ADVERTISEMENT

ಕೊರೊನಾ ನಂತರದ ಜಗತ್ತು...?

ಜಾಗತೀಕರಣದ ಮಿತಿ ಇನ್ನಷ್ಟು ವೇಗವಾಗಿ ಜಾಹೀರಾಗಬಹುದು

ವಸಂತ ಶೆಟ್ಟಿ
Published 27 ಮಾರ್ಚ್ 2020, 2:35 IST
Last Updated 27 ಮಾರ್ಚ್ 2020, 2:35 IST
   

ತೊಂಬತ್ತರ ದಶಕದಲ್ಲಿ ಸೋವಿಯತ್ ಒಕ್ಕೂಟ ಒಡೆದು ಚೂರಾದ ನಂತರ, ಜಗತ್ತಿನ ದಿಕ್ಕು-ದೆಸೆ ನಿರ್ಧರಿಸುವ ನಾಯಕತ್ವದ ಪಾತ್ರ ಅಮೆರಿಕಕ್ಕೆ ದಕ್ಕಿತು.ಏಷ್ಯಾ ಮತ್ತು ಯುರೋಪಿನ ಕೆಲವು ಶ್ರೀಮಂತ ರಾಷ್ಟ್ರಗಳನ್ನು ಜೊತೆಗಿಟ್ಟುಕೊಂಡು ನ್ಯಾಟೊ, ವಿಶ್ವಸಂಸ್ಥೆ, ಐಎಂಎಫ್,ವಿಶ್ವಬ್ಯಾಂಕ್,ಡಬ್ಲ್ಯುಟಿಒ ಹೀಗೆ ಹಲವು ಸಾಂಸ್ಥಿಕ ಸ್ವರೂಪದ ಏರ್ಪಾಡುಗಳನ್ನು ತನ್ನ ಅಂಕೆಗೆ ಅನುಗುಣವಾಗಿ ನಡೆಸುತ್ತ,ದೊಡ್ಡಣ್ಣನ ಪಾತ್ರದಲ್ಲಿ ಅಮೆರಿಕವು ವಿಶ್ವದ ರಾಜಕೀಯ,ಅರ್ಥವ್ಯವಸ್ಥೆ ಎಲ್ಲವನ್ನೂ ನಿಯಂತ್ರಿಸುತ್ತಿದೆ.

ಪಶ್ಚಿಮದ ದೇಶಗಳ ವ್ಯಾಪಾರಿ ಸಂಸ್ಥೆಗಳು ಪ್ರಪಂಚದ ಎಲ್ಲೆಡೆ ವ್ಯಾಪಾರ,ವಹಿವಾಟಿನಲ್ಲಿ ತೊಡಗಲು ಅನುಕೂಲವಾಗು ವಂತೆ ಮುಕ್ತ ಮಾರುಕಟ್ಟೆಯ ಆರ್ಥಿಕ ಮಾದರಿಯನ್ನು ಹರಡುತ್ತಾ ಬಂದಿದ್ದು ಅಮೆರಿಕ ಮುಂದಾಳತ್ವದ ಗುಂಪು.ಇಡೀ ಪ್ರಪಂಚವೇ ಒಂದು ಪುಟ್ಟ ಹಳ್ಳಿ ಅನ್ನಿಸುವ ಮಟ್ಟಕ್ಕೆ ಎಲ್ಲವನ್ನೂ ಜಾಗತೀಕರಣದ ಅಡಿ ತರಲು ಬೇಕಿದ್ದ ಕೆಲವು ಮುಖ್ಯವಾದ ಸಾಧ್ಯತೆಗಳನ್ನು ಕಟ್ಟಿಕೊಳ್ಳಲು, ವಿಜ್ಞಾನ- ತಂತ್ರಜ್ಞಾನದಲ್ಲಿ ಈ ದೇಶಗಳು ಮಾಡಿದ್ದ ಹೂಡಿಕೆ ನೆರವಿಗೆ ಬಂತು.

ಉತ್ಪಾದನೆಯ ಆರ್ಥಿಕ ದಕ್ಷತೆ ಹೆಚ್ಚಿಸಲು ಬೇಕಿದ್ದ ತಂತ್ರಜ್ಞಾನವನ್ನು ಕೊಟ್ಟು ಚೀನಾದಂತಹ ದೇಶವನ್ನು ಪೂರ್ತಿಯಾಗಿ ಉತ್ಪಾದನೆಯ ಕೇಂದ್ರವಾಗಿಸಿದ್ದು,ಸಾಗಾಣಿಕೆ ದಕ್ಷತೆಯನ್ನು ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಆಧರಿಸಿದ ಜಾಗತಿಕ ಮಟ್ಟದ ಪೂರೈಕೆ ಜಾಲ(ಗ್ಲೋಬಲ್ ಸಪ್ಲೈ ಚೇನ್)ಕಟ್ಟಿದ್ದು,ಉತ್ಪಾದಿಸಿದ ವಸ್ತುಗಳನ್ನು ಒಮ್ಮೆಗೇ ಹಾಗೂ ಸುಲಭವಾಗಿ ದೈತ್ಯ ಹಡಗುಗಳಲ್ಲಿ ಸಾಗಿಸಲು ನೆರವಾಗುವ ಕಂಟೇನರ್ ಶಿಪ್ಪಿಂಗ್ ಎಂಬ ಸರಕು ಸಾಗಣೆ ಬಗೆಯನ್ನು ಕಂಡು ಹಿಡಿದಿದ್ದು,ಐಎಂಎಫ್– ವಿಶ್ವಬ್ಯಾಂಕ್‌ ಮುಂತಾದ ಸಂಸ್ಥೆಗಳ ಮೂಲಕ ಈ ಹೊಸ ಮಾದರಿಯ ಅರ್ಥ ವ್ಯವಸ್ಥೆಗೆ ಬೇಕಾದ ಬಂಡವಾಳದ ಹರಿವು ಸದಾ ಇರುವಂತೆ ನೋಡಿಕೊಂಡಿದ್ದು,ಹೀಗೆ ಜಾಗತೀಕರಣದ ಯಂತ್ರ ಓಡಲು ಏನು ಬೇಕೋ ಅವೆಲ್ಲವನ್ನೂ ಅಮೆರಿಕ ಮತ್ತು ತಂಡ ಸಾಧ್ಯವಾಗಿಸಿತು.

ADVERTISEMENT

ಇದು ಪಶ್ಚಿಮದ ದೇಶಗಳನ್ನು ಇನ್ನಷ್ಟು ಸಿರಿವಂತವಾಗಿಸಿದ್ದರ ಜೊತೆಗೆ ಜಗತ್ತಿನ ಉತ್ಪಾದನೆಯ ಕೇಂದ್ರವಾಗಿ ಚೀನಾ ಎದ್ದುನಿಲ್ಲಲು ಹಾಗೂ ಸೇವಾ ವಲಯದ ಕೇಂದ್ರವಾಗಿ ಭಾರತ ತಲೆಎತ್ತಲು ಕಾರಣ ವಾಯಿತು.ದಕ್ಷತೆಯೊಂದನ್ನೇ ಅಳತೆಗೋಲಾಗಿಸಿಕೊಂಡ ಈ ಮಾದರಿಯಲ್ಲಿ ಇಡೀ ಜಗತ್ತು ಎದುರಿಸುತ್ತಿರುವ ಜಾಗತಿಕ ತಾಪಮಾನ ಹೆಚ್ಚಳ,ಪರಿಸರ ನಾಶ ಮುಂತಾದ ಪ್ರಶ್ನೆಗಳು ನಗಣ್ಯವಾಗಿದ್ದು ನಿಜ.ಸಾಮಾಜಿಕ ಜಾಲತಾಣ ಗಳಂತಹ ಸಾಧನಗಳ ಮೂಲಕ ಅನೇಕ ದೇಶಗಳ ಸಾಮಾಜಿಕ ಸ್ವಾಸ್ಥ್ಯ ಹಾಳಾಗಲು ಕಾರಣವಾಗಿದ್ದು ಕೂಡ ನಿಜ.ಆದರೆ,ಬಡತನವನ್ನೇ ಹಾಸು ಹೊದ್ದಂತಿದ್ದ ಭಾರತ ಮತ್ತು ಚೀನಾದ ಕೋಟ್ಯಂತರ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲು ಈ ಮಾದರಿ ನೆರವಾಯಿತು ಅನ್ನುವುದರಲ್ಲಿ ಸತ್ಯಾಂಶವಿದೆ.

ಮುಂದಿನ ಎರಡು– ಮೂರು ದಶಕಗಳಲ್ಲಿ ಜಗತ್ತು ಇನ್ನೂ ಆಳವಾಗಿ ಬೆಸೆದುಕೊಂಡ ರೀತಿಯಲ್ಲಿ ಜಾಗತೀಕರಣ ಮುಂದುವರಿಯುತ್ತದೆ ಮತ್ತು ರೊಬಾಟಿಕ್ಸ್,ಕೃತಕ ಬುದ್ಧಿಮತ್ತೆ,ಜೆನೆಟಿಕ್ ಎಂಜಿನಿಯರಿಂಗ್ ಮುಂತಾದ ಹೊಸ ಸಾಧ್ಯತೆಗಳು ಮನುಕುಲವನ್ನು ಹಿಂದೆಂದೂ ಕಾಣದ ಸಮೃದ್ಧಿಯತ್ತ ಒಯ್ಯುತ್ತವೆ ಎಂಬ ಕನಸಿನ ನಾಗಾಲೋಟಕ್ಕೆ ದಿಢೀರ್ ಬ್ರೇಕ್ ಹಾಕಿದೆ ಕೊರೊನಾ ಅನ್ನುವ ಒಂದು ಪುಟಾಣಿ ವೈರಸ್.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲು ಕಾಣಿಸಿ ಕೊಂಡ ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಅನ್ನುವುದು2019ರ ನವೆಂಬರ್ ಹೊತ್ತಿಗೇ ಚೀನಾ ಸರ್ಕಾರಕ್ಕೆ ಗೊತ್ತಾಗಿತ್ತು.ಆದರೆ ಪ್ರಜಾ ಪ್ರಭುತ್ವ,ಮುಕ್ತವಾದ ಮಾಧ್ಯಮ ಇಲ್ಲದ ಆ ದೇಶ ಈ ಸುದ್ದಿಯನ್ನು ಹತ್ತಿಕ್ಕಲು,ವಿಷಯವು ಹೊರಜಗತ್ತಿಗೆ ಗೊತ್ತಾಗದಂತೆ ನೋಡಲು ಶ್ರಮಿಸಿತು.ಕೊನೆಗೆ ಸೋತು ಕೈಚೆಲ್ಲುವ ಹೊತ್ತಿಗೆ ಇದು ಪ್ರಪಂಚವನ್ನೇ ಆವರಿಸಿ, ಪ್ರತೀ ದೇಶದಲ್ಲೂ ಅಲ್ಲಿನ ಸಾಮಾಜಿಕ,ಆರೋಗ್ಯ ವ್ಯವಸ್ಥೆಗಳು ಕುಸಿದು ಬೀಳುತ್ತವೇನೋ ಅನ್ನುವ ಆತಂಕ ಹುಟ್ಟುಹಾಕಿದೆ ಈ ವೈರಸ್.

ಈ ಶತಮಾನದ ನಡುವಿನ ಹೊತ್ತಿಗೆ ಅಮೆರಿಕದ ಸ್ಥಾನವನ್ನು ತಾನು ಪಡೆದು ಜಗತ್ತಿನ ದೊಡ್ಡಣ್ಣನಾಗಬೇಕು ಅನ್ನುವ ಕನಸು ಹೊತ್ತಿದ್ದ ಚೀನಾದ ಕನಸಿಗೆ ಈ ವೈರಸ್ ದೊಡ್ಡ ಹೊಡೆತ ಕೊಡಲಿದೆ.ಇನ್ನೊಂದೆಡೆ,ಜಗತ್ತಿನ ಅತ್ಯುತ್ತಮವಾದದೆಲ್ಲ ತನ್ನಲ್ಲಿ ಮಾತ್ರ ಇರಲು ಸಾಧ್ಯ ಅನ್ನುವ ಹಮ್ಮಿದ್ದ ಅಮೆರಿಕವನ್ನು ಹಣಿದು ಮಲಗಿಸುತ್ತಿರುವ ಈ ವೈರಸ್, ಅದರ ದೊಡ್ಡಣ್ಣನ ಸ್ಥಾನವನ್ನು ಅಲುಗಾಡಿಸುತ್ತಿದೆ.ವಿಶ್ವ ಆರೋಗ್ಯ ಸಂಸ್ಥೆಯಂತಹ, ಅಮೆರಿಕದ ಪರೋಕ್ಷ ಹಿಡಿತ ದಲ್ಲಿರುವ ಸಂಸ್ಥೆಯು ಇದೊಂದು ಜಾಗತಿಕ ಪಿಡುಗಲ್ಲ ಎಂದೇ ಜನವರಿಯವರೆಗೂ ವಾದಿಸುತ್ತ ಬಂದಿದ್ದರ ಪರಿಣಾಮ, ಜಗತ್ತಿನ ಬಹುತೇಕ ದೇಶಗಳು ಈ ವೈರಸ್ ತಂದ,ತರಲಿರುವ ಸಂಕಟಕ್ಕೆ ಸಜ್ಜಾಗಲು ಅವಕಾಶವಾಗಲಿಲ್ಲ.ಇದು ಅಮೆರಿಕ ರೂಪಿಸಿ,ಕಟ್ಟಿ,ನಡೆಸಿಕೊಂಡು ಬಂದಿರುವ ಜಾಗತೀಕರಣದ ಮಾದರಿಯನ್ನು ಹಾಗೂ ಅಮೆರಿಕದ ನಾಯಕತ್ವವನ್ನು ಹಲವು ರಾಷ್ಟ್ರಗಳು ಪ್ರಶ್ನಿಸಲು ಕಾರಣವಾಗಲಿದೆ.

ಜಾಗತೀಕರಣವೆಂದರೆ ಜನರ ಮುಕ್ತ ಓಡಾಟ ಎಂದು ಪ್ರತಿಪಾದಿಸಲಾಗಿತ್ತು.ಆದರೆ,ಈಗ ಅದು ವೈರಸ್ಸಿನ ಮುಕ್ತ ಹರಿದಾಟವಾಗಿದ್ದ ಲ್ಲದೆ ಪ್ರತೀ ದೇಶ ದಲ್ಲೂ ಅಲ್ಲಿನ ಸರ್ಕಾರಗಳ ಕ್ಷಮತೆ,ಅಲ್ಲಿನ ಆರೋಗ್ಯ ವ್ಯವಸ್ಥೆಯ ಧಾರಣಾ ಶಕ್ತಿ...ಎಲ್ಲವನ್ನೂ ಪರೀಕ್ಷೆಗೆ ಒಳ ಪಡಿಸುತ್ತಿದೆ.ಇದರಲ್ಲಿ ಕೆಲವು ದೇಶಗಳು ಹಾಗೂ ಹೀಗೂ ನಿಭಾಯಿಸಿ ಪಾರಾಗಬಹುದು,ಆದರೆ ಭಾರತವೂ ಸೇರಿದಂತೆ ಇನ್ನು ಕೆಲವು ದೇಶಗಳು ಬಹಳ ಕಷ್ಟ ಎದುರಿಸಲಿವೆ.ಸಹಜವಾಗಿಯೇ ಅಲ್ಲಿನ ಸರ್ಕಾರಗಳು ತಮ್ಮ ದೇಶವನ್ನು ಇನ್ನಷ್ಟು,ಮತ್ತಷ್ಟು ಒಳಮುಖ ವಾಗಿಸಿಕೊಂಡು ಜಾಗತೀಕರಣದ ಈ ಕೈ-ಕೈ ಹಿಡಿದ ಏರ್ಪಾಡಿನಿಂದ ಹೊರಬರಲು ಕಾರಣ ವಾಗಬಹುದು.

ಉತ್ಪಾದನೆಯ ದಕ್ಷತೆಯ ಹೆಸರಲ್ಲಿ ತನಗೆ ಬೇಕಾದದ್ದೆಲ್ಲವನ್ನೂ ಚೀನಾದಿಂದಲೇ ತರಿಸಿ ಕೊಳ್ಳುತ್ತಿದ್ದ ಅಮೆರಿಕ, ಈಗ ವೈರಸ್ ತಡೆಯಲು ಬೇಕಿರುವ ಮಾಸ್ಕ್,ಗ್ಲೌಸ್,ಆಕ್ಸಿಜನ್ ಸಪ್ಲೈ,ಪರೀಕ್ಷೆ ಕಿಟ್ ಮುಂತಾದವುಗಳಿಗೂ ಚೀನಾದತ್ತ ನೋಡುವ ಸ್ಥಿತಿ ತಂದುಕೊಂಡಿರುವುದು ಒಂದು ಕಟು ವ್ಯಂಗ್ಯವೇ ಸರಿ. ಅಮೆರಿಕ,ರಷ್ಯಾ,ಟರ್ಕಿ,ಬ್ರೆಜಿಲ್ ಮುಂತಾದ ದೇಶಗಳಲ್ಲಿ ಸರ್ವಾಧಿಕಾರಿ ಧೋರಣೆಯ ನಾಯಕರು ಆಳುತ್ತಿರುವುದು,ಬ್ರೆಕ್ಸಿಟ್ ಮೂಲಕ ಐರೋಪ್ಯ ಒಕ್ಕೂಟ ದಿಂದ ಬ್ರಿಟನ್ ಬೇರ್ಪಟ್ಟದ್ದು,ಇವೆಲ್ಲವೂ ಈಗಿನ ಜಾಗತೀಕರಣದ ಮಾದರಿಗೆ ಇರುವ ಮಿತಿಯನ್ನು ತೋರುತ್ತ ಬಂದಿದ್ದವು.ಈಗ ಕೊರೊನಾ ಆ ಪ್ರಕ್ರಿಯೆಗೆ ಇನ್ನಷ್ಟು ವೇಗ ಕೊಟ್ಟಿದೆ.

ಇನ್ನು ಮೂರ್ನಾಲ್ಕು ತಿಂಗಳು ಗಳಲ್ಲಿ ಈ ವೈರಸ್ ಒಂದು ಹಂತಕ್ಕೆ ಬರುವಾಗ, ಜಾಗತಿಕ ಅರ್ಥ ವ್ಯವಸ್ಥೆ ತಿನ್ನುವ ಹೊಡೆತ ಸಣ್ಣದಿರುವು ದಿಲ್ಲ.ಯಾರೋ ಮಾಡಿದ ತಪ್ಪಿಗೆ ಎಲ್ಲರೂ ಯಾಕೆ ಅನುಭವಿಸಬೇಕು ಅನ್ನುವ ಸರಳ ಪ್ರಶ್ನೆಯಡಿ ಈ ಮಾದ ರಿಯು ಪರೀಕ್ಷೆಗೆ ಒಳಪಡಲಿದೆ.ಪ್ರಜಾಪ್ರಭುತ್ವವಿರುವ ಅಮೆರಿಕದ ನಾಯಕತ್ವ,ಪ್ರಜಾಪ್ರಭುತ್ವದ ವ್ಯವಸ್ಥೆಗಳು ತರುವ ಚೆಕ್ಸ್ ಅಂಡ್ ಬ್ಯಾಲೆನ್ಸಿನ ಯಾವ ಒತ್ತಡಗಳೂ ಇಲ್ಲದ ಚೀನಾದ ನಾಯಕತ್ವ ಎರಡಕ್ಕೂ ಈ ಮಾದರಿಯ ಜಾಗತೀಕರಣವನ್ನು ಮುಂದೊಯ್ಯಲು ಸಾಧ್ಯವಾಗದಿರಬಹುದು.

ಎರಡನೆಯ ವಿಶ್ವಯುದ್ಧ ಆದ ನಂತರ ಮನುಕುಲದ ಇತಿಹಾಸದಲ್ಲೇ ಅತ್ಯಂತ ಶಾಂತಿಯ ಎಪ್ಪತ್ತು ವರ್ಷಗಳನ್ನು ನಾವೆಲ್ಲ ಕಂಡಿದ್ದೇವೆ.ಪ್ರತೀ ದೇಶವೂ ಒಳಮುಖವಾಗಿ ನೋಡುವ ಅತಿರೇಕದ ರಾಷ್ಟ್ರವಾದ ಮರಳಲಿರುವ ಮುಂದಿನ ದಿನಗಳಲ್ಲಿ ಯಾವ ರೂಪದಲ್ಲಿ ಇದು ಬದಲಾ ಗುತ್ತದೆ,ಇದು ಭಾರತವನ್ನಾಗಲೀ ಕರ್ನಾಟಕವನ್ನಾಗಲೀ ಹೇಗೆ ತಟ್ಟುತ್ತದೆ ಅನ್ನುವುದನ್ನು ಕಾದು ನೋಡಬೇಕಷ್ಟೆ.

ಲೇಖಕ: ಐ.ಟಿ. ತಂತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.