ADVERTISEMENT

ಜೀವ ಕೊಡುವ ಜೀವದ ಘನತೆ ಗಾಳಿಗೆ ತೂರಬೇಡಿ

ಶಾರದಾ ಗೋಪಾಲ, ಧಾರವಾಡ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
ಜೀವ ಕೊಡುವ ಜೀವದ ಘನತೆ ಗಾಳಿಗೆ ತೂರಬೇಡಿ
ಜೀವ ಕೊಡುವ ಜೀವದ ಘನತೆ ಗಾಳಿಗೆ ತೂರಬೇಡಿ   

ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ

ಈ ಸಾಲುಗಳನ್ನು ಬರೆದು ಕರ್ನಾಟಕದಲ್ಲಿ ಮಹಿಳಾ ಚಳವಳಿಗೆ ಒಂದು ರೂಪು ಕೊಟ್ಟವರು ಇತ್ತೀಚೆಗೆ ನಿಧನರಾದ ಕವಯಿತ್ರಿ, ಹೋರಾಟಗಾರ್ತಿ, ಮಹಿಳಾ ಚಿಂತಕಿ ವಿಜಯಾ ದಬ್ಬೆಯವರು. ಹಾಡನ್ನು ಹಾಡಿಸಿದಾಗೆಲ್ಲ ಹೆಣ್ಣುಮಕ್ಕಳ ಗುಂಪಿನಲ್ಲಿ ಒಂದು ರೀತಿಯ ಶಕ್ತಿ ಸಂಚಯವಾದಂತಾಗುತ್ತದೆ. ಹುಡುಗಿಯರ ಮುಖಗಳು ಆತ್ಮವಿಶ್ವಾಸದಿಂದ ಹೊಳೆಯುತ್ತವೆ. ದೌರ್ಜನ್ಯದ ಕೇಸಿನ ವಿಚಾರಣೆ ಸಂದರ್ಭದಲ್ಲಿ ಹಾಡಿದರೆ ದೌರ್ಜನ್ಯ ಮಾಡಿದವರ ಮುಖ ಕಳೆಗುಂದುತ್ತದೆ. ಇಪ್ಪತ್ತು ವರ್ಷಗಳಿಂದ ಹಾಡುತ್ತಲೇ ಬಂದರೂ ಒಂದಿನಿತೂ ಶಕ್ತಿಗುಂದದ ಹಾಡು ಅದು.

ವಿಚಾರವಂತರು, ಹೃದಯವಂತರು, ಮಾನವೀಯತೆ ಉಳ್ಳವರು ಇಂಥ ಹಾಡುಗಳನ್ನು ಬರೆಯುತ್ತಾರೆ, ನಾವು ಹಾಡುತ್ತಿದ್ದೇವೆ. ಆದರೆ ಅದಿನ್ನೂ ತಲುಪಬೇಕಾದವರ
ಕಿವಿಯನ್ನು ತಲುಪಿಯೇ ಇಲ್ಲ, ಹೃದಯಗಳನ್ನು ತಟ್ಟಿಯೇ ಇಲ್ಲ ಎಂಬುದು ನಿಜಕ್ಕೂ ವಿಷಾದಕರ ಸಂಗತಿ. ಕರ್ನಾಟಕದಲ್ಲಿ ಹೆಣ್ಣುಮಕ್ಕಳ, ತಾಯಂದಿರ, ನವಜಾತ ಶಿಶುಗಳ ಸ್ಥಿತಿಗತಿಯೇ ನಮ್ಮ ಸಮಾಜವು ಹೆಣ್ಣನ್ನು ನೋಡುತ್ತಿರುವುದು ಹೇಗೆಂಬುದಕ್ಕೆ ಕನ್ನಡಿಯಾಗಿದೆ.

ADVERTISEMENT

ವಿಜಯಪುರದ ಶಾಲಾ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆ ನಡೆದ ಸಂದರ್ಭದಲ್ಲೇ, ಇತ್ತ ಖಾನಾಪುರ ತಾಲ್ಲೂಕಿನ ದಟ್ಟ ಕಾಡಿನ ನಡುವಿನ ಹಳ್ಳಿಯೊಂದರಲ್ಲಿ, ನೆರೆಮನೆಯ ಹುಡುಗನೊಬ್ಬ ತಂದೆಯ ಸಹಾಯದಿಂದ  ಬಾಲಕಿಯೊಬ್ಬಳನ್ನು ರಾತ್ರೋ ರಾತ್ರಿ ಅಪಹರಣ ಮಾಡಿ, ಹದಿನೈದು ದಿವಸ ತನ್ನ ಸಂಬಂಧಿಕರ ಮನೆಯಲ್ಲಿ ಕೈದಿಯನ್ನಾಗಿರಿಸಿಕೊಂಡು ಸತತ ಅತ್ಯಾಚಾರವೆಸಗಿದ್ದ ಆರೋಪದ ಪ್ರಕರಣ ವರದಿಯಾಗಿದೆ. ಈ ಅಪಹರಣ, ಅತ್ಯಾಚಾರಗಳಲ್ಲಿ ಇಡೀ ಕುಟುಂಬವೇ ಅಪರಾಧಿಗೆ ಸಹಕರಿಸಿತ್ತು. ಮಗಳನ್ನು ಹುಡುಕಿ ಹುಡುಕಿ ಸೋತ ತಾಯ್ತಂದೆಯರು ಪೊಲೀಸ್‌ಗೆ ದೂರು ಕೊಡಲು ಹೋದರೆ, ದೂರು ದಾಖಲಿಸಲು ಹಣ ಪಡೆದು ಮೌನವಾಗಿ ಉಳಿಯಿತು ಪೊಲೀಸ್ ವ್ಯವಸ್ಥೆ. ಹುಡುಗಿ ಪತ್ತೆಯಾಗಿ, ಅತ್ಯಾಚಾರದ ಕೇಸ್ ದಾಖಲಾದರೂ ಜಿಲ್ಲಾ ಮಕ್ಕಳ ಕಲ್ಯಾಣ ನಿಧಿಯಿಂದ ತಕ್ಷಣದ ಪರಿಹಾರಧನವಾಗಿ ಸಿಗಬೇಕಾಗಿದ್ದ ₹ 10 ಸಾವಿರ ಹುಡುಗಿಯ ಕೈ ಸೇರಲಿಲ್ಲ. ಮಹಿಳಾ ಸಂಘಟನೆಯೊಂದು ಮಧ್ಯ ಪ್ರವೇಶಿಸಿ ಒತ್ತಡ ತರುವವರೆಗೆ ಅಪರಾಧಿ ತಲೆಮರೆಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರೂ ಒಂದಾಗಿ ಕೆಲಸ ಮಾಡುತ್ತಿದ್ದರು. ಜಾತಿ, ಧರ್ಮಗಳ ಭೇದವನ್ನು ಮರೆತು! ಅಧಿಕಾರಸ್ಥರು, ರಾಜಕೀಯ ಮುಂದಾಳುಗಳೆಲ್ಲರನ್ನೂ ಒಟ್ಟುಗೂಡಿಸುವುದು ಮಹಿಳೆಯ ಮೇಲಿನ ಅಪರಾಧವೊಂದೇಯೇನೋ.

ವಿಜಯಪುರದ ಬಾಲೆಯ ವಿಷಯದಲ್ಲಿ ‘ಆಕೆಗೂ ಅವನಿಗೂ ಮೊದಲಿನಿಂದ ಸಂಬಂಧವಿತ್ತಂತೆ’ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಲ್ಲಿಯೂ ಕೂಡ, ಹುಡುಗಿ ತಾನೇ ಅವನಿಗೆ ಲವ್ ಲೆಟರ್ ಬರೆದು ಕರೆಸಿಕೊಂಡಿದ್ದಳಂತೆ, ಶಿಕ್ಷೆ ಆದರೆ ಅವಳಿಗೂ ಆಗಬೇಕು ಮುಂತಾಗಿ ಹರಿಯಬಿಟ್ಟಿರುವ ಗಬ್ಬು ವಾಸನೆಯ ಗಾಳಿ ಬಲೂನುಗಳು.

ಒಂದು ಬಾರಿ ಅತ್ಯಾಚಾರ ಅನುಭವಿಸಿದ ಹೆಣ್ಣಿನ ಮೇಲೆ ವ್ಯವಸ್ಥೆಯು ಅತ್ಯಂತ ವ್ಯವಸ್ಥಿತವಾಗಿ ಮತ್ತೆ ಮತ್ತೆ ಅತ್ಯಾಚಾರವೆಸಗುತ್ತದೆ. ನೆರವಿಗೆ ಧಾವಿಸಬೇಕಾದ ಪೊಲೀಸರು, ನ್ಯಾಯ ವ್ಯವಸ್ಥೆ, ಅಧಿಕಾರಿಗಳು, ಆಸ್ಪತ್ರೆ... ಹೀಗೆ ಎಲ್ಲೆಲ್ಲಿ ಸಾಂತ್ವನ, ಆಶ್ರಯ ಸಿಗಬೇಕೋ ಅಲ್ಲೆಲ್ಲ ಅತ್ಯಾಚಾರದ ಪುನರಾವರ್ತನೆಯಾಗುತ್ತದೆ. ಅಸಹಾಯಕ ತಂದೆ ತಾಯಿ ನೋವು ಅವಮಾನಗಳಿಂದ ‘ಯಾಕಾದರೂ ಹೆಣ್ಣು ಹೆತ್ತೆನೇ?’ ಎಂದು ಮಂಡಿಯೊಳಗೆ ಮುಖವಿಟ್ಟು ರೋದಿಸುವಂತಾಗುತ್ತದೆ.

ಅತ್ಯಾಚಾರದಿಂದಾಗಿ ಹುಡುಗಿ ಗರ್ಭ ಧರಿಸಿದ್ದಳು. ಗರ್ಭಪಾತವಾಗಬೇಕಿತ್ತು. ದೈಹಿಕ, ಮಾನಸಿಕ ಅಘಾತಗಳಿಂದ ಈಗಾಗಲೇ ಜರ್ಜರಿತಳಾಗಿದ್ದ ಪುಟ್ಟ ಹುಡುಗಿಗೆ ಅತ್ಯಂತ ಸೂಕ್ಷ್ಮವಾಗಿ ಸಾಂತ್ವನ ಹೇಳಿ ಗರ್ಭಪಾತದಂಥ ಮತ್ತೊಂದು ನೋವಿಗೆ ಹೋಗಬೇಕಾದ ಅನಿವಾರ್ಯತೆಯನ್ನು ಅರ್ಥ ಮಾಡಿಸಿ, ಸಾಂತ್ವನ ಹೇಳುತ್ತಲೇ ಮಾಡಬೇಕಾಗಿದ್ದ ಕೆಲಸವನ್ನು ಅತ್ಯಂತ ಒರಟಾಗಿ, ಪ್ರತಿ ಹಂತದಲ್ಲೂ ಅವಳದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಮಾಡುತ್ತವೆ ಹೃದಯಹೀನ ಸಂಸ್ಥೆಗಳು. ಆಸ್ಪತ್ರೆಗೆ ಸೇರಿಸುವುದು, ಪೊಲೀಸರ ಪರ್ಮಿಶನ್, ಗರ್ಭಪಾತದ ಕ್ರಿಯೆ, ಹೀಗೆ ಪ್ರತಿಯೊಂದು ಕ್ರಿಯೆಯೂ ತನ್ನದೇ ಆದ ಸಮಯಾನುಕೂಲತೆಗಳನ್ನು ನೋಡಿಕೊಂಡು ಬೇಕಾಬಿಟ್ಟಿಯಾಗಿ ನಿರ್ವಹಿಸುತ್ತದೆ. ಇದಕ್ಕಾಗಿಯೇ ನೇಮಕಗೊಂಡ ಬಾಲನ್ಯಾಯಮಂಡಳಿ, ಬಾಲ ಕಲ್ಯಾಣ ಸಮಿತಿ, ಯಾರಲ್ಲೂ ಹೃದಯವಂತಿಕೆಯನ್ನಾಗಲೀ, ಲಿಂಗ ಸೂಕ್ಷ್ಮತೆಯನ್ನಾಗಲೀ ಕಾಣಲಾರೆವು. ಕೈ ಬೆಚ್ಚಗೆ ಮಾಡದಿದ್ದರೆ ಯಾವೊಂದು ಕಲ್ಲೂ ಅಲುಗಾಡುವುದಿಲ್ಲ.

ಒಬ್ಬ ಹುಡುಗಿಯ ನೋವಿಗೆ ಹೀಗ್ಯಾಕೆ ಋಣಾತ್ಮಕವಾಗಿ ಸ್ಪಂದಿಸುತ್ತದೆ ನಮ್ಮ ವ್ಯವಸ್ಥೆ? ಅಪಹರಣ, ಅತ್ಯಾಚಾರದಂಥ ಕೇಸುಗಳಲ್ಲಿ ಅಮಾಯಕ ಹುಡುಗಿಯದೇ ತಪ್ಪೆಂಬಂತೆ ವರ್ತಿಸುತ್ತದೇಕೆ ಸಮಾಜ? ಒಬ್ಬ ಹುಡುಗಿಯಲ್ಲ, ಇಬ್ಬರಲ್ಲ, ಪ್ರತಿಯೊಂದು ಘಟನೆಯಲ್ಲೂ ಹುಡುಗಿಯನ್ನೇ ಅನುಮಾನದಿಂದ ನೋಡುತ್ತೇವೆ ನಾವು. ಅತ್ಯಾಚಾರಕ್ಕೆ ಆಕೆ ಹಾಕಿರುವ ಬಟ್ಟೆಯೇ ಕಾರಣ ಎಂಬಂತೆ. ಈ ಅನುಮಾನದ ಮೂಲವನ್ನು ಕೆದಕುತ್ತ ಹೋಡದಂತೆ ಸಿಗುವುದು ಲಿಂಗ ಅಸಮಾನತೆಯ ಬೇರು. ಅಗೆದಷ್ಟೂ ಆಳಕ್ಕೆ ಹೊಕ್ಕಿರುವ ಬೇರದು. ಹಿಂದಿನ ಕಾಲದವರು- ಇಂದಿನ ಕಾಲದವರೆನ್ನದೆ, ಅನಕ್ಷರಸ್ಥರು- ಅಕ್ಷರಸ್ಥರೆನ್ನದೆ, ಅಧಿಕಾರಿಗಳು- ನೌಕರರೆನ್ನದೆ, ಗಂಡು- ಹೆಣ್ಣೆನ್ನದೆ, ಎಲ್ಲರ ಹೃದಯದೊಳಗೂ ಆಳವಾಗಿ ಬಿಟ್ಟಿರುವ ಬೇರು. ಆ ಚಾಣಕ್ಯನಂಥವರಿಗೂ ಕಿತ್ತೊಗೆಯಲಾಗದಂಥ ಗಟ್ಟಿ ಬೇರು. ತಾರತಮ್ಯದ ಬೇರಿನ ಈ ಹೆಮ್ಮರದಲ್ಲಿ ಹೆಣ್ಣು ಸಹಿಸಿಕೊಳ್ಳಬೇಕು, ಮೌನವಾಗಿರಬೇಕು, ಎಂಬೆಲ್ಲ ನಿರೀಕ್ಷೆಯ ಫಲಗಳು. ಸುಂದರವಾದ, ಮಾನವೀಯತೆ ತುಂಬಿದ ಕಾನೂನುಗಳು ಅದೆಷ್ಟು ಬಂದರೂ ಸ್ವೀಕರಿಸಲು ಸಮಾಜ ಇನ್ನೂ ತಯಾರಾಗಿರುವುದಿಲ್ಲ. ಪುಸ್ತಕದ ಬದನೇಕಾಯಿಯಾಗಿ ಕಾನೂನು ಇರುತ್ತದೆ, ಇತ್ತ ನಡೆಯುವುದು ನಡೆಯುತ್ತಿರುತ್ತದೆ.

ಪ್ರತಿಯೊಂದು ಹೆರಿಗೆಯೂ ಸಾಂಸ್ಥಿಕ ಹೆರಿಗೆಯೇ ಆಗಬೇಕೆನ್ನುತ್ತದೆ ಸರ್ಕಾರ. ಅದಕ್ಕಾಗಿ ಇಟ್ಟಿರುವ ಆಸೆ– ಆಮಿಷಗಳು ಒಂದೆರಡಲ್ಲ. ಪ್ರಸೂತಿ ಆರೈಕೆ, ಜನನಿ ಸುರಕ್ಷಾ, ಮಡಿಲು ಕಿಟ್ ಹೀಗೆ ಒಂದಕ್ಕಿಂತ ಒಂದು ಸುಂದರ ಶಿರೋನಾಮೆಗಳನ್ನು ಹೊತ್ತು ಬರುವ ಯೋಜನೆಗಳು. ಪ್ರಸೂತಿಯಾಗುವಾಗ ಆರೈಕೆ ಹೇಗಿರುತ್ತದೆ ನೋಡಲು ಯಾವುದೇ ಒಂದು ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡನ್ನು ಸಂದರ್ಶಿಸಬೇಕು. ನಿಲ್ಲಲೂ ಸಾಧ್ಯವಿಲ್ಲದ ಚಿಕ್ಕ ಕೊಠಡಿ, ಹೆರಿಗೆಗಾಗಿ ಬಂದಿರುವ ಗರ್ಭಿಣಿಯರ ಸಂಖ್ಯೆಯೋ... ಆಸ್ಪತ್ರೆಯ ಧಾರಣಾ ಶಕ್ತಿಯ ಹತ್ತುಪಟ್ಟು ಹೆಚ್ಚು. ನೋಡಲು ಒಬ್ಬರೇ ವೈದ್ಯರು, ಇಬ್ಬರೇ ದಾದಿಯರು. ಮಧ್ಯೆ ಮಧ್ಯೆ ಕೋಲು ಹಿಡಿದು ಒಳ ಪ್ರವೇಶಿಸಿ ಹೆಚ್ಚಿನ ಜನರಿದ್ದರೆ ಹೊರಕ್ಕೆ ತಳ್ಳಲು ಕೂಗುತ್ತ ಬರುವ ಬೀಟ್ ಪೊಲೀಸ್. ಬಾಯಾರಿದರೆ ನೀರು ಕೊಡುವವರಿಲ್ಲ. ನೋವಿಗೆ ಸ್ವಲ್ಪ ಹಣೆಯ ನೇವರಿಸಿ ಸಾಂತ್ವನ ಹೇಳುವವರಿಲ್ಲ. ತೆರೆದ ಕೊಠಡಿಯಲ್ಲಿ ತೆರೆದುಕೊಂಡು ಬಿದ್ದಿರಬೇಕು, ತಮ್ಮ ಪಾಳಿ ಬರುವವರೆಗೆ. ಇದು ಜೀವ ಕೊಡುವ ಜೀವವನ್ನು ಆರೈಕೆ ಮಾಡುವ ಪರಿಯೇ? ಜನನಿಗೆ ಸುರಕ್ಷೆ ಎಲ್ಲಿದೆ ಇಲ್ಲಿ? ಜಿಲ್ಲಾ ಆಸ್ಪತ್ರೆಗಳೇ ಹೀಗಿರುವಾಗ ಇನ್ನು ಜನರಿಗೆ ಸಮೀಪದ ಸಮುದಾಯ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಅದೆಂತಿರಬೇಕು? ವರ್ಷದಿಂದ ವರ್ಷಕ್ಕೆ ಕರ್ನಾಟಕದ ಆರೋಗ್ಯ ಸ್ಥಿತಿ ಕೆಳಕ್ಕಿಳಿಯದೇ ಮೇಲೇರುವುದೆಂತು? ಈ ವರ್ಷ ವಿಶ್ವ ಬ್ಯಾಂಕ್, ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಹೊರತಂದಿರುವ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ದಕ್ಷಿಣ ಭಾರತದಲ್ಲೇ ಅತಿ ಕೆಳಗಿನ ಸ್ಥಾನ ಕರ್ನಾಟಕದ್ದಾಗಿದೆ. ತಾಯಿ ಮರಣದಲ್ಲೂ ದಕ್ಷಿಣ ಭಾರತದಲ್ಲೇ ಪ್ರಥಮ ಸ್ಥಾನ ರಾಜ್ಯಕ್ಕೆ. ಪ್ರತಿ ವರ್ಷವೂ ಇಂಥ ವರದಿಗಳು ಪ್ರಕಟವಾಗಿ ಪತ್ರಿಕೆಗಳಲ್ಲಿ ರಾರಾಜಿಸಿದರೂ ಯಾವುದೇ ಅಧಿಕಾರಸ್ಥರ ತಲೆ ತಗ್ಗಿರಲಿಕ್ಕಿಲ್ಲ. ಅತಿ ಹೆಚ್ಚು ಬಡ ಜನರು ಹೋಗುವ ಆಸ್ಪತ್ರೆಗಳಲ್ಲಿ ನಮ್ಮ ತಾಯಂದಿರಿಗೆ ಸ್ವಚ್ಛವಾದ, ಸುರಕ್ಷಿತವಾದ ಮಾನವೀಯ ಸಾಂತ್ವನ ಸಿಗುತ್ತಿಲ್ಲವೆಂದರೆ ಜನನಿಗೆ ಗೌರವವನ್ನು ಕೊಡುತ್ತಿಲ್ಲವೆಂದೇ ಅರ್ಥ. ‘ಜೀವ ಕೊಡುವ ಜೀವ’ ದ ಘನತೆಯನ್ನು ಗಾಳಿಗೆ ತೂರಿದಂತೆಯೇ.

ಜನನಿ ಸುರಕ್ಷಾ ಎಂದ ಕೂಡಲೇ ಇನ್ನೊಂದು ವಿಷಯ ಬರೆಯಲೇ ಬೇಕು. ಈ ಕಾಲಮ್ಮಿನಲ್ಲಿ ಒಂದೆರಡು ಬಾರಿ ಈ ವಿಚಾರದ ಪ್ರಸ್ತಾಪವಾಗಿದೆ. ‘ಆಹಾರ ಭದ್ರತಾ ಕಾನೂನು 2013’ರಲ್ಲಿ ಸರ್ಕಾರಿ ಉದ್ಯೋಗ, ಕಾರ್ಪೊರೇಟ್ ಉದ್ಯೋಗದಲ್ಲಿರುವ ಹೆಣ್ಮಕ್ಕಳನ್ನು ಹೊರತುಪಡಿಸಿ ಇನ್ನೆಲ್ಲಾ ಮಹಿಳೆಯರಿಗೆ ಬಸುರಿಯಾಗಿ ಆರು ತಿಂಗಳಿನಿಂದ ಹೆರಿಗೆಯಾದ ಮೂರು ತಿಂಗಳವರೆಗೆ ತಿಂಗಳಿಗೊಂದು ಸಾವಿರದಂತೆ ₹ 6000 ‘ಮಾತೃತ್ವ ಸಹಯೋಗ’ ಸಾಮಾಜಿಕ ಭದ್ರತಾ ಹಣವನ್ನು ಕೊಡಬೇಕು ಎಂದಿತ್ತು. ನಾಲ್ಕು ವರ್ಷಗಳ ನಂತರ ಅದು ‘ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ’ ಮಾತೃ ಭಕ್ತಿಯನ್ನು ಸ್ಫುರಿಸುತ್ತ ₹ 5000ಆಗಿ ಜಾರಿಯಲ್ಲಿ ಬಂತು. (₹ 5000 ಭತ್ಯೆ ಮತ್ತು 1000 ರೂಪಾಯಿಯ ವಂದನೆ!) ರಾಜ್ಯ ಸರ್ಕಾರದ ಯೋಜನೆಗಳಿಂದ ಒಂದು ಸಾವಿರಕ್ಕೂ ಹೆಚ್ಚು ಹಣ ತಾಯಂದಿರ ಕೈ ಸೇರಿಯೇ ಸೇರುತ್ತದೆ ಎಂದು ಸ್ಪಷ್ಟನೆ ಬೇರೆ. ಆದರೆ ಆ ಯೋಜನೆ ಬರಬಹುದು ಎಂದು ನಮ್ಮ ಕರ್ನಾಟಕದಲ್ಲಿ ₹1000 ಪ್ರಸೂತಿ ಆರೈಕೆಯ ಕಂಬಳಿಯನ್ನು 2 ವರ್ಷಕ್ಕೂ ಮೊದಲೇ ಕಾಲ ಕೆಳಗಿನಿಂದ ಎಳೆದುಕೊಂಡಾಗಿತ್ತಾಗಲೇ.

ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೇ ಬಂದು ಮಧ್ಯಾಹ್ನ ಊಟ ಮಾಡಿ ಹೋಗಬೇಕೆಂಬ ‘ಮಾತೃಪೂರ್ಣ’ ಯೋಜನೆಯಲ್ಲಿ ಕೂಲಿಗೆ ಹೋದ ಗರ್ಭಿಣಿ ಊಟಕ್ಕೆಂದು ಅಂಗನವಾಡಿಗೆ ಬರಬೇಕು, ಹಡೆದಿರುವ ತಾಯಿ ಊಟಕ್ಕಾಗಿ ಅಂಗನವಾಡಿಗೆ ಹೋಗಬೇಕು ಎಂಬ ನಿರೀಕ್ಷೆಗಳಲ್ಲಿ ಲಿಂಗ ಸೂಕ್ಷ್ಮತೆಯಾಗಲೀ, ಆ ತಾಯಂದಿರ ಬಗ್ಗೆ ಗೌರವವಾಗಲೀ ಇಲ್ಲ.

ಇತ್ತೀಚೆಗೆ ಪೋತ್ನಾಳದ ‘ಜಾಗೃತ ಮಹಿಳಾ ಸಂಘಟನೆ’ಯು ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ಒಂದು ಸರ್ವೆ ನಡೆಸಿತು. ಹೆರಿಗೆ ಮತ್ತು ಪ್ರಸೂತಿ ಆರೈಕೆಗಾಗಿ ಎಷ್ಟು ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ, ಎಷ್ಟು ಜನ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ ಎಂದು. ಸರ್ಕಾರಿ ಆಸ್ಪತ್ರೆಗಳ ಅವಸ್ಥೆ ನೋಡಿ ಸಾಲ ಮಾಡಿಯಾದರೂ ಖಾಸಗಿಗೇ ಹೋಗುವವರ ಸಂಖ್ಯೆ ಶೇ 80 ಇರುವುದು ಕಂಡು ಬಂತು. ಶೇ 60ರಷ್ಟು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದರೂ ಹೆರಿಗೆಯ ಸಮಯಕ್ಕೆ ಅದು ಶೇ 30ಕ್ಕಿಳಿಯುತ್ತದೆ. ಖಾಸಗಿಯಲ್ಲಿ ಪ್ರಸವಪೂರ್ವ ಪರೀಕ್ಷೆಗಳ ವೆಚ್ಚ ₹ 11ಸಾವಿರಕ್ಕೆ ಮೀರಿದ್ದರೆ ಹೆರಿಗೆ ಖರ್ಚು ₹ 13ಸಾವಿರದಿಂದ ₹ 48 ಸಾವಿರದ ವರೆಗೆ. ಇವೆಲ್ಲವೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುತ್ತಿರುವ ಸಂದರ್ಭದಲ್ಲಿ. ಇತ್ತೀಚಿನ ಚುನಾವಣಾ ಹೇಳಿಕೆಯಲ್ಲಿ ಮುಖ್ಯ ಮಂತ್ರಿಗಳೇ ಹೇಳಿದ್ದಾರೆ, ‘ಸರ್ವರಿಗೂ ಉಚಿತ ಆರೋಗ್ಯ ಕರ್ನಾಟಕದಲ್ಲಿ!’ ಎಲ್ಲಿದೆ ಅದು?

ತಾಯಂದಿರ ಬಗೆಗೇ ಗೌರವವಿರದ ಈ ನಾಡಿನಲ್ಲಿ ಹುಟ್ಟಲಿರುವ ಹೆಣ್ಣುಮಕ್ಕಳ ಬಗ್ಗೆ ಪ್ರೀತಿ ಗೌರವ ನಿರೀಕ್ಷಿಸುವುದಾದರೂ ಹೇಗೆ? ರಾಜ್ಯದ ಲಿಂಗಾನುಪಾತ ಸರಾಸರಿ ದೇಶದ ಲಿಂಗಾನುಪಾತ ಸರಾಸರಿಗಿಂತ ಹೆಚ್ಚಿದೆ ಎಂದುಕೊಳ್ಳುತ್ತಿದ್ದ ಸಮಾಧಾನ ಅಂಗೈಯೊಳಗಿನ ನೀರಿನಂತೆ ಜಾರಿಹೋಗುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜ್ಯದ ಲಿಂಗಾನುಪಾತ ಸರಾಸರಿ ಕಡಿಮೆಯಾಗುತ್ತಿದೆ. ಎಲ್ಲಿ ಲಿಂಗ ಪತ್ತೆ ಆಗುತ್ತಿದೆ ಗೊತ್ತು. ಎಲ್ಲಿ ಭ್ರೂಣ ಹರಣವಾಗುತ್ತಿದೆ ಎಂಬುದೂ ಗೊತ್ತು. ಆದರೆ ಅದನ್ನು ತಡೆಯಬೇಕಾದವರು ಕಾರ್ಯಪ್ರವೃತ್ತರಾಗದಿರುವುದಕ್ಕೆ ಅವರೊಳಗೆ ಆಳವಾಗಿ ಬೇರುಬಿಟ್ಟಿರುವ ಲಿಂಗ ತಾರತಮ್ಯವೇ ಕಾರಣ ಹೊರತು ಇನ್ನೇನೂ ಅಲ್ಲ. ಕಾನೂನಿನಲ್ಲಿರಬಹುದು, ಹಾಡಿನಲ್ಲಿರಬಹುದು, ಲೇಖನದಲ್ಲಿರಬಹುದು. ಆದರೆ ಅದು ಹೃದಯದೊಳಕ್ಕಿಳಿದಿಲ್ಲ.

ಲಿಂಗ ಅಸಮಾನತೆಯ ಬೇರನ್ನು ನಮ್ಮೆಲ್ಲರ ಮನಸ್ಸಿನೊಳಗಿನಿಂದ ಕಿತ್ತು ಬಿಸಾಡುವ ತನಕ ನಮ್ಮ ಆರೋಗ್ಯ ವ್ಯವಸ್ಥೆಯೂ ಸುಧಾರಿಸುವುದಿಲ್ಲ, ಅತ್ಯಾಚಾರಗಳೂ ಕಡಿಮೆ ಆಗುವುದಿಲ್ಲ, ಹೆಣ್ಣು ಭ್ರೂಣ ಹತ್ಯೆಯೂ ನಿಲ್ಲುವುದಿಲ್ಲ. ಮಾರ್ಚ್ 8 ಮತ್ತೆ ಮತ್ತೆ ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಫ್ಯಾಶನ್ ಸ್ಪರ್ಧೆಗಳಿಂದ ಅಲಂಕಾರಗೊಂಡು ದಾಟಿ ಹೋಗುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.