ADVERTISEMENT

ಕ್ಯಾಪಿಟಲ್ 150

​ಪ್ರಜಾವಾಣಿ ವಾರ್ತೆ
Published 4 ಮೇ 2018, 21:50 IST
Last Updated 4 ಮೇ 2018, 21:50 IST
ಕ್ಯಾಪಿಟಲ್ 150
ಕ್ಯಾಪಿಟಲ್ 150   

ಕಾರ್ಲ್ ಮಾರ್ಕ್ಸ್‌ನ ಇನ್ನೂರನೇ ಜನ್ಮಶತಾಬ್ದಿ ಹಾಗೂ ‘ದಾಸ್‌ ಕ್ಯಾಪಿಟಲ್’ ಕೃತಿಗೆ 150 ವರ್ಷ ತುಂಬುವ ವಿಶಿಷ್ಟ ಸಂದರ್ಭದಲ್ಲಿ, ಮಾರ್ಕ್ಸ್‌ನ ಪ್ರಮುಖ ಕೃತಿಗಳು ಕನ್ನಡದಲ್ಲಿ ಪ್ರಕಟಗೊಳ್ಳುತ್ತಿವೆ. ಪುಸ್ತಕ ಪ್ರಕಟಣೆಯ ಮೂಲಕ 2018ನೇ ವರ್ಷವನ್ನು ‌‘ಮಾರ್ಕ್ಸ್‌ 200; ಕ್ಯಾಪಿಟಲ್ 150’ ಹೆಸರಿನಲ್ಲಿ ಆಚರಿಸಲು ನವಕರ್ನಾಟಕ ಪ್ರಕಾಶನ ಹಾಗೂ ಕ್ರಿಯಾ ಮಾಧ್ಯಮ ಪ್ರೈ. ಲಿ. ಯೋಜನೆ ರೂಪಿಸಿವೆ.

ಮಾರ್ಕ್ಸ್‌ ಸಂಭ್ರಮದ ಭಾಗವಾಗಿ ಮೇ 20ರಂದು ‌‘ಪ್ಯಾರಿಸ್‌ ಕಮ್ಯೂನ್’ (ಅ: ವಿಶ್ವ ಕುಂದಾಪುರ) ಹಾಗೂ ‘ತತ್ವಶಾಸ್ತ್ರದ ದಾರಿದ್ರ್ಯ’ (ಕೆ.‍ಪಿ. ವಾಸುದೇವ) ಕೃತಿಗಳು ಬಿಡುಗಡೆಯಾಗಲಿವೆ. ಬೆಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಾರ್ಕ್ಸ್‌ ಜೀವನ–ಚಿಂತನೆಗೆ ಸಂಬಂಧಿಸಿದ ಚಟುವಟಿಕೆಗಳು ಇಡೀ ದಿನ ನಡೆಯಲಿವೆ.

‘ದಿ ಪಾವರ್ಟಿ ಆಫ್ ಫಿಲಾಸಫಿ’, ‘ಎಕನಾಮಿಕ್ ಅಂಡ್‌ ಫಿಲಾಸಫಿಕ್ ಮ್ಯಾನ್ಯುಸ್ಕ್ರಿಪ್ಟ್ಸ್ 1844’, ‘ಎ ಕಾಂಟ್ರಿಬ್ಯೂಷನ್ ಟು ದ ಕ್ರಿಟಿಕ್ ಆಫ್ ಪೊಲಿಟಿಕಲ್ ಎಕಾನಮಿ’, ‘ಮಾರ್ಕ್ಸ್‌ ಆನ್‌ ಇಂಡಿಯಾ’ ಹಾಗೂ ‘ಎಯ್ಟೀನ್ತ್ ಬ್ರುಮೈರ್ ಆಫ್ ಲೂಯಿಸ್ ಬೊನಾಪಾರ್ಟೆ’ ಕೃತಿಗಳು ಕೂಡ ಇದೇ ವರ್ಷ ಬಿಡುಗಡೆಯಾಗಲಿವೆ ಎಂದು ‘ನವಕರ್ನಾಟಕ’ದ ವ್ಯವಸ್ಥಾಪಕ ನಿರ್ದೇಶಕ ರಮೇಶ ಉಡುಪ ಅವರು ‘ಪ್ರಜಾವಾಣಿ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ಕ್ಯಾಪಿಟಲ್’ ಕೃತಿ ಬಿಡುಗಡೆಯಾಗಿ 150 ವರ್ಷ ತುಂಬಿರುವ ವಿಶೇಷ ಸಂದರ್ಭದ ನೆನಪಿಗಾಗಿ, ‘ಕ್ಯಾಪಿಟಲ್‌’ನ ಮೊದಲ ಸಂಪುಟದ ಕನ್ನಡ ಅನುವಾದ ಸಿದ್ಧಗೊಳ್ಳುತ್ತಿದೆ. ಮಾರ್ಕ್ಸ್‌ನ ಪ್ರಮುಖ ಕೃತಿ ಹಾಗೂ ಆಧುನಿಕ ಅರ್ಥಶಾಸ್ತ್ರದ ಮೇರುಕೃತಿಗಳಲ್ಲೊಂದು ಎಂದು ಪರಿಗಣಿಸಲಾಗಿರುವ ಈ ಪುಸ್ತಕ 1867ರ ಸೆ. 14ರಂದು ಬಿಡುಗಡೆಯಾಗಿತ್ತು. ಹಿರಿಯ ಲೇಖಕ ಜಿ. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ವಿವಿಧ ಲೇಖಕರು ಕನ್ನಡಕ್ಕೆ ತಂದಿರುವ ‘ಕ್ಯಾಪಿಟಲ್’ ಕೃತಿಯನ್ನು ಸೆ. 14ರಂದೇ ಬಿಡುಗಡೆ ಮಾಡಲು ‘ನವಕರ್ನಾಟಕ’ ಹಾಗೂ ‘ಕ್ರಿಯಾ ಮಾಧ್ಯಮ’ ಉದ್ದೇಶಿಸಿವೆ.

**

ಶ್ರೀಕಂಠಯ್ಯನವರ ‘ಕಮ್ಯೂನಿಸಂ’

ಎಲ್‌. ಶ್ರೀಕಂಠಯ್ಯನವರ ‘ಕಮ್ಯೂನಿಸಂ’ (ಪ್ರಥಮ ಆವೃತ್ತಿ: 1957) ಸಮಾಜವಾದ ಹಾಗೂ ಮಾರ್ಕ್ಸ್ ವಿಚಾರಧಾರೆಯನ್ನು ಸರಳಕನ್ನಡದಲ್ಲಿ ಪರಿಚಯಿಸಿರುವ ಕೃತಿ. ಸುಮಾರು 220 ಪುಟಗಳ ಈ ಕೃತಿ, ‘ಮೈಸೂರು ವಿ.ವಿ. ಕನ್ನಡ ಗ್ರಂಥಮಾಲೆ–38’ ಮಾಲಿಕೆಯಲ್ಲಿ ಮೈಸೂರು ವಿ.ವಿ.ಯಿಂದ ಪ್ರಕಟಗೊಂಡಿದೆ. ಈ ಮಾಲಿಕೆಯ ಪ್ರಧಾನ ಸಂಪಾದಕರು ಕೆ.ವಿ. ಪುಟ್ಟಪ್ಪ. ಪಿಡಿಎಫ್ ರೂಪದಲ್ಲಿ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರುವ ಈ ಪುಸ್ತಕವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಬಳಸಬೇಕಾದ ಕೊಂಡಿ: goo.gl/XpKjqE

**

ಮಾರ್ಕ್ಸ್‌ ಏಕೆ ಪ್ರಸ್ತುತ?

ಮಾರ್ಕ್ಸ್‌ವಾದ ಒಂದೇ ಇಂದಿನ ಆರ್ಥಿಕ ಮಹಾಕುಸಿತದಂಥ ಸಮಸ್ಯೆಗಳಿಗೆ ಪರಿಹಾರ. ಎಲ್ಲ ದೇಶಗಳ ಮನುಷ್ಯರ ಏಳಿಗೆಗೆ ಮಾರ್ಕ್ಸ್‌ವಾದ ಅವಶ್ಯಕವಾಗಿದೆ. 19ನೇ ಶತಮಾನದಲ್ಲಿ ಬಂಡವಾಳಶಾಹಿಗಳು ಕಾರ್ಮಿಕರನ್ನು ಹೇಗೆ ಶೋಷಿಸುತ್ತಿದ್ದರು ಎನ್ನುವುದನ್ನು ‘ದಾಸ್ ಕ್ಯಾಪಿಟಲ್‌’ ಮೂಲಕ ಕಾರ್ಲ್‌ಮಾರ್ಕ್ಸ್‌ ಬಣ್ಣಿಸಿದರು.

ಅದು ಬರೀ ಬಣ್ಣನೆಯಾಗದೆ, ಬೌದ್ಧಿಕ ಅಸ್ತ್ರವಾಗಿಯೂ ಇತ್ತು. ಇಂದಿಗೂ ಆರ್ಥಿಕ ವಿಷಯದಲ್ಲಿ ಜ್ವಲಂತ ಸಮಸ್ಯೆಗಳಿಗೆ ಅದರಲ್ಲಿ ವೈಜ್ಞಾನಿಕ ನೆಲೆಗಟ್ಟಿನ ಪರಿಹಾರಗಳು ಸಿಗುತ್ತವೆ. ಇದೇ ಕಾರಣಕ್ಕೆ ಮಾರ್ಕ್ಸ್‌ ಇಂದಿಗೂ ಪ್ರಸ್ತುತ.

-ಮಂಜುನಾಥ್ ಕೈದಾಳೆ, ಸಾಮಾಜಿಕ ಕಾರ್ಯಕರ್ತ, ದಾವಣಗೆರೆ

**

ಬಂಡವಾಳ ಹೆಚ್ಚು ಮುಖ್ಯವಾಗುತ್ತಾ ಹೋದಂತೆ ಪ್ರಜಾಪ್ರಭುತ್ವದ ಆಶಯಗಳು ಕ್ಷೀಣವಾಗುತ್ತಾ ಹೋಗುತ್ತವೆ. ಅಂಥ ಅಪಾಯವನ್ನು ಈಗ ನೋಡುತ್ತಿದ್ದೇವೆ. ಮಾರ್ಕ್ಸ್‌ ಊಹಿಸಿದ್ದ ಆರ್ಥಿಕ ಕಾಲನಿಗಳು ಪ್ರಸ್ತುತ ನಿಜವಾಗಿವೆ. ದೇಶದ ಶೇ 58ರಷ್ಟು ಸಂಪನ್ಮೂಲಗಳು ಶೇ 1ರಷ್ಟು ಜನರಲ್ಲಿ ಕೇಂದ್ರೀಕೃತಗೊಂಡಿವೆ. ಇನ್ನೊಂದೆಡೆ ಬಹುಸಂಖ್ಯಾತ ವರ್ಗ ಬಡತನದ ದವಡೆಗೆ ಸಿಲುಕಿದೆ. ಖಾಸಗಿ ಮಾಲೀಕತ್ವ ಪ್ರಬಲವಾದಂತೆ ಜನಹಿತದ ಪರಿಕಲ್ಪನೆಗಳು ದುರ್ಬಲವಾಗುತ್ತವೆ. ಇದೆಲ್ಲ ಸಮಸ್ಯೆಗಳಿಗೆ ಕಾರ್ಲ್ ಮಾರ್ಕ್ಸ್‌ ಸಿದ್ಧಾಂತಗಳಲ್ಲಿ ಉತ್ತರವಿದೆ.

-ಅಭಯಾ ದಿವಾಕರ್, ಎಂ.ಟೆಕ್‌ ವಿದ್ಯಾರ್ಥಿನಿ, ಬೆಂಗಳೂರು

**

ಮಾರ್ಕ್ಸ್‌ವಾದ ಸಮಾಜದ ಬದಲಾವಣೆ ಕುರಿತು ವಿಶ್ಲೇಷಿಸಿದೆ. ಮಾರ್ಕ್ಸ್‌ವಾದ ಒಂದು ವಿಜ್ಞಾನ. ಅದು ಬಂಡವಾಳಶಾಹಿ, ಕಾರ್ಮಿಕರ ನಡುವಿನ ವರ್ಗಸಂಘರ್ಷದ ಸ್ಪಷ್ಟ ವಿವರಣೆಯನ್ನು ನೀಡುತ್ತದೆ. ಹಸಿವು, ಬಡತನ, ಅಸಮಾನತೆ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಕಾರಣ ಹಾಗೂ ಪರಿಹಾರವನ್ನು ವಾಸ್ತವದ ನೆಲೆಗಟ್ಟಿನ ಮೇಲೆ ಉತ್ತರಿಸಲು ತತ್ವಶಾಸ್ತ್ರಗಳಿಗೂ ಆಗುವುದಿಲ್ಲ. ಸಂಪತ್ತು ಕಾರ್ಮಿಕರ ಶ್ರಮದ ಫಲ. ಅದನ್ನು ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳು ವಶಪಡಿಕೊಳ್ಳುತ್ತಿದ್ದಾರೆ. ಸಮಾಜವಾದಿ ಕ್ರಾಂತಿಯಿಂದ ಮಾತ್ರ ಸಮಾನತೆ ಸಾಧ್ಯ.

-ಮಹೇಶ ಎಸ್.ಬಿ., ಎಸ್‌ಯುಸಿಐ (ಕಮ್ಯುನಿಸ್ಟ್‌) ಸದಸ್ಯ, ಕಲಬುರ್ಗಿ

**

ಪ್ರಕೃತಿ ಮತ್ತು ಮನುಷ್ಯ ಸಮಾಜದ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ, ಭವಿಷ್ಯದ ಕುರಿತು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದ ಮಹಾನ್‌ ಚಿಂತಕ ಕಾರ್ಲ್‌ ಮಾರ್ಕ್ಸ್‌. ಭೌತಿಕ ವಸ್ತುಗಳು ಮತ್ತು ಮಾನವ ಸಮಾಜದ ಬೆಳವಣಿಗೆಯ ಕುರಿತ ಅವರ  ಚಿಂತನೆಯ ವ್ಯಾಪ್ತಿ ಅಗಾಧವಾದುದು. ಇಂದಿನ ಕಾರ್ಪೊರೇಟ್‌ ಯುಗದಲ್ಲಂತೂ ಕಾರ್ಲ್‌ ಮಾರ್ಕ್ಸ್‌ ಮತ್ತೆ ಮತ್ತೆ ಪ್ರಸ್ತುತರಾಗುತ್ತಿದ್ದಾರೆ. ಉತ್ಪಾದನೆ ಮತ್ತು ಉತ್ಪಾದಕ ವಲಯದ ವಿಶ್ಲೇಷಣೆ ಇಂದು ತುಂಬ ಪ್ರಸ್ತುತ...

–ಡಾ. ಕೃಷ್ಣಪ್ಪ ಕೊಂಚಾಡಿ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.