ADVERTISEMENT

‘ಕೈ’ ಹಿಡಿಯದ ಲಿಂಗಾಯತ ಪ್ರತ್ಯೇಕ ಧರ್ಮದ ನಡೆ

ಉಮಾಪತಿ
Published 15 ಮೇ 2018, 19:30 IST
Last Updated 15 ಮೇ 2018, 19:30 IST
‘ಕೈ’ ಹಿಡಿಯದ ಲಿಂಗಾಯತ ಪ್ರತ್ಯೇಕ ಧರ್ಮದ ನಡೆ
‘ಕೈ’ ಹಿಡಿಯದ ಲಿಂಗಾಯತ ಪ್ರತ್ಯೇಕ ಧರ್ಮದ ನಡೆ   

ಬೆಂಗಳೂರು: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಡೆಯ ಗಳಿಗೆಯ ನಿರ್ಧಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭ ನೀಡಿಲ್ಲ.

ಬಸವ ತತ್ವ ಆಚರಣೆಯ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಕಳಿಸಿದ ನಡೆ ವಿವಾದ ಎಬ್ಬಿಸಿತ್ತು. ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ವೀರಶೈವ- ಲಿಂಗಾಯತ ಧರ್ಮವನ್ನು ಒಡೆದು ಮತ ಸೆಳೆಯುವ ರಾಜಕೀಯ ತಂತ್ರವಿದು ಎಂಬ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸಿದ್ದರು. ಲಿಂಗಾಯತ ಸಮುದಾಯದ ಒಳಗಿನಿಂದಲೂ ಈ ಟೀಕೆ ದೊಡ್ಡ ಪ್ರಮಾಣದಲ್ಲಿ ಕೇಳಿಬಂದಿತ್ತು. ಲಿಂಗಾಯತ-ವೀರಶೈವದ ‘ರಾಜಕಾರಣ’ ನೆಲಮಟ್ಟದಲ್ಲಿ ಚುನಾವಣೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ ಎಂದು ‘ಪ್ರಜಾವಾಣಿ’ ವರದಿ ಮಾಡಿತ್ತು.

ವಾಸ್ತವವಾಗಿ ಈ ತೀರ್ಮಾನದಿಂದ ಹೆಚ್ಚಿನ ಮತ ಗಳಿಕೆಯ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿರಲಿಲ್ಲ. ಶೇಕಡ ಮೂರರಷ್ಟು ಮತಗಳು ಬಂದರೂ ಸಾಕು, ಪರಂಪರಾಗತವಾಗಿ ಕಾಂಗ್ರೆಸ್ ವಿರೋಧಿ ಮತ್ತು ಬಿಜೆಪಿಯ ಗಟ್ಟಿ ಬೆಂಬಲ ನೆಲೆ ಎನಿಸಿಕೊಂಡಿರುವ ಲಿಂಗಾಯತ ಸಮುದಾಯದಲ್ಲಿ ಗೊಂದಲ ಎಬ್ಬಿಸುವ ಅವಕಾಶ ದೊರೆಯುತ್ತದೆ ಎಂದು ಕಾಂಗ್ರೆಸ್ ಎದುರು ನೋಡಿತ್ತು.

ADVERTISEMENT

ಆದರೆ ಲಿಂಗಾಯತ- ವೀರಶೈವ ಸಮುದಾಯವು, ಚುನಾವಣೆ ಕದ ಬಡಿದ ಹೊತ್ತಿನಲ್ಲಿ ಕಾಂಗ್ರೆಸ್ ಎಸೆದ ಈ ಗಾಳವನ್ನು ಕಚ್ಚಿಕೊಂಡಿಲ್ಲ. ‘ಧರ್ಮವನ್ನು ಒಡೆದರು’ ಮತ್ತು  ‘ಲಿಂಗಾಯತರಾದ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಕಾಂಗ್ರೆಸ್ ಪಕ್ಷ ಹೂಡಿರುವ ಹುನ್ನಾರವಿದು’ ಎಂಬ ವೀರಶೈವ ಪ್ರಚಾರಕ್ಕೆ ಹೆಚ್ಚಿನ ಚಲಾವಣೆ ದೊರೆತಿರುವುದು ನಿಚ್ಚಳ.

