ಮನೆ ಕಟ್ಟಿದರೆ ಸಾಲದು. ಮನೆಯ ಗೋಡೆಯೂ ಅಂದವಾಗಿರಬೇಕು. ಗೋಡೆಗೆ ಮೆರುಗು ತುಂಬುವ ಬಣ್ಣಗಳ ರಾಶಿಯೇ ಮಾರುಕಟ್ಟೆಯಲ್ಲಿದೆ. ಆದರೆ, ಬಣ್ಣಗಳ ಬದಲಿಗೆ ವಾಲ್‌ಪೇಪರ್‌ನಿಂದ ಗೋಡೆ ಅಲಂಕರಿಸುವುದು ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಮನೆ ವಿನ್ಯಾಸ ಪರಿಕಲ್ಪನೆಯಾಗಿದೆ.
ವಾಲ್‌ಪೇಪರ್ ಆಯ್ಕೆಗೆ ಮುನ್ನ ಹಲವು ಸಂಗತಿಗಳನ್ನು ಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ ನೀವು ಅಂದಗೊಳಿಸಲು ಹೊರಟಿರುವ ಕೋಣೆಯ ಬಳಕೆ ಗಮನಿಸಿ ವಾಲ್‌ಪೇಪರ್ ಆಯ್ದುಕೊಳ್ಳಬೇಕು. ಸುಂದರ ಅನುಭವ ನೀಡುವ ಕೋಣೆಯಾದರೆ ಹೂವಿನ ವಿನ್ಯಾಸಗಳನ್ನೂ, ವಿಲಾಸಿ ಅನುಭವ ಬೇಕಿದ್ದರೆ ದಟ್ಟ ಬಣ್ಣಗಳಿರುವ ವಾಲ್‌ಪೇಪರ್‌ಗಳನ್ನೇ ಆರಿಸಿ.
ವಾಲ್‌ಪೇಪರ್‌ಗಳಲ್ಲಿ ಬಣ್ಣ ಮತ್ತು ವಿನ್ಯಾಸ ಎರಡೂ ಮುಖ್ಯವಾಗಿರುವುದರಿಂದ ಅದರ ಆಯ್ಕೆ ಬಣ್ಣದ ಆಯ್ಕೆಗಿಂತಲೂ ಕಷ್ಟದ ಸಂಗತಿ.ವಾಲ್‌ಪೇಪರ್ ಖರೀದಿಗೆಂದು ಅಂಗಡಿಗೆ ಹೋದಾಗ ಅಲ್ಲಿರುವ ಪುಸ್ತಕದಿಂದ ನಿಮಗಿಷ್ಟವಾದದ್ದನ್ನು ಆರಿಸಿ ಅದರ ಸ್ಯಾಂಪಲ್‌ಗೆ ಆರ್ಡರ್ ಮಾಡಿ. ಸ್ಯಾಂಪಲ್ ಬಂದೊಡನೆಯೇ ನಿಮಗೆ ಅಗತ್ಯವಿರುವಷ್ಟು ಖರೀದಿಸುವ ಆತುರ ಮಾಡಬೇಡಿ. ಅದನ್ನು ಕೋಣೆಯ ಗೋಡೆಗೆ ಅಂಟಿಸಿ ನೊಡಿ.
ಕೆಲವು ದಿನಗಳವರೆಗೆ ಅದು ಹಾಗೆಯೇ ಇರಲಿ. ಅದು ಕೋಣೆಗೆ ಹೊಂದಿಕೊಳ್ಳುತ್ತದೆಯೇ ಎಂದು ನಿರೀಕ್ಷಿಸಿ. ಅದು ನಿಮಗಿಷ್ಟವಾದಲ್ಲಿ ಹಾಗೆಯೇ ಉಳಿಸಿಕೊಳ್ಳಿ ಎನ್ನುತ್ತಾರೆ ವಾಲ್‌ಪೇಪರ್ ಕಂಪನಿ ವಿಂಟರ್ ಆರೆಂಜ್‌ನ ಜೆರ‌್ರಿ ಪಿಲಿಫ್.
ವಾಲ್‌ಪೇಪರ್ ಅಂಟಿಸಲು ಡೈನಿಂಗ್ ರೂಂ, ಅಡುಗೆ ಕೋಣೆ, ಮುಂತಾದವುಗಳು ಪ್ರಶಸ್ತ ಸ್ಥಳಗಳಾಗಿವೆ. ಆದರೆ, ವಾಲ್‌ಪೇಪರ್ ಎಂದರೆ ಅದು ಕೇವಲ ಕಾಗದ. ಹಾಗಾಗಿ ಬಾಳಿಕೆ ಬಾರದು ಎಂದು ನೆನಪಿನಲ್ಲಿಟ್ಟುಕೊಳ್ಳಿ.
ಚೌಕಾಕಾರದ ವಿನ್ಯಾಸ ಹೊಂದಿದ ವಾಲ್‌ಪೇಪರ್‌ಗಳು ಸಮಕಾಲೀನ ಅನುಭವ ನೀಡುತ್ತವೆ. ಇದೇ ವೇಳೆ ಬಹುವರ್ಣದ ಚೌಕಾಕಾರದ ವಿನ್ಯಾಸಗಳು ಕೋಣೆಗೆ ಸಹಜ ನೋಟವನ್ನೂ ನೀಡುತ್ತವೆ.
ಇದೇ ವೇಳೆ ಸೋಫಾ ಹಿಂದಿನ ಗೋಡೆ ಅಥವಾ ಬೆಡ್ ಹಿಂದಿನ ಗೋಡೆಗೆ ಬೋಲ್ಡ್ ಪ್ಯಾಟರ್ನ್ ಇರುವ ವಾಲ್‌ಪೇಪರ್ ಹಚ್ಚುವ ಮೂಲಕ ಎದ್ದು ಕಾಣುವಂತೆ ಮಾಡಿ.
ಎಷ್ಟು ಖರೀದಿಸಬೇಕು?
ಮೊದಲು ಎಲ್ಲಾ ಗೋಡೆಯ ಅಳತೆಯನ್ನು ಲೆಕ್ಕ ಹಾಕಿ. ಗೋಡೆಯ ಅಗಲವನ್ನು ಉದ್ದದಿಂದ ಗುಣಿಸಿ (ಅಡಿಗಳ ಲೆಕ್ಕಾಚಾರದಲ್ಲಿ ಗುಣಿಸಿ) ಎಲ್ಲವನ್ನೂ ಒಟ್ಟು ಕೂಡಿಸಿದ ಬಳಿಕ ಕಿಟಕಿ ಮತ್ತು ಬಾಗಿಲಿನ ಅಳತೆಯನ್ನು ಅದರಿಂದ ಕಳೆಯಿರಿ.
ಬಳಿಕ ಅಂಗಡಿಗೆ ಹೋಗಿ ನಿಮಗಿಷ್ಟದ ವಾಲ್‌ಪೇಪರ್ ರೋಲ್ ಎಷ್ಟು ಚದರ ಅಡಿ ಹೊಂದಿದೆ ಎಂದು ಕೇಳಿ. ನಿಮ್ಮ ಲೆಕ್ಕಾಚಾರಕ್ಕಿಂತ ರೋಲ್ ಹೆಚ್ಚಿದ್ದಲ್ಲಿ ಮಾತ್ರ ಅದನ್ನು ಖರೀದಿಸಿ. ಯಾವಾಗಲೂ ನಿಮಗೆ ಅಗತ್ಯವಿರುವುದಕ್ಕಿಂತ ಒಂದು ರೋಲ್ ಹೆಚ್ಚಿಗೆ ಆರ್ಡರ್ ಮಾಡಿ. ರೋಲ್‌ಗಳು ಒಂದೇ ಬಣ್ಣದ್ದೇ ಎಂಬುದನ್ನೂ ಖಾತರಿಪಡಿಸಿಕೊಳ್ಳಿ ಎನ್ನುತ್ತಾರೆ ಜೆರ‌್ರಿ.
ನಿರ್ವಹಣೆ
ವಾಲ್‌ಪೇಪರ್ ಮೇಲಿನ ದೂಳು ಮತ್ತು ಕಲೆಗಳನ್ನು ಹೆಚ್ಚು ತೀಕ್ಷ್ಣವಲ್ಲದ ಸೋಪ್ ಅಥವಾ ಬೆಚ್ಚಗಿನ ನೀರಿನಿಂದ ಮೃದುವಾದ ಬಟ್ಟೆ ಬಳಸಿ ತೆಗೆಯಬಹುದು. ದೂಳು ತೆಗೆಯುವಾಗ ಕೆಳಗಿನಿಂದ ಆರಂಭಿಸಿ ತುದಿವರೆಗೆ ತೆಗೆಯಬೇಕು.
ಬಾಲ್ ಪಾಯಿಂಟ್ ಪೆನ್‌ನಿಂದಾದ ಕಲೆ ಅಥವಾ ಕ್ರಯಾನ್ ಅಥವಾ ಪೆನ್ಸಿಲ್ ಮಾರ್ಕ್‌ಗಳನ್ನು ತಕ್ಷಣವೇ ಆಲ್ಕೊಹಾಲ್ ಬಳಸಿ ತೆಗೆಯಬಹುದು.ಒಂದು ವೇಳೆ ಕಲೆಗಳ ನಿವಾರಣೆಗೆ ಆಲ್ಕೊಹಾಲ್ ಅಥವಾ ಹೈಡ್ರೊಜನ್ ಪೆರಾಕ್ಸೈಡ್ ಬಳಸುವುದಾದಲ್ಲಿ ಮೊದಲು ಗೋಡೆಯ ತುದಿಯಲ್ಲಿ ಬಳಸಿ ನೋಡಿ. ಏನೂ ಹಾನಿಯಿಲ್ಲ ಎಂದಾದಲ್ಲಿ ಮುಂದುವರಿಸಿಕೊಂಡು ಹೋಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.