ADVERTISEMENT

PV Web Exclusive: ಯುವ ಜನರಿಂದ ಹಿರಿಯರಿಗೆ ಒಂದಷ್ಟು ಪಾಠಗಳು

ಹಮೀದ್ ಕೆ.
Published 8 ನವೆಂಬರ್ 2020, 11:30 IST
Last Updated 8 ನವೆಂಬರ್ 2020, 11:30 IST
ಕುದುರೆ ಏರಿ ಬಂದ ಮತದಾರರು
ಕುದುರೆ ಏರಿ ಬಂದ ಮತದಾರರು   
"ಚುನಾವಣಾ ಪ್ರಚಾರದಲ್ಲಿ ತೇಜಸ್ವಿ ಯಾದವ್"

ಪ್ರತಿ ಚುನಾವಣೆಯಲ್ಲಿಯೂ ಒಂದಷ್ಟು ಪಾಠಗಳು, ಹೊಳಹುಗಳು ಇರುತ್ತವೆ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಕನಿಷ್ಠ ಒಂದಾದರೂ ಹೊಸ ವಿಚಾರ ಮನದಟ್ಟಾಗುವುದು ಖಚಿತ. ಜನಾಧಿಪತ್ಯದ ಜೀವಾಳವೇ ಚುನಾವಣೆ. ಪ್ರತಿ ಚುನಾವಣೆಯೂ ಅದನ್ನು ಗಟ್ಟಿಗೊಳಿಸುತ್ತಲೇ ಹೋಗುತ್ತದೆ. ಆಧಿಪತ್ಯ ತಮ್ಮದು ಎಂಬುದನ್ನು ಜನರು ಮತ್ತೆ ಮತ್ತೆ ನಿರೂಪಿಸಲು ಇರುವ ಅವಕಾಶ ಚುನಾವಣೆ.

ಅಮೆರಿಕದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿದೆ. ಇದು ಅಮೆರಿಕಕ್ಕೆ ಅಷ್ಟೇ ಅಲ್ಲ ಇಡೀ ಜಗತ್ತಿನ ಮೇಲೆಯೂ ಪರಿಣಾಮ ಬೀರುವ ವಿಚಾರ. ಬಹುತೇಕ ಎಲ್ಲರನ್ನೂ ಮೂರು ದಿನ ತುದಿಗಾಲಲ್ಲಿ ನಿಲ್ಲಿಸಿ ಈಗ ಫಲಿತಾಂಶ ಬಂದಿದೆ. ಈ ಫಲಿತಾಂಶವೂ ಒಂದಷ್ಟು ಪಾಠಗಳನ್ನು, ಒಂದಷ್ಟು ಹೊಳಹುಗಳನ್ನು, ಒಂದಷ್ಟು ಅಚ್ಚರಿ, ಪುಳಕಗಳನ್ನು ಮೂಡಿಸಿದೆ. ನಮ್ಮಲ್ಲಿಯೂ ಬಿಹಾರ ವಿಧಾನಸಭೆಗೆ ಚುನಾವಣೆ ನಡೆದಿದೆ. ಫಲಿತಾಂಶ ಬರಲು ಇನ್ನೂ ಎರಡು ದಿನ ಕಾಯಬೇಕಿದೆ. ಆದರೆ, ಮತಗಟ್ಟೆ ಸಮೀಕ್ಷೆಗಳು ತಮ್ಮ ಅಂದಾಜು ಏನು ಎಂಬುದನ್ನು ಹೇಳಿವೆ.

31 ವರ್ಷದ ತೇಜಸ್ವಿ ಯಾದವ್‌ ನೇತೃತ್ವದ ಮಹಾಮೈತ್ರಿಕೂಟಕ್ಕೆ ಗೆಲುವು ಖಚಿತ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಇಂಡಿಯಾ ಟುಡೇ–ಆ್ಯಕ್ಸಿಸ್‌ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ತೇಜಸ್ವಿ ಮುಖ್ಯಮಂತ್ರಿಯಾಗಲಿ ಎಂದು ಹೇಳಿದವರು ಶೇ 44ರಷ್ಟು ಮಂದಿ. ‘ಉತ್ತಮ ಆಡಳಿತಗಾರ’, ‘ಚಾಣಕ್ಯ’ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ, 15 ವರ್ಷ ಮುಖ್ಯಮಂತ್ರಿಯಾಗಿದ್ದ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದವರು ಶೇ 35ರಷ್ಟು ಮಂದಿ. ಕೆಲವು ಸಮೀಕ್ಷೆಗಳ ಪ್ರಕಾರ, ಮಹಾಮೈತ್ರಿಕೂಟಕ್ಕೆ ಮತ ಹಾಕಿದವರಲ್ಲಿ ಹೆಚ್ಚಿನವರು 35ರ ಒಳಗಿನ ವಯಸ್ಸಿನವರು ಎಂದೂ ಹೇಳಲಾಗಿದೆ. ಬಿಜೆಪಿ ಮತ್ತು ಆ ಪಕ್ಷದ ಅತ್ಯುಚ್ಚ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುವ ಸಮೂಹ ಗಟ್ಟಿಯಾಗಿ ಬೆಂಬಲಿಸುತ್ತದೆ ಎಂಬುದು ಈ ವರೆಗೆ ಇದ್ದ ತಿಳಿವಳಿಕೆ. ಬಿಹಾರ ಚುನಾವಣೆಯ ಫಲಿತಾಂಶವು ಮತಗಟ್ಟೆ ಸಮೀಕ್ಷೆಯ ರೀತಿಯಲ್ಲಿಯೇ ಬಂದರೆ ಆ ತಿಳಿವಳಿಕೆಯಲ್ಲಿ ಮಾರ್ಪಾಡು ಆಗುತ್ತದೆ.

ADVERTISEMENT
ಚುನಾವಣಾ ಪ್ರಚಾರದಲ್ಲಿ ತೇಜಸ್ವಿ ಯಾದವ್

ಬಿಹಾರದಲ್ಲಿ ಚುನಾವಣೆ ನಡೆದ ರೀತಿಯೇ ಈ ಬಾರಿ ಭಿನ್ನವಾಗಿತ್ತು. ಅಸಂಸದೀಯ ಎನಿಸುವಂತಹ ಪದಗಳನ್ನು ಬಳಸದೆ ಸದಾ ಸಭ್ಯವಾಗಿಯೇ ಕಾಣಿಸುತ್ತಿದ್ದ ನಿತೀಶ್‌ ಕುಮಾರ್‌ ಈ ಬಾರಿ ಹಾಗೆ ಇರಲಿಲ್ಲ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಹಲವು ಬಾರಿ ಸಿಡುಕಿದರು. ತೇಜಸ್ವಿ ಯಾದವ್ ಅವರ ತಂದೆ–ತಾಯಿ ಲಾಲು ಪ್ರಸಾದ್‌ ಮತ್ತು ರಾಬ್ಡಿ ದೇವಿ ಅವರನ್ನು ಹಂಗಿಸಿದರು. ತೇಜಸ್ವಿ ಅವರನ್ನು ‘ಜಂಗಲ್‌ ರಾಜ್‌ನ ಯುವರಾಜ’ ಎಂದವರು ಪ್ರಧಾನಿ ಮೋದಿ. ತೇಜಸ್ವಿ ನೇತೃತ್ವದ ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಅವರ ಅಪ್ಪ–ಅಮ್ಮ ಮುಖ್ಯಮಂತ್ರಿಯಾಗಿದ್ದ ಕಾಲದ ಜಂಗಲ್‌ ರಾಜ್‌ ಮತ್ತೆ ಬರಲಿದೆ ಎಂದೂ ಹೇಳಿದರು. ಕಳೆದ 15 ವರ್ಷಗಳಿಂದ ನಿತೀಶ್‌ ಮುಖ್ಯಮಂತ್ರಿಯಾಗಿ ಇದ್ದಾರೆ. ಈ ಅವಧಿಯ ಬಹುಕಾಲ ಬಿಜೆಪಿ ಅವರ ಜತೆಗೇ ಇತ್ತು. ಪ್ರಧಾನಿ ಹೇಳಿದ ‘ಜಂಗಲ್‌ ರಾಜ್’‌ ಅವಧಿಯಲ್ಲಿ ತೇಜಸ್ವಿ ಬಾಲಕ. ಕೇಂದ್ರದಲ್ಲಿರುವ ತಮ್ಮ ಸರ್ಕಾರ, ರಾಜ್ಯದಲ್ಲಿರುವ ತಮ್ಮ ಸರ್ಕಾರದ ಸಾಧನೆಗಳನ್ನು ಪ್ರಧಾನಿ ಏಕೆ ಕೊಂಡಾಡಲಿಲ್ಲ ಎಂಬ ಪ್ರಶ್ನೆಗೆ ಬಿಜೆಪಿಯಾಗಲಿ ಜೆಡಿಯು ಆಗಲಿ ಉತ್ತರಿಸಿಲ್ಲ.

ತಾವು ನೋಡಿದ ಜಂಗಲ್‌ ರಾಜ್‌ನ ನೇತೃತ್ವ ವಹಿಸಿದ್ದವರು ನಿತೀಶ್‌ ಕುಮಾರ್ ಎಂದು ಸುದ್ದಿ ವಾಹಿನಿಗಳ ಜತೆ ಮಾತಾಡಿದ ಕೆಲವು ಯುವ ಮತದಾರರು ಹೇಳಿದ್ದಾರೆ. ಮಾತಿನ ಮೋಡಿಯಲ್ಲಿ ಎಲ್ಲವೂ ಮರೆಯಾಗದು ಎಂಬುದನ್ನು ಬಿಹಾರದ ಚುನಾವಣೆ ಕಲಿಸಿದರೆ ಅದು ರಾಜಕಾರಣಿಗಳಿಗೆ ಮತ್ತು ಭಾರತದ ಮತದಾರರಿಗೆ ದೊಡ್ಡ ಪಾಠ.

31 ವರ್ಷ ಎಂಬುದು ಬಿಸಿ ರಕ್ತದ ತಾರುಣ್ಯ. ಈ ವಯೋಮಾನದವರು ಸಿಟ್ಟಾದರೆ, ಕೆರಳಿದರೆ ಅದನ್ನು ಅನಾರೋಗ್ಯ ಎಂದು ಹೇಳುವುದು ಕಷ್ಟ. ಆದರೆ, ಪ್ರಚಾರದ ಸಂದರ್ಭದಲ್ಲಿ ತೇಜಸ್ವಿ ಸಿಟ್ಟಾಗಲಿಲ್ಲ. ಯಾರ ಮೇಲೂ ಸಿಡುಕಲಿಲ್ಲ. ವೈಯಕ್ತಿಕವಾದ ನಿಂದನೆಗೂ ಅವರು ಅದೇ ಭಾಷೆಯಲ್ಲಿ ಉತ್ತರಿಸಲಿಲ್ಲ. ತಮ್ಮ ಮೇಲಿನ ಟೀಕೆ ಅಲ್ಲಿರಲಿ, ನಿರುದ್ಯೋಗ, ವಲಸೆ ಕಾರ್ಮಿಕರ ಬವಣೆಗೆ ಸಂಬಂಧಿಸಿ ಜನರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಿ ಎಂದಷ್ಟೇ ಅವರು ಪ್ರತಿಸ್ಪರ್ಧಿಗಳಿಗೆ ಹೇಳಿದರು. ಇದು ಪ್ರಚಾರದ ಕಾರ್ಯತಂತ್ರವೇ ಆಗಿದ್ದರೂ ಅಂತಹ ಸಜ್ಜನಿಕೆಯು ಸಾರ್ವಜನಿಕ ಜೀವನದಲ್ಲಿ ಬೇಕು ಎಂಬುದು ಸಣ್ಣ ಪಾಠ ಏನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.