ADVERTISEMENT

ಎರಡು ವರ್ಷ ಕಾದಿದ್ದೀರಿ, ಇನ್ನೆರಡು ಗಂಟೆ...!

ಚಿದಂಬರ ಪ್ರಸಾದ್
Published 4 ಆಗಸ್ಟ್ 2018, 19:30 IST
Last Updated 4 ಆಗಸ್ಟ್ 2018, 19:30 IST
   

ಮಂಗಳೂರು: ಮೈತ್ರಿ ಸರ್ಕಾರದಲ್ಲಿ ಕರಾವಳಿ ಭಾಗದ ಏಕೈಕ ಪ್ರತಿನಿಧಿ ಎನಿಸಿಕೊಂಡಿರುವ ಯು.ಟಿ. ಖಾದರ್ ಈಗ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದಾಗ, ಕಾರ್ಯಕ್ರಮಗಳಿಗೆ 10–15 ನಿಮಿಷ ತಡವಾಗಿ ಬರುತ್ತಿದ್ದ ಅವರು, ಇದೀಗ ಅರ್ಧಗಂಟೆಗೂ ಹೆಚ್ಚು ಸಭಿಕರನ್ನು ಕಾಯಿಸದೇ ಬಿಟ್ಟಿಲ್ಲ.

ಶನಿವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ‘ಮುಡಾ ಅದಾಲತ್‌’ಆಯೋಜಿಸಲಾಗಿತ್ತು. ಅರ್ಜಿದಾರರು ಬೆಳಿಗ್ಗೆ 9.30 ರಿಂದಲೇಮುಡಾ ಕಚೇರಿಗೆ ಬಂದಿದ್ದರು. 10 ಗಂಟೆಯಾದರೂ ಅದಾಲತ್ ನಡೆಸಬೇಕಿದ್ದ ಸಚಿವರ ಸುಳಿವಿಲ್ಲ. ಅವರು ಬಂದಿದ್ದು 11.30ಕ್ಕೆ. ನಂತರ ಪತ್ರಿಕಾಗೋಷ್ಠಿ ನಡೆಸಿದರು.

ಇದೆಲ್ಲವನ್ನೂ ನೋಡುತ್ತಿದ್ದ ಅರ್ಜಿದಾರರ ಸಹನೆಯ ಕಟ್ಟೆ ಒಡೆಯಿತು. ನೇರವಾಗಿ ಪತ್ರಿಕಾಗೋಷ್ಠಿಗೆ ಬಂದ ಅರ್ಜಿದಾರರೊಬ್ಬರು, ‘ನಿಮ್ಮ ಪತ್ರಿಕಾಗೋಷ್ಠಿ ಆಮೇಲೆ ಮಾಡಿಕೊಳ್ಳಿ. ಈಗಾಗಲೇ ಎರಡು ಗಂಟೆ ತಡವಾಗಿದೆ. ಇನ್ನೂ ಎಷ್ಟು ಹೊತ್ತು ಕಾಯುವುದು’ ಎಂದು ಪ್ರಶ್ನಿಸಿದರು.

ADVERTISEMENT

ಸಚಿವರೂ ಸುಮ್ಮನಾಗದೆ, ‘ಎರಡೆರಡು ವರ್ಷ ಕಾದಿದ್ದೀರಿ. ಈಗ ಎರಡು ಗಂಟೆ ಕಾಯುವುದಕ್ಕೆ ತೊಂದರೆಯೇ’ ಎಂದು ಮರು ಪ್ರಶ್ನಿಸಿಯೇಬಿಟ್ಟರು.

ಉಸ್ತುವಾರಿ ಸಚಿವರಾದ ನಂತರ ಎಲ್ಲರೂ ಹೀಗೆಯೇ ಆಗುತ್ತಾರೆಯೇ? ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸುತ್ತಲೇ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.