ADVERTISEMENT

ಬಡ್ಡಿ ರಹಿತ ಬ್ಯಾಂಕ್‌: ಆರ್‌ಬಿಐ ಚಿಂತನೆ

ಇಸ್ಲಾಮಿಕ್ ಬ್ಯಾಂಕಿಂಗ್ ಮಾದರಿಯ ಹಣಕಾಸು ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2016, 19:30 IST
Last Updated 30 ಆಗಸ್ಟ್ 2016, 19:30 IST
ಬಡ್ಡಿ ರಹಿತ ಬ್ಯಾಂಕ್‌: ಆರ್‌ಬಿಐ ಚಿಂತನೆ
ಬಡ್ಡಿ ರಹಿತ ಬ್ಯಾಂಕ್‌: ಆರ್‌ಬಿಐ ಚಿಂತನೆ   

ಮುಂಬೈ (ಪಿಟಿಐ):  ಧಾರ್ಮಿಕ ಕಾರಣಗಳಿಂದಾಗಿ ಬ್ಯಾಂಕಿಂಗ್‌ ವಲಯದಿಂದ ಹೊರಗುಳಿದಿರುವ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್‌ ‘ಬಡ್ಡಿರಹಿತ ಬ್ಯಾಂಕಿಂಗ್‌’ ಆರಂಭಿಸುವ ಸಾಧ್ಯತೆ ಪರಿಶೀಲಿಸುತ್ತಿದೆ.

ಸರ್ಕಾರದ ಜತೆ ಸಮಾಲೋಚನೆ ನಡೆಸಿ ‘ಬಡ್ಡಿರಹಿತ ಬ್ಯಾಂಕಿಂಗ್‌’ ಆರಂಭಿಸಲಾಗುವುದು ಎಂದು  ಆರ್‌ಬಿಐ ತನ್ನ 2015–16ರ ವಾರ್ಷಿಕ ವರದಿಯಲ್ಲಿ ಹೇಳಿದೆ.
ಮುಖ್ಯವಾಹಿನಿಯಿಂದ ದೂರ ಉಳಿದಿರುವ  ಸಮುದಾಯವನ್ನು ಗುರಿಯಾಗಿಸಿಕೊಂಡು ಬಡ್ಡಿರಹಿತ ಬ್ಯಾಂಕಿಂಗ್ ಸೌಲಭ್ಯ, ಯೋಜನೆಗಳನ್ನು ಆರಂಭಿಸುವ  ಪ್ರಸ್ತಾವನೆಯನ್ನು ಸರ್ಕಾರಕ್ಕೆ  ಸಲ್ಲಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಬಡ್ಡಿ ವ್ಯವಹಾರ ನಿಷೇಧಿಸಿರುವ ಇಸ್ಲಾಂ ಧರ್ಮದ ತತ್ವಗಳ ಆಧಾರದಲ್ಲಿ ನಡೆಯುವ ‘ಇಸ್ಲಾಮಿಕ್‌ ಬ್ಯಾಂಕಿಂಗ್‌’ ಅಥವಾ ‘ಷರಿಯಾ ಬ್ಯಾಂಕಿಂಗ್‌’ ನಿಯಮಗಳ ಮಾದರಿಯಲ್ಲಿಯೇ ಬಡ್ಡಿರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಸಾಲಕ್ಕೆ ಬಡ್ಡಿ ವಸೂಲಿ ಮಾಡುವುದನ್ನು ಇಸ್ಲಾಂ ಧರ್ಮದಲ್ಲಿ ನಿಷೇಧಿಸಲಾಗಿದೆ.

ಜೆಡ್ಡಾ ಮೂಲದ ಇಸ್ಲಾಮಿಕ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಐಡಿಬಿ) ಅಹಮದಾಬಾದ್‌ನಲ್ಲಿ ಭಾರತದ ತನ್ನ ಮೊದಲ ಶಾಖೆ ಆರಂಭಿಸುವುದಾಗಿ ಈ ವರ್ಷದ ಆರಂಭದಲ್ಲಿ ಘೋಷಿಸಿತ್ತು.

ಐಡಿಬಿಯ 56 ಸದಸ್ಯ ರಾಷ್ಟ್ರಗಳ ಜತೆ ರಫ್ತು ವಹಿವಾಟು ನಡೆಸಲು ಸೌದಿ ಮೂಲದ ಬ್ಯಾಂಕ್‌ ಜತೆ ಭಾರತದ ರಫ್ತು, ಆಮದು ಬ್ಯಾಂಕ್‌  ₹680 ಕೋಟಿ ಮೊತ್ತದ ಒಪ್ಪಂದವೊಂದಕ್ಕೆಸಹಿ ಹಾಕಿತ್ತು.

ಈ ಯೋಜನೆಯು ವಿಶ್ವ ಹಿಂದೂ ಪರಿಷತ್‌ ಕೆಂಗಣ್ಣಿಗೆ ಗುರಿಯಾಗಿತ್ತು.  ಈ ಹಿಂದೆಯೂ ಕೆಲ ರಾಜಕೀಯ ಪಕ್ಷಗಳು ಈ ಬಡ್ಡಿ ರಹಿತ ಸಾಲ ಸೌಲಭ್ಯದ  ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದ್ದವು.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಅಪಾರ ಬೇಡಿಕೆ ಕಂಡುಕೊಂಡಿತ್ತು. 2008ರಲ್ಲಿ ರಘುರಾಂ ರಾಜನ್‌ ನೇತೃತ್ವದ ಹಣಕಾಸು ವಲಯ ಸುಧಾರಣೆ ಸಮಿತಿಯು ದೇಶದಲ್ಲಿ ಬಡ್ಡಿರಹಿತ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವಂತೆ  ಶಿಫಾರಸು ಮಾಡಿತ್ತು.

ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕ ದೀಪಕ್‌ ಮೊಹಾಂತಿ ನೇತೃತ್ವದ ‘ಆರ್ಥಿಕ ಒಳಗೊಳ್ಳುವಿಕೆ –ಮಧ್ಯಮಾವಧಿ ಮಾರ್ಗ’ ಮೇಲಿನ ಸಮಿತಿ  ಕೂಡ ಕಳೆದ ಡಿಸೆಂಬರ್‌ನಲ್ಲಿ ದೇಶದ ಎಲ್ಲ ಬ್ಯಾಂಕ್‌ಗಳಲ್ಲಿ ಬಡ್ಡಿರಹಿತ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸುವಂತೆ ಶಿಫಾರಸು ಮಾಡಿತ್ತು.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಂಡವಾಳ ಹೆಚ್ಚಿಸಿ’
ನವದೆಹಲಿ (ಪಿಟಿಐ): ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಸಮಸ್ಯೆ ನಿಭಾಯಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಂಡವಾಳ ಪ್ರಮಾಣ ಹೆಚ್ಚಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರತಿಪಾದಿಸಿದೆ.

‘ಐಎಫ್‌ಆರ್‌ಎಸ್ ಪರಿಷ್ಕೃತ ನಿಯಮಾವಳಿ (ಜಾಗತಿಕ  ಲೆಕ್ಕಪರಿಶೋಧನೆ ಮಾನದಂಡ) ಮತ್ತು  ಬ್ಯಾಂಕ್‌ಗಳ ಬಂಡವಾಳ ಅರ್ಹತೆ, ‘ಬಾಸೆಲ್‌3’ ನಿಯಮಾವಳಿ  ಜಾರಿಗೆ ಮುನ್ನ ಬ್ಯಾಂಕಿಂಗ್‌ ವಲಯ  ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಂಡವಾಳ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ’ ಎಂದು ಆರ್‌ಬಿಐ ಡೆಪ್ಯೂಟಿ ಗವರ್ನರ್‌ ಎನ್‌.ಎಸ್‌. ವಿಶ್ವನಾಥನ್‌ ಅಭಿಪ್ರಾಯಪಟ್ಟಿದ್ದಾರೆ.

‘ಬ್ಯಾಂಕ್‌ಗಳು ಎನ್‌ಪಿಎ ಸಮಸ್ಯೆಯನ್ನು ಸಹಜ ಸ್ಥಿತಿಗೆ ತರಲು  ಸರ್ಕಾರ ಅಗತ್ಯ ನೆರವು ನೀಡುತ್ತಿದೆ’ ಎಂದು ಅವರು ಹೇಳಿದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ( ಅಸೋಚಾಂ) ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಎಸ್‌ಬಿಐ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಸೇರಿದಂತೆ ಸರ್ಕಾರಿ ಸ್ವಾಮ್ಯದ  13 ಬ್ಯಾಂಕ್‌ಗಳಿಗೆ ಸರ್ಕಾರ ಇದುವರೆಗೆ ₹ 22,915 ಕೋಟಿ ಬಂಡವಾಳದ ನೆರವು ನೀಡಿದೆ.  ‘ಬ್ಯಾಂಕಿಂಗ್‌ ವಲಯದ ಸಮಸ್ಯೆಗಳ ನಿವಾರಣೆಗೆ ಒಟ್ಟು ನಾಲ್ಕು ವರ್ಷಗಳಲ್ಲಿ ಸರ್ಕಾರ ₹70 ಸಾವಿರ ಕೋಟಿ ಬಂಡವಾಳ ಒದಗಿಸಲಿದೆ’ ಎಂದೂ ವಿಶ್ವನಾಥನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT