ADVERTISEMENT

ಗಿಡಕ್ಕೆ ನೀರುಣಿಸುವ ಕುಂಡವ ಕಂಡಿರಾ

ಸುಶೀಲಾ ಡೋಣೂರ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಗಿಡಕ್ಕೆ ನೀರುಣಿಸುವ ಕುಂಡವ ಕಂಡಿರಾ
ಗಿಡಕ್ಕೆ ನೀರುಣಿಸುವ ಕುಂಡವ ಕಂಡಿರಾ   

ನಗರದಲ್ಲೀಗ ಕೈತೋಟ ಮಾಡುವ ಆಸಕ್ತಿ ಹೆಚ್ಚುತ್ತಿದೆ. ಜಾಗ ಇಲ್ಲ, ಸಮಯವಿಲ್ಲ ಎನ್ನುವುದರ ನಡುವೆಯೇ ಇರೋ ಅಂಗೈ ಅಗಲ ಜಾಗದಲ್ಲಿ, ರಜಾ ದಿನದ ಸೀಮಿತ ಅವಧಿಯಲ್ಲಿಯೇ ಗಾರ್ಡನಿಂಗ್‌ ಹವ್ಯಾಸಕ್ಕೆ ನೀರೆರೆಯುವವರಿದ್ದಾರೆ. ಅಂಥವರ ನೆಚ್ಚಿನ ಆಯ್ಕೆ ‘ಸೆಲ್ಫ್‌ ವಾಟರಿಂಗ್‌ ಪಾಟ್‌’. ಅಂದರೆ ಗಿಡಗಳು ತಮಗೆ ಬೇಕಾದಾಗ, ಬೇಕಾದಷ್ಟು ನೀರು ಹೀರಿಕೊಳ್ಳುವಂತೆ ಮಾಡುವ ತಂತ್ರಜ್ಞಾನವಿದು.

ಜಂಜಡದ ಜೀವನಶೈಲಿಯಲ್ಲಿ ದಿನವೂ ಕೈತೋಟಕ್ಕೆ ನೀರು ಹಾಯಿಸುವಷ್ಟು ಸಮಯ ಇಲ್ಲದೇ ಇರುವಾಗ, ರಜೆಯ ಮೇಲೆ ಪ್ರವಾಸ ಹೋಗಬೇಕಾಗಿ ಬಂದಾಗ, ಮನೆಯ ಮಕ್ಕಳಂತೆ ಪೋಷಿಸಿಕೊಂಡು ಬಂದ ಗಿಡಗಳನ್ನೇನು ಮಾಡುವುದು ಎನ್ನುವ ಚಿಂತೆಗೆ ಪರಿಹಾರ ಈ ಸೆಲ್ಫ್‌ ವಾಟರಿಂಗ್‌ ಪಾಟ್‌.

ಎರಡು ಪಾಟ್‌ಗಳು, ಒಂದು ಕಿಟ್‌, ಒಂದು ಇಂಡಿಕೇಟರ್‌ಅನ್ನು ಹೊಂದಿರುವ ಸೆಟ್‌ ಇದು. ಎರಡೂ ಪಾಟ್‌ಗಳ ನಡುವೆ ಕಿಟ್‌ ಅಳವಡಿಸಲಾಗುತ್ತದೆ. ನಡುವಿನ ಅಂತರದಲ್ಲಿ ನೀರು ಹರಿದುಹೋಗುತ್ತದೆ. ನೀರು ಎಷ್ಟಿದೆ ಎನ್ನುವುದನ್ನೂ ಇಂಡಿಕೇಟರ್‌ ಸೂಚಿಸುತ್ತಿರುತ್ತದೆ.

ADVERTISEMENT

ಕಿಟ್‌ಗೆ ಒಮ್ಮೆ ನೀರು ತುಂಬಿಸಿದರೆ ಸಾಕು. ಆಯಾ ಗಿಡಗಳು ತಮಗೆಷ್ಟು ಬೇಕೊ ಅಷ್ಟು ನೀರನ್ನು, ತಮಗೆ ಬೇಕಾದಾಗ ಹೀರಿಕೊಳ್ಳುತ್ತ ಹಾಯಾಗಿರುತ್ತವೆ. ನೀರು ಹೆಚ್ಚಾಯಿತೊ, ಕಡಿಮೆ ಆಯಿತೊ ಎನ್ನುವ ಆತಂಕವೂ ಇರುವುದಿಲ್ಲ. ಕನಿಷ್ಠ ಎರಡು ವಾರ, ಗರಿಷ್ಠ ಎರಡು ತಿಂಗಳಿಗೊಮ್ಮೆ ಕಿಟ್‌ಗೆ ನೀರು ತುಂಬಿಸಬೇಕಾಗುತ್ತದೆ.

ಆಯಾ ಕುಂಡದ ಗಾತ್ರ ಹಾಗೂ ಆಕಾರಕ್ಕೆ ತಕ್ಕಂತೆ ಕಿಟ್‌ ಅಳವಡಿಸಬೇಕು. ಮೊದಲ ಹತ್ತು ದಿನ ಕೈಯಿಂದಲೇ ನೀರು ಹಾಕಬೇಕು. ನಂತರವಷ್ಟೇ ಕಿಟ್‌ಗೆ ನೀರು ತುಂಬಿಸಬೇಕು.

ಈ ಪಾಟ್‌ಗಳನ್ನು ಪಾಲಿಪ್ರೊಪಲಿನ್‌ನಿಂದ ಮಾಡಲಾಗುತ್ತದೆ. ಇವು ಪ್ಲಾಸ್ಟಿಕ್‌ ಹಾಗೂ ಮಣ್ಣಿನ ಕುಂಡಗಳಿಗಿಂತಲೂ ಹೆಚ್ಚು ಬಾಳಿಕೆ ಬರುತ್ತವೆ. ಕಡಿಮೆ ಭಾರವಿರುವ ಈ ಪಾಟ್‌ಗಳು, ಬಿಸಿಲಿಗೆ ಬಿರುಕು ಬಿಡುವುದಿಲ್ಲ, ಒಡೆಯುವುದಿಲ್ಲ. ಯುವಿ ಕೋಟಿಂಗ್‌ ಇರುವುದರಿಂದ ಬಣ್ಣವೂ ಮಾಸುವುದಿಲ್ಲ.

‘ಈಗೀಗ ಬೆಂಗಳೂರಿನಲ್ಲಿಯೂ ಸೆಲ್ಫ್‌ ವಾಟರಿಂಗ್ ಪಾಟ್‌ಗಳ ಟ್ರೆಂಡ್‌ ಹೆಚ್ಚಿದೆ’ ಎನ್ನುತ್ತಾರೆ ಈ ಪಾಟ್‌ ಅನ್ನು ಬೆಂಗಳೂರಿಗೆ ಪರಿಚಯಿಸಿದ ಗ್ರೀನ್‌ ಕಾರ್ಪೆಟ್‌ ವ್ಯವಸ್ಥಾಪಕಿ ಮೈನಾ ಬಟಾವಿಯಾ.

ಒಂದೊಂದು ಪ್ರಕಾರದ ಗಿಡಗಳಿಗೆ ಒಂದೊಂದು ಪ್ರಮಾಣದ ನೀರು ಬೇಕಾಗುತ್ತದೆ. ಉದಾಹರಣೆಗೆ ಹೊರಾಂಗಣ ಗಿಡಗಳಿಗೆ ಹೆಚ್ಚು ನೀರು ಬೇಕು, ಒಳಾಂಗಣ ಗಿಡಗಳು ಅಷ್ಟು ನೀರು ಹೀರುವುದಿಲ್ಲ. ಹಾಗೆಯೇ ‘ಬೋಗನ್‌ವಿಲ್ಲಾ’ ಅಂತ ಬರುತ್ತಲ್ಲ, ಆ ಗಿಡಕ್ಕೆ ಹೆಚ್ಚು ನೀರು ಬೇಕು. ಒಮ್ಮೆ ಕಿಟ್‌ಗೆ ನೀರು ತುಂಬಿಸಿದರೆ ಹತ್ತು ದಿವಸದಲ್ಲಿ ನೀರು ಮುಗಿಯುತ್ತದೆ. ಆದರೆ ‘ಸಾಂಗ್‌ ಆಫ್‌ ಇಂಡಿಯಾ’ ಅಂತಿದೆಯಲ್ಲ, ಆ ಗಿಡ, ಅಷ್ಟು ನೀರನ್ನು ಸುಮಾರು ಎರಡು ತಿಂಗಳು ಬಳಸಿಕೊಳ್ಳುತ್ತೆ ಎನ್ನುವುದು ಅವರ ವಿವರಣೆ.

‘ಯಾವ ಗಿಡಕ್ಕೆ ಎಷ್ಟು ನೀರು ಬೇಕು ಎನ್ನುವುದು ಸಾಮಾನ್ಯವಾಗಿ ಯಾರಿಗೂ ತಿಳಿಯುವುದಿಲ್ಲ. ಹೀಗಾಗಿ ಎಲ್ಲಾ ಗಿಡಗಳಿಗೂ ಸಮಾನ ಪ್ರಮಾಣದ ನೀರು ಹಾಕುತ್ತಾ ಹೋಗುತ್ತೇವೆ. ಇದರಿಂದಲೇ ಎಷ್ಟೊ ಬಾರಿ ಗಿಡಗಳು ಸತ್ತು ಹೋಗುತ್ತವೆ’ ಎನ್ನುತ್ತಾರೆ ಮೈನಾ.



‘ಮೌಲ್ಯ ತಿಳಿದರೆ ದುಬಾರಿ ಎನಿಸದು’
ಸೆಲ್ಫ್‌ ವಾಟರಿಂಗ್‌ ಪಾಟ್‌ಗಳನ್ನು ಮೊದಲು ಕಂಡುಹಿಡಿದಿದ್ದು ಜರ್ಮನಿ ಮೂಲದ ಲಿಟ್ರೊಸಾ ಎನ್ನುವ ಕಂಪೆನಿ. ಅಲ್ಲಿಂದ ಡೀಲರ್‌ಶಿಪ್‌ ಪಡೆದು ಭಾರತಕ್ಕೆ ಪರಿಚಯಿಸಿದವರು ಮೈನಾ ಬಟಾವಿಯಾ.

‘2005ರಲ್ಲಿ ಅಂದರೆ 12 ವರ್ಷಗಳ ಹಿಂದೆ ಈ ತಂತ್ರಜ್ಞಾನವನ್ನು ನಾನು ಭಾರತಕ್ಕೆ ತಂದಾಗ ಗಾರ್ಡನಿಂಗ್‌ ಟ್ರೆಂಡ್‌ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಇದರ ಬಗ್ಗೆ ತಿಳಿದಿರಲಿಲ್ಲ. ಇದರ ಲಾಭಗಳನ್ನು ಜನರಿಗೆ ತಿಳಿಸುವುದು ಬಹಳ ಕಷ್ಟವಾಯಿತು.

ಒಂದು ಪಾಟ್‌ಗೆ ಹೆಚ್ಚೆಂದರೆ ₹300 ರಿಂದ ₹500 ವ್ಯಯಿಸುತ್ತಾರೆ. ಆದರೆ ಮೂರ್ನಾಲ್ಕು ಪಟ್ಟು ಹೆಚ್ಚಿನ ಹಣ ಕೊಟ್ಟು ಈ ಪಾಟ್‌ ಯಾಕೆ ಕೊಳ್ಳಬೇಕು ಎಂದು ಜನರಿಗೆ ತಿಳಿಸಿ ಹೇಳುವುದರಲ್ಲಿ ಸಾಕು ಸಾಕಾಗುತ್ತಿತ್ತು. ಈಗ ಪರವಾಗಿಲ್ಲ. ಜನರಿಗೆ ಸಾಕಷ್ಟು ಮಾಹಿತಿ ಇದೆ. ಇದೇ ಪಾಟ್‌ ಬೇಕು ಅಂತ ಕೇಳಿಕೊಂಡು ಬರುತ್ತಾರೆ. ಮೌಲ್ಯ ತಿಳಿದ ಮೇಲೆ ಬೆಲೆ ದುಬಾರಿ ಎನಿಸದು ಎನ್ನುತ್ತಾರೆ ಮೈನಾ.


ಗಿಡಕ್ಕೆ ತಾನೀ ನೀರುಣಿಸುವ ಪಾಟ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.