ADVERTISEMENT

ಪೆರುಮಾಳ್ ಕಾದಂಬರಿ ಮತ್ತು ನಿಯೋಗ

‘ಅರ್ಧನಾರೀಶ್ವರ’ ಕಾದಂಬರಿ ವಿವರಿಸಿರುವ ನಿಯೋಗ ಪದ್ಧತಿ ಹೊಸದಲ್ಲ; ಅದಕ್ಕೆ ಶತಮಾನಗಳ ಇತಿಹಾಸವೇ ಇದೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2016, 20:02 IST
Last Updated 14 ಜುಲೈ 2016, 20:02 IST
ಪೆರುಮಾಳ್ ಕಾದಂಬರಿ ಮತ್ತು ನಿಯೋಗ
ಪೆರುಮಾಳ್ ಕಾದಂಬರಿ ಮತ್ತು ನಿಯೋಗ   

ಪೆರುಮಾಳ್ ಮುರುಗನ್ ಅವರ ‘ಅರ್ಧನಾರೀಶ್ವರ’ ಕಾದಂಬರಿಯ ಮೇಲಿನ ನಿಷೇಧವನ್ನು ನ್ಯಾಯಾಲಯ ತಳ್ಳಿಹಾಕಿದೆ. ಆ ಕಥನದಲ್ಲಿ ಸಮಾಜ ವಿರೋಧಿ ಸಂಗತಿಯೇನೂ ಇಲ್ಲವೆಂಬಂತಾಗಲು, ಪೆರುಮಾಳ್ ಲೇಖಕರಾಗಿ ತಮ್ಮ ಅಂತ್ಯವನ್ನು ಘೋಷಿಸಿಕೊಂಡಿದ್ದವರು ಇದೀಗ ನ್ಯಾಯಾಲಯದ ನಿಲುವಿನಿಂದ ಮತ್ತೆ ಬರೆಯುವ ಉತ್ಸಾಹ ಚಿಗುರಿದೆ ಎಂದಿದ್ದಾರೆ.

ಅರ್ಧನಾರೀಶ್ವರ ಕಥನವನ್ನು ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ. ಮುಂದೆ ಉಲ್ಲೇಖಗೊಳ್ಳುವ ವಿವರಗಳು, ಅಂಥದ್ದೊಂದು ಪದ್ಧತಿ ಭಾರತೀಯ ಪರಂಪರೆಯಲ್ಲಿ ಇದ್ದಿತು, ಅದು ಅಪ್ರಾಕೃತವೇನಲ್ಲ ಎಂಬುದನ್ನಷ್ಟೆ ಹೇಳುವುದಾಗಿದೆ.

‘ಅರ್ಧನಾರೀಶ್ವರ’ ಅಥವಾ ‘ಮಾದೊರು ಬಾಗನ್’ ಇಲ್ಲವೇ ‘ಅಮ್ಮಯ್ಯಪ್ಪನ್’ ಎಂದು ಸಂಸ್ಕೃತ ಮತ್ತು ತಮಿಳು ರೂಪಗಳಲ್ಲಿರುವ ಈ ಕಾದಂಬರಿಯ ವಸ್ತು, ತಮಿಳುನಾಡಿನ ಗ್ರಾಮೀಣ ದೇವಾಲಯವೊಂದರ ಪರಿಸರದಲ್ಲಿ ನಡೆಯಬಹುದಾದ ನಿಯೋಗ ಪದ್ಧತಿಯನ್ನು ಹೇಳುವಂಥದ್ದು. ಲೇಖಕರು ಆರಿಸಿರುವ ಸಂಗತಿ ಇದ್ಯಾವುದೋ ಅಸಹಜ ಸಂಪ್ರದಾಯದ ಕಡೆಗೆ ಜನಸಮೂಹವನ್ನು ಪ್ರಚೋದಿಸುವಂತಿದೆಯೇನೊ ಎನಿಸಿಬಿಡುತ್ತದೆ. ಸಂಪ್ರದಾಯವಾದಿಗಳಿಗೆ ಕೊಂಚ ಇರಿಸುಮುರಿಸಾಗಬಹುದು.

ಭಾರತೀಯ ಚಿಂತನಾಕ್ರಮ ಎಂದೂ ತನ್ನ ಮಹಾಕಥನ, ಪುರಾಣ, ಸಂಪ್ರದಾಯ, ಆಚರಣೆಗಳನ್ನು ಒಂದು ರೀತಿಯಲ್ಲಿ ನೋಡೇ ಇಲ್ಲ. ಜಾನಪದ ಜಗತ್ತಿನೆಡೆ ಕೊಂಚ ಹೊರಳಿ ನೋಡಿದರೆ ಭಾರತೀಯ ಪರಂಪರೆಯ ವಿಭಿನ್ನ ನಡಾವಳಿಗಳು ಅದೆಷ್ಟು ಬಗೆಯವೆಂದು ಅರಿವಾಗುತ್ತದೆ. ಅದು ಸಾಂಪ್ರದಾಯಿಕ ಪರಂಪರೆಯ ಕಟ್ಟು ಕಟ್ಟಳೆಗೆಲ್ಲಾ ತನ್ನದೇ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿದೆ. ಇದನ್ನು ಶಿಷ್ಟ ಪರಂಪರೆಯೂ ಒಪ್ಪಿಕೊಂಡಿದೆ. ಇದನ್ನೆಲ್ಲಾ ತಾಳ್ಮೆಯಿಂದ ಅರಿಯಬೇಕಾಗಿದೆಯಷ್ಟೆ.

ಪೆರುಮಾಳ್ ಮುರುಗನ್ ತಮ್ಮ ಕಾದಂಬರಿಯಲ್ಲಿ ವಿವರಿಸಿರುವ ನಿಯೋಗ ಪದ್ಧತಿಗೆ ಶತಮಾನಗಳ ಇತಿಹಾಸವೇ ಇದೆ. ಕಾದಂಬರಿಯಲ್ಲಿ ಗಂಡ ಕಾಳಿಯನ್ನು ಇನ್ನಿಲ್ಲದಂತೆ ಪ್ರೀತಿಸುವ ಪೊನ್ನಾ ತನಗೆ ಮಗುವಾಗದ ಕಾರಣಕ್ಕಾಗಿ ತಿರುಚ್ಚೆಂಗೋಡು ಗ್ರಾಮದ ಅಮ್ಮಯ್ಯಪ್ಪನ್ ದೇವರ ಜಾತ್ರೆಯಲ್ಲಿ ಅಕಸ್ಮಾತ್ತಾಗಿಯೋ, ತಸ್ಮಾತ್ತಾಗಿಯೋ ಅನ್ಯ ಪುರುಷನ ಸಂಸರ್ಗವನ್ನು ಬಯಸುತ್ತಾಳೆ. ಸಂಪ್ರದಾಯವಾದಿಗಳಿಗೆ ಇದು ಪಾತಿವ್ರತ್ಯ ಪರಂಪರೆಯನ್ನು ಮುರಿಯುವ ಆಶಯವೆನಿಸುತ್ತದೆ.

ಋಗ್ವೇದದ ಮೊದಲ ಸಂಪುಟದ ಇಪ್ಪತ್ತೊಂದನೆಯ ಭಾಗದಲ್ಲಿ ನಿಯೋಗ ಪದ್ಧತಿಯನ್ನು ಪುರಸ್ಕರಿಸಿರುವ ಶ್ಲೋಕಗಳಿವೆ. ಸ್ತ್ರೀಗೆ ಪುರುಷನು ತೀರಿಕೊಂಡಿದ್ದರೆ, ವಿಧವೆಯಾದವಳು ನಿರ್ದಿಷ್ಟ ಸಮಯದಲ್ಲಿ ವಿಧುರನೊಬ್ಬನನ್ನು ವಿನಂತಿಸಿ ನಿಯೋಗ ಮುಖೇನ ಸಂತಾನ ಪಡೆಯಬಹುದೆಂದು ಹೇಳಿದೆ. ಅಲ್ಲಿಯೇ ಮತ್ತೊಂದು ವಾಕ್ಯವೂ ‘ಎಲೈ ವೀರ್ಯ ದಾನವನ್ನು ಮಾಡುವ ಮೀಢ್ವನೇ ನೀನು ವಿವಾಹಿತ ಸ್ತ್ರೀಗೆ ವೀರ್ಯಸೇಚನೆ ಮಾಡುವುದರ ಮೂಲಕ ಆಕೆಯನ್ನು ಗರ್ಭಯುಕ್ತಳನ್ನಾಗಿ ಮಾಡು’ ಎಂದಿದೆ.

ಇಲ್ಲಿ ಮೀಢ್ವ ಎಂಬ ಪದ ವಿಧುರ ಪುರುಷನನ್ನು ಸೂಚಿಸುತ್ತದೆಯೋ ಅಥವಾ ಕನ್ನಡದ ಮಿಂಡ ಪದವೋ ವಿದ್ವಾಂಸರು ಗಮನಿಸಬೇಕು. ಸಂಸ್ಕೃತ ವಿದ್ವಾಂಸರನ್ನು ಕೇಳಲಾಗಿ ಮೀಢ್ವ ಪದವು ಅಲ್ಲಿ ಮಾತ್ರ ಬಳಕೆಯಾಗಿ, ಆ ಮುಂದೆ ಪ್ರಯೋಗವಾಗಿಲ್ಲ ಎಂದು ತಿಳಿಸಿದರು. ವ್ಯಾಸಕೃತ ಮಹಾಭಾರತದಲ್ಲಿಯೂ ನಿಯೋಗ ಪದ್ಧತಿಯ ಸೂಚನೆ ಇದೆ.

ಕುಂತಿ, ಮಾದ್ರಿಯರ ನಿಯೋಗ ವಿವರಗಳು ಪರಿಚಿತವೇ ಆಗಿವೆ. ವ್ಯಾಸನೇ, ಮಹಾಜ್ಞಾನಿಯಾದ ಪರಾಶರನಿಗೂ, ನಿತ್ಯವೂ ಹೋದಬಂದವರನ್ನು ನದಿ ದಾಟಿಸುತ್ತಿದ್ದ ಪ್ರಾಕೃತಿಕ ಶಕ್ತಿಯಾದ ಮತ್ಸ್ಯಗಂಧಿಗೂ ಹುಟ್ಟಿದವನು. ಇದು ನಿಯೋಗವೆ.ಯಾಜ್ಞವಲ್ಕ್ಯ ಸ್ಮೃತಿಯೂ ಪುರುಷನನ್ನು ಕಳೆದುಕೊಂಡ ಸ್ತ್ರೀಗೆ ಕೊಡುವ ಸಲಹೆ ಎಂದರೆ, ಪುರುಷನನ್ನು ಕಳೆದುಕೊಂಡ ಸ್ತ್ರೀಯು ತಂದೆ, ತಾಯಿ, ಮಗ, ಸೋದರ, ಅತ್ತೆ, ಸೋದರಮಾವ ಇವರ್‍ಯಾರ ಬಳಿಯಾದರೂ ಜೀವಿಸಬಹುದು.

ಆಕೆಗೆ ಪುತ್ರ ಸಂತಾನದ ಬಯಕೆ ಇದ್ದರೆ ಮೈದುನ ಇಲ್ಲವೇ ಸಗೋತ್ರದ ಯಾವನಾದರೂ ಪುರುಷ ಆಕೆಯ ಗಮನ ಮಾಡಬಹುದು; ಗರ್ಭಧಾರಣೆ ಬಳಿಕ ಮತ್ತೆ ಅವನೊಂದಿಗೆ ಸಂಬಂಧ ಬೆಳೆಸಬಾರದು ಎಂದಿದೆ.ಈ ಬಗೆಯ ನಿಯೋಗ ಪದ್ಧತಿಯು ಬೌದ್ಧ ಧರ್ಮದ ತರುವಾಯ ಹುಟ್ಟಿಕೊಂಡ ಅವರ ಉಪಪಂಥಗಳಲ್ಲಿಯೂ ಇದ್ದಿತು.

ಮಹಾಸುಖವೂ ಶೂನ್ಯತೆಯಲ್ಲಿದೆ ಎಂದು ಮೂಲ ಬೌದ್ಧರು ಹೇಳಿದರೆ, ವಜ್ರಯಾನವು ಶೂನ್ಯ ತಲುಪುವುದರ ಪೂರ್ಣ ಸಂಯೋಗವು ಹೆಣ್ಣಿನಿಂದಲೇ ಆಗಬೇಕೆಂದು ಹೇಳುತ್ತದೆ. ಈ ಕ್ರಮದ ಆಚರಣೆಯ ಕೇಂದ್ರಗಳು ಉತ್ತರದಿಂದ ದಕ್ಷಿಣ ಭಾರತದ ಕರ್ನಾಟಕದವರೆಗೆ ಇದ್ದವು. ಆ ನಂತರ ಕಾಪಾಲಿಕ, ನಾಥಪಂಥ, ಸಿದ್ಧರು, ಕೌಳರಲ್ಲಿ ನಿಯೋಗ ಪದ್ಧತಿ ಇದ್ದಿತು.

ಇದನ್ನು ಅರಮನೆಗಳೂ ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡವು. ಅಂದರೆ ಸತ್ತ ಸೈನಿಕರ ಹೆಂಡತಿಯರು ನಿಯೋಗದ ಮೂಲಕ ಸಂತಾನ ಹೊಂದುವಂತೆ ಮಾಡಿ ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವ ಉಪಾಯ ಹೂಡಿದವು. ಅದಕ್ಕೆ ಸರಿಯಾದ ಸ್ಥಳಗಳೆಂದರೆ ದೈವ ಸನ್ನಿಧಿಯ ಜಾತ್ರೆಗಳೇ. ಹೀಗೆ ಸ್ತ್ರೀಸಂಪರ್ಕವನ್ನು ಹೊಂದುವ ಸಂತಾನಾಪೇಕ್ಷೆಯ ಹಿನ್ನೆಲೆಯಲ್ಲಿ ಮದ್ಯ, ಮಾಂಸದ ಬಳಕೆಯೂ ಜಾರಿಗೆ ಬಂದಿತು.

ಈ ವಿವರವು ಪೆರುಮಾಳ್ ಮುರುಗನ್ ಅವರ ಕಾದಂಬರಿಯಲ್ಲಿ ಹೆಚ್ಚಾಗಿಯೇ ಇದೆ.ಇನ್ನು ವರ್ತಮಾನಕ್ಕೆ ಬಂದರೆ, ಕರ್ನಾಟಕದ ಅನೇಕ ಭಾಗಗಳಲ್ಲಿ ಸ್ತ್ರೀ ಪುರುಷ ಸಂಪರ್ಕವನ್ನು ನಿಗದಿತ ಸಂದರ್ಭದಲ್ಲಿ ಏರ್ಪಡಿಸಲು ಅವಕಾಶ ನೀಡುತ್ತಿದ್ದ ಕೇಂದ್ರಗಳು ಅಸಂಖ್ಯಾತ ಇದ್ದವು. ಇಲ್ಲೆಲ್ಲಾ ನಿಯೋಗ ಮತ್ತು ಕಾಮವಲ್ಲದೆ ಪತ್ನಿಯರಿದ್ದೂ, ಉಪಪತ್ನಿಯರನ್ನು ಹೊಂದ ಬಯಸಿದ ದೇವತೆಗಳ ಕಥನಗಳು ಮತ್ತು ಆಚರಣೆಗಳು ಪ್ರಚಾರದಲ್ಲಿರುತ್ತವೆ.

ಅವು ತುಂಬ ಜನಪ್ರಿಯವೂ ಆಗಿರುತ್ತವೆ. ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕು. ಯಾವಾಗಲೂ ನಿಯೋಗವು ಮೇಲುವರ್ಗದ ಪುರುಷರು ಮತ್ತು ತಳವರ್ಗದ ಸ್ತ್ರೀಯರ ನಡುವೆ ಜರುಗುತ್ತದೆ. ಮೇಲುವರ್ಗದ ಸ್ತ್ರೀ ಮತ್ತು ತಳವರ್ಗದ ಪುರುಷರ ನಡುವೆ ನಡೆಯುವುದಿಲ್ಲ. ಆದರೆ ಜಾನಪದ ಜಗತ್ತಿಗೆ ಬರುವಲ್ಲಿ ಈ ನಿಯಮ ಸ್ವಲ್ಪ ಮಟ್ಟಿಗೆ ಬದಲಾಗುತ್ತದೆ.

ಎಸ್.ಎಫ್.ಯೋಗಪ್ಪನವರ್ ಇತ್ತೀಚೆಗೆ ಪ್ರಕಟಿಸಿದ ‘ಪ್ರೀತಿಯೆಂಬುದು ಚಂದ್ರನ ದಯೆ’ ಎಂಬ ಕೃತಿಯಲ್ಲಿ ಬನಶಂಕರಿ ಜಾತ್ರೆಯನ್ನು ಕುರಿತು, ಇದು ದೇಹದ ಆಶೆಗೆ ಹೇಳಿ ಮಾಡಿಸಿದ ಸಮಯವೆಂದು; ‘ಈ ಜಾತ್ರೆಯಲ್ಲಿ ಬೆಳದಿಂಗಳು ಹಂಚಿದ ಮುತ್ತು, ರತ್ನ, ಐಶ್ವರ್ಯವೆಂದರೆ ಮೈ ವಾಸನೆಯಲ್ಲಿಯೇ ಬೆದೆಯುಕ್ಕಿಸುವ ದೈಹಿಕ ತಾಕಲಾಟಗಳು ಬೇರುಗಳನ್ನೇ ಅಲ್ಲಾಡಿಸಿ ದ್ರವಿಸುವ ನವಯೌವನದ ಹಸಿಗಮ್ಮತ್ತು...’ ಎನ್ನುತ್ತಾರೆ.

ಬಾದಾಮಿಯ ಅಗಸ್ತೇಶ್ವರ ಕೊಳದ ಬಳಿ ಕುಳಿತಿದ್ದ ಒಬ್ಬ ಮಧ್ಯ ವಯಸ್ಕ ಮಹಿಳೆ, ಸೀರೆ ಸುತ್ತಿದ ಹುಣಸೆಮರಕ್ಕೆ ಪೂಜೆ ಮಾಡುತ್ತಿದ್ದಳು. ಕೇಳಿದರೆ ‘ಮದುವೆಯಾಗಿಲ್ಲ, ಮಕ್ಕಳಿವೆ’ ಎಂದಳು. ಅಗಸ್ತೇಶ್ವರ ಕೊಳದ ಪೂರ್ವ ಭಾಗದಲ್ಲಿ ನಾಥಪಂಥೀಯ ಯೋಗಿಯ ನಗ್ನ ವಿಗ್ರಹವಿದೆ. ಈ ಬಾದಾಮಿಯ ಸಮೀಪದ ಮಹಾಕೂಟವು ನಿಯೋಗ ಸ್ಥಳವೆ. ಮೂವತ್ತು ವರ್ಷಗಳ ಕೆಳಗೆ ಅಲ್ಲಿಯ ದೇವತೆಯ ಹೆಸರು ಅಧೋರೇತೇಶ್ವರ ಎಂದಿತ್ತು. ಈಗ ಅದು ಮಹಾಕೂಟೇಶ್ವರ ಆಗಿದೆ.

ಇತ್ತೀಚೆಗೆ ಮಹಾಕೂಟಕ್ಕೆ ಹೋಗಿದ್ದಾಗಲೂ ಅಲ್ಲಿಯ ಕೊಳದಲ್ಲಿ ಹೆಣ್ಣು ಗಂಡು ಸ್ವಚ್ಛಂದ ಗತಿಯಲ್ಲಿ ಮುಳುಗಾಡುತ್ತಿದ್ದರು. ಆ ಕೊಳದ ತಡಿಯ ಮರದಲ್ಲಿ ಸಣ್ಣ ಸಣ್ಣ ಹರಕೆ ತೊಟ್ಟಿಲು ಅಸಂಖ್ಯಾತ ತೂಗಾಡುತ್ತಿದ್ದವು. ಇದೆಲ್ಲದರೊಂದಿಗೆ ಈ ಹೊತ್ತಿಗೂ ಬಾದಾಮಿಯ ಜಾತ್ರೆಯಲ್ಲಿ ಆಡುವ ನಾಟಕಗಳ ಶೀರ್ಷಿಕೆಗಳು ‘ಬಾ ಅಂದ್ರೆ ಬರಂಗಿಲ್ಲ- ಬರಬೇಡ ಅಂದ್ರೆ ಬಿಡಂಗಿಲ್ಲ’, ‘ಯಾರಿಗಾದೆ ನೀ ಮಡದಿ’, ‘ಮಾಂಗಲ್ಯ ಯಾರದು- ನೀ ಯಾರ ಮಡದಿ’ ಇಂಥವು. ಈ ನಾಟಕದ ಸಂಭಾಷಣೆಗಳೂ ಹೆಣ್ಣು ಗಂಡಿನ ಅದಮ್ಯ ದೈಹಿಕ ಆಕರ್ಷಣೆ ಹಿನ್ನೆಲೆಯಲ್ಲೇ ಹೆಣೆದವಾಗಿರುತ್ತವೆ.

ಆಶ್ಚರ್ಯವೆಂದರೆ, ಯೋಗಪ್ಪನವರ್ ಬನಶಂಕರಿ ಜಾತ್ರೆ ಕುರಿತು ಬರೆದಂತೆಯೇ ಪೆರುಮಾಳ್ ಅವರೂ ತಿರುಚ್ಚೆಂಗೋಡಿನ ಅಮ್ಮಯ್ಯಪ್ಪನ್ ಜಾತ್ರೆಯನ್ನು ವಿವರಿಸುತ್ತಾರೆ.

‘ದೇವಸ್ಥಾನದ ಮಂಟಪಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆ ಇರಲಿಲ್ಲ. ಸಂಭ್ರಮ ಉತ್ತುಂಗಕ್ಕೇರುವಾಗ ಎಲ್ಲ ರೀತಿ ನಿಯಮಗಳು ಧ್ವಂಸವಾಗುತ್ತಿದ್ದವು. ಅದಕ್ಕೆ ಆ ರಾತ್ರಿಯೇ ಸಾಕ್ಷಿ. ಒಡಂಬಡುವ ಯಾವ ಗಂಡು-ಹೆಣ್ಣು ಸಂಭೋಗಿಸಬಹುದು. ಗಲ್ಲಿಗಳಲ್ಲೂ, ಗದ್ದೆ ತೋಟಗಳಲ್ಲೂ, ಬೆಟ್ಟದ ಮಂಟಪಗಳಲ್ಲೂ, ಬಂಡೆಗಳ ಸಂದಿಯಲ್ಲೂ ದೇಹಗಳು ಸಾಮಾನ್ಯವಾಗಿ ಹೆಣೆದುಕೊಂಡು ಬಿದ್ದಿರುವುವು.

ಇರುಳು, ಎಲ್ಲಾ ಮುಖಗಳಿಗೂ ಪರದೆ ಎಳೆದು ಬಿಡುವುದು. ಶಿಲಾಯುಗದ ಈ ಮಾನವ ಜಾತ್ರೆಯೂ ಮತ್ತೆ ಜೀವಂತವಾಗುವುದು...’ ಎಂದಿದೆ. ಪೆರುಮಾಳ್ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ, ತಮಿಳುನಾಡಿನ ತಟ್ಟೈಕಾಟ್ಟು ತಿರುವಿಳಾದಲ್ಲಿ ಈಗಲೂ ರಾತ್ರಿಯ ಹೊತ್ತು ಈವರೆಗೆ ವಿವರಿಸಿದ ನಿಯೋಗ ಕ್ರಮ ತಪ್ಪಿ ಬರಿಯ ಹೆಣ್ಣು ಗಂಡು ಗೊಂಬೆಗಳನ್ನು ದೇವಾಲಯದ ಸುತ್ತ ಮಲಗಿಸುವ ಪಳೆಯುಳಿಕೆ ಉಳಿದುಕೊಂಡಿರುತ್ತದೆ.

ಶಿವರಾಮ ಕಾರಂತರ ‘ಸ್ಮೃತಿ ಪಟಲದಿಂದ’ ಕೃತಿಯ ಮೂರನೆಯ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಳಸಮೂಹ ವಿವಾಹ ವ್ಯವಸ್ಥೆ ಇಲ್ಲದೆಯೇ ಸಂತಾನವನ್ನು ಪಡೆಯುತ್ತಿತ್ತೆಂಬ ವಿಷಯವಿದೆ. ಇದಕ್ಕೆ ಹಿನ್ನೆಲೆಯಾಗಿ ಅದೇ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯಡಕ, ಕಬತ್ತಾರು, ಉರುಂಬಿತ್ತೊಟ್ಟು ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳನ್ನು ಗಮನಿಸಿದರೆ ಅಲ್ಲಿಯ ಹೆಣ್ಣು ಗಂಡುಗಳ ಸಮಾಗಮ ಪ್ರಜನನ ಉದ್ದೇಶದಿಂದಲೇ ನಡೆಯುತ್ತಿತ್ತು.

ಅಲ್ಲಿ ಗುಡಿಯ ಸುತ್ತ ರಾತ್ರಿ ಹೊತ್ತು ಸೇರುವ ಗಂಡಸರನ್ನು ಕುಮಾರರು ಎಂತಲೂ ಹೆಂಗಸರನ್ನು ಸಿರಿ ಎಂತಲೂ ಕರೆಯುವರು. ಕುಮಾರರು ಮದುವೆ ವರನಂತೆ ಸಿರಿಯರು ವಧುಗಳಂತೆ ಕೈಯಲ್ಲಿ ತೆಂಗಿನ ಹೊಂಬಾಳೆ ಹಿಡಿದು ವಾಸಿಸುತ್ತ ಪರವಶತೆಗೆ ಸಲ್ಲುವರು. ಜಾತ್ರೆಯ ಮುಂದಿನ ವರ್ಷ ಅದೇ ದೇವಾಲಯಗಳಲ್ಲಿ ಮಕ್ಕಳಿಗೆ ‘ಬಳಿ’ ಎಂದರೆ ಕುಲ ಕೊಡುವ ಸಂಪ್ರದಾಯವಿತ್ತು.

ಇನ್ನು ಈ ಸಿರಿ ಮೂಲದ ಕಥೆ ಕೂಡ ಈಕೆಯು ಗಂಡ ಕಾಂತೂ ಪೂಂಜನನ್ನು ಬಿಟ್ಟು ಕೊಡ್ಸರಾಳ್ವನನ್ನು ಸೇರುತ್ತಾಳೆ. ಅಂದರೆ ನಿಯೋಗ ಪದ್ಧತಿ ಇರುವ ಜಾಗಗಳಲ್ಲೆಲ್ಲ ಜಾತಿ, ಕುಲ, ಸಂಬಂಧ ವಿಲಂಘನದ ಸೂಚನೆಗಳಿರುವ ಕಥನಗಳನ್ನೇ ಹಾಡಿಕೊಳ್ಳಲಾಗುತ್ತದೆ. ಆದರೆ ತೀರ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಾತ್ರೆಯ ಆಚರಣಾ ವಿಧಾನಗಳಲ್ಲಿ ನಿಯೋಗದ ಆಚರಣೆಗಳು ಸೂಚನಾ ಮಾತ್ರದ ಪಳೆಯುಳಿಕೆಗಳಾಗಿರುತ್ತವೆಂಬುದನ್ನು ಗಮನಿಸಬೇಕು. ಬೆತ್ತಲೆಸೇವೆಯೂ ಈ ಹಿನ್ನೆಲೆಯದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ‘ಹಿಂದೂ ಕಾನೂನು ಮಸೂದೆ ಕರಡಿನ ಮೇಲೆ ಸಾಮಾನ್ಯ ಚರ್ಚೆ’ ಸಂಪುಟ 14ರಲ್ಲಿ ನಿಯೋಗ ಸಂಗತಿಯನ್ನು ಪ್ರಸ್ತಾಪಿಸುತ್ತಾರೆ.ಸ್ಮೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ನಿಯೋಗ ವಿಚಾರ ಕುರಿತಾಗಿ ‘ಭಾರತದಲ್ಲಿ ಮದುವೆಯ ಪದ್ಧತಿಯೇ ಇಲ್ಲದಂಥ ಕಾಲ ಒಂದಿತ್ತು. ಹಿಂದಿನ ದಿನಗಳಲ್ಲಿ ಭಾರತದಲ್ಲಿ ದೀರ್ಘಕಾಲದವರೆಗೆ ನಿಯೋಗ ಪದ್ಧತಿ ಇತ್ತು...’ ಎಂದಿದ್ದಾರೆ. 

ಲಜ್ಜಾಗೌರಿಯಿಂದ ಹಿಡಿದು ಮಿಥುನ ಶಿಲ್ಪಗಳಿರುವ ಎಲ್ಲಾ ದೇವಾಲಯಗಳೂ, ನದಿತಟಗಳಲ್ಲಿ ಈ ಸ್ತ್ರೀ ಪುರುಷ ಸಂಸರ್ಗವು ನಡೆಯುತ್ತಿತ್ತು. ಕಳೆದ ಶತಮಾನಗಳಲ್ಲಿ ನಾನಾ ಕಾರಣಗಳಿಗಾಗಿ ಸಂತಾನ ನಶಿಸುತ್ತಿದ್ದು ಅದನ್ನು ಮತ್ತೆ ಹೇಗಾದರೂ ಪಡೆಯಲು, ಜೀವನಕ್ಕೊಂದು ಊರುಗೋಲು ಹೊಂದಲು ವಿಧವೆಯರಿಗೆ, ಮಕ್ಕಳಾಗದ ಹೆಂಗಸರಿಗೆ ಮುಕ್ತ ಲೈಂಗಿಕ ಸಮಯವನ್ನು ಭಾರತೀಯ ಸಮಾಜ ಸೃಷ್ಟಿ ಮಾಡಿದೆ.

ಪಾತಿವ್ರತ್ಯವನ್ನು ಒತ್ತಿ ಹೇಳಿದಂತೆಯೇ ಅದನ್ನು ಮೀರಬಹುದಾದ ನಿಯೋಗ ಸಂಸರ್ಗವನ್ನು ಎತ್ತಿ ಹಿಡಿದಿದೆ. ಪಿ.ವಿ.ಕಾಣೆಯವರೂ ತಮ್ಮ ‘ಧರ್ಮಶಾಸ್ತ್ರ’ ಕೃತಿ ಸಂಪುಟಗಳಲ್ಲಿ ನಿಯೋಗ ಸಂಸರ್ಗ ಅದೆಷ್ಟು ಕೃತಿ ಮತ್ತು ಸ್ಮೃತಿಗಳಲ್ಲಿರುವುದೆಂಬುದನ್ನು ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ತೀರಿಕೊಂಡ ಅಬ್ಬಾಸ್ ಕೈರೊಸ್ತಮಿ ತಮ್ಮ ‘ಇನ್ ಲವಿಂಗ್ ಮೆಮೊರಿ’ ಸಿನಿಮಾದಲ್ಲಿ ಮನುಷ್ಯನನ್ನು ಕಾಡುವ ಅದಮ್ಯ ಕಾಮದ ಕತೆ ಹೇಳುತ್ತಾರೆ. ವಯಸ್ಕ ಪ್ರಾಧ್ಯಾಪಕನೊಬ್ಬ ಒಂಟಿತನದ ಬಿಡುಗಡೆಗಾಗಿ ಹುಡುಗಿಯೊಬ್ಬಳನ್ನು ತನ್ನ ಮೇಲು ಮಹಡಿಗೆ ಕರೆತರುತ್ತಾನೆ. ಅವಳ ಪ್ರೇಮಿ ಯುವಕ ಅವಳನ್ನು ಹುಡುಕಿಕೊಂಡು ಬಂದು ಪ್ರಾಧ್ಯಾಪಕನ ಮನೆಯ ಸುತ್ತ ಹುಲಿಯಂತೆ ಗರ್ಜಿಸುತ್ತ ಅಡ್ಡಾಡುತ್ತಾನೆ.

ಎಲ್ಲ ಕಾಲದ ಮನುಷ್ಯನ ಅಂತರಂಗ ಸಂಘರ್ಷಗಳ ಮೊರೆತವನ್ನು ಕೈರೊಸ್ತಮಿ ಎಲ್ಲಿಯೂ ಸಿನಿಮಾ ಆಗದಂತೆ ಅತ್ಯಂತ ವಾಸ್ತವವಾಗಿ ಚಿತ್ರಿಸುತ್ತಾರೆ. ಆದರೆ ಹೆಣ್ಣು-ಗಂಡಿನ ಕಾಮ ಪ್ರೇಮ ಮತ್ತು ನಿಯೋಗದಂಥ ಸುಡು ವಾಸ್ತವವನ್ನು ಪೆರುಮಾಳ್, ಕಾದಂಬರಿಯೊಳಗೆ ಅಲ್ಲಲ್ಲಿ ಸಿನಿಮೀಯವಾಗಿ ನಿರೂಪಿಸುತ್ತಾರೆ. ಏನೇ ಆಗಲಿ ನ್ಯಾಯಾಲಯ ಈ ಕಾದಂಬರಿಯ ಮೂಲಕ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT