ADVERTISEMENT

ಅಗ್ಗದ ಮನೆ ನಿರ್ಮಾಣದತ್ತ `ರಿಯಲ್' ಚಿತ್ತ

ಈರಪ್ಪ ಹಳಕಟ್ಟಿ
Published 7 ಆಗಸ್ಟ್ 2013, 18:36 IST
Last Updated 7 ಆಗಸ್ಟ್ 2013, 18:36 IST
ಅಗ್ಗದ ಮನೆ ನಿರ್ಮಾಣದತ್ತ `ರಿಯಲ್' ಚಿತ್ತ
ಅಗ್ಗದ ಮನೆ ನಿರ್ಮಾಣದತ್ತ `ರಿಯಲ್' ಚಿತ್ತ   

ದಿನೇ ದಿನೇ ಬೆಲೆ ಏರಿಕೆಯ ಹೊರೆ. ನಗರಗಳಲ್ಲಿನ ಕಡಿಮೆ ಆದಾಯದ  ಕುಟುಂಬಗಳ ಪಾಡು ಹೇಳತೀರದು. ಒಂದೆಡೆ ಗಗನಮುಖಿಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ. ಇನ್ನೊಂದೆಡೆ ಪೆಟ್ರೋಲ್, ಪ್ರಯಾಣ ದರ ಏರಿಕೆ, ಮಕ್ಕಳ ಶಾಲಾ ಕಾಲೇಜು ಫೀ, ಇತರೆ ವೆಚ್ಚ ಇವುಗಳ ನಡುವೆ ಪ್ರತಿ ವರ್ಷ ತಪ್ಪದೆ ಹೆಚ್ಚುವ ಮನೆ ಬಾಡಿಗೆ ಬೇರೆ.

ಇವೆಲ್ಲವುಗಳಿಂದ ಹೈರಾಣಾದರೂ ಮನದ ಮೂಲೆಯಲ್ಲಿ ಪುಟ್ಟ `ಕನಸಿನ ಮನೆ'ಯ ಚಿತ್ರಣ ಬರೆದಿಟ್ಟುಕೊಳ್ಳುವುದನ್ನು ಮಾತ್ರ ಮರೆಯುವುದಿಲ್ಲ. ಮಹಾನಗರಗಳಲ್ಲಿ ಭೂಮಿ ಬೆಲೆಯಂತೂ ಗಗನಮುಖಿ. ಏರುತ್ತಿರುವ ನಿರ್ಮಾಣ ವೆಚ್ಚ. ಇದನ್ನೆಲ್ಲ ಕಂಡ ಕಡಿಮೆ ಆದಾಯ ವರ್ಗದ ಜನರ `ಕನಸಿನ ಮನೆ' ಕನಸಾಗಿಯೇ ಉಳಿದುಬಿಡುವ ಭೀತಿ.

ಮಾಸಿಕ ರೂ.10,000ದಿಂದ ರೂ.25,000ದವರೆಗೆ ಆದಾಯ ಗಳಿಸುವ ನಗರದ ಕುಟುಂಬಗಳು ಸರ್ಕಾರದ ಯಾವ ನೆರವೂ ಇಲ್ಲದೆ ತಮ್ಮ ಮಿತಿಯಲ್ಲಿಯೇರೂ10 ಲಕ್ಷದೊಳಗಿನ ವೆಚ್ಚದಲ್ಲಿ ಕನಸಿನ ಮನೆ ಕಟ್ಟಿಕೊಳ್ಳಲು ಬಯಸುತ್ತಾರೆ.

1.50 ಕೋಟಿ ಮನೆ ಅಗತ್ಯ
ಪ್ರಸ್ತುತ ದೇಶದಲ್ಲಿನ ಇಂತಹ ಕಡಿಮೆ ಆದಾಯದ ಕುಟುಂಬಗಳಿಗಾಗಿ ರೂ.4 ಲಕ್ಷದಿಂದ ರೂ.10 ಲಕ್ಷ ಬಜೆಟ್‌ನಲ್ಲಿ 1.50 ಕೋಟಿ ಮನೆಗಳ ಅಗತ್ಯವಿದೆ. ಇದು ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳಿಗೆರೂ9 ಲಕ್ಷ ಕೋಟಿಯಷ್ಟು ದೊಡ್ಡ ಪ್ರಮಾಣದ ಹೂಡಿಕೆ ಅವಕಾಶವನ್ನು ಒದಗಿಸಲಿದೆ. ಗೃಹಸಾಲ ಕಂಪೆನಿಗಳೂ ರೂ.7ಲಕ್ಷ ಕೋಟಿವರೆಗೂ ಸಾಲ ವಿತರಣೆಗೆ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಗಮನ ಸೆಳೆದಿದೆ `ಡಿಲೊಯ್ಟ ಇಂಡಿಯಾ' ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷಾ ವರದಿ.

