ಲ. ಒಂದು ವೇಳೆ ಭಾರತೀಯ ಶೈಲಿಯ ಶೌಚಾಲಯ ಇದ್ದಲ್ಲಿ, ಅದಕ್ಕೆ ಬೇಕಾದಲ್ಲಿ ವಿಭಜಕ ಗೋಡೆಗಳನ್ನು ನಿರ್ಮಿಸಿಕೊಳ್ಳುವುದು ಒಳ್ಳೆಯದು.
ಸಂಪರ್ಕಕ್ಕೆ: ಶ್ರೀನಾಥ– 9900656230
ಅಗತ್ಯಕ್ಕೆ ತಕ್ಕಷ್ಟು ಅಳತೆ
ಐಷಾರಾಮಿ ವಿಲ್ಲಾ ಹಾಗೂ ಮನೆಗಳನ್ನು ಕಟ್ಟಿಸುವವರು ಮಾತ್ರ ವಿಶಾಲವಾದ ‘ಅಟ್ಯಾಚ್ಡ್ ಬಾತ್‌ರೂಮ್’ ಕಟ್ಟಲು ಮನಸ್ಸು ಮಾಡುತ್ತಾರೆ. ಉಳಿದಂತೆ ಎಲ್ಲರೂ ‘ಅಟ್ಯಾಚ್ಡ್ ಬಾತ್‌ರೂಮ್’ಗೆ ಕಡಿಮೆ ಜಾಗ ಬಿಡುತ್ತಾರೆ. ಮನೆಗಳಲ್ಲಿ ಹಾಲ್ ಹಾಗೂ ರೂಮ್‌ಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುವ ಕಾರಣ ಎಷ್ಟು ಕಡಿಮೆ ಆಗುತ್ತದೆಯೋ ಅಷ್ಟು ಕಡಿಮೆ ಸ್ಥಳದಲ್ಲಿ ‘ಅಟ್ಯಾಚ್ಡ್ ಬಾತ್‌ರೂಮ್’ ಕಟ್ಟಿಸುತ್ತಾರೆ.
ಆದರೆ ಇಂದಿಗೂ ಕೆಲವರು ಮನೆಗಳ ಹೊರಗಡೆಯೇ ಶೌಚಾಲಯವನ್ನು ಕಟ್ಟಲು ಬಯಸುತ್ತಾರೆ. ಮನೆಯ ಹೊರಗಡೆ ಒಂದು ಶೌಚಾಲಯ ಕಟ್ಟಲು ಕನಿಷ್ಠ ₹50 ಸಾವಿರ ಬೇಕು. ಒಂದು ವೇಳೆ ನೀರಿನ ಸಂಪರ್ಕ ಬೇಡವಾದಲ್ಲಿ ₹25 ಸಾವಿರ ವೆಚ್ಚವಾಗುತ್ತದೆ. ಇದು ಎಷ್ಟು ಜಾಗದಲ್ಲಿ ಶೌಚಾಲಯವನ್ನು ನಿರ್ಮಿಸುತ್ತೀರೋ ಅದರ ಮೇಲೆ ತಗಲುವ ವೆಚ್ಚ ಅವಲಂಬಿಸಿರುತ್ತದೆ. ಇನ್ನು ‘ಅಟ್ಯಾಚ್ಡ್ ಬಾತ್‌ರೂಮ್’ ಅನ್ನು ಕಟ್ಟಲು ₹50 ಸಾವಿರದಿಂದ 2 ಲಕ್ಷದವರೆಗೆ ವೆಚ್ಚ ಮಾಡಹುದು.
ಉಳಿದಂತೆ ವಿಶಾಲವಾದ ಐಷಾರಾಮಿ ‘ಅಟ್ಯಾಚ್ಡ್ ಬಾತ್‌ರೂಮ್’ ನಿರ್ಮಿಸಲು ಅದರಲ್ಲಿ ಬಳಸುವ ಟೈಲ್ಸ್, ಗ್ರಾನೈಟ್, ಬಾತ್‌ಟಬ್, ಶವರ್, ಸಿಂಕ್ ಸೇರಿದಂತೆ ಒಟ್ಟಾರೆ ಸ್ಯಾನಿಟರಿ ಹಾಗೂ ಪ್ಲಂಬಿಗ್ ಫಿಟಿಂಗ್‌ಗಳ ಮೇಲೆ ವೆಚ್ಚ ನಿರ್ಧಾರವಾಗುತ್ತದೆ. ಆಗ ವೆಚ್ಚದ ಮಿತಿ ಲಕ್ಷವನ್ನೂ ದಾಟುತ್ತದೆ. ಕೆಲವರು ಚಿನ್ನದ ಲೇಪನದ ಟೈಲ್ಸ್‌ಗಳನ್ನೂ ಬಾತ್‌ರೂಮಗಳಿಗೆ ಬಳಸುತ್ತಾರೆ. ಆಗ ಅದರ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಹೀಗೆ ಜನರು ತಮ್ಮ ಅಗತ್ಯ ಹಾಗೂ ಸ್ಥಿತಿಗತಿಯ ಆಧಾರದ ಮೇಲೆ ಬಾತ್‌ರೂಮ್‌ಗಳ ನಿರ್ಮಾಣ ಮಾಡುತ್ತಾರೆ. ಆದರೆ ಇಂದಿಗೂ ಹೆಚ್ಚಿನ ಜನರು 5/7 ಅಡಿಯ ಜಾಗದಲ್ಲಿ ‘ಅಟ್ಯಾಚ್ಡ್ ಬಾತ್‌ರೂಮ್’ ನಿರ್ಮಿಸುವುದೇ ಹೆಚ್ಚು.
– ಶ್ರೀನಾಥ ಎಸ್.ವಿ.
ಶ್ರೀ ಕನ್ಸಲ್‌ಟೆಂಟ್ಸ್ ಮಾಲೀಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.