ADVERTISEMENT

ಕನಸಿನ ಮನೆ ಮತ್ತು ಉಳಿತಾಯ

ಜಬೀವುಲ್ಲಾ ಖಾನ್
Published 8 ಅಕ್ಟೋಬರ್ 2013, 19:30 IST
Last Updated 8 ಅಕ್ಟೋಬರ್ 2013, 19:30 IST
ಕನಸಿನ ಮನೆ ಮತ್ತು ಉಳಿತಾಯ
ಕನಸಿನ ಮನೆ ಮತ್ತು ಉಳಿತಾಯ   

ಕಾಲ ಬದಲಾಗಿದೆ. ಕನಸುಗಳೂ ಬದಲಾಗಿವೆ. ಕನಸಿನ ಮನೆ ಕಟ್ಟುವ ಆಸೆ ಯಾರಿಗಿರಲ್ಲ ಹೇಳಿ? ಆ ಕನಸುಗಾರರಲ್ಲಿ ನಾನೂ ಒಬ್ಬ.
ಸ್ನೇಹಿತನ ಬಳಿ ‘ನನ್ನ ಕನಸಿನ ಮನೆ’ ಬಗ್ಗೆ ಚರ್ಚಿಸಿದೆ.

ಆತ ಕೇಳಿದ, ಮನೆ ಕಟ್ಟಬೇಕು ಎಂಬ ಆಸೆ ನಿನ್ನ ಗುರಿಯೇ ಅಥವಾ ಬರೀ ಕನಸೇ?

ಅವನ ಈ ಪ್ರಶ್ನೆ ಕೇಳಿ ಮುಳ್ಳು ಚುಚ್ಚಿದ ಹಾಗಾಯಿತು.

ಮತ್ತೆ ಕೇಳಿದ, ಎಂಥ ಮನೆ ಕಟ್ಟಬೇಕು? ಎಲ್ಲಿ ಕಟ್ಟಬೇಕು? ನಿನ್ನ ಯೋಗ್ಯತೆ ಏನು? ಎಷ್ಟು ಸಾಲ ಸಿಗಬಹುದು? ಆ ಸಾಲವನ್ನು ತೀರಿಸುವ ಶಕ್ತಿ ನಿನಗಿದೆಯೇ? ಪರ್ಯಾಯ ಮಾರ್ಗಗಳೇನು? ಎಷ್ಟು ವರ್ಷಗಳಲ್ಲಿ ನೀನು ಗುರಿ ಮುಟ್ಟಬೇಕು? ಅದಕ್ಕೆ ಏನು ಪ್ಲಾನ್ ಮಾಡಿದ್ದೀಯಾ? ಏನಾದರು ಪ್ರಯತ್ನ ಮಾಡುತ್ತಿದ್ದೀಯೋ?

ಅವನ ಪ್ರಶ್ನೆಗಳ ಸುರಿಮಳೆ ಕೇಳಿ ಕೋಪವೇ ಬಂದಿತು. ಆದರೆ ಅವನ ಮಾತುಗಳಲ್ಲಿ ಸತ್ಯವೂ ಇದೆ ಎಂಬುದು ಅರಿವಾಯಿತು. ಯಾವತ್ತೂ  ನಾನು ಈ ಕೋನದಲ್ಲಿ ಯೋಚಿಸಿರಲೇ ಇಲ್ಲ. ನನ್ನ ಕನಸಿನ ಮನೆ ಹೇಗಿರಬೇಕು ಎಂದು ಮಾತ್ರವೇ ಯೋಚಿಸುತ್ತಿದ್ದೆ, ಅಷ್ಟೆ!
ನನಗೆ ಮತ್ತು ಪತ್ನಿಗೆ ಬರುವ ಸಂಬಳ ಜೀವನ ಸಾಗಿಸಲು ಅಗತ್ಯವಾಗಿ ಮಾಡಲೇಬೇಕಾದ ವೆಚ್ಚಗಳಿಗೆ, ಮನೆಯ ಮುಖ್ಯ ಜವಾಬ್ದಾರಿಗಳಿಗೇ ಖಾಲಿ ಆಗಿ ಹೋಗುತ್ತದೆ. ಅಂತೂ ಕಷ್ಟಪಟ್ಟು ಅಷ್ಟೋ ಇಷ್ಟೋ ಉಳಿಸುತ್ತೇವೆ. ಈಗ ಏನು ಮಾಡಲಿ   ನೀನೇ ಹೇಳು? ಎಂದೆ.

‘ಕೇಳು, ಖರ್ಚಾದ ಮೇಲೆ ಉಳಿಯುವುದಷ್ಟೇ ಉಳಿತಾಯ ಅಲ್ಲ. ಇಂತಿಷ್ಟು ಎಂದು ತಿಂಗಳಿಗೆ ನಿಗದಿಗೊಳಿಸಿ ಉಳಿತಾಯ ಮಾಡಿದ ಮೇಲಷ್ಟೇ ಖರ್ಚುಗಳನ್ನು ಮಾಡು. ನಿಮ್ಮಿಬ್ಬರ ಶ್ರಮದ ಸಂಪಾದನೆ  ವ್ಯರ್ಥವಾಗಿ ಎಲ್ಲಿ ಸೋರಿ ಹೋಗುತ್ತಿದೆ ಎಂಬುದರ ಬಗೆಗೂ ನಿಗಾವಹಿಸು. ಮೂಲ ದುಡಿಮೆಯ ಸಂಪಾದನೆ ಹೊರತುಪಡಿಸಿ, ಮತ್ತಷ್ಟು ಸಂಪಾದನೆಗೆ ಬೇರಾವುದಾದರೂ ದಾರಿ  ಇದೆಯೇ ಹುಡುಕಿಕೊ. ಅಷ್ಟೇ ಅಲ್ಲ, ‘ಕನಸಿನ ಮನೆ ಕಟ್ಟಲೇಬೇಕೆಂಬ ಗುರಿ’ಯನ್ನು ಮಾತ್ರ ನನಸು ಮಾಡಿಕೊಳ್ಳಲು ಎಡೆಬಿಡದೆ ಪ್ರಯತ್ನಿಸುತ್ತಲೇ ಇರು. ನಿನ್ನ ಪ್ರಯತ್ನ ಗುರಿ ಮುಟ್ಟುವವರೆಗೂ ನಿಲ್ಲದೇ ಇರಲಿ’.

