ADVERTISEMENT

ಸಮಸ್ಯೆಗೆ ವಿಭಜನೆಯೊಂದೇ ಪರಿಹಾರವೆ?

ಶರತ್ ಅನಂತಮೂರ್ತಿ
Published 24 ಜುಲೈ 2015, 20:03 IST
Last Updated 24 ಜುಲೈ 2015, 20:03 IST

ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರಾಗಿ ವಿಭಜಿಸುವ ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ಸಿಕ್ಕಿದೆ. ಈ ವಿಶ್ವ ವಿದ್ಯಾಲಯದ ಅಡಿಯಲ್ಲಿ ಬರುವ ‘ಭಾರೀ ಸಂಖ್ಯೆ’ಯ ಕಾಲೇಜುಗಳನ್ನು (ಸುಮಾರು 610) ‘ದಕ್ಷತೆಯಿಂದ’ ನಿರ್ವಹಿಸುವ ನೆಪ ಈ ವಿಭಜನೆಗೆ ಇದೆ. ಸಮಿತಿಯೊಂದರ ವರದಿಯನ್ವಯ ನಡೆಸಲಾಗುತ್ತಿರುವ ಈ ವಿಭಜನೆಯಂತೆ ಬೆಂಗಳೂರಿನ ಉತ್ತರ ಭಾಗ ಮತ್ತು ಕೋಲಾರದಂಥ ಸಮೀಪದ ಜಿಲ್ಲೆಗಳ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಬೆಂಗಳೂರು–ಉತ್ತರ ವಿಶ್ವವಿದ್ಯಾಲಯ ನಿರ್ವಹಿಸುತ್ತದೆ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಗರದೊಳಗಿರುವ ಕಾಲೇಜುಗಳ ಮಾನ್ಯತೆಯ ಹೊಣೆ ಹೊರುತ್ತದೆ. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಬಹುತೇಕ ಜ್ಞಾನ ಭಾರತಿ ಆವರಣಕ್ಕೆ ಸೀಮಿತಗೊಂಡು ಸ್ನಾತಕೋತ್ತರ ತರಗತಿಗಳನ್ನು ನಡೆಸಲಿದೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು ವಿಶ್ವವಿದ್ಯಾ ಲಯದ ಮೂಲ ಕ್ಯಾಂಪಸ್ ಆಗಿದ್ದ ಸೆಂಟ್ರಲ್ ಕಾಲೇಜು ಬೆಂಗಳೂರು–ಕೇಂದ್ರ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯಾಲಯವಾಗಲಿದೆ.

ಇತ್ತೀಚೆಗೆ ‘ಪ್ರಜಾವಾಣಿ’ ಚಾಲನೆ ನೀಡಿದ ಸಂವಾದ ದಲ್ಲಿ (ಅಂತರಾಳ, ಜುಲೈ11) ಬೆಂಗಳೂರು ವಿಶ್ವವಿದ್ಯಾ ಲಯದಲ್ಲಿ ಸೇವೆ ಸಲ್ಲಿಸಿದ ಹಲವು ಶಿಕ್ಷಕರು ಮತ್ತು ಕುಲಪತಿ ಗಳು ವಿಶ್ವವಿದ್ಯಾಲಯವನ್ನು ಮೂರಾಗಿ ವಿಭಜಿಸುವುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಹಲವರು ಈಗ ಲಭ್ಯವಿರುವ ತಾಂತ್ರಿಕ ಸವಲತ್ತುಗಳನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯಲ್ಲಿರುವ ಕಾಲೇಜುಗಳ ಮಾನ್ಯತೆಯನ್ನು ನಿರ್ವಹಿಸುವ ಉಪಾಯವನ್ನು ಸೂಚಿಸುವ ಮೂಲಕ ವಿಶ್ವವಿದ್ಯಾಲಯದ ಈಗಿನ ಸ್ವರೂಪವನ್ನು ಕಾಪಾ ಡಿಕೊಳ್ಳುವ ಅಗತ್ಯದ ಪರವಾಗಿ ತಮ್ಮ ವಾದ ಮಂಡಿಸಿ ದ್ದಾರೆ. ಇವರೆಲ್ಲರೂ ಭಾರೀ ಸಂಖ್ಯೆಯ ಕಾಲೇಜುಗಳನ್ನು ತಾಂತ್ರಿಕ ಸವಲತ್ತುಗಳ ಮೂಲಕ ನಿರ್ವಹಿಸುತ್ತಿರುವ ವಿಶ್ವೇ ಶ್ವರಯ್ಯ ತಾಂತ್ರಿಕ ವಿ.ವಿ  (ವಿಟಿಯು) ಮಾದರಿಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಇದೇ ವೇಳೆ ಒಬ್ಬರು ನಿವೃತ್ತ ಶಿಕ್ಷಕರು ಬೆಂಗಳೂರು ವಿ.ವಿಯನ್ನು ಬಾಧಿಸಿರುವ ಹಲವು ರೋಗಗಳನ್ನು ಪಟ್ಟಿ ಮಾಡಿ ಇವೆಲ್ಲವುಗಳ ನಿವಾ ರಣೆಗೆ ವಿಶ್ವವಿದ್ಯಾಲಯದ ವಿಭಜನೆಯೇ ಮದ್ದು ಎಂದಿ ದ್ದಾರೆ. ಇದರಿಂದ ವಿ.ವಿಯಲ್ಲಿರುವ ಕೊಳಕೆಲ್ಲಾ ಶುದ್ಧವಾಗಿ ಅಗತ್ಯವಿರುವ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ಅವರ ಭರವಸೆಯೆಂಬಂತೆ ಕಾಣಿಸುತ್ತದೆ.

ವಿಭಜನಾ ಪ್ರಕ್ರಿಯೆಯನ್ನು ನೋಡಿದರೆ ಕರ್ನಾಟಕದ ಅತಿ ಹಳೆಯ ವಿಶ್ವವಿದ್ಯಾಲಯವೊಂದರ ಪ್ರಮುಖ ಪಾಲು ದಾರರಾಗಿರುವ ಶಿಕ್ಷಕರು, ಇತರೆ ಸಿಬ್ಬಂದಿ ಮತ್ತು ವಿದ್ಯಾರ್ಥಿ ಗಳ ಅಭಿಪ್ರಾಯದ ಬಗ್ಗೆಯೇ ಸರ್ಕಾರಕ್ಕೆ ತಿರಸ್ಕಾರವಿ ರುವಂತೆ ಕಾಣಿಸುತ್ತದೆ. ಅಷ್ಟೇ ಅಲ್ಲ, ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಉನ್ನತ ಶಿಕ್ಷಣಕ್ಕೆ ಇರುವ ಸ್ಥಾನವನ್ನೂ ಇದು ಸೂಚಿಸುತ್ತಿದೆ. ಇದು ಇಡೀ ಶಿಕ್ಷಕವೃಂದದಲ್ಲಿ ಒಂದು ಬಗೆಯ ಅಸಹಾಯಕತೆ ಮನೆ ಮಾಡಲು ಕಾರಣವಾಗಿದೆ ಎಂದು ವಿಶ್ವವಿದ್ಯಾಲಯದ ಶಿಕ್ಷಕವೃಂದದ ಸದಸ್ಯನಾದ ನನ್ನ ಭಾವನೆಯೂ ಆಗಿದೆ. ಈ ಭಾವನೆ ಕೇವಲ ನಮ್ಮದಷ್ಟೇ ಅಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಹೊರಗಿರುವ ಶಿಕ್ಷಕ ಸಮುದಾಯವೂ ಇದನ್ನೇ ಅನುಭವಿಸುತ್ತಿದೆ.

‘ತಜ್ಞರ ಸಮಿತಿ’ಯೊಂದು ದೊಡ್ಡ ಸಂಖ್ಯೆಯ ಕಾಲೇಜು ಗಳ ಮಾನ್ಯತೆಯನ್ನು ನಿರ್ವಹಿಸುವುದು ಆಡಳಿತಾತ್ಮಕ ಹೊರೆ ಎಂಬ ಏಕೈಕ ತೀರ್ಮಾನಕ್ಕೆ ಬಂದು ಅದಕ್ಕೆ ಪರಿಹಾರವಾಗಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಶ್ವವಿದ್ಯಾ ಲಯಗ ಳನ್ನು ಸ್ಥಾಪಿಸಿ ಅವುಗಳಿಗೆ ಕಾಲೇಜುಗಳನ್ನು ಪ್ರದೇಶವಾರು ಹಂಚಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳುತ್ತದೆ. ಈಗ ಇರುವ ವಿಶ್ವವಿದ್ಯಾಲಯದಲ್ಲಿ ಪ್ರಾಮಾಣಿಕ ಮತ್ತು ದಕ್ಷ ಕೆಲಸಗಾರರಿದ್ದು ಅವರು ಪರೀಕ್ಷಾ ಫಲಿತಾಂಶಗಳೂ ಸೇರಿದಂತೆ ಇತರ ಆಡಳಿತಾತ್ಮಕ ವಿಚಾರಗಳನ್ನು ನಿರ್ವಹಿಸು ವಲ್ಲಿ ವಿಫಲರಾಗಿದ್ದರೆ ಆಗ ಈ ವಾದಕ್ಕೆ ಮನ್ನಣೆಯಿತ್ತು. ಹಾಗೆಯೇ ಡಿಜಿಟಲ್ ಯುಗಕ್ಕೆ ಮುನ್ನ ವಿಶ್ವವಿದ್ಯಾಲಯವನ್ನು ಆಡಳಿತಾತ್ಮಕ ಕಾರಣಗಳಿಗಾಗಿ ವಿಭಜಿಸುವ ಉಪಾಯವನ್ನು ಒಪ್ಪಿಕೊಳ್ಳಬಹುದಿತ್ತು.

ಒಂದು ಸಾವಿರಕ್ಕೂ ಹೆಚ್ಚು ಕಾಲೇಜುಗಳ ಮಾನ್ಯತೆಯನ್ನು ನಿರ್ವಹಿಸುತ್ತಿರುವ ವಿಟಿಯು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ಸರಿಯಾಗಿ

ನಡೆಸುತ್ತಿರುವ ಉದಾಹರಣೆ ನಮ್ಮ ಕಣ್ಣ ಮುಂದೇ ಇದೆ. ಇದಕ್ಕೆ ಕಾರಣವಾದದ್ದು ಅದು ಅಳವಡಿಸಿಕೊಂಡಿರುವ ತಂತ್ರಜ್ಞಾನದ ಸವಲತ್ತುಗಳು. ಕೆಲವೇ ವರ್ಷಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯವೂ ಇದೇ ಬಗೆಯ ದಕ್ಷತೆಯನ್ನು ಪ್ರದರ್ಶಿಸಿತ್ತು. ಆಗಲೂ ಬಳಕೆಯಾದದ್ದು ಡಿಜಿಟಲ್ ತಂತ್ರಜ್ಞಾನವೇ. ಆದರೆ ಇದರ ಅನುಷ್ಠಾನಕ್ಕೆ ಬೆಂಗಳೂರು ವಿ.ವಿ  ಹೊರಗುತ್ತಿಗೆ ತಂತ್ರವನ್ನು ಅನುಸರಿಸಿತ್ತೇ ಹೊರತು ತನ್ನದೇ ನೌಕರರನ್ನು ಹೊಸ ಕಾಲದ ನಿರ್ವಹಣಾ ಮಾದರಿಯನ್ನು ಅಳವಡಿ ಸಿಕೊಳ್ಳಲು ಪ್ರೇರೇಪಿಸಿರಲಿಲ್ಲ. ಪರಿಣಾಮವಾಗಿ ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿ ಇಡೀ ವ್ಯವಸ್ಥೆಯನ್ನು ಕೈಬಿಡಲಾಯಿತು. ಆಡಳಿತಾತ್ಮಕ ಸಮಸ್ಯೆಗಳಿಗಾಗಿ ವಿ.ವಿಯೊಂದನ್ನು ವಿಭಜಿಸುವುದು ಎಂದರೆ ದೇಹದಲ್ಲಿ ಹಲವಾರು ಅಂಗಗಳಿರುವುದರಿಂದ ಅವು ಗಳನ್ನು ನಿರ್ವಹಿಸುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ಅವುಗಳನ್ನೆಲ್ಲಾ ತುಂಡರಿಸಿ ಪ್ರತ್ಯೇಕಗೊಳಿಸಿ ಇಡಬೇಕು ಎಂದು ವಾದಿಸಿದಂತೆ ಆಗುತ್ತದೆ.

ವಿಶ್ವವಿದ್ಯಾಲಯದ ವಿಭಜನೆಗೆ ನೀಡಲಾಗುತ್ತಿರುವ ಮತ್ತೊಂದು ಮುಖ್ಯ ಕಾರಣ ಅಲ್ಲಿ ನಡೆಯುತ್ತಿರುವ ರಾಜ ಕೀಯ ಲಾಬಿ, ಗುಂಪುಗಾರಿಕೆ ಮತ್ತು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲದಿರುವುದು. ಇದನ್ನು ಒಪ್ಪುವುದಾದರೆ ಕರ್ನಾಟಕದಲ್ಲಿರುವ ಎಲ್ಲಾ, ಅಷ್ಟೇಕೆ ಭಾರತದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳನ್ನೂ ಸಣ್ಣ ಸಣ್ಣ ಕಣಗಳಾಗುವಂತೆ ಒಡೆಯಬೇಕು. ಸಣ್ಣದಾದಷ್ಟೂ ಕೇಡಿನ ಪ್ರಮಾಣ ಕಡಿಮೆಯಾಗುವುದಾದರೆ ಅತಿ ಸಣ್ಣ ಕಣವೇ ಒಳ್ಳೆಯದಲ್ಲವೇ? ವಿಶ್ವವಿದ್ಯಾಲಯಗಳನ್ನು ಬಾಧಿಸಿರುವ ಕೇಡಿನ ಮೂಲಕ್ಕೆ ಹೋಗಿ ಅಗತ್ಯ ಸುಧಾರಣೆಗಳೊಂದಿಗೆ ನಿವಾರಿಸದೇ ಹೋದರೆ ಈ ಸಣ್ಣ ಸಣ್ಣ ಕಣಗಳಲ್ಲಿಯೂ ಅದು ಮುಂದುವರಿಯುತ್ತದೆಯಲ್ಲವೇ? ಇಷ್ಟರ ಮೇಲೆ ವಿಭಜನೆ ಪ್ರಕ್ರಿಯೆಯ ಹಿಂದೆಯೇ ಸ್ಥಾಪಿತ ಹಿತಾಸಕ್ತಿಗಳಿಲ್ಲ ಎಂದು ಭಾವಿಸುವುದಾದರೂ ಹೇಗೆ? ವಿಶ್ವವಿದ್ಯಾಲಯ ವನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ವಿಭಜನೆಯೇ ಪರಿಹಾರ ಎಂಬುದನ್ನು ಸಾಬೀತು ಮಾಡುವುದಕ್ಕೆ ಬೇಕಿ ರುವ ವಿನಿಯೋಗ ಮತ್ತು ಪರಿಣಾಮದ ವಿಶ್ಲೇಷಣೆಯನ್ನು ಯಾರಾದರೂ ಮುಂದಿಟ್ಟಿದ್ದಾರೆಯೇ?

ವಿಶ್ವವಿದ್ಯಾಲಯಗಳು ಈಗ ಹೊಸ ಚಿಂತನೆಗಳನ್ನು ಹುಟ್ಟಿಸುವ, ಅವುಗಳನ್ನು ಬೆಳೆಸುವ ಮತ್ತು  ಪ್ರಯೋಗಿಸುವ ಸ್ಥಳಗಳಾಗಿ ಉಳಿದಿಲ್ಲ. ಇದು ನಿಜವೇ ಆದರೂ ಪ್ರಸ್ತುತ ಸಂದರ್ಭಕ್ಕೆ ಸೀಮಿತವಾಗಿ ಮತ್ತೊಂದು ಪ್ರಶ್ನೆಯನ್ನು ಕೇಳ ಬೇಕಾಗುತ್ತದೆ. ಈ ವಿಶ್ವವಿದ್ಯಾಲಯ ತನ್ನ ಮಿತಿಯೊಳಗೆ,  ಮಾಡಬೇಕಾಗಿರುವ ಎಲ್ಲವನ್ನೂ ಮಾಡುತ್ತಿಲ್ಲವೇ? ವಿ.ವಿಯ ಎಲ್ಲ ಕೋರ್ಸ್‌ಗಳಿಗೂ  ವಿದ್ಯಾರ್ಥಿಗಳಿದ್ದಾರೆ. ಭಿನ್ನ ಆರ್ಥಿಕ ಹಿನ್ನೆಲೆ, ಜಾತಿ ಮತ್ತು ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳನ್ನು ಇಲ್ಲಷ್ಟೇ ಕಾಣಲು ಸಾಧ್ಯ. ಇದೊಂದು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯವಾಗಿರುವುದರಿಂದ  ಶುಲ್ಕ ಮಿತಿಯಲ್ಲಿದೆ. ಕೆಲಸದಲ್ಲಿ ಶ್ರದ್ಧೆ  ಇರುವ ಶಿಕ್ಷಕರು ಇಲ್ಲಿದ್ದಾರೆ. ಆದರ್ಶ ಸ್ಥಿತಿಯೊಂದಕ್ಕೆ ಹೋಲಿಸಿದರೆ ಇವರ ಸಂಖ್ಯೆ ಸಣ್ಣದು. ಆದರೂ ವೈವಿಧ್ಯಮಯ ವಿದ್ಯಾರ್ಥಿ ಸಮುದಾಯವೊಂದಕ್ಕೆ ಜ್ಞಾನವನ್ನು ಹಂಚುವ ಮತ್ತು ಸಂಶೋಧನೆಗಳ ಜ್ಞಾನವನ್ನು ಸೃಷ್ಟಿಸುವ ಕೆಲಸ ಮಾಡು ತ್ತಿದ್ದಾರೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ.

ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಬೋಧನೆಯ ಮಿತಿಗಳು ಒಂದು ಅಖಿಲ ಭಾರತ ಮಟ್ಟದ ಪ್ರಶ್ನೆ.  ಇದನ್ನು ಮುಂದಿಟ್ಟುಕೊಂಡು ಬೆಂಗಳೂರು ವಿ.ವಿಯನ್ನು ತುಂಡರಿಸುವುದು ಸಮರ್ಥನೀಯವಲ್ಲ. ಇಲ್ಲಿನ ಶೈಕ್ಷಣಿಕ ವಿಭಾಗಗಳಲ್ಲಿ ತುಂಬಿಕೊಂಡಿರುವ ರಾಜ ಕಾರಣವನ್ನು  ‘ಅಂತರಾಳ’ದಲ್ಲಿನ ಲೇಖನವೇ ಚರ್ಚಿಸಿದೆ. ವಿದ್ವತ್ತಿನಿಂದ ಬಹಳ ದೂರವಿರುವ ಸ್ಥಾಪಿತ ಹಿತಾಸಕ್ತಿಗೆ ವಿಶ್ವವಿದ್ಯಾಲಯ ಬಲಿಯಾಗಿರುವ ದುರಂತವನ್ನೂ ಅದು ವಿವರಿಸಿದೆ. ಇದರಲ್ಲಿ ಸತ್ಯಾಂಶವೂ ಇದೆ. ಇದಕ್ಕಿಂತಲೂ ಸೂಕ್ಷ್ಮವಾಗಿರುವ ಮತ್ತೊಂದು ಸಂಗತಿ ಇದೆ. ವಿವಿಧ ರಾಜ ಕೀಯ ಚಿಂತನೆಗಳ ಪ್ರಯೋಗಶಾಲೆಯಾಗುವ ಮೂಲಕ ಸಾಮಾಜಿಕ ಚಳವಳಿಗಳ ಹುಟ್ಟಿಗೆ ಕಾರಣವಾಗಬೇಕಿದ್ದ ವಿಶ್ವ ವಿದ್ಯಾಲಯ ಅದರಿಂದ ಈಗ ಸಂಪೂರ್ಣ ದೂರವಾಗಿದೆ. ಇಷ್ಟೇ ಆಗಿದ್ದರೂ ಅದನ್ನು ಸಹಿಸಿಕೊಳ್ಳಬಹುದಿತ್ತೇನೋ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ರಾಜಕಾರಣ ದಲ್ಲಿ ಇರಬಹುದಾದ ಅವಕಾಶಗಳ ಮೇಲೆ ಕಣ್ಣಿಟ್ಟು ತಮ್ಮನ್ನು ತಾವು ಮೆರೆಯಿಸಿಕೊಳ್ಳುವ ಸಣ್ಣತನದ ರಾಜಕಾರಣಕ್ಕೆ ವಿಶ್ವವಿದ್ಯಾಲಯವನ್ನು ವೇದಿಕೆ ಮಾಡಿಕೊಳ್ಳ ಲಾಗಿದೆ. ಆದರೆ ಇದು ಬೆಂಗಳೂರು ವಿ.ವಿಗೆ ಸೀಮಿತವಾದ ಸಂಗತಿಯಲ್ಲ.

ವಿಶ್ವವಿದ್ಯಾಲಯ ಎಂಬುದು ಒಂದು ಅಮೂರ್ತ ಪರಿಕಲ್ಪನೆ. ಆದರೆ ಅಲ್ಲಿನ ಚಟುವಟಿಕೆಗಳು ಒಂದು ನಿರ್ದಿಷ್ಟ ಸ್ಥಳದಲ್ಲಿ ನಡೆಯುತ್ತವೆ. ಈ ಸ್ಥಳಗಳಿಗೆ ಅವುಗಳದ್ದೇ ಆದ ಮೌಲ್ಯವಿದೆ. ಹಾಗೆಯೇ ಇಲ್ಲಿ ಕೆಲಸ ಮಾಡಿದವರಿಗೆ ಮತ್ತು ಮಾಡುತ್ತಿರುವವರಿಗೆ ಸ್ಥಳದ ಜೊತೆಗೊಂದು ಭಾವನಾತ್ಮಕ ಸಂಬಂಧವಿರುತ್ತದೆ. ಸೆಂಟ್ರಲ್ ಕಾಲೇಜ್ ಕ್ಯಾಂಪಸ್‌ನಲ್ಲಿಯೇ ಬೆಂಗಳೂರು ವಿ.ವಿ ಮೊದಲು ಮೈದಳೆದದ್ದು. ಆಮೇಲೆ ಅದು ಜ್ಞಾನಭಾರತಿ ಕ್ಯಾಂಪಸ್‌ಗೆ ವಿಸ್ತರಿಸಿಕೊಂಡಿತು. ಆದ್ದರಿಂದಲೇ ಬೆಂಗಳೂರು ವಿ.ವಿ ಎಂಬ ಪರಿಕಲ್ಪನೆಗೇ ಸೆಂಟ್ರಲ್ ಕಾಲೇಜಿನ ಜೊತೆಗೊಂದು ಗಾಢ ಸಂಬಂಧವಿದೆ. ಎಪ್ಪತ್ತರ ದಶಕದಲ್ಲಿ ಇದು ಅನೇಕ ವಿದ್ಯಾರ್ಥಿ ಚಳವಳಿಗಳ ಕೇಂದ್ರವಾಗಿತ್ತು. ಸರ್ ಸಿ.ವಿ. ರಾಮನ್ ಅವರು ತಮ್ಮ ಪ್ರಸಿದ್ಧ ಸಂಶೋಧನೆ ‘ರಾಮನ್ ಪರಿಣಾಮ’ವನ್ನು ಅಂದಿನ ಸೌತ್ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರೆದುರು ವಿವರವಾಗಿ ಮಂಡಿಸಿದ್ದು ಇದೇ ಸೆಂಟ್ರಲ್ ಕಾಲೇಜಿನಲ್ಲಿ.

ವಿಶ್ವವಿದ್ಯಾಲಯದ ಭೌತಿಕ ಸ್ಥಳಗಳನ್ನು ಕೇವಲ ರಿಯಲ್ ಎಸ್ಟೇಟ್ ಹೊಂದಾಣಿಕೆಯಂತೆ ಗ್ರಹಿಸಿ ಮುಂದುವರಿ ಯುವುದೂ ವಿಶ್ವವಿದ್ಯಾಲಯವೆಂಬ ಮಹತ್ತಾದ ಪರಿಕಲ್ಪನೆ ಯನ್ನು ಕುಬ್ಜಗೊಳಿಸಿದಂತೆ. ಜಗತ್ತಿನ ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳು ಹಲವು ಕ್ಯಾಂಪಸ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಇವುಗಳನ್ನೆಲ್ಲಾ ಒಡೆದು ಪ್ರತ್ಯೇಕ ವಿಶ್ವವಿದ್ಯಾಲಯಗಳಾಗಿಸುವ ಸಾಧ್ಯತೆ ಅವರಿಗೆ ಹೊಳೆ ಯದ್ದೇನೂ ಅಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳ ಬೇಕು. ಬೆಂಗಳೂರು ವಿ.ವಿಯಿಂದ ಸೆಂಟ್ರಲ್ ಕಾಲೇಜನ್ನು ಬೇರ್ಪಡಿಸುವುದೆಂದರೆ ವಿಶ್ವವಿದ್ಯಾಲಯದ ಆತ್ಮವನ್ನು ಸಂಕೇತಿಸುವ ಕ್ಯಾಂಪಸ್ ಒಂದನ್ನು ಕಿತ್ತುಕೊಂಡಂತೆ.

ಮೇಲಿನ ಮಾತುಗಳ ಅರ್ಥ ಹೊಸ ವಿಶ್ವವಿದ್ಯಾಲಯ ಗಳನ್ನು ಸ್ಥಾಪಿಸಬಾರದು ಎಂದಲ್ಲ. ಒಟ್ಟು ಪ್ರವೇಶಾತಿಯ ಅನುಪಾತವನ್ನು (ಈಗ ಅದು ಶೇಕಡ 19ರಷ್ಟಿದೆ) ಹೆಚ್ಚಿಸುವ ಉದ್ದೇಶದಿಂದ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿಯ ತನಕ ಇದನ್ನು ಮಾಡಿದ್ದು ಹೇಗೆ ಎಂಬುದನ್ನೂ ಒಮ್ಮೆ ನೋಡಿಕೊಳ್ಳಬೇಕಲ್ಲವೇ? ಸಾಕಷ್ಟು ಸಿಬ್ಬಂದಿಯಿಲ್ಲದೆ, ಅರ್ಹ ಶಿಕ್ಷಕರಿಲ್ಲದೆ ವಿಶ್ವವಿದ್ಯಾಲ ಯಗಳನ್ನು ಸ್ಥಾಪಿಸುವುದರಿಂದ ಏನು ಪ್ರಯೋಜನ? ಹೊಸತಾಗಿ ಸ್ಥಾಪನೆಯಾಗಿರುವ ವಿಶ್ವವಿದ್ಯಾಲಯಗಳಲ್ಲಿ ಸುಮಾರು ಶೇ 80ರಷ್ಟು ಹುದ್ದೆಗಳು ಖಾಲಿ ಇವೆ. ಇಂಥ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕೇ ಹೊರತು ಇರುವ ವಿಶ್ವವಿದ್ಯಾಲಯಗಳನ್ನು ದುರ್ಬಲಗೊಳಿಸುವುದಲ್ಲ.

ಸರ್ಕಾರಕ್ಕೆ ನಿಜವಾಗಿಯೂ ವಿಶ್ವವಿದ್ಯಾಲಯಗಳ ಸ್ಥಿತಿ ಯನ್ನು ಸುಧಾರಿಸಬೇಕೇಂದಿದ್ದರೆ ಮೊದಲು ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರಾಗಿಸುವ ನಿರ್ಧಾರವನ್ನು ಕೈಬಿಡಬೇಕು. ಬದಲಿಗೆ ಈಗ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂಬುದರ ಕುರಿತು ಸಂವಾದವೊಂದಕ್ಕೆ ಚಾಲನೆ ನೀಡಿ, ಏನು ಬೇಕು, ಯಾವುದು ಬೇಡ ಎಂಬುದನ್ನು ಮುಕ್ತವಾಗಿ ಚರ್ಚಿಸಬೇಕು. ಒಂದು ವೇಳೆ ತಂತ್ರಜ್ಞಾನ, ದೊಡ್ಡ ಸಂಖ್ಯೆಯ ಕಾಲೇಜುಗಳ ಮಾನ್ಯತೆಯ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ ಎಂದಾದರೆ ಅದನ್ನು ಕಾರ್ಯರೂಪಕ್ಕೆ ತರಬೇಕು. ಇದೊಂದು ದಕ್ಷ ಮತ್ತು ಹೆಚ್ಚು ವೆಚ್ಚವನ್ನು ಬೇಡದ ಪರಿಹಾರವಾಗಿರುವುದನ್ನು ಖಾತರಿಪಡಿಸಿ ಕೊಳ್ಳಬೇಕು. ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಯಾಗಿರುವ ಬೆಂಗಳೂರಿನಿಂದಲೇ ಇದು ಕಾರ್ಯರೂಪಕ್ಕೆ ಬಂದರೆ ಉಳಿದವರಿಗೂ ಮಾದರಿಯಾಗುತ್ತದೆ.

ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯಲ್ಲಿ ಒಂದೇ ವಿಶ್ವವಿದ್ಯಾಲಯ ಇರಬೇಕಾಗಿಲ್ಲ. ಈಗ ಇರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಒಡೆಯುವ ಬದಲಿಗೆ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ಮಾದರಿಯಲ್ಲಿ ಮಾನವಿಕ ಮತ್ತು ಸಮಾಜ ವಿಜ್ಞಾನಗಳನ್ನು ಕೇಂದ್ರವಾಗಿಟ್ಟುಕೊಂಡು ಹೊಸತೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಬಹುದು. ಈ ಮೂಲಕ ಆ ಕ್ಷೇತ್ರಕ್ಕೆ ಅಗತ್ಯವಿರುವ ಜ್ಞಾನಸೃಷ್ಟಿ ಮತ್ತು ಪ್ರಸಾರದ ಕೆಲಸವನ್ನು ಮಾಡಬಹುದಲ್ಲವೇ?
ಈ ಎಲ್ಲದಕ್ಕಿಂತ ಮುಖ್ಯವಾಗಿ ದುರ್ಬಲ ಕೊಂಡಿಗಳನ್ನು  ಗುರುತಿಸಿ ಅವುಗಳನ್ನು ಸರಿಪಡಿಸುವ ಕ್ರಿಯೆ ಆರಂಭವಾಗಬೇಕು. 

ವಿ.ವಿ ಗಳನ್ನು ಸ್ಥಾಪಿತ ಹಿತಾಸಕ್ತಿಗಳಿಂದ ಮುಕ್ತಗೊಳಿಸಿ, ಶೈಕ್ಷಣಿಕ ಮತ್ತು ಆಡಳಿತಾತ್ಮತ ಸ್ವಾಯತ್ತತೆಯನ್ನು ಉಳಿಸಿಕೊಂಡು ಸಾರ್ವಜನಿಕರಿಗೆ ಹೇಗೆ ಉತ್ತರದಾಯಿಯಾಗಿರಬೇಕು ಎಂಬುದರ ಕುರಿತು ವ್ಯಾಪಕ ಚರ್ಚೆಯಾಗ ಬೇಕು. ಈಗ ವಿ.ವಿಗಳ ಉತ್ತರದಾಯಿತ್ವ ಎಂಬುದು ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಮಾತುಗಳನ್ನು ಕೇಳಿಕೊಂಡಿರುವುದು ಎಂಬಂತಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ತರಬೇಕಾದ ಸುಧಾರಣೆಗಳು ಮತ್ತು ಬದಲಾವಣೆಯ ವಿಷಯ ಬಂದಾಗ ಸರ್ಕಾರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಕರೆದು ಚರ್ಚಿಸುತ್ತದೆ. ವಿ.ವಿಗಳ ಸುಧಾ ರಣೆಯ ವಿಷಯದಲ್ಲಿ ವಿಶ್ವವಿದ್ಯಾಲಯಗಳ ಸಿಬ್ಬಂದಿ ಮತ್ತು ಶಿಕ್ಷಕರೊಂದಿಗೆ ಏಕೆ ಚರ್ಚಿಸಬಾರದು?

ಲೇಖಕ ಬೆಂಗಳೂರು ವಿಶ್ವವಿದ್ಯಾಲಯದ ಭೌತವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT