ADVERTISEMENT

ಹಣದ ಸ್ಥಾನ ಹಣಕ್ಕೆ, ಆಹಾರದ ಸ್ಥಾನ ಆಹಾರಕ್ಕೆ

ಶಾರದಾ ಗೋಪಾಲ, ಧಾರವಾಡ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಹಣದ ಸ್ಥಾನ ಹಣಕ್ಕೆ, ಆಹಾರದ ಸ್ಥಾನ ಆಹಾರಕ್ಕೆ
ಹಣದ ಸ್ಥಾನ ಹಣಕ್ಕೆ, ಆಹಾರದ ಸ್ಥಾನ ಆಹಾರಕ್ಕೆ   

ಬೆಲೆ ಏರಿಕೆಯ ಇಂದಿನ ದಿನಮಾನದಲ್ಲಿ ಬದುಕಲು ದಿನಕ್ಕೆ 600 ರೂಪಾಯಿ ಕನಿಷ್ಠ ವೇತನ ಬೇಕು ಎಂದು ವೇತನ ಆಯೋಗವು ಶಿಫಾರಸು ಮಾಡಿದೆ. ‘ಕನಿಷ್ಠ ವೇತನಕ್ಕಿಂತ ಕಡಿಮೆ ಕೂಲಿ ಕೊಡುವುದು ಜೀತಕ್ಕಿಟ್ಟುಕೊಳ್ಳುವುದಕ್ಕೆ ಸಮ’ ಎಂದು ಸುಪ್ರೀಂ ಕೋರ್ಟ್‌ ಮತ್ತೆ ಮತ್ತೆ ಹೇಳಿದೆ. ಉನ್ನತ ಸಂಸ್ಥೆಗಳ ಸಲಹೆ- ಶಿಫಾರಸುಗಳನ್ನು ಬದಿಗಿಟ್ಟು ಕೇಂದ್ರ ಸರ್ಕಾರವು ದೇಶದ ಅತ್ಯಂತ ಬಡ ರಾಜ್ಯಗಳೆನಿಸಿದ ರಾಜಸ್ಥಾನ, ಜಾರ್ಖಂಡ್‌, ಬಿಹಾರ ಮುಂತಾದ 10 ರಾಜ್ಯಗಳಲ್ಲಿ ಉದ್ಯೋಗ ಖಾತರಿಯ ಕೂಲಿಯನ್ನು ಇರುವಂತೆಯೇ ಇಟ್ಟಿದೆ. ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಕೂಲಿದರ ಇರುವ ರಾಜ್ಯಗಳಿವು. ಬಿಹಾರದಲ್ಲಂತೂ ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗ ಖಾತರಿಯ ಕೂಲಿ ಹೆಚ್ಚಳ ಆಗಿಯೇ ಇಲ್ಲ.

ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಮತ್ತು ಛತ್ತೀಸಗಡದಲ್ಲಿ ಕೂಲಿ ಕೇವಲ 2 ರೂಪಾಯಿ ಏರಿಕೆ ಆಗಿದ್ದರೆ, ತಮಿಳುನಾಡು, ಪುದುಚೇರಿಗಳಲ್ಲಿ ಮಾತ್ರ ಗರಿಷ್ಠ ₹ 19 ಏರಿಕೆ ಆಗಿದೆ. ದೇಶದ 28 ರಾಜ್ಯಗಳಲ್ಲಿ ಕನಿಷ್ಠ ವೇತನಕ್ಕಿಂತ ಕಡಿಮೆ ದಿನಗೂಲಿ ಪಡೆಯುವ ಉದ್ಯೋಗ ಖಾತರಿ ಕೂಲಿಕಾರರು ಸುಪ್ರೀಂ ಕೋರ್ಟ್‌ನ ಭಾಷೆಯಲ್ಲಿ ಹೇಳುವುದಾದರೆ ‘ಜೀತದಾಳುಗಳೇ’ ಆಗಿದ್ದಾರೆ.

ತಾನೇ ನಿರ್ಧರಿಸಿದ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಕೂಲಿಯನ್ನೇಕೆ ನಿಗದಿ ಮಾಡುತ್ತದೆ ಸರ್ಕಾರ? ಎಲ್ಲಾ ರಾಜ್ಯ ಗಳಲ್ಲೂ ಒಂದೇ ಕೂಲಿದರ ಏಕಿಲ್ಲ? ಒಂದು ರಾಜ್ಯದಲ್ಲಿ ₹ 2, ಇನ್ನೊಂದರಲ್ಲಿ ₹ 19 ಹೆಚ್ಚಳವೇಕೆ? ಗಳಿಕೆಯ ಹಣ ಯಾವ ಖರ್ಚಿಗೆ ಹೋಗುತ್ತದೆ ಎಂಬುದರ ಆಧಾರದ ಮೇಲೆ ಕನಿಷ್ಠ ವೇತನವನ್ನು ನಿಗದಿ ಮಾಡಲಾಗುತ್ತದೆ. ಕೃಷಿ ಕೂಲಿಕಾರರು ಹೆಚ್ಚಿನ ಹಣವನ್ನು (ಶೇ 72ರಷ್ಟು) ಆಹಾರಕ್ಕೆ ಖರ್ಚು ಮಾಡುತ್ತಾರೆ. ಪಡಿತರದಲ್ಲಿ ಆಹಾರವನ್ನು ಸರ್ಕಾರವೇ ಕೊಡುತ್ತಿರುವುದರಿಂದ ಕೂಲಿಯನ್ನೇನೂ ಏರಿಸುವ ಅಗತ್ಯ ಇಲ್ಲ ಎಂದು ಸರ್ಕಾರ ನಿರ್ಧಾರ ಮಾಡುತ್ತಿದೆ. ಆದರೆ ‘ಗ್ರಾಮೀಣ ಭಾಗದಲ್ಲಿಯೂ ಕೂಡ ಇಂದು ಬೆಳೆ, ಇಂಧನ, ವಿದ್ಯುತ್, ಶಿಕ್ಷಣ, ಆರೋಗ್ಯ, ಸಾಗಾಣಿಕೆ ಮುಂತಾದವುಗಳಿಗೂ ಆಹಾರದಷ್ಟೇ ದೊಡ್ಡ ಖರ್ಚು ಇದೆ. ಅದನ್ನೂ ಗಣನೆಗೆ ತೆಗೆದುಕೊಂಡು ಗ್ರಾಮೀಣ ಕನಿಷ್ಠ ವೇತನವನ್ನು ನಿಗದಿಪಡಿಸಬೇಕು’ ಎಂದು ಮಹಾದೇವ್ ಸಮಿತಿ ಮತ್ತು ನಾಗೇಶ್ ಸಿಂಗ್ ಸಮಿತಿಗಳು ಸಲಹೆ ಕೊಟ್ಟಿದ್ದರೂ ಆ ವರದಿಗಳನ್ನು ಸರ್ಕಾರ ಕಡೆಗಣಿಸುತ್ತಲೇ ಇದೆ.

ADVERTISEMENT

ಕನಿಷ್ಠ ಕೂಲಿಗಿಂತಲೂ ಕಡಿಮೆ ಕೂಲಿ ದರ ಇರುವ ಉದ್ಯೋಗ ಖಾತರಿಯತ್ತ ತಿರುಗಿ ನೋಡದವರ ಸಂಖ್ಯೆ ಸಾಕಷ್ಟಿದ್ದರೂ ಕೂಡ, ಅರ್ಜಿ ಕೊಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅದಕ್ಕೆ ಕಾರಣ ಅದರ ಜನಪ್ರಿಯತೆ ಅಲ್ಲ, ಬದಲಿಗೆ ಹಳ್ಳಿಯ ಕೂಲಿಕಾರರಿಗೆ ಬೇರೆ ದಾರಿ ಇಲ್ಲವಾಗಿದೆ. ಇಂದು 25 ಕೋಟಿ ಕುಟುಂಬಗಳು ಉದ್ಯೋಗ ಖಾತರಿಯನ್ನು ಅವಲಂಬಿಸಿವೆ. ಕೂಲಿದರ ಏರಿಕೆ ಆಗದಿರುವುದು 8 ಕೋಟಿ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಕೊಡುವ ಕೂಲಿಯಲ್ಲಿ ವಂಚನೆ, ಕೊಟ್ಟಿದ್ದು ಕೂಡ ಅವರ ಕೈಗೆ ಸಿಗದಂತೆ ಮಾಡುವ, ನಿಗದಿತ ವೇಳೆಗೆ ತಲುಪದಂತೆ ಮಾಡುವ ವಂಚನೆಗಳೂ ಇವೆ. ಆಂಧ್ರ ಪ್ರದೇಶದಲ್ಲಿ 4 ಲಕ್ಷ ಕೂಲಿಕಾರರ ಕಳೆದ ವರ್ಷದ ₹ 54 ಕೋಟಿ ಕೂಲಿ ಹಣ ಅಂಚೆ ಕಚೇರಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇದಕ್ಕೆ ಕಾರಣ ಅವರ ಹೆಬ್ಬೆಟ್ಟು ಗುರುತು ಹೊಂದಾಣಿಕೆ ಆಗುತ್ತಿಲ್ಲವೆಂಬುದು. ನಮ್ಮ ರಾಜ್ಯದಲ್ಲಾದರೂ ಅಷ್ಟೇ, ಕೂಲಿ ಪಾವತಿ ಆಗಿದೆ ಎಂದು ಸರ್ಕಾರಿ ಕಂಪ್ಯೂಟರ್‌
ಗಳಲ್ಲಿ ತೋರಿಸಿದರೂ ಕೂಡ ಪ್ರತಿ ಹಳ್ಳಿಯಲ್ಲೂ ಕನಿಷ್ಠ ಎರಡು ಮೂರು ಜನರಿಗೆ ಕೂಲಿ ಪಾವತಿ ಆಗಿರುವುದೇ ಇಲ್ಲ. ಆಧಾರ್‌ ಸಂಖ್ಯೆಯಿಂದಾಗಿ ಆ ಹಣ ಇನ್ನಾರದ್ದೋ ಬ್ಯಾಂಕ್ ಖಾತೆಗೆ ಜಮೆ ಆಗಿರುತ್ತದೆ. ಕಳೆದ ವರ್ಷದವರೆಗೆ ಹಣ ಎಲ್ಲಿ ಹೋಗಿದೆ ಎಂದು ಪತ್ತೆ ಹಚ್ಚುವುದು ಜಿಲ್ಲಾ ಪಂಚಾಯಿತಿಗಳಲ್ಲಿ ಸಾಧ್ಯವಿತ್ತು, ಆದರೆ ಈಗ ಕಂಪ್ಯೂಟರ್‌ಗಳಲ್ಲಿ ಆ ಕೀ ಕೂಡ ಕಾಣೆಯಾಗಿದೆ. ಅರ್ಜಿಯ ಮೇಲೆ ಅರ್ಜಿ ಹಿಡಿದು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ಯವರೆಗೆ ಅಲೆದಾಡಿದರೂ ಕೂಡ ಅವರ ದುಡ್ಡು ಎಲ್ಲಿ ಹೋಗಿದೆ ಎಂದು ಕೂಲಿಕಾರರಿಗೆ ಗೊತ್ತಾಗುತ್ತಿಲ್ಲ.

ಖಾನಾಪುರ ತಾಲ್ಲೂಕಿನ ಬೀಡಿಯ ಶೇಕವ್ವ ಎಂಬುವರು ಕೂಲಿ ಪಾವತಿ ಆಗದ ಒಬ್ಬ ಹೆಣ್ಣುಮಗಳು. ಗಂಡ ಹಾಸಿಗೆ ಹಿಡಿದ ರೋಗಿ, ವಲಸೆ ಹೋಗುತ್ತಿರುವ ಇಬ್ಬರು ಗಂಡು ಮಕ್ಕಳೂ ಕುಡಿತವನ್ನು ಚೆನ್ನಾಗಿ ಕಲಿತು ಬಂದು ಮನೆಯ ಸಾಮಾನೆಲ್ಲವನ್ನೂ ಮಾರಾಟ ಮಾಡಿಯಾಗಿದೆ. ಇಷ್ಟಾದರೂ ವಿಶ್ವಾಸವನ್ನು ಕಳೆದುಕೊಳ್ಳದೆ, ತನಗೆ ಬರಬೇಕಾದ 58 ದಿನಗಳ ಕೂಲಿಗಾಗಿ ಒಂದು ವರ್ಷದಿಂದಲೂ ಹೋರಾಡುತ್ತಿದ್ದಾಳೆ ಶೇಕವ್ವ. ಪಕ್ಕದ ಹಳ್ಳಿಯ ನಿಂಗವ್ವನ ಗಂಡ ಪ್ರತಿ ನಿತ್ಯ ಕುಡಿದು ಬಂದು ರಾತ್ರಿಯಿಡೀ ಓಣಿಯಲ್ಲಿ ಒಬ್ಬರಿಗೂ ನಿದ್ದೆ ಮಾಡಕೊಡದಂತೆ ಕಿರುಚಾಡುತ್ತಿರುತ್ತಾನೆ. ಅವಳ ಕೂಲಿಯೂ ಕೂಡ ಕಾಣದ ಖಾತೆಗೆ ಹೋಗಿ ಬಿದ್ದಿದೆ. ಬೂರಣಕಿ ಎಂಬ ಇನ್ನೊಂದು ಹಳ್ಳಿಯ ರೇಣುಕಾಗೆ ಎಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಆಧಾರ್‌ ಕಾರ್ಡ್ ಸಿಗದ ಕಾರಣ, ಆಕೆಯ ಉದ್ಯೋಗದ ಅರ್ಜಿಯನ್ನೇ ಪಂಚಾಯ್ತಿ ನಿರಾಕರಿಸುತ್ತಿದೆ. ಅಕ್ಕ ಪಕ್ಕದವರು ಬುಟ್ಟಿ, ಗುದ್ಲಿ ಹೊತ್ತುಕೊಂಟು ಪಂಚಾಯ್ತಿಯ ಕೆಲಸಕ್ಕೆ ಹೋಗುತ್ತಿರುವಾಗ ಬಾಗಿಲಲ್ಲಿ ಕುಳಿತು ಗೀತಾ ನಿಟ್ಟುಸಿರು ಬಿಡುತ್ತಾಳೆ. ಕಳೆದ ವರ್ಷದ ಕೂಲಿ ಪಾವತಿ ಆಗದಿದ್ದರೂ ಈ ವರ್ಷ ಮತ್ತೆ ಸಲಿಕೆ, ಬುಟ್ಟಿ ಹಿಡಿದು ಕೆಲಸಕ್ಕೆ ಹೋಗುವ ಕೆಲವರಂತೂ ಬೆರಗು ಹುಟ್ಟಿಸುತ್ತಾರೆ. ಅವರ ವಿಶ್ವಾಸದ ಪಾತ್ರೆ ಎಂದೂ ಬರಿದಾಗದೇನೋ!

ಅತ್ತ ಅರ್ಥ ಸಚಿವರು ಬಿಟ್ಟಿಯಾಗಿ ಕೊಡುವವರಂತೆ ಗ್ರಾಮೀಣ ಭಾಗದ ಜನರಿಗೆ ಆಹಾರವನ್ನು ಕೊಡುವವರು ತಾವು, ಅದಕ್ಕಾಗಿ ಅವರಿಗೆ ಕನಿಷ್ಠ ಕೂಲಿ ಹೆಚ್ಚಳ ಆಗುವ ಅಗತ್ಯವಿಲ್ಲವೆಂದು ಬೀಗುತ್ತಿರುವಾಗ ಇತ್ತ ಸಚಿವೆ, ಮೇನಕಾ ಗಾಂಧಿಯವರು ಇತ್ತೀಚೆಗೆ ಬೆಳಗಾವಿಗೆ ಬಂದಿದ್ದಾಗ ‘ಅಂಗನ
ವಾಡಿಯಲ್ಲಿ ಆಹಾರದ ಬದಲಿಗೆ ನೇರ ನಗದು ವರ್ಗಾವಣೆ’ಮಾತನ್ನು ಪುನರುಚ್ಚರಿಸಿದ್ದಾರೆ. ‘ಅಂಗನವಾಡಿ ಆಹಾರ ಹಂಚಿಕೆಯಲ್ಲಿ ಭ್ರಷ್ಟಾಚಾರ ತುಂಬಿದೆ. ಮಕ್ಕಳಿಗದು ಸರಿಯಾಗಿ ತಲುಪುತ್ತಿಲ್ಲ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಆಹಾರದ ಬದಲಿಗೆ ನೇರ ನಗದನ್ನು ಮಕ್ಕಳ ಖಾತೆಗೆ ವರ್ಗಾಯಿಸಲಿದೆ ಸರ್ಕಾರ’ ಎನ್ನುತ್ತಾರವರು.

ಅಂಗನವಾಡಿಗಳಲ್ಲಾಗಲೀ, ಶಾಲೆಗಳಲ್ಲಾಗಲೀ ಮಕ್ಕಳಿಗೆ ಬಿಸಿಯೂಟವನ್ನು ಕೊಡುವ ಪ್ರಮೇಯ ನಮ್ಮ ದೇಶದಲ್ಲೇಕೆ ಬಂತು ಎಂಬುದನ್ನು ಮಾನ್ಯ ಮಂತ್ರಿಗಳು ವಿಚಾರ ಮಾಡಿ ಮಾತನಾಡಬೇಕಿತ್ತೇನೋ. ಪ್ರತಿಷ್ಠಿತ ಕಾಲೇಜೊಂದರ ಅತ್ಯಾಧುನಿಕ ಯೂನಿಟ್‌ಅನ್ನು ಉದ್ಘಾಟಿಸಲು ಬಂದಿದ್ದವರಿಗೆ ಬಹುಶಃ ಎಲ್ಲವೂ ಆಧುನಿಕವಾಗಿ, ಅತ್ಯಂತ ಮುಂದುವರಿದವುಗಳಾಗಿ ಕಂಡಿದ್ದರಲ್ಲೇನೂ ಆಶ್ಚರ್ಯವಿಲ್ಲ. ‘ನಮ್ಮ ಇಡೀ ದೇಶವೇ ಹಾಗೆ ಇದೆ’ ಎಂದು ಅವರಿಗೆ ಭ್ರಮೆಯಾಗಿರಲಿಕ್ಕೂ ಸಾಕು. ವಿಮಾನ, ಹವಾ ನಿಯಂತ್ರಿತ ಕಾರುಗಳಿಂದ ಸ್ವಲ್ಪ ಹೊರಬಂದು, ಉತ್ತರ ಕರ್ನಾಟಕದ ಅಥವಾ ಅವರದ್ದೇ ರಾಜ್ಯದ ಕೆಲವು ಅಂಗನವಾಡಿಗಳನ್ನು, ಅಂಗನವಾಡಿಗಳಿರುವ ಪರಿಸರವನ್ನು ವೀಕ್ಷಿಸಿದ್ದರೆ ಖಂಡಿತವಾಗಿಯೂ ಅವರಿಂದ ಈ ಮಾತು ಬರುತ್ತಿರಲಿಲ್ಲ. ನೀತಿ ಆಯೋಗ– ವಿಶ್ವ ಬ್ಯಾಂಕ್‌ ಜೊತೆಗೂಡಿ ಬಿಡುಗಡೆ ಮಾಡಿದ ಅಧ್ಯಯನ ವರದಿಯನ್ನೊಮ್ಮೆ ಅವರು ನೋಡಿದರೊಳಿತು. ದೇಶದ ಮಕ್ಕಳ ಅಪೌಷ್ಟಿಕತೆ, ಮಕ್ಕಳ ಮರಣ ಸಂಖ್ಯೆಗಳನ್ನಿವರು ಒಮ್ಮೆ ತೆಗೆದು ನೋಡಬೇಕು.

‘ರೇಶನ್ನಿನಲ್ಲಿ ಕಾಳನ್ನೇ ಕೊಡುತ್ತೇವೆ, ಹಣ ವರ್ಗಾವಣೆಗೆ ಹೋಗುವುದಿಲ್ಲ’ ಎಂದು ಪತ್ರಿಕಾ ಹೇಳಿಕೆ ಕೊಡುತ್ತಲೇ, ಅತ್ತ ಜಾರ್ಖಂಡ್‌ನಲ್ಲಿ ಎರಡು ತಿಂಗಳ ಹಿಂದೆ ಸರ್ಕಾರವು ನೇರ ನಗದು ವರ್ಗಾವಣೆಗೆ ಮೊದಲಿಟ್ಟಿತು. ಶೇ 97 ಜನರು ಇದನ್ನು ವಿರೋಧಿಸಿದರೂ ಕೂಡ ಆರಂಭ
ವಾದ ಯೋಜನೆಯಲ್ಲಿ ಶೇ 25 ಜನರಿಗೆ ನಗದೂ ಇಲ್ಲ, ರೇಶನ್ನೂ ಇಲ್ಲ. ಆಧಾರ ಸಂಖ್ಯೆ ತಮ್ಮ ಯಾವ ಬ್ಯಾಂಕ್ ಖಾತೆಗೆ ಹೊಂದಿಕೆಯಾಗಿದೆ ಎಂದು ವಿಚಾರಿಸಲು ಒಮ್ಮೆ, ಹಣ ಬಂದಿದೆಯೋ ಇಲ್ಲವೋ ಕೇಳಿ ತಿಳಿದುಕೊಳ್ಳಲು ಲೆಕ್ಕವಿಲ್ಲದಷ್ಟು ಬಾರಿ, ಬಂದಿದೆ ಎಂದಾದರೆ ತೆಗೆಸಿಕೊಳ್ಳಲೊಮ್ಮೆ ತಿರುಗಿ ತಿರುಗಿ ಜನರು ಬೇಸತ್ತು ಹೋಗಿದ್ದಾರೆ. ಸರ್ಕಾರ ಕೊಡುವುದು 32 ರೂಪಾಯಿ. ಇಷ್ಟು ಸಣ್ಣ ಮೊತ್ತವನ್ನು ತೆಗೆಯಲು ಬ್ಯಾಂಕ್ ಸಿಬ್ಬಂದಿ ಸಹಕರಿಸುವುದಿಲ್ಲ. ಅಷ್ಟು ಹಣವನ್ನು ತೆಗೆಯದೇ ಆ ತಿಂಗಳು ರೇಶನ್ ತಂದುಕೊಳ್ಳಲು ಸಾಧ್ಯವಿರದಷ್ಟು ಬಡತನ ಜನರಲ್ಲಿದೆ ಎಂಬುದನ್ನು ಸರ್ಕಾರ ನಂಬುತ್ತದೆಯೋ ಬಿಡುತ್ತದೆಯೋ ಅಷ್ಟು ಕಠೋರ ಬಡತನ ಜಾರ್ಖಂಡ್, ಬಿಹಾರ, ಒಡಿಶಾ ಗಳಲ್ಲಿ ಇರುವುದಂತೂ ಸತ್ಯ.

ಇದೀಗ ಜಾರ್ಖಂಡದಲ್ಲಿ ಪಡಿತರದ ಬದಲಿಗೆ ನೇರ ನಗದು ವರ್ಗಾವಣೆ ಬೇಡ ಎಂದು ತೀವ್ರವಾದ ಹೋರಾಟ ನಡೆಯುತ್ತಿದೆ. ಈಗಾಗಲೇ ಮಕ್ಕಳ ಬಿಸಿಯೂಟಕ್ಕೆ ಆಧಾರ್ ಜೋಡಣೆ ಮಾಡ ಹೋಗಿ ಸರ್ಕಾರ ಸಾಕಷ್ಟು ಛೀಮಾರಿ ಹಾಕಿಸಿಕೊಂಡು ಬಿಸಿಯೂಟಕ್ಕೆ ಆಧಾರ್‌ ಜೋಡಣೆ ಅದೆಷ್ಟು ಅಮಾನವೀಯ ಎಂದು ಸಾಬೀತು ಪಡಿಸಿದಾಗ ಮುಗುಮ್ಮಾಗಿ ಆದೇಶವನ್ನು ಹಿಂದೆಗೆದುಕೊಂಡಿತ್ತು.

ಜಾರ್ಖಂಡ್‌ನಲ್ಲಿ ರೇಶನ್ ಬದಲಿಗೆ ನೇರ ನಗದು ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಅಭ್ಯಸಿಸಿದ ‘ಆಹಾರದ ಹಕ್ಕಿಗಾಗಿ ಆಂದೋಲನ’ದ ಮಿತ್ರರು, ವಯಸ್ಸಾದವರಿಗೆ, ಅಂಗವಿಕಲರಿಗೆ ಮತ್ತು ಕೆಲವು ಸಂದರ್ಭದಲ್ಲಿ ಮಕ್ಕಳಿಗೆ ಬ್ಯಾಂಕ್‌ನಿಂದ ಹಣ ತೆಗೆದು ತಂದು ರೇಶನ್ ತರುವ ಕಷ್ಟ ಇನ್ನೂ ಹೆಚ್ಚಿನದೆಂದು ಹೇಳುತ್ತಾರೆ. ಮೇಲ್ನೋಟಕ್ಕೇ ಅರ್ಥವಾಗುವ ವಿಷಯವಿದು. ಹೀಗಿರುವಾಗ ನಮ್ಮ ಮಾನ್ಯ ಸಚಿವೆ, ಮಕ್ಕಳ– ಅದೂ 6 ವರ್ಷದೊಳಗಿನ ಪುಟಾಣಿಗಳ ಆಹಾರದ ಬದಲಿಗೆ ಹಣ ವರ್ಗಾವಣೆಯ ಮಾತನಾಡುತ್ತಿದ್ದಾರೆ. ಮಗು ಹುಟ್ಟುತ್ತಲೇ ಆಧಾರ್ ಮಾಡಿಸಬೇಕು, ಅಕೌಂಟ್ ತೆಗೆಯಬೇಕು ಎಂದು ತಾಯ್ತಂದೆಯರನ್ನು ಬಿಸಿಲು ಮಳೆ ದೂಳೆನ್ನದೆ ಓಡಾಡಿಸುವ ಯೋಜನೆಯಿಂದ ನಮ್ಮ ಸರ್ಕಾರದ ಅಮಾನವೀಯತೆ ಯಾವ ಮಟ್ಟವನ್ನು ತಲುಪಿದೆಯೆಂದು ಊಹಿಸಬಹುದು.

ಆಹಾರ ಎಂದೂ ಹಣವಾಗಲಾರದು, ಹಣವೆಂದಿಗೂ ಆಹಾರದ ಸ್ಥಾನವನ್ನು ತುಂಬಲಾರದು. ಆಹಾರ ಕೊಡಬೇಕಾದವರು ತಮ್ಮ ಜವಾಬ್ದಾರಿಯಿಂದೇನೋ ನುಣುಚಿಕೊಳ್ಳಬಹುದು, ಆದರೆ ಅರಿಯದ ಕಂದನ ಹೆಸರಲ್ಲಿ ಬರುವ ಹಣ, ಕುಡಿಯುವ ತಂದೆ ಅಥವಾ ಅಜ್ಜನ ಕೈಯಲ್ಲಿ ಸಿಕ್ಕಿತೆಂದರೆ ಮುಂದೇನಾಗಬಹುದು ಎಂಬ ಕಲ್ಪನೆ ಮಾನ್ಯ ಸಚಿವರಿಗೆ ಬರಲಿ.

ಇತ್ತ ಕೇಂದ್ರ ಮಂತ್ರಿಗಳು ಈ ಹೇಳಿಕೆಯನ್ನು ಕೊಡುತ್ತಿರುವಾಗಲೇ, ಅತ್ತ ದೆಹಲಿಯಲ್ಲಿ ಮಾರ್ಚ್‌ 15ರಂದು ಹಸಿವಿನಲ್ಲೇ ಬದುಕುತ್ತಿರುವವರಿಂದ ರಾಷ್ಟ್ರ ಮಟ್ಟದಸಾರ್ವಜನಿಕ ಜನ ಸಂವಾದವೊಂದು ನಡೆಯಿತು. ಆಹಾರ ಭದ್ರತಾ ಕಾನೂನು ಜಾರಿಯಲ್ಲಿ ಬಂದು ನಾಲ್ಕು ವರ್ಷಗಳಾ
ದರೂ ಇನ್ನೂವರೆಗೆ ಅದರ ಸಮರ್ಪಕ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿರುವುದು, ಆಹಾರ ಭದ್ರತಾ ಕಾನೂ
ನಿನ ಆಶಯಗಳಿಗೆ ಸಂಪೂರ್ಣ ಮಣ್ಣೆರಚುವ ಕೆಲಸ ಮಾಡುತ್ತಿರುವುದು, ಪರಿಣಾಮವಾಗಿ ಕಳೆದ ವರ್ಷವೇ ದೇಶದ ವಿವಿಧ ಭಾಗಗಳಲ್ಲಿ 12 ಜನರು ಹಸಿವಿನಿಂದ ಅಸು ನೀಗಿರುವುದು... ಇವೆಲ್ಲವನ್ನೂ ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸುವ ಉದ್ದೇಶದಿಂದ ಸಾರ್ವಜನಿಕ ಜನಸಂವಾದವನ್ನು ಕರೆಯಲಾಗಿತ್ತು. ದೇಶದ ಎಲ್ಲಾ ಭಾಗಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ರೇಶನ್ ಮತ್ತು ಪೆನ್ಷನ್ ಅಥವಾ ಅಂಗನವಾಡಿ ಆಹಾರ ತಲುಪದೇ ಹಸಿವಿನಲ್ಲಿ ಬದುಕುತ್ತಿರುವವರು ಪಾರ್ಲಿಮೆಂಟ್ ರಸ್ತೆಗೆ ಬಂದು ಹೇಳಿಕೊಂಡಾಗಲಾದರೂ ಅದು ಕಾನೂನು ರೂಪಿಸುವವರ ಕಿವಿಯನ್ನು ತಲುಪುತ್ತದೇನೋ ಎಂಬ ಆಶೆಯಿಂದ ನಡೆದ ಸಂವಾದವಿದು.

ಉಹ್ಞೂಂ, ಸಾರ್ವಜನಿಕ ಸಂವಾದಗಳಾದವು, ಪತ್ರಿಕಾವರದಿಗಳಾದವು. ಅಧಿಕಾರದಲ್ಲಿರುವವರ ವಿಚಾರಧಾರೆ ಮಾತ್ರ ಬದಲಾಗುವಂತೆ ಕಾಣುತ್ತಿಲ್ಲ. 7ನೇ ವೇತನ ಆಯೋಗದ ಜಾರಿ, ಚರ್ಚೆಯಿಲ್ಲದೆ ಸಂಸತ್ ಸದಸ್ಯರ ವೇತನ ಏರಿಕೆ... ಇವೆಲ್ಲ ಗ್ರಾಮ ಭಾರತ ಮತ್ತು ಇಂಡಿಯಾ ನಡುವಣ ಕಂದರವನ್ನು ಮತ್ತಷ್ಟು ಹೆಚ್ಚಿಸುತ್ತಲೇ ಇವೆ. ಮತ್ತೆ ಮತ್ತೆ ಗಾಯ ಮಾಡಿ ಗಾಯಗಳಿಗೆ ಬರೆ ಕೊಡುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.