ADVERTISEMENT

ಜೀವರಕ್ಷಕ ಲಸಿಕೆಯಿಂದ ಕಂಟಕವೇ?

ಪೆಂಟವೇಲಂಟ್‌ ಲಸಿಕೆಯ ಮಹತ್ವ ಮತ್ತು ಪರಿಣಾಮಗಳ ಕುರಿತು ವಿವರಣೆ

ಪ್ರವೀಣ ಕುಲಕರ್ಣಿ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಜೀವರಕ್ಷಕ ಲಸಿಕೆಯಿಂದ ಕಂಟಕವೇ?
ಜೀವರಕ್ಷಕ ಲಸಿಕೆಯಿಂದ ಕಂಟಕವೇ?   

ಮಂಡ್ಯ ಜಿಲ್ಲೆಯ ಚಿಂದಗಿರಿದೊಡ್ಡಿಯಲ್ಲಿ ಇತ್ತೀಚೆಗೆ ಎರಡು ಹಸುಗೂಸುಗಳು ಅಸುನೀಗಿದವು. ಮಾರಣಾಂತಿಕ ಕಾಯಿಲೆಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ನೀಡಲಾಗಿದ್ದ ಪೆಂಟವೇಲಂಟ್‌ ಲಸಿಕೆಗಳೇ ಆ ಕೂಸುಗಳ ಪ್ರಾಣಕ್ಕೆ ಎರವಾದವು ಎಂಬ ಆರೋಪ ಆ ಸಾವುಗಳ ಬೆನ್ನಹಿಂದೆಯೇ ಕೇಳಿಬಂತು. ಹಾಗಾದರೆ ಏನಿದು ಪೆಂಟವೇಲಂಟ್‌? ಯಾಕೆ ಈ ಲಸಿಕೆಯನ್ನು ನೀಡಲಾಗುತ್ತದೆ? ಅದರಿಂದ ಮಕ್ಕಳ ಜೀವಕ್ಕೆ ನಿಜವಾಗಿಯೂ ಅಪಾಯವಿದೆಯೇ? ಬನ್ನಿ ತಿಳಿಯೋಣ.

ಏನಿದು ಪೆಂಟವೇಲಂಟ್‌ ಲಸಿಕೆ?
ಬಾಲ್ಯದಲ್ಲಿ ಕಾಡಬಹುದಾದ ಬಹುತೇಕ ಕಾಯಿಲೆಗಳನ್ನು ತಡೆಗಟ್ಟಲು ಸೋಂಕು ನಿರೋಧಕ ಲಸಿಕೆ ಹಾಕುವುದು ಸರ್ವಮಾನ್ಯ ಎನಿಸಿರುವಂತಹ ರೂಢಿ. ಕೇಂದ್ರ ಸರ್ಕಾರವು ದಶಕಗಳ ಹಿಂದೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ಬಳಿಕ ‘ಲಸಿಕೆಯಿಂದ ನಿಯಂತ್ರಿಸಬಹುದಾದ ಕಾಯಿಲೆ’ಗಳನ್ನು (ವಿಪಿಡಿ) ಭಾರತದಲ್ಲೂ ತಹಬಂದಿಗೆ ತರಲು ಸಾಧ್ಯವಾಗಿದೆ. ಪೆಂಟವೇಲಂಟ್‌ ಇತ್ತೀಚೆಗಷ್ಟೇ ಪರಿಚಯಿಸಲಾದ ಅಂತಹ ಲಸಿಕೆಗಳಲ್ಲಿ ಒಂದು.

ಈ ಲಸಿಕೆಯಿಂದ ಯಾವ ಕಾಯಿಲೆಗಳನ್ನು ತಡೆಗಟ್ಟಬಹುದು?
ಪೆಂಟವೇಲಂಟ್‌ ಲಸಿಕೆಯಿಂದ ಮಕ್ಕಳಲ್ಲಿ ಐದು ಮಾರಣಾಂತಿಕ ಕಾಯಿಲೆಗಳಾದ ಡಿಫ್ತೀರಿಯಾ (ಗಂಟಲಮಾರಿ), ಪರ್ಟಸಿಸ್‌ (ನಾಯಿಕೆಮ್ಮು), ಟೆಟನಸ್‌ (ಧನುರ್ವಾಯು), ಹೆಪಟೈಟಿಸ್‌ ‘ಬಿ’ (ಕಾಮಾಲೆ) ಮತ್ತು ಹಿಮೋಫಿಲಿಯಸ್‌ ಇನ್‌ಫ್ಲುಯೆನ್‌ಜಾ ಟೈಪ್‌ ‘ಬಿ’ಯನ್ನು (ಎಚ್‌ಐಬಿ–ರಕ್ತ ಹೆಪ್ಪುಗಟ್ಟದೇ ಇರುವುದರಿಂದ ಎದುರಾಗುವ ಗಂಡಾಂತರ) ತಂದೊಡ್ಡುವಂತಹ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಸಾಧ್ಯ.

ADVERTISEMENT

ನ್ಯುಮೋನಿಯಾ (ಶ್ವಾಸಕೋಶದ ಜ್ವರ), ಮೆನಿಂಜೈಟಿಸ್‌ಗೆ (ಮಿದುಳಿನ ಪೊರೆಗಳಿಗೆ ಸೋಂಕು ತಗಲುವಿಕೆಯಿಂದ ಕಾಣಿಸಿಕೊ
ಳ್ಳುವ ಕಾಯಿಲೆ) ನವಜಾತ ಶಿಶುಗಳು ತುತ್ತಾಗದಂತೆಯೂ ಈ ಲಸಿಕೆ ನೋಡಿಕೊಳ್ಳುತ್ತದೆ. ಮುಂಚಿನಿಂದಲೂ ಡಿಪಿಟಿ (ಡಿಫ್ತೀರಿಯಾ, ಪರ್ಟಸಿಸ್‌, ಟೆಟನಸ್‌) ಹಾಗೂ ಹೆಪ್‌ ‘ಬಿ’ (ಹೆಪಟೈಟಿಸ್‌ ‘ಬಿ’) ಲಸಿಕೆಗಳನ್ನು ಹಾಕಲಾಗುತ್ತಿತ್ತು.
2011ರಿಂದ ಎಚ್‌ಐಬಿ ‘ಬಿ’ ಲಸಿಕೆಯನ್ನೂ ಅದಕ್ಕೆ ಸೇರಿಸಲಾಯಿತು. ಈ ಲಸಿಕೆಗಳ ಮಿಶ್ರಣವೇ ಪೆಂಟವೇಲಂಟ್‌.

ಪೆಂಟವೇಲಂಟ್‌ ಲಸಿಕೆಯನ್ನು ಮಗುವಿಗೆ ಯಾವಾಗ ಹಾಕಲಾಗುತ್ತದೆ?
ಜನಿಸಿದ ಮಗುವಿಗೆ ಆರು ವಾರ, ಹತ್ತು ವಾರ ಹಾಗೂ 14 ವಾರ ತುಂಬಿದಾಗ, ಒಟ್ಟು ಮೂರು ಬಾರಿ ಈ ಲಸಿಕೆಯನ್ನು ಹಾಕಲಾಗುತ್ತದೆ.

ಎಲ್ಲ ಲಸಿಕೆಗಳನ್ನು ಬೇರೆ ಬೇರೆಯಾಗಿ ನೀಡುವ ಬದಲು ಪೆಂಟವೇಲಂಟ್‌ ರೂಪದಲ್ಲಿ ಏಕೆ ಮಿಶ್ರಣ ಮಾಡಿ ಕೊಡಲಾಗುತ್ತದೆ?

ವೇಳಾಪಟ್ಟಿ ಪ್ರಕಾರ, ಡಿಪಿಟಿ, ಹೆಪ್‌ ‘ಬಿ’ ಹಾಗೂ ಎಚ್‌ಐಬಿ ಲಸಿಕೆಗಳನ್ನು ಮಗುವಿಗೆ ಆರು ವಾರ, ಹತ್ತು ವಾರ ಹಾಗೂ 14 ವಾರ ತುಂಬಿದಾಗಲೇ ಕೊಡಬೇಕು. ಬೇರೆ, ಬೇರೆಯಾಗಿ ಈ ಲಸಿಕೆಗಳನ್ನು ಕೊಡಲು ಪ್ರತಿಸಲವೂ ಮೂರು ಬಾರಿ ಚುಚ್ಚುಮದ್ದು ನೀಡಬೇಕಿತ್ತು. ಅದನ್ನು ತಪ್ಪಿಸಲು ಪೆಂಟವೇಲಂಟ್‌ ಸೃಷ್ಟಿಸಲಾಗಿದೆ.

ಈ ಲಸಿಕೆಯನ್ನು ಹಾಕಿದ ಮೇಲೆ ಬೇರೆ ಲಸಿಕೆಗಳನ್ನು ಕೊಡಿಸುವ ಅಗತ್ಯವಿಲ್ಲವೇ?
ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಪ್ರಕಾರ ಪೆಂಟವೇಲಂಟ್‌ ಜತೆಗೆ ಇತರ ಕೆಲವು ಲಸಿಕೆಗಳನ್ನೂ ಹಾಕಿಸಬೇಕು. ಮಗು ಜನಿಸಿದ 24 ಗಂಟೆಗಳ ಒಳಗೆ ಬಿಸಿಜಿ (ಕ್ಷಯರೋಗ), ಹೆಪ್‌ ‘ಬಿ’ ಹಾಗೂ ಒ.ಪಿ.ವಿ. (ಪೋಲಿಯೊ) ಲಸಿಕೆಗಳನ್ನು ಹಾಕಬೇಕು. ಒಂಬತ್ತರಿಂದ 12 ತಿಂಗಳ ಅವಧಿಯಲ್ಲಿ ಮೀಸಲ್ಸ್‌ (ದಡಾರ) ಮತ್ತು ವಿಟಮಿನ್‌ ‘ಎ’ ಲಸಿಕೆಗಳನ್ನು ಕೊಡಬೇಕು. 16ರಿಂದ 24 ತಿಂಗಳ ಅವಧಿಯಲ್ಲಿ ಬಿಪಿಟಿ ಬೂಸ್ಟರ್‌, ಒ.ಪಿ.ವಿ. ಬೂಸ್ಟರ್‌, ಮೀಸಲ್ಸ್‌–2 ಲಸಿಕೆ ನೀಡಬೇಕು. ಕೊನೆಯದಾಗಿ, ಮಗು 5–6 ವರ್ಷವಿದ್ದಾಗ ಬಿಪಿಟಿ ಬೂಸ್ಟರ್‌ ಲಸಿಕೆಯನ್ನು ಮತ್ತೆ ಹಾಕಬೇಕು.

ಈ ಲಸಿಕೆ ಯಾವ ರೂಪದಲ್ಲಿ ಇರುತ್ತದೆ?
ಪೆಂಟವೇಲಂಟ್‌ ಲಸಿಕೆ ದ್ರವರೂಪದಲ್ಲಿದ್ದು ಸೀಸೆಯಲ್ಲಿ ಪೂರೈಕೆ ಆಗುತ್ತದೆ. ಒಂದು ಸೀಸೆಯಲ್ಲಿ ಹತ್ತು ಮಕ್ಕಳಿಗೆ ಆಗುವಷ್ಟು ಔಷಧಿ ಇರುತ್ತದೆ. ಪ್ರತಿ ಮಗುವಿಗೆ 0.5 ಎಂ.ಎಲ್‌.ನಷ್ಟು ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ತೊಡೆಯ ಸ್ನಾಯುಗಳಿಗೆ ನೀಡಲಾಗುತ್ತದೆ. ಇದೊಂದು ಅತಿ ಸೂಕ್ಷ್ಮವಾದ ಲಸಿಕೆಯಾಗಿದ್ದು, ರೆಫ್ರಿಜರೇಟರ್‌ನಲ್ಲೇ
ದಾಸ್ತಾನು ಮಾಡಬೇಕು. ಲಸಿಕೆಯು ಘನರೂಪಕ್ಕೆ ತಿರುಗಿದರೆ ಯಾವುದೇ ಕಾರಣಕ್ಕೂ ಅದನ್ನು ಕರಗಿಸಿ ಬಳಕೆ ಮಾಡುವಂತಿಲ್ಲ.

ಈ ಲಸಿಕೆಯನ್ನು ಹಾಕಿಸಿದ ಮಕ್ಕಳಲ್ಲಿ ಯಾವುದೇ ಅಡ್ಡಪರಿಣಾಮ ಉಂಟಾದ ಉದಾಹರಣೆ ಇಲ್ಲವೇ?
ಪೆಂಟವೇಲಂಟ್‌ ಲಸಿಕೆಯಿಂದ ಯಾವುದೇ ಗಂಭೀರವಾದ ಅಡ್ಡ ಪರಿಣಾಮ ಬೀರಿದ್ದು ಇದುವರೆಗೆ ಕಂಡು ಬಂದಿಲ್ಲ. ಕೆಲವು ಪ್ರಕರಣಗಳಲ್ಲಿ ಚುಚ್ಚುಮದ್ದು ನೀಡಿದ ಭಾಗದಲ್ಲಿ ಬಾವು ಬಂದಿರುವುದು, ಕೆಂಪಾಗಿರುವುದು ಹಾಗೂ ನೋವು ಕಾಣಿಸಿಕೊಂಡಿರುವುದು ವರದಿಯಾಗಿದೆ. ಚುಚ್ಚುಮದ್ದು ನೀಡಿದ ಒಂದು ದಿನದ ಬಳಿಕ ಇಂತಹ ಪರಿಣಾಮಗಳು ಕಾಣಿಸಿಕೊಂಡು ಮೂರು ದಿನಗಳಲ್ಲಿ ವಾಸಿಯಾಗಿದ್ದಿದೆ. ಕೆಲವು ಮಕ್ಕಳಿಗೆ ಜ್ವರ ಬಂದಿದ್ದೂ ಇದೆ ಎನ್ನುತ್ತದೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ವಿಶ್ಲೇಷಣೆ.

ಯಾವ ಮಕ್ಕಳಿಗೆ ಈ ಲಸಿಕೆಯನ್ನು ಕೊಡಬಾರದು?
ಕೆಲವು ಮಕ್ಕಳ ದೇಹ ಪೆಂಟವೇಲಂಟ್‌ ಲಸಿಕೆಗೆ ಪ್ರತಿವರ್ತನೆ (ರಿಯಾಕ್ಷನ್‌) ತೋರುತ್ತದೆ. ಅಂತಹ ಮಕ್ಕಳಿಗೆ ಈ ಲಸಿಕೆಯನ್ನು ಕೊಡಬಾರದು. ಮೊದಲ ಲಸಿಕೆ ಹಾಕಿದ ಸಂದರ್ಭದಲ್ಲಿ ಪ್ರತಿವರ್ತನೆ ಕಂಡುಬಂದ ಮಕ್ಕಳಿಗೆ ಎರಡನೇ ಲಸಿಕೆಯನ್ನು ಹಾಕಬಾರದು.

ಲಸಿಕೆಯಿಂದ ಏನಾದರೂ ಅಡ್ಡ ಪರಿಣಾಮಗಳು ಉಂಟಾದರೆ ಯಾರು ಹೊಣೆ?
ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಯಿಂದ ಆಗಬಹುದಾದ ಅಡ್ಡ ಪರಿಣಾಮಗಳ ಕುರಿತು ನಿಗಾ ಇಡಲು ‘ಲಸಿಕೆ ನಂತರದ ಅಡ್ಡ ಪರಿಣಾಮಗಳ ನಿರ್ವಹಣೆ ವ್ಯವಸ್ಥೆ’ಯೊಂದನ್ನು (ಎಇಎಫ್‌ಐ) ರೂಪಿಸಿದೆ. ಅದರ ನಿಯಮಾವಳಿ ಪ್ರಕಾರ, ಲಸಿಕೆಯ ಉತ್ಪಾದನೆ, ಅದರ ಗುಣಮಟ್ಟ, ಲಸಿಕೆ ನೀಡುವ ಕ್ರಮದಲ್ಲಿ ಉಂಟಾದ ಪ್ರಮಾದ, ಲಸಿಕೆ ಹಾಕಿದಾಗ ಮಗು ಸ್ಪಂದಿಸಿದ ರೀತಿ ಹಾಗೂ ಕಾಕತಾಳೀಯ ಘಟನೆ– ಹೀಗೆ ಐದು ಕೋನಗಳಲ್ಲಿ ಅಡ್ಡ ಪರಿಣಾಮವನ್ನು ವಿಶ್ಲೇಷಣೆಗೆ ಒಳಪಡಿಸಿ, ನಿಖರ ಕಾರಣವನ್ನು ಪತ್ತೆ ಮಾಡಬೇಕು. ಲಸಿಕೆಯಿಂದ ಮಗು ಸತ್ತರೆ, ಜೀವಕ್ಕೆ ಅಪಾಯ ಎನಿಸುವಂತಹ ಆರೋಗ್ಯ ಸಮಸ್ಯೆ ಎದುರಿಸಿದರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ ಅದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.