
ದೇಶದಲ್ಲಿನ ಸದ್ಯದ ಅಸ್ಥಿರ ಆರ್ಥಿಕ ಸ್ಥಿತಿಯ ನಡುವೆಯೇ ಸನ್ನಿಹಿತವಾಗಿರುವ ಲೋಕಸಭೆ ಚುನಾವಣೆಯು ಎಲ್ಲ ರಂಗ ಗಳಲ್ಲಿ ಕುತೂಹಲ ಹುಟ್ಟುಹಾಕಿದೆ.
ಈಗಾಗಲೇ ನಡೆದಿರುವ ಚುನಾವಣೋತ್ತರ ಸಮೀಕ್ಷೆಗಳು, ಬರಲಿರುವ ಹೊಸ ದಿನಗಳ ಕುರಿತ ಆರ್ಥಿಕ ವಿಶ್ಲೇಷ ಣೆಗಳು, ‘ದೇಶದ ಅರ್ಥ ವ್ಯವಸ್ಥೆಯು ಪುನಶ್ಚೇತನ ಹೊಂದಲಿದೆ’ ಎಂಬ ಆಶಾವಾದವನ್ನು ಹುಟ್ಟುಹಾಕಿದೆ. ಆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಇದಕ್ಕೆ ಪೂರಕವೆಂಬಂತೆ ದೇಶದ ಎಂಟು ಪ್ರಮುಖ ನಗರಗಳಲ್ಲಿ 2017ರ ಹೊತ್ತಿಗೆ ವಾಣಿಜ್ಯ ಬಳಕೆಯ ಕಚೇರಿ ಸ್ಥಳಾವಕಾಶ ಮಾರುಕಟ್ಟೆ 13.20 ಕೋಟಿ ಚದರಡಿವರೆಗೂ ವಿಸ್ತರಣೆ ಕಾಣುವ ನಿರೀಕ್ಷೆ ಇದೆ ಎನ್ನುತ್ತದೆ ಕುಷ್ಮನ್ ಮತ್ತು ವೆಕ್ಫೀಲ್ಡ್ ಎಂಬ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ.
ಹಾಗಿದ್ದೂ, ಪ್ರಸಕ್ತ ಸಾಲಿನ(2013) ಅಸ್ಥಿರ ಆರ್ಥಿಕತೆಯ ಪರಿಣಾಮ ಕಳೆದ ವರ್ಷದಲ್ಲಿದ್ದ ಕಚೇರಿ ಸ್ಥಳಾವಕಾಶದಲ್ಲಿ ಶೇ 26ರಷ್ಟು, ಅಂದರೆ 2.25 ಕೋಟಿ ಚದರಡಿ ಸ್ಥಳಾವಕಾಶ ಬೇಡಿಕೆ ಕಳೆದುಕೊಂಡಿದೆ ಎನ್ನುತ್ತದೆ ಈ ಸಲಹಾ ಸಂಸ್ಥೆಯ ವರದಿ.
ದೇಶದ ಎಂಟು ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಕೊಲ್ಕತ್ತಾ ಮತ್ತು ಪುಣೆ ಇವುಗಳಲ್ಲಿ 2013ರಿಂದ 2017ರವರೆಗಿನ ಅವಧಿಯಲ್ಲಿ ಕಚೇರಿ ಸ್ಥಳಾವಕಾಶದ ಪೂರೈಕೆ ಅಂದಾಜು 14.30 ಕೋಟಿ ಚದರಡಿಗೆ ತಲುಪುವ ನಿರೀಕ್ಷೆಯಿದೆ.
ಈ ನಿರೀಕ್ಷಿತ ಪೂರೈಕೆಯ 14.30 ಕೋಟಿ ಚದರಡಿ ಕಚೇರಿ ಸ್ಥಳಾವಕಾಶದಲ್ಲಿ ಸುಮಾರು 9 ಕೋಟಿ ಚದರಡಿ ಸ್ಥಳವು ಸದ್ಯ ನಿರ್ಮಾಣದ ವಿವಿಧ ಹಂತಗಳಲ್ಲಿದ್ದು, 2015ರ ವೇಳೆಗೆ ಪೂರ್ಣ ಗೊಳ್ಳುವ ಆಶಯ ವ್ಯಕ್ತಪಡಿಸುತ್ತದೆ ವರದಿ.
2013ರಲ್ಲಿ ಸ್ಥಳಾವಕಾಶ ಬೇಡಿಕೆ ಕುಸಿಯುತ್ತಿರುವ ಪ್ರವೃತ್ತಿಯನ್ನು ತಡೆಯಲು ಹಾಗೂ ಸ್ಥಿರ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಕಚೇರಿ ಸ್ಥಳಾವಕಾಶದ ಮಾರುಕಟ್ಟೆಯಲ್ಲಿ ಈಗಾಗಲೇ ಆಕರ್ಷಕ ಪ್ರಯೋಗಗಳು ನಡೆದಿವೆ. ‘ಚುನಾವಣೋತ್ತರ 2015ರಲ್ಲಿ ದೇಶದ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆ ಕಾಣಿಸಿಕೊಳ್ಳಲಿದೆ.
ಈ ಅವಧಿಯಲ್ಲಿ ವಿಶೇಷವಾಗಿ ಬೆಂಗಳೂರು, ಮುಂಬೈ ಮತ್ತು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯಮಗಳು ತಲೆ ಎತ್ತಲಿವೆ. ಆಗ ಈ ನಗರಗಳಲ್ಲಿ ಕಚೇರಿ ಸ್ಥಳಾವಕಾಶಕ್ಕೆ ಭಾರಿ ಬೇಡಿಕೆ ಬರುವ ನಿರೀಕ್ಷೆಯಿದೆ’ ಎನ್ನುತ್ತಾರೆ ಕುಷ್ಮನ್ ಮತ್ತು ವೆಕ್ಫೀಲ್ಡ್ ದಕ್ಷಿಣ ಏಷ್ಯಾ ವಿಭಾಗದ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ದತ್.
ಕರಾರಿಗೆ ಹಿಂದೇಟು
ದೇಶದ ಆರ್ಥಿಕ ಸ್ಥಿತಿ ಹದಗೆಟ್ಟ ಪರಿಣಾಮ 2012ಕ್ಕಿಂತಲೂ 2013ರಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆ ಕಡಿಮೆ ಆಗುತ್ತಿದೆ. ಹಲವಾರು ಕಂಪೆನಿಗಳು ಅಗತ್ಯವಿದ್ದರೂ ಕಚೇರಿ ಸ್ಥಳಕ್ಕಾಗಿ ಕರಾರು ಮಾಡಿಕೊಳ್ಳಲು ಹಿಂದೇಟು ಹಾಕುವಂತಾಗಿದೆ.
ಪ್ರಸಕ್ತ ಸಾಲಿನಲ್ಲಿ ಪ್ರಮುಖ ಎಂಟು ನಗರಗಳು ಸೇರಿದಂತೆ ದೇಶದಾದ್ಯಂತ 2.25 ಕೋಟಿ ಚದರಡಿ ವಿಸ್ತೀರ್ಣವನ್ನು ಕಚೇರಿ ಸ್ಥಳಾವಕಾಶ ಚಟುವಟಿಕೆ ಆಕ್ರಮಿಸಿಕೊಳ್ಳುವ ನಿರೀಕ್ಷೆಯಿದೆ. ಆದರೂ ಇದು 2012ಕ್ಕೆ ಹೋಲಿಸಿದರೆ ಶೇ 26ರಷ್ಟು ಬೇಡಿಕೆ ಕಳೆದು ಕೊಂಡಿರುತ್ತದೆ ಎನ್ನುತ್ತದೆ ವರದಿ.
ಕಚೇರಿ ಸ್ಥಳಾವಕಾಶದ ಬೇಡಿಕೆಯ ಈ ಏಳುಬೀಳಿನ ಪ್ರವೃತ್ತಿ 2015ರವರೆಗೂ ಹೀಗೆಯೇ ಸಾಗಲಿದ್ದು, ನಂತರದಲ್ಲಿ ಈ ಮಾರುಕಟ್ಟೆ ಅಂದಾಜು 2.80 ಕೋಟಿ ಚದರಡಿವರೆಗೂ ಸ್ಥಳ ಆಕ್ರಮಿಸಿಕೊಳ್ಳುವ ಮೂಲಕ ಸ್ಥಿರ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ.
ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಕಚೇರಿ ವಲಯದಲ್ಲಿನ ಸ್ಥಳಾವಕಾಶ ಬೇಡಿಕೆ ನಿಧಾನಗತಿಯಲ್ಲಿದೆ. ಇದರಿಂದಾಗಿ ಕಚೇರಿ ಸ್ಥಳ ಪೂರೈಕೆ ಕೂಡ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಜತೆಗೆ ಸಂಬಂಧಪಟ್ಟ ಇಲಾಖೆಗಳೂ ಪರವಾನಗಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ. ಇದೆಲ್ಲದರ ಪರಿಣಾಮವಾಗಿ ಕಚೇರಿ ಸ್ಥಳಾವಕಾಶ ಮಾರುಕಟ್ಟೆ ಪ್ರಗತಿ ಮಂದಗತಿಯಲ್ಲಿದೆ ಎನ್ನುತ್ತಾರೆ ದತ್.
ಇದೆಲ್ಲದರಿಂದಾಗಿ ಕಂಪೆನಿಗಳಿಂದ ಬರುವ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ ಕೂಡ ತಗ್ಗಲಿದೆ. ಪರಿಣಾಮ ಈ ವಿಭಾಗಕ್ಕೆ ಕಟ್ಟಡ ನಿರ್ಮಿಸಿಕೊಡುವ ಉದ್ಯಮ ಕ್ಷೇತ್ರ ಮತ್ತು ಹೂಡಿಕೆದಾರರು ಮುಂದಿನ ಕೆಲ ವರ್ಷ ಹಣಕಾಸು ಸಮಸ್ಯೆ ಎದುರಿಸುವರು.
2014ರ ಉತ್ತರಾರ್ಧದಿಂದ ಈ ವಲಯದಲ್ಲಿ ಬೆಳವಣಿಗೆಯ ಪರ್ವ ಆರಂಭವಾಗುವ ಲಕ್ಷಣಗಳಿವೆ. ಹೊಸ ಕಂಪೆನಿಗಳು ತಲೆ ಎತ್ತುವುದರ ಜತೆಗೆ ಅಸ್ತಿತ್ವದಲ್ಲಿರುವ ಕಂಪೆನಿಗಳೂ ವಿಸ್ತರಣೆ, ಬಲವರ್ಧನೆ ಮತ್ತು ಹೊಸ ಜಾಗಗಳಿಗೆ ವಲಸೆ ಹೋಗುವ ಚಟುವಟಿಕೆ ನಡೆಸುವುದರಿಂದ ಕಚೇರಿ ಸ್ಥಳಾವಕಾಶ ಮಾರುಕಟ್ಟೆ ಚಿತ್ರಣವೇ ಬದಲಾಗಲಿದೆ ಎನ್ನುತ್ತಾರೆ ದತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.