ಸ್ನೇಹಿತನ ಮಾತಿನಂತೆಯೇ ಪ್ಲಾನ್ ಮಾಡಿ ಹಣ ಉಳಿಸಲು ನಾನು–ಪತ್ನಿ ಆರಂಭಿಸಿದೆವು. ಬೆಂಗಳೂರಿನಲ್ಲಿ ಕನಸಿನ ಮನೆ ಕಟ್ಟುವುದು ಬಹಳ ಕಷ್ಟ. ಅದಕ್ಕೆ ಬದಲಾಗಿ ನಾನು–ನನ್ನ ಹೆಂಡತಿ ಪ್ರಯತ್ನ ಮಾಡಿ ಒಂದು ಸುಂದರವಾದ, ನಮ್ಮ ಕನಸಿನ ಮನೆಯಂತೆಯೇ ಇರುವ ಮನೆಯೊಂದನ್ನು ಭೋಗ್ಯಕ್ಕೆ ಪಡೆದುಕೊಂಡೆವು. ಇದು ನನ್ನ ಕನಸಿನ ಹಾದಿಯಲ್ಲಿನ ಮೊದಲ ಜಯ ಎನಿಸಿತು. ಮುಂದೆ ಪ್ರಯತ್ನ ಮುಂದುವರಿಸಿ ಸ್ವಂತದ್ದೇ ಆದ ಕನಸಿನ ಮನೆ ಸಹ ಕಟ್ಟುತ್ತೇವೆ.

ಈಗಿರುವ ಭೋಗ್ಯದ (ಕನಸಿನ) ಮನೆಯಲ್ಲಿ ಮೂರು ಕೋಣೆಗಳಿವೆ. ಒಂದು ಕೋಣೆ ನಮ್ಮಿಬ್ಬರಿಗಾಗಿ, ಇನ್ನೊಂದು ಕೋಣೆ ಅತಿಥಿಗಳು ಬಂದರೆ ಉಳಿದುಕೊಳ್ಳಲು, ಮತ್ತೊಂದು ಕೋಣೆ ನಮ್ಮ ಪುಟಾಣಿ ಮಕ್ಕಳು ಓದಿಕೊಳ್ಳಲು ಮೀಸಲಿಟ್ಟಿದ್ದೇವೆ. ಮಕ್ಕಳ ಕೋಣೆಯನ್ನೇ ನಮಾಜ್ ಮತ್ತು ಕುರ್‌ಆನ್ ಪಠಣ ಮಾಡಲು ಸಹ ಬಳಸಿಕೊಳ್ಳುತ್ತೇವೆ. ನನ್ನ ಹೆಂಡತಿಯ ಆಶಯದಂತೆಯೇ ಈ ಮನೆಯಲ್ಲಿನ ಕಿಚನ್ (ಅಡುಗೆ ಕೋಣೆ) ದೊಡ್ಡದಾಗಿಯೇ ಇದೆ. 24 ಗಂಟೆಗಳ ಕಾಲ ನಿರಂತರ ನೀರಿನ ಸೌಲಭ್ಯವಿದೆ. ಎರಡು ಬಾತ್‌ರೂಮ್‌ಗಳೂ ಇವೆ. ಒಂದು ಡೈನಿಂಗ್ ಹಾಲ್ ಮತ್ತು ಹಜಾರ ಇದೆ. ಬೇಜಾರಾದರೆ ಕಾಲ ಕಳೆಯಲು ಒಂದು ಪುಟ್ಟ ಬಾಲ್ಕನಿ ಸಹ ಇದೆ. ಬೆಳಕು ಮತ್ತು ಗಾಳಿಯ ಕೊರತೆಯಂತೂ ಇಲ್ಲವೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದ್ವಿಚಕ್ರವಾಹನವನ್ನು ರಸ್ತೆ ಬದಿ ನಿಲ್ಲಿಸಬೇಕಾದ ಅನಿವಾರ್ಯವಿಲ್ಲ. ವಾಹನ ನಿಲ್ಲಿಸಲಿಕ್ಕೆಂದೇ ಪ್ರತ್ಯೇಕವಾಗಿ ಪಾರ್ಕಿಂಗ್ ಜಾಗವೂ ಇದೆ. ಸದ್ಯಕ್ಕೆ ವಾಸವಿರವಲು ನಮಗೆ ಈ ಮನೆ ಸಾಕಾಗಿದೆ. ನಮ್ಮದೇ ಆದ ‘ಕನಸಿನ ಮನೆ’ ಮಾತ್ರ ಕನಸಿನಲ್ಲೂ ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಮುಂದೊಂದು ದಿನ ಆ ಮನೆ ವಾಸ್ತವಕ್ಕಿಳಿಯಲಿದೆ. ಅದಕ್ಕಾಗಿ ಯೋಜಿತ ರೀತಿಯಲ್ಲಿ ಉಳಿತಾಯವೂ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.