ವೀರಶೈವ-ಲಿಂಗಾಯತ ಅಖಂಡತೆಯನ್ನು ಕಾಪಾಡುವ ಅಭ್ಯರ್ಥಿಗಳಿಗೆ ಮಾತ್ರವೇ ನಮ್ಮವರು ಮತ ನೀಡಬೇಕು, ಧರ್ಮವನ್ನು ಒಡೆಯಲು ಮುಂದಾಗಿರುವವರನ್ನು ಸೋಲಿಸಬೇಕು ಎಂಬುದಾಗಿ ಕೆಲವು ಪಂಚಾಚಾರ್ಯ ಪೀಠಗಳು ಬಹಿರಂಗವಾಗಿ ಕರೆ ನೀಡಿದವು. ಪ್ರತ್ಯೇಕ ಲಿಂಗಾಯತ ಧರ್ಮ ಆಂದೋಲನದ ಮುಂಚೂಣಿಯಲ್ಲಿದ್ದ ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಹಾಗೂ ಶರಣಪ್ರಕಾಶ ಪಾಟೀಲರನ್ನು ಸೋಲಿಸಲು ವೀರಶೈವ– ಲಿಂಗಾಯತ ಕಾರ್ಯಕರ್ತರ ಪಡೆಗಳೇ ಕಾರ್ಯಕ್ಷೇತ್ರಕ್ಕೆ ಇಳಿದಿದ್ದವು. ಧಾರವಾಡ ಗ್ರಾಮಾಂತರದಿಂದ ವಿನಯ ಕುಲಕರ್ಣಿ ಮತ್ತು ಸೇಡಂ ಕ್ಷೇತ್ರದಲ್ಲಿ ಶರಣಪ್ರಕಾಶ ಪಾಟೀಲ ಸೋತಿದ್ದಾರೆ. ಆದರೆ ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲರನ್ನು ಸೋಲಿಸುವ ಪ್ರಯತ್ನ ಫಲ ನೀಡಿಲ್ಲ. ಪ್ರತ್ಯೇಕ ಧರ್ಮ ಸ್ಥಾನಮಾನ ವಿರೋಧಿಸುವ ವೀರಶೈವರು ಈ ವೈಫಲ್ಯವನ್ನು ತಮಗೆ ಆದ ದೊಡ್ಡ ಹಿನ್ನಡೆ ಎಂದು ಭಾವಿಸಿದರೆ ಆಶ್ಚರ್ಯವಿಲ್ಲ. ಖುದ್ದು ಲಿಂಗಾಯತರಾಗಿ ತಮ್ಮ ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದ ಸಚಿವರೂ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆಯಿಂದ ಆರಿಸಿ ಬಂದಿದ್ದಾರೆ. ತಂದೆಯ ಹಾದಿಯನ್ನೇ ತುಳಿದಿದ್ದರೂ ಅವರ ಮಗ ಎಸ್‌.ಎಸ್‌.ಮಲ್ಲಿಕಾರ್ಜುನ ಸೋತಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರಂತೆ ಪ್ರತ್ಯೇಕ ಧರ್ಮ ನಿರ್ಧಾರವನ್ನು ವಿರೋಧಿಸಿದ್ದ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಪುನಃ ಆರಿಸಿ ಬಂದಿದ್ದಾರೆ.

‘ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಯ ಉದಾತ್ತ ಉದ್ದೇಶಗಳು ಲಿಂಗಾಯತ ಸಮುದಾಯದ ಬೇರು ಮಟ್ಟಕ್ಕೆ ಮುಟ್ಟಲಿಲ್ಲ. ಈ ಕೆಲಸಕ್ಕೆ ಸಾಕಷ್ಟು ಕಾಲಾವಕಾಶವೂ ಇರಲಿಲ್ಲ. ಚುನಾವಣೆಗಳು ಕದ ತಟ್ಟಿದ್ದ ಹೊತ್ತಿನಲ್ಲಿ ಈ ಘೋಷಣೆ ಮಾಡಿದ್ದು ತಪ್ಪು ಎಂದು ಆಂದೋಲನದ ಕಟ್ಟಾ ಬೆಂಬಲಿಗರೊಬ್ಬರು ‘ಪ್ರಜಾವಾಣಿ’ಯ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ಸಮಾವೇಶಗಳಿಗೆ ಬಂದವರೆಲ್ಲ ಕಾಂಗ್ರೆಸ್ಸಿಗೇ ಮತ ಹಾಕಿದ್ದಾರೆ. ಮೊದಲ ಸಲ ಮತದಾನ ಮಾಡಿದ ಶೇ 90ರಷ್ಟು ಲಿಂಗಾಯತ ಯುವಜನ ಸಾರಾಸಗಟಾಗಿ ಮೋದಿಯವರನ್ನು ಬೆಂಬಲಿಸಿದ್ದಾರೆ. ಅವರಿಗೆ ತಿಳಿವಳಿಕೆ ನೀಡುವಲ್ಲಿ ಆಂದೋಲನ ಸಫಲ ಆಗಲಿಲ್ಲ. ಬಹುತೇಕ ಹಿರಿಯ ತಲೆಮಾರಿಗೂ ಈ ಹೊಸ ಬೆಳವಣಿಗೆಯ ನಿಜ ಅರ್ಥ ಆಗಲೇ ಇಲ್ಲ. ಮಾತೆ ಮಹಾದೇವಿಯವರ ವಿನಾ ಮಠಾಧೀಶರು ಹೊರಗೂ ಗಟ್ಟಿಯಾಗಿ ಹೇಳಲಿಲ್ಲ, ಒಳಗೂ ಗಟ್ಟಿಯಾಗಿ ಹೇಳಲಿಲ್ಲ’ ಎಂಬುದು ಲಿಂಗಾಯತ ಪ್ರತ್ಯೇಕ ಧರ್ಮವನ್ನು ಬೆಂಬಲಿಸಿದ ಮತ್ತೊಬ್ಬ ಪ್ರಮುಖರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.