ADVERTISEMENT

ದೇವನೂರ ವಿದ್ಯಮಾನ: ಕನ್ನಡ ಕಟ್ಟಲು ಪ್ರೇರಣೆಯಾಗಲಿ

ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2014, 19:30 IST
Last Updated 1 ಡಿಸೆಂಬರ್ 2014, 19:30 IST

ಕನ್ನಡ, ಶಿಕ್ಷಣ ಮಾಧ್ಯಮದ ಭಾಷೆಯಾಗಬೇಕು ಎಂಬ ಷರ­ತ್ತಿನ ಮೇರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ನಿರಾಕರಿಸಿರುವ ದೇವನೂರ ಮಹಾ­ದೇವ ಅವರ ನಿಲುವು ಸರಿಯಾಗಿಯೇ ಇದೆ. ಅಷ್ಟಕ್ಕೂ ಈ ಷರತ್ತು ಮಹಾದೇವ ಅವರ ಖಾಸಗಿ ಠರಾವೇನಲ್ಲ. ಇದು ಪರಿ­ಷ-­ತ್ತಿನದ್ದೇ ಬೇಡಿಕೆಯಾಗಿದೆ.

ಹಲವು ದಶಕಗಳಿಂದಲೂ ಪ್ರತಿ ಸಮ್ಮೇಳನಾಧ್ಯಕ್ಷರೂ ಈ ಠರಾವನ್ನು ಸರ್ಕಾರದ ಮುಂದೆ ಇಡು­ತ್ತಲೇ ಇದ್ದರೂ ಸರ್ಕಾರಗಳು ಮಾತ್ರ ಇದಕ್ಕೆ ಕೆಟ್ಟ ನಿರ್ಲಕ್ಷ್ಯ ತೋರಿ­ಸಿಕೊಂಡೇ ಬಂದಿವೆ. ಇದನ್ನು ಖಂಡಿಸಿಯೇ ದೇವನೂ­ರರು ಈ ನಿರ್ಣಯ ತೆಗೆದುಕೊಂಡಿರಬಹುದು. ಈ ಹಿಂದೆ ಚಿತ್ರದುರ್ಗದ ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯರಾದ ಎಲ್. ಬಸವರಾಜು ಅವರು ಇಂತಹ ಠರಾವನ್ನು ಸ್ಟಾಂಪ್ ಪೇಪರ್ ಮೇಲೆ ಬರೆದು ನಿಮ್ಮ ರಾಜಕಾರಣಿಗಳಿಂದ ಸಹಿ ತೆಗೆದುಕೊಳ್ಳಿ ಎಂದು ರಾಜಕಾರಿಣಿಗಳ ಸಮ್ಮುಖದಲ್ಲೇ ತಮ್ಮ ಅಸಹನೆ­ಯನ್ನು ಸ್ಫೋಟಿಸಿದ್ದರು.

ನಿಜ, ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಯಾವುದೇ ಭಾಷೆ­ಯನ್ನು ಅನ್ಯಭಾಷಿಕರ ಮೇಲೆ ಕಡ್ಡಾಯವಾಗಿ ಹೇರಲು ಬರದ ಕಾರಣ ಸುಪ್ರೀಂಕೋರ್ಟ್‌ ಬಳಿ ಅಹವಾಲು ಕೊಂಡೊಯ್ಯು­ವುದು ಸೂಕ್ತ ಕ್ರಮವಲ್ಲ. ಹಾಗೆಂದೊಡನೆ ಕರ್ನಾಟಕದ ಶಿಕ್ಷಣ ಪದ್ಧತಿಯಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಜಾರಿಗೊಳಿಸುವ ಸಾಧ್ಯತೆಗಳೇ ಇಲ್ಲ ಎಂದೇನಿಲ್ಲ. ಸಂವಿಧಾನಕ್ಕೆ ಅಪಚಾರವಾಗ­ದಂತೆ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಸರ್ಕಾರಗಳು ಅನ್ವೇಷಿಸಬೇಕಾಗಿದೆ. ಡಾ.ಕೆ.ವಿ. ನಾರಾಯಣ ಮೊದಲಾದ ಭಾಷಾಚಿಂತಕರು ಸಂವಿಧಾನೋಕ್ತವೇ ಆಗಿರುವ - ಸಮಾನ ಶಿಕ್ಷಣ ನೀತಿಯೇ ಮೊದಲಾದ  ಅಂತಹ ಸಾಧ್ಯತೆ­ಗಳನ್ನು ಈಗಾಗಲೇ ತೋರಿಸಿಕೊಟ್ಟಿರುವರು.

ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲ­ಪತಿ­­­ಯಾಗಿದ್ದಾಗ ‘ಕನ್ನಡದ ವಿಷಯ ಬಂದಾಗ ನಾನು ಸರ್ವಾ­ಧಿಕಾರಿ ಧೋರಣೆಯವನು’ ಎಂದು ಬಹಿರಂಗವಾಗಿಯೇ ಹೇಳಿ­ಕೊಂಡಿದ್ದರು. ಇಂಥದೊಂದು ದೃಢಸಂಕಲ್ಪ ಸರ್ಕಾರಗಳಿಗೆ ಮತ್ತು ನಿರ್ದಿಷ್ಟವಾಗಿ ಪರಿಷತ್ತಿಗೆ ಇಂದು ಬೇಕಾಗಿದೆ.

ಬೆರಳೆಣಿಕೆಯಷ್ಟು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರಿಂದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಹುಟ್ಟು ಪಡೆಯಿತು. ಆದರೆ ನವೋದಯದ ಕಾಲದ ನಂತರ ಕಸಾಪ ‘ರಾಜಾ­ಶ್ರಯ’ಕ್ಕೆ ಸಿಲುಕಿ ಕನ್ನಡ ಸಾಹಿತ್ಯ ಚಿಂತನೆಯೊಂದಿಗಿನ ತನ್ನ ಜೀವಂತ ಸಂಬಂಧವನ್ನೇ ಕಳೆದುಕೊಂಡು ಸ್ಥಾವರವಾಯಿತು.

ಅರವತ್ತರ ದಶಕದಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಪ್ರಗತಿಶೀಲ ಕಾದಂಬರಿಕಾರ ಅ.ನ. ಕೃಷ್ಣರಾಯರು ಹಾಗೂ  ಪರಿಷತ್ತಿನ ಅಂದಿನ ಅಧ್ಯಕ್ಷರಾಗಿದ್ದ ಬಿ. ಶಿವಮೂರ್ತಿ­ಶಾಸ್ತ್ರಿ­ಗಳ ನಡುವಣ ವೈಮನ­ಸ್ಯ, ಧರ್ಮಸ್ಥಳದ ಸಮ್ಮೇ­ಳನದಲ್ಲಿ ನವ್ಯಕವಿ ಗೋಪಾಲಕೃಷ್ಣ ಅಡಿ­ಗರು ಅಧ್ಯಕ್ಷರಾಗಿದ್ದಾಗ ಸ್ಫೋಟಿ­ಸಿದ ವಿವಾದ­, ತರುವಾಯ ಬೆಂಗ­ಳೂರಿನಲ್ಲಿ ಪಿ. ಲಂಕೇಶ್, ಕಿ.ರಂ. ನಾಗರಾಜ, ಶೂದ್ರ ಶ್ರೀನಿ­ವಾಸ್, ಡಿ.ಆರ್. ನಾಗರಾಜ್ ಮೊದ­ಲಾ­ದ­ವರ ಮುಂದಾಳತ್ವದಲ್ಲಿ ನಡೆದ ಜಾಗೃತ ಸಾಹಿತ್ಯ ಸಮ್ಮೇಳನದ ಬೆಳ­ವಣಿಗೆಗಳು ಇವೆಲ್ಲ ಕಸಾಪ ಮತ್ತು ಕನ್ನಡ ಸಾಹಿತ್ಯ ಸಂಸ್ಕೃ­ತಿಯ ನಡುವಣ ಬಿರುಕು­ಗಳನ್ನು ಮತ್ತು ಚಲನ­ಶೀಲವಾದ ಸಾಹಿತ್ಯ ಸಂವೇದನೆ­ಯೊಂದಿಗೆ ಸ್ಪಂದಿಸಲಾರದ ಪರಿಷತ್ತಿನ ಜಡತ್ವವನ್ನು ತೋರಿಸುವ ನಿದರ್ಶನಗಳಾಗಿವೆ.

ಈ ಬೆಳವಣಿಗೆಗಳ ನಂತರದ ಕಾಲದಿಂದ ಇಂದಿನ ತನಕ ಅವ­ಲೋಕಿಸಿದರೆ ಪರಿಷತ್ತಿನೊಂದಿಗೆ ಯಾವುದೇ ಜೀವಂತ ಸಂಬಂಧ ಹೊಂದಿರದ ನಾನಾ ಬಗೆಯ ಸಾಹಿತಿಗಳ ಮತ್ತು ಸಂಸ್ಕೃತಿ ಚಿಂತಕರ ಹಲವು ಗುಂಪುಗಳು ಕನ್ನಡ ಪರಿಸರದಲ್ಲಿ ಬಂದು ಹೋಗಿವೆ ಮತ್ತು ಇಂದಿಗೂ ಕ್ರಿಯಾಶೀಲವಾಗಿವೆ. ದೇವನೂರ ಮಹಾದೇವರ ಇಂದಿನ ನಿಲುವಾದರೂ ವಿಘ­ಟನೆಗೊಂಡ ಈ ಸಂಬಂಧವನ್ನು ಮತ್ತು ಜಡಗೊಂಡ ಕಸಾಪದ ಸಂಕಲ್ಪಶಕ್ತಿಯನ್ನು ಪುನಃ ಜೀವಂತಗೊಳಿಸುವ ಪ್ರಯತ್ನವೆಂದು ಪರಿಷತ್ತಿನಂತಹ ಸಂಸ್ಥೆ ಭಾವಿಸಿಕೊಳ್ಳಬೇಕಾಗಿದೆ. ಅವರು ಪರಿ­ಷತ್ತಿನ ಕನ್ನಡಪರ ಕಾಳಜಿಯನ್ನು ಬೆಂಬಲಿಸಲು ಆ ನಿಲು­ವನ್ನು ತೆಗೆದುಕೊಂಡಿರುವರೇ ವಿನಾ ಪರಿಷತ್ತಿನ ಬಗ್ಗೆ ಜುಗುಪ್ಸೆ­ಗೊಂಡಲ್ಲ.

ಪರಿಷತ್ತಿನಂತಹ ಘನತೆವೆತ್ತ ಸಂಸ್ಥೆಯ ಬೇಡಿಕೆಗಳಿಗೆ ಸರ್ಕಾರಗಳು ಒಂದೆಡೆ ಜಾಣ ಕಿವುಡುತನ ತೋರಿಸುತ್ತ ಮತ್ತೊಂ­ದೆಡೆ ಕೋಟ್ಯಂತರ ರೂಪಾಯಿಗಳನ್ನು ಪ್ರಾಯೋಜಿಸಿ ಸಮ್ಮೇಳನ ನಡೆಸುತ್ತಿರುವುದು ತನಗೆ ಎಸಗುತ್ತಿರುವ ಅವಮಾನ­ವೆಂದು ಪರಿಷತ್ತು ಭಾವಿಸಬೇಕಾಗಿದೆ. ಕಸಾಪ, ಆರು ಕೋಟಿ ಕನ್ನಡಿಗರ ಆಸಕ್ತಿಯ ಕೇಂದ್ರವಾಗಿದೆ ಎಂಬ ದೂರದೃಷ್ಟಿಯಿಂದ ಸರ್ಕಾರಗಳು ಅನುದಾನ ನೀಡುತ್ತವೆಯೇ ವಿನಾ ಪರಿಷತ್ತಿನ ಕನ್ನಡಪರವಾದ ಕಾಳಜಿಗಳನ್ನು ಸಾಕಾರಗೊಳಿಸುವ ಉದ್ದೇಶ­ದಿಂದಲ್ಲ ಎಂಬುದನ್ನು ಅದು ಮರೆತಂತಿದೆ.

ದೇವನೂರರ ನಿಲುವಾದರೂ ಕನ್ನಡಿಗರಿಗೆ ಹಿಡಿದಿರುವ ಈ ವಿಸ್ಮೃತಿಯನ್ನು ಹೋಗಲಾಡಿಸಿ ಪರಿಷತ್ತಿನ ಘನತೆಯನ್ನು ಉಳಿ­ಸುವ ಪ್ರಯತ್ನವಾಗಿದೆ. ಕನ್ನಡಿಗರು ಇದನ್ನು ದೇವನೂರರ ವ್ಯಕ್ತಿ­ಗತ ನಿಲುವು ಎಂದು ಭಾವಿಸದೆ ಕನ್ನಡತನದ ಉಳಿವಿಗಾಗಿ ಈ ನಿಲುವೇ ಎಲ್ಲ ಸಾಹಿತಿಗಳಿಗೂ ಮತ್ತು ಪರಿಷತ್ತಿಗೂ ಮೇಲ್ಪಂಕ್ತಿ­ಯಾಗಬೇಕಾಗಿದೆ ಎಂದು ನಂಬುವುದೇ ಉಚಿತವೆನಿಸುತ್ತದೆ.

ಇನ್ನು ದೇವನೂರರು ತ್ಯಜಿಸಿದ ಸರ್ವಾಧ್ಯಕ್ಷ ಸ್ಥಾನದಲ್ಲಿ ಕೂರುವ ‘ಪ್ಲಾನ್ ಬಿ’ ಆಹ್ವಾನಿತ ಸಾಹಿತಿ ತಾನೊಬ್ಬ ಕನ್ನಡ ಮಾಧ್ಯಮ ವಿರೋಧಿ ಎಂಬು­ದನ್ನು ಸಾರ್ವಜ­ನಿಕ­ವಾಗಿ ಒಪ್ಪಿ­ಕೊಂಡಂತೆ ಆಗು­ತ್ತದೆ ಎಂಬ ಬೊಳುವಾರು ಅವರ ಆತಂಕ ಅನವ­ಶ್ಯಕ. ಅಂಥ­ದೊಂದು ಕಳಂಕ ಅಥವಾ ಮುಜು­ಗರ­ವನ್ನು ನಿವಾ­ರಿಸುವ ಶಕ್ತಿ ಪರಿಷತ್ತಿಗುಂಟು. ಕಸಾಪ, ‘ರಾಜಾ­ಶ್ರಯ’ದ ತೆಕ್ಕೆಗೆ ಬರುವ ಮುನ್ನ ಮೊದಲ ಸಮ್ಮೇಳನಾಧ್ಯಕ್ಷರಾಗಿದ್ದ ಎಚ್.ವಿ. ನಂಜುಂಡಯ್ಯನವರ ಕಾಲ­ದಿಂದ ಹಿಡಿದು ಬಹುಕಾಲದವರೆಗೂ ಒಂದು ಪುಟ್ಟ ಕೋಣೆ­ಯಲ್ಲಿ ಈ ಹಿಂದೆ ಹೇಳಿದಂತೆ ಕೆಲವು ಬೆರಳೆಣಿಕೆಯಷ್ಟು ಸಾಹಿ­ತ್ಯಾ­ಸಕ್ತರ ನಡುವೆ ಸಮ್ಮೇಳನ ನಡೆ­ಸಿತ್ತು.

ಇನ್ನು ಮುಂದೆಯೂ ಅದೇ ರೀತಿ (ಮಹಾದೇವ ಅವರು ಹೇಳಿ­ರು­ವಂತೆ  ಸಮ್ಮೇಳನ­ವನ್ನೇ ಬರಖಾಸ್ತು ಮಾಡಲಾಗದಿ­ದ್ದರೂ) ಶಿಕ್ಷ­ಣ­ದಲ್ಲಿ ಕನ್ನಡ ಮಾಧ್ಯಮ ಜಾರಿಯಾಗುವವರೆಗೂ ಕೊನೆಯ ಪಕ್ಷ ಸರ್ಕಾರದ ಅನುದಾನವನ್ನು ಪಡೆಯದೆ ಸಮ್ಮೇಳನಗಳನ್ನು ಸರಳವಾಗಿ, ಸಾಂಕೇತಿಕವಾಗಿ ನಡೆಸಲು ನಿರ್ಧರಿಸಿದರೆ ಪರಿಷ­ತ್ತಿನ ಹಾಗೂ ಸಾಹಿತಿಗಳ ಮರ್ಯಾದೆ ಉಳಿಯುತ್ತದೆ. ಜಗತ್ತಿನ ಯಾವ ಮೂಲೆಯಲ್ಲೂ ಸಾಹಿತ್ಯದ ಹೆಸರಿನಲ್ಲಿ ಇಷ್ಟು ದೊಡ್ಡಮಟ್ಟದ ಹಬ್ಬ ನಡೆಯುವುದಿಲ್ಲ ಎಂಬ ಹೆಗ್ಗಳಿಕೆ ಸಮ್ಮೇಳನಕ್ಕಿರಬಹುದು. ಆದರೆ ನಮ್ಮ ನಾಡಿನಲ್ಲಿ ಕನ್ನಡವನ್ನು ಅನ್ನ ನೀಡುವ ಭಾಷೆಯನ್ನಾಗಿ ಬೆಳೆಸದೆ ಬರಿದೆ ಸಮ್ಮೇಳನದ ಸಂಭ್ರಮ ಆಚರಿಸುವುದು ವಿಡಂಬನೆಯಾಗುತ್ತದೆ. ‘ಹೊಟ್ಟೆಗಿಲ್ಲ­ದವನು ಜುಟ್ಟಿಗೆ ಮಲ್ಲಿಗೆ ಹೂ’ ಮುಡಿವ ಗಾದೆಯನ್ನು ನೆನಪಿ­ಸುತ್ತದೆ.

ಕನ್ನಡದ ಉಳಿವಿಗಾಗಿ ಕನ್ನಡಿಗರು ತಮ್ಮ ಮುಡಿಗೇ­ರಿ­ರುವ ಇಂತಹ ಹೆಗ್ಗಳಿಕೆಗಳನ್ನು ತ್ಯಾಗ ಮಾಡಬೇಕಿದೆ. ಈ ತ್ಯಾಗದಿಂದ ಪರಿಷತ್ತಿನ ಅಥವಾ ದೇವನೂರರ ಬೇಡಿಕೆ (ಕನ್ನಡ ಮಾಧ್ಯಮದ ಬೇಡಿಕೆ) ಒಂದೇ ಸಲಕ್ಕೆ ಈಡೇರದಿದ್ದರೂ ಸರ್ಕಾರವು ಕನ್ನಡ ಮಾಧ್ಯಮದ ಜಾರಿಗಾಗಿ ದೃಢಸಂಕಲ್ಪ ಮಾಡಲು ಇದೇ ಒಂದು ಪ್ರೇರಣೆಯಾದೀತು. ದೇವನೂರರ ನಿಲುವನ್ನು ಅವರ ಮಟ್ಟಿಗೇ ಬಿಟ್ಟು ಬಿಡದೆ ಅದನ್ನು ಒಂದು ಚಳವಳಿಯ ರೂಪಕ್ಕೆ ಕೊಂಡೊಯ್ಯುವ ಪ್ರಕ್ರಿಯೆ ಪ್ರಾರಂಭವಾ­ದೀತು. ಮತ್ತು ಪರಿ­ಷ­ತ್ತಿನಂತಹ ದೊಡ್ಡ ಸಂಸ್ಥೆ ಪ್ರತಿವರ್ಷ ಮತ್ತೆ ಮತ್ತೆ ಅದದೇ ಅಹ­ವಾಲುಗಳನ್ನು ಸರ್ಕಾರದ ಮುಂದೆ ಮಂಡಿಯೂರಿ ಬಿನ್ನವಿ­ಸುತ್ತ ತನ್ನ ದೈನ್ಯತೆಯನ್ನು ಪ್ರದರ್ಶಿಸುವ ದುರ್ವಾರ್ತೆ­ಯನ್ನು ಕೇಳು­ವುದು ಕನ್ನಡಿಗರಿಗೆ ತಪ್ಪೀತು.
- ಡಾ.ಟಿ.ಎನ್. ವಾಸುದೇವಮೂರ್ತಿ,
ಬೆಂಗಳೂರು

* * *

ಕೋಟಾ ಹೆಸರಿನಲ್ಲಿ ಆಯ್ಕೆ ಸರಿಯೇ?
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ದಲಿತ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಬೇಕೆನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು. 2015ರ ಆರಂಭಕ್ಕೆ ಶ್ರವಣಬೆಳಗೊಳ­ದಲ್ಲಿ ನಡೆಯಬೇಕಿರುವ 81ನೇ ಸಾಹಿತ್ಯ ಸಮ್ಮೇಳನದ
ಸಂದ­ರ್ಭದಲ್ಲಿ ಇದಕ್ಕೆ ಸ್ಪಂದಿಸಿರುವ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ­ಕ್ಷರು, ದೇವನೂರ ಮಹಾದೇವ ಅವರನ್ನು ಸಂಪರ್ಕಿಸಿರುವ ವಿಚಾರ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ. ಮಹಾದೇವ ಅವರು ತಮ್ಮದೇ ಧಾಟಿಯಲ್ಲಿ  ಸಾಹಿತ್ಯ ಪರಿಷತ್ತಿನ ಈ  ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಮಹಾದೇವ ಅವರು ಕನ್ನಡಕ್ಕೆ ಸಂಬಂಧಿಸಿದಂತೆ ಎತ್ತಿರುವ ಪ್ರಶ್ನೆಗಳಿಗೆ ಪರಿ­ಹಾರ ಕಂಡುಕೊಳ್ಳಲು  ರಾಜ್ಯ ಸರ್ಕಾರ ಹೆಣಗಾಡುತ್ತಿ­ರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಮಹಾದೇವ ಅವರಂತಹ ಪ್ರತಿಭಾವಂತ ಸಾಹಿತಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ನಿಜಕ್ಕೂ ಸ್ವಾಗ­ತಾರ್ಹ. ಆದರೆ ಅವರನ್ನು ಸಂಪರ್ಕಿಸಿದ ಕ್ರಮ, ಹಿನ್ನೆಲೆ ಸರಿ­ಯಲ್ಲ. ಸಾಮಾನ್ಯವಾಗಿ ಪ್ರತಿವರ್ಷ ನಡೆಯುವ ಅಧ್ಯಕ್ಷರ ಸಹ­ಜವಾದ ಆಯ್ಕೆಯ ಪ್ರಕ್ರಿಯೆಯಲ್ಲಿ ಅವರನ್ನು ಆಯ್ಕೆ ಮಾಡಿ­ದ್ದರೆ ಸಾಹಿತ್ಯ ಪರಿಷತ್ತಿಗೂ ಮತ್ತು ಮಹಾದೇವ ಅವರಿಗೂ ನಿಜವಾದ ಗೌರವ ಸಲ್ಲುತ್ತಿತ್ತು.

ಮಹಾದೇವ ಅವರು ಬರೆದಿರು­ವುದು ಕೆಲವೇ ಕೃತಿಗಳಾದರೂ, ಅದರ ಮೂಲಕ ಇಡೀ ಸಾಹಿತ್ಯ ಜಗತ್ತು ಬೆರಗುಗೊಳ್ಳುವಂತೆ ಮಾಡಿದ್ದಾರೆ. ಹಾಗಾಗಿಯೇ ಮಹಾದೇವ ನಮ್ಮ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದ ಬರಹಗಾರ. ಅಂತಹ ಒಬ್ಬ ಸಾಹಿತಿಯನ್ನು ‘ದಲಿತ ಬರಹಗಾರ’ ಎನ್ನುವ ಹಣೆಪಟ್ಟಿಯಲ್ಲಿ, ಅನುಕಂಪದ ಅಥವಾ ಕೋಟಾ ವ್ಯಾಪ್ತಿ­ಯಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಮಹಾದೇವ ಅವ­ರಿಗೆ ಅವಮಾನ ಮಾಡಿದಂತೆ. ಈ ಅಧ್ಯಕ್ಷ ಸ್ಥಾನವನ್ನು ಒಪ್ಪಿ­ಕೊಳ್ಳುವುದು ಅಥವಾ ಬಿಡುವುದು ಅವರಿಗೆ ಸೇರಿದ ವಿಚಾರ. ಆದರೆ ಸಾಹಿತ್ಯ ಪರಿಷತ್ತು, ಸಮ್ಮೇಳನ ಅಧ್ಯಕ್ಷರನ್ನು ಆಯ್ಕೆ ಮಾಡಲು ಹೊರಟ ರೀತಿ ಸರಿಯೇ ಎಂದು ಪ್ರಜ್ಞಾವಂತ­ರಾದ­ವರು  ಪ್ರಶ್ನಿಸಿಕೊಳ್ಳುವುದು ಉಚಿತ.
- ಶಿವಾಜಿ ಗಣೇಶನ್,
ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.