ADVERTISEMENT

ಸಾಕು ಬಿಡು ಅಲ್ಲ, ಸುಮ್ನೆ ಕೂತ್ಕೊಳಪ್ಪ ನೀನು!

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 20:15 IST
Last Updated 13 ಅಕ್ಟೋಬರ್ 2018, 20:15 IST
325
325   

ಮಂಡ್ಯ: ‘ಮಂಡ್ಯ ಜಿಲ್ಲೆಯ ಜನರ ಋಣ ನನ್ನ ಮೇಲಿದೆ, ಜಿಲ್ಲೆಯ ಉದ್ಧಾರಕ್ಕೆ ನಾನು ಬದ್ಧ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದಾಗ ಕಿವಿಗಡಚಿಕ್ಕುವ ಶಿಳ್ಳೆ, ಚಪ್ಪಾಳೆ ಬಂದವು. ರೈತರ ಸಾಲ ಮನ್ನಾ ಮಾಡಲು ತಾನು ಹುಡುಕಿದ ಮಾರ್ಗೋಪಾಯಗಳ ಬಗ್ಗೆ ಹೇಳಿದರು. ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅಳವಡಿಕೆ, ಡಿಸ್ನಿ ಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿ, ಮೈಷುಗರ್‌ ಕಾರ್ಖಾನೆಗೆ ಮರುಜೀವ, ರೈತರ ಆತ್ಮಹತ್ಯೆ ತಡೆಗೆ ಹೊಸ ಕಾರ್ಯಕ್ರಮ, ನೀರಾವರಿ ಯೋಜನೆಗಳು... ಪಟ್ಟಿ ನೀಡುತ್ತಾ ಹೋದರು. ಮಂಡ್ಯ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳುವಾಗ ‘ಇವರು ಮಂಡ್ಯಕ್ಕೆ ಮಾತ್ರ ಮುಖ್ಯಮಂತ್ರಿಯೇ’ ಎಂಬ ಪ್ರಶ್ನೆ ಮೂಡಿತು.

ಇಷ್ಟೆಲ್ಲಾ ಹೇಳುತ್ತಿರುವಾಗ ಏಕಾಏಕಿ ಮುಖ್ಯಮಂತ್ರಿಯ ದೃಷ್ಟಿ ಮಾಧ್ಯಮಗಳತ್ತ ಹೊರಳಿತು. ‘ರೈತರಿಗಾಗಿ ನಾನು ಏನೇನು ಮಾಡುತ್ತಿದ್ದೇನೆ ಎಂಬುದು ನಿಮಗೆ ಗೊತ್ತಾ? ನನ್ನನ್ನು ಕೆಟ್ಟದಾಗಿ ತೋರಿಸುತ್ತಿದ್ದೀರಿ. ನನ್ನ ವಿರುದ್ಧ ಆಟ ಆಡ ಬೇಡಿ, ಅದಕ್ಕೆಲ್ಲಾ ನಾನು ಅಂಜುವುದಿಲ್ಲ. ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡಿ, ಇಲ್ಲದಿದ್ದರೆ ಸುಮ್ಮನೆ ಇರಿ. ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಬೇಡಿ...’ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಯನ್ನು ಸಮಾಧಾನ ಮಾಡಲು ಮುಂದಾದ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ‘ಸಾಕು ಬಿಡು’ ಎಂದರು. ಇದರಿಂದ ಮತ್ತಷ್ಟು ಕುಪಿತರಾದ ಮುಖ್ಯಮಂತ್ರಿ, ‘ಸಾಕು ಬಿಡು ಅಲ್ಲ, ಸುಮ್ನೆ ಕುತ್ಕೊಳಪ್ಪಾ ನೀನು’ ಎಂದು ಗದರಿಸಿ ಮಾತು ಮುಂದುವರಿಸಿದರು. ಕಡೆಗೆ ‘ನಿಮಗೆಲ್ಲಾ ದೇವರು ಒಳ್ಳೆಯದನ್ನು ಮಾಡಲಿ’ ಎಂದು ಹೇಳುತ್ತಾ ಕೋಪದಿಂದಲೇ ಹೊರ ನಡೆದರು.

ADVERTISEMENT

ಎಂ.ಎನ್‌. ಯೋಗೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.