ದೇಶದ ವಿವಿಧೆಡೆಯ ಖಾಸಗಿ ಡೆವಲಪರ್ಸ್‌ಗಳು 2011ರ ಜೂನ್‌ನಿಂದ 2013ರ ಜನವರಿ ನಡುವಿನ ಅವಧಿಯಲ್ಲಿ 22 ನಗರಗಳಲ್ಲಿ ರೂ.10 ಲಕ್ಷಕ್ಕಿಂತಲೂ ಕಡಿಮೆ ಬಜೆಟ್‌ನ 30,668 ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಇದರಲ್ಲಿ ಶೇ 39ರಷ್ಟು (11,823) ಮನೆಗಳ ನಿರ್ಮಾಣ ಗುಜರಾತಿನಲ್ಲಿಯೇ ನಡೆದಿದೆ. ಈ ಕಡಿಮೆ ಬಜೆಟ್‌ನ 8513 ಮನೆಗಳು ಮಹಾರಾಷ್ಟ್ರದಲ್ಲಿ ಹಾಗೂ 4759 ಮನೆಗಳು ಮಧ್ಯಪ್ರದೇಶದಲ್ಲಿ ನಿರ್ಮಾಣವಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಕಡಿಮೆ ಆದಾಯ ಶ್ರೇಣಿಯ ಗ್ರಾಹಕರಿಗಾಗಿ ಮನೆ ನಿರ್ಮಿಸಿಕೊಡುವಲ್ಲಿ ಆಸಕ್ತಿ ಹೆಚ್ಚಿರುವುದು ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ ಕಾಣಲಾರಂಭಿಸಿದೆ. ಈ ಶ್ರೇಣಿಯಲ್ಲಿ ಅತಿ ದೊಡ್ಡ ಗ್ರಾಹಕ ಸಮೂಹವಿದೆ ಎಂಬುದು ತಡವಾಗಿಯಾದರೂ ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳ ಗಮನಕ್ಕೆ ಬಂದಿದೆ.

ಇನ್ನೊಂದೆಡೆ ಕಡಿಮೆ ಆದಾಯ ವರ್ಗದ ಈ ಗ್ರಾಹಕರಿಗೆ ಗೃಹ ಸಾಲ ನೀಡುವತ್ತಲೂ ಬ್ಯಾಂಕ್‌ಗಳು, ಗೃಹಸಾಲ ಕ್ಷೇತ್ರದ ಖಾಸಗಿ ಸಂಸ್ಥೆಗಳೂ ಆಸಕ್ತಿ ತೋರಲಾರಂಭಿಸಿವೆ. ಈ ಅಂಶವೂ ಕಡಿಮೆ ಆದಾಯ ವರ್ಗದವರ `ಸ್ವಂತ ಮನೆ' ಕನಸನ್ನು ನನಸಾಗಿಸುವಲ್ಲಿ ನೆರವಾಗುತ್ತಿದೆ.

ಬೇಡಿಕೆ ಅಧಿಕ-ಪೂರೈಕೆ ಕಡಿಮೆ
ಆದರೆ, ಈ ಕಡಿಮೆ ಬಜೆಟ್‌ನ ಮನೆಗಳಿಗೆ ಇರುವ ಬೇಡಿಕೆ ಹಾಗೂ ಪೂರೈಕೆ ನಡುವೆ ಮಾತ್ರ ಭಾರಿ ಅಂತರವೇ ಇದೆ. ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಮನೆಗಳ ನಿರ್ಮಾಣವಾಗುತ್ತಿಲ್ಲ ಎಂಬುದರತ್ತ ಬೊಟ್ಟು ಮಾಡಿದೆ ಈ ವರದಿ.

5 ವರ್ಷಗಳ ಹಿಂದೆ ಕಡಿಮೆ ಆದಾಯದ ಗ್ರಾಹಕರಿಗೆ ಗೃಹ ಸಾಲ ದೊರೆಯುವುದು ಕಷ್ಟವಾಗಿತ್ತು. ಆದರೆ ಆ ಚಿತ್ರಣವಿಂದು ಬದಲಾಗಿದ್ದು, ಕಡಿಮೆ ಆದಾಯವುಳ್ಳ ಗ್ರಾಹಕರಿಗೆ ಸಾಲ ನೀಡಲು ಇಂದು ಹತ್ತಾರು ಗೃಹ ಸಾಲ ಕಂಪೆನಿಗಳು ಮುಂದೆ ಬರುವುದನ್ನು ಕಾಣಬಹುದು.

ಅಹಮದಾಬಾದ್, ಮುಂಬೈ ಮತ್ತು ಇಂಧೋರ್‌ನಲ್ಲಿ ಕಡಿಮೆ ಆದಾಯ ಶ್ರೇಣಿ ಗ್ರಾಹಕರಿಗೆ ನೀಡುವ ಗೃಹಸಾಲ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ.ರೂ10 ಲಕ್ಷಕ್ಕೂ ಕಡಿಮೆ ಮೊತ್ತದ ಗೃಹಸಾಲವನ್ನು ವಿತರಿಸಿರುವ 20ಕ್ಕೂ ಅಧಿಕ ಯೋಜನೆಗಳು ಈ 3 ನಗರಗಳಲ್ಲಿ ಕಾಣಸಿಗುತ್ತವೆ.

ದಿನೇ ದಿನೇ ಏರುತ್ತಿರುವ ಭೂಮಿ ಬೆಲೆ, ಹೆಚ್ಚಳವಾಗುತ್ತಿರುವ ನಿರ್ಮಾಣ ವೆಚ್ಚ ಮತ್ತು ಯೋಜನೆಗಳ ಅನುಮೋದನೆಗಾಗಿ ತೆಗೆದುಕೊಳ್ಳುವ ದೀರ್ಘ ಸಮಯಾವಧಿ ಇವು ಇಂತಹ ಯೋಜನೆಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ ಎಂದು ದೂರುತ್ತಾರೆ ಕಡಿಮೆ ವೆಚ್ಚದ ಮನೆ ನಿರ್ಮಿಸುವ ಬಹುತೇಕ ಡೆವಲಪರ್ಸ್‌ಗಳು.

ಶೇ 59 ರಷ್ಟು ಡೆವಲಪರ್ಸ್‌ಗಳ ಪ್ರಕಾರ, `ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ ಪಡೆಯುವ ಪ್ರಕ್ರಿಯೆ ಬಹಳ ಬೇಸರದ ಸಂಗತಿ. ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರದ ಎರಡು ದೊಡ್ಡ ಸವಾಲುಗಳಲ್ಲಿ ಅನುಮತಿ ವಿಳಂಬ ಎಂಬುದೂ ಒಂದು. ಕಡಿಮೆ ಬಜೆಟ್‌ನ ಮನೆಗಳ ನಿರ್ಮಾಣ ಯೋಜನೆಗೆ ಅನುಮತಿ ಪಡೆಯಲು ಕೆಲವೊಮ್ಮೆ 18ರಿಂದ 36 ತಿಂಗಳು ಹಿಡಿಯುತ್ತದೆ'.

ಇದಕ್ಕೆ ಪರಿಹಾರವಾಗಿ  ಇಂತಹ ಯೋಜನೆಗಳಿಗೆ ಏಕಗವಾಕ್ಷಿ ಅನುಮತಿ ನೀಡಲು ಆದ್ಯತೆ ನೀಡಬೇಕು. ಇದರಿಂದ ಯೋಜನೆಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದು ಒತ್ತಿ ಹೇಳುತ್ತಾರೆ ವಸತಿ-ನಗರ ಬಡತನ ನಿವಾರಣೆ ನಿಗಮದ ಕಾರ್ಯದರ್ಶಿ ಅರುಣ್ ಕುಮಾರ್ ಮಿಶ್ರಾ.

ಬಾಡಿಗೆಗಾಗಿಯೇ ಖರೀದಿ!
ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಅಗತ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇಂಥ ಮನೆಗಳು ಅಗತ್ಯವಿರುವ ಗ್ರಾಹಕರಿಗೆ ಲಭಿಸುತ್ತಿವೆಯೇ ಎಂಬುದನ್ನೂ ಗಮನಿಸಬೇಕಿದೆ. ಕಡಿಮೆ ಬಜೆಟ್ ಶ್ರೇಣಿಯಲ್ಲಿ ಮಾರಾಟವಾಗಿರುವ ಶೇ 40 ಮನೆಗಳು ಬಾಡಿಗೆ ನೀಡುವ ಸಲುವಾಗಿಯೇ ಖರೀದಿಸುವವರ ಪಾಲಾಗಿವೆ ಎಂಬುದು ಮಾತ್ರ ಕಳವಳಕಾರಿ ಅಂಶ ಎನ್ನುತ್ತಾರೆ ಮಿಶ್ರಾ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.