ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಂಡ ನಾಟಕಕಾರ ಶ್ರೀರಂಗರು ‘ಆಂ! ಯಾರದಪ್ಪಾ ಈ ಮುಖಾ?!’ ಎಂದು ನಕ್ಕು, ಆ 15ರ ಬಾಲಕನನ್ನು ಪ್ರಶಂಸಿಸುತ್ತಲೇ ರಂಗದೆಡೆ ನಡೆದರಂತೆ. ನಾಟಕ ಮುಗಿದ ಮೇಲೆ ಗ್ರೀನ್ ರೂಮಿಗೆ ಬಂದ ಶಬ್ದ ಗಾರುಡಿಗ ಬೇಂದ್ರೆ, ‘ಸಾಮಾನ್ಯ ಅಲ್ಲಲೇ... ನೀ ಮಹಾ! ಲೇ ಹುಡಗಾ...’ ಎಂದು ಆ ಹುಡುಗನ ಬೆನ್ನು ತಟ್ಟಿದರಂತೆ.
ವರಕವಿಯಿಂದ ಬೆನ್ನು ತಟ್ಟಿಸಿಕೊಂಡ ಆ ಹುಡುಗನೇ ನಿಜಕ್ಕೂ ‘ಮಹಾ ಪ್ರಸಾಧನಕಾರ’ನಾಗಿ ಬೆಳೆದ ಗಜಾನನ ಮಹಾಲೆ. ನಂತರದ ಎಪ್ಪತ್ತು ವರ್ಷಗಳಲ್ಲಿ ಅವರು ‘ಸೃಷ್ಟಿಸಿದ’ ಮುಖಗಳವೆಷ್ಟೋ. ಹಿರಿಯ ಗಾಯಕ ಬಸವರಾಜ ರಾಜಗುರುಗಳನ್ನು ಒಬ್ಬ ಸುಂದರ ‘ರಾಜಪುರುಷ’ನನ್ನಾಗಿ ರೂಪಿಸಿ ನಿಲ್ಲಿಸಿದ್ದು ; ಬಿಳಿ ನಾರಿನಿಂದ ವಿಗ್ ತಯಾರಿಸಿ ಒಬ್ಬ ಪ್ರೊಫೆಸರರನ್ನು ಬ್ರಿಟಿಶ್ ಆಫೀಸರ್ ಆಗಿ ಮಾರ್ಪಡಿಸಿದ್ದು; ಗೋವಾ ವಿಮೋಚನಾ ಚಳವಳಿಯ ಒಬ್ಬ ಮುಖಂಡನಿಗೆ ದಿನವೂ ಒಂದೊಂದು ರೀತಿ ಮೇಕಪ್ ಮಾಡಿ, ತಾವೂ ವೇಷ ಬದಲಿಸಿಕೊಂಡು ‘ಎಡಗೈಲಿ ಜೀವ ಹಿಡಿದು’ ತಿರುಗಾಡಿದ್ದು... ಒಂದೇ ಎರಡೇ. ಗಜಾನನ ಮಹಾಲೆ ಅವರ ಒಂದೊಂದು ಅನುಭವವೂ ರೋಚಕ.
ಕಳೆದೈದು ದಶಕಗಳಲ್ಲಿ ಮುಂಬಯಿ ಕರ್ನಾಟಕದ ಹವ್ಯಾಸಿ ರಂಗಭೂಮಿಯ ಚೇತನವಾಗಿ ನಿಂತವರು ಮಹಾಲೆ. ಪ್ರಸಾಧನ ಕ್ಷೇತ್ರದಲ್ಲಿ ಏಕಲವ್ಯ ಸಾಧನೆ ಮಾಡುತ್ತಲೇ ಬೆಳೆದ ಅವರು, ಗುರುದಕ್ಷಿಣೆಯಾಗಿ ಬಲಗೈ ಹೆಬ್ಬೆರಳನ್ನು ನೀಡಲಿಲ್ಲ; ತಮ್ಮನ್ನೇ ತಾವು ‘ಬಡತನದ ಭೂತ’ಕ್ಕೆ ಅರ್ಪಿಸಿಕೊಂಡರು. ಕೊನೆಯವರೆಗೂ ‘ಕರೆದಲ್ಲಿಗೆ ಬರುವ ವಿನಯಶೀಲ’ನಾಗಿ, ಹವ್ಯಾಸಿ ತಂಡಗಳ ಗೆಳೆಯನಾಗಿ, ಎಳೆಯರನ್ನು ಹುರಿದುಂಬಿಸುವ ಹಿರಿಯನಾಗಿ ನಿಂತರು.
ಸತ್ಯಾಗ್ರಹಕ್ಕೆ ಹೆಸರಾದ ಅಂಕೋಲಾದವರು ಗಜಾನನ ಮಹಾಲೆ. ಹುಟ್ಟಿದ್ದು 1932ರಲ್ಲಿ ಎಂಬುದನ್ನು ಬಿಟ್ಟರೆ ಅವರಿಗೆ ಹುಟ್ಟಿದ ತಿಥಿ, ವಾರ, ನಕ್ಷತ್ರ, ದಿನ, ತಿಂಗಳು ಇದ್ಯಾವುದೂ ಗೊತ್ತಿರಲಿಲ್ಲ. ಕನಸುಗಳು ಚಿಗುರುವ ವಯಸ್ಸಿಗೆ (ನಲವತ್ತರ ದಶಕದಲ್ಲಿ) ವಿದ್ಯಾನಗರಿ ಧಾರವಾಡಕ್ಕೆ ವಲಸೆ ಬಂದರು. ಮನೆಮಾತು ಕೊಂಕಣಿ. ಕ್ಷೌರಿಕ ವೃತ್ತಿ ಅವರ ಕುಲಕಸುಬು. ಅಜ್ಜ, ಅಪ್ಪ, ಚಿಕ್ಕಪ್ಪ ಮೇಕಪ್ ಕಲೆಯಲ್ಲಿ ಸಿದ್ಧಹಸ್ತರು. ಪಲ್ಪ್ ಮತ್ತು ಮಣ್ಣುಗಳಿಂದ ಗಣಪತಿ, ಶಾರದಾ ಇತ್ಯಾದಿಗಳನ್ನು ತಯಾರಿಸುತ್ತಿದ್ದ ಮೂರ್ತಿಕಾರರು. ಗರುಡ ಸದಾಶಿವರಾಯರ ನಾಟಕ ಮಂಡಳಿಯಲ್ಲಿದ್ದವರು ದೊಡ್ಡಪ್ಪ ನಾಗಪ್ಪ ಮಹಾಲೆ.
ಅಪ್ಪ ಹರಿಕೃಷ್ಣ ಮಹಾಲೆ ನಾಟಕಗಳಿಗೆ ಮೇಕಪ್ ಅಲ್ಲದೆ ತಬಲಾ ಸಾಥಿಯನ್ನೂ ನೀಡುತ್ತಿದ್ದರು. ಸಂಗೀತದಲ್ಲೂ ಒಳ್ಳೆಯ ಗತಿಯಿದ್ದ ಅವರು ಪಾತ್ರಗಳನ್ನೂ ವಹಿಸುತ್ತಿದ್ದರು. ಚಿಕ್ಕಪ್ಪನೊಂದಿಗೆ ಕೆಲ ಕಾಲ ಮುಂಬಯಿಗೆ ಹೋಗಿದ್ದ ಗಜಾನನ ಚಿತ್ರಕಲೆಯನ್ನೂ ಸಾಧಿಸಿಕೊಂಡರು. ಆಗಲೇ ಅವರೊಮ್ಮೆ ನಟ ಗುರುದತ್ ಅವರಿಗೆ ಹಾರ್ಮೋನಿಯಂ ಸಾಥ್ ನೀಡಿ ‘ವಾಹವ್ವಾ’ ಅನ್ನಿಸಿಕೊಂಡದ್ದು. ಪಲ್ಪಿನಿಂದ ಕಿರೀಟ, ಮುಖವಾಡ ಮತ್ತು ಶಿರೋಭೂಷಣಗಳು, ನಾರಿನಿಂದ ವಿಗ್, ಕಾಗದದಿಂದ ಹೂವು-ಗಿಡಮರಗಳ ಪ್ರತಿಕೃತಿ ಇತ್ಯಾದಿಗಳೆಲ್ಲ ಮಹಾಲೆ ‘ನೋಡಿ ತಿಳಿ’ದು, ‘ಮಾಡಿ ಕಲಿ’ತ ಕಲೆಗಳು.
ಮೊದಲೆಲ್ಲ ಧಾರವಾಡದ ಕರ್ನಾಟಕ ಕಾಲೇಜಿನ ಪ್ರಿನ್ಸಿಪಾಲರು, ಪ್ರೊಫೆಸರುಗಳೆಲ್ಲ ಗಜಾನನ ಅವರ ತಂದೆಯನ್ನು ಕ್ಷೌರಕ್ಕೆ ಮನೆಗೇ ಕರೆಯುತ್ತಿದ್ದರು. ಆಗೆಲ್ಲ ಜತೆಯಲ್ಲೇ ಇರುತ್ತಿದ್ದ ಗಜಾನನನ ಬಹುಮುಖ ಪ್ರತಿಭೆಯ ಪರಿಚಯ ಅವರಿಗಾಯಿತು. ಆಮೇಲೆ, ಕಾಲೇಜಿನಲ್ಲಿ ಏನೇ ಕಾರ್ಯಕ್ರಮ ಇದ್ದರೂ ಗಜಾನನ ಮಹಾಲೆಯೇ ಹೋಗಬೇಕು. ಹೀಗೆ, ಅಪ್ಪ-ಅಜ್ಜನ ಹಾದಿಯಲ್ಲೇ ನಡೆಯತೊಡಗಿದ ಗಜಾನನ ಇಪ್ಪತ್ತೈದನೆಯ ವಯಸ್ಸಿಗಾಗಲೇ ಸ್ವತಂತ್ರವಾಗಿ ದುಡಿಯಲಾರಂಭಿಸಿದರು. ಕ್ರಮೇಣ ಧಾರವಾಡದ ವಿಲಾಸಿ ರಂಗಭೂಮಿಗೂ ಅವರು ಅನಿವಾರ್ಯವೆನಿಸಿದರು.
ಎಪ್ಪತ್ತರ ದಶಕದ ಆರಂಭಿಕ ವರ್ಷಗಳಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ಬೀಸಿದ ‘ಕಾರಂತ ಗಾಳಿ’ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರಗಳಲ್ಲಿ ಹೊಸ ಪೀಳಿಗೆಯವರನ್ನು ಸೆಳೆಯಿತು. ಆಗ ಶುರುವಾದವು ಹೊಸ ಹೊಸ ನಾಟಕ ಪ್ರಯೋಗಗಳು. ಹವ್ಯಾಸಿ ತಂಡಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡಿತು. ಎನ್‌ಎಸ್‌ಡಿ ಪದವೀಧರ ನಿರ್ದೇಶಕರ ಪ್ರಯೋಗಶೀಲತೆಗೆ ಈ ಮೂರೂ ನಗರಗಳು ಭೂಮಿಕೆಯೊದಗಿಸಿದವು.
ಗಜಾನನ ಹೊಸ ರಂಗಭೂಮಿಯ ನಿರ್ದೇಶಕರ ಬೇಕು-ಬೇಡಗಳನ್ನು ಅರಿತು ಕೆಲಸ ಮಾಡತೊಡಗಿದ್ದು ಆಗಲೇ. ಅದಕ್ಕೂ ಮುನ್ನ ‘ಮೇಕಪ್ ಎಂದರೆ ಮುಖಕ್ಕಷ್ಟು ಬಣ್ಣ ಬಳಿಯುವುದು’ ಎಂದಷ್ಟೇ ಭಾವಿಸಿಕೊಂಡಿದ್ದ ನಾಟಕದ ಜನಕ್ಕೆ, ಅದು ಹಾಗಲ್ಲ, ಅದೂ ಒಂದು ಶಾಸ್ತ್ರ, ಅದಕ್ಕೆ ವಿಶೇಷ ಪರಿಣತಿ ಬೇಕಾಗುತ್ತದೆ ಎಂಬುದು ಅರಿವಿಗೆ ಬರತೊಡಗಿತು. ನಾಟಕವೊಂದರ ಆಯಾ ಪಾತ್ರಗಳು, ಅವುಗಳ ಸ್ವಭಾವ, ಅವುಗಳ ದಿರಿಸು, ರಂಗಸಜ್ಜಿಕೆ, ಪ್ರಕಾಶ, ಸಂಯೋಜನೆ ಇತ್ಯಾದಿ ಎಲ್ಲವನ್ನೂ ಒಬ್ಬ ಮೇಕಪ್ ಆರ್ಟಿಸ್ಟ್ ಅಥವಾ ಪ್ರಸಾಧನಕಾರ ಅರಿತುಕೊಳ್ಳಬೇಕಾದದ್ದು ಮುಖ್ಯ ಎಂಬುದು ಗಜಾನನ ಮಹಾಲೆಗೆ ಮನದಟ್ಟಾಯಿತು.
ತಮ್ಮನ್ನು ತಾವು ಕಾಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಲು ಮಹಾಲೆ ಮನಸ್ಸು ಮಾಡಿದರು. ಪ್ರತಿ ನಾಟಕದ ತಾಲೀಮನ್ನೂ ಸೂಕ್ಷ್ಮವಾಗಿ ಅವಲೋಕಿಸತೊಡಗಿದರು. ಹಿಂದಿ, ಮರಾಠಿ ನಾಟಕಗಳು ಬಂದಾಗ ಆ ಪ್ರಸಾಧನ ಕ್ರಮವನ್ನು ಗಮನಿಸಿದರು. ಹಳೆ ಪದ್ಧತಿಯ ಪ್ರಸಾಧನ ಸಾಮಗ್ರಿಗಳನ್ನು ಬಿಟ್ಟುಕೊಟ್ಟರು. ಆಧುನಿಕ ಸಾಮಗ್ರಿಗಳ ಬಳಕೆ ಶುರುಮಾಡಿದರು.
ಬೆಂಗಳೂರಿನ ರಂಗಭೂಮಿಗೆ ಗ್ರೀನ್ ರೂಂ ನಾಣಿ ಅವರು ಹೇಗೋ ಹಾಗೆ ಹುಬ್ಬಳ್ಳಿ-ಧಾರವಾಡ-ಗದಗ-ಬೆಳಗಾವಿಗಳ ಹವ್ಯಾಸಿಗಳಿಗೆ ಈ ಮಹಾಲೆ. ಸಕಲ ಕಲಾ ಪರಿಣತನಾದ್ದರಿಂದ ಮಹಾಲೆ ಹುಬ್ಬಳ್ಳಿ- ಧಾರವಾಡದ ಹವ್ಯಾಸಿ ನಾಟಕ ತಂಡಗಳವರಿಗೆ ‘ಪ್ರಥಮ ವಂದಿತ ಗಣಪತಿ’ ಎನಿಸಿಬಿಟ್ಟದ್ದು ಆಗಲೇ. ಅಷ್ಟಲ್ಲದೇ ‘ಈ ಗಜಾನನ ನಮಗೆ ಬಣ್ಣಕ್ಕೆ ಬೇಕು. ಬಣ್ಣ ಹಚ್ಚಿಸಿಕೊಂಡ ಮೇಲೆ ಈತನ ಶುಭ ಹಾರೈಕೆ ಬೇಕು. ಸಂಗೀತ-ಹಾಡುಗಳ ಹಾರ್ಮೋನಿಯಂ ಸಾಥಿಗೆ ಬೇಕು. ನಾಟಕದ ಮುಖವಾಡ, ಪೇಟ, ಕಿರೀಟ, ವಿಗ್ ಇತ್ಯಾದಿ ಅವಶ್ಯಕತೆಯನ್ನು ಈತನೇ ಪೂರೈಸಬೇಕು. ಸ್ಟೇಜಿನ ಕೆಲಸದ ಬೇಸರ ಕಳೆಯಲು ಈತನ ಹಾಡು ಬೇಕು. ಪ್ರಯೋಗದ ಓರೆ-ಕೋರೆಗಳನ್ನು ಅರಿತುಕೊಳ್ಳಲು ಸಹ ಬೇಕು. ಪರವೂರಿಗೆ ಹೋಗಿ ನಾಟಕ ಮುಗಿಸಿ ಮರಳುವಾಗ ದಾರಿಯುದ್ದಕ್ಕೂ ನಮಗೆ ಈತನ ಅನುಭವದ ಮಾತು ಬೇಕು, ಯಾರಿಗಾದರೂ ಸಣ್ಣಪುಟ್ಟ ಗಾಯಗಳಾದರೆ ಈತನೇ ಔಷಧಿ ಮಾಡಬೇಕು...’
ಇಂಥ ಅನಿವಾರ್ಯಕ್ಕೆ ಕಾರಣವಾದವರು ಗಜಾನನ ಮಹಾಲೆ. ಕಳೆದ ಅರವತ್ತು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ರಂಗಪ್ರಯೋಗಗಳಿಗೆ ಪ್ರಸಾಧನವೂ ಸೇರಿದಂತೆ ಇನ್ನುಳಿದ ಕೆಲಸ ಮಾಡಿದರೂ, ಇಂತಿಷ್ಟು ಹಣ ಕೊಡಬೇಕೆಂದು ಯಾವತ್ತೂ ಯಾರನ್ನೂ ಬಾಯಿಬಿಟ್ಟು ಕೇಳದೇ, ಕೊಟ್ಟಷ್ಟಕ್ಕೇ ತೃಪ್ತಿಪಟ್ಟ ಶುದ್ಧ-ಸಿದ್ಧಹಸ್ತ. ನಗುಮುಖದ, ನಯ ನಾಜೂಕು ಮಾತಿನ ಗಜಾನನ ನಾಟಕೀಯ ವ್ಯವಹಾರಗಳಿಲ್ಲದ ನಿಗರ್ವಿ. ಮಣ್ಣಿನ ಮೂರ್ತಿಗಳನ್ನು ಮಾಡಿ ಮಾತಾಡಿಸಬಲ್ಲವರಾಗಿದ್ದ ಮಹಾಲೆ, ಗಣಪತಿ ಹಬ್ಬ ಬಂದರೆ ಹುಡುಗರಿಗಿಂತ ಹುಡುಗರಾಗಿ ಕೈ ಕೆಸರು ಮಾಡಿಕೊಳ್ಳುತ್ತಿದ್ದರು. ಅವರಿಗೆ ಕೈ ಕೆಸರು ಮಾಡಿಕೊಳ್ಳುವುದಷ್ಟೇ ಗೊತ್ತಿತ್ತು; ‘ಮೊಸರಿನ ಆಸೆ’ ಎಂದಿಗೂ ಬರಲಿಲ್ಲ.
ತಮ್ಮ ವೃತ್ತಿ ಬದುಕಿನಲ್ಲಿ ಎಷ್ಟೆಲ್ಲ ದೊಡ್ಡ ವ್ಯಕ್ತಿಗಳ ಸಂಪರ್ಕ ಬಂದಿದ್ದರೂ ಯಾವತ್ತೂ ಸ್ವಂತದ ಕೆಲಸಕ್ಕೆ ಅವರೆದುರು ಹೋಗಿ ಹಲ್ಲುಗಿಂಜಲಿಲ್ಲ. 1987ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಬರುವ ತನಕ ಒಂದು ಸಾವಿರಕ್ಕೂ ಹೆಚ್ಚಿನ ಹಣವನ್ನು ಒಮ್ಮೆಲೇ ಕಂಡವರಲ್ಲ. ಇಂಥ ಗಜಾನನರಿಗೆ ಅಂಥದ್ದೇ ಸ್ವಭಾವದ ಸಂಗಾತಿಯಾಗಿ ಬಂದವರು ಜಯಾ. ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು...’ ಎಂಬ ಹಾಡಿನ ಮೂರ್ತಿರೂಪ ಆಕೆ. ಕಳೆದ ವರ್ಷ ಆಕೆ ಕಣ್ಣು ಮುಚ್ಚಿದಾಗ ಸ್ವಲ್ಪ ಹಣ್ಣಾದ ಮಹಾಲೆ ಮತ್ತೆ ಮೇಕಪ್ ಕಿಟ್ ಹೊತ್ತು ತಮ್ಮ ವೃತ್ತಿಯನ್ನು ಮುಂದುವರಿಸಿ, ದುಃಖವನ್ನು ಮರೆತರು.
ಅವರ ದಣಿವರಿಯದ ಸೇವೆಗೆ ಸಂದ ಪ್ರಶಸ್ತಿಗಳು: ಪ್ರಸಾಧನಕ್ಕಾಗಿ ಆಂಧ್ರ ಪ್ರದೇಶದ ‘ಅತ್ಯುನ್ನತ ಪ್ರಶಸ್ತಿ’ (2004-05), ಮುಂಬಯಿ ‘ಕನ್ನಡ ಸಂಘದ ಪ್ರಶಸ್ತಿ’, ಬೆಂಗಳೂರಿನ ‘ಅಂತರಂಗ’ ತಂಡದ ‘ನಾಣಿ ಪ್ರಶಸ್ತಿ’ ಹಾಗೂ 2013-14ರ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ. ತಮ್ಮ ಎಂಬತ್ತನಾಲ್ಕನೆಯ ವಯಸ್ಸಿನಲ್ಲಿಯೂ ಯಾರಿಗೋ ಸಂಗೀತದ ಸಾಥಿ ನೀಡಲೆಂದೋ, ಇನ್ನಾರದೋ ಮಗುವಿಗೆ ಮೋಜಿನ ವೇಷದ ಮೇಕಪ್ಪಿಗೆಂದೋ ಅಥವಾ ಇನ್ನಾವುದೋ ತಂಡದ ನಾಟಕ ಕಲಾವಿದರ ಪ್ರಸಾಧನಕ್ಕೆಂದೋ ಸೈಕಲ್ ಏರಿ ಸಾಗುತ್ತಿದ್ದ ಮಹಾಲೆ ಇನ್ನು ನೆನಪು ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.