ADVERTISEMENT

ಕುಲಪತಿ ಆಯ್ಕೆ: ಓಲೈಕೆ ರಾಜಕಾರಣ ಬೇಡ

ಶರತ್ ಅನಂತಮೂರ್ತಿ
Published 9 ಜನವರಿ 2013, 19:59 IST
Last Updated 9 ಜನವರಿ 2013, 19:59 IST

ಪದೇ ಪದೇ ಉನ್ನತ ಶಿಕ್ಷಣದ ಗುಣಮಟ್ಟ ಕುಸಿದಿರುವುದರ ಬಗ್ಗೆ ಮತ್ತು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಕುಸಿಯುತ್ತಲೇ ಹೋಗುತ್ತಿರುವುದರ  ಕುರಿತ ದೂರುಗಳನ್ನು ಕೇಳುತ್ತಲೇ ಬಂದಿದ್ದೇವೆ. ಇದಕ್ಕಿರುವ ಅನೇಕ ಕಾರಣಗಳಲ್ಲಿ ಒಂದು ಮುಖ್ಯವಾದ ಕಾರಣ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಎದುರಿಸುತ್ತಿರುವ ನಾಯಕತ್ವ ಗುಣಮಟ್ಟದ ಕುಸಿತ. ಈ ಗುಣಮಟ್ಟ ಕುಸಿತದ ಹಿಂದೆ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಆರಿಸುವ ಕ್ರಿಯೆಯ ಹಿಂದೆ ಮುಖ್ಯ ಪಾತ್ರವಹಿಸುವ ಓಲೈಕೆ ಪ್ರವೃತ್ತಿ ಇದೆ.

ಈಗ ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆಯನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಶೋಧನಾ ಸಮಿತಿಗಳ ಮುಂದೆ ಕುಲಪತಿ ಹುದ್ದೆ ಆಕಾಂಕ್ಷಿಗಳ ಅರ್ಜಿಗಳಿವೆ. ಹಾಗೆಯೇ ಅರ್ಜಿ ಸಲ್ಲಿಸದೇ ಇರುವ ಆದರೆ ಈ ಹುದ್ದೆಗೆ ಬೇಕಾದ ಎಲ್ಲಾ ಅರ್ಹತೆಗಳಿರುವ ಕೆಲವರ ಹೆಸರನ್ನೂ ಶೋಧನಾ ಸಮಿತಿಗಳು ಪರಿಗಣಿಸಬಹುದು. ಶೋಧನಾ ಸಮಿತಿ ಹುದ್ದೆಗೆ ಮೂವರ ಹೆಸರನ್ನು ಅಂತಿಮಗೊಳಿಸಿ ಆ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತದೆ. ರಾಜ್ಯಪಾಲರು ಇದರಲ್ಲಿ ಒಬ್ಬರನ್ನು ಕುಲಪತಿ ಹುದ್ದೆಗೆ ಆರಿಸುತ್ತಾರೆ.

ಈಗಾಗಲೇ ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೇರುವ `ಸಂಭಾವ್ಯರ' ಹೆಸರುಗಳು ಮತ್ತು ಅವರು ಈ ಹುದ್ದೆಗಾಗಿ ನಡೆಸುತ್ತಿರುವ `ತಂತ್ರ'ಗಳ ಕುರಿತಂತೆ ಸಾಕಷ್ಟು ವದಂತಿಗಳು ಹರಡಿವೆ. ಈ ವದಂತಿಗಳು ನಿಜವೇ ಆಗಿದ್ದರೆ ಈ ಮಾಹಿತಿಗಳು ಹೇಗೆ ಬಹಿರಂಗಗೊಂಡವು ಎಂಬ ಪ್ರಶ್ನೆಯೊಂದು ಇದ್ದೇ ಇದೆ. ಕೆಲವು `ಅರಿವುಳ್ಳವರು' ನೀಡುವ ಮಾಹಿತಿಯಂತೆ ಮೊದಲಿಗೆ ಆಕಾಂಕ್ಷಿಗಳು ತಮ್ಮ ಹೆಸರು ರಾಜ್ಯಪಾಲರಿಗೆ ಸಲ್ಲಿಸಲಾಗುವ ಪಟ್ಟಿಯಲ್ಲಿರುವ ಮೂರು ಹೆಸರುಗಳಲ್ಲಿ ಒಂದಾಗಿರುವುದನ್ನು ಖಚಿತ ಪಡಿಸಿಕೊಳ್ಳುತ್ತಾರಂತೆ. ಆಮೇಲೆ ಹುದ್ದೆಗೆ ತಾವೇ ಆಯ್ಕೆಯಾಗಲು ಬೇಕಾದ ತಂತ್ರಗಳನ್ನು ರೂಪಿಸುತ್ತಾರೆ!

ಮೈಸೂರು ವಿಶ್ವವಿದ್ಯಾಲಯನ್ನು ವಿಭಜಿಸಿ ಬೆಂಗಳೂರು ವಿಶ್ವವಿದ್ಯಾಲಯವನ್ನು ರೂಪಿಸಲಾಯಿತು. ಈ ಎರಡೂ ವಿಶ್ವವಿದ್ಯಾಲಯಗಳು ಬಹುಕಾಲ ತಮ್ಮ ಬೌದ್ಧಿಕ ಶ್ರೀಮಂತಿಕೆಗೆ ಹಾಗೂ ಅವುಗಳ ವಿವಿಧ ವಿಭಾಗಗಳಲ್ಲಿದ್ದ ಅತ್ಯುತ್ತಮ ವಿದ್ವಾಂಸರಿಂದಲೇ ಪ್ರಸಿದ್ಧವಾಗಿದ್ದವು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾನವಿಕ ವಿಭಾಗಗಳಲ್ಲಿ ಕುವೆಂವು, ಎಸ್. ರಾಧಾಕೃಷ್ಣನ್ ಮತ್ತು ಎಂ.ಹಿರಿಯಣ್ಣನವರಂಥ ವಿದ್ವಾಂಸರಿದ್ದರು. ಮುಂದಿನ ದಿನಗಳಲ್ಲಿ ಭೌತಶಾಸ್ತ್ರ, ತತ್ವಶಾಸ್ತ್ರ, ಇಂಗ್ಲಿಷ್, ಗಣಿತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರಗಳಂಥ ವಿಭಾಗಗಳಲ್ಲಿಯೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ವಿದ್ವಾಂಸರಿದ್ದರು. ಕೆಲವರಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿದ್ವತ್ತಿಗೆ ಮನ್ನಣೆ ಪಡೆದಿದ್ದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜು ಕೂಡಾ ತನ್ನದೇ ಆದ ಸಂಖ್ಯೆಯ ಪ್ರಖ್ಯಾತ ವಿದ್ವಾಂಸರನ್ನು ಹೊಂದಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವಂತೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದ ದಿಕ್ಕನ್ನು ನಿರ್ದೇಶಿಸುವಂಥ ವಿದ್ವಾಂಸರನ್ನು ಸೃಷ್ಟಿಸಿತ್ತು. ಇದೆಲ್ಲವೂ ಸಾಧ್ಯವಾಗಿದ್ದು ಗಂಭೀರವಾದ ಅಧ್ಯಯನದ ಉದ್ದೇಶವನ್ನು ಗುರಿಯಾಗಿಟ್ಟುಕೊಂಡು ಅದನ್ನು ಅನುಸರಿಸುವಂಥ ವಾತಾವರಣದಲ್ಲಿ. ಈ ಕ್ರಿಯೆಯ ಹಿಂದೆ ಬಹುಮುಖ್ಯ ಪಾತ್ರವಹಿಸಿದ್ದು ಕುಲಪತಿ ಸ್ಥಾನದಲ್ಲಿದ್ದ ಧೀಮಂತರು.

ಬೋಧನೆ ಮತ್ತು ಸಂಶೋಧನೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯಗಳ ಶಿಕ್ಷಕರು ತಮ್ಮ ತಮ್ಮ ವಿಭಾಗಗಳಲ್ಲೇ ಇದ್ದುಕೊಂಡು ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಇಲ್ಲವೇ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿರುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಥವರ ಸಂಖ್ಯೆ ಬಹಳ ಕಡಿಮೆಯಾಗಿಬಿಟ್ಟಿದೆ. ಸಾಲದ್ದಕ್ಕೆ ಇವರು ಎದುರಿಸಬೇಕಾದ ಸಮಸ್ಯೆಗಳ ಸಂಖ್ಯೆಯೂ ಹೆಚ್ಚಾಗಿದೆ. ರಾಜ್ಯ ಸರ್ಕಾರ ಅಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳ ಶಿಕ್ಷಕರು ತಾವೇ ಕಷ್ಟಪಟ್ಟು ತರುವ ಸಂಶೋಧನಾ ಅನುದಾನವನ್ನು ವ್ಯಯಿಸುವುದಕ್ಕೂ  ವಿಶ್ವವಿದ್ಯಾಲಯಗಳಲ್ಲಿರುವ ಕೆಂಪುಪಟ್ಟಿಯ  ಜೊತೆ ಸತತವಾಗಿ ಸೆಣಸಿದರಷ್ಟೇ ಸಂಶೋಧನೆ ನಡೆಸಲು ಸಾಧ್ಯ ಎನ್ನುವಂಥ ವಾತಾವರಣವಿದೆ.

ಇಲ್ಲಿ ಮತ್ತೊಂದು ವಿಚಾರವೂ ಇದೆ. ಕೇಂದ್ರ ಸರ್ಕಾರವೂ ಸೇರಿದಂತೆ ವಿವಿಧ ಮೂಲಗಳಿಂದ ಬರುವ ಸಂಶೋಧನಾ ಅನುದಾನಗಳ ಬಹುಭಾಗ ಸಂಶೋಧನೆಗೆ ಅಗತ್ಯವಿರುವ ಮೂಲ ಸೌಕರ್ಯ ಸೃಷ್ಟಿಗೆ ವೆಚ್ಚವಾಗುತ್ತದೆ. ನಿರ್ದಿಷ್ಟ ಸಂಶೋಧನಾ ಪ್ರಕ್ರಿಯೆ ಮುಗಿದ ನಂತರ ಈ ಮೂಲ ಸೌಕರ್ಯ ವಿಶ್ವವಿದ್ಯಾಲಯಕ್ಕೇ ಉಳಿಯುತ್ತದೆ.

ಈ ಮೂಲ ಸೌಕರ್ಯವನ್ನೇ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಳಿದ ಆಸಕ್ತರು ಬಳಸಿಕೊಂಡು ಮತ್ತಷ್ಟು ಸಂಶೋಧನೆಗಳನ್ನು ನಡೆಸಲು ಸಾಧ್ಯವಾಗುತ್ತದೆ.  ಅಂದರೆ ಸಂಶೋಧನಾ ಅನುದಾನಗಳನ್ನು ಪ್ರಾಧ್ಯಾಪಕರೊಬ್ಬರು ತರುತ್ತಾರೆಂದರೆ ಮತ್ತೊಂದು ಅರ್ಥದಲ್ಲಿ ಅವರು ವಿಶ್ವವಿದ್ಯಾಲಯಕ್ಕೆ ಹೊಸತೊಂದು ಮೂಲ ಸೌಕರ್ಯವನ್ನೂ ಸೃಷ್ಟಿಸುತ್ತಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಆಡಳಿತಾತ್ಮಕ ಸ್ಥಾನಗಳಿಗೆ ಹಾತೊರೆಯುವವರು ಮೇಲಧಿಕಾರಿಗಳ ಜೊತೆಗೆ `ಚೆನ್ನಾಗಿರುವ' ಉದ್ದೇಶದಿಂದ ಆಡಳಿತ ಕಚೇರಿಯಲ್ಲೇ ಠಳಾಯಿಸುತ್ತಿರುತ್ತಾರೆ. ತಮ್ಮ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಇರಬೇಕಾದವರು ತಮ್ಮೆದುರೇ ಸುಳಿದಾಡುತ್ತಿರುವವರ ಬಗ್ಗೆ ಈ ತಥಾಕಥಿತ ಮೇಲಧಿಕಾರಿಗಳಿಗೂ ಯಾವ ಆಕ್ಷೇಪವೂ ಇಲ್ಲ. ಅವರಿಗೆ ತಮ್ಮ ಆಡಳಿತಾತ್ಮಕ ಸಾಮರ್ಥ್ಯದ ಬಗ್ಗೆ ಇಂಥವರು ಹಾಡುವ ಸ್ತುತಿಗೀತೆಗಳನ್ನು ಕೇಳುವುದೇ ಇಷ್ಟ.

ಇದಕ್ಕಿಂತ ದುರಂತದ ಸಂಗತಿಯೆಂದರೆ ವಿಶ್ವವಿದ್ಯಾಲಯಗಳ ಅತ್ಯುನ್ನತ ಆಡಳಿತಾತ್ಮಕ ಸ್ಥಾನದ ಆಕಾಂಕ್ಷಿಗಳೆಂದು ಪ್ರಸಿದ್ಧರಾಗಿರುವವರ ಹಣ ಬಲದ ಮತ್ತು ಅದು ಅದನ್ನು ಗಳಿಸಿರುವ ವಿಧಾನದ ಕುರಿತಂತೆ ಕೇಳಿಬರುತ್ತಿರುವ ಮಾತುಗಳು. ಈ ಮಾತುಗಳು ಸಿನಿಕತನದ್ದೆಂದು ಅನ್ನಿಸಿದರೂ ಇವುಗಳಲ್ಲಿ ಕೆಲಮಟ್ಟಿಗಿನ ವಾಸ್ತವವೂ ಇದೆ. ದೊಡ್ಡ ಸಂಶೋಧನಾ ಯೋಜನೆಗಳ ಸಂಪನ್ಮೂಲದಿಂದ ಬಗೆ ಬಗೆಯ `ಕಟ್'ಗಳಿಂದ ಆರಂಭಿಸಿ ಕಡಿಮೆ ಖರ್ಚಿನ ಸಂಶೋಧನಾ ಯೋಜನೆಗಳಿಗೆ ದೊಡ್ಡ ವೆಚ್ಚವನ್ನು ಬಿಲ್‌ಗಳಲ್ಲಷ್ಟೇ ತೋರಿಸುವ ತನಕದ ಅನೇಕ ಕ್ರಿಯೆಗಳಲ್ಲಿ ಈ ಸ್ವಂತ ಜೇಬು ತುಂಬಿಸಿಕೊಳ್ಳುವ ಕೆಲಸ ನಡೆಯುತ್ತದೆ.

ಇದರ ಜೊತೆಗೆ ಬೇರೆ ಬೇರೆ ಜಾತಿ ಮತ್ತು ಸಮುದಾಯಗಳು ತಮ್ಮ ಜಾತಿಗೆ ಸೇರಿದವರ ಕುಲಪತಿ ಆಕಾಂಕ್ಷೆಯನ್ನು ಬೆಂಬಲಿಸಿ ಅದನ್ನು `ಗಳಿಸಲು' ಬೇಕಾದ ಸಂಪನ್ಮೂಲ ಒದಗಿಸುತ್ತವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಬಗೆಯಲ್ಲಿ ಹಣಬಲದಿಂದ ಕುಲಪತಿಗಳಾಗುವವರು ಸಹಜವಾಗಿಯೇ ಹುದ್ದೆಗೇರಿದ ನಂತರ `ಸಂಪನ್ಮೂಲ' ಒದಗಿಸಿದವರಿಗೆ ಉಪಕಾರಿಯಾಗಿರುತ್ತಾರೆ.

ಈ ಸಹಾಯಗಳು ತಮ್ಮ ವ್ಯಾಪ್ತಿಯಲ್ಲಿರುವ ಖಾಸಗಿ ವಿದ್ಯಾಸಂಸ್ಥೆಗಳಿಗೆ ಅನುಕೂಲಕರವಾದ ನಿರ್ಧಾರ ಕೈಗೊಳ್ಳುವುದರಿಂದ ಆರಂಭಿಸಿ ಕನಿಷ್ಠ ಗುಣಮಟ್ಟವೂ ಇಲ್ಲದ, ನಿಯಮಗಳನ್ನು ಪಾಲಿಸಿದ ಸಂಸ್ಥೆಗಳ ನಿರ್ವಹಣೆಯ ಕುರಿತಂತೆ ಕಣ್ಣುಮುಚ್ಚಿ ಕುಳಿತುಕೊಳ್ಳುವ ತನಕದ ಯಾವುದೂ ಆಗಿರಬಹುದು.

ಸದ್ಯ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಯ ಶೋಧನಾ ಸಮಿತಿ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಶೋಧನಾ ಸಮಿತಿ ಭಾಗಶಃ ರೂಪುಗೊಂಡಿದೆ. ಈ ಸಮಿತಿಗಳ ಸದಸ್ಯರು ದೊಡ್ಡ ವಿದ್ವಾಂಸರು. ಇವರಲ್ಲಿ ಕೆಲವರು ಉತ್ತಮ ಆಡಳಿತಕ್ಕಾಗಿಯೂ ಹೆಸರು ಮಾಡಿದವರು. ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ-2000 ಈ ಮೊದಲಿನ ಕಾಯ್ದೆಗೆ ಹೋಲಿಸಿದರೆ ಬಹಳ ದುರ್ಬಲ. ಇದು ಕುಲಪತಿ ಶೋಧನಾ ಸಮಿತಿ ಮತ್ತು ರಾಜ್ಯಪಾಲರಿಗಿದ್ದ ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ಕಡಿಮೆ ಮಾಡಿದೆ. ಆದರೂ ಈ ಸಮಿತಿಗಳು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಿಗಿದ್ದ ಹಿಂದಿನ ಘನತೆ ಮತ್ತು ಪ್ರತಿಷ್ಠೆಯನ್ನು ಮತ್ತೆ ತಂದುಕೊಡುವಂಥ ವ್ಯಕ್ತಿಗಳನ್ನು ಕುಲಪತಿ ಹುದ್ದೆಗೆ ಸೂಚಿಸುವ ಕೆಲಸ ಮಾಡುವುದಕ್ಕೆ ಹೆಚ್ಚಿನ ಅಡ್ಡಿ ಆತಂಕಗಳಿಲ್ಲ.

ಅರ್ಹರನ್ನು ಆಯ್ಕೆ ಮಾಡುವ ಈ ಕಠಿಣ ಪ್ರಕ್ರಿಯೆಯಲ್ಲಿ ಗುಣಮಟ್ಟವೇ ಇಲ್ಲದ ನಾಮ ಮಾತ್ರದ ವಿದ್ವತ್ಪತ್ರಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳ ಪಟ್ಟಿಯ ಮೂಲಕ ತಮ್ಮ ವೈಯಕ್ತಿಕ ವಿವರಗಳ ಪಟ್ಟಿಯನ್ನು ದೊಡ್ಡದಾಗಿಸಿಕೊಂಡವರು, ವಿವಿಧ ಹಿತಾಸಕ್ತಿಗಳ ಬೆಂಬಲ, ವಶೀಲಿಗಳು ಮತ್ತು ಶಿಫಾರಸು ಪತ್ರಗಳ ಮೂಲಕ ಉನ್ನತ ಹುದ್ದೆಗೆ ಪ್ರಯತ್ನಿಸುತ್ತಿರುವವರನ್ನು ಹೊರಗಿಟ್ಟು, ವಿಶ್ವವಿದ್ಯಾಲಯಗಳಿಗೊಂದು ಹೊಸ ದಿಕ್ಕನ್ನೂ ಸಮಕಾಲೀನ ಸಂದರ್ಭಕ್ಕೆ ಅನುಗುಣವಾದ ಕಾಣ್ಕೆಯನ್ನು ನೀಡಬಲ್ಲ ನಿಜವಾದ ಅರ್ಹ ವಿದ್ವಾಂಸರನ್ನು ಆರಿಸುತ್ತದೆ ಎಂಬ ನಂಬಿಕೆಯನ್ನು ಸಮಿತಿ ಹುಸಿಗೊಳಿಸದಿರಲಿ.

ಮಂತ್ರಿಗಳು ಮತ್ತು ಶಾಸಕರ ರಾಜಕೀಯ ಒತ್ತಡಗಳಿಗೆ ಮಣಿಯದಂಥ ವಿದ್ವಾಂಸರನ್ನು ಇಂಥ ಹುದ್ದೆಗೆ ಆರಿಸುವುದು ಈ ಹೊತ್ತಿನ ಅಗತ್ಯಗಳಲ್ಲೊಂದು. ಕುಲಪತಿಯಂಥ ಹುದ್ದೆಗಳಿಗೆ ಆಯ್ಕೆ ಮಾಡುವಾಗ ವಿದ್ವತ್ತಿಗಿಂತ ಹೆಚ್ಚಾಗಿ ಜಾತಿ, ಪ್ರಾದೇಶಿಕತೆ ಮೊದಲಾದುವುಗಳನ್ನೂ ಗಮನಿಸಬೇಕೆಂಬ ಒತ್ತಡ ಶೋಧನಾ ಸಮಿತಿಯ ಮೇಲೆ ಇರುವುದೀಗ  ಗುಟ್ಟಾಗಿ ಉಳಿದಿಲ್ಲ. ಇಂಥ ಸಮತೋಲವನ್ನು ಸಾಧಿಸುವುದನ್ನು ಸರಿ ಎಂದು ಒಪ್ಪಿಕೊಳ್ಳುವುದಾದರೆ ಆಯ್ಕೆಯಾಗುವವರು ವೈವಿಧ್ಯಮಯ ಹಿನ್ನೆಲೆಯಿಂದ ಬಂದವರಿಗೆ ಅವಕಾಶ ಕಲ್ಪಿಸಿ ವಿಶ್ವವಿದ್ಯಾಲಯ ಬಹುಮುಖಿಯಾಗಿ ಬೆಳೆಯುವಂತೆ ಮಾಡುವ ಬದಲಿಗೆ ನಿರ್ದಿಷ್ಟ ಸಮುದಾಯ, ಜಾತಿಗಳಿಗೆ ಪ್ರಾತಿನಿಧ್ಯ ಒದಗಿಸುವ ತಾಣವನ್ನಾಗಿ ಮಾರ್ಪಡಿಸುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಎಲ್ಲದಕ್ಕಿಂತ ಮುಖ್ಯವಾಗಿ ಶೋಧನಾ ಸಮಿತಿ ಕುಲಪತಿಯ ಆಯ್ಕೆ ಮಾಡುವಾಗ ಕೇವಲ ಅರ್ಜಿಗಳನ್ನು ಸಲ್ಲಿಸಿರುವವರನ್ನಷ್ಟೇ ಪರಿಗಣಿಸದೆ ಹೀಗೆ ಅರ್ಜಿಯನ್ನು ಸಲ್ಲಿಸುವ, ಹುದ್ದೆಗಾಗಿ ವಶೀಲಿ ಬಾಜಿ ಮಾಡುವ ಆಸಕ್ತಿಯಿಲ್ಲದೆ ಆದರೆ ನಿಜವಾದ ನಾಯಕತ್ವ ಗುಣಗಳನ್ನಿಟ್ಟುಕೊಂಡು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಗ್ನರಾಗಿರುವ ಧೀಮಂತರನ್ನೂ ಪರಿಗಣಿಸಬೇಕು. ಆಗ ಮಾತ್ರ ಶೋಧನಾ ಸಮಿತಿ ನಡೆಸುವ ಆಯ್ಕೆ ಪ್ರಕ್ರಿಯೆ ನಿಜ ಅರ್ಥದಲ್ಲಿ ಪ್ರತಿಭೆಗಳನ್ನು ಶೋಧಿಸುವ ಕ್ರಿಯೆಯಾಗುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ. editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT