ADVERTISEMENT

‌‘ಅದು’ ನಡೆದದ್ದು ನಾನು ನೋಡಿಲ್ಲ...!

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 20:00 IST
Last Updated 3 ನವೆಂಬರ್ 2018, 20:00 IST
695
695   

ಬೆಂಗಳೂರು: ಸರ್‌ ಆ ನಟ– ನಟಿ ಮಧ್ಯೆ ‘ಅದು’ ನಡೆದದ್ದು ನಿಜವೇ? ಹೀಗೆಂದು ಪ್ರಶ್ನಿಸಿದ ಟಿ.ವಿ. ವಾಹಿನಿಯೊಂದರ ಪ್ರತಿನಿಧಿ
ಯನ್ನೇ ಮೇಲಿನಿಂದ ಕೆಳಗಿನವರೆಗೆ ಕಣ್ಣಲ್ಲೇ ಅಳೆದು ತೂಗಿ ನೋಡಿ, ‘ನಾನು ನೋಡಿಲ್ಲ’ ಅಂದುಬಿಟ್ಟರು ಹಿರಿಯ ನಟ ಅಂಬರೀಷ್‌. ಈ ಪಂಚ್‌ ಕೊಟ್ಟ ಅವರು, ವರದಿಗಾರ ಹುಡುಗರತ್ತ ತಿರುಗಿ ಮೆಲ್ಲನೆ ಕಣ್ಣು ಮಿಟುಕಿಸಿದರು.

ಇದು ನಡೆದದ್ದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೀ ಟೂ ಕುರಿತ ಸುದ್ದಿಗೋಷ್ಠಿಯಲ್ಲಿ.

‘ನಾನು ನೋಡಿಲ್ಲ. ನೋಡಿದ್ರೆ‘ಹಾಗೆ’ ಮಾಡಬೇಡಿ ಅಂತ ಹೇಳುತ್ತಿದ್ದೆ’ ಎಂದು ಮತ್ತೊಂದು ಪಂಚ್‌ ಕೊಟ್ಟರು.

ADVERTISEMENT

ಶೂಟಿಂಗ್‌ ಸ್ಪಾಟಲ್ಲಿ ಹೇಗಿರಬೇಕು. ‘ಆ ಸೀನ್‌’ ಹೇಗೆ ಮಾಡಬೇಕು ಸಾರ್‌ ಎಂದು ಸಿನಿಮಾದ ಹುಡುಗನೊಬ್ಬ ಕೇಳಿದ. ಅದು ನಾನು ಹೇಳಲಿಕ್ಕಾಗುತ್ತದೆಯೇ? ಅದನ್ನು ಹೇಳಬೇಕಾದವ ನಿರ್ದೇಶಕ. ‘ಆ ಸೀನ್‌’ನಲ್ಲಿ ತಬ್ಬಿಕೊಳ್ಳಬೇಕೋ, ಬಿಡಬೇಕೋ(?) ಇದೆಲ್ಲಾ ಅವರವರೇ ನಿರ್ಧರಿಸಬೇಕು ಎಂದು ಆಯ್ಕೆಯನ್ನು ‘ಅವರವರಿಗೇ’ ಬಿಟ್ಟರು.

ಈ ಘಟನೆಯಿಂದ ಚಿತ್ರರಂಗಕ್ಕೇನಾದರೂ ಸಮಸ್ಯೆ...? ಎಂದು ವರದಿಗಾರ್ತಿಯೊಬ್ಬಳು ರಾಗವೆಳೆದಳು.

‘ಚಿತ್ರರಂಗಕ್ಕೇನು ಸಮಸ್ಯೆ? ಸಮಸ್ಯೆ ಏನಾದರೂ ಆದರೆ ಎಲೆಕ್ಟ್ರಾನಿಕ್‌ ಮೀಡಿಯಾಗಳಿಗೆ ಆಗಬಹುದು’ ಎಂದು ಚುಚ್ಚಿದರು.

‘ನಾವೀಗ ಕನ್ನಡ ನ್ಯೂಸ್‌ ಚಾನೆಲ್‌ ನೋಡೋದೇ ಇಲ್ಲ. ಹಾಕಿದ್ದನ್ನೇ ಹಾಕ್ತೀರಾ... ಇಡೀ ದಿನಾ ಎಳೀತೀರಾ. ಇಂಗ್ಲಿಷ್‌ ಹಿಂದಿ ಚಾನೆಲ್‌ನವರು ನಿಮ್‌ ಥರಾ ಇಡೀ ದಿನ ಹಾಕಲ್ಲ ಬಿಡಿ’ ಎಂದು ವಾಹಿನಿಯವರಿಗೇ ಚಿವುಟಿದರು.

ಹಾಗಾದರೆ ಇದಕ್ಕೆ ಪರಿಹಾರವೇನು ಸಾರ್‌... ಎಂದು ‘ಅಂತರರಾಷ್ಟ್ರೀಯ ಸಮಸ್ಯೆ’ಯೊಂದನ್ನು ಬಗೆಹರಿಸುವ ರೀತಿ ಇನ್ನೊಬ್ಬ ವರದಿಗಾರ್ತಿ ಕೇಳಿದಳು.

‘ಒಂದೇ ಮಾತು, ಬನ್ನಿ ಪರಸ್ಪರ ಶೇಕ್‌ ಹ್ಯಾಂಡ್‌ ಮಾಡಿಕೊಂಡು ನಡೀರಿ ಅಂತಿದ್ದೆ. ಆದರೆ ಪ್ರಕರಣ ನಮ್ಮ ಕೈ ಮೀರಿ ಹೋಗಿದೆ’ ಎಂದು ಅಂಬರೀಷ್‌ ಅಸಹಾಯಕರಾದರು.

ಸಭೆಗೂ ಮುನ್ನ ‘ಕಥಾ ನಾಯಕ’ನ ಬೌನ್ಸರ್‌ಗಳು ಮತ್ತು ಪತ್ರಿಕಾ ಛಾಯಾಗ್ರಾಹಕರ ನಡುವೆ ಸ್ಟಂಟ್‌ ದೃಶ್ಯ ನಡೆದದ್ದು ದೊಡ್ಡ ಸುದ್ದಿಯಾಗಲೇ ಇಲ್ಲ.

ಶರತ್‌ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.