ADVERTISEMENT

ಕಚೇರಿ ಸ್ಥಳಾವಕಾಶ ಬೇಡಿಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 10:10 IST
Last Updated 9 ಏಪ್ರಿಲ್ 2013, 10:10 IST
ಕಚೇರಿ ಸ್ಥಳಾವಕಾಶ ಬೇಡಿಕೆ ಏರಿಕೆ
ಕಚೇರಿ ಸ್ಥಳಾವಕಾಶ ಬೇಡಿಕೆ ಏರಿಕೆ   

ಜಾಗತಿಕ ಆರ್ಥಿಕ ಪುನಶ್ಚೇತನದಿಂದಾಗಿ ಈ ವರ್ಷ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ ಗಣನೀಯವಾಗಿ ಹೆಚ್ಚಲಿದೆ ಎಂದಿದೆ ರಿಯಲ್ ಎಸ್ಟೇಟ್ ಕ್ಷೇತ್ರದ ಜಾಗತಿಕ ಸಲಹಾ ಸಂಸ್ಥೆ `ಡಿಟಿಜೆಡ್'.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ 305 ಲಕ್ಷ ಚದರ ಅಡಿಗಳಷ್ಟು ಹೆಚ್ಚಲಿದೆ ಎಂಬುದು `ಡಿಟಿಜೆಡ್' ಅಂದಾಜು.
ಭಾರತದಲ್ಲಿ ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಅವಕಾಶ ಲಭಿಸಿರುವುದು, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಅಲ್ಪಾವಧಿ ಬಡ್ಡಿ ದರ ತಗ್ಗಿಸಿರುವುದು ಮೊದಲಾದ ಬೆಳವಣಿಗೆಗಳಿಂದಾಗಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಈ ಎಲ್ಲ ಅಂಶಗಳೂ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿದ್ದು, ಕಚೇರಿಗಳಿಗಾಗಿ ನಿರ್ಮಿಸಿದ ಕಟ್ಟಡಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ ಎಂದು `ಡಿಟಿಜೆಡ್' ಭಾರತೀಯ ಮುಖ್ಯಸ್ಥ ಅನ್ಸುಲ್ ಜೈನ್ ವಿಶ್ಲೇಷಿಸಿದ್ದಾರೆ.

ಭಾರತದಲ್ಲಿ ಕಚೇರಿ ಸ್ಥಳದ ಬೇಡಿಕೆ ವಾರ್ಷಿಕ ಶೇ 12ರಷ್ಟು ಹೆಚ್ಚುತ್ತಾ ಹೋಗುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಹಲವು ಸಂಸ್ಥೆಗಳು ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿರುವುದರಿಂದಲೂ ವಾಣಿಜ್ಯ ಬಳಕೆ ಕಟ್ಟಡಗಳ ಬಾಡಿಗೆ ಕೂಡ ಹೆಚ್ಚಿದೆ. ಆದರೆ, ಇದು ಅಲ್ಪಾವಧಿ ಪರಿಣಾಮ. ದೀರ್ಘಾವಧಿಯಲ್ಲಿ ಈ ದರಗಳೂ ಸ್ಥಿರವಾಗಿರುತ್ತವೆ ಎಂದು `ಡಿಟಿಜೆಡ್' ಹೇಳಿದೆ.

ಒಟ್ಟು ಅಂದಾಜು ಮಾಡಿರುವ 305 ಲಕ್ಷ ಚದರಡಿಯಲ್ಲಿ ಐ.ಟಿ ವಲಯದ ಕಂಪೆನಿಗಳ ಬೇಡಿಕೆಯೇ 150 ಲಕ್ಷ ಚದರಡಿಗಳಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ ಶೇ 24ರಷ್ಟು ಹೆಚ್ಚಳವಾಗಲಿದೆ ಎಂದು `ಡಿಟಿಜೆಡ್' ಅಧ್ಯಯನ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT