ADVERTISEMENT

ವಿಶ್ಲೇಷಣೆ: ಲಸಿಕೆ; ಹಕ್ಕು, ನೈತಿಕತೆಯ ಸುತ್ತ...

ಹಿಂದುಳಿದ ದೇಶಗಳ ಕೋಟ್ಯಂತರ ಪ್ರಜೆಗಳಿಗೆ ಕೋವಿಡ್ ಲಸಿಕೆಯು ದೂರದ ಕನಸು

ಡಾ.ಎಚ್.ಆರ್.ಕೃಷ್ಣಮೂರ್ತಿ
Published 1 ಮಾರ್ಚ್ 2021, 19:30 IST
Last Updated 1 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಪಂಚದ ಎಲ್ಲ ದೇಶಗಳು ತುದಿಗಾಲಿನಲ್ಲಿ ನಿಂತು ನಿರೀಕ್ಷಿಸುತ್ತಿದ್ದ ಕೋವಿಡ್ ಲಸಿಕೆ ಈಗ ಲಭ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಎಂಟರಿಂದ ಹತ್ತು ಲಸಿಕೆಗಳು, ಎಲ್ಲ ಹಂತಗಳ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ, ಉತ್ಪಾದನೆಯಾಗಿ, ಅಭಿಯಾನದ ಮೂಲಕ ಜನರನ್ನು ಮುಟ್ಟುತ್ತಿವೆ. ಆದರೆ ಉತ್ಪಾದನೆ, ಮಾರಾಟ, ವಿತರಣೆ ಗಳಲ್ಲಿರುವ ಪಕ್ಷಪಾತ, ಭೇದಭಾವ, ಅಗತ್ಯ ಮೀರಿದ ದಾಸ್ತಾನು, ರಾಜಕೀಯ ಒತ್ತಡ ಮುಂತಾದವುಗಳಿಂದ ಪ್ರಪಂಚದ ಬಡರಾಷ್ಟ್ರಗಳಿಗೆ ಇನ್ನೂ ಕೆಲವು ವರ್ಷಗಳ ಕಾಲ ಕೋವಿಡ್ ಲಸಿಕೆ ಗಗನಕುಸುಮವಾಗುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.

ಕೋವಿಡ್ ಲಸಿಕೆ ಉತ್ಪಾದನೆಯ ಹಂತಕ್ಕೆ ಬರುವ ಮುಂಚೆಯೇ ಪ್ರಪಂಚದ ಪ್ರಮುಖ ಔಷಧ ಉತ್ಪಾದನಾ ಕಂಪನಿಗಳು ಮತ್ತು ಶ್ರೀಮಂತ ದೇಶಗಳ ನಡುವೆ ಲಸಿಕೆ ಪೂರೈಕೆಗೆ ಸಂಬಂಧಿಸಿದ 44 ಒಪ್ಪಂದಗಳು ಏರ್ಪಟ್ಟವು. ಎಂಟು ಲಸಿಕೆಗಳಿಗೆ ಸಂಬಂಧಿಸಿದಂತೆ ಈ ರೀತಿ ಆದ ಒಪ್ಪಂದಗಳನ್ನು ವಿಶ್ಲೇಷಿಸಿರುವ ಪೀಪಲ್ಸ್ ವ್ಯಾಕ್ಸಿನ್ ಮತ್ತು ಆಕ್ಸ್‌ಫ್ಯಾಮ್ ಇಂಟರ್‌ನ್ಯಾಷನಲ್ ಸಂಸ್ಥೆಗಳು ಈ ಒಪ್ಪಂದಗಳ ಜಾಗತಿಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿವೆ. ಉದಾಹರಣೆಗೆ, ಪ್ರಪಂಚದ ಅತಿ ದೊಡ್ಡ ಔಷಧ ಉತ್ಪಾದನಾ ಕಂಪನಿಯಾದ ಫೈಜರ್, 2021ರ ಅಂತ್ಯದೊಳಗಾಗಿ 135 ಕೋಟಿ ಡೋಸ್‍ಗಳಷ್ಟು ಕೋವಿಡ್ ಲಸಿಕೆಯನ್ನು ಉತ್ಪಾದಿಸಲಿದೆ. ಇದರಲ್ಲಿ ಶೇ 82ರಷ್ಟು ಭಾಗವನ್ನು ಅಮೆರಿಕ, ಐರೋಪ್ಯ ಒಕ್ಕೂಟ, ಇಂಗ್ಲೆಂಡ್ ಹಾಗೂ ಉಳಿದ ಭಾಗವನ್ನು ಜಪಾನ್ ಮತ್ತು ಕೆನಡಾ ಮುಂಗಡವಾಗಿಯೇ ಕಾದಿರಿಸಿವೆ. ಮೊಡೆರ್ನಾ ಕಂಪನಿ ಉತ್ಪಾದಿಸುತ್ತಿರುವ ಒಟ್ಟು ಕೋವಿಡ್ ಲಸಿಕೆಯ ಶೇ 78ರಷ್ಟು ಭಾಗವನ್ನು ಶ್ರೀಮಂತ ರಾಷ್ಟ್ರಗಳಿಗೆ ಮೀಸಲಿಡಲಾಗಿದೆ.

ಒಟ್ಟಾರೆ 2021ರ ಅಂತ್ಯದ ವೇಳೆಗೆ, ಎಂಟು ಲಸಿಕೆಗಳ ಒಟ್ಟು 590 ಕೋಟಿ ಡೋಸ್‍ಗಳಲ್ಲಿ ಶೇ 54ರಷ್ಟು ಭಾಗ, ಅಂದರೆ ಸುಮಾರು 319 ಕೋಟಿ ಡೋಸ್‍ಗಳು, ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 14ರಷ್ಟು ಭಾಗವನ್ನು ಹೊಂದಿರುವ ಶ್ರೀಮಂತ ದೇಶಗಳಲ್ಲಿ ದಾಸ್ತಾನಾಗಿರುತ್ತದೆ. ಇದರಿಂದ ಆ ದೇಶಗಳು ತಮ್ಮ ಎಲ್ಲ ಪ್ರಜೆಗಳಿಗೆ ಮೂರು ಬಾರಿ ಲಸಿಕೆ ನೀಡಬಹುದು! ಉಳಿದ ಸುಮಾರು 271 ಕೋಟಿ ಡೋಸ್‍ಗಳಿಗೆ ಪ್ರಪಂಚದ 172 ದೇಶಗಳು ಮುಗಿಬೀಳುತ್ತವೆ. ಈ ನೂಕಾಟದಲ್ಲಿ ಹಣ, ಪ್ರಭಾವವಿರುವ ದೇಶಗಳಿಗೆ ಅವುಗಳ ಅಗತ್ಯದ ಸ್ವಲ್ಪ ಭಾಗದಷ್ಟಾದರೂ ಲಸಿಕೆಗಳು ದೊರೆಯುತ್ತವೆ. ಉಳಿದ ದೇಶಗಳ ಗತಿ?

ADVERTISEMENT

ಆಕ್ಸ್‌ಫ್ಯಾಮ್ ವರದಿಯಂತೆ, 2021ರ ಅಂತ್ಯದ ವೇಳೆಗೆ ಪ್ರಪಂಚದ 70 ಬಡದೇಶಗಳಲ್ಲಿ, 10 ಜನರಲ್ಲಿ ಒಬ್ಬರಿಗೆ ಮಾತ್ರ ಕೋವಿಡ್ ಲಸಿಕೆ ನೀಡುವುದು ಸಾಧ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಟೆಡ್ರೋಸ್ ಅಧನಾಮ್ ಗ್ಯಾಬ್ರಿಯೇಸಸ್ ಅವರ ಹೇಳಿಕೆಯಂತೆ, ಪ್ರಪಂಚದ ಅತಿ ಕಡಿಮೆ ವರಮಾನದ 27 ದೇಶಗಳಲ್ಲಿ ಒಂದಾದ ಗಿನೀಗೆ ಕೇವಲ 25 ಡೋಸ್‍ಗಳಷ್ಟು ಲಸಿಕೆ ದೊರೆಯಲಿದೆ. ಹೀಗಾಗಿ ಈ ದೇಶಗಳ ಕೋಟ್ಯಂತರ ಪ್ರಜೆಗಳು ಮುಂದಿನ ಐದಾರು ವರ್ಷಗಳ ಕಾಲ ಸುರಕ್ಷಿತ, ಪರಿಣಾಮಕಾರಿ ಲಸಿಕೆಯಿಂದ ವಂಚಿತರಾಗಲಿದ್ದಾರೆ. ಕೋವಿಡ್ ಲಸಿಕೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಕೂಡಿಟ್ಟು, ತುರ್ತು ಅಗತ್ಯವಿರುವವರಿಗೆ ಅದು ಸಿಗದಂತೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಕೂಗು ಎದ್ದಿದ್ದರೂ ಶ್ರೀಮಂತ ದೇಶಗಳು ಅದಕ್ಕೆ ಪ್ರತಿಕ್ರಿಯಿಸಿಲ್ಲ.

ಆಕ್ಸ್‌ಫ್ಯಾಮ್ ಸೂಚಿಸಿರುವ ಈ ಭವಿಷ್ಯದ ಪರಿಸ್ಥಿತಿಯಿಂದ ಪಾರಾಗಬೇಕಾದರೆ ಲಸಿಕೆಯ ಉತ್ಪಾದನೆ ಯನ್ನು ಅತ್ಯಂತ ತ್ವರಿತವಾಗಿ ಹಲವಾರು ಪಟ್ಟುಗಳಷ್ಟು ಹೆಚ್ಚಿಸಬೇಕು. ತಾತ್ವಿಕವಾಗಿ ಇದು ಸಾಧ್ಯವಾದರೂ ಅದಕ್ಕಿರುವ ಅಡ್ಡಿಯೆಂದರೆ, ಲಸಿಕೆಯನ್ನು ರೂಪಿಸಿರುವ ಔಷಧ ತಯಾರಿಕಾ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಪಡೆದುಕೊಂಡಿರುವ ಪೇಟೆಂಟ್‍ಗಳು. ಹೀಗೆ ಪೇಟೆಂಟ್ ಪಡೆದುಕೊಂಡಿರುವ ಕಂಪನಿಗಳಿಂದ ಲೈಸೆನ್ಸ್ ಪಡೆಯದೆ ಬೇರೆ ಯಾರೂ ಲಸಿಕೆಗಳನ್ನು ಉತ್ಪಾದಿಸುವಂತಿಲ್ಲ. ಕ್ಯೂಬಾ, ಇಂಡೊನೇಷ್ಯಾ, ಸೆನೆಗಲ್, ಥಾಯ್ಲೆಂಡ್‌ ಮುಂತಾದ ಸಣ್ಣ ದೇಶಗಳಲ್ಲಿ ಲಸಿಕೆಗಳನ್ನು ಉತ್ಪಾದಿಸುವ ಎಲ್ಲ ಆಧುನಿಕ ಸೌಲಭ್ಯಗಳಿದ್ದರೂ ಅಸ್ತಿತ್ವದಲ್ಲಿರುವ ಪೇಟೆಂಟ್ ನಿಯಮಗಳಿಂದ ಉತ್ಪಾದನೆ ಸಾಧ್ಯವಿಲ್ಲ.

ಕಳೆದ ವರ್ಷದ ಅ. 2ರಂದು, ಭಾರತ ಮತ್ತು ದಕ್ಷಿಣ ಆಫ್ರಿಕಾ, ವಿಶ್ವ ವ್ಯಾಪಾರ ಸಂಸ್ಥೆಯ ‘ಟ್ರಿಪ್ಸ್’ (ಟ್ರೇಡ್ ರಿಲೇಟೆಡ್ ಆ್ಯಸ್ಪೆಕ್ಟ್ಸ್ ಆಫ್ ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್) ಮಂಡಳಿಯ ಮುಂದೆ ಪ್ರಸ್ತಾವವೊಂದನ್ನು ಮಂಡಿಸಿದವು. ಕೋವಿಡ್ ಲಸಿಕೆಯ ಉತ್ಪಾದನೆಯನ್ನು ತ್ವರಿತಗತಿಯಲ್ಲಿ ಹೆಚ್ಚಿಸಿ, ಪ್ರಪಂಚದ ಎಲ್ಲ ದೇಶಗಳಿಗೂ ದೊರೆಯುವಂತೆ ಮಾಡಲು, ಈ ಲಸಿಕೆಗೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕು ನಿಯಮಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಈ ಪ್ರಸ್ತಾವದಲ್ಲಿ ಕೋರಲಾಗಿತ್ತು. ಆದರೆ ಈ ಪ್ರಸ್ತಾವ ಚರ್ಚೆಗೆ ಬಂದಾಗ ಅಮೆರಿಕ, ಇಂಗ್ಲೆಂಡ್, ಸ್ವಿಟ್ಜರ್ಲೆಂಡ್‌, ನಾರ್ವೆ, ಆಸ್ಟ್ರೇಲಿಯಾ, ಜಪಾನ್ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದವು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬೃಹತ್ ಬಂಡವಾಳ ಹೂಡಿರುವ ಔಷಧ ತಯಾರಿಕಾ ಕಂಪನಿಗಳ ಆಸಕ್ತಿ, ಉತ್ಸಾಹಕ್ಕೆ ಈ ಕ್ರಮ ತೀವ್ರ ಹಿನ್ನಡೆಯನ್ನು ಉಂಟುಮಾಡುತ್ತದೆ. ಕೋವಿಡ್ ವೈರಾಣುವಿನ ಸ್ವರೂಪ ಬದಲಾಗುತ್ತಿರುವ ಸಂದರ್ಭದಲ್ಲಿ, ಔಷಧ ತಯಾರಿಕಾ ಸಂಸ್ಥೆಗಳು ತುದಿಗಾಲಿನಲ್ಲಿ ನಿಂತು ಎಚ್ಚರದಿಂದಿರಬೇಕಾದ ಪರಿಸ್ಥಿತಿಯಲ್ಲಿ, ಪೇಟೆಂಟ್‍ಗಳನ್ನು ತಾತ್ಕಾಲಿಕವಾಗಿಯಾದರೂ ರದ್ದು ಮಾಡುವ ಕ್ರಮ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೋವಿಡ್ ಲಸಿಕೆಯ ಉತ್ಪಾದನೆ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾದ್ದರಿಂದ ಪೇಟೆಂಟ್ ನಿಯಮಗಳನ್ನು ರದ್ದುಪಡಿಸಿದರೂ ಅದರಿಂದ ಉತ್ಪಾದನೆ ಹೆಚ್ಚುವುದಿಲ್ಲವೆಂಬುದು ಶ್ರೀಮಂತ ದೇಶಗಳ ನಿಲುವಾಗಿತ್ತು.

2021ರ ಅಂತ್ಯದ ವೇಳೆಗೆ ಶ್ರೀಮಂತ ರಾಷ್ಟ್ರಗಳಿಗೆ ಪೂರೈಕೆಯಾಗಿ ಉಳಿದ 271 ಕೋಟಿ ಡೋಸ್‍ಗಳಷ್ಟು ಲಸಿಕೆಯನ್ನು ಉಳಿದ ದೇಶಗಳಿಗೆ ನ್ಯಾಯಸಮ್ಮತವಾಗಿ, ಕೈಗೆಟುಕುವ ಬೆಲೆಯಲ್ಲಿ ವಿತರಿಸಲು ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಅಲೈಯನ್ಸ್ ಫಾರ್ ವ್ಯಾಕ್ಸಿನೇಶನ್ ಆ್ಯಂಡ್ ಇಮ್ಯೂನೈಜೇಶನ್ ಮತ್ತು ಕೊಯಲಿಶನ್ ಫಾರ್ ಎಪಿಡೆಮಿಕ್ ಪ್ರಿಪರೇಶನ್ ಆ್ಯಂಡ್ ಇನ್ನೋವೇಶನ್ ಸಂಸ್ಥೆಗಳು ಕೋವ್ಯಾಕ್ಸ್ ಎಂಬ ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯಲ್ಲಿ ಭಾಗವಹಿಸುವ ದೇಶಗಳಿಂದ ಸಂಗ್ರಹಿಸಿದ ಹಣದಿಂದ ಲಸಿಕೆಗಳ ಉತ್ಪಾದನೆ ಮತ್ತು ಸಂಗ್ರಹಣೆಯನ್ನು ತ್ವರಿತಗೊಳಿಸಿ, ಆಯಾ ದೇಶಗಳ ಜನಸಂಖ್ಯೆಯ ಶೇ 20ರಷ್ಟು ಭಾಗಕ್ಕೆ ಸಾಕಾಗುವಷ್ಟು ಲಸಿಕೆಯನ್ನು ಸುಲಭದ ದರದಲ್ಲಿ ಒದಗಿಸ ಲಾಗುತ್ತದೆ. ಇದರಿಂದ ಎಲ್ಲ ದೇಶಗಳೂ ಕೋವಿಡ್ ಸಾಂಕ್ರಾಮಿಕದ ವಿಷಮಸ್ಥಿತಿಯ ಹಂತವನ್ನು ದಾಟಲು ನೆರವಾಗುತ್ತದೆ ಎನ್ನಲಾಗಿದೆ. ಇಂಗ್ಲೆಂಡ್, ಇಟಲಿ, ಸ್ಪೇನ್, ಫ್ರಾನ್ಸ್, ದಕ್ಷಿಣ ಕೊರಿಯಾ, ಭಾರತ, ಕೆನಡಾಗಳೊಡನೆ ಬಿಲ್ ಗೇಟ್ಸ್ ಪ್ರತಿಷ್ಠಾನ ಹಣ ನೀಡಿದೆ. ಕೋವಿಡ್ ಲಸಿಕೆಗಳೂ ಕೊಡುಗೆಯ ರೂಪದಲ್ಲಿ ಸಂಗ್ರಹವಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕೋವ್ಯಾಕ್ಸ್ ಅತ್ಯಂತ ಭರವಸೆಯ ಬೆಳವಣಿಗೆಯಾಗಿದೆ.

ಕೋವ್ಯಾಕ್ಸ್ ಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಭಾರತವು ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾ, ಬಹರೇನ್, ಒಮಾನ್, ಅಫ್ಗಾನಿಸ್ತಾನ, ಬಾರ್ಬಡೋಸ್, ಡೊಮಿನಿಕಾಗಳಿಗೆ ಒಟ್ಟು 62.7 ಲಕ್ಷ ಡೋಸ್‍ಗಳಷ್ಟು ಲಸಿಕೆಯನ್ನು ಉಚಿತವಾಗಿ ಒದಗಿಸಿದೆ. ಬ್ರೆಜಿಲ್, ಮೊರಾಕ್ಕೊ, ಈಜಿಪ್ಟ್, ಆಲ್ಜೀರಿಯಾ, ದಕ್ಷಿಣ ಆಫ್ರಿಕಾ, ಕುವೈತ್, ಯುಎಇಗಳಿಗೆ 1.05 ಕೋಟಿ ಡೋಸ್‍ಗಳನ್ನು ಮಾರಾಟ ಮಾಡಿದೆ. ಇಂತಹ ನಡೆಗೆ ತೀರಾ ವಿರುದ್ಧವಾಗಿ ಕೋವಿಡ್‍ ಲಸಿಕೆಯ ಪೂರೈಕೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿರುವ ನಿದರ್ಶನಗಳೂ ಉಂಟು. ಚೀನಾದ ಒತ್ತಡದಿಂದಾಗಿ ಫೈಜರ್ ಕಂಪನಿಯು 5 ಲಕ್ಷ ಡೋಸ್‍ಗಳ ಸರಬರಾಜಿಗೆ ತೈವಾನ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದಿದೆ.

ಮಾರಕ ರೋಗ ಪೋಲಿಯೊಗೆ 1955ರಲ್ಲಿ ಪರಿಣಾಮಕಾರಿಯಾದ ಲಸಿಕೆಯನ್ನು ಕಂಡುಹಿಡಿದ ವೈದ್ಯವಿಜ್ಞಾನಿ ಜೋನಾಸ್ ಸಾಕ್ ಅದಕ್ಕೆ ಪೇಟೆಂಟ್ ಪಡೆಯಲಿಲ್ಲ. ಪ್ರಪಂಚದ ಕೋಟ್ಯಂತರ ಮಕ್ಕಳ ಪ್ರಾಣ ಉಳಿಸುವ ಲಸಿಕೆಗೆ ಪೇಟೆಂಟ್ ಪಡೆದು ಲಾಭ ಗಳಿಸುವುದು ನೈತಿಕತೆಯಲ್ಲವೆಂಬುದು ಆ ಮಾನವತಾವಾದಿ ವಿಜ್ಞಾನಿಯ ಖಚಿತ ಅಭಿಪ್ರಾಯವಾಗಿತ್ತು. ಅಂತಹ ಅಸಾಧಾರಣ ನಿಲುವಿನ ವಿಜ್ಞಾನಿ ಮತ್ತು ಔಷಧ ಉತ್ಪಾದನಾ ಸಂಸ್ಥೆಗಳು ತೀರಾ ಅಪರೂಪ ವಾಗುತ್ತಿರುವುದೇ ಇಂದಿನ ದೊಡ್ಡ